ಸರಿ-ತಪ್ಪುಗಳು ಕಾಲ ಬದಲಾದಂತೆ ಬದಲಾಗುವುದಿಲ್ಲ. ನ್ಯಾಯ-ಅನ್ಯಾಯಗಳು ಕೂಡ ಅದೇ ರೀತಿ. ಜೀವನದ ಮೌಲ್ಯಗಳೂ ಅಷ್ಟೇ. ಹಾಗೇನೆ ತಾನು ಏಟು ತಿಂದಾಗ ನೋವಾಯಿತು ಎಂದು ಅಳುವವರು ತಾವು ಬೇರೆಯವರಿಗೆ ಏಟು ಕೊಟ್ಟಾಗಲೂ ಅದೇ ರೀತಿ ನೋವಾಗುತ್ತದೆ ಎಂದು ತಿಳಿದುಕೊಳ್ಳಬೇಕಲ್ಲವೇ?
ಅಹಮದ್ ಪಟೇಲ್ ವಿಚಾರಕ್ಕೆ ಆಮೇಲೆ ಬರೋಣ. ಅದಕ್ಕಿಂತ ಮೊದಲು ಇಬ್ಬರು ವ್ಯಕ್ತಿಗಳ ಜಾತಕವನ್ನು ಒಮ್ಮೆ ಪರಿಶೀಲಿಸುವುದು ಉತ್ತಮ. ಒಬ್ಬಾಕೆ ಇಷ್ರತ್ ಜಹಾನ್. ಮತ್ತೊಬ್ಬಾತ ಸೊಹ್ರಾಬುದ್ದೀನ್ ಶೇಖ್. ಈ ಇಬ್ಬರೂ ಗುಜರಾತ್ ಮತ್ತು ರಾಜಸ್ಥಾನ ಪೊಲೀಸರ ಗುಂಡಿಗೆ ಸಾವನ್ನಪ್ಪಿದವರು. ಇವರ ಸಾವಿನ ಕುರಿತು ಎದ್ದ ಬೊಬ್ಬೆ ಮಾತ್ರ ಗುಂಡಿನ ಸದ್ದಿಗಿಂತಲೂ ಕರ್ಣಕಠೋರ!
ಈಗ ಅದೆಲ್ಲವೂ ಇತಿಹಾಸದ ಭಾಗ ಅನ್ನಿ.
ಇಷ್ರತ್ ಜಹಾನ್: ಆಕೆಯ ಹುಟ್ಟು ಮತ್ತು ಬೆಳವಣಿಗೆಯ ಕತೆ ಬೇರೇನೆ ಇದೆ. ಅದರ ಬಗ್ಗೆ ಈ ಸಂದರ್ಭದಲ್ಲಿ ಹೆಚ್ಚು ವಿವರ ಬೇಕಿಲ್ಲ. ಮುಖ್ಯವಾಗಿ ಆಕೆ ಮುಂಬೈ ಹೊರವಲಯದ ಮುಂಬ್ರಾ ಪ್ರದೇಶದಲ್ಲಿ ತಾಯಿ ಸಾಜಿದಾ ಶೇಖ್ ಜೊತೆ ವಾಸವಾಗಿದ್ದಳು. ಬಿಎಸ್ಸಿ ಓದುತ್ತಿದ್ದಳು, ಶಾಲಾ ಮಕ್ಕಳಿಗೆ ಟ್ಯೂಶನ್ ಹೇಳಿಕೊಡುತ್ತ ಉಪಜೀವನ ನಡೆಸುತ್ತಿದ್ದಳು ಎಂಬುದು ಹೊರ ಜಗತ್ತಿಗೆ ಗೊತ್ತಿರುವ ವಿಚಾರ. ಆದರೆ ಅದೇ ಇಷ್ರತ್ ಜಹಾನ್ ಲಷ್ಕರ್ ಎ-ತೊಯ್ಬಾದ ಮಹಿಳಾ ವಿಭಾಗದ ಕಮಾಂಡರ್ ಆಗಿದ್ದಳು ಎಂಬುದು ಗುಜರಾತ್, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾತ್ರ ಗೊತ್ತಿರುವ ವಿಷಯವಾಗಿತ್ತು.
