ಸಾಮಾಜಿಕ ಹೋರಾಟವೇ ಬೇರೆ. ರಾಜಕೀಯ ಹೋರಾಟವೇ ಬೇರೆ. ಎರಡನ್ನೂ ಬೆರೆಸಿದರೆ ಏನು ಅನಾಹುತ ಆಗಬಹುದೋ ಅದೇ ಆಗುತ್ತಿದೆ ಈಗ ಆಮ್ ಆದ್ಮಿ ಪಕ್ಷದ ಸಂದರ್ಭದಲ್ಲಿ. ಅಣ್ಣಾ ಹಜಾರೆಗೆ ಗೊತ್ತಿದ್ದ ಈ ಸತ್ಯ ಕೇಜ್ರಿವಾಲ್‌ಗೆ ಗೊತ್ತಾಗದೆ ಹೋದದ್ದೇ ಅಚ್ಚರಿ.
ಅದೊಂದು ಸಣ್ಣ ಹೇಳಿಕೆ. ಆದರೆ ಅದರ ಹಿಂದೆ ಹುಟ್ಟಿಕೊಳ್ಳುವ ಆಲೋಚನೆ ಸಣ್ಣದಲ್ಲ. ನೀವೂ ಓದಿರುತ್ತೀರಿ. ದೆಹಲಿಯಲ್ಲಿ ಚಿಕೂನ್‌ಗುನ್ಯಾ, ಡೆಂಘೆ ಕಾಯಿಲೆ ಹತೋಟಿ ಮೀರುತ್ತಿರುವುದರ ಕುರಿತು ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೀಡಿದ ಹೇಳಿಕೆ ಅದು- ‘ಹೌದು, ನಾನು ಅಸಹಾಯಕ, ಇಲ್ಲಿ ಒಂದು ಪೆನ್ನು ಖರೀದಿಸಬೇಕೆಂದರೂ ಉಪರಾಜ್ಯಪಾಲರ ಅನುಮತಿಯನ್ನು ಕೇಳಬೇಕಿದೆ. ನಾನೇನೂ ಮಾಡಲಾಗುತ್ತಿಲ್ಲ’. ಇದು ಅನಿರೀಕ್ಷಿತವಲ್ಲ. ಈ ಮಾತಿನಲ್ಲಿ ನೂರಕ್ಕೆ ನೂರು ಸತ್ಯವೂ ಇಲ್ಲ. ಒಂದು ರೀತಿಯಲ್ಲಿ ತಾವೇ ಹೆಣೆದ ಬಲೆಯಲ್ಲಿ ಕೇಜ್ರಿವಾಲ್ ಈಗ ಸಿಲುಕಿಕೊಂಡಿದ್ದಾರೆ ಅಷ್ಟೆ.
ಮೊದಲು ನಾವು ಗಮನಿಸಬೇಕಾದುದು ದೆಹಲಿ ರಾಜ್ಯ ಸರ್ಕಾರಕ್ಕಿರುವ ಇತಿಮಿತಿ ಹಾಗೂ ದೆಹಲಿ ಮಹಾನಗರಕ್ಕೆ ಇರುವ ರಾಜತಾಂತ್ರಿಕ, ಐತಿಹಾಸಿಕ ಮಹತ್ವದ ಕುರಿತು. ದೆಹಲಿಗೆ ಉಳಿದ ರಾಜ್ಯಗಳಿಗೆ ಇರುವಂತೆ ರಾಜ್ಯಪಾಲರಿಲ್ಲ. ಉಪರಾಜ್ಯಪಾಲ(ಲೆಫ್ಟಿನಂಟ್ ಗವರ‍್ನರ್)ರಿದ್ದಾರೆ. ಅಂದರೆ ದೆಹಲಿ ಪೂರ್ಣಪ್ರಮಾಣದ ರಾಜ್ಯವಲ್ಲ ಎಂಬುದು ಸ್ಪಷ್ಟ. ದೆಹಲಿ ಉಪರಾಜ್ಯಪಾಲರಿಗೆ ಉಳಿದ ರಾಜ್ಯಗಳ ರಾಜ್ಯಪಾಲರಿಗಿರುವಂತೆ ಕೆಲವೊಂದು ವಿಶೇಷಾಧಿಕಾರಗಳಿಲ್ಲ; ಆದರೆ ಉಳಿದ ರಾಜ್ಯಪಾಲರಿಗಿರದ ಕೆಲವೊಂದು