ಗುಜರಾತ್ ಮಾದರಿ, ರಾಜ್ಯ ರಾಜಕೀಯ ಗರಿಗರಿ

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನಿರೀಕ್ಷಿತ ಫಲಿತಾಂಶ ಪಡೆದಿರುವುದು ಗೊತ್ತೇ ಇದೆ. ಅನಿರೀಕ್ಷಿತ ಫಲಿತಾಂಶ ಎಂದು ಉದ್ಗರಿಸಿದ ತಕ್ಷಣ ಪ್ರಮುಖವಾಗಿ ಎರಡು ಪ್ರಶ್ನೆಗಳು ಏಳುವುದು ಸಹಜ.

ಗುಜರಾತಲ್ಲಿ ಬಿಜೆಪಿ ಸರಳ ಬಹುಮತ ಗಳಿಸುವ ಸಂಭವ ಇರಲಿಲ್ಲವೇ ಎಂಬ ಒಂದು ಅರ್ಥವನ್ನು ಈ ಪ್ರಶ್ನೆ ಧ್ವನಿಸಿದರೆ, ಬಿಜೆಪಿ ಇದಕ್ಕೂ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಿತ್ತೇ ಎಂಬ ಅರ್ಥವನ್ನೂ ಹೊರಹೊಮ್ಮಿಸುತ್ತದೆ.

ವಾಸ್ತವದಲ್ಲಿ ಇವೆರಡೂ ಸಂಗತಿಗಳು ಸಹ ನಿಜವೆ.