ಇಷ್ರತ್ ಮುಂಬೈನ ಮುಂಬ್ರಾಪ್ರದೇಶದಿಂದ ಅಹಮದಾಬಾದ್ ಹೊರವಲಯ ತಲುಪಿದ್ದು ಹೇಗೆ ಮತ್ತು ಏಕೆ ಎಂಬುದನ್ನು ಕೇಳಿಕೊಂಡರೆ ಆಕೆಯ ಬಾಕಿ ವೃತ್ತಾಂತವೆಲ್ಲ ತೆರೆದುಕೊಳ್ಳುತ್ತ ಹೋಗುತ್ತದೆ. ಇಷ್ರತ್ ಮುಂಬ್ರಾದಿಂದ ಹೊರಟು 2004ರ ಜೂನ್ 15ರ ಬೆಳಗಿನ ಜಾವ ಅಹಮದಾಬಾದ್ ಹೊರವಲಯ ತಲುಪಿದ್ದು ಲಷ್ಕರ್ ಎ-ತೊಯ್ಬಾದ ನಿರ್ದೇಶನದ ಮೇರೆಗೆ. ಗುರಿ ಏನು? ಆಗ ಗುಜರಾತದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹತ್ಯೆಗೆ ವ್ಯವಸ್ಥಿತ ಸಂಚು ರೂಪಿಸುವುದು. ಆ ಉದ್ದೇಶ ಈಡೇರಿಕೆಗಾಗಿ ಆಕೆ ಮಾನವ ಬಾಂಬರ್ ಆಗಲೂ ಅಣಿಯಾಗಿದ್ದಳು ಎಂಬುದು ಪಾಕ್ ಅಮೆರಿಕ ಪ್ರಜೆ, ಭಯೋತ್ಪಾದಕ ಡೇವಿಡ್ ಹೆಡ್ಲಿ ವಿಚಾರಣೆ ವೇಳೆ ಬಾಯಿಬಿಟ್ಟ ಸತ್ಯ. ಆಕೆ ಎನ್ಕೌಂಟರ್ ಆಗುವ ದಿನ ಜೊತೆಗಿದ್ದವರು ಯಾರು? ಜಾವೇದ್ ಶೇಖ್. ಈತನ ಮೂಲ ಹೆಸರು ಪ್ರಾಣೇಶ ಪಿಳ್ಳೈ ಅಂತ. ಈತ ಲವ್ ಜಿಹಾದ್ನ ಪಾಶಕ್ಕೆ ಸಿಲುಕಿ ಮತಾಂತರಗೊಂಡ ಕೇರಳದ ಆಲಪ್ಪುಳ ಜಿಲ್ಲೆಯ ನಿವಾಸಿ. ವಿವಾಹದ ನಂತರ ಅದೂ ಇದು ವ್ಯಾಪಾರ ನಡೆಸಿ ನಷ್ಟ ಅನುಭವಿಸಿ ಕೊನೆಗೆ ಲಷ್ಕರ್ ಉಗ್ರಗಾಮಿ ಸಂಘಟನೆಗೇ ನೇರವಾಗಿ ಸೇರಿಕೊಂಡಿದ್ದ. ಉಳಿಕೆ ಸಹಚರರು ಝೀಶನ್ ಜೋಹರ್ ಮತ್ತು ಅಮ್ಜದ್ ಅಲಿ ರಾಣಾ. ಇವರೂ ಗುಜರಾತ್ ಮತ್ತು ಮಹಾರಾಷ್ಟ್ರ ಪೊಲೀಸರು ನಡೆಸಿದ ಎನ್ಕೌಂಟರಿನಲ್ಲಿ ಹೆಣವಾದರು. ಎನ್ಕೌಂಟರ್ ನಡೆದಾಗ ಈ ನಾಲ್ವರ ಬಳಿ ಸಿಕ್ಕಿದ್ದೇನು? ಎಕೆ-47 ರೈಫಲ್, ಜಿಹಾದಿ ಕರಪತ್ರ, ಜಿಹಾದಿ ಸಂಘಟನೆಗಳ ಜೊತೆಗೆ ನಂಟು ದೃಢೀಕರಿಸುವ ಪರಿಕರಗಳು. ಇಷ್ಟು ಮಾತ್ರವಲ್ಲ ಇಷ್ರತ್ ಲಷ್ಕರ್ ಜೊತೆಗೆ ನೇರ ಸಂಬಂಧ ಹೊಂದಿರುವುದಕ್ಕೆ ಇನ್ನೂ ಎರಡು ಪ್ರಮುಖ ಪುರಾವೆಗಳು ಸಿಗುತ್ತವೆ. ಇಷ್ರತ್ ಎನ್ಕೌಂಟರ್ ಆದ ಮರುಕ್ಷಣದಲ್ಲಿ ಲಷ್ಕರ್ ಸಂಘಟನೆಯ ಮುಖವಾಣಿ ಲಾಹೋರ್ ಮೂಲದ ಘಾಜ್ವಾ ಟೈಮ್ಸ್ ಹೀಗೆ ವರದಿ ಮಾಡುತ್ತದೆ: ‘ಭಾರತದ ಪೊಲೀಸರು ನಮ್ಮ ಭರವಸೆ ಆಗಿದ್ದ ಇಷ್ರತ್ ಜಹಾನಳನ್ನು ಆಕೆಯ ಪತಿಯೂ ಸೇರಿ ಮೂವರು ಸಹಚರರೊಂದಿಗೆ ಹತ್ಯೆ ಮಾಡಿದ್ದಾರೆ. ಇಷ್ರತ್ ಸಾವು ವ್ಯರ್ಥವಾಗುವುದಿಲ್ಲ, ಆಕೆ ಕುಟುಂಬದ ರಕ್ಷಣೆಗೆ ನಾವಿದ್ದೇವೆ.’ ಅಷ್ಟೇ ಅಲ್ಲ, ಈ ವಿಚಾರವಾಗಿ ಜಮಾತ್ ಉದ್-ದಾವಾದಲ್ಲಿ ಆಕೆಯ ಕುಟುಂಬಕ್ಕೆ ಲಷ್ಕರ್ ಸಂಘಟನೆಯ ಮುಖ್ಯಸ್ಥರು ಕೇಳಿದ ಕ್ಷಮಾಪಣೆ ಪತ್ರವೂ ಪ್ರಕಟವಾಗುತ್ತದೆ. ಇಷ್ರತ್ ಜಹಾನ್ ಲಷ್ಕರ್ನ ಸಕ್ರಿಯ ಸದಸ್ಯೆ ಎನ್ನುವುದಕ್ಕೆ ಇನ್ನೂ ಪುರಾವೆಗಳು ಬೇಕಾ? ಇಷ್ಟಿದ್ದರೂ ಆಕೆ ಅಮಾಯಕಿ ಎಂದು ಭಾಷಣ ಮಾಡಿದರು. ಎನ್ಕೌಂಟರ್ ನಡೆಯುವಾಗ ಗುಜರಾತಲ್ಲಿ ಅಧಿಕಾರದಲ್ಲಿದ್ದ ಮೋದಿ ಮತ್ತು ಷಾ ರಾಜೀನಾಮೆ ಕೊಡಿಸಿ ಜೈಲಿಗೆ ಕಳಿಸಲೇಬೇಕು ಎಂದು ತಮ್ಮದೇ ಯುಪಿಎ ಸರ್ಕಾರದ ಮೂಲಕ ಪಣ ತೊಟ್ಟಿದ್ದರು ಅಹಮದ್ ಪಟೇಲ್ ಸಾಹೇಬರು!
