ಅಧ್ಯಯನ, ಪ್ರವಚನ, ಬರವಣಿಗೆ ಆಚಾರ್ಯರ ಉಸಿರಾಗಿತ್ತು…

ಡಾ. ನಾರಾಯಾಣಾಚಾರ್ಯ ಅವರೊಂದಿಗಿನ ನನ್ನ ಒಡನಾಟ ೨೧ ವರ್ಷಗಳಷ್ಟು ಹಳೆಯದು.

ಆಚಾರ್ಯರ ವಯಸ್ಸಿಗೆ ಹೋಲಿಸಿದರೆ ನನಗೆ ಅವರ ವಯಸ್ಸಿನ ಅರ್ಧದಷ್ಟೂ ಆಗಿಲ್ಲ. ಆದರೆ ಅವರೆಂದೂ, ನನ್ನನ್ನು ಎನಗಿಂತ ಕಿರಿಯ ಎಂಬ ವಯಸ್ಸು ಹಾಗೂ ಅನುಭವದ ಅಹಂನಿಂದ ಕಾಣಲಿಲ್ಲ. ದೊಡ್ಡವರ ದೊಡ್ಡತನವದು. ೨೦೦೧ರಲ್ಲಿ ನಾನು ನಾರಾಯಣಾಚಾರ್ಯರ ಸಂಪರ್ಕಕ್ಕೆ ಬಂದೆ. ಆಗ ನಾನು ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕೀಯ ಪುಟ ನಿರ್ವಹಣೆ ಮಾಡುತ್ತಿದ್ದೆ. ಆಚಾರ್ಯರು ಇದಕ್ಕೆ ಪ್ರತಿವಾರ ಕಾಲಂ ಬರೆಯುತ್ತಿದ್ದರು. ಕೈ ಬರಹದಲ್ಲಿ ಲೇಖನ ಬರೆದು ಟಪಾಲಿನಲ್ಲಿ ಕಳಿಸುತ್ತಿದ್ದರು. ವಾರಕ್ಕೊಂದೇ ಲೇಖನ ಪ್ರಕಟಿಸುತ್ತಿದ್ದರೂ, ಆಚಾರ್ಯರಿಂದ ವಾರಕ್ಕೆ ಕನಿಷ್ಠ ಮೂರು ಟಪಾಲು ಬರುತ್ತಿತ್ತು. ಅಲ್ಲಿಂದ ಶುರುವಾದ ನನ್ನ ಮತ್ತು ಆಚಾರ್ಯರ ಬಾಂಧವ್ಯ ಇಲ್ಲಿಯವರೆಗೂ ಉಳಿದು ಬೆಳೆದು ಗಾಢವಾಗುತ್ತಲೇ ಹೋಯಿತು.
ಮುಖ್ಯವಾಗಿ ನಾನು ಅಂದು ಅಂಕಣ ಬರಹ ಪ್ರಾರಂಭಿಸಲು ಪ್ರೇರಣೆ ನಾರಾಯಣಾಚಾರ್ಯರು. “ನೀನೂ ಬರೀಬೇಕಪ್ಪಾ” ಎಂದು ಹೇಳಿದ್ದೇ ತಡ ನಾನು ಅಂಕಣ ಬರೆಯಲು ಪ್ರಾರಂಭಿಸಿದೆ. ಪ್ರತಿವಾರವೂ ನನ್ನ ಲೇಖನದ ಮೊದಲ ಓದುಗ ಎಂಬಂತೆ, ಪ್ರಥಮ ಪ್ರತಿಕ್ರಿಯೆ ನೀಡುವ ವ್ಯಕ್ತಿ ಆಚಾರ್ಯರೇ ಆಗಿದ್ದರು. ಅದಕ್ಕೆ ಹೊಸ ತಲೆಮಾರಿನ ಬರಹಗಾರರನ್ನು ತಯಾರು ಮಾಡಬೇಕೆಂಬ ಆಚಾರ್ಯರ ತುಡಿತವೇ ಕಾರಣವಾಗಿತ್ತೇ ಹೊರತು ಬೇರೇನೂ ಆಗಿರಲಿಲ್ಲ.
