ವಿರೋಧ ಪಕ್ಷ ಎಂದರೆ ಆಡಳಿತ ಪಕ್ಷದ ಎಲ್ಲ ಹೆಜ್ಜೆಯನ್ನೂ ಬರೀ ಟೀಕಿಸುವುದಲ್ಲ. ಒಳ್ಳೆಯ ನಿರ್ಧಾರ ಕೈಗೊಂಡಾಗ ನಾಲ್ಕು ಶ್ಲಾಘನೆಯ ಮಾತಾಡಿದರೆ ಕಳೆದುಕೊಳ್ಳುವುದೇನೂ ಇಲ್ಲ. ಯಾವುದೇ ವಿಷಯವನ್ನು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಕೋನದಿಂದ ನೋಡುವ ಸಂಪ್ರದಾಯ ನಮ್ಮಲ್ಲಿ ಬೆಳೆಯುವುದೆಂದು…
ಚಿಕ್ಕವನಿದ್ದಾಗ ಕೇಳಿದ ಕಥೆ ಅದೇಕೋ ಈಗ ನೆನಪಾಗಿ ಕಾಡತೊಡಗಿತು. ಬಹುಶಃ ಆ ಕಥೆಯನ್ನು ನೀವೂ ಕೇಳಿರುತ್ತೀರ ಅಥವಾ ಓದಿರುತ್ತೀರ. ಆದರೂ ಮತ್ತೊಮ್ಮೆ ಮೆಲುಕು ಹಾಕುವ.
ಏನಪ್ಪ ಆ ಕಥೆ ಅಂತ ಅಂದರೆ, ಒಂದೂರಲ್ಲಿ ಒಬ್ಬ ಗುಂಡ ಅಂತ ಇದ್ದ. ಹೆಸರಿಗೆ ತಕ್ಕಂತೆ ಗುಂಡುಗುಂಡಾಗಿ ಇದ್ದ. ಒಂದನ್ನು ಹೇಳಿದರೆ ಮತ್ತೊಂದನ್ನು ಮಾಡಿ ಸದಾ ಪೇಚಿಗೆ ಸಿಲುಕಿಕೊಳ್ಳುತ್ತಿದ್ದ ಆಸಾಮಿ.
ಒಂದು ದಿನ ಆತ ಬೆಣ್ಣೆಯನ್ನು ಕೈಯಲ್ಲಿ ಹಿಡಿದುಕೊಂಡು ಬೀದಿಯಲ್ಲಿ ನಡೆದು ಹೋಗುತ್ತಿದ್ದ. ‘ಯಾಕಪ್ಪ ಬೆಣ್ಣೆಯನ್ನು ಕೈಲಿ ಹಿಡಿದುಕೊಂಡು ಹೋಗ್ತೀಯಾ? ಅದನ್ನು ತಣ್ಣೀರಿನ ಪಾತ್ರೆಯಲ್ಲಿ ಹಾಕಿಕೊಂಡು ಹೋಗಬಾರದೆ? ಈ ಬಿರುಬಿಸಿಲಿನಲ್ಲಿ ನೀನು ಮನೆ ತಲುಪುವ ಹೊತ್ತಿಗೆ ಬೆಣ್ಣೆ ಪೂರ್ತಿ ಕರಗಿ ಮೈಕೈಯೆಲ್ಲ ಅಭಿಷೇಕ ಆಗಿಹೋಗಿರುತ್ತದೆ ಕಣೋ ಗುಂಡ’ ಎಂದು ನಸುನಗುತ್ತ ಹೇಳಿದ ಬೀದಿಬದಿಯ ಕಟ್ಟೆಮೇಲೆ ಕುಳಿತಿದ್ದ ಬೊಚ್ಚುಬಾಯ ತಾತ. ಗುಂಡನಿಗೆ ಆಗ ಹೊಳೆಯಿತಂತೆ, ‘ಇನ್ನುಮುಂದೆ ಹೀಗೆ ಏನನ್ನೂ ಬರಿಗೈಯಲ್ಲಿ ಹಿಡಿದುಕೊಂಡು ಹೋಗಬಾರದು, ನೀರಿನ ಪಾತ್ರೆಯಲ್ಲಿ ಹಾಕಿಕೊಂಡು ಹೋಗಬೇಕು’ ಅಂತ. ಮಾರನೇ ದಿನ ಗುಂಡ ಯಾರದ್ದೋ ಮನೆಯಿಂದ ಪುಟ್ಟ ಬೆಕ್ಕಿನ ಮರಿಯನ್ನು