ಸೊಹ್ರಾಬುದ್ದೀನ್ ಶೇಖ್: ಈತ ಹುಟ್ಟಾ ಕ್ರಿಮಿನಲ್. ಈತನ ಎನ್ಕೌಂಟರ್ ಆದಾಗ ಕೊಲೆ, ಸುಲಿಗೆ, ಹಫ್ತಾ ವಸೂಲಿ ಸೇರಿದಂತೆ ಅರವತ್ತಕ್ಕೂ ಹೆಚ್ಚು ಪ್ರಕರಣಗಳು ಮಧ್ಯಪ್ರದೇಶ, ರಾಜಸ್ಥಾನದಲ್ಲಿ ವಿಚಾರಣೆಗೆ ಬಾಕಿ ಇದ್ದವು. ಗುರುತರ ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನದ ಜರಾನಿಯ ಮನೆಯ ಮೇಲೆ ಪೊಲೀಸರು ದಾಳಿ ಮಾಡಿದಾಗ 40 ಎಕೆ- 47 ರೈಫಲ್ಗಳು ಸಿಕ್ಕಿದ್ದವು. ಒಂದೋ ಎರಡೋ ಆದರೆ ಆತ ಸ್ವರಕ್ಷಣೆಗಾಗಿ ಇಟ್ಟುಕೊಂಡಿದ್ದ ಅಂತ ಯಾರಾದರೂ ವಕಾಲತ್ತು ಮಾಡಬಹುದು. ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ರೈಫಲ್ಗಳನ್ನು ಸಂಗ್ರಹಿಸಿದ್ದರೆ ಅದು ಭಯೋತ್ಪಾದನೆ ಕೃತ್ಯಕ್ಕೆಂದೇ ಸಂಗ್ರಹಿಸಿಟ್ಟಿದ್ದಿರಬೇಕಲ್ಲವೇ?
ಭೂಗತ ಪಾತಕಿ ಮತ್ತು ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ದಾವೂದ್ ಇಬ್ರಾಹಿಂನ ಬಂಟರಾದ ಷರೀಫ್ ಖಾನ್ ಪಠಾಣ್ ಅಲಿಯಾಸ್ ಚೋಟಾ ದಾವೂದ್ ಮತ್ತು ಅಬ್ದುಲ್ ಲತೀಫ್, ರಸೂಲ್ ಪತ್ರಿ ಮುಂತಾದವರ ಸಹವರ್ತಿಯಾಗಿಯೂ ಈತ ಕೆಲಸ ಮಾಡುತ್ತಿದ್ದ. ಪೊಲೀಸರು ಬೆನ್ನಟ್ಟಿದಾಗ ರಾಜಸ್ಥಾನದಿಂದ ತೆಲಂಗಾಣಕ್ಕೆ ಪರಾರಿಯಾಗಿದ್ದ. ಈತನನ್ನು ಗುಜರಾತ್ ಎಟಿಎಸ್ (ಭಯೋತ್ಪಾದನೆ ನಿಗ್ರಹ ದಳ) ಪೊಲೀಸರು ಹೈದರಾಬಾದ್ನಲ್ಲಿ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಮುಂದಾದಾಗ ಹಾರಿಸಿದ ಗುಂಡು ತಗುಲಿ ಸೊಹ್ರಾಬುದ್ದೀನ್ ಶೇಖ್ ಪ್ರಾಣಬಿಡುತ್ತಾನೆ. ಇದನ್ನೆಲ್ಲವನ್ನೂ ಡಿಐಜಿ ಡಿ.ಜಿ.ವಂಜಾರ ವಿಚಾರಣೆ ವೇಳೆ ನ್ಯಾಯಾಲಯದಲ್ಲೇ ಹೇಳಿದ್ದರು. ಇಷ್ಟೆಲ್ಲ ಗೊತ್ತಿದ್ದೂ ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ನಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ, ಆತನ ಸಾವಿಗೆ ನ್ಯಾಯ ಕೊಡಿಸುತ್ತೇನೆಂದು ಶಪಥ ಮಾಡುತ್ತಾರೆ.