ವಿಶೇಷ ಹೊಣೆಗಾರಿಕೆಗಳಿವೆ. ಬೇರೆ ರಾಜ್ಯಗಳಲ್ಲಿ ಸಾಂವಿಧಾನಿಕ ಹುದ್ದೆಗಳನ್ನು ಹೊರತುಪಡಿಸಿ ಅಧಿಕಾರಿಗಳ ವರ್ಗಾವಣೆ, ನಿಯೋಜನೆ ಮತ್ತು ನೇಮಕಗಳು ಸಚಿವಾಲಯದ ಮಟ್ಟದಲ್ಲಿ ನಡೆಯುತ್ತವೆ. ಆದರೆ ದೆಹಲಿಯಲ್ಲಿ ಹಾಗಲ್ಲ, ಸಣ್ಣಪುಟ್ಟ ಅಧಿಕಾರಿಗಳ ನಿಯೋಜನೆ, ಸರ್ಕಾರದ ವೆಚ್ಚಗಳ ಮೇಲೆ ನಿಯಂತ್ರಣ ಇತ್ಯಾದಿ ಎಲ್ಲವುಗಳಿಗೂ ಉಪರಾಜ್ಯಪಾಲರ ಅಂಕಿತ ಬೇಕೇ ಬೇಕು. ದೈನಂದಿನ ಆಡಳಿತದ ಉಸ್ತುವಾರಿ ಬಿಟ್ಟರೆ ಆ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಉಪರಾಜ್ಯಪಾಲರು ಕೇಂದ್ರಕ್ಕೆ ವರದಿ ನೀಡಬೇಕಿಲ್ಲ. ಏಕೆಂದರೆ ದೆಹಲಿ ನೇರವಾಗಿ ಕೇಂದ್ರ ಗೃಹ ಸಚಿವಾಲಯದ ಸುಪರ್ದಿಗೆ ಒಳಪಟ್ಟಿದೆ. ಹಾಗೆಯೇ ದೆಹಲಿ ಮುಖ್ಯಮಂತ್ರಿಗೆ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗಿರದ ಕೆಲ ಮಿತಿಗಳಿವೆ. ಅದೆಂದರೆ- ಪೊಲೀಸ್ ಇಲಾಖೆ, ಕಾನೂನು ಸುವ್ಯವಸ್ಥೆಗೆ ಕೇಂದ್ರ ಗೃಹ ಇಲಾಖೆಯನ್ನು ಅವಲಂಬಿಸುವುದರಿಂದ ಹಿಡಿದು ತೆರಿಗೆ ಸಂಗ್ರಹದವರೆಗೆ. ಯಾಕೆ ಹೀಗೆ? ಇದರ ಹಿಂದೆ ತರ್ಕಬದ್ಧ ಆಲೋಚನೆ ಇಲ್ಲವೇ? ಖಂಡಿತವಾಗಿಯೂ ಇದೆ. ಅದು ಕಾನೂನು ವ್ಯವಸ್ಥೆಗೆ, ಕಾನೂನು ಪಂಡಿತರಿಗೆ ಗೊತ್ತಿದೆ. ರಾಜತಾಂತ್ರಿಕ ಪರಿಣತರಿಗೆ ಗೊತ್ತಿದೆ. ಸ್ವತಃ ಕೇಜ್ರಿವಾಲರಿಗೂ ಅರಿವಿದೆ. ಅಕಸ್ಮಾತ್ ಕೇಜ್ರಿವಾಲ್ ಅವರೇ ನಾಳೆ ದೇಶದ ಪ್ರಧಾನಿ ಆದರು ಅಂತಿಟ್ಟುಕೊಳ್ಳಿ. ಜವಾಬ್ದಾರಿಯುತವಾಗಿ ಆಲೋಚನೆ ಮಾಡಿದರೆ ದೆಹಲಿ ಸರ್ಕಾರಕ್ಕೆ ಈಗ ಇರುವುದಕ್ಕಿಂತ ಹೆಚ್ಚಿನ ಅಧಿಕಾರವನ್ನು ನೀಡಲು ಬಹುಶಃ ಅವರೂ ಮುಂದಾಗಲಾರರು.
