ಆಪರೇಷನ್ ಶುರುವಾಗಿದೆ, ಫಲಿತಾಂಶಕ್ಕೆ ಕಾಯೋಣ

ಆರ್ಥಿಕ ಸುಧಾರಣೆಯ ನಿಟ್ಟಿನಲ್ಲಿ ಹೊಸ ಪ್ರಯತ್ನಗಳು ಆರಂಭವಾಗಿವೆ. ಸಾಮಾನ್ಯ ಜನರು ಕೂಡ ದೇಶದ ವಿತ್ತೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸುವ ವಾತಾವರಣ ಸೃಷ್ಟಿಯಾಗಿದೆ. ಸಾಮಾಜಿಕ ಯೋಜನೆಗಳು ವೇಗ ಪಡೆದುಕೊಂಡಿದ್ದು, ಅಭಿವೃದ್ಧಿ ಕುರಿತಾದ ಚರ್ಚೆ ಗರಿಗೆದರಿದ್ದು, ಜನರ ಮನೋಧರ್ಮದಲ್ಲಿ ಬದಲಾವಣೆ ಕಾಣುತ್ತಿದೆ.

ದೇಶದ ಆರ್ಥಿಕತೆ ವಿಷಯ ಬಂದಾಗ ನಮಗೆ ಎರಡು ವಿಚಾರಗಳು ಇದೀಗ ಪ್ರಮುಖವಾಗಿ ಕಾಣಿಸುತ್ತಿವೆ. ಒಂದು- ಬೇಸರ. ಇನ್ನೊಂದು-ಖುಷಿ. ಮೊದಲು ಬೇಸರದ ವಿಚಾರ ಏನು ಅಂತ ನೋಡೋಣ.

1) ಉದ್ಯೋಗ ಸೃಷ್ಟಿಯಲ್ಲಿ ಭಾರಿ ಇಳಿಕೆ ಆಗಿದೆ. 2) ಜಿಡಿಪಿ ದರ ವೃದ್ಧಿ ಆಗುವ ಬದಲು ಎರಡರಿಂದ ಮೂರು ಅಂಶ ಕುಸಿತ ಕಂಡಿದೆ. 3) ಹಣದುಬ್ಬರ ಇಳಿಕೆಯಾಗಬೇಕಿತ್ತು… ಏರಿಕೆಯಾಗುತ್ತಿದೆ. 4) ರೂಪಾಯಿ ಮೌಲ್ಯ ವೃದ್ಧಿ ಆಗಬೇಕಿತ್ತು… ಕುಸಿತ ಕಂಡಿದೆ.

ಇವಿಷ್ಟೂ ಅಂಶಗಳು ಒಂದು ದೇಶದ ಆರ್ಥಿಕತೆಯ ಶಕ್ತಿ ಸಾಮರ್ಥ್ಯ ಮಾನದಂಡಗಳು. ದುರ್ದೈವ ಎಂದರೆ ಅವೆಲ್ಲವೂ ನಕಾರಾತ್ಮಕ ಗತಿಯಲ್ಲಿ ಸಾಗುತ್ತಿವೆ. ಇಲ್ಲಿಯವರೆಗೆ ಈ ಅಂಶಗಳ ಕುರಿತು ಅರ್ಥ ಸಚಿವರು, ಆರ್​ಬಿಐ ಗವರ್ನರ್ ಮತ್ತು ಆರ್ಥಿಕ ತಜ್ಞರು ಎನಿಸಿಕೊಂಡಿರುವವರು ಮಾತ್ರ ಮಾತನಾಡುತ್ತಿದ್ದರು. ಜನಸಾಮಾನ್ಯರು ದೇಶದ ಆರ್ಥಿಕತೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಇದ್ದುಬಿಡುತ್ತಿದ್ದರು. ಇದು ದುಃಖದ ವಿಚಾರ.

