ನ್ಯಾಯಾಂಗ ಸುಧಾರಣೆಗೆ ಸಕಾಲವಲ್ಲವೆ?

ಪ್ರಜಾತಂತ್ರದ ಮೂರು ಮುಖ್ಯ ಅಂಗಳಲ್ಲಿ ಶಾಸಕಾಂಗ ಮತ್ತು ಕಾರ್ಯಂಗದ ಬಗ್ಗೆ ಈಗಾಗಲೇ ಜನರು ಭರವಸೆ ಕಳೆದುಕೊಂಡಿದ್ದಾರೆ ಎಂಬ ಮಾತು ದಟ್ಟವಾಗಿದೆ. ಹಾಗಾದರೆ ಮೂರನೇ ಮುಖ್ಯ ಅಂಗವಾದ ನ್ಯಾಯಾಂಗವಾದರೂ ಈ ಅಪವಾದದಿಂದ ದೂರ ಉಳಿಯಬೇಕಲ್ಲವೇ?

konemane - bsyಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಮೂರು ಆಧಾರಸ್ತಂಭಗಳು ಎಂಬುದು ಒಂದು ಸ್ಥಾಪಿತ ಹೇಳಿಕೆಯಾಗಿ, ಅದು ಸಾಂಪ್ರದಾಯಿಕವಾಗಿ ಮುಂದುವರಿದುಕೊಂಡು ಬಂದ ನಂಬಿಕೆ ಎಂದರೂ ತಪ್ಪಲ್ಲ. ಅದಿಲ್ಲ ಅನ್ನುವುದಾದರೆ ಶಾಸಕಾಂಗ ಮತ್ತು ನ್ಯಾಯಾಂಗಗಳ ವ್ಯಾಪ್ತಿ ಹಾಗೂ ಹೆಚ್ಚುಗಾರಿಕೆ ವಿಷಯಕ್ಕೆ ಸಂಬಂಧಿಸಿ ಈ ಪರಿ ತಿಕ್ಕಾಟ ಇರುತ್ತಿರಲಿಲ್ಲ. ಇತ್ತೀಚಿನ ಹೊಸ ಬೆಳವಣಿಗೆ ಎಂದರೆ ವಿಮರ್ಶೆ ಮತ್ತು ಟೀಕೆಗೆ ಅತೀತ ಎಂದೇ ಭಾವಿಸಲಾಗಿದ್ದ ನ್ಯಾಯಾಂಗ ವ್ಯವಸ್ಥೆ ಶಾಸಕಾಂಗ ಮತ್ತು ಕಾರ್ಯಾಂಗದ ರೀತಿಯಲ್ಲೇ ಕಟು ಟೀಕೆ ಮತ್ತು ವಿಮರ್ಶೆಗೆ ಗುರಿಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯೋ ಅಥವಾ ಕೆಟ್ಟದ್ದೋ?
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರೇ ಇತ್ತೀಚೆಗೆ ಸುಪ್ರೀಂ ಕೋರ್ಟ್‍ನ ಕಾರ್ಯವಿಧಾನವನ್ನು ಕಟುಶಬ್ದಗಳಲ್ಲಿ ಟೀಕಿಸಿದ್ದರು. ಕೇರಳದ ರೇಪ್ ಪ್ರಕರಣದ ಅಪರಾಧಿಗೆ ಅಲ್ಲಿನ ಹೈಕೋರ್ಟ್ ಮರಣದಂಡನೆ ಶಿಕ್ಷೆಯನ್ನು ನೀಡಿದ್ದರೆ, ಸುಪ್ರಿಂಕೋರ್ಟ್ ಆ ಶಿಕ್ಷೆಯನ್ನು ಜೀವಾವಧಿಗೆ ಬದಲಿಸಿತು. ಈ ಬೆಳವಣಿಗೆಯಿಂದ ಕುದ್ದು ಹೋಗಿದ್ದ ನ್ಯಾ. ಕಾಟ್ಜು ತಮ್ಮ ಬ್ಲಾಗ್‍ನಲ್ಲಿ ಆಕ್ರೋಶ ಹೊರಹಾಕಿದ್ದರು. ಅವರ ಫೇಸ್‍ಬುಕ್ ಪೋಸ್ಟ್ ಅನ್ನೇ ಪರಿಶೀಲನಾ ಅರ್ಜಿಯನ್ನಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆ ಸಂದರ್ಭದಲ್ಲಿ ಹಾಜರಾಗುವಂತೆ ಸೂಚಿಸಿರುವುದು ವಿಶೇಷ. ಈಚೆಗಷ್ಟೇ ಸುಪ್ರೀಂಕೋರ್ಟ್‍ನಿಂದ ನಿವೃತ್ತಿಯಾಗಿರುವ ನ್ಯಾ.ಗೋಪಾಲ ಗೌಡ ಅವರು ಕಾಟ್ಜು ಮಾತಿಗೆ ಪೂರಕವಾದ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಅವರು ಕಾಟ್ಜುರಂತೆ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಕಟುಟೀಕೆ ಮಾಡದಿದ್ದರೂ, `ನ್ಯಾಯಾಧೀಶರು ಪ್ರಶ್ನಾತೀತರಲ್ಲ. ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಬೇಕೆಂದರೆ ವಿಮರ್ಶೆಗೆ ಆಸ್ಪದ ಇರಲೇಬೇಕು. ನ್ಯಾಯಾಧೀಶರನ್ನು ಮತ್ತು ನ್ಯಾಯಾಲಯಗಳು ನೀಡುವ ತೀರ್ಪನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ’ ಎಂದಿದ್ದಾರೆ. ಈ ಹಿಂದೆಯೂ ಅನೇಕ ನ್ಯಾಯಮೂರ್ತಿಗಳು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ, ಟೀಕಿಸಿದ್ದಾರೆ. ವಿಶೇಷ ಎಂದರೆ ಅವರೆಲ್ಲರೂ ನಿವೃತ್ತಿಯ ಬಳಿಕ ಈ ತೆರನಾದ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ.