ತನ್ನ ಮನೆಗೆ ಕೊಂಡೊಯ್ಯಬೇಕಾಗಿತ್ತು. ಆಗ ಹಿಂದಿನ ದಿನ ತಾತ ಹೇಳಿದ ಮಾತು ನೆನಪಿಗೆ ಬಂದು, ಬೆಕ್ಕಿನ ಮರಿಯನ್ನು ತಣ್ಣೀರಿನ ಪಾತ್ರೆಯಲ್ಲಿ ಇಟ್ಟುಕೊಂಡು ಹೊರಟ. ಬೆಕ್ಕಿನ ಮರಿ ಛಂಗನೆ ಪಾತ್ರೆಯಿಂದ ಜಿಗಿದು ಪರಾರಿ ಆಯಿತು. ಆ ಅವಾಂತರ ನೋಡಿದ ಒಬ್ಬರು ಹೇಳಿದರು ‘ಲೋ ಗುಂಡ…ಬೆಕ್ಕಿನ ಮರಿಯನ್ನು ನೀರಲ್ಲಿ ಅದ್ದಿಕೊಂಡು ಹೋಗುವುದಲ್ಲ, ಅದನ್ನು ಹೆಗಲಮೇಲೆ ಹೊತ್ತುಕೊಂಡು ಹೋಗಬೇಕಪ್ಪ’ ಅಂತ. ಬೆಕ್ಕಿನ ಮರಿ ಕತೆಯಂತೂ ಹೀಗಾಯಿತು, ಒಂದು ದಿನ ಲಗೇಜು ಹೊರುವುದಕ್ಕೊಂದು ಒಳ್ಳೆ ಕತ್ತೆ ತೆಗೆದುಕೊಂಡು ಬಾ ಅಂತ ಗುಂಡನಿಗೆ ಮನೆಯಲ್ಲಿ ಹೇಳುತ್ತಾರೆ. ಆಗ ಗುಂಡ ತುಸು ಎಚ್ಚರಿಕೆ ವಹಿಸಿ, ಕತ್ತೆಯನ್ನಂತೂ ನೀರಪಾತ್ರೆಯಲ್ಲಿ ಇಟ್ಟುಕೊಂಡು ಹೋಗೋಕಾಗಲ್ಲ, ಅದನ್ನು ಹೆಗಲಮೇಲೆ ಹೊತ್ತುಕೊಂಡು ಹೋದರೆ ಮನೆಗೆ ತಲುಪಿಸಬಹುದು ಅಂತ ತೀರ್ವನಿಸಿ ಹೆಗಲಿಗೇರಿಸಿದ. ‘ಲೋ ಗುಂಡ ಅದನ್ನು ಹಗ್ಗ ಕಟ್ಟಿ ಹಿಡಿದುಕೊಂಡು ಹೋಗಬೇಕಪ್ಪ, ಕತ್ತೆಯನ್ನೆಲ್ಲ ಹೀಗೆ ಹೊತ್ತುಕೊಂಡು ಹೋಗಬಾರದು’ ಅಂತ ಮತ್ತಿನ್ಯಾರೋ ಹೇಳುತ್ತಾರೆ. ಯಾಕೋ ಒಂದೂ ಸರಿ ಹೋಗ್ತಿಲ್ಲವಲ್ಲ ಅಂತ ಗುಂಡನಿಗೆ ಮಂಡೆಬಿಸಿ ಆಗುತ್ತದೆ. ಹಾಗೆ ತಲೆ ಕೆರೆದುಕೊಳ್ಳುತ್ತಿರುವಾಗಲೇ, ಗಿರಣಿಗೆ ಹೋಗಿ ಒಂದು ಮೂಟೆ ಹಿಟ್ಟನ್ನು ತೆಗೆದುಕೊಂಡು ಬಾ ಅಂತ ಮನೆಯಲ್ಲಿ ಹೇಳಿಕಳಿಸುತ್ತಾರೆ. ಈಗ ತಾನು ಲೆಕ್ಕ ತಪ್ಪಲೇಬಾರದು ಅಂತ ತೀರ್ವನಿಸಿದ ಗುಂಡ ಹಿಟ್ಟಿನ ಚೀಲಕ್ಕೆ ಒಂದು ಹಗ್ಗ ಕಟ್ಟಿ ಗಿರಣಿಯಿಂದ ಮನೆತನಕ ರಸ್ತೆಯುದ್ದಕ್ಕೂ ಎಳೆದುಕೊಂಡೇ ಹೋಗುತ್ತಾನೆ. ಏನಾಗಿರಬೇಡ ಹಿಟ್ಟಿನ ಚೀಲದ ಕತೆ! ಕೊನೆಗೆ ಖಾಲಿ ಚೀಲ ಮತ್ತು ಅದಕ್ಕೆ ಕಟ್ಟಿದ ಹಗ್ಗ ಮಾತ್ರ ಮನೆ ಸೇರಿರಲಿಕ್ಕೆ ಸಾಕು. ಒಟ್ಟಿನಲ್ಲಿ ಗುಂಡನ ಗುರಿ, ಲೆಕ್ಕಾಚಾರ ತಪ್ಪುವುದು ಕೊನೆಯಾಗಲೇ ಇಲ್ಲ. ಏಕೆಂದರೆ ಅದು ಅವನ ಹುಟ್ಟು ಸ್ವಭಾವ!