ಹಾಗಾದರೆ ದೆಹಲಿಗೆ ಇರುವ ಇತಿಮಿತಿಯಾದರೂ ಏನು? ದೆಹಲಿಯಲ್ಲಿ ಸಂಸತ್ ಭವನವಿದೆ. ಕೇಂದ್ರಸರ್ಕಾರದ ಸಚಿವಾಲಯಗಳಿವೆ. ರಾಷ್ಟ್ರಪತಿ ಭವನವಿದೆ. ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರು ಇರುತ್ತಾರೆ. ಹೇಳಿಕೇಳಿ ಅದು ದೇಶದ ರಾಜಧಾನಿ. ಜಗತ್ತಿನಲ್ಲಿ ಬಲಾಢ್ಯ ರಾಷ್ಟ್ರ ಎನಿಸಿಕೊಂಡಿರುವ ಭಾರತದ ಶಕ್ತಿಕೇಂದ್ರ. ದಿನವೂ ಒಂದಲ್ಲ ಒಂದು ದೇಶದ ಮುಖ್ಯಸ್ಥರು, ರಾಜತಾಂತ್ರಿಕರು ಭೇಟಿ ನೀಡುತ್ತಿರುತ್ತಾರೆ. ಪ್ರಪಂಚದ ಬಹುಪಾಲು ರಾಷ್ಟ್ರಗಳ ರಾಜತಾಂತ್ರಿಕ ಕಚೇರಿಗಳು ಇರುವುದು ದೆಹಲಿಯಲ್ಲೇ. ಒಂದು ಅರ್ಥದಲ್ಲಿ ಭಾರತದಂತಹ ದೊಡ್ಡ ದೇಶದ ಆತ್ಮ ಇರುವುದೇ ದೆಹಲಿಯಲ್ಲಿ. ಇಂತಹ ಮಹತ್ವದ ಭೂಭಾಗದ ಕಾನೂನು ಸುವ್ಯವಸ್ಥೆಯ ನಿಯಂತ್ರಣವನ್ನು ಕೇಂದ್ರ ಗೃಹ ಇಲಾಖೆಯ ಬದಲು ದೆಹಲಿ ಸರ್ಕಾರದ ಸುಪರ್ದಿಗೆ ಕೊಡುವುದು ಉಚಿತವಾದೀತೇ? ಕೇಜ್ರಿವಾಲರಂತಹ ಅರಾಜಕತಾವಾದಿಯನ್ನು ಆ ಸ್ಥಾನದಲ್ಲಿ ಕಲ್ಪಿಸಿಕೊಂಡು ಯೋಚಿಸಿದರೆ ಈ ಮಾತಿನ ಮರ್ಮ ಅರ್ಥವಾದೀತು.
ನಗರಾಡಳಿತದ ದೃಷ್ಟಿಯಿಂದ ದೆಹಲಿಯಲ್ಲಿ ಈಗಾಗಲೇ ಎರಡು ಮಹಾನಗರ ಪಾಲಿಕೆಗಳಿವೆ. ಇನ್ನೂ ಹೆಚ್ಚು ಸ್ಪಷ್ಟವಾಗಿ ಅರ್ಥವಾಗಬೇಕೆಂದರೆ ಬೆಂಗಳೂರು ಮಹಾನಗರದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಇಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವದಲ್ಲಿದೆ. ಅದನ್ನು ಒಡೆದು ಇನ್ನೂ ಒಂದೋ ಎರಡೋ ಪಾಲಿಕೆ ಮಾಡಬೇಕೆಂಬ ಚರ್ಚೆ ಚಾಲ್ತಿಯಲ್ಲಿದೆ. ಅದರ ಉದ್ದೇಶ, ದುರುದ್ದೇಶಗಳು ಬೇರೆ. ಅದರ ಜೊತೆಗೆ ಬೆಂಗಳೂರು ನಗರಕ್ಕೆ ಒಂದು ರಾಜ್ಯಸರ್ಕಾರವನ್ನು ಸೃಷ್ಟಿ ಮಾಡಿದರೆ ಹೇಗಿರುತ್ತದೆ? ಅಧಿಕಾರ ಕೇಂದ್ರಗಳನ್ನು ಹೆಚ್ಚು ಮಾಡುವುದರಿಂದ ನಾಗರಿಕರ ತೆರಿಗೆ ಹಣ ಪೋಲಾಗಬಹುದೇ ಹೊರತು ಅದಕ್ಕಿಂತ ಹೆಚ್ಚಿನ ಸಾಧನೆಯೇನೂ ಸಾಧ್ಯವಿಲ್ಲ. ಈಗ ದೆಹಲಿಯಲ್ಲಿ ಆಗಿರುವುದೂ ಇದೇ ಸಮಸ್ಯೆ.