ನ್ಯಾ. ಕಾಟ್ಜು ಮತ್ತು ನ್ಯಾ. ಗೋಪಾಲ ಗೌಡ ಅವರ ಮಾತಿನ ಹಿನ್ನೆಲೆಯಲ್ಲಿ ಹಳೆಯ ಎರಡು ಸಂದರ್ಭಗಳು ನೆನಪಿಗೆ ಬರುತ್ತವೆ. ಇಂದಿರಾ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ನ್ಯಾ.ರಾಮಸ್ವಾಮಿ ಅವರನ್ನು ಮಹಾಭಿಯೋಗ(ಇಂಪೀಚ್‍ಮೆಂಟ್)ಕ್ಕೆ ಒಳಪಡಿಸಲು ತೀರ್ಮಾನಿಸಿದ್ದರು. ಭಾರತದಲ್ಲಿ ನ್ಯಾಯಮೂರ್ತಿಗಳನ್ನು ಇಂಪೀಚ್ ಮಾಡಲು ಸಂವಿಧಾನಬದ್ಧ ಅವಕಾಶವಿದೆ. ಆದರೆ ದೇಶದ ನ್ಯಾಯಾಂಗ ವ್ಯವಸ್ಥೆಯ ಘನತೆ ಮತ್ತು ಗೌರವವನ್ನು ತಗ್ಗಿಸಬಾರದು, ಐತಿಹಾಸಿಕ ಕಪ್ಪುಚುಕ್ಕೆ ಅಂಟಲು ಅವಕಾಶ ಮಾಡಿಕೊಡಬಾರದು ಎಂಬ ಕಾರಣಕ್ಕೆ ಕೊನೇ ಕ್ಷಣದಲ್ಲಿ ಇಂದಿರಾ ಗಾಂಧಿ ಆ ನಿರ್ಧಾರವನ್ನು ಕೈಬಿಟ್ಟಿದ್ದರು. ಕೆಲ ತಿಂಗಳ ಹಿಂದೆ ತಮಿಳುನಾಡಿನಿಂದ ಪ್ರಕರಣವೊಂದು ವರದಿಯಾಗಿತ್ತು. ನ್ಯಾಯಾಂಗ ನಿಂದನೆ ಭೀತಿಯ ಕಾರಣಕ್ಕೆ ಆ ಪ್ರಕರಣ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆ ಆಗಿರಲಿಲ್ಲ. ವಿಷಯ ಏನೆಂದರೆ ತಮಿಳುನಾಡು ಹೈಕೋರ್ಟ್ ನ್ಯಾಯಾಧೀಶರೊಬ್ಬರ ವಿರುದ್ಧ ಗುರುತರವಾದ ಭ್ರಷ್ಟಾಚಾರ ಆರೋಪ ಇರುವುದು ಸುಪ್ರೀಂಕೋರ್ಟ್ ಗಮನಕ್ಕೆ ಬಂದಿತ್ತು. ಕೇಂದ್ರ ಸರ್ಕಾರಕ್ಕೂ ದೂರು ಸಲ್ಲಿಕೆಯಾಗಿತ್ತು. ಒಂದೆರಡು ಬಾರಿ ಸೂಚನೆ ಕೊಟ್ಟ ನಂತರವೂ ನಡವಳಿಕೆಯಲ್ಲಿ ಸುಧಾರಣೆ ಕಾಣದ್ದರಿಂದ ಆ ನ್ಯಾಯಾಧೀಶರನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ, ಅವರಿಗೆ ವಿಚಾರಣೆ ನಡೆಸಲು ಪ್ರಕರಣ ಹಂಚಿಕೆ ಮಾಡದಿರುವ ತೀರ್ಮಾನಕ್ಕೆ ಬರಲಾಯಿತು. ಇಂಪೀಚ್‍ಮೆಂಟ್‍ಗೆ ಹೊರತಾಗಿ ಓರ್ವ ನ್ಯಾಯಾಧೀಶನನ್ನು ದಂಡಿಸಲು ಇರುವ ಅವಕಾಶ ಎಂದರೆ ಇಷ್ಟು ಮಾತ್ರ. ಈಗೀಗ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಬಹಿರಂಗವಾಗಿಯೇ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪ, ಟೀಕೆ ಟಿಪ್ಪಣಿಗಳ ಹಿನ್ನೆಲೆಯಲ್ಲಿ ಈ ಪ್ರಕರಣ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.
