ಗೋವಿನ ಮಹಿಮೆ ಅರಿಯದೆ ಗೊಣಗುವಿರೇಕೆ?

ವಾರ್ಷಿಕ ಅಂದಾಜು 22,250 ಕೋಟಿ ರೂ. ಮೌಲ್ಯದ ಗೋಮಾಂಸವನ್ನು ಭಾರತದಿಂದ ರಫ್ತು ಮಾಡಲಾಗುತ್ತಿದೆ. ಅದೇ ಗೋ ಸಂತತಿಯನ್ನು ರಕ್ಷಿಸಿದರೆ ಆರೋಗ್ಯ, ಕೃಷಿ, ಇಂಧನ ಇತ್ಯಾದಿಗಳಿಂದ ಹಲವು ಸಹಸ್ರ-ಲಕ್ಷ ಕೋಟಿ ರೂಪಾಯಿಗಳನ್ನು ಗಳಿಸಲು, ಉಳಿಸಲು ಸಾಧ್ಯವಿದೆ. ಆ ಬಗ್ಗೆ ಯೋಚನೆ ಮಾಡಲು ನಮ್ಮ ಸರ್ಕಾರಗಳಿಗೆ ಮನಸ್ಸಿಲ್ಲ, ವ್ಯವಧಾನವೂ ಇಲ್ಲ.

***

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉತ್ತರಪ್ರದೇಶದ ದಾದ್ರಿಯಲ್ಲಿ ಅಖ್ಲಾಕ್ ಎಂಬ ಮುಸ್ಲಿಂ ವ್ಯಕ್ತಿಯ ಹತ್ಯೆ ಸಂಬಂಧವಾಗಿ ಗೋಮಾಂಸ ಭಕ್ಷಣೆ ಕುರಿತು ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ದೇಶಾದ್ಯಂತ ತೆರಪಿಲ್ಲದೆ ಚರ್ಚೆ ನಡೆಯುತ್ತಿರುವುದು ಗೊತ್ತೇ ಇದೆ. ಅದೇ ಸಮಯಕ್ಕೆ ಸರಿಯಾಗಿ, ಈ ಹಿಂದೆ ಬಿಜೆಪಿ ಸರ್ಕಾರ ರಚಿಸಿದ್ದ ಗೋಸೇವಾ ಆಯೋಗವನ್ನು ರದ್ದು ಮಾಡುವ ತೀರ್ವನವನ್ನು ಕರ್ನಾಟಕ ಸರ್ಕಾರ ತೆಗೆದುಕೊಂಡಿದೆ. ಈ ಎರಡೂ ಘಟನೆಗಳ ನಡುವೆ ಒಂದು ಸಾಮ್ಯತೆಯಿದೆ. ಅದೆಂದರೆ ಎರಡೂ ಗೋಹತ್ಯೆಗೆ ಸಂಬಂಧಿಸಿದ್ದು ಮತ್ತು ಗೋ ಸಂರಕ್ಷಣೆ ಹಿತಾಸಕ್ತಿಗೆ ವಿರುದ್ಧವಾದದ್ದು. ಅಖ್ಲಾಕ್ ಹತ್ಯೆಯ ಹಿಂದೆ ಗೋಭಕ್ತರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದ್ದರೆ, ಗೋಸೇವಾ ಆಯೋಗ ಬಿಜೆಪಿ ಸರ್ಕಾರದ ಹಿಂದುತ್ವದ ಅಜೆಂಡಾ ಎಂಬುದಕ್ಕಾಗಿ ಕಾಂಗ್ರೆಸ್ ಸರ್ಕಾರ ಅದನ್ನು ರದ್ದುಗೊಳಿಸಿದೆ. ದಾದ್ರಿ ಘಟನೆ ವಿವಾದಕ್ಕೆ ತಿರುಗಿದೆ. ಗೋಸೇವಾ ಆಯೋಗ ರದ್ದತಿ ವಿವಾದದ ಸ್ವರೂಪ ಪಡೆದುಕೊಂಡಿಲ್ಲ. ಅಷ್ಟೇ ವ್ಯತ್ಯಾಸ.

ಎಷ್ಟು ವಿಚಿತ್ರ ನೋಡಿ. ಅಖ್ಲಾಕ್ ಹತ್ಯೆಗೆ ನಿಖರ ಕಾರಣ ಏನು, ಹತ್ಯೆ ಮಾಡಿದವರು ಯಾರು ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ಆದರೂ ಗೋಭಕ್