ಖರ್ಚು ವೆಚ್ಚದ ವಿಚಾರ ಬಿಟ್ಟು ಕಾನೂನು ಸುವ್ಯವಸ್ಥೆ ವಿಷಯಕ್ಕೆ ಬರೋಣ. ಕಾವೇರಿ ನೀರಿನ ವಿವಾದದ ಸಂದರ್ಭದಲ್ಲಿ ಮೊನ್ನೆ ಬೆಂಗಳೂರಿನಲ್ಲಿ ನಡೆದ ಗಲಭೆಯನ್ನೇ ತೆಗೆದುಕೊಳ್ಳಿ. ಕಾನೂನು ಸುವ್ಯವಸ್ಥೆ ಅವ್ಯವಸ್ಥೆಯಾಗಲು, ಪೊಲೀಸರು ಮೂಕಪ್ರೇಕ್ಷಕರಾಗಲು ಕರ್ನಾಟಕ ಸರ್ಕಾರದ ಮನಸ್ಥಿತಿಯೂ ಕಾರಣ ಎಂಬುದರಲ್ಲಿ ಅನುಮಾನವಿಲ್ಲ. ಆರಂಭದಲ್ಲೇ ಗಲಭೆ ನಿಯಂತ್ರಿಸಿದರೆ ಸುಪ್ರೀಂಕೋರ್ಟಿಗೆ ಬಿಸಿ ಮುಟ್ಟಿಸಲಾಗದು. ಕಾವೇರಿ ನೀರಿನ ಹಂಚಿಕೆ ವಾದ-ವಿವಾದದ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ಉಲ್ಲೇಖಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಆಗುವ ಸಮಸ್ಯೆಯನ್ನು ಮನದಟ್ಟು ಮಾಡಿಕೊಡಲು ಮತ್ತು ಕನ್ನಡ/ಕಾವೇರಿಪರ ಭಾವನಾತ್ಮಕ ಹೋರಾಟವನ್ನು ಹತ್ತಿಕ್ಕಿದ ಅಪವಾದದಿಂದ ಪಾರಾಗಲು ಆರಂಭದಲ್ಲಿ ಸರ್ಕಾರ ಅನುಸರಿಸಿದ ತಂತ್ರಗಾರಿಕೆ ಅದು. ಆಮೇಲೆ ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ಮುಂದಾಯಿತಾದರೂ ಕೈಮೀರಿ ಹೋಗಿತ್ತು. ಇದೇ ಪ್ರಸಂಗ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಜರುಗಿತು ಅಂತಿಟ್ಟುಕೊಳ್ಳಿ, ಅದರ ಪರಿಣಾಮ ಒಂದು ರಾಜ್ಯಕ್ಕೆ, ರಾಜಧಾನಿಗೆ ಅಥವಾ ಒಂದು ದೇಶಕ್ಕೆ ಸೀಮಿತವಾಗಿರುವುದಿಲ್ಲ. ದೇಶದ ಮರ್ಯಾದೆ, ಗೌರವದ ಪ್ರಶ್ನೆ. ಇಡೀ ಭಾರತದಲ್ಲಿ ಅಶಾಂತಿಯಿದೆ ಎಂದು ಹೊರರಾಷ್ಟ್ರಗಳು ಭಾವಿಸಬಹುದು. ಅದರಿಂದ ಆರ್ಥಿಕ, ವ್ಯಾವಹಾರಿಕ, ಔದ್ಯೋಗಿಕ, ರಾಜತಾಂತ್ರಿಕ ವಲಯಗಳ ಮೇಲೆ ಆಗುವ ನಕಾರಾತ್ಮಕ ಪರಿಣಾಮವನ್ನು ಊಹಿಸಲೂ ಅಸಾಧ್ಯ.
ಇವಿಷ್ಟು ಒಂದು ಭಾಗ. ಇನ್ನು ದೆಹಲಿಯಂತಹ ಆಯಕಟ್ಟಿನ ಮಹಾನಗರಕ್ಕೆ ರಾಜ್ಯದ ಸ್ಥಾನಮಾನ ನೀಡುವ ಹಂತದಿಂದ ಹಿಡಿದು ಇಲ್ಲಿಯವರೆಗೆ ಆಗಿರುವ ಪ್ರಮಾದದಲ್ಲಿ ಯಾರ ಪಾಲು ಎಷ್ಟು ಎಂಬುದರ ವಿಶ್ಲೇಷಣೆಯೂ ಆಗಬೇಕು. ಸ್ವಾತಂತ್ರ್ಯಾನಂತರ ಈ ದೇಶವನ್ನು ಕಾಂಗ್ರೆಸ್ ಹೆಚ್ಚು ಕಾಲ ಆಳಿದ್ದರಿಂದ ಸಹಜವಾಗಿ ಹತ್ತು ಹಲವು ವಿಚಾರಗಳಲ್ಲಿ ಅತಿ ಹೆಚ್ಚು ಪ್ರಮಾದ ಮಾಡಿದ್ದೂ ಆ ಪಕ್ಷವೇ. ದೆಹಲಿಗೆ ರಾಜ್ಯದ ಸ್ಥಾನಮಾನ ನೀಡಿ, ಸರ್ಕಾರ ಪ್ರತಿಷ್ಠಾಪನೆ ಮಾಡಿದ್ದು ಅತ್ಯಂತ ದೊಡ್ಡ ಪ್ರಮಾದಗಳಲ್ಲೊಂದು ಎಂದರೆ ತಪ್ಪಾಗದು. ಅದರ ನೇರ ಮತ್ತು ಘೋರ ಪರಿಣಾಮದ ಅರಿವು ಈಗ ಆಗತೊಡಗಿದೆ ಅಷ್ಟೆ.