ಹಾಗಾದರೆ ಖುಷಿಯ ವಿಚಾರ ಏನು? ಆರ್ಥಿಕ ತಜ್ಞರಿಗೆ ಹೊರತಾಗಿ, ರಾಜಕೀಯ ನಾಯಕರ ಮೇಲ್ಮೇಲಿನ ಪರ-ವಿರೋಧದ ಚರ್ಚೆಗೆ ಹೊರತಾಗಿ, ಜಿಡಿಪಿ/ನಿರುದ್ಯೋಗ/ಹಣದುಬ್ಬರ/ರೂಪಾಯಿ ಮೌಲ್ಯದ ಕುಸಿತ, ಜಿಎಸ್​ಟಿ ತೆರಿಗೆ ಪದ್ಧತಿಯ ಸಾಧಕ ಬಾಧಕದ ಕುರಿತು ಊರೂರಿನ ಬಸ್​ಸ್ಟ್ಯಾಂಡು, ಹಳ್ಳಿಬದಿಯ ಅರಳಿಕಟ್ಟೆಯ ಮೇಲೂ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ರೈತಾಪಿ ಜನರು, ಸಣ್ಣಪುಟ್ಟ ವ್ಯಾಪಾರಿಗಳು, ಕಾರ್ವಿುಕರು, ಸಾಮಾನ್ಯ ಮಹಿಳೆಯರು, ಕಾಲೇಜು ಯುವಕ ಯುವತಿಯರು ದೇಶದ ಆರ್ಥಿಕತೆಯ ಕುರಿತು ಚರ್ಚೆಯಲ್ಲಿ ತೊಡಗಿದ್ದಾರೆ. ನನ್ನ ದೃಷ್ಟಿಯಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ತುಸು ಹಿಂಜರಿಕೆ ಕಂಡು ಬಂದಿರುವುದಕ್ಕಿಂತ ಜನಸಾಮಾನ್ಯರು ದೇಶದ ಆರ್ಥಿಕ ಸ್ಥಿತಿಗತಿಯತ್ತ ಕಿವಿಗೊಡುತ್ತಿರುವುದು, ಕಣ್ಣರಳಿಸಿ ನೋಡುತ್ತಿರುವುದು ಮತ್ತು ಚರ್ಚೆಯಲ್ಲಿ ಭಾಗವಹಿಸುತ್ತಿರುವುದು ಗಮನಿಸಲೇಬೇಕಾದ ಮಹತ್ವದ ಬೆಳವಣಿಗೆ.

ಜನರ ಆಲೋಚನೆಯಲ್ಲಿ ಈ ಅಗಾಧ ಬದಲಾವಣೆ ಆಗಿದ್ದು ಹೇಗೆ? ಈ ಚರ್ಚೆಯನ್ನು ಬಜೆಟ್ಟಿನಿಂದಲೇ ಆರಂಭ ಮಾಡೋಣ. ಸ್ವಾತಂತ್ರ್ಯ ಬಂದ ನಂತರ ಕಳೆದ 70 ವರ್ಷಗಳಿಂದಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಜೆಟ್ ಮಂಡನೆ ಮಾಡುತ್ತಲೇ ಬಂದಿವೆ. ಆದರೆ ಅದೇ ಬಜೆಟ್ಟಿನ ಸಂದರ್ಭದಲ್ಲಿ ಇಲ್ಲಿಯವರೆಗೆ ಶೇ. 90ರಷ್ಟು ಜನರು ಗಮನ ಹರಿಸುತ್ತಿದ್ದುದು ಯಾವ ವಸ್ತು ಅಗ್ಗ ಆಗಲಿದೆ, ಯಾವ ವಸ್ತು ದುಬಾರಿ ಆಗಲಿದೆ ಎಂಬುದರ ಕಡೆಗೆ ಮಾತ್ರ. ಉಳಿದ ಶೇ.10ರಷ್ಟು ಜನರು ಮಾತ್ರ ಯಾವ ವಸ್ತುವಿನ ಮೇಲೆ ಎಷ್ಟು ತೆರಿಗೆ ವಿಧಿಸಿದ್ದಾರೆ? ಯಾವುದರ ತೆರಿಗೆ ಹೆಚ್ಚಾಗಿದೆ? ಯಾವುದರ ತೆರಿಗೆ ಕಡಿಮೆ ಆಗಿದೆ? ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಇತ್ಯಾದಿಗಳ ಸ್ಲಾಬ್​ಗಳು ಏನಾಗಿವೆ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದರು. ತಂತ್ರಜ್ಞಾನದ ಅಳವಡಿಕೆ, ಮೂಲಸೌಕರ್ಯಗಳ ಅಭಿವೃದ್ಧಿ, ರೈಲ್ವೆ, ರಸ್ತೆ, ನೀರು, ಸೂರು ಇತ್ಯಾದಿ ಬಾಬತ್ತುಗಳಿಗೆ ಸರ್ಕಾರ ಎಷ್ಟು ಮೊತ್ತವನ್ನು ವಿನಿಯೋಗ ಮಾಡುತ್ತಿದೆ ಎಂಬುದನ್ನು ಗಮನಿಸುತ್ತಿದ್ದರು. ಇಲ್ಲಿ ಒಂದು ಅಂಶ ಸ್ಪಷ್ಟವಾಗುತ್ತದೆ. ಅದೆಂದರೆ ಈ ದೇಶವನ್ನು ಯಾರು ಆಳಬೇಕೆಂದು ತೀರ್ಮಾನ ಮಾಡುವ ಶೇ.90ರಷ್ಟು ಜನರಿಗೆ ದೇಶದ ಜೀವನಾಡಿಯಾದ ಆರ್ಥಿಕತೆಯ ಮೂಲಾಂಶಗಳ ಕುರಿತು ಗಂಧಗಾಳಿಯೂ ಇರುತ್ತಿರಲಿಲ್ಲ. ಅವರದ್ದೇನಿದ್ದರು ಪ್ರಧಾನಿ ಯಾವ ಮನೆತನಕ್ಕೆ ಸೇರಿದವರು, ಮಂತ್ರಿ, ಸಂಸದ, ಶಾಸಕ ಯಾವ ಜಾತಿಗೆ ಸೇರಿದವರು, ಆತ ಎಷ್ಟು ಹಣವನ್ನು ಚುನಾವಣೆಯಲ್ಲಿ ಖರ್ಚು ಮಾಡಬಲ್ಲ, ಚುನಾವಣೆ ಹಿಂದಿನ ದಿನ ಏನೆಲ್ಲ ಕಸರತ್ತು ಮಾಡಬಲ್ಲ ಎಂಬುದರ ಕುರಿತು ಮಾತ್ರ ಗಮನ ಇರುತ್ತಿತ್ತು.