ಇದು ಉಪಕಥೆ ಮಾತ್ರ. ಮುಖ್ಯ ವಿಷಯ ಇನ್ನು ಮುಂದಿನದು.
ಕಾಂಗ್ರೆಸ್ ಪಕ್ಷಕ್ಕೆ ನಿಷ್ಕ್ರಿಯ ಹಿರಿಯರೇ ಹೊರೆ ಅನ್ನುವುದು ಕೊನೆಗೂ ರಾಹುಲ್ ಗಾಂಧಿ ಅವರಿಗೆ ಮನವರಿಕೆ ಆಗಿದ್ದು ಸರಿಯಷ್ಟೆ. ಹೀಗಾಗಿ ಅವರು ದಿಗ್ವಿಜಯ್ ಸಿಂಗ್ ಅವರಂಥ ಕೆಲ ಹಿರಿಯರಿಗೆ ವಿಶ್ರಾಂತಿ ಕೊಡುವ ತೀರ್ಮಾನ ಮಾಡಿದ್ದಾರೆ. ವಯೋವೃದ್ಧರಿಗೆ ವಿಶ್ರಾಂತಿ ಕೊಡುವುದು ಸರಿಯಾದ ಕ್ರಮ. ಹಾಗಂತ ಅವರ ಜಾಗಕ್ಕೆ ಹಾಲುಗಲ್ಲದ ಹಸುಗೂಸುಗಳನ್ನು ತಂದುಕೂರಿಸುವುದು ಸರಿಯೇ ಎಂಬುದು ಮೂಲಭೂತ ಪ್ರಶ್ನೆ. ಉದಾಹರಣೆಗೆ ನಟಿ ರಮ್ಯಾ ಅವರನ್ನು ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಸೆಲ್ನ ಮುಖ್ಯಸ್ಥೆಯನ್ನಾಗಿ ನೇಮಿಸಿರುವುದು ಸರಿಯಾಗಿಯೇ ಇದೆ. ಈ ನೇಮಕದ ವಿಚಾರದಲ್ಲಿ ಪಕ್ಷದ ಒಳಗೆ ಮತ್ತು ಹೊರಗೆ ಸದಭಿಪ್ರಾಯವಿದೆ. ಆದರೆ ಎಡವಟ್ಟಾದ್ದೆಲ್ಲಿ ಅಂದರೆ ಈ ನೇಮಕ ಆದ ಮಾರನೇ ದಿನವೇ ಮೋದಿ ಸರ್ಕಾರದ ಮೂರನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ಕರೆದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾದದ್ದು. ರಮ್ಯಾ ರಾಜಕಾರಣದಲ್ಲಿ ಇನ್ನೂ ಪಳಗಬೇಕು. ಸರ್ಕಾರ ಅಂದರೆ ಏನು, ಆಡಳಿತ ಹೇಗೆ ನಡೆಯುತ್ತದೆ, ನೀತಿ ನಿರ್ಧಾರಗಳು ಹೇಗೆ ಆಗುತ್ತವೆ, ಸಾರ್ವಜನಿಕ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನೆಲ್ಲ ಅರಿಯಬೇಕು. ಒಂದು