ನೇರ ನಿಷ್ಠುರಿ
ವಿಜಯವಾಣಿ ಪತ್ರಿಕೆ ಆರಂಭಿಸುವ ಮುನ್ನ ಅಂಕಣ ಬರೆಯಲು ವಿನಂತಿಸಿಕೊಳ್ಳಲು ನಾನು ಮತ್ತು ಡಾ. ವಿಜಯ ಸಂಕೇಶ್ವರ್ ಅವರು ಆಚಾರ್ಯರ ಮನೆಗೆ ಹೋಗಿದ್ದೆವು. ‘ಆಚಾರ್ಯರೇ ನೀವು ನಮ್ಮ ಹೊಸ ಪತ್ರಿಕೆಗೆ ಅಂಕಣ ಬರೆಯಬೇಕಲ್ಲ’ ಅಂತ ಕೇಳಿಕೊಂಡೆವು. ಒಂದು ಕ್ಷಣ ಆಕಾಶ ದಿಟ್ಟಿಸಿದ ಆಚಾರ್ಯರು ಸಂಕೇಶ್ವರರತ್ತ ಬೆರಳು ಮಾಡಿ, ‘ನಾನು ಬರೀಯುವೆ. ಆದರೆ ಒಂದು ಕಂಡೀಶನ್ನು. ನಿಮ್ಮ ಪತ್ರಿಕೆಯನ್ನು ಸಾರ್ವಜನಿಕ ಮೂತ್ರಿ ಮಾಡಬಾರದು, ಹಾಗಾದರೆ ಬರೀತೇನೆ’ ಎಂದರು. ಅದಕ್ಕೆ ಸಂಕೇಶ್ವರರು ‘ನನ್ನ ಪತ್ರಿಕೆಯನ್ನು ಯಾವುದೇ ಕಾರಣಕ್ಕೂ ಆ ರೀತಿ ಮಾಡುವುದಿಲ್ಲ’ ಎಂದು ಅಷ್ಟೇ ತೀಕ್ಷ್ಣವಾಗಿ ಹೇಳಿದರು. ಕೊಟ್ಟ ಮಾತಿನಂತೆ ನಾರಾಯಣಾಚಾರ್ಯರು ಮುಂದೆ ಹತ್ತು ವರ್ಷಗಳ ಕಾಲ ಲೇಖನ ಬರೆದರು. ಮತ್ತೆ ಯಥಾಪ್ರಕಾರ ವಾರಕ್ಕೆ ಎರಡು, ಮೂರು ಟಪಾಲು. ಅಷ್ಟು ವರ್ಷಗಳ ಕಾಲವೂ ನಾನು ತಿಂಗಳಿಗೊಮ್ಮೆ ಆದರೂ ಆಚಾರ್ಯರ ಮನೆಗೆ ಹೋಗಿ ಕನಿಷ್ಠ ಒಂದು ತಾಸು ಲೋಕಾಭಿರಾಮವಾಗಿ ಕುಶಲೋಪರಿ ಹರಟಿ ಬರುವುದು ಅಭ್ಯಾಸವಾಯ್ತು. ಒಮ್ಮೆ ಹಾಗೆ ಮನೆಗೆ ಹೋದಾಗ ವಯಸ್ಸು ತೊಂಭತ್ತಾಯ್ತಪ್ಪ, ಕೈ ಸೋಲ್ತಾ ಇದೆ. ಬರೆಯುವುದನ್ನು ನಿಲ್ಲಿಸ್ತೇನೆ ಎಂದಿದ್ದರು. ಆಗ ನಾನು ಹೇಳಿದೆ- ನೀವು ಕಳಿಸಿರುವ ಅಪ್ರಕಟಿತ ಲೇಖನಗಳು ಮತ್ತೆ ಹತ್ತು ವರ್ಷಕ್ಕಾಗುವಷ್ಟಿದೆ ನನ್ನ ಬಳಿ, ನಿಲ್ಲಿಸಿ ಏನೂ ಚಿಂತೆ ಇಲ್ಲ ಎಂದು ತಮಾಷೆ ಮಾಡಿದೆ. ಆಚಾರ್ಯರ ಬೊಚ್ಚ ಬಾಯಲ್ಲಿ ತುಂಬಾ ನಗು. ಬರವಣಿಗೆ ನಿರಂತರ.