ಇನ್ನು ನ್ಯಾಯಾಂಗ ವ್ಯವಸ್ಥೆಯ ರಚನೆ ಮತ್ತು ಕಾರ್ಯವಿಧಾನದ ವಿಷಯಕ್ಕೆ ಬರೋಣ. ಭಾರತದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರು ಕೆಲ ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿದ್ದ ವೇದಿಕೆಯಲ್ಲಿ ಕಣ್ಣೀರಿಡುತ್ತ ಆಡಿದ ಮಾತು ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ, ಪಾರದರ್ಶಕತೆಗಿಂತಲೂ ಹೆಚ್ಚಾಗಿ ನ್ಯಾಯದಾನದ ವಿಳಂಬ ಹೆಚ್ಚು ಟೀಕೆಗೆ ಗುರಿಯಾಗುತ್ತಿದೆ. ಅದಕ್ಕೆ ಕಾರಣಗಳು ಎರಡು. ನ್ಯಾಯಾಲಯಗಳ ಕಟಕಟೆ ಏರುವ ಪ್ರಕರಣಗಳಿಗೆ ಅನುಗುಣವಾಗಿ ನ್ಯಾಯಾಧೀಶರ ನೇಮಕ ಆಗದಿರುವುದು ಮೊದಲನೆಯದ್ದು. ನ್ಯಾಯಾಧೀಶರ ಕೊರತೆ ಮತ್ತು ಆ ಮೂಲಕ ಆಗುವ ನ್ಯಾಯದಾನದ ವಿಳಂಬ ನ್ಯಾಯಾಂಗ ವ್ಯವಸ್ಥೆ ಕುರಿತು ಕೆಟ್ಟ ಅಭಿಪ್ರಾಯ ರೂಪಿತವಾಗಲು ಮುಖ್ಯ ಕಾರಣ. ಭಾರತದಲ್ಲಿ 10 ಲಕ್ಷ ಜನರಿಗೆ ಸರಾಸರಿ 18 ನ್ಯಾಯಾಧೀಶರಿದ್ದಾರೆ. ಕಾನೂನು ಆಯೋಗ 1987ರಲ್ಲಿ ಮಾಡಿದ ಶಿಫಾರಸಿನ ಪ್ರಕಾರ ನ್ಯಾಯಾಯಾಧೀಶರ ಪ್ರಮಾಣ 50 ಇರಬೇಕು. ನ್ಯಾಯಾಯಾಧೀಶರ ಕೊರತೆಯಿಂದಾಗಿ ಪ್ರಕರಣಗಳ ವಿಚಾರಣೆ ಎಂದರೆ ಮುಂದಿನ ದಿನಾಂಕ ನಿಗದಿ ಮಾಡುವುದಷ್ಟಕ್ಕೇ ಸೀಮಿತ ಆಗುತ್ತಿದೆ. ಹೀಗಾಗಿ ಕಕ್ಷಿದಾರರು ನ್ಯಾಯವ್ಯವಸ್ಥೆ ಕುರಿತು ಭರವಸೆ ಕಳೆದುಕೊಳ್ಳುವುದು ಸಹಜ. ಇದನ್ನೇ ನ್ಯಾ. ಟಿ.ಎಸ್. ಠಾಕೂರ್ ಪ್ರಧಾನಿ ಎದುರು ತೋಡಿಕೊಂಡದ್ದು. ಇನ್ನು ಎರಡನೆಯದ್ದು ಮೇಲ್ಮನವಿಗೆ ಇರುವ ಅವಕಾಶವನ್ನು ದುರುಪಯೋಗ ಮಾಡಿಕೊಂಡು ಕಾಲಹರಣ ಮಾಡುವ ಅಪಾಯದ ಕುರಿತಾದ್ದು. ಇದರಿಂದಾಗಿ ಬಹಳಷ್ಟು ಪ್ರಕರಣಗಳಲ್ಲಿ ನ್ಯಾಯದಾನದ ವಿಳಂಬ, ಸಾಕ್ಷಿ ನಾಶ, ಮತ್ತು ನ್ಯಾಯ ಸಿಕ್ಕರೂ ಅದರ ಪ್ರಯೋಜನ ಪಡೆಯಲಾಗದ ಅಸಹಾಯಕ ಸ್ಥಿತಿಗೆ ಕಕ್ಷಿದಾರರು ತಲುಪುವುದು.