ಶಪಥ ಮಾಡಿದಂತೆಯೇ ನಡೆದುಕೊಂಡರು. ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿ ಗುಜರಾತ್ ಮತ್ತು ರಾಜಸ್ಥಾನದ ಒಂಭತ್ತು ಮಂದಿ ಪೊಲೀಸ್ ಅಧಿಕಾರಿಗಳು, ರಾಜಸ್ಥಾನ ಗೃಹ ಸಚಿವರಾಗಿದ್ದ ಗುಲಾಬಿ ಸಿಂಗ್ ಮತ್ತು ಗುಜರಾತಿನ ಆಗಿನ ಗೃಹ ಸಚಿವರಾಗಿದ್ದ ಅಮಿತ್ ಷಾ ವಿರುದ್ಧ ಪ್ರಕರಣ ದಾಖಲಾಗುತ್ತದೆ. 2010ರಲ್ಲಿ ಅಮಿತ್ ಷಾ ಬಂಧನವಾಗುತ್ತದೆ. ಸಚಿವ ಸ್ಥಾನ ಕಳೆದುಕೊಳ್ಳುತ್ತಾರೆ. ವಿಶೇಷ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂಕೋಟ್ ಎಲ್ಲೆಡೆ ಇವರು ನಿರಪರಾಧಿಗಳು, ಸೊಹ್ರಾಬುದ್ದೀನ್ ಎನ್ಕೌಂಟರ್ ಹಿಂದೆ ಷಡ್ಯಂತ್ರ ಇಲ್ಲ ಎಂದಾದರೂ, ಯುಪಿಎ ಸರ್ಕಾರ ಈ ಪ್ರಕರಣವನ್ನು ಎಸ್ಐಟಿ(ವಿಶೇಷ ತನಿಖಾ ದಳ) ಗೆ ವಹಿಸಿ ಷಾ ಜೈಲು ಸೇರುವ ಹಾಗೆ ನೋಡಿಕೊಳ್ಳುತ್ತದೆ.
ನಮಗೆ ಅಮಿತ್ ಷಾ ಅಥವಾ ಮೋದಿಗಿಂತಲೂ ಹೆಚ್ಚಾಗಿ ದೆಹಲಿ ರಾಜಕಾರಣದ ಕುತಂತ್ರಕ್ಕೆ ಬಲಿಯಾದ ಅಮಾಯಕ ಪೊಲೀಸ್ ಅಧಿಕಾರಿಗಳನ್ನು ನೋಡಿದರೆ ಮರುಕ ಹುಟ್ಟುತ್ತದೆ. ಡಿಜಿ ವಂಜಾರಾ ಅವರಂತಹ ದಕ್ಷ ಪೊಲೀಸ್ ಅಧಿಕಾರಿ ತಮ್ಮ ಸೇವಾವಧಿಯ ಏಳೆಂಟು ವರ್ಷಗಳ ಅಮೂಲ್ಯ ಅವಧಿಯನ್ನು ಜೈಲಲ್ಲೇ ಕಳೆಯುವಂತಾಗುತ್ತದೆ. ಯುವ ಪೊಲೀಸ್ ಅಧಿಕಾರಿ ದಿನೇಶ್ ಕತೆಯನ್ನು ಎಲ್ಲರೂ ಕೇಳಿರುತ್ತೀರಿ. ಮೊನ್ನೆಯಷ್ಟೇ ಅವರಿಗೆ ಸುಪ್ರೀಂಕೋರ್ಟ್ನಲ್ಲಿ ಕ್ಲೀನ್ಚಿಟ್ ಸಿಕ್ಕಿದೆ. ಅವರ ಹನ್ನೊಂದು ವರ್ಷದ ಸೇವಾವಧಿ ಜೈಲಲ್ಲೇ ಮುಗಿದಿದೆ. ಈ ರೀತಿ ಒಂಭತ್ತಕ್ಕೂ ಹೆಚ್ಚು ಹಿರಿಯ ಪೊಲೀಸ್ ಅಧಿಕಾರಿಗಳು