ಮನೆಯಲ್ಲೆ ಪುಸ್ತಕ, ಬರವಣಿಗೆ
ಬೆಂಗಳೂರಿನ ಜಲದರ್ಶಿನಿ ನಗರದ ಆಚಾರ್ಯರ ಮನೆಯಲ್ಲಿ ನಾಲ್ಕಾರು ರೂಮುಗಳಿದ್ದವು. ಆದರೆ ಅವರು ವಾಸಕ್ಕೆ ಬಳಸುತ್ತಿದ್ದುದು ಒಂದೇ ರೂಮು. ಅದೂ ಪುಸ್ತಕಗಳಿಂದಲೇ ತುಂಬಿರುತ್ತಿತ್ತು. ಉಳಿದ ರೂಮುಗಳಲ್ಲಿ ಸುತ್ತಲೂ ಪುಸ್ತಕಗಳ ರಾಶಿ. ನಡುವೆ ಒಂದು ಕುರ್ಚಿ, ಟೇಬಲ್ಲು, ಮೇಲೊಂದು ಹಣತೆ. ಒಂದೊಂದು ರೂಮಲ್ಲಿ ಒಂದೊಂದು ವಿಷಯದ ಮೇಲೆ ಅಧ್ಯಯನ ಬರವಣಿಗೆ ನಿರಂತರವಾಗಿ ನಡೆಯುತ್ತಿತ್ತು. ಆಜಾನುಬಾಹು ಆಚಾರ್ಯರು ಪುಸ್ತಕಗಳ ರಾಶಿಯ ಮಧ್ಯೆ ಚಿಕ್ಕವರಾಗಿ ತೋರುತ್ತಿದ್ದರೂ, ದೊಡ್ಡ ಜ್ಞಾನವನ್ನೇ ನಮಗೆಲ್ಲಾ ಎರೆದರು.
ಪೆನ್ನು, ಪೇಪರು ಅಚ್ಚುಮೆಚ್ಚು
ನಾರಾಯಣಾಚಾರ್ಯರಿಗೆ ಓದು ಬರವಣಿಗೆ ಮತ್ತು ಅಭಿಮಾನಿ ಓದುಗರ ಸಂಪತ್ತು ದೊಡ್ಡದು. ಅವರಲ್ಲಿ ಕೆಲವರು ಅವರ ಮನೆಗೆ ಬರುವಾಗ ಹೂವು ಹಣ್ಣು ತರುವವರು. ಹಲವರು ಒಂದೆರಡು ರೀಮು ರೂಲ್ಡ ಹಾಳೆ ಹಾಗೂ ಡಜನ್ ಪೆನ್ನನ್ನು ತಂದುಕೊಡುವ ರೂಢಿ ಮಾಡಿಕೊಂಡಿದ್ದರು. ಶಿಷ್ಯರು, ಅಭಿಮಾನಿಗಳು ಉಡುಗೊರೆಯಾಗಿ ತಂದುಕೊಡುವ ಕಂತೆ ಕಂತೆ ಹಾಳೆ ಪೆನ್ನುಗಳನ್ನು ಬಳಸಿ ಆಚಾರ್ಯರು ಭರಪೂರ ಬರವಣಿಗೆ ಮಾಡುತ್ತಿದ್ದರು.