ಸಮಸ್ಯೆಯ ಆಳ ಅಗಲ ಗೊತ್ತಿದ್ದೂ, ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಚುರುಕನ್ನು ತರಬಹುದಾಗಿದ್ದ ನ್ಯಾಯಾಂಗ ನೇಮಕಾತಿ ಆಯೋಗ ರಚನೆಯ ಸರ್ಕಾರದ ಪ್ರಸ್ತಾಪವನ್ನು ಸುಪ್ರೀಂಕೋರ್ಟ್ ಒಪ್ಪಲಿಲ್ಲ. ನ್ಯಾಯಾಧೀಶರ ನೇಮಕಾತಿಗೆ ಹಾಲಿ ಇರುವ ಕೊಲಿಜಿಯಂ ಪದ್ಧತಿಯೇ ಮುಂದುವರಿಯಲಿ ಎಂಬ ವಾದವನ್ನು ಸುಪ್ರಿಂಕೋರ್ಟ್‍ನ ಬಹುತೇಕ ನ್ಯಾಯಾಧೀಶರು ಮುಂದಿಡುತ್ತಾರೆ. ಹೀಗಾಗಿ ಕೆಲಸದ ಹೊರೆ, ನ್ಯಾಯಾಧೀಶರ ಕೊರತೆಯ ಸಮಸ್ಯೆ ಮತ್ತು ಪಾರದರ್ಶಕತೆಯ ಅಭಾವದ ಅಪವಾದದಿಂದ ಬಚಾವಾಗಲು ಇರುವ ಅವಕಾಶವೊಂದನ್ನು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿತೇ ಎಂಬ ಚರ್ಚೆ ದೇಶಾದ್ಯಂತ ನಡೆಯುತ್ತಿದೆ.
ನ್ಯಾ. ಚಲಮೇಶ್ವರ ಅಭಿಪ್ರಾಯ ಎಚ್ಚರಿಕೆ ಗಂಟೆ: `ನ್ಯಾಯಾಂಗ ನೇಮಕಾತಿಗಳು ಪಾರದರ್ಶಕವಾಗಿ ಆಗುತ್ತಿಲ್ಲ’ ಎಂದು ನ್ಯಾಯಮೂರ್ತಿ ಚಲಮೇಶ್ವರ ಅವರು ಈಚೆಗೆ ಖಡಾಖಂಡಿತವಾಗಿ ಹೇಳಿದ್ದರು. ಅದು ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಕೊಲಿಜಿಯಂ ಪದ್ಧತಿಯ ನ್ಯೂನತೆಗೆ ಒಂದು ನಿದರ್ಶನ ಎಂದು ಭಾವಿಸಬಹುದು. ರಾಜಕೀಯ ವ್ಯವಸ್ಥೆಯಲ್ಲಿರುವಂತೆ ನ್ಯಾಯಾಂಗದಲ್ಲಿಯೂ ವಂಶಪಾರಂಪರ್ಯ ನೇಮಕಾತಿಗಳು ನಡೆಯುತ್ತಿವೆ ಎಂಬ ಆಕ್ಷೇಪದ ಮಾತುಗಳು ಕೂಡ ಕೇಳಿಬರುತ್ತಿವೆ. ಎಲ್ಲದಕ್ಕಿಂತ ಮುಖ್ಯವಾದದ್ದು ನ್ಯಾಯಾಧೀಶರ ಕೊರತೆಯಿಂದ ಪ್ರಕರಣಗಳ ವಿಚಾರಣೆಗೇ ತೊಡಕುಂಟಾಗಿರುವಾಗ ಇನ್ನು ನ್ಯಾಯಾಧೀಶರ ನೇಮಕಾತಿಗೆ ಸೂಕ್ತ ಪರಾಮರ್ಶೆ ನಡೆಸಲು ಸಮಯಾವಕಾಶದ ಲಭ್ಯತೆ ಎಲ್ಲಿರುತ್ತದೆ ಎಂಬುದು. ಅದರ ಬದಲಾಗಿ ನ್ಯಾಯಾಧೀಶರ ನೇಮಕ, ಹಂಚಿಕೆ ಇತ್ಯಾದಿಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಲು ನ್ಯಾಯಾಂಗ ನೇಮಕಾತಿ ಆಯೋಗ ಅಥವಾ ಅದಕ್ಕಿಂತ ಉತ್ತಮವಾದ ವ್ಯವಸ್ಥೆಯನ್ನು ರೂಪಿಸಬಹುದಾಗಿತ್ತು ಎಂದು ಕೆಲ ಕಾನೂನು ಪರಿಣತರೂ ಹೇಳುತ್ತಾರೆ. ಈ ವಿಚಾರದಲ್ಲಿ ಸ್ವಪ್ರತಿಷ್ಠೆಗಿಂತಲೂ ಹೆಚ್ಚಾಗಿ ಪಾರದರ್ಶಕ ಮತ್ತು ಸಮರ್ಥ ವ್ಯವಸ್ಥೆ ರೂಪಿಸುವುದೇ ಮುಖ್ಯವಾಗಿದ್ದರೆ ಒಳಿತಾಗುತ್ತಿತ್ತಲ್ಲವೇ?