ಈಗ ಮೊದಲನೆಯ ಅಂಶವನ್ನು ಅವಲೋಕಿಸೋಣ. ಬಿಜೆಪಿ ಗುಜರಾತಲ್ಲಿ ಸರಳ ಬಹುಮತವನ್ನು ಗಳಿಸಲು ಯಾಕೆ ಇಷ್ಟು ತಿಣುಕಾಟ ನಡೆಸಬೇಕಾಗಿ ಬಂತು? ಇದಕ್ಕೆ ಮೂರು ಪ್ರಮುಖವಾದ ಕಾರಣಗಳಿವೆ. ಮೊದಲನೆಯದ್ದು ಸಾಮಾನ್ಯವಾಗಿ ರಾಜಕೀಯ ಪರಿಣತರು ಮುಂದಿಡುವ ಆಡಳಿತ ವಿರೋಧಿ ಅಲೆಯ ಪರಿಣಾಮ. ಆ ರಾಜ್ಯದಲ್ಲಿ ಬಿಜೆಪಿ ಸತತ ಆಡಳಿತ ನಡೆಸುತ್ತ ಇಪ್ಪತ್ತೆರಡು ವರ್ಷಗಳೇ ಕಳೆದವು. ಸಾಮಾನ್ಯವಾಗಿ ಈಗಿನ ರಾಜಕೀಯ ವಾತಾವರಣದಲ್ಲಿ ಓರ್ವ ನಾಯಕ ಮುಖ್ಯಮಂತ್ರಿಯಾಗಿ ಒಂದು ಅವಧಿ ಪೂರ್ಣಗೊಳಿಸುವುದೇ ಕಷ್ಟ. ಹಾಗೂ ಹೀಗೂ ಒಂದು ಅವಧಿ ಪೂರ್ಣಗೊಳಿಸುವ ಹೊತ್ತಿಗೆ ಮತ್ತೆ ಇವನ ಸಹವಾಸ ಬೇಡಪ್ಪಾ ಎನ್ನುವ ತೀರ್ವನಕ್ಕೆ ಆ ರಾಜ್ಯದ ಮತದಾರರು ಬರುವ ಸಾಧ್ಯತೆಯೇ ಹೆಚ್ಚು. ಯಾವುದೇ ಒಂದು ಪಕ್ಷದ ಆಡಳಿತ ನೋಡುವುದಾದರೂ, ಅದು ಒಂದು ಅವಧಿ ಮುಗಿಸಿ ಮತ್ತೊಂದು ಅವಧಿಗೆ ಮಗ್ಗುಲು ತಿರುಗಿಸುವ ಹೊತ್ತಿಗೆ ಇದೂ ಕೂಡ ಸಾಕಪ್ಪಾ ಸಾಕು ಎನ್ನವಂತಾಗಿರುತ್ತದೆ. ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು ಆಡಳಿತದ ದಾಖಲೆ ಇಂಥ ಮಾತಿಗೆ ಒಂದು ಅಪವಾದ ಅಂತಿಟ್ಟುಕೊಳ್ಳೋಣ. ಅಂಥದ್ದರಲ್ಲಿ ಗುಜರಾತಲ್ಲಿ ನರೇಂದ್ರ ಮೋದಿ ಬರೋಬ್ಬರಿ ಮೂರು ಅವಧಿಗೂ ಹೆಚ್ಚು ಕಾಲ ಪೂರ್ಣಾವಧಿ ಮುಖ್ಯಮಂತ್ರಿಯಾದರು. ಅಷ್ಟಾಗಿಯೂ ಅವರು ರಾಜಕೀಯ ಪಂಡಿತರ ಆಡಳಿತ ವಿರೋಧಿ ಅಲೆಯ ತರ್ಕವನ್ನು ತಮ್ಮ ಸಮರ್ಥ ನಾಯಕತ್ವ ಮತ್ತು ಅಭಿವೃದ್ಧಿ ಮಂತ್ರದ ಮೂಲಕ ಸುಳ್ಳಾಗಿಸಿದರು. ಆದರೆ ಅದೇ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಹೊರಟು ನಿಂತಾಗ ಸಹಜವಾಗಿ ಗುಜರಾತಲ್ಲಿ ದೊಡ್ಡ ನಿರ್ವಾತವೊಂದು ಸೃಷ್ಟಿ ಆಯಿತು. ಅಲ್ಲಿ ಮೋದಿ ಅನುಪಸ್ಥಿತಿಯಿಂದ ಉಂಟಾದ ನಿರ್ವಾತವನ್ನು ತುಂಬುವ ತಾಕತ್ತು ಅವರ ಉತ್ತರಾಧಿಕಾರಿಯಾಗಿ ಬಂದ ಆನಂದಿ ಬೆನ್​ಗೆ ಇರಲಿಲ್ಲ. ಅಲ್ಲಿನ ರಾಜಕೀಯದಲ್ಲಿ ಆನಂದಿ ಬೆನ್ ಮಂಕಾಗತೊಡಗಿದಾಗ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡ ವಿಜಯ ರೂಪಾಣಿ ಸಹ ಮೋದಿ ಸ್ಥಾನ ತುಂಬಲು ಸಫಲರಾಗಲಿಲ್ಲ. ಅಷ್ಟು ಸಾಲದ್ದಕ್ಕೆ ಶತಾಯಗತಾಯ ಗುಜರಾತಲ್ಲೇ ಬಿಜೆಪಿ ಸೋಲಿಸಿ ಇಡೀ ದೇಶದಲ್ಲಿ ಮೋದಿ/ಷಾ ಜೋಡಿಯ ಮೂಲಕ ಬಿಜೆಪಿ ನಾಗಾಲೋಟವನ್ನು ತಡೆಯಲು ಪಣ ತೊಟ್ಟ ರಾಹುಲ್ ಥಿಂಕ್ ಟ್ಯಾಂಕ್ ಸದಸ್ಯರು ಜಾತಿ ವಿಭಜನೆ ಮೂಲಕ ಮತ ಧ್ರುವೀಕರಣದ ಸ್ಕೆಚ್ಚನ್ನು ಸರಿಯಾಗೇ ಹಾಕಿದ್ದರು. ಕಾಂಗ್ರೆಸ್​ನ ಈ ಸೂತ್ರಕ್ಕೆ ಶಕ್ತಿ ತುಂಬಿದ್ದು ಒಬಿಸಿ ನಾಯಕ ಜಿಗ್ನೇಶ್ ಮೇವಾನಿ ಮತ್ತು ಪಾಟಿದಾರ ಚಳವಳಿಯ ಹಾರ್ದಿಕ್ ಪಟೇಲ್ ಹಾಗೂ ಸಂಗಡಿಗರು. ತಮ್ಮ ಜಾತಿಯವರು ಎಂಬ ಕಾರಣಕ್ಕೆ ಒಬಿಸಿ ಸಮುದಾಯ ಇದುವರೆಗೂ ಮೋದಿ ಜೊತೆಗಿತ್ತು. ಇನ್ನು ಪಟೇಲ್ ಸಮುದಾಯವಂತೂ ಅಂಥ ಕೇಶುಭಾಯಿ ಪಟೇಲರ ಬಂಡಾಯವನ್ನೂ ಗಣನೆಗೆ ತೆಗೆದುಕೊಳ್ಳದೆ ಬಿಜೆಪಿ ಜೊತೆ ಬಲವಾಗಿ ನಿಂತುಕೊಂಡಿತ್ತು. ಆದರೆ ಗುಜರಾತಲ್ಲಿ ಮೋದಿ ಅನುಪಸ್ಥಿತಿ ಮತ್ತು ಮೋದಿ ಆಡಳಿತದ ವರ್ಚಸ್ಸನ್ನು ಸರಿಗಟ್ಟಲಾಗದ ಆನಂದಿಬೆನ್, ವಿಜಯ ರೂಪಾಣಿ ದರ್ಬಾರು ರಾಹುಲ್ ತಂಡದ ಜಾತಿ ವಿಭಜನೆ ತಂತ್ರಕ್ಕೆ ಧಾರಾಳ ಅನುಕೂಲ ಮಾಡಿಕೊಟ್ಟಿತು. ಒಬಿಸಿ ಮತ್ತು ಪಟೇಲ್ ಸಮುದಾಯ ಬಿಜೆಪಿಯಿಂದ ದೂರವಾಗುವ ಸ್ಪಷ್ಟ ಸೂಚನೆ ಸಿಗತೊಡಗಿತು. ಗುಜರಾತ ಗ್ರಾಮೀಣ ಪ್ರದೇಶದಲ್ಲಿ ಹಾರ್ದಿಕ್, ಜಿಗ್ನೇಶ್ ಮತ್ತು ರಾಹುಲ್ ತಂಡದ ಸತತ ಅಪಪ್ರಚಾರ ಅಲ್ಲಿನ ಜನತೆಗೆ ಇಪ್ಪತ್ತು ವರ್ಷಗಳ ಗುಜರಾತದ ಬದಲಾವಣೆ ಚುನಾವಣೆ ವೇಳೆ ಕಾಣಿಸದಂತೆ ಮಂಕಾಗಿಸಿತು. ಪರಿಣಾಮವಾಗಿ ಗುಜರಾತ್ ಗ್ರಾಮೀಣದಲ್ಲಿ ಬಿಜೆಪಿಗೆ ಸಾಕಷ್ಟು ಹಿನ್ನಡೆ ಉಂಟಾಯಿತು. ಅದರ ಜೊತೆಗೆ ರೈತರ ಸಾಲಮನ್ನಾ ನಿರಾಕರಣೆ, ಜಿಎಸ್​ಟಿ ಜಾರಿ ಮತ್ತು ಜಿಎಸ್​ಟಿ ಕುರಿತ ಅಪಪ್ರಚಾರ ಬಿಜೆಪಿಗೆ ದುಬಾರಿಯಾಗಿ ಪರಿಣಮಿಸಿತು. ಇದೆಲ್ಲ ಗಮನಿಸಿದವರು ಗುಜರಾತಲ್ಲಿ ಬಿಜೆಪಿ ಗೆಲುವಿನ ದಡ ಸೇರುವುದು ಕಷ್ಟ ಎಂದು ಮನಗಂಡಿದ್ದರು. ಆದರೆ ಫಲಿತಾಂಶ ಹೊರಬಂದಾಗ ಪರಿಸ್ಥಿತಿ ಬೇರೆಯೇ ಆಗಿತ್ತು!