ರಾಷ್ಟ್ರೀಯ ಸರ್ಕಾರದ ಕಾರ್ಯವೈಖರಿಯನ್ನು ಒರೆಗೆ ಹಚ್ಚಲು, ವಿಮರ್ಶೆ ಮಾಡಲು ಅದೇ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರಿಲ್ಲವೆ? ಸತತ ಒಂಭತ್ತು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಕಮಲ್ನಾಥ್ ಇದ್ದಾರೆ. ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಯುವನಾಯಕರಾದ ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್ ಪೈಲಟ್ ಅಂಥವರೂ ಇದ್ದಾರೆ. ಅವರಲ್ಲಿ ಯಾರಾದರೂ ನಾಯಕರು ಮಾತನಾಡಬೇಕಲ್ಲವೇ? ಪತ್ರಿಕಾಗೋಷ್ಠಿಯಲ್ಲಿ ರಮ್ಯಾ ಮಾತಿಗಿಳಿದುಬಿಟ್ಟರೆ? ನಿಜ ಹೇಳಬೇಕೆಂದರೆ ಮೋದಿ ಸರ್ಕಾರದ ನೀತಿ ನಿರ್ಧಾರಗಳ ಕುರಿತು ವಿಮರ್ಶೆ ಮಾಡಲು ಸ್ವತಃ ರಾಹುಲ್ ಗಾಂಧಿಯೇ ಕುಳಿತರೂ ಪೇಲವವಾಗಿ ಕಾಣಿಸುತ್ತಾರೆ. ರಾಷ್ಟ್ರರಾಜಕಾರಣದಲ್ಲಿ ಹಿಡಿತ ಸಾಧಿಸಲು ಅವರು ಇನ್ನೂ ಸಾಕಷ್ಟು ಬೆವರು ಹರಿಸಲೇಬೇಕಿದೆ. ಅದಿಲ್ಲ ಅಂತಾದರೆ ಕಾಂಗ್ರೆಸ್ ಪಕ್ಷಕ್ಕೆ ಕೂಡ ರಾಹುಲ್ ಏನೂ ಕೊಡುಗೆ ಕೊಡಲಾರರು. ಯುವಕರಿಗೆ ಆದ್ಯತೆ ಕೊಡಬೇಕು ಅಂದಕೂಡಲೆ ತೀರಾ ಹೀಗೆ ಪೆದ್ದುಪೆದ್ದಾಗಿ ನಡೆದುಕೊಳ್ಳುವುದೇ?
ಇದೊಂದೇ ಅಲ್ಲ, ಕಾಂಗ್ರೆಸ್ನಲ್ಲಿ ತಪ್ಪುಗಳ ಸರಣಿ ಹೇಗೆ ಮುಂದುವರಿಯುತ್ತಿದೆ ನೋಡಿ.
ಮೋದಿ ಸರ್ಕಾರಕ್ಕೆ ಮಾತ್ರವಲ್ಲ, ಕಾಂಗ್ರೆಸ್ ಪಕ್ಷ ಅಧಿಕೃತ ವಿಪಕ್ಷದ ಸ್ಥಾನವನ್ನೂ ಕಳೆದುಕೊಂಡು ಮೂರು ವರ್ಷಗಳಾಗಿದೆ. ಹೀಗಾಗಿ ಸರ್ಕಾರ ಮಾತ್ರ ಸಿಂಹಾವಲೋಕನ ಮಾಡಿಕೊಳ್ಳುವುದಲ್ಲ, ಪ್ರತಿಪಕ್ಷವಾಗಿ ಕಾಂಗ್ರೆಸ್ ಏನು ಮಾಡಿದೆ, ಎಲ್ಲಿದೆ ಎಂಬುದರ ಆತ್ಮಾವಲೋಕನವೂ ಆಗಬೇಕಲ್ಲವೆ?