ಯುಪಿಎಸ್ಸಿ ಮಾದರಿ: ಸಂವಿಧಾನಬದ್ಧ ನೇಮಕಾತಿಗಳ ವಿಷಯದಲ್ಲಿ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ಇಂದಿಗೂ ಒಂದು ಮಾದರಿ. ಕಳೆದ ಐವತ್ತು ವರ್ಷಗಳಿಂದಲೂ ನಿಖರವಾಗಿ ಯೋಗ್ಯ ಅಭ್ಯರ್ಥಿಗಳನ್ನು ನಾಗರಿಕ ಸೇವೆಗಳಿಗೆ ನೇಮಕ ಮಾಡುವುದರಲ್ಲಿ ಅದರದ್ದು ಎತ್ತಿದ ಕೈ. ಅದು ಕಾಲಕಾಲಕ್ಕೆ ಪರೀಕ್ಷಾ ಪದ್ಧತಿ, ಆಯ್ಕೆ ವಿಧಾನ ಇತ್ಯಾದಿ ನೀತಿ ನಿಯಮಗಳಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತ ಅಭ್ಯರ್ಥಿಗಳದ್ದು ಮಾತ್ರವಲ್ಲ ದೇಶದ ಜನರ ವಿಶ್ವಾಸಾರ್ಹತೆಯನ್ನೂ ಕಾಪಾಡಿಕೊಂಡಿದೆ. ಯುಪಿಎಸ್ಸಿಯಿಂದ ಆಯ್ಕೆಯಾಗುವ ಐಎಎಸ್, ಐಪಿಎಸ್ ಅಧಿಕಾರಿಗಳು ದೇಶದ ಆಡಳಿತಸೂತ್ರಯಂತ್ರದ ಮುಖ್ಯ ಪಾತ್ರಧಾರಿಗಳು. ಇದಕ್ಕೆ ಹೋಲಿಸಿದರೆ ನ್ಯಾಯಾಂಗ ವ್ಯವಸ್ಥೆಯ ಗಾತ್ರ ದೊಡ್ಡದೇನಲ್ಲ. ಇದೇ ಮಾದರಿಯನ್ನು ನ್ಯಾಯಾಂಗ ನೇಮಕಾತಿ ವಿಷಯದಲ್ಲೂ ಪಾಲಿಸಬಹುದಲ್ಲ? ಸರ್ಕಾರ, ಕಾನೂನು ಸಚಿವರು ಇವರೆಲ್ಲರ ಮೇಲೆ ಆರಂಭದಲ್ಲೇ ಅನುಮಾನ ವ್ಯಕ್ತಪಡಿಸುವ ಬದಲು ನ್ಯಾಯಾಂಗ ನೇಮಕಾತಿ ಆಯೋಗವನ್ನು ವ್ಯವಸ್ಥಿತವಾಗಿ ರಚನೆ ಮಾಡಲು, ಅದು ಪಾರದರ್ಶಕವಾಗಿ ಮತ್ತು ವೃತ್ತಿಪರವಾಗಿ ಕಾರ್ಯಾಚರಿಸುವಂತಾಗಲು ಸೂಕ್ತ ಸಹಕಾರ ಮತ್ತು ಸಲಹೆ ನೀಡುವ ಕುರಿತೂ ಯೋಚನೆ ಮಾಡಬಹುದಿತ್ತಲ್ಲ? ನ್ಯಾಯಾಂಗದ ಪಾರದರ್ಶಕತೆ ಮತ್ತು ನ್ಯಾಯಾಧೀಶರ ಹೊಣೆಗಾರಿಕೆ ಹಾಗೂ ವೃತ್ತಿಪರತೆ ದೃಷ್ಟಿಯಿಂದ ಇದು ಹೆಚ್ಚು ಅಗತ್ಯವಾಗಿತ್ತು.