ದೇಶದ ಭವಿಷ್ಯ ಬದಲಾಯಿಸಬಲ್ಲ ಬಹುಸಂಖ್ಯಾತ ಜನರು ದೇಶದ ನಿಜವಾದ ಆರ್ಥಿಕ ವಿಕಾಸದಲ್ಲಿ ತಮ್ಮ ವಿಕಾಸ ಅಡಗಿದೆ, ಅದಕ್ಕಾಗಿ ಈಗ ನಾವೊಂದಿಷ್ಟು ಕಷ್ಟಪಡೋಣ ಅನ್ನುವ ಆಲೋಚನೆಯ ಕಡೆಗೆ ಹೊರಳಿದ್ದು ಹೇಗೆ? ಈ ಪವಾಡ ಆದದ್ದು ಹೇಗೆ? ತುಸು ಯೋಚನೆ ಮಾಡಿ. 2014ರ ಚುನಾವಣೆ ನಡೆದದ್ದು ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರಮುಕ್ತ ಪಾರದರ್ಶಕ ಆಡಳಿತ, ದಕ್ಷ ಮತ್ತು ಅದಕ್ಷ ಆಡಳಿತದ ತರ್ಕ, ಕುಟುಂಬ ರಾಜಕಾರಣ ಮತ್ತು ಸಮರ್ಥ ನಾಯಕತ್ವ, ಜಾತಿ ಮತ್ತು ಜಾತಿ ಮೀರಿದ ರಾಜಕಾರಣ, ಭರವಸೆ ಕೊಡುವುದು ಮತ್ತು ಕೊಟ್ಟ ಭರವಸೆಯನ್ನು ಈಡೇರಿಸುವುದು ಯಾರಿಂದ ಸಾಧ್ಯ ಯಾರಿಂದ ಅಸಾಧ್ಯ ಇತ್ಯಾದಿ ಅಂಶಗಳ ಮೇಲೇ ಅಲ್ಲವೇ? ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಿದರೆ ನಿಮ್ಮ ಉತ್ತರ ನೂರಕ್ಕೆ ನೂರು ಹೌದು ಎಂದೇ ಇರುತ್ತದೆ.