ವಿರೋಧ ಪಕ್ಷವೆಂದರೆ ವಿರೋಧಿಸುವುದಕ್ಕೆ ಮಾತ್ರ ಸೀಮಿತವಲ್ಲ. ಸರ್ಕಾರ ಸರಿ ಕೆಲಸ ಮಾಡಿದಾಗ ಸ್ವಾಗತಿಸಿದರೆ, ಬೆಂಬಲಿಸಿದರೆ, ಹುರಿದುಂಬಿಸಿದರೆ ತಪ್ಪಿದಾಗ ಚಾಟಿಬೀಸಿ ಬಿಸಿ ಮುಟ್ಟಿಸಲು ಬರುತ್ತದೆ. ಅದಕ್ಕೊಂದು ಅರ್ಥವೂ ಇರುತ್ತದೆ. ಕಳೆದ ಮೂರು ವರ್ಷಗಳಲ್ಲಿ ಒಂದು ಬಾರಿಯಾದರೂ ಹಾಗಾಯಿತೇ? ಆ ಹಿನ್ನೆಲೆಯಲ್ಲಿ ಕೆಲ ಮಹತ್ವದ ಸನ್ನಿವೇಶಗಳನ್ನು ಅವಲೋಕನ ಮಾಡೋಣ.
ಕುಲಭೂಷಣ್ ಜಾಧವ್ ಪ್ರಕರಣ: ನಮ್ಮ ನೌಕಾಪಡೆಯ ಮಾಜಿ ಯೋಧ ಅದಕ್ಕಿಂತ ಹೆಚ್ಚಾಗಿ ಭಾರತದ ಓರ್ವ ಸಾಮಾನ್ಯ ಪ್ರಜೆ ಕುಲಭೂಷಣ್ ಜಾಧವ್ ಮೇಲೆ ಗೂಢಚರ್ಯು ಆರೋಪ ಹೊರಿಸಿದ ಪಾಕಿಸ್ತಾನ ಸೇನಾ ನ್ಯಾಯಾಲಯ ಆತನಿಗೆ ಗಲ್ಲುಶಿಕ್ಷೆಯನ್ನೂ ವಿಧಿಸಿತು. ಆ ಪ್ರಕರಣ ನಿರ್ವಹಿಸಿದ ರೀತಿಯ ಕುರಿತು ಆರಂಭದಲ್ಲಿ ಕಟುಮಾತುಗಳಲ್ಲಿ ಟೀಕಿಸಿದ ಕಾಂಗ್ರೆಸ್ ನಾಯಕರು ಈಗೇಕೆ ಮೌನಕ್ಕೆ ಶರಣಾಗಿದ್ದಾರೆ? ರಾಜತಾಂತ್ರಿಕ ಯತ್ನಗಳಿಗೆ ಪಾಕಿಸ್ತಾನ ಬೆಲೆ ಕೊಡದೆ ಹೋದಾಗ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ದ ಕದ ತಟ್ಟಿತು. ಹರೀಶ್ ಸಾಳ್ವೆ ಅವರಂತಹ ಹಿರಿಯ, ಸಮರ್ಥ ವಕೀಲರನ್ನು ಕಳಿಸಿ ಪಾಕಿಸ್ತಾನದ ಅಸಲೀ ಮುಖವನ್ನು ಜಗತ್ತಿನೆದುರು ತೆರೆದಿಡಲಾಯಿತು. ಇಷ್ಟೆಲ್ಲ ಆದದ್ದು ಭಾರತ ಸರ್ಕಾರ ಸರಿಯಾದ ನಿರ್ಧಾರವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಂಡಿದ್ದರಿಂದ ತಾನೆ? ಇದನ್ನು ವಿರೋಧಿಸಬೇಕೋ, ಮೌನ ವಹಿಸಬೇಕೋ ಅಥವಾ ಸ್ವಾಗತಿಸಬೇಕೋ? ಸ್ವಾಗತಿಸಿದರೆ ಕಾಂಗ್ರೆಸ್ ಪಕ್ಷದ ಘನತೆ ಹೆಚ್ಚುತ್ತದೆಯೇ ಹೊರತು ಕಡಿಮೆ ಆಗುವುದಿಲ್ಲ. ತಮ್ಮ ಆಡಳಿತಾವಧಿಯಲ್ಲಿ ಪಾಕ್ ಯೋಧರ ಕೈಗೆ ಸೆರೆಸಿಕ್ಕಿದ್ದ ನಮ್ಮ ಯೋಧ ಸರಬ್ಜಿತ್ ಸಿಂಗ್ ಅವರನ್ನು ಜೀವಂತ ವಾಪಸು ಕರೆಸಿಕೊಳ್ಳಲಾಗದ ಕಾಂಗ್ರೆಸ್ ನಾಯಕರು ಈಗ ಚಕಾರ ಎತ್ತಬಾರದು, ಕೊಂಕು ತೆಗೆಯಕೂಡದು.