ಆರೋಪಗಳು, ಅಪವಾದಗಳು ಏನೇ ಇರಲಿ, ಭಾರತದಲ್ಲಿ ಈಗಲೂ ಜನರ ಗೌರವ ಮತ್ತು ನಂಬಿಕೆಗೆ ಹೆಚ್ಚು ಪಾತ್ರವಾಗಿರುವ ಎರಡು ವಿಭಾಗಗಳೆಂದರೆ- ಸೇನೆ ಮತ್ತು ನ್ಯಾಯಾಂಗ ವ್ಯವಸ್ಥೆ. ಮಿಲಿಟರಿ ವ್ಯವಸ್ಥೆ ಕುರಿತು ಯಾರು ಹಗುರವಾಗಿ ಮಾತನಾಡಿದರೂ ಭಾರತೀಯರು ಸಹಿಸುವುದಿಲ್ಲ. ಹಗರಣಗಳು, ವಿವಾದಗಳು ಮತ್ತು ಆರೋಪಗಳಿಗೆ ಇಲ್ಲಿನ ಮಿಲಿಟರಿ ವ್ಯವಸ್ಥೆಯೂ ಹೊರತಲ್ಲ. ಆದರೂ ಭಾರತೀಯರು ಇಂಥ ಆರೋಪಗಳನ್ನು ಮತ್ತು ಯೋಧರ ಕರ್ತವ್ಯನಿಷ್ಠೆಯನ್ನು ಒಟ್ಟಿಗೆ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದಿಲ್ಲ. ಇತ್ತೀಚೆಗೆ ಕಾಶ್ಮೀರದ ಗಡಿಯಲ್ಲಿ ನಡೆಸಲಾದ ಸರ್ಜಿಕಲ್ ದಾಳಿಯ ಹೆಮ್ಮೆಯನ್ನು ಉಲ್ಲೇಖಿಸುತ್ತ ಭಾರತದ ಯೋಧರನ್ನು ಇಸ್ರೇಲ್ ಪಡೆಗಳ ಶೌರ್ಯ ಸಾಮರ್ಥ್ಯಕ್ಕೆ ಹೋಲಿಸಿ ಪ್ರಧಾನಿ ಮೋದಿ ಮಾತನಾಡಿದ್ದರು. ಹಾಗೇ ಅದೇ ತೆರನಾದ ಗೌರವ, ಗಾಂಭೀರ್ಯಕ್ಕೆ ಪಾತ್ರ ಆಗಿರುವುದು ನ್ಯಾಯಾಂಗ ವ್ಯವಸ್ಥೆ. ಆದರೆ ಅದೇ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲೋ ಲೆಕ್ಕಾಚಾರ ತಪ್ಪುತ್ತಿರುವುದು ಜನಸಾಮಾನ್ಯನ ಗಮನಕ್ಕೂ ಬರುತ್ತಿದೆ. ಅದಕ್ಕೊಂದು ಉದಾಹರಣೆ ಕೊಟ್ಟರೆ ಹೆಚ್ಚು ಸ್ಪಷ್ಟತೆ ಸಿಗಬಹುದು. ಸರಣಿ ಹಂತಕ, ಸೈಕೋ ಕಿಲ್ಲರ್ ಉಮೇಶ್ ರೆಡ್ಡಿ ಹತ್ತಾರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಆರೋಪವನ್ನು ಸ್ಥಳೀಯ ನ್ಯಾಯಾಲಯ, ಹೈಕೋರ್ಟು, ಸುಪ್ರೀಂಕೋರ್ಟು ಎಲ್ಲವೂ ಎತ್ತಿ ಹಿಡಿದಿವೆ. ಸುಪ್ರೀಂಕೋರ್ಟು ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಆತನಿಗೆ ಕ್ಷಮಾದಾನ ನೀಡಲು ರಾಷ್ಟ್ರಪತಿ ಕೂಡ ನಿರಾಕರಿಸಿದ್ದಾರೆ. ಅಂತಹ ಉಮೇಶ್ ರೆಡ್ಡಿ ಮತ್ತೆ ಯಾವುದೋ ಒಂದು ಕಾರಣವನ್ನು ಮುಂದು ಮಾಡಿ ಹೈಕೋರ್ಟಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತಾನೆ. ಆ ಅರ್ಜಿ ವಿಚಾರಣೆಗೆ ಸ್ವೀಕೃತವಾಗುತ್ತದೆ. ಇದೆಂಥಾ ವಿಚಿತ್ರ ನೋಡಿ ಎಂದು ಸಾರ್ವಜನಿಕರು ಬಹಿರಂಗವಾಗಿ ಚರ್ಚಿಸುವುದನ್ನು ನಾನೂ ಕೇಳಿಸಿಕೊಂಡಿದ್ದೇನೆ. ಹೈಕೋರ್ಟಲ್ಲಿ ಬೇಡಿಕೆ ತಿರಸ್ಕೃತಗೊಂಡರೂ ಆತ ಮತ್ತೆ ಸುಪ್ರೀಂಕೋರ್ಟ್ ಕದ ತಟ್ಟಿದರೂ ಆಶ್ಚರ್ಯವಿಲ್ಲ. ಅಲ್ಲಿಗೆ ಮತ್ತೆ ಒಂದೋ ಎರಡೋ ವರ್ಷಗಳು ಕಳೆದು ಹೋಗುತ್ತವೆ. ಪಾಪಿಗೆ ಎರಡು ವರ್ಷ ಜೀವದಾನ ನೀಡುವುದೂ ಕೂಡ ವ್ಯವಸ್ಥೆಯಲ್ಲಿ ನಂಬಿಕೆ ಕುಸಿಯಲು ಕಾರಣವಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ಇದೊಂದು ರೀತಿಯದ್ದಾದರೆ ರಾಜಕೀಯ ಆರೋಪ ಪ್ರಕರಣಗಳ ವಿಚಾರಣೆ ಇತಿಹಾಸ ಮತ್ತೊಂದು ರೀತಿಯ ವೈಚಿತ್ರೃದಿಂದ ಕೂಡಿದೆ. ತಮಿಳುನಾಡಿನ ಸಿಎಂ ಜಯಲಲಿತಾ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರಕರಣಗಳು ಇಡೀ ನ್ಯಾಯಾಂಗ ವ್ಯವಸ್ಥೆಯಲ್ಲಿರುವವರು ಮರುಆಲೋಚನೆ ಮಾಡಬೇಕಿರುವ ಪ್ರಕರಣಗಳು ಎಂದರೆ ತಪ್ಪಾಗಲಾರದು.