ಪ್ರವಚನ, ಪುಸ್ತಕಗಳಿಗೆ ಲೆಕ್ಕವಿಲ್ಲ
ಆಚಾರ್ಯರಿಗೆ ಓದು, ಬರವಣಿಗೆ ಮತ್ತು ಉಪನ್ಯಾಸವೇ ಉಸಿರಾಗಿತ್ತು. ಸುದೀರ್ಘ ಜೀವಿತಾವಯಲ್ಲಿ ಅವರು ರಾಮಾಯಾಣ, ಮಹಾಭಾರತ, ಭಾಗವತ, ಭಗವದ್ಗೀತೆ ಇತ್ಯಾದಿಗಳ ಮೇಲೆ ಬರೆದ ಪುಸ್ತಕಗಳು ನೂರಾರು. ಉಪನ್ಯಾಸಗಳು ಲಕ್ಷಕ್ಕೂ ಹೆಚ್ಚು. ಹೀಗಾಗಿ ರಾಮಾಯಣಾಚಾರ್ಯರೆಂದೇ ಅಭಿದಾಂಕಿತ ಗಳಿಸಿದ್ದರು. ಸಂಸ್ಕೃತ, ಇಂಗ್ಲಿಷ್, ಕನ್ನಡ , ತಮಿಳು ಭಾಷೆಗಳಲ್ಲಿ ಪರಿಣಿತರು.
ರಾಷ್ಟ್ರಹಿತಕ್ಕಾಗಿ ನಿಷ್ಠುರಿ
ಆಚಾರ್ಯರಿಗೆ ಧರ್ಮ, ಸಂಸ್ಕೃತಿ, ದೇಶಹಿತದ ಚಿಂತನೆ ಬಿಟ್ಟರೆ ಬೇರೇನೂ ಗೊತ್ತಿರಲಿಲ್ಲ. ಆ ವಿಷಯಗಳಲ್ಲಿ ಅವರೆಂದೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಈ ಅರ್ಥದಲ್ಲಿ ಅವರು ನೈಜ ರಾಷ್ಟ್ರಪ್ರೇಮಿ. ಅವರ ಮಾತು ಬರವಣಿಗೆ ನೇರ ನಿಷ್ಠುರ ಮತ್ತು ಕಠೋರ. ನಾಲ್ಕು ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡಿದರು. ವೃತ್ತಿಯಿಂದ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಆದರೆ ಅವರ ಸಾಹಿತ್ಯ ಕೃಷಿ ಕೇವಲ ಇಂಗ್ಲಿಷಿಗೆ ಸೀಮಿತವಾಗಿರಲಿಲ್ಲ. ಇಂಗ್ಲಿಷ್, ಸಂಸ್ಕೃತ ಹಾಗೂ ತಮಿಳಿನಲ್ಲಿ ಅಗಾಧ ಬರವಣಿಗೆ ಕೆಲಸ ಮಾಡಿದ್ದರು. ಪಾಂಡಿತ್ಯ ಗಳಿಸಿದ್ದರು. ಅಂತಹ ಮಹಾನ್ ವಿದ್ವಾಂಸ ಕೊನೆಗೂ ನಮ್ಮ ಕೇಂದ್ರ, ರಾಜ್ಯ ಸರಕಾರಗಳ ಕಣ್ಣಿಗೆ
ಕಾಣಿಸದೇ ಹೋದದ್ದು ಸೋಜಿಗದ
ಸಂಗತಿಯೇ ಸರಿ!
ಆಚಾರ್ಯರದ್ದೇ ವಸ್ತ್ರ ಸಂಹಿತೆ
ಆಚಾರ್ಯರು ಕರ್ನಾಟಕ ವಿವಿ ಧಾರವಾಡದಲ್ಲಿ ಮೂವತ್ತು ವರ್ಷಕ್ಕೂ ಹೆಚ್ಚು ಕಾಲ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ವೃತ್ತಿಯುದ್ದಕ್ಕೂ ಅವರು ಕಚ್ಚೆ ಪಂಚೆ, ಧೋತಿ ಹೊದ್ದು ಹಣೆಯ ಮೇಲೆ ನಾಮವಿಟ್ಟುಕೊಂಡೇ ವೃತ್ತಿಜೀವನ ಸವೆಸಿ ತಮ್ಮದೇ ಬ್ರಾಂಡ್ ಸೃಷ್ಟಿ ಮಾಡಿದ್ದರು. ಸದಾ ಸ್ವಾಭಿಮಾನ, ಸ್ವಾವಲಂಬನೆಯನ್ನು ವೃತದಂತೆ ಪಾಲಿಸಿದವರು,ಧೇನಿಸಿದವರು. ಅನಾಯಾಸ ಮರಣವನ್ನು ಬಯಸಿದವರು. ಸದಾ ಮಾತನಾಡುತ್ತಿದ್ದ ಆಚಾರ್ಯರು ಈಗ ಸಂಪೂರ್ಣ ಮೌನಕ್ಕೆ ಜಾರಿದ್ದಾರೆ.