ತ್ರಿವಳಿ ತಲಾಕ್ ವಿಚಾರ: ತ್ರಿವಳಿ ತಲಾಕ್ ವಿಷಯದಲ್ಲಿ ಕಾಂಗ್ರೆಸ್ ನಾಯಕರ ನಿಲುವುಗಳು ನಿಜಕ್ಕೂ ಅಚ್ಚರಿ ತರುತ್ತವೆ. ಕಪಿಲ್ ಸಿಬಲ್ ಮತ್ತು ಸಲ್ಮಾನ್ ಖುರ್ಷಿದ್ ಅವರಂತಹ ನಾಯಕರು ಕೋರ್ಟ್ನಲ್ಲಿ ನೀಡಿದ ಹೇಳಿಕೆಗಳನ್ನು ಮಾನವೀಯ ನೆಲೆಯಲ್ಲಿ, ರಾಜಕೀಯ ಮತ್ತು ಸಾಂವಿಧಾನಿಕ ಸಿಂಧುತ್ವದ ಹಿನ್ನೆಲೆಯಲ್ಲಿ ಯಾವ ಕೋನದಿಂದ ನೋಡಿದರೂ ಒಪ್ಪಲು ಸಾಧ್ಯವಿಲ್ಲ. 1400 ವರ್ಷಗಳಿಂದ ಆಚರಣೆಯಲ್ಲಿರುವ ಒಂದು ಅನಿಷ್ಟ ಪದ್ಧತಿಯನ್ನು ಮುಂದುವರಿಸಬೇಕು ಅಂತ ಹೇಳುವುದು ಮೂರ್ಖತನದ ಪರಮಾವಧಿ. ಇದು ಜಗತ್ತಿನ ನಾಗರಿಕತೆ ವಿಕಾಸಗೊಂಡ ರೀತಿಗೆ ಮಾಡುವ ಅಪಚಾರ. ಪುರುಷಪ್ರಧಾನ ಸಮಾಜವನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರ ಭಾವನೆಗಳನ್ನು ಅವಗಣಿಸಿದರೆ ಎಂಥ ಪರಿಣಾಮ ಆಗುತ್ತದೆ ಹಾಗೂ ಭವಿಷ್ಯದಲ್ಲಿ ಅದಕ್ಕೆ ಎಂಥ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬ ಕನಿಷ್ಠ ಅರಿವೂ ಕಾಂಗ್ರೆಸ್ ನಾಯಕರಿಗೆ ಇದ್ದಂತೆ ಕಾಣಿಸುವುದಿಲ್ಲ. ತ್ರಿವಳಿ ತಲಾಕ್ ನಿರ್ಬಂಧಿಸುವ ಕಾನೂನನ್ನು ಕೇಂದ್ರ ಸರ್ಕಾರ ರೂಪಿಸಲಿ, ನ್ಯಾಯಾಲಯ ತೀರ್ಮಾನ ಮಾಡುವುದು ಬೇಡ ಎಂಬ ಜಾಣತನದ ವಾದವನ್ನೂ ಕಾಂಗ್ರೆಸ್ ನಾಯಕರು ಮುಂದಿಟ್ಟರು. ಸರ್ಕಾರವೇ ಕಾನೂನು ರೂಪಿಸಿದರೆ ಮುಸ್ಲಿಂ ಪುರುಷರು ಆ ಪಕ್ಷವನ್ನು ಸದಾಕಾಲ ದ್ವೇಷಿಸುತ್ತಾರೆ, ದೇಶಾದ್ಯಂತ ದೊಂಬಿ, ಗಲಾಟೆ, ರಕ್ತಪಾತ ಆದರೆ ರಾಜಕೀಯ ಟೀಕೆಗೂ ಅನುಕೂಲ ಆಗುತ್ತದೆ; ಅದೇ ನ್ಯಾಯಾಲಯವೇ ನಿರ್ದೇಶನ ಕೊಟ್ಟರೆ ಈ ಎಲ್ಲ ಅವಕಾಶ ತಪ್ಪಿಹೋಗುತ್ತದೆ ಎಂಬುದು ಆ ವಾದದ ಹಿಂದಿನ ಉದ್ದೇಶ. ಇಂಥ ಮಹತ್ವದ ವಿಷಯದಲ್ಲಿ ಈ ಬಗೆಯ ಕ್ಷುಲ್ಲಕತನ ಬೇಕಿತ್ತಾ?