ಪ್ರಧಾನಿಯಿಂದ ಹಿಡಿದು ಮಂತ್ರಿಗಳು, ಶಾಸಕರು ಮುಂತಾದವರ ಮೇಲೆ ಹತ್ತಾರು ಗಂಭೀರ ಆರೋಪ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ ಉದಾಹರಣೆಗಳಿವೆ. ಆದರೆ ಆರೋಪ ಸಾಬೀತಾಗುವವರೆಗೆ ಜೈಲಿಗೆ ಕಳಿಸಿದ ಉದಾಹರಣೆಗಳು ಕಡಿಮೆ. ಜಯಲಲಿತಾ ಮತ್ತು ಯಡಿಯೂರಪ್ಪ ವಿಚಾರದಲ್ಲಿ ಹಾಗಾಗಲಿಲ್ಲ. ತಮಿಳುನಾಡಲ್ಲಿ ಜಯಲಲಿತಾ ತಾನ್ಸಿ ಭೂಹಗರಣ ಆರೋಪ ಪ್ರಕರಣದಲ್ಲಿ ಸಿಎಂ ಹುದ್ದೆ ತೊರೆದು ಜೈಲಿಗೆ ಹೋದರು. ಕರ್ನಾಟಕದಲ್ಲಿ ಬಿಎಸ್‍ವೈ ಡಿನೋಟಿಫಿಕೇಶನ್ ಹಗರಣದ ಆರೋಪದ ಹಿನ್ನೆಲೆಯಲ್ಲಿ ಸಿಎಂ ಹುದ್ದೆ ತೊರೆದ ಒಂದು ತಿಂಗಳ ನಂತರ ಜೈಲಿಗೆ ಹೋಗಬೇಕಾಗಿ ಬಂತು. ಐದು ವರ್ಷಗಳ ಬಳಿಕ ಆರೋಪ ಸಾಬೀತಾಗದ ಕಾರಣ ಈ ಇಬ್ಬರೂ ವಿಶೇಷ ನ್ಯಾಯಾಲಯಗಳಿಂದ ಕ್ಲೀನ್‍ಚಿಟ್ ಪಡೆದರು. ಸಾರ್ವಜನಿಕ ಜೀವನದಲ್ಲಿ ಆರೋಪಗಳು ಬರುವುದು ಸಾಮಾನ್ಯ. ಒಬ್ಬ ನಾಯಕ ಮುಖ್ಯಮಂತ್ರಿಯಂತಹ ಉನ್ನತ ಪದವಿಗೆ ಬರಬೇಕಾದರೆ ಮೂವತ್ತು ನಲವತ್ತು ವರ್ಷಗಳ ಕಾಲ ಬೆವರು ಹರಿಸಿರುತ್ತಾನೆ. ಅಂಥವರ ಮೇಲೆ ಆರೋಪ ಬಂದಾಕ್ಷಣ ಜೈಲಿಗೆ ಕಳಿಸುವುದೇ ಆದರೆ ಅದು ಬಲು ಅಪಾಯ ತಾನೆ? ಅಂಥವರು ಅನುಭವಿಸುವ ಮಾನಸಿಕ ತೊಳಲಾಟ, ಹಿಂಸೆ, ಅಪಮಾನಗಳ ಸಂಕಟವನ್ನು ಪರಿಗಣಿಸಬೇಡವೆ? ಹೀಗಾಗಿ ಹೈ ಪ್ರೊಫೈಲ್ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ವ್ಯವಸ್ಥೆ ರೂಪಿಸುವ ಚರ್ಚೆಯೂ ತುರ್ತಾಗಿ ನಡೆಯಬೇಕು ಎನ್ನಿಸುತ್ತದೆ.