ಕಿರುಕುಳ, ಚಿತ್ರಹಿಂಸೆಯನ್ನು ಅನುಭವಿಸಿದರು. ಸಣ್ಣಪುಟ್ಟವರು ಪಟ್ಟ ಪಡಿಪಾಟಲು ಲೆಕ್ಕವಿಲ್ಲ. ಈ ಅಧಿಕಾರಿಗಳ ಮೇಲೆ ಇದ್ದ ಒಂದೇ ಒತ್ತಡ ಎಂದರೆ ಇಷ್ರತ್ ಜಹಾನ್ ಮತ್ತು ಸೊಹ್ರಾಬುದ್ದೀನ್ರನ್ನು ಷಾ ಮತ್ತು ಮೋದಿ ಆಣತಿಯಂತೆ ಎನ್ಕೌಂಟರ್ ಮಾಡಿದಿವಿ ಎಂದು ಹೇಳಿ ಅಷ್ಟು ಸಾಕು ಎಂಬುದು. ಗುಜರಾತ್ ಗುಪ್ತಚರ ದಳದ ವಿಶೇಷ ನಿರ್ದೇಶಕರಾಗಿದ್ದ ರಾಜಿಂದರ್ ಈ ಮಾತನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಇದೆಲ್ಲದರ ಹಿಂದೆ ಇದ್ದವರು ಬೇರೆ ಯಾರೂ ಅಲ್ಲ, ಸೋನಿಯಾ ಆಪ್ತ ಅಹಮದ್ ಪಟೇಲ್. ಇಷ್ಟೆಲ್ಲ ಮಾಡುವುದರ ಹಿಂದಿದ್ದುದು ಗುಜರಾತದಲ್ಲಿ ಅಲ್ಪಸಂಖ್ಯಾತ ಮತಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳುವ ಹುನ್ನಾರ ಎಂಬುದು ಎಂಥವನಿಗೂ ಅರ್ಥವಾಗುತ್ತದೆ. ದ್ವೇಷ ರಾಜಕಾರಣ, ಅಧಿಕಾರ ದುರುಪಯೋಗ ಇವೆಲ್ಲದರ ಪರಿಣಾಮ ಹೇಗೆಲ್ಲ ಇರುತ್ತದೆ ನೋಡಿ. ಅಷ್ಟು ಮಾತ್ರವಲ್ಲ, ಅದು ಆರಂಭವಾದದ್ದು ಎಲ್ಲಿಂದ ಎಂಬುದರ ಸ್ಪಷ್ಟ ಚಿತ್ರಣ ಕೂಡ ಸಿಗುತ್ತದೆ. ತುಸು ಏಮಾರಿದ್ದರೂ ಅಥವಾ ಈ ಅಪರಾಧ ಪ್ರಕರಣಗಳಲ್ಲಿ ಕಿಂಚಿತ್ ಶಾಮೀಲಾಗಿರುವ ಪುರಾವೆ ಸಿಕ್ಕಿದ್ದರೂ ಮೋದಿ ಇಂದು ಪ್ರಧಾನಿ ಆಗಿರುತ್ತಿರಲಿಲ್ಲ, ಷಾ ಪಕ್ಷದ ಅಧ್ಯಕ್ಷರಾಗಿರುತ್ತಿರಲಿಲ್ಲ. ಇಬ್ಬರೂ ಯಾವುದೋ ಜೈಲಲ್ಲಿ ಮುದ್ದೆ ಮುರಿಯಬೇಕಾಗುತ್ತಿತ್ತೇನೋ!