ಹಾಗೇ ಇನ್ನೊಂದು ಗುಂಪಿನ ನಿರೀಕ್ಷೆ ಈ ಮೇಲಿನ ವಾದಕ್ಕೆ ಭಿನ್ನವಾದ್ದು. 2014ರ ಲೋಕಸಭಾ ಚುನಾವಣೆಯ ನಂತರ 18 ರಾಜ್ಯಗಳಲ್ಲಿ ಬಿಜೆಪಿ ಪತಾಕೆ ಹಾರಿಸಿದ ಮೋದಿ-ಷಾ ಜೋಡಿ ಗಂಡುಮೆಟ್ಟಿನ ನೆಲ ಗುಜರಾತಲ್ಲಿ ವಿಜಯಧ್ವಜ ನೆಡದೆ ಇಡುತ್ತಾರೆಯೇ ಎಂಬುದು ಒಟ್ಟಾರೆ ತರ್ಕ. ಕೇವಲ ಗೆಲುವಲ್ಲ, 125, 150ಸ್ಥಾನಗಳನ್ನು ಬಿಜೆಪಿ ಗಳಿಸಿಯೇ ಗಳಿಸುತ್ತದೆ ಎಂಬ ಮಹದಾಸೆಯಲ್ಲಿ ಅವರಿದ್ದರು. ಆದರೆ ವಾಸ್ತವ ಏನೆಂಬುದು ಮೋದಿ-ಷಾ ಮತ್ತು ಬಿಜೆಪಿಯ ವಾರ್​ರೂಮಲ್ಲಿ ಕೆಲಸ ಮಾಡುವ ತಂತ್ರಜ್ಞರಿಗೆ ಗೊತ್ತಿರದ ಸಂಗತಿಯೇನಾಗಿರಲಿಲ್ಲ. ಚುನಾವಣೆಗೆ ಆರು ತಿಂಗಳು ಇರುವವರೆಗೂ ಅಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರುವ ಮಾತು ಹಾಗಿರಲಿ, 60 ಸ್ಥಾನಗಳ ಗಡಿ ದಾಟುವ ಭರವಸೆಯೂ ಯಾರೊಬ್ಬರಿಗೂ ಇರಲಿಲ್ಲ. ಆದರೂ ಧೃತಿಗೆಡದ ಷಾ ತಂಡ ಮೊದಲು ಗೆಲುವಿಗೆ ಸವಾಲಾಗಿರುವ ಅಂಶಗಳನ್ನು ಒಂದೊಂದಾಗಿ ಪಟ್ಟಿ ಮಾಡಿತು. ಒಂದೊಂದು ಸವಾಲಿಗೂ ಒಂದೊಂದು ಪರಿಹಾರವನ್ನು ಗುರುತು ಮಾಡಿ ಪೂರಕ ತೀರ್ಮಾನ ತೆಗೆದುಕೊಳ್ಳಲಾಯಿತು. ಹೀಗೆ ತೆಗೆದುಕೊಂಡ ತೀರ್ವನವನ್ನು ಚಾಚೂ ತಪ್ಪದೆ ಜಾರಿಗೊಳಿಸುವ ಕಡೆಗೂ ವಿಶೇಷ ಗಮನ ನೀಡಿದರು. ಇದು ಚುನಾವಣೆ ತಂತ್ರಗಾರಿಕೆಯಲ್ಲಿ ಆಸಕ್ತರೆಲ್ಲರೂ ಪ್ರಮುಖವಾಗಿ ಗಮನಿಸಲೇಬೇಕಾದ ಅಂಶ. ಏಕೆಂದರೆ ರಾಜಕೀಯ ಅಂದರೇನೆ ಹಾಗೆ. ಹಲವು ತೀರ್ವನಗಳಾದರೂ ಅವುಗಳ ಪೈಕಿ ಕೆಲವು ಕೂಡ ಜಾರಿ ಆಗುವುದು ಕಷ್ಟ. ಆದರೆ ಗುಜರಾತಲ್ಲಿ ಹಾಗಾಗಲು ಷಾ ಮತ್ತು ತಂಡ ಬಿಡಲಿಲ್ಲ. ಸರಳ ಬಹುಮತಕ್ಕೆ ಮೋಸವಾಗಬಾರದೆಂದು ತೀರ್ವನಿಸಿದ ಷಾ ಮತ್ತು ಅವರ ಆಪ್ತರ ತಂಡ ಅಂದುಕೊಂಡದ್ದನ್ನು ಸಾಧಿಸುವಲ್ಲಿ ಲೋಪವಾಗಲು ಕೊಡಲಿಲ್ಲ. ಜಿಎಸ್​ಟಿ ಸ್ಲಾ್ಯಬ್ ಬದಲಾವಣೆ, ಟಿಕೆಟ್ ಹಂಚಿಕೆಯಲ್ಲಿ ತೋರಿದ ಜಾಣ್ಮೆ, ಜಾತಿ ವಿಭಜನೆ ಮೂಲಕ ಬಿಜೆಪಿಯ ತಳಪಾಯ ಕೊರೆಯಲು ಹೊರಟವರನ್ನೇ ಛಿದ್ರ ಮಾಡಿದ್ದು, ವಘೕಲಾರಂತಹ ನಾಯಕರನ್ನು ಕಾಂಗ್ರೆಸ್​ನಿಂದ ಹೊರತಂದಿದ್ದು ಇವೆಲ್ಲ ಷಾ ತಂಡದ ತಂತ್ರಗಾರಿಕೆಯ ಕೆಲ ಉದಾಹರಣೆಗಳು ಮಾತ್ರ.