ಕೇಜ್ರಿವಾಲ್ ವಿಚಾರಕ್ಕೆ ಬರೋಣ. ಅವರು ಅತ್ಯಂತ ಬುದ್ಧಿವಂತ ಮತ್ತು ವಿದ್ಯಾವಂತ. ಆ ವಿಷಯದಲ್ಲಿ ಅವರು ಭಾರತದ ಇತರ ಸಾಂಪ್ರದಾಯಿಕ ರಾಜಕಾರಣಿಗಳಿಗಿಂತ ಭಿನ್ನ. ಹಾಗಿರುವಾಗ ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡುವಲ್ಲಿನ ತಾಂತ್ರಿಕ ಮತ್ತು ವ್ಯಾವಹಾರಿಕ ತೊಡಕು ಅವರಿಗೆ ಚೆನ್ನಾಗಿಯೇ ಗೊತ್ತಿರಬೇಕು. ದೆಹಲಿ ಸರ್ಕಾರಕ್ಕಿರುವ ಆದಾಯದ ಇತಿಮಿತಿಯ ಅರಿವಿರಬೇಕು. ಆದರೂ ಕೇಜ್ರಿವಾಲ್ ದೆಹಲಿಯ ಜನರಲ್ಲಿ ಬೆಟ್ಟದಷ್ಟು ನಿರೀಕ್ಷೆಯನ್ನು ಮೂಡಿಸಿದರು. ಒಂದು ವೇಳೆ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಒಂದುಗೂಡಿ ಸಹಕಾರದಿಂದ ಕೆಲಸ ಮಾಡಿದರೂ ಆ ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚಾಗಿ ಈಡೇರಿಸಲು ಸಾಧ್ಯವಾಗದ ಪೂರ್ಣ ರಾಜ್ಯದ ಸ್ಥಾನಮಾನ ಪಡೆಯುವುದಕ್ಕಾಗಿ ಕೇಂದ್ರ ಸರ್ಕಾರದೊಂದಿಗೆ ಕೋಳಿಜಗಳಕ್ಕೆ ಇಳಿದರು; ಬೀದಿಹೋರಾಟಕ್ಕಿಳಿದು ಅರಾಜಕತೆಯನ್ನೂ ಸೃಷ್ಟಿಸಿದರು. ವಾಸ್ತವದಲ್ಲಿ ಸಂವಿಧಾನಬದ್ಧವಾಗಿ ಪದಗ್ರಹಣ ಮಾಡಿದ ಯಾವುದೇ ಮುಖ್ಯಮಂತ್ರಿ ಅಂಥ ಕೆಲಸ ಮಾಡಬಾರದು. ಅದರ ಜೊತೆಗೆ ಕೇಜ್ರಿವಾಲ್ ಮಾಡಿದ ಮತ್ತೊಂದು ಪ್ರಮಾದ ಎಂದರೆ ಕಟ್ಟಿದ ಕನಸಿನ ಗೋಪುರ ಆರಂಭದಲ್ಲೇ ಬಿದ್ದು ಹೋಗಬಾರದು ಎಂಬ ಕಾರಣಕ್ಕೆ ದೆಹಲಿಯ ಜನತೆಗೆ ಉಚಿತ ನೀರು ಮತ್ತು ವಿದ್ಯುತ್ ನೀಡಲು ಮುಂದಾದದ್ದು. ಇರುವ ಆರ್ಥಿಕ ಇತಿಮಿತಿಯಲ್ಲಿ ದೆಹಲಿಯ ಜನರಿಂದ ತೆರಿಗೆ ಹಣ ಪಡೆದು ಸವಲತ್ತು ಕೊಡುವುದೇ ಕಷ್ಟ ಆಗಿರುವಾಗ ಉಚಿತ ಯೋಜನೆಗಳನ್ನು ಜಾರಿ ಮಾಡಿದರೆ ಉಳಿದ ಕೆಲಸಗಳಿಗೆ ದುಡ್ಡು ಹೊಂದಿಸುವುದು ಎಲ್ಲಿಂದ? ಈಗ ಕೇಜ್ರಿವಾಲರನ್ನು ಕಾಡುತ್ತಿರುವುದು ಇದೇ ಸಮಸ್ಯೆ. ಅದನ್ನು ಅವರು ನಾನಾ ರೀತಿಯಲ್ಲಿ ಹೊರಹಾಕುತ್ತಿದ್ದಾರಷ್ಟೆ.