ಗುಜರಾತದಿಂದ ಮೂರು ರಾಜ್ಯಸಭಾ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಅವರು ಹಿಟ್ಲರ್, ಇವರು ರಾಜಕೀಯದ್ವೇಷಿ ಎಂಬ ಪದಪ್ರಯೋಗ ಆಗಿದ್ದನ್ನು ಕೇಳಿದ್ದೇವೆ. ಹೀಗಾಗಿ ಒಂದಿಷ್ಟು ಹಿನ್ನೆಲೆಯನ್ನು ಸಿಂಹಾವಲೋಕನ ಮಾಡಬೇಕಾಗಿ ಬಂತು. ಇನ್ನು ರಾಜ್ಯಸಭಾ ಚುನಾವಣೆಯಲ್ಲಿ ಆದ ತಪ್ಪು-ಒಪ್ಪುಗಳ ವಿಚಾರ. ಗುಜರಾತ್ ವಿಧಾನಸಭೆಯಲ್ಲಿ 120 ಮಂದಿ ಬಿಜೆಪಿ ಎಂಎಲ್ಎಗಳು ಇರುವುದರಿಂದ ಇಬ್ಬರು ರಾಜ್ಯಸಭೆಗೆ ಆಯ್ಕೆ ಆದ ಬಳಿಕವೂ ಮೂವತ್ತಕ್ಕೂ ಅಧಿಕ ಹೆಚ್ಚುವರಿ ಮತಗಳಿರುತ್ತಿದ್ದವು. ಹೀಗಾಗಿ ಮೂರನೇ ಅಭ್ಯರ್ಥಿ ಹಾಕಿರುವುದರಲ್ಲಿ ಯಾವುದೇ ಲೋಪ ಕಾಣಿಸುವುದಿಲ್ಲ. ಇನ್ನು ಕ್ರಾಸ್ ವೋಟಿಂಗ್ ವಿಚಾರ. ಯಾವುದೇ ರಾಜ್ಯದಿಂದ ರಾಜ್ಯಸಭೆಗೆ ಚುನಾವಣೆ ನಡೆಯಲಿ, ಅಧಿಕೃತ ಅಭ್ಯರ್ಥಿ ಆಯ್ಕೆ ಆಗಿ ಉಳಿಯುವ ಮತಗಳು ಧನಿಕ ಅಭ್ಯರ್ಥಿಗಳ ಪಾಲಾಗುವುದು ಇದೇ ಮೊದಲೂ ಅಲ್ಲ. ಕೊನೆಯೂ ಅಲ್ಲ. ಅಂಥ ಅನಿಷ್ಟ ಪರಂಪರೆ ಹಿಂದಿನಿಂದಲೂ ಇದೆ. ತೀರಾ ಇತ್ತೀಚಿನ ಉದಾಹರಣೆ ಬೇಕೆಂದರೆ ನಮ್ಮ ಕಾಲಬುಡದಲ್ಲೇ ಇದೆ. ವರ್ಷದ ಹಿಂದೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ನ ಎಂಟು ಮಂದಿ ಶಾಸಕರು ಸಂಖ್ಯಾಬಲ ಇಲ್ಲದೇ ಇದ್ದರೂ ಕಾಂಗ್ರೆಸ್ ಕಣಕ್ಕಿಳಿಸಿದ ಅಭ್ಯರ್ಥಿಗೆ ವೋಟ್ ಹಾಕಲಿಲ್ಲವೇ? ಶಾಸಕರ ಸದಸ್ಯತ್ವ ರದ್ದಾಯಿತೇ? ರಾಜ್ಯಸಭೆಗೆ ಆಯ್ಕೆ ಆಗಿದ್ದು ಅಸಿಂಧು ಆಯಿತೇ? ಇಲ್ಲವಲ್ಲ!
ರಾಜ್ಯಸಭಾ ಚುನಾವಣೆಯಲ್ಲಿ ಗೌಪ್ಯತಾ ನಿಯಮ ಎನ್ನುವುದಕ್ಕಿಂತ ಸಂಪ್ರದಾಯವಿದೆ. ಪಕ್ಷದ ಸಚೇತಕರಿಗೆ ಹೊರತುಪಡಿಸಿ ಬೇರೆಯವರಿಗೆ ಮತಪತ್ರ ತೋರಿಸಬಾರದು ಎಂಬ ರೂಢಿಯಿದೆ. ಕಾನೂನಲ್ಲ!