ಇದು ಸುಮ್ಮನೆ ಹೇಳುವ ಮಾತಲ್ಲ, ಗುಜರಾತ್ ಫಲಿತಾಂಶದ ಬೆನ್ನಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ನಾಯಕರಿಗೆ ವಹಿಸಿದ ಕೆಲಸ ಪರಾಮರ್ಶೆಗೆ ಮೂರು ದಿನದ ಹಿಂದೆ ಬೆಂಗಳೂರಿಗೆ ಆಗಮಿಸಿದ ಅಮಿತ್ ಷಾ, ‘ನಾನಿಲ್ಲಿ ಗೆಲ್ಲಲು ಬಂದಿದ್ದೇನೆ, ಸೋಲುವುದಕ್ಕಲ್ಲ’ ಎಂದು ಅಬ್ಬರಿಸಿದ್ದು ಗೊತ್ತಿರಬಹುದು. ಇದು ಅವರ ಕೇವಲ ಬಾಯಿಮಾತು ಎಂದು ಯಾರೂ ಭಾವಿಸಬೇಕಿಲ್ಲ. ಷಾ ಮಾತು ಮತ್ತು ಕೃತಿ ಹೇಗಿರುತ್ತದೆ ಎಂಬುದಕ್ಕೆ ಉದಾಹರಣೆ ಎಂದು ಗುಜರಾತದ ವಾರ್​ರೂಮಲ್ಲಿ ಕೆಲಸ ಮಾಡಿದ ನಾಯಕರೊಬ್ಬರು ಅಲ್ಲಿನ ವಿದ್ಯಮಾನಗಳನ್ನು ವಿವರಿಸಿದ ರೀತಿ.