ಹಾಗಾದರೆ ಜಾತಿ, ಧರ್ಮ, ಪ್ರಾಂತ, ಭಾಷೆ ಇವೆಲ್ಲವನ್ನೂ ಮೀರಿದ ಹೊಸ ಆಶಾವಾದ ಹುಟ್ಟಿದ್ದೆಲ್ಲಿಂದ? ಕಳೆದ 15 ವರ್ಷಗಳಲ್ಲಿ ಗುಜರಾತ ರಾಜ್ಯದಲ್ಲಿ ಆದ ಬದಲಾವಣೆಯನ್ನು ಪ್ರತ್ಯಕ್ಷ ನೋಡಿದ ಮತ್ತು ಪರೋಕ್ಷವಾಗಿ ಕೇಳಿ, ಓದಿ, ನೋಡಿ ತಿಳಿದುಕೊಂಡವರಿಂದ. ಇದಕ್ಕೂ ನಿಮ್ಮ ಉತ್ತರ ಹೌದು ಎಂದೇ ಇರುತ್ತದೆ ಎಂಬುದು ನನಗೆ ಗೊತ್ತು.

ಇನ್ನು ಬಜೆಟ್​ಗಳಲ್ಲಿ ಸರ್ಕಾರಗಳ ಆದ್ಯತೆ ಏನಿರುತ್ತಿತ್ತು? ಉತ್ಪಾದಕತೆಗೆ ಉತ್ತೇಜನ ಕೊಡುವ ಯೋಜನೆಗಳಿಗೆ ಅಲ್ಪ ಒತ್ತು. ಜನರು ಸದಾ ಸರ್ಕಾರದ ಭಿಕ್ಷೆಗೆ ಕೈಯ್ಯೊಡ್ಡುತ್ತಲೇ ಇರುವ ಯೋಜನೆಗಳಿಗೆ ಸಿಂಹಪಾಲು. ಉದಾಹರಣೆಗೆ ‘ಭಾಗ್ಯ‘ದ ಯೋಜನೆಗಳು. ಹಾಗಾದರೆ ಈಗೇನಾದರೂ ಸರ್ಕಾರದ ಆಲೋಚನೆಯಲ್ಲಿ ಬದಲಾವಣೆ ಆಗಿದೆಯೇ? ಒಂದೊಂದಾಗಿ ಲೆಕ್ಕ ಹಾಕೋಣ…

ಮೊದಲು ಸಬ್ಸಿಡಿ ವಿಚಾರ. ಇಲ್ಲಿಯವರೆಗೆ ಸರ್ಕಾರದ ಆದಾಯದ ಸಿಂಹಪಾಲು ಜನಪ್ರಿಯ ಯೋಜನೆಗಳಿಗೆ ಸಬ್ಸಿಡಿ ಕೊಡುವುದಕ್ಕೇ ವಿನಿಯೋಗ ಆಗುತ್ತಿತ್ತು, ಬಜೆಟ್ಟಿನಿಂದ ಬಜೆಟ್ಟಿಗೆ ಅದು ವಿಸ್ತರಿಸುತ್ತಲೇ ಹೋಗುತ್ತಿತ್ತು. ಇದೇ ಮೊದಲ ಬಾರಿಗೆ ಗ್ಯಾಸ್/ಗೊಬ್ಬರದ ಸಬ್ಸಿಡಿ ಕಡಿತ ಆಯಿತು. ಸರ್ಕಾರದಿಂದ ನೀಡುವ ಸಬ್ಸಿಡಿ ನಿಜವಾದ ಫಲಾನುಭವಿಗಳ ಖಾತೆಗೆ ಜಮೆ ಆಗುವಂತೆ ನೋಡಿಕೊಳ್ಳಲಾಯಿತು. ಅದರಿಂದ ಸರ್ಕಾರಕ್ಕೆ ಎರಡು ರೀತಿಯಲ್ಲಿ ಲಾಭವೂ ಆಯಿತು. ಯಾವುದಾದರೂ ಸರ್ಕಾರ ಸಾಲಮನ್ನಾ ಮಾಡುವುದಿಲ್ಲ ಎಂಬ ಧಾಷ್ಟರ್್ಯ ತೋರಿದ್ದನ್ನು ಕಂಡಿದ್ದೀರಾ? ಕೇಳಿದ್ದಿರಾ? ದೀರ್ಘಕಾಲೀನ ಆರ್ಥಿಕ ಸಬಲೀಕರಣದ ಆಲೋಚನೆಗೆ ಇವಿಷ್ಟು ಸಾಂಕೇತಿಕ ಉದಾಹರಣೆಗಳು ಸಾಕು.