ಸುಕ್ಮಾ ನಕ್ಸಲ್ ದಾಳಿ: ಸುಮಾರು ಒಂದು ತಿಂಗಳ ಹಿಂದೆ ಛತ್ತೀಸ್ಗಢದ ಸುಕ್ಮಾದಲ್ಲಿ ನಕ್ಸಲರು ದಾಳಿ ನಡೆಸಿ 24 ಸಿಆರ್ಪಿಎಫ್ ಯೋಧರನ್ನು ಹತ್ಯೆಗೈದರು. ಯಾಕೆ ಯಾರೊಬ್ಬರೂ ಮಾತನಾಡಲಿಲ್ಲ? ದೇಶ ಕಾಯುವ ಯೋಧರ ಜೀವ ಹೈದರಾಬಾದಿನ ರೋಹಿತ್ ವೇಮುಲ, ಉತ್ತರಪ್ರದೇಶದ ಅಖ್ಲಾಕ್ ಪ್ರಾಣಕ್ಕಿಂತ ಕಡೆಯಾಗಿ ಹೋಯಿತೇನು? ದೇಶದ ಮೇಲೆ ದಾಳಿ ಮಾಡಿದ ಕಸಬ್ಗೆ ಗಲ್ಲುಶಿಕ್ಷೆ ಕೊಟ್ಟಾಗ ನಿಮ್ಮ ಕರುಳಬಳ್ಳಿ ಮಿಡಿಯುತ್ತದೆ, ಯೋಧರು ಪ್ರಾಣ ತೆತ್ತಾಗ ಯಾಕೆ ಮಿಡಿಯುವುದಿಲ್ಲ? ಘಟನೆಯನ್ನು ಬಾಯಿಮಾತಿಗೂ ಖಂಡಿಸುವುದಿಲ್ಲವಲ್ಲ. ರಾಹುಲ್ ಗಾಂಧಿ, ರಮ್ಯಾ ಮುಂತಾದವರಿಗೆ ಇದು ಗೊತ್ತಿಲ್ಲದ ವಿಷಯವೇ?
ಸರ್ಜಿಕಲ್ ದಾಳಿಯ ನಂತರ: ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮಿತಿಮೀರಿದಾಗ ನಮ್ಮ ಯೋಧರು ಗಡಿಯಾಚೆ ನುಗ್ಗಿ ಪಾಕ್ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದರು. ಅದರ ಅಸಲಿತನವನ್ನು ಬಹಿರಂಗವಾಗಿ ಪ್ರಶ್ನೆ ಮಾಡುವುದು ಎಂದರೆ ಏನು? ರಾಹುಲ್ ಗಾಂಧಿ, ಕೇಜ್ರಿವಾಲ್ರಂಥವರ ಬುದ್ಧಿಗೆ ಏನಾಗಿದೆ ಹಾಗಾದರೆ? ಇವಷ್ಟೇ ಅಲ್ಲ, ನೋಟ್ಬ್ಯಾನ್ ಸಂದರ್ಭದಲ್ಲಿ, ಜಿಎಸ್ಟಿಯಂತಹ ಮಹತ್ವದ ಮಸೂದೆ ಜಾರಿಗೆ ಮಾಡಿದ ಅಡ್ಡಿ-ಅಡೆತಡೆ ಒಂದೆರಡೇನು? ಇದನ್ನೆಲ್ಲ ದೇಶದ ಜನರು ಗಮನಿಸುತ್ತಿಲ್ಲ ಅಂತಲಾ? ನಾಚಿಕೆ ಆಗಬೇಕು.