ಅನ್ಯೋನ್ಯ ದಾಂಪತ್ಯ
ಆಚಾರ್ಯರ ಕೌಟುಂಬಿಕ ಜೀವನವೂ ಅಷ್ಟೇ ಸ್ವಚ್ಛ, ನಿರುಮ್ಮಳ ಮತ್ತು ಅನ್ಯೋನ್ಯ. ಅವರ ಧರ್ಮಪತ್ನಿಗೂ ಹೆಚ್ಚೂ ಕಡಿಮೆ ಎಂಭತ್ತರ ವಯಸ್ಸು. ಪತ್ನಿಗೊಮ್ಮೆ ಅನಾರೋಗ್ಯ ಕಾಡಿದಾಗ ಈ ಇಳಿವಯಸ್ಸಲ್ಲೂ
ಅವರು ಚಡಪಡಿಸಿದ್ದರು. ಅವರದ್ದು ಒಂದು ನಿಮಿಷವೂ ಪರಸ್ಪರ ಬಿಟ್ಟಿರಲಾರದ ಸಾಂಸಾರಿಕ ಜೀವನ. ಈಗ ಆ ಹಿರಿಯ ಜೀವದ ಸಂಕಟವನ್ನು ಊಹಿಸಿಕೊಳ್ಳಲೂ ಆಗದು.
ನನ್ನ ಏಳ್ಗೆಯಲ್ಲಿ ಆಚಾರ್ಯರ ಆಶೀರ್ವಾದದ ಪಾಲು ಬಲು ದೊಡ್ಡದು. ಗುರುವಾರ ರಾತ್ರಿ ಎರಡು ಗಂಟೆಗೆ ಆಚಾರ್ಯರು ಕೊನೆಯುಸಿರೆಳೆದರೆಂಬ ಸುದ್ದಿ ಮರುಕ್ಷಣದಲ್ಲೇ ನನ್ನನ್ನು ತಲುಪಿತು. ಮುಂಜಾನೆ ಅಂತಿಮ ದರ್ಶನಕ್ಕೆಂದು ಹೊರಟೆ. ಅರ್ಧ ಹಾದಿಗೆ ಹೋಗುವ ಹೊತ್ತಿಗೆ ಆಚಾರ್ಯರ ಸಾವನ್ನು ಊಹಿಸಿಕೊಳ್ಳಲು ಮನಸ್ಸಾಗಲಿಲ್ಲ. ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ ಅವರ ಸ್ನಿಗ್ಧ, ಮುಗ್ಧ ನಗುಮುಖವನ್ನು ಕಾಪಿಟ್ಟುಕೊಳ್ಳಲೆಂದು ಅರ್ಧ ಹಾದಿಯಿಂದಲೇ ವಾಪಸಾದೆ. ಅಂತಿಮ ದರ್ಶನಕ್ಕೆಂದು ತೆಗೆದುಕೊಂಡ ಹಾರ ನನ್ನ ಬಳಿಯೇ ಉಳಿದುಕೊಂಡಿತು…
ಆಚಾರ್ಯರ ಪ್ರೀತಿ ಹಾಗೆಯೇ ಇರಲೆಂದಾಶಿಸುವ…
ನಿಮ್ಮವ
ಹರಿಪ್ರಕಾಶ್ ಕೋಣೆಮನೆ

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top