ಐಎಎಸ್ ಆದವರು, ಮುಂದೆ ಆಗುವವರು ತಿಳಿಯಬೇಕಾದ ವಿಷ್ಯ (17 .06 .2017)

ಬದಲಾದ ಕಾಲಘಟ್ಟದಲ್ಲಿ ಜನರ ನಿರೀಕ್ಷೆಗಳು, ಆದ್ಯತೆಗಳು ಬದಲಾಗಿವೆ. ಸರ್ಕಾರದ ಉನ್ನತ ಅಧಿಕಾರಸ್ಥಾನಗಳು ಪ್ರತಿಷ್ಠೆ, ದೌಲತ್ತಿನ ಪ್ರದರ್ಶನದ ಸಾಧನಗಳು ಎಂಬ ಭಾವನೆಗೆ ಈಗ ಮನ್ನಣೆಯಿಲ್ಲ. ಸೇವೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡಲ್ಲಿ ಜನರ ಮನಸ್ಸಿನಲ್ಲಿ ನೆಲೆಯಾಗಬಹುದು. ಕರ್ನಾಟಕದ ಅಧಿಕಾರಿಗಳು ಈ ದಾರಿಯಲ್ಲಿ ಸಾಗಲಿ.

ಅಚ್ಚ ಕನ್ನಡತಿ ಕೋಲಾರದ ನಂದಿನಿ ಯುಪಿಎಸ್ಸಿ ಟಾಪರ್ ಆಗಿ ಹೊರ ಹೊಮ್ಮಿದ್ದು ಆಕೆಯ ತಂದೆ-ತಾಯಿಗೆ, ಕುಟುಂಬದವರಿಗೆ ಮಾತ್ರವಲ್ಲ ಇಡೀ ಕನ್ನಡ ಕುಲಕೋಟಿ ಹಿರಿಹಿರಿ ಹಿಗ್ಗುವ ವಿಚಾರ. ಇಪ್ಪತ್ತು ವರ್ಷಗಳ ಹಿಂದಿನ ಸ್ಥಿತಿ ಹೇಗಿತ್ತೆಂದರೆ, ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆ ಆದವರ ಪಟ್ಟಿಯಲ್ಲಿ ಕನ್ನಡಿಗರ ಹೆಸರನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕಿತ್ತು. ಆದರೆ ಹದಿನೆಂಟು ವರ್ಷಗಳ ಹಿಂದೆ ಮಾಜಿ ಪೊಲೀಸ್ ಅಧಿಕಾರಿ ಶಂಕರ ಬಿದರಿ ಅವರ ಮಗಳು ವಿಜಯಲಕ್ಷ್ಮಿಬಿದರಿ ಟಾಪರ್ ಆದಾಗ ಕನ್ನಡಿಗ ಆಕಾಂಕ್ಷಿಗಳಲ್ಲಿ ಹೊಸ ಸಂಚಲನ, ಉತ್ಸಾಹ, ಹುಮ್ಮಸ್ಸು ಪುಟಿದೆದ್ದಿತು. ಆ ನಂತರದ ಪರಿಣಾಮವನ್ನು ನಾವು ಪ್ರತ್ಯಕ್ಷ ಕಾಣುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಅಖಿಲ ಭಾರತ ನಾಗರಿಕ ಸೇವೆಗಳಲ್ಲಿ ಕನ್ನಡಿಗರ ಮೆರುಗು ಹೆಚ್ಚುತ್ತಲೇ ಹೋಗುತ್ತಿದೆ. ಅಷ್ಟು ಮಾತ್ರವಲ್ಲ ಐಎಎಸ್, ಐಪಿಎಸ್, ವಿದೇಶಾಂಗ ಸೇವೆ (ಫಾರಿನ್ ಸರ್ವಿಸ್) ಮತ್ತು ಕೇಂದ್ರೀಯ ಸೇವೆ (ಸೆಂಟ್ರಲ್ ಸರ್ವಿಸಸ್)ಗಳಾದ ಐಆರ್​ಎಸ್ (ರೆವಿನ್ಯೂ ಸರ್ವಿಸ್) ಮುಂತಾದವಕ್ಕೆ ಆಯ್ಕೆ ಆಗುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗುತ್ತಿದೆ. ಇದು ನಿಜಕ್ಕೂ ಖುಷಿ ಮತ್ತು ಹೆಮ್ಮೆಯ ವಿಷಯವೇ ಸರಿ.

ಹಾಗಾದರೆ ಇಂಥದೊಂದು ಬೆಳವಣಿಗೆಗೆ ಮೂಲ ಕಾರಣ ಏನು? ಸರ್ಕಾರಿ ಕಚೇರಿಗಳಿಗೆ ಎಡತಾಕುವವರಿಗೆ ಈ ಮಾತು ಸುಲಭದಲ್ಲಿ ಅರ್ಥ ಆದೀತು. ಕೆಲ ವರ್ಷಗಳ ಹಿಂದಿನವರೆಗೆ ಡಿಸಿ, ಎಸ್ಪಿ, ವಿವಿಧ ಇಲಾಖೆಗಳ ಕಾರ್ಯದರ್ಶಿಗಳು, ಮುಖ್ಯಸ್ಥರು, ವಿವಿಧ ನಿಗಮ ಮಂಡಳಿಗಳ ಆಯುಕ್ತರು, ನಿರ್ದೇಶಕರು ಇಂಥ ಆಯಕಟ್ಟಿನ ಹುದ್ದೆಗಳವರ ಕಚೇರಿಗಳ ದ್ವಾರದಲ್ಲಿ ನೇತು ಹಾಕಿರುವ ನಾಮಫಲಕಗಳ ಮೇಲೆ ಯಾವ ಹೆಸರುಗಳು ಇರುತ್ತಿದ್ದವು? ಗೋಯಲ್, ಪಾಂಡೆ, ಪಂತ್, ಯಾದವ್, ಪಟ್ಟನಾಯಕ ಅದಿಲ್ಲ ಅಂದ್ರೆ ಸಿಂಗ್ ಇಂಥ ಹೆಸರುಗಳು ಹೆಚ್ಚಿಗೆ ಕಾಣಿಸುತ್ತಿದ್ದವು ತಾನೆ. ಆಗ ಅದನ್ನು ನೋಡಿದವರಿಗೆ ಅನ್ನಿಸಿಯೇ ಇರುತ್ತದೆ. ಅರರೆ…. ಈ ಅಧಿಕಾರ ಸ್ಥಾನಗಳಲ್ಲಿ ನಮ್ಮ ಕರ್ನಾಟಕದ ಗೌಡ, ನಾಯಕ, ಹಿರೇಮಠ, ಪಾಟೀಲ, ತಳವಾರ, ಮಡಿವಾಳ, ಶೆಟ್ಟಿ, ಭಟ್ಟ, ಹೆಗಡೆ ಇತ್ಯಾದಿ ಇತ್ಯಾದಿ ಹೆಸರುಗಳು ಯಾಕಿಲ್ಲ ಅಂತ. ಹಾಗಾದರೆ ಕರ್ನಾಟಕದವರು ಬುದ್ಧಿವಂತಿಕೆಯಲ್ಲಿ ಕಡಿಮೆಯೇ? ಉನ್ನತ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಲು ಅಸಮರ್ಥರೇ ಎಂಬ ಪ್ರಶ್ನೆ ಅದರ ಬೆನ್ನಲ್ಲೇ ಹುಟ್ಟಿಕೊಳ್ಳುತ್ತಿತ್ತು.

ಕರ್ನಾಟಕ ಅಥವಾ ದಕ್ಷಿಣ ಭಾರತದ ಯಾವುದೇ ರಾಜ್ಯಕ್ಕೆ ಹೋಲಿಸಿದರೆ ಬಿಹಾರ, ಉತ್ತರಪ್ರದೇಶ, ಪಂಜಾಬ್, ರಾಜಸ್ತಾನಗಳಲ್ಲಿ ಶೈಕ್ಷಣಿಕ ಅವಕಾಶ, ಮೂಲಸೌಕರ್ಯಗಳ ಲಭ್ಯತೆ ತೀರಾ ಕಡಿಮೆ ಇದೆ. ಅಷ್ಟು ಮಾತ್ರವಲ್ಲ, ಒಂದು ಅಧಿಕೃತ ಸರ್ವೆಯ ಪ್ರಕಾರ ಉತ್ತರ ಭಾರತದವರಿಗಿಂತ ದಕ್ಷಿಣದವರ ಬುದ್ಧಿಮತ್ತೆಯ ಮಟ್ಟ ಕೂಡ ಉತ್ತಮವಾಗಿದೆ. ಇಂಜಿನಿಯರಿಂಗ್ ಮತ್ತು ಮೆಡಿಕಲ್ ಅಥವಾ ಇನ್ನಾವುದೇ ವೃತ್ತಿಪರ ಕೋರ್ಸ್​ಗಳಲ್ಲಿ ಸಾಧನೆ ಮಾಡುವಲ್ಲಿಯೂ ದಕ್ಷಿಣದವರೇ ಮೇಲುಗೈ ಸಾಧಿಸುತ್ತ ಬಂದಿದ್ದಾರೆ. ವೃತ್ತಿಪರತೆಯಲ್ಲಿ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಒಳ್ಳೆಯ ಹೆಸರು ಮಾಡುತ್ತಿದ್ದಾರೆ. ಆದರೂ ಶೈಕ್ಷಣಿಕವಾಗಿ, ಮೂಲಸೌಕರ್ಯಗಳಲ್ಲಿ ನಮಗಿಂತ ಹಿಂದುಳಿದ ರಾಜ್ಯಗಳವರೇ ನಮ್ಮನ್ನು ಆಳುವ ಉನ್ನತ ಸರ್ಕಾರಿ ಸೇವೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಜೃಂಭಿಸಲು ಏನು ಕಾರಣ? ಆ ರಾಜ್ಯಗಳಲ್ಲಿ ನಾಗರಿಕ ಸೇವೆಗಳ ಮಹತ್ವದ ಕುರಿತು ಇರುವ ಜಾಗೃತಿ ಮುಖ್ಯ ಕಾರಣವಾದರೆ, ಈಗ ನಾಗರಿಕ ಸೇವೆಗಳಲ್ಲಿ ಇರುವವರ ತಂದೆ, ತಾಯಿ ಅಥವಾ ಕುಟುಂಬಸ್ಥರು ಈ ಹಿಂದೆ ಸೇವೆಯಲ್ಲಿ ಇದ್ದುದು ಮತ್ತೊಂದು ಕಾರಣ.

ಉತ್ತರ ಭಾರತಕ್ಕೆ ಹೋಲಿಸಿದರೆ ಕರ್ನಾಟಕದವರು ಆರಂಭದಿಂದಲೂ ನಾಗರಿಕ ಸೇವೆಗಳಲ್ಲಿ ಇದ್ದದ್ದು ವಿರಳ. ಹಾಗಾಗಿ ಆ ಸೇವೆಗಳ ಕುರಿತಾದ ಮಾಹಿತಿ, ಜಾಗೃತಿ, ಮಹತ್ವದ ಅರಿವು ಇಲ್ಲಿನವರಿಗೆ ಕಡಿಮೆ. ಉತ್ತರದ ಹಾಗೆ ಇಲ್ಲಿ ತರಬೇತಿ ಕೊಡುವ, ಮಾರ್ಗದರ್ಶನ ಮಾಡುವ ಸಂಸ್ಥೆಗಳೂ ಕಡಿಮೆ ಇದ್ದವು. ಅದಕ್ಕಿಂತ ಮುಖ್ಯವಾಗಿ ಕರ್ನಾಟಕದವರು ಉದ್ಯೋಗ ಗ್ಯಾರಂಟಿ ಇರುವ ವೃತ್ತಿಪರ ಕೋರ್ಸ್​ಗಳಿಗೆ ಕೊಡುವಷ್ಟು ಆದ್ಯತೆಯನ್ನು, ತೋರುವ ಪ್ರೀತಿಯನ್ನು ನಾಗರಿಕ ಸೇವಾ ಪರೀಕ್ಷೆಯ ತಯಾರಿಗೆ ಕೊಡಲಿಲ್ಲ. ಆದರೆ ಈಗ ಹಾಗಲ್ಲ. ತರಬೇತಿ ನೀಡುವ ಸಂಸ್ಥೆಗಳೂ ಸಾಕಷ್ಟು ಸಂಖ್ಯೆಯಲ್ಲಿ ಹುಟ್ಟಿಕೊಂಡಿವೆ. ಸೇವೆಗೆ ಸೇರುತ್ತಿರುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಸಲ 66ಕ್ಕೂ ಹೆಚ್ಚು ಕನ್ನಡದ ಅಭ್ಯರ್ಥಿಗಳು ಯುಪಿಎಸ್ಸಿಯಲ್ಲಿ ಆಯ್ಕೆ ಆಗಿರುವುದು ಅದಕ್ಕೊಂದು ಉತ್ತಮ ನಿದರ್ಶನ.

ಇನ್ನು ಐಎಎಸ್, ಐಪಿಎಸ್ ಹುದ್ದೆಗಳ ಆಕರ್ಷಣೆಯ ವಿಚಾರಕ್ಕೆ ಬರೋಣ. ನಮ್ಮ ನಾಗರಿಕ ಸೇವೆ ಬ್ರಿಟಿಷರ ಬಳುವಳಿ. ಅದು ಬ್ರಿಟಿಷ್​ರಿಂದ ಬಂದದ್ದು ಎಂಬ ಕಾರಣಕ್ಕೆ ನಾಗರಿಕ ಸೇವಾಕ್ಷೇತ್ರವನ್ನು ಕೆಂಗಣ್ಣಿನಿಂದ, ಅನುಮಾನದಿಂದ ನೋಡುವ ಕಾರಣವಿಲ್ಲ. ಬ್ರಿಟಿಷ್ ಆಡಳಿತದ ದಕ್ಷತೆ ನಮ್ಮ ಈಗಿನ ಆಡಳಿತ ವ್ಯವಸ್ಥೆಯಲ್ಲೂ ಮುಂದುವರಿದುಕೊಂಡು ಬಂದರೆ ಅದು ಖುಷಿಪಡುವ ವಿಚಾರವೇ ತಾನೆ? ಆದರೆ ಈಗ ನಮ್ಮ ಐಎಎಸ್, ಐಪಿಎಸ್ ವ್ಯವಸ್ಥೆಯಲ್ಲಿ ಬ್ರಿಟಿಷರ ದಕ್ಷತೆಗಿಂತಲೂ ಹೆಚ್ಚಾಗಿ ಅವರ ಅಧಿಕಾರದ ದರ್ಪ, ಐಷಾರಾಮದ ದೌಲತ್ತು ಮುಂತಾದವುಗಳ ಛಾಯೆಯೇ ಹೆಚ್ಚಾಗಿ ಕಾಣಿಸುತ್ತಿರುವುದು ವಿಪರ್ಯಾಸ. ಅದರ ಪರಿಣಾಮವಾಗಿಯೇ ನಮ್ಮ ನಾಗರಿಕ ಸೇವಾ ವ್ಯವಸ್ಥೆ ‘ದಂತಗೋಪುರ’ ಅನ್ನುವ ಟೀಕೆ, ಅಪಖ್ಯಾತಿಗೆ ಗುರಿಯಾಗಿರುವುದು. ಹಾಗಿದ್ದರೂ ಈ ಹುದ್ದೆಗಳ ಆಕರ್ಷಣೆಗೆ ಮುಖ್ಯ ಕಾರಣವೇನು? ಸೇವೆಯ ಅವಕಾಶವೇ? ಸೇವಾ ಭದ್ರತೆಯೇ? ವೇತನ, ಸವಲತ್ತುಗಳೇ? ಅಥವಾ ಅಧಿಕಾರದ ಶ್ರೇಷ್ಠತೆಯೇ? ಬಹುಪಾಲು ಸಂದರ್ಭಗಳಲ್ಲಿ ಅಧಿಕಾರ ಶ್ರೇಷ್ಠತೆಯೇ ಮುಖ್ಯ ಕಾರಣವೆನ್ನಬೇಕು. ಏಕೆ ಗೊತ್ತೇ? ನಮ್ಮ ದೇಶದ ಆಡಳಿತ ವ್ಯವಸ್ಥೆಯಲ್ಲಿ ಐಎಎಸ್, ಐಪಿಎಸ್​ಗಳಿಗೆ ಅಪರಿಮಿತವಾದ ಅಧಿಕಾರವಿದೆ. ಕಾಯಿದೆ, ಕಾನೂನನ್ನು ವ್ಯಾಖ್ಯಾನ ಮಾಡುವ ವಿವೇಚನಾಧಿಕಾರವಿದೆ. ಉದಾಹರಣೆಗೆ ಒಂದು ಜಿಲ್ಲೆಗೆ ಡಿಸಿಯೇ ಸರ್ಕಾರ. ಒಂದು ಇಲಾಖೆಗೆ ಆ ಇಲಾಖೆಯ ಪ್ರಧಾನ ಕಾರ್ಯದರ್ಶಿಯೇ ಸರ್ಕಾರ. ಶಾಸಕ, ಮಂತ್ರಿ, ಮುಖ್ಯಮಂತ್ರಿ ಎಲ್ಲರೂ ಇವರ ಸಲಹೆಯಂತೆ ನಡೆದುಕೊಳ್ಳಬೇಕು. ಈ ಹಿಂದೆ ಸರ್ಕಾರಗಳಲ್ಲಿ ಪಾರಂಪರಿಕವಾಗಿ ಆಡಳಿತದ ಅನುಭವವನ್ನು ಕರಗತ ಮಾಡಿಕೊಂಡ ಮಂತ್ರಿಗಳು, ಶಾಸಕರು ಇರುತ್ತಿದ್ದರು. ಅವರು ಅಷ್ಟೋ ಇಷ್ಟೋ ಈ ಅಧಿಕಾರಿಗಳ ಕಿವಿಹಿಂಡಿ ಕೆಲಸ ಮಾಡಿಸುತ್ತಿದ್ದರು. ಈಗ ಹಾಗಲ್ಲ. ಜನಪ್ರತಿನಿಧಿಗಳಿಗೆ ಕಾಯಿದೆ, ಕಾನೂನು, ಆಡಳಿತದ ಅನುಭವ, ಕಮಾಂಡ್ ಮಾಡುವ ಕಲೆ ಇವ್ಯಾವವೂ ಇಲ್ಲದಿರುವುದರಿಂದ ಅಧಿಕಾರಿಶಾಹಿ ಈಗ ಮೊದಲಿಗಿಂತಲೂ ಹೆಚ್ಚು ಕೊಬ್ಬಿದೆ. ಅದರ ಪರಿಣಾಮ ಆಡಳಿತ ವ್ಯವಸ್ಥೆ ಜಡವಾಗುತ್ತಿದೆ, ಜಡ್ಡುಗಟ್ಟುತ್ತಿದೆ. ಒಂದು ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಉನ್ನತ ಅಧಿಕಾರದಲ್ಲಿರುವವರೆಲ್ಲ ದೊಡ್ಡವರಲ್ಲ. ಗೌರವಕ್ಕೆ ಭಾಜನರಾಗುವುದಿಲ್ಲ. ಆ ಅಧಿಕಾರ ಸ್ಥಾನದಲ್ಲಿದ್ದಾಗ ಹೇಗೆ ನಡೆದುಕೊಳ್ಳುತ್ತೇವೆ? ಅಧಿಕಾರವನ್ನು ಎಷ್ಟು ವಿನಯದಿಂದ, ವಿನಮ್ರತೆಯಿಂದ, ದಕ್ಷತೆಯಿಂದ ಕರ್ತವ್ಯ ನಿರ್ವಹಣೆ ಮಾಡುತ್ತೇವೆ ಎನ್ನುವುದರ ಮೇಲೆ ದೊಡ್ಡಸ್ತಿಕೆ ನಿರ್ಧಾರವಾಗುತ್ತದೆ.

ಒಂದು ಅಚ್ಚರಿಯ ಸಂಗತಿಯನ್ನು ಇಲ್ಲಿ ಉಲ್ಲೇಖಿಸಲೇಬೇಕು. ಖಾಸಗಿ ಕಂಪನಿಗಳಿಗೆ ಹೋಲಿಸಿದರೆ ನಮ್ಮ ನಾಗರಿಕ ಸೇವಕರಿಗೆ ಸಿಗುವ ಸಂಬಳ, ಸವಲತ್ತು ಏನೇನೂ ಅಲ್ಲ. ಆದರೂ ಈ ಐಎಎಸ್​ಗೆ ಇರುವ ಆಕರ್ಷಣೆ ಅಂದರೆ ಇವರಿಗಿರುವ ಅಪರಿಮಿತ ಅಧಿಕಾರ, ಸಾರ್ವಜನಿಕರು ಭಯ-ಭಕ್ತಿಯಿಂದ ಕೈ ಮುಗಿಯುವ ರೀತಿನೀತಿಗಳು ಮಾತ್ರ ಎಂಬುದು ಕೆಲವರು ಬಲ್ಲವರು ವ್ಯಕ್ತಪಡಿಸುವ ಅಭಿಪ್ರಾಯ. ಇದೆಲ್ಲದರ ನಡುವೆಯೂ ಸೇವೆ ಮಾಡುವ ಉದ್ದೇಶವನ್ನೇ ಇಟ್ಟುಕೊಂಡು, ಸೇವೆಗೆ ಸೇರಿದ ಮೂಲ ಉದ್ದೇಶವನ್ನು ಕೊನೆತನಕ ಜತನದಿಂದ ಕಾದುಕೊಂಡು ಹೋಗುವ ಕೆಲವರು ಈ ಮಾತಿಗೆ ಅಪವಾದ ಅನ್ನಿ.

ಅಪಾಯಕಾರಿ ಟ್ರೆಂಡ್: ಬೇರೆಲ್ಲ ಕ್ಷೇತ್ರಗಳಂತೆ ನಾಗರಿಕ ಸೇವಾ ಅಧಿಕಾರಿಗಳಲ್ಲೂ ದಕ್ಷತೆ ಕಡಿಮೆ ಆಗುತ್ತಿದೆ. ಅದಕ್ಕೆ ಈಗಿನ ಆಯ್ಕೆ ಪದ್ಧತಿಯಲ್ಲಿ ಇರುವ ಕೆಲ ಲೋಪದೋಷಗಳು, ನ್ಯೂನತೆಗಳೂ ಕಾರಣ ಎಂಬ ಅಭಿಪ್ರಾಯವಿದೆ. ಇತ್ತೀಚಿನ ವರ್ಷಗಳಲ್ಲಿ ಪರೀಕ್ಷಾ ವಿಧಾನ ಮತ್ತು ಪಠ್ಯಕ್ರಮ ಬದಲಾದ ನಂತರ ವಿಜ್ಞಾನ(ಸೈನ್ಸ್) ಮತ್ತು ತಂತ್ರಜ್ಞಾನ(ಇಂಜಿನಿಯರಿಂಗ್) ವಿಷಯಗಳಲ್ಲಿ, ವೈದ್ಯಕೀಯ ವಿಜ್ಞಾನದಲ್ಲಿ (ಮೆಡಿಕಲ್ ಸೈನ್ಸ್) ಹೆಚ್ಚು ಅಂಕ ತೆಗೆಯಬಲ್ಲವರು ನಾಗರಿಕ ಸೇವೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗುತ್ತಿದ್ದಾರೆ. ಹೆಚ್ಚು ಅಂಕ ಗಳಿಸಿದವರೆಲ್ಲ ಉತ್ತಮ ಆಡಳಿತಗಾರರಾಗುತ್ತಾರೆ ಅನ್ನುವುದು ಹೇಗೆ? ಅದರ ಘೊರ ಪರಿಣಾಮವನ್ನೊಮ್ಮೆ ನೋಡಿ. ಉತ್ತಮ ಆಡಳಿತ ನಡೆಸುವ ಮಾತು ಹೇಗೂ ಇರಲಿ, ತಾವು ಹೊಂದಿರುವ ಸ್ಥಾನವನ್ನು ಜೀರ್ಣಿಸಿಕೊಳ್ಳಲು ಆಗದಂತಹವರು ಸಹ ಸೇವೆಗೆ ಸೇರಿಕೊಳ್ಳುತ್ತಿದ್ದಾರೆ. ಹೀಗಾಗಿ ಹಲವರು ಅಧಿಕಾರದಲ್ಲಿದ್ದೂ ಅದರಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂಬ ಕೊರಗು ಹೆಚ್ಚಾಗುತ್ತಿದೆ.

ಹೊಸ ತಲೆಮಾರಿನವರಿಗೆ ಹೊಸ ಸವಾಲು: ಇದು ಇನ್ನು ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳಬೇಕಾದವರು ಹೆಚ್ಚು ಗಮನ ಕೊಟ್ಟು ಕೇಳಿಸಿಕೊಳ್ಳಬೇಕಾಗಿರುವ ವಿಚಾರ. ಈಗೀಗ ನಾಗರಿಕ ಸೇವೆಗೆ ಸೇರುವ ಯುವಕರಿಗೆ ಈ ಹಿಂದಿನವರಿಗಿಂತ ಹೆಚ್ಚಿನ ಸವಾಲುಗಳು ಎದುರಾಗುತ್ತಿವೆ. ಅದು ಕೇವಲ ಅಧಿಕಾರ, ಗುರುತಿಸಿಕೊಳ್ಳುವಿಕೆಯನ್ನೇ ಗಮನದಲ್ಲಿಟ್ಟುಕೊಂಡು ಸೇವೆಗೆ ಸೇರುವವರ ಪಾಲಿಗೆ ನಿರಾಸೆ, ಆಘಾತಗಳನ್ನು ತಂದರೂ ಅಚ್ಚರಿಪಡಬೇಕಿಲ್ಲ.

ಆ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು.

1 ಜನರು ಹೆಚ್ಚೆಚ್ಚು ವಿದ್ಯಾವಂತರಾಗುತ್ತಿದ್ದಂತೆ ಉನ್ನತ ಅಧಿಕಾರಿಯಿಂದ ಹಿಡಿದು ಮಂತ್ರಿಯವರೆಗೆ ಎಲ್ಲರನ್ನೂ ಪ್ರಶ್ನಿಸುವ ಗುಣಸ್ವಭಾವ ಜಾಗೃತವಾಗುತ್ತಿದೆ. ಇದು ಕೆಲವರಿಗೆ ಅಪಥ್ಯವಾದರೂ ಒಳ್ಳೆಯ ಬೆಳವಣಿಗೆ.

2 ಜನರು ತಮಗೆ ಸಿಗಬೇಕಾದ್ದನ್ನು ಅಧಿಕಾರ, ಹಕ್ಕಿನಿಂದ ಕೇಳಿ ಪಡೆದುಕೊಳ್ಳುವ ಶಕ್ತಿಯನ್ನು ಗಳಿಸಿಕೊಳ್ಳುತ್ತಿದ್ದಾರೆ. ಇದು ಸಾಮಾಜಿಕ ಸಬಲೀಕರಣದ ನೇರ ಪರಿಣಾಮ ಎನ್ನಬಹುದು.

3 ಸರ್ಕಾರದ ಮೇಲೆ ಜನರ ಅವಲಂಬನೆ ಕಡಿಮೆ ಆಗುತ್ತಿದೆ. ಜನರು ಸ್ವತಂತ್ರವಾಗಿ ಬದುಕುವ ಶಕ್ತಿಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.

4 ಜನರಿಗೆ ಸೇವೆ ಕೊಡುವುದು ಸರ್ಕಾರದ ಕರ್ತವ್ಯ, ಅದು ಸರ್ಕಾರ ಕೊಡುವ ಭಿಕ್ಷೆ ಅಲ್ಲ ಎಂಬ ಭಾವನೆ ಜನರಲ್ಲಿ ಗಟ್ಟಿಗೊಳ್ಳುತ್ತಿದೆ. ಪ್ರಜ್ಞಾವಂತಿಕೆ ಬೆಳೆಯುತ್ತಿರುವುದರ ಪರಿಣಾಮ ಇದು.

5 ನೀವು ನಮಗೆ ಉಪಕಾರ ಮಾಡುತ್ತಿಲ್ಲ, ನಾವು ಸರ್ಕಾರಕ್ಕೆ ತೆರಿಗೆ ಕೊಡುತ್ತೇವೆ. ಅದರಲ್ಲಿ ಒಂದು ಪಾಲನ್ನು ಸರ್ಕಾರ ನಿಮಗೆ ಸಂಬಳ, ಸಾರಿಗೆ, ಸವಲತ್ತಿಗೆ ಕೊಡುತ್ತಿದೆ. ಜನರ ಸೇವೆ ಮಾಡುವುದು ನಿಮ್ಮ ಕರ್ತವ್ಯ ಎಂದು ಜನರು ಭಾವಿಸುತ್ತಿದ್ದಾರೆ. ತಮ್ಮ ಋಣ ಸಂದಾಯ ಮಾಡುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ ಎಂದು ಜನರು ಭಾವಿಸುತ್ತಿದ್ದಾರೆ.

ಇದನ್ನೆಲ್ಲ ದಂತದ ಗೋಪುರದಲ್ಲಿ ಸೇರಿಕೊಳ್ಳಲು ಬಯಸುವವರು ಅರಗಿಸಿಕೊಳ್ಳುತ್ತಾರಾ? ಅರಿತು, ಅರಗಿಸಿಕೊಳ್ಳುವವರು ಮಾತ್ರ ಉಳಿಯುತ್ತಾರೆ…. ಬೆಳೆಯುತ್ತಾರೆ. ಇದೆಲ್ಲವನ್ನೂ ಮನವರಿಕೆ ಮಾಡಿಕೊಂಡು ಸೇವೆಗೆ ಸೇರುವವರು ಉತ್ತಮ ಜನಸೇವಕರಾಗುವುದರಲ್ಲಿ ಅನುಮಾನ ಬೇಡ. ಅಂಥ ಕನ್ನಡಿಗ ಅಧಿಕಾರಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾದರೆ ಕರ್ನಾಟಕಕ್ಕೆ ಹಿರಿಮೆ ಗರಿಮೆ….

(ಲೇಖಕರು ‘ವಿಜಯವಾಣಿ’ ಸಂಪಾದಕರು)

(ಈ ಹಿಂದಿನ ಬರಹಗಳು www.konemane.com ನಲ್ಲಿ ಲಭ್ಯ)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top