ಅದಕ್ಕಿಂತ ಹಿಂದೆ ಹೋಗಿ ಆಲೋಚನೆ ಮಾಡೋಣ. ಮಿತಿಮೀರಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂಬುದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಬಯಕೆ. ಹೀಗಾಗಿಯೇ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಜನಲೋಕಪಾಲ ಹೋರಾಟವನ್ನು ರೂಪಿಸಿದಾಗ ದೆಹಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಅಭೂತಪೂರ್ವ ಜನಸ್ಪಂದನೆ ಸಿಕ್ಕಿತು. ಹಾಗಂತ ಅದೇ ಹೋರಾಟವನ್ನು ರಾಜಕೀಯ ವೇದಿಕೆ ಮಾಡಲು ಹಜಾರೆಯಿಂದ ಹಿಡಿದು ಅವರ ಹೋರಾಟದೊಂದಿಗೆ ಕೈಜೋಡಿಸಿದ ಬಹುಪಾಲು ಮಂದಿ ತಯಾರಿರಲಿಲ್ಲ. ಆದರೆ ಅದೇ ಹಜಾರೆ ಪಕ್ಕದಲ್ಲೇ ಕುಳಿತಿದ್ದ ಕೇಜ್ರಿವಾಲ್ ಜನಲೋಕಪಾಲ ಹೋರಾಟವನ್ನು ರಾಜಕೀಯ ವೇದಿಕೆ ಮಾಡಲು ಹೊರಟರು. ಅದೇ ಅವರು ಮಾಡಿದ ಮೊದಲ ಪ್ರಮಾದ.
ಕಾರಣ ಇಷ್ಟೆ, ರಾಜಕೀಯ ಅಧಿಕಾರ ಕೇಂದ್ರಿತ ಚಟುವಟಿಕೆಯಿಂದ ಒಂದು ಹೋರಾಟ ದಿಕ್ಕು ತಪ್ಪಬಹುದೇ ಹೊರತು ಉದ್ದೇಶದಲ್ಲಿ ಸ-ಲವಾಗಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ಹೋರಾಟ ರಾಜಕೀಯ ಸ್ವರೂಪ ಪಡೆದು ಯಶಸ್ವಿಯಾದ ಉದಾಹರಣೆ ಇಲ್ಲ. ಈಗ ದೇಶದಲ್ಲಿ ಚಲಾವಣೆಯಲ್ಲಿರುವ ಪಕ್ಷಗಳ ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ ಈ ವಿಷಯ ಮನದಟ್ಟಾದೀತು.
ಉದಾಹರಣೆಗೆ ಕಾಂಗ್ರೆಸ್. ಅದರ ಸ್ಥಾಪನೆ ಮತ್ತು ಅದನ್ನು ರಾಜಕೀಯ ವೇದಿಕೆಯಾಗಿಸಿದ ಕುರಿತು ಎರಡು ವಿಶ್ಲೇಷಣೆಗಳಿವೆ. ಬ್ರಿಟಿಷ್ ವ್ಯಕ್ತಿ ಎ.