ಇವಿಎಂ ವಿಶ್ವಾಸಾರ್ಹತೆ: ಇವಿಎಂ ವಿಶ್ವಾಸಾರ್ಹತೆ ಕುರಿತು ಅರವಿಂದ ಕೇಜ್ರಿವಾಲ್ ಅಥವಾ ಮಾಯಾವತಿ ಅನುಮಾನ ವ್ಯಕ್ತಪಡಿಸಿದರೆ ಅದರಲ್ಲೇನೂ ವಿಶೇಷವಿಲ್ಲ. ಇವರು ಏನು, ಇವರ ಗಟ್ಟಿತನ ಏನೆಂಬುದು ಇದೀಗ ಒಂದೊಂದಾಗಿ ಆಚೆ ಬರುತ್ತಿದೆ. ಆದರೆ ದೇಶವನ್ನು 60 ವರ್ಷ ಆಳಿದ್ದೇವೆ ಎನ್ನುವ ಕಾಂಗ್ರೆಸ್ ಪಕ್ಷದ ನಾಯಕರು ಆ ಬಗ್ಗೆ ಹಗುರವಾಗಿ ಮಾತನಾಡಬಾರದಿತ್ತು. ಅದು ಕರಾರುವಾಕ್ಕಾಗಿ ನಮ್ಮ ವಿಜ್ಞಾನಿಗಳು ತಯಾರಿಸಿದ ಇವಿಎಂಗೆ, ದೇಶೀಯ ತಂತ್ರಜ್ಞಾನಕ್ಕೆ ಮಾಡಿದ ಅಪಮಾನ. ಲಂಗುಲಗಾಮಿಲ್ಲದೆ ಮಾತನಾಡುತ್ತಿದ್ದ ಕಾಂಗ್ರೆಸ್ ನಾಯಕರ ಬಾಯಿಗೆ ಬೀಗ ಹಾಕಲು ಕೊನೆಗೂ ವೀರಪ್ಪ ಮೊಯ್ಲಿ ಅವರಂಥ ಹಿರಿಯ ನಾಯಕರೇ ಬರಬೇಕಾಯಿತು.
ಒಟ್ಟಾರೆ ಕೇಳಿಕೊಳ್ಳಬೇಕಾದ ಪ್ರಶ್ನೆ ‘ಬುದ್ಧಿಗಳಿಗೆ’ ಏನಾಗಿದೆ ಧಾಡಿ ಅಂತ. ಕಾಂಗ್ರೆಸ್ ಮತ್ತು ಅದರ ಕುಡಿಗಳೇ ಆದ ಸ್ವಘೊಷಿತ ಸೆಕ್ಯುಲರ್ ಪಕ್ಷಗಳ ನಡೆ ಹೇಗಾದರೂ ಇರಲಿ. ಈ ‘ಬುದ್ಧಿಜೀವಿ’ ಎಂದು ಕರೆಸಿಕೊಳ್ಳುವ ವರ್ಗಕ್ಕೆ ಕಿಂಚಿತ್ತಾದರೂ ಬುದ್ಧಿ ಬೇಡವೆ? ತ್ರಿವಳಿ ತಲಾಕ್ ವಿಷಯದಲ್ಲಿ ಯಾಕಿವರು ಇಷ್ಟು ಮೌನವಾಗಿದ್ದಾರೆ? ಇವರ ಬುದ್ಧಿ ಯಾರದ್ದೋ ರಾಜಕೀಯ ಹಿತಾಸಕ್ತಿಗೆ ಮಾರಾಟ ಆಗಿಬಿಟ್ಟಿದೆಯೇ?
ಸತತ ತಪ್ಪಿನಿಂದಲೂ ತಿದ್ದಿಕೊಳ್ಳದವರಿಗೆ ಏನಂತ ಹೇಳುವುದು …
(ಲೇಖಕರು ‘ವಿಜಯವಾಣಿ’ ಸಂಪಾದಕರು)