ಒಂದೇ ಪ್ರಕರಣಕ್ಕೆ ಸಂಬಂಧಿಸಿ ಕೆಳಹಂತದಲ್ಲಿ ನಡೆಯುವ ನ್ಯಾಯದಾನದ ಪ್ರಕ್ರಿಯೆ, ಸಾಕ್ಷಿಗಳ ಪರಿಗಣನೆ, ಅಪರಾಧದ ವ್ಯಾಖ್ಯಾನವೇ ಬೇರೆ. ಉನ್ನತ ನ್ಯಾಯಾಲಯಗಳಲ್ಲಿ ನಡೆಯುವ ನ್ಯಾಯದಾನದ ಪ್ರಕ್ರಿಯೆಯೇ ಬೇರೆ. ಇದರ ನಡುವೆ ಕಕ್ಷಿದಾರ ಪಡುವ ಪಡಿಪಾಟಲಿಗೆ ಅಂಕೆಯೇ ಇಲ್ಲ.
ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಹಲವು ವಿಧ. ವಿಶೇಷ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯಗಳಿವೆ. ಉದಾಹರಣೆಗೆ ಪರಿಸರ ಸಂಬಂಧಿ ಪ್ರಕರಣಗಳಿಗೆ ಗ್ರೀನ್ ಟ್ರಿಬ್ಯುನಲ್, ನದಿ ನೀರು ಹಂಚಿಕೆ ವಿವಾದಗಳಿಗೆ, ಭ್ರಷ್ಟಾಚಾರ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯಗಳು, ಟ್ರಿಬ್ಯುನಲ್‍ಗಳಿವೆ. ತ್ವರಿತಗತಿಯ ನ್ಯಾಯದಾನಕ್ಕಾಗಿ ಫಾಸ್ಟ್‍ಟ್ರಾೃಕ್ ಕೋರ್ಟುಗಳಿವೆ. ಲೋಕ ಅದಾಲತ್ ವ್ಯವಸ್ಥೆಯಿದೆ. ಸರ್ಕಾರಿ ನೌಕರರ ವ್ಯಾಜ್ಯ ಇತ್ಯರ್ಥಕ್ಕೆ ಆಡಳಿತಾತ್ಮಕ ನ್ಯಾಯಮಂಡಳಿಗಳಿವೆ. ಇಂಥ ಎಲ್ಲ ವಿಶೇಷ ಮತ್ತು ಪ್ರತ್ಯೇಕ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದು ತೀರ್ಪು ಬಂದ ಬಳಿಕ ಅದೇ ಪ್ರಕರಣಗಳ ಬಗ್ಗೆ ಮತ್ತೆ ಮಾಮೂಲಿ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅಂದಮೇಲೆ ವಿಶೇಷ ನ್ಯಾಯಾಲಯಗಳ ಸ್ಥಾಪನೆಯ ಉದ್ದೇಶದ ಗತಿ ಏನಾದೀತು? ಇಲ್ಲಿ ಮುಖ್ಯವಾಗಿ ಗಮನಿಸಬೇಕಿರುವುದು ಕಕ್ಷಿದಾರನ ಅಮೂಲ್ಯ ಸಮಯ, ಆ ಸಮಯದ ಮೌಲ್ಯ ಮತ್ತು ಮಾನಸಿಕ ಹಿಂಸೆಯನ್ನು.
ನಮ್ಮ ನ್ಯಾಯದಾನ ವ್ಯವಸ್ಥೆಯಲ್ಲಿ ಆಮೂಲಾಗ್ರ ಮಾರ್ಪಾಟಾಗುವುದು ಬೇಡವೇ? ಈ ಗೊಂದಲ ಗೋಜಲುಗಳಿಗೆ ಕೊನೆ ಹೇಳುವುದು ಬೇಡವೇ? ಈ ಹಿನ್ನೆಲೆಯಲ್ಲಿ ಕೊಲಿಜಿಯಂ ವ್ಯವಸ್ಥೆ, ನ್ಯಾಯಾಂಗ ನೇಮಕಾತಿ ಆಯೋಗದ ರಚನೆ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಆಗಬೇಕಾದ ಆಮೂಲಾಗ್ರ ಬದಲಾವಣೆಯ ಚರ್ಚೆ ನಡೆದರೆ ಯೋಗ್ಯ ಫಲಿತಾಂಶ ಹೊರಬಂದೀತು. ಅದಾಗದಿದ್ದರೆ ಬೇರೆಲ್ಲ ವ್ಯವಸ್ಥೆಗಳಂತೆಯೇ ನ್ಯಾಯಾಂಗದ ಬಗೆಗೂ ಜನರು ಭರವಸೆ ಕಳೆದುಕೊಂಡು ಹತಾಶೆಗೆ ಜಾರುವ ದಿನಗಳು ಬರುವ ಕಾಲ ದೂರ ಇರಲಿಕ್ಕಿಲ್ಲ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top