ಓ. ಹ್ಯೂಮ್ ಕಾಂಗ್ರೆಸ್ ಸ್ಥಾಪನೆ ಮಾಡಿದ್ದು ಸ್ವಾತಂತ್ರ್ಯ ಹೋರಾಟದ ಕಾವನ್ನು ತಡೆಯುವ ಸಲುವಾಗಿ ಎಂಬುದು ಒಂದು ವಾದ. ಅದೇ ಸೇಫ್ಟಿ ವಾಲ್ವ್ ಥಿಯರಿ. ಅದೇನೆ ಇದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ವಹಿಸಿದ ಪಾತ್ರವನ್ನು ಅಲ್ಲಗಳೆಯಲಾಗದು. ಆ ಕಾರಣಕ್ಕೋಸ್ಕರವೇ ಕಾಂಗ್ರೆಸ್ ಸಂಘಟನೆಯನ್ನು ರಾಜಕೀಯ ಪಕ್ಷವಾಗಿ ಮುಂದುವರಿಸಬಾರದು, ಸ್ವಾತಂತ್ರ್ಯ ಪ್ರಾಪ್ತಿಯ ನಂತರ ವಿಸರ್ಜಿಸಬೇಕು ಎಂದು ಹಲವರು ಚಿಂತನೆ ನಡೆಸಿದ್ದರು. ಹಾಗೆ ಮಾಡಿದ್ದರೆ ಕಾಂಗ್ರೆಸ್ ಸಂಘಟನೆ ಈ ದೇಶದಲ್ಲಿ ಅಜರಾಮರವಾಗಿ ಇರುತ್ತಿತ್ತು. ಆದರೆ ಕೇಜ್ರಿವಾಲ್ ಇಂದು ಮಾಡಿದ ಪ್ರಮಾದವನ್ನು ನೆಹರು ಅಂದು, ಸ್ವಾತಂತ್ರ್ಯ ಬಂದ ಹೊಸತರಲ್ಲಿ ಮಾಡಿದ್ದರು. ರಾಜಕೀಯ ಪಕ್ಷವಾದರೆ ಕಾಂಗ್ರೆಸ್ ತನ್ನ ಪಾವಿತ್ರ್ಯ ಉಳಿಸಿಕೊಳ್ಳಲಾಗದು ಎಂಬುದೇ ಅದನ್ನು ವಿಸರ್ಜಿಸಬೇಕೆಂಬುದರ ಚಿಂತನೆಯ ಹಿನ್ನೆಲೆ. ಅದು ಕಾರ್ಯರೂಪಕ್ಕೆ ಬಾರದ್ದರಿಂದ ಕಾಂಗ್ರೆಸ್ ಇಂದು ಎಂತಹ ಸ್ಥಿತಿ ತಲುಪಿದೆ ಎಂಬುದು ಗೊತ್ತಿದ್ದೂ ಜನಲೋಕಪಾಲ ಚಳವಳಿಯನ್ನು ರಾಜಕೀಯವಾಗಿ ರೂಪಾಂತರಿಸಿದ್ದು ಕೇಜ್ರಿವಾಲ್ ಮಾಡಿದ ಘೋರ ಪ್ರಮಾದ. ಯಾಕೆಂದರೆ ಆ ಚಳವಳಿಯ ಉದ್ದೇಶವನ್ನು ಈಡೇರಿಸಬಲ್ಲ, ಹೋರಾಟದ ಗಟ್ಟಿತನವನ್ನು ಕಾಪಾಡಿಕೊಳ್ಳಲು ಬೇಕಾದ ಸಿದ್ಧತೆ ಮತ್ತು ಶಕ್ತಿ ಎರಡೂ ಕೇಜ್ರಿವಾಲ್ ಬಳಿ ಇರಲಿಲ್ಲ. ಲೈಂಗಿಕ ಹಗರಣ, ಕೌಟುಂಬಿಕ ಹಿಂಸಾಚಾರ ಇತ್ಯಾದಿ ಆರೋಪಗಳ ಅಡಿಯಲ್ಲಿ ಕೇಜ್ರಿವಾಲ್ ಸರ್ಕಾರದ ಮಂತ್ರಿಗಳು, ಶಾಸಕರು ಜೈಲಿನ ಕಂಬಿಯ ಹಿಂದೆ ಹೋಗುತ್ತಿರುವುದನ್ನು ನೋಡಿದರೆ ಈ ಮಾತು ಅರ್ಥವಾದೀತು. ಎಲ್ಲದಕ್ಕಿಂತ ಹೆಚ್ಚು ಭ್ರಮನಿರಸನ ಆಗಿದ್ದು ಅಣ್ಣಾ ಹಜಾರೆ ಬದಿಯಲ್ಲಿ ನಿಂತು ರಾಷ್ಟ್ರಧ್ವಜ ಬೀಸುತ್ತ ಭ್ರಷ್ಟಾಚಾರದ ವಿರುದ್ಧ ರಣಕಹಳೆ ಊದಿದ್ದ ಕೇಜ್ರಿವಾಲ್, ಕೆಲವೇ ತಿಂಗಳುಗಳ ಅಂತರದಲ್ಲಿ, ಭ್ರಷ್ಟಾಚಾರದಿಂದಲೇ ಕುಖ್ಯಾತಿ ಪಡೆದ ಬಿಹಾರದ ಲಾಲುಪ್ರಸಾದ್ ಯಾದವ್ ಅವರ ಮಗ್ಗುಲಲ್ಲಿ ನಿಂತು ಕೈ ಬೀಸಿದ್ದು.