ಆರ್ಥಿಕತೆ ಕುರಿತು ಮಾತನಾಡುವಾಗ ಭ್ರಷ್ಟರು ಕೂಡಿಟ್ಟ ಕಾಳಧನ, ದೇಶದಲ್ಲಿ ಪರ್ಯಾಯ ಆರ್ಥಿಕತೆಯನ್ನೇ ಸೃಷ್ಟಿಸಿದ್ದ ಖೋಟಾನೋಟಿನ ಜಾಲ, ಭ್ರಷ್ಟಾಚಾರದ ಪೋಷಣೆ ಮಾಡಬಲ್ಲ ನಗದು ವಹಿವಾಟು ಇವುಗಳ ಕುರಿತು ಪ್ರಸ್ತಾಪಿಸಲೇಬೇಕು. ಆದರೆ ಅದರ ವಿರುದ್ಧ ಇಲ್ಲಿಯವರೆಗೆ ಕೇವಲ ಚರ್ಚೆ ನಡೆಯುತ್ತಿತ್ತೇ ಹೊರತು ಆಕ್ಷನ್ ಇರಲಿಲ್ಲ. ಮೊದಲ ಬಾರಿಗೆ ಆಕ್ಷನ್ ಆಯಿತು. ಇದರಿಂದಾಗಿ ತಕ್ಷಣ ಗಮನಾರ್ಹವಾದ ನಕಾರಾತ್ಮಕ ಪರಿಣಾಮ ಆಗುವುದು ನಿರೀಕ್ಷಿತ. ಭವಿಷ್ಯದಲ್ಲಿ ಸಕಾರಾತ್ಮಕ ಬದಲಾವಣೆ ಬರುವುದು ಖಚಿತ. ಇದು ಬಹುಪಾಲು ಆರ್ಥಿಕ ತಜ್ಞರು ಹೇಳುವ ಮಾತು. ಅದಕ್ಕಿಂತ ಮುಖ್ಯವಾಗಿ ದೇಶದ ಆರ್ಥಿಕತೆಯನ್ನು ಒಂದು ರೋಗಿಷ್ಟ, ಬೊಜ್ಜು ತುಂಬಿದ ದೇಹಕ್ಕೆ ಹೋಲಿಸುವುದಾದರೆ, ಅಸ್ವಸ್ಥ ದೇಹದ ಮನಸ್ಸಿನ ಸ್ವಾಸ್ಥ್ಯ್ಕೆ ‘ಲಂಘನ’ (ಉಪವಾಸ)ವೇ ಮದ್ದು ಎಂದು ವೈದ್ಯ ವಿಜ್ಞಾನ ಹೇಳಿದ್ದನ್ನು ನಂಬುವುದಾದರೆ ಸರ್ಕಾರದ ವೆಚ್ಚದ ಮೇಲಿನ ಕಡಿತ, ಅನಗತ್ಯ ಭಾಗ್ಯಗಳ ಮೇಲಿನ ಹಿಡಿತ ಅರ್ಥಾತ್ ಆರ್ಥಿಕ ಶುದ್ಧೀಕರಣಕ್ಕಾಗಿ ಬುಧ್ಯಾಪೂರ್ವಕವಾಗಿ ಮಾಡಿದ ಹಣದ ಹರಿವಿನ ಮೇಲಿನ ಕಡಿವಾಣ ಮುಂತಾದ ಕ್ರಮಗಳು ನಿರುದ್ಯೋಗ, ಜಿಡಿಪಿ ಕುಸಿತ, ಹಣದುಬ್ಬರ ಏರಿಕೆ ಇವಕ್ಕೆಲ್ಲ ಕಾರಣ. ಮುಖ್ಯವಾಗಿ ಹಣದ ಹರಿವು, ಉದ್ಯೋಗ, ಜಿಡಿಪಿ ಇವೆಲ್ಲ ಒಂದಕ್ಕೊಂದು ಬೆಸೆದುಕೊಂಡಿರುವವು. ಮುಂದೆ ಸ್ವಚ್ಛ ಹೂಡಿಕೆ, ಸ್ವಚ್ಛ ಹಣದ ಹರಿವು ಸರಾಗ ಆಗುತ್ತಿದ್ದಂತೆ ಈಗಿನ ನಕಾರಾತ್ಮಕ ಆರ್ಥಿಕ ಬೆಳವಣಿಗೆ ಸಕಾರಾತ್ಮಕವಾಗಿ ಪರಿವರ್ತನೆ ಆಗುತ್ತದೆ ಎಂಬುದು ಅದೇ ಆರ್ಥಿಕ ತಜ್ಞರ ಖಚಿತ ಅಭಿಪ್ರಾಯ. ಒಂದು ಮಾತು ನಿಜ. ಕೃಶವಾದ ಅಥವಾ ಅನಾರೋಗ್ಯ ಪೀಡಿತ ಸ್ಥೂಲಕಾಯದ ಮೇಲೆ ಎರಡೆರಡು ಆಪರೇಷನ್ ತುಸು ಅಪಾಯಕಾರಿಯೇ! ನೋಟು ರದ್ದತಿ ಮತ್ತು ಜಿಎಸ್​ಎಸ್​ಟಿ ಜಾರಿ ಈ ಎರಡು ಆಪರೇಷನ್​ಗಳ ಹೊಡೆತ ಫಟಿಂಗರು ಮತ್ತು ಸಂಭಾವಿತರಿಬ್ಬರ ಮೇಲೂ ಪರಿಣಾಮ ಬೀರಿ ಕೆಲಕಾಲ ಸ್ತಂಭನಕ್ಕೆ ಒಳಗಾಗಿದ್ದರ ಪರಿಣಾಮ ಅದು. ಇರಲಿ.