ಈ ರೂಢಿಯ ಪ್ರಕಾರ 2016ರಲ್ಲಿ ಹರಿಯಾಣ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ ನಡೆದಾಗ ಮತಪತ್ರವನ್ನು ಬಹಿರಂಗವಾಗಿ ಪ್ರದರ್ಶನ ಮಾಡಿದ ಕಾಂಗ್ರೆಸ್ ಶಾಸಕರ ಮತವನ್ನು ಚುನಾವಣಾ ಆಯೋಗ ಅಸಿಂಧುಗೊಳಿಸಿತ್ತು. ಆ ನಿದರ್ಶನ ಮುಂದಿಟ್ಟುಕೊಂಡು ಈಗಲೂ ಬಹಿರಂಗವಾಗಿ ಮತಪ್ರದರ್ಶನ ಮಾಡಿ ಬಿಜೆಪಿಗೆ ಮತ ಹಾಕಿದ ಇಬ್ಬರು ಕಾಂಗ್ರೆಸ್ ಶಾಸಕರ ಮತವನ್ನು ಅಸಿಂಧುಗೊಳಿಸಿ ಎಂಬ ವಾದವನ್ನು ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗ ಮುಂದಿಟ್ಟರು. ಅದನ್ನು ಒಪ್ಪಿಕೊಳ್ಳದೇ ಆಯೋಗಕ್ಕೆ ಬೇರೆ ವಿಧಿಯಿರಲಿಲ್ಲ. ಎರಡು ಮತಗಳು ಅಸಿಂಧು ಆದ ಬಳಿಕ ಇರುವ ಸದಸ್ಯರ ಲೆಕ್ಕಹಾಕಿದಾಗ ಗೆಲುವಿಗೆ ನಿಗದಿ ಆಗಿದ್ದ ಮತಕ್ಕಿಂತಲೂ ಒಂದು ಮತ ಕಡಿಮೆ ಪಡೆದರೂ ಅಹಮದ್ ಪಟೇಲ್ ತಾಂತ್ರಿಕವಾಗಿ ಗೆಲುವು ಪಡೆದರು. ಒಂದು ವೇಳೆ ಆ ಇಬ್ಬರು ಶಾಸಕರು ಮತಪ್ರದರ್ಶನ ಮಾಡದೇ ಹೋಗಿದ್ದರೆ ಅಹಮದ್ ಪಟೇಲ್ಗೆ ನಿಶ್ಚಿತವಾಗಿ ಎರಡು ಮತ ಕಡಿಮೆ ಆಗುತ್ತಿತ್ತು. ಬಿಜೆಪಿ ಅಭ್ಯರ್ಥಿಗೆ ಎರಡು ಮತ ಹೆಚ್ಚಾಗುತ್ತಿತ್ತು. ದ್ವಿತೀಯ ಪ್ರಾಶಸ್ಱದ ಮತಗಳ ಲೆಕ್ಕಾಚಾರದಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು ಕೂಡ. ಆಗಿದ್ದು ಇಷ್ಟೆ. ಮತ್ತೇನೂ ಇಲ್ಲ. ಉಳಿದಂತೆ ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ ಎನ್ನುವಾಗ ಖರೀದಿಗೆ ಬಿಕರಿ ಆಗುವ ಶಾಸಕರೂ ಇದ್ದಾರೆಂದರ್ಥವಲ್ಲವೆ? ಸಾಲು ಸಾಲು ವಲಸೆ ಆಗುತ್ತಿದೆ ಎಂದರೆ ತಾವಿರುವ ಪಕ್ಷದಲ್ಲಿ ಭರವಸೆ ಕಳೆದುಕೊಳ್ಳುತ್ತಿದ್ದಾರೆಂದೂ ಆಗುತ್ತದಲ್ಲವೇ?
ಕೊನೇ ಮಾತು: ದ್ವೇಷರಾಜಕಾರಣ/ಪ್ರಜಾತಂತ್ರ ವಿರೋಧಿ ನಡವಳಿಕೆಗಳು ಯಾವ ಪಕ್ಷಕ್ಕೂ ಶೋಭೆ ತರುವುದಿಲ್ಲ. ರಾತ್ರೋರಾತ್ರಿ ಐದು ಹತ್ತು ರಾಜ್ಯಗಳಲ್ಲಿ ಸರ್ಕಾರಗಳನ್ನು ಕಾರಣವಿಲ್ಲದೆ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿದ್ದು, ತುರ್ತು ಪರಿಸ್ಥಿತಿ ಹೇರಿದ್ದನ್ನೆಲ್ಲ ನೆನೆಸಿಕೊಂಡರೆ ಒಂದು ರಾಜ್ಯಸಭೆ ಚುನಾವಣೆಯಲ್ಲಿ ಒಂದಿಷ್ಟು ಶಾಸಕರನ್ನು ಅಲ್ಲಿಲ್ಲಿಗೆ ಓಡಾಡಿಸಿದ್ದು ಎಷ್ಟೋ ವಾಸಿ ಎನಿಸುತ್ತದೆ. ಹೌದೋ ಅಲ್ಲವೋ ಹೇಳಿ…
(ಲೇಖಕರು ‘ವಿಜಯವಾಣಿ’ ಸಂಪಾದಕರು)