ಕೇಜ್ರಿವಾಲ್ ಮಾಡಿದ ಎರಡನೆಯ ಪ್ರಮಾದ ದೆಹಲಿಯಲ್ಲಿ ಗೆಲುವು ಪಡೆದ ನಂತರ ಪ್ರಧಾನಿ ಮೋದಿಗೇ ತಾನು ಸರಿಸಮಾನ ಪ್ರತಿಸ್ಪಧಿ ಎಂದು ಬಿಂಬಿಸಿಕೊಳ್ಳಲು ಹೋದದ್ದು. ದೆಹಲಿ ಗದ್ದುಗೆ ಹಿಡಿದ ತಾನು ಲೋಕಸಭೆಯಲ್ಲೂ ನಿರ್ಣಾಯಕ ಆಗುತ್ತೇನೆಂದು ಹೊರಟದ್ದು. ಮೋದಿ ಮತ್ತು ಕೇಂದ್ರ ಸರ್ಕಾರದೊಂದಿಗೆ ಸ್ಪರ್ಧೆಗೆ ಇಳಿದ ದಿನವೇ ಕೇಜ್ರಿವಾಲ್ ಸೋಲಿನ ಮೊದಲ ಹೆಜ್ಜೆ ಇಟ್ಟಂತಾಯಿತು. ಕೇಜ್ರಿವಾಲ್ ನಿಜಕ್ಕೂ ಬುದ್ಧಿವಂತ ಆಗಿದ್ದರೆ, ಸಾಮಾಜಿಕ ಹೋರಾಟ, ರಾಜಕೀಯ ವೇದಿಕೆ ಸ್ಥಾಪನೆಯ ಉದ್ದೇಶದಲ್ಲಿ ಬದ್ಧತೆ ಇದ್ದರೆ ಕನಿಷ್ಠ ಐದು ವರ್ಷಗಳ ಕಾಲ ಬೇರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ದೆಹಲಿಯ ಆಡಳಿತದಲ್ಲಿ ಅಲ್ಲಿನ ಪಾಲಿಕೆಗಿಂತ ಉತ್ತಮ ಕೆಲಸ ಮಾಡಿತೋರಿಸುವ ಸಂಕಲ್ಪ ಮಾಡಬೇಕಿತ್ತು. ಹಾಗೆ ಮಾಡುವ ಅವಕಾಶ ಅವರಿಗೆ ಇತ್ತು ಕೂಡ. ಅದನ್ನು ಕೈ ಚೆಲ್ಲಿದ ಕೇಜ್ರಿವಾಲ್‌ಗೆ ವಾರಾಣಸಿಯಲ್ಲಿ ಗೆಲ್ಲುವ ಹಂಬಲ, ಪಂಜಾಬ್‌ನಲ್ಲಿ ಅಧಿಕಾರ ಹಿಡಿಯುವ ತವಕ, ಗೋವಾದಲ್ಲಿ ಗೆದ್ದೇ ಬಿಡಬೇಕೆಂಬ ತಹತಹಿಕೆ. ರಾತ್ರಿ ಬೆಳಗಾಗುವುದರೊಳಗೆ ರಾಜಕೀಯ ಕ್ರಾಂತಿ ಮಾಡಿಬಿಡುವ ಹುಚ್ಚು ನಿರ್ಧಾರ. ಆಮ್ ಆದ್ಮಿ ಪಕ್ಷಕ್ಕೆ ದೆಹಲಿ ಮಾತ್ರವಲ್ಲ, ಪಂಜಾಬಿನಲ್ಲಿ ಸಹ ಜಂಘಾಬಲವನ್ನೇ ಉಡುಗಿಸುವಂತಹ ಬೆಳವಣಿಗೆಗಳಾಗುತ್ತಿವೆ. ಅದಕ್ಕೆ ಕಾರಣ ಮತ್ತದೇ ಯಾವುದೇ ಪೂರ್ವಾಪರ ನೋಡದೆ ಬಂದ ಬಂದವರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳಲು ಹೋದದ್ದು. ‘ಪೆನ್ನು ಖರೀದಿಸುವುದಕ್ಕೂ ಉಪರಾಜ್ಯಪಾಲರನ್ನು ಕೇಳಬೇಕಿದೆ’ ಎಂಬ ಬೇಸರದ ನುಡಿಯ ಜೊತೆಗೇ ‘ಪಂಜಾಬ್ ಚುನಾವಣೆಯಲ್ಲಿ ಸ್ಪಧಿಸಲು ಪಕ್ಷದ ಬಳಿ ಹಣಬಲವಿಲ್ಲ’ಎಂಬ ಕೇಜ್ರಿವಾಲರ ಹಳಹಳಿಕೆಯನ್ನಿಟ್ಟು ನೋಡಿ, ಆಗ ಅವರ ಹತಾಶೆ, ನಿರಾಸೆಗೆ ಮೂಲ ಕಾರಣ ಏನೆಂಬುದು ಗೊತ್ತಾಗುತ್ತದೆ.