ಇಷ್ಟೆಲ್ಲ ಪೀಠಿಕೆ ಹಾಕಿದ್ದು ಯಾಕೆ ಎಂದರೆ ಗುಜರಾತಲ್ಲಿ ಗೆದ್ದು ನಿರೀಕ್ಷೆ ಉಳಿಸಿಕೊಂಡ ಷಾ, ಕರ್ನಾಟಕದಲ್ಲಿ ಏನು ಮಾಡಬಹುದು ಎಂಬುದನ್ನು ಅಂದಾಜಿಸುವುದಕ್ಕಾಗಿ.

ವಾಸ್ತವದಲ್ಲಿ ನೋಡುವುದಾದರೆ ಜಾತಿ ಸಮೀಕರಣದ ದೃಷ್ಟಿಯಿಂದ ಗುಜರಾತಕ್ಕೂ, ಕರ್ನಾಟಕಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಹಾಗೆ ನೋಡಿದರೆ ಜಾತಿ ಸಮೀಕರಣ ಕರ್ನಾಟಕದಲ್ಲಿ ಇನ್ನೂ ಜಟಿಲ ಎಂದರೆ ತಪ್ಪಲ್ಲ. ಇದನ್ನು ಚೆನ್ನಾಗಿ ಅರಿತಿರುವ ಷಾ ದೂರದೃಷ್ಟಿಗೆ ಒಂದು ಉದಾಹರಣೆ ಎಂದರೆ ಯಡಿಯೂರಪ್ಪ ಅವರನ್ನು ಒಂದೂವರೆ ವರ್ಷದ ಹಿಂದೆಯೇ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಸಿಎಂ ಅಭ್ಯರ್ಥಿಯಾಗಿ ಘೊಷಣೆ ಮಾಡಿದ್ದು. ಅಂದು ಹಾಗೆ ಮಾಡಿರದಿದ್ದರೆ ಇಂದು ಕಾಂಗ್ರೆಸ್ ಪ್ರೇರಿತ ಲಿಂಗಾಯತ ದರ್ಮಸ್ಥಾಪನೆ ರಾಜಕೀಯದ ಎದುರು ಬಿಜೆಪಿ ಜಂಘಾಬಲವೇ ಉಡುಗಿ ಹೋಗಿರುತ್ತಿತ್ತು. ಷಾ ದೂರದೃಷ್ಟಿ ತಂತ್ರಗಾರಿಕೆ ಎದುರು ಲಿಂಗಾಯತ ಧರ್ಮಸ್ಥಾಪನೆ ವಿಚಾರ ಕಾಂಗ್ರೆಸ್ಸಿಗೇ ತಿರುಗುಬಾಣವಾಗಿ ಪರಿಣಮಿಸಿದರೆ ಅಚ್ಚರಿ ಪಡಬೇಕಿಲ್ಲ. ಇದೊಂದೇ ಅಲ್ಲ, ಷಾ ರಾಜ್ಯದ ಮೇಲೆ ಕಣ್ಣುಹಾಕಿದ ನಂತರವೇ ಕಾಂಗ್ರೆಸ್ ಉಸ್ತುವಾರಿ ಬದಲಾದದ್ದು, ಸಿಎಂ ಸಿದ್ದರಾಮಯ್ಯ ಆಕ್ರಮಣಕಾರಿಯಾಗಿ ಚುರುಕಾಗಿದ್ದು. ಆದರೆ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಇರುವ ವ್ಯತ್ಯಾಸ ಎಂದರೆ ಬಿಜೆಪಿಯಲ್ಲಿ ತಂತ್ರಗಾರಿಕೆ ಹೆಣೆಯಲು ಷಾ ಮತ್ತು ಅವರ ವಾರ್​ರೂಂ ಇದೆ. ಹೆಣೆದ ತಂತ್ರ, ತೆಗೆದುಕೊಂಡ ತೀರ್ವನಗಳನ್ನು ಕಾರ್ಯರೂಪಕ್ಕೆ ತರಲು ಬೃಹತ್ತಾದ ಕಾರ್ಯಕರ್ತರ ಪಡೆ ಇದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್​ನಲ್ಲಿ ದೊಡ್ಡ ಕೊರತೆ ಇದೆ. ಕಾಂಗ್ರೆಸ್​ಗೆ ಸಿಎಂ ಸಿದ್ದರಾಮಯ್ಯ ಅವರೇ ಹೈಕಮಾಂಡ್, ಅವರೇ ಸೂತ್ರಧಾರ, ಪಾತ್ರಧಾರ ಎಲ್ಲವೂ ಕೂಡ. ಅದೇ ಸಂಗತಿ ಕಾಂಗ್ರೆಸ್ ಪಾಲಿಗೆ ನಕಾರಾತ್ಮಕ ಅಂಶವೂ ಹೌದು. ಯಾರು ಏನೇ ಹೇಳಿದರೂ ಅಲ್ಲಗಳೆಯಲಾಗದ ಆಡಳಿತ ವಿರೋಧಿ ಅಲೆಯ ಜೊತೆಗೆ ಸಿದ್ದರಾಮಯ್ಯ ಅವರ ಹಾವಭಾವ, ಒರಟುತನ(ಅರೋಗೆನ್ಸ್)ಗಳೆಲ್ಲ ಚುನಾವಣೆಯಲ್ಲಿ ಪರಿಣಾಮ ಬೀರದೆ ಇರಲು ಸಾಧ್ಯವಿಲ್ಲ.

ಎಲ್ಲಕ್ಕಿಂತ ಮುಖ್ಯವಾಗುವುದು ಮುಂದಿನ ಎರಡು ತಿಂಗಳ ಅವಧಿ. ಟಿಕೆಟ್ ಹಂಚಿಕೆಯಿಂದ ಹಿಡಿದು ನಾಯಕರಾಡುವ ಮಾತು, ಉಂಟಾಗುವ ವಿವಾದಗಳು, ಚರ್ಚೆಗೆ ಬರುವ ವಿಷಯಗಳೆಲ್ಲವೂ ನಿರ್ಣಾಯಕ ಆಗುತ್ತವೆ. ಅವನ್ನು ಪಕ್ಷಗಳ ನೇತೃತ್ವ ವಹಿಸಿಕೊಂಡವರು ಅರ್ಥ ಮಾಡಿಕೊಳ್ಳಬೇಕಷ್ಟೆ.