ಇಚ್ಛಾಶಕ್ತಿಗೂ ಬಾಯಿಮಾತಿಗೂ ಏನು ವ್ಯತ್ಯಾಸ ಎಂಬುದನ್ನು ಪ್ರಜ್ಞಾವಂತರು ಗಮನಿಸಲೇಬೇಕು.

ಮೊದಲು ಆಳುವವರು ಅಪವಾದಗಳಿಂದ ಮುಕ್ತ ಆಗಬೇಕು. ಅದಾಗಿದೆ ಇಲ್ಲಿಯವರೆಗೆ! ಎರಡನೆಯದ್ದು ಈ ಸರ್ಕಾರ ಮುದ್ರಾ ಯೋಜನೆ, ಸ್ವಚ್ಛ ಭಾರತ, ಆಧಾರ್ ಕಾರ್ಡ್ ವಿತರಣೆ, ಜನಧನದಂತಹ ಹಿಂದಿನ ಸರ್ಕಾರದ ಯೋಜನೆಯನ್ನು ಮುಂದುವರಿಸಿದೆ ಎಂಬುದು. ಇದು ಅರ್ಧಸತ್ಯ. ಈ ಯೋಜನೆಗಳನ್ನು ಹಿಂದಿನ ಸರ್ಕಾರ ಘೊಷಿಸಿತ್ತು. ಈ ಸರ್ಕಾರ ಆಚರಣೆಗೆ ತಂದಿದೆ ಎಂಬ ಸ್ಪಷ್ಟ ವ್ಯತ್ಯಾಸವನ್ನು ಗಮನಿಸಬೇಕು. ಅದಿಲ್ಲದಿದ್ದರೆ, ಅದೇ ಪಿಚ್ಚು, ಅದೇ ಬ್ಯಾಟು, ಅದೇ ಚೆಂಡು ಬಳಸಿ ಕ್ರಿಕೆಟ್ ಆಡುವ ಸಹಸ್ರಾರು ಜನರು ‘ನಾನೂ ಸಚಿನ್ ತೆಂಡುಲ್ಕರ್​ಗೆ ಸಮ’ ಎಂದುಕೊಂಡ ಹಾಗಾದೀತು.

ಇದಕ್ಕೆ ಪೂರಕವಾಗಿ ಒಂದಿಷ್ಟು ಉದಾಹರಣೆಗಳನ್ನು ನೋಡೋಣ.

ಸಾಮಾಜಿಕ ಭದ್ರತೆ ನೀಡುವ ಯೋಜನೆಗಳು 13.5 ಕೋಟಿ ಜನರಿಗೆ ತಲುಪಿವೆ. ಜನಧನ ಖಾತೆ ಮತ್ತು ನೋಟು ರದ್ದತಿಯ ಪರಿಣಾಮ 28 ಕೋಟಿ ಹೊಸ ಬ್ಯಾಂಕ್ ಖಾತೆಗಳು ಓಪನ್ ಆಗಿವೆ. ಬ್ಯಾಂಕಿಂಗ್ ಸಾಕ್ಷರತೆ ದೃಷ್ಟಿಯಿಂದ ಬಹಳ ದೊಡ್ಡ ಸಾಧನೆಯಿದು. ಇದು ಹತ್ತಿರ ಹತ್ತಿರ ಅಮೆರಿಕದ ಜನಸಂಖ್ಯೆಗೆ ಸಮ. ಏಳು ಕೋಟಿ ಜನರಿಗೆ ಕೃಷಿ, ವ್ಯಾಪಾರಕ್ಕೆ ಕೊಲ್ಯಾಟ್ರಲ್ ಸಾಲಸೌಲಭ್ಯ ನೀಡಲಾಗಿದೆ. ಇದು ಇಂಗ್ಲೆಂಡಿನ ಜನಸಂಖ್ಯೆಗಿಂತ ಹೆಚ್ಚು. ಐದು ಕೋಟಿ ಬಡ ಮಹಿಳೆಯರಿಗೆ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಇದು ಸ್ಪೇನ್ ಜನಸಂಖ್ಯೆಗಿಂತ ತುಸು ಜಾಸ್ತಿ. ಇಷ್ಟೆಲ್ಲದರ ಜೊತೆಗೆ ಆಧಾರ್ ಯೋಜನೆ ಕುರಿತೂ ಒಂದಿಷ್ಟು ವಾಸ್ತವಾಂಶವನ್ನು ಅರಿಯಲೇಬೇಕು. ಆಧಾರ್ ಯೋಜನೆ ಯುಪಿಎ ಸರ್ಕಾರದ ಕೂಸು ಎಂಬ ವಾದವನ್ನು ಚಿದಂಬರಂ ಆದಿಯಾಗಿ ಅನೇಕರು ಹೇಳುತ್ತಾರೆ. ವಾಸ್ತವ ಅದಲ್ಲ, 2001ರಲ್ಲಿ ಎನ್​ಡಿಎ ಸರ್ಕಾರದ ಸಂಪುಟ ಉಪಸಮಿತಿ, ದೇಶದ ಪ್ರತಿಯೊಬ್ಬ ನಾಗರಿಕರಿಗೆ ಬಹೂಪಯೋಗಿ ಯೂನಿಕ್ ಐಡೆಂಟಿಟಿ ಕಾರ್ಡ್ ನೀಡಬೇಕೆಂದು ಶಿಫಾರಸು ಮಾಡಿತು. 2003ರಲ್ಲಿ ಸಿಟಿಜನ್​ಶಿಪ್ (ತಿದ್ದುಪಡಿ) ಬಿಲ್ ಲೋಕಸಭೆಯಲ್ಲಿ ಮಂಡನೆ ಆಯಿತು. ಮುಂದೆ 2004-09ರವರೆಗೆ ಆ ನಿಟ್ಟಿನಲ್ಲಿ ಏನೂ ಪ್ರಗತಿ ಆಗಲಿಲ್ಲ. 2009ರಲ್ಲಿ ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ಆಧಾರ್ ಪ್ರಾಧಿಕಾರ ರಚನೆ ಆಯಿತು. ಆಧಾರ್ ಲೋಗೋ ಮತ್ತು ಇತ್ಯಾದಿ ಸ್ವರೂಪ ಅಂತಿಮ ಆಗಿ ನೋಂದಣಿ ಆರಂಭ ಆಗುವ ಹೊತ್ತಿಗೆ ಸರ್ಕಾರದ ಕೊನೇ ದಿನಗಳು ಆರಂಭವಾಗಿದ್ದವು. 2014ರಿಂದೀಚೆಗೆ ಮೂರು ವರ್ಷದಲ್ಲಿ ಆಧಾರ್ ನೋಂದಣಿ ಪ್ರಗತಿ ಜೊತೆಗೆ ಸರ್ಕಾರದ ಸುಮಾರು 100 ವಿವಿಧ ಯೋಜನೆಗಳಿಗೆ ಆಧಾರ್ ಕಡ್ಡಾಯ ಮಾಡಿ ಸುಮಾರು 50 ಸಾವಿರ ಕೋಟಿ ರೂ. ಉಳಿತಾಯ ಆಗಿದೆ ಎಂಬುದು ಸರ್ಕಾರದ ಅಂಕಿಸಂಖ್ಯೆಗಳಿಂದ ಗೊತ್ತಾಗುತ್ತದೆ. 2016ರಲ್ಲಿ ಆಧಾರ್ ಕಾಯಿದೆ ಜಾರಿಗೆ ತಂದು ಆಧಾರ್ ಕಾರ್ಡ್​ಗೆ ಸಾಂವಿಧಾನಿಕ ಮಾನ್ಯತೆ ನೀಡಲಾಯಿತು. ಶೇ.99 ವಯಸ್ಕರಿಗೆ ಆಧಾರ್ ಕಾರ್ಡ್ ಸಿಕ್ಕಿದೆ. ಇದೀಗ ಶಾಲೆಗಳಲ್ಲಿ ಮಕ್ಕಳ ಆಧಾರ್ ನೋಂದಣಿ ಪ್ರಗತಿಯಲ್ಲಿದೆ.

ನಿರುದ್ಯೋಗ ಸಮಸ್ಯೆ ವಿಚಾರಕ್ಕೆ ಬರುವುದಾದರೆ 1972ರಲ್ಲಿ ನರೇಗಾ ಯೋಜನೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂತು. ಆ ನಂತರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ, ಭೂರಹಿತರ ಉದ್ಯೋಗ ಖಾತ್ರಿ ಯೋಜನೆ, ಜವಾಹರ ರೋಜಗಾರ್ ಯೋಜನೆ, ಸಂಪೂರ್ಣ ಗ್ರಾಮೀಣ ರೋಜಗಾರ್ ಯೋಜನೆ, ಆಹಾರ ಭದ್ರತಾ ಯೋಜನೆ ಇತ್ಯಾದಿ. ಒಂದಲ್ಲ ಎರಡಲ್ಲ… ಆದರೆ ನಿರುದ್ಯೋಗದ ಕೂಗು ಕಡಿಮೆ ಆಗಿದೆಯೇ? ಖಂಡಿತ ಇಲ್ಲ. ಏಕೆಂದರೆ ಇದು ಸರ್ಕಾರ ಕೂಲಿ ಕೊಡುವುದರಿಂದ ಪರಿಹಾರ ಕಾಣುವ ಸಮಸ್ಯೆ ಅಲ್ಲ. ಇವೆಲ್ಲ ಬಿಡಿಬಿಡಿಯಾಗಿ ಪರಿಹರಿಸುವ ಸಮಸ್ಯೆಗಳೂ ಅಲ್ಲ. ಆಮೂಲಾಗ್ರವಾಗಿ ಆರ್ಥಿಕತೆ ಪರಿಷ್ಕರಣೆಯೊಂದೇ ಪರಿಹಾರ. ಅದೀಗ ಆರಂಭ ಆಗಿದೆ. ಅಂತ್ಯ ಕಾಣಲು ಕಾಯಲೇಬೇಕು..

ಕೊನೇ ಮಾತು: ಚಾಯ್ ಮಾರುವವ ದೇಶದ ಪ್ರಧಾನಿಯಾಗಿ ಆರ್ಥಿಕತೆ ಸಶಕ್ತಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ! 60 ವರ್ಷ ದೇಶವಾಳಿದ ಅನುಭವದ ಹಿನ್ನೆಲೆಯಿಂದ ಬಂದವರು- ಮತ್ತೆ ಮುಂದೆ ದೇಶವಾಳಲು ಬಯಸುತ್ತಿರುವವರು ಇಂದಿರಾ ಕ್ಯಾಂಟೀನು ಆರಂಭಿಸುತ್ತಿದ್ದಾರೆ!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top