ಉದಾಹರಣೆಗೆ ಹೇಳುವುದಾದರೆ ಎರಡು ದಿನದ ಹಿಂದೆ ಸಿಎಂ ಸಿದ್ದರಾಮಯ್ಯ ಆರೆಸ್ಸೆಸ್ ಮತ್ತು ಬಿಜೆಪಿ ಉಗ್ರಗಾಮಿ ಸಂಘಟನೆ ಎಂದು ಹೇಳಿದ್ದು ಕಾಂಗ್ರೆಸ್ ಹಿನ್ನಡೆಗೆ ಕಾರಣವಾದರೆ ಅಚ್ಚರಿಯಿಲ್ಲ. ಆರೆಸ್ಸೆಸ್ಸನ್ನು ಈ ಹಿಂದೆ ಪಂಡಿತ್ ನೆಹರು ಗಣರಾಜ್ಯೋತ್ಸವ ಪರೇಡಿಗೆ ಆಹ್ವಾನಿಸಿದ್ದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ? ಆರೆಸ್ಸೆಸ್ ಬಗ್ಗೆ ಗಾಂಧೀಜಿ, ಅಂಬೇಡ್ಕರ್ ಇವರೆಲ್ಲ ಮೆಚ್ಚುಗೆ ಮಾತನಾಡಿದ್ದು ತಿಳಿಯದ ಸಂಗತಿಯೆ? ಸ್ವತಃ ಸಿದ್ದರಾಮಯ್ಯ ಅವರ ರಾಜಕೀಯ ಗುರು ದಿ.ರಾಮಕೃಷ್ಣ ಹೆಗಡೆ ‘ಆರೆಸ್ಸೆಸ್ ನಿಷೇಧ ಮಾಡುವುದು ಮೂರ್ಖತನದ ವಿಚಾರ, ಅಂಥ ಸಂಘಟನೆ ದೇಶಕ್ಕೆ ಬೇಕು’ ಎಂದು ಖಡಾಖಂಡಿತವಾಗಿ ಹೇಳಿದ್ದು ಸಿದ್ದರಾಮಯ್ಯನವರಿಗೆ ಮರೆತುಹೋಯಿತೆ? ಜನಾದೇಶದ ಮೂಲಕ ಭಾರತ ಸರ್ಕಾರದ ಚುಕ್ಕಾಣಿ ಹಿಡಿದಿರುವ, ಹತ್ತೊಂಭತ್ತು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಒಂದು ಅತಿದೊಡ್ಡ ರಾಷ್ಟ್ರೀಯ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಜವಾಬ್ದಾರಿ ಸ್ಥಾನದಲ್ಲಿರುವವರು ಹೇಳಬಹುದೇ?

ರಾಜಕೀಯದ ಆವೇಶದಲ್ಲಿ ಹೇಳಬಾರದ್ದನ್ನು ಹೇಳಿದರೆ ಏನಾಗುತ್ತದೆ ಎಂಬುದಕ್ಕೆ ಗುಜರಾತ್ ಚುನಾವಣೆ ಹಿಂದಿನ ದಿನ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಮೋದಿ ಕುರಿತು ಹೀನಾಯವಾಗಿ ಆಡಿದ ಮಾತು, ಅದು ಉಂಟುಮಾಡಿದ ಪರಿಣಾಮ ಇತ್ಯಾದಿಗಳನ್ನೆಲ್ಲ ನೆನಪಿನಲ್ಲಿಟ್ಟುಕೊಳ್ಳಬೇಕಲ್ಲವೇ?

ಇವನ್ನೆಲ್ಲ ಗಮನಿಸಿದರೆ ಇನ್ನೆರಡು ತಿಂಗಳಲ್ಲಿ ರಾಜ್ಯರಾಜಕಾರಣದ ದಿಕ್ಕೇ ಸಂಪೂರ್ಣವಾಗಿ ಬದಲಾಗಿ ಹೋದರೆ ಆಶ್ಚರ್ಯ ಇಲ್ಲ ಅಲ್ಲವೇ?

ಕೊನೇ ಹನಿ: ನಾಯಕರಾಡುವ ಒಂದೊಂದು ಮಾತು, ಮಾಡುವ ಕಾರ್ಯ ಎಲ್ಲವನ್ನೂ ತಲೆ ಕೆಳಗು ಮಾಡಬಹುದು. ಏಕೆಂದರೆ ಇದು ಮಾಹಿತಿ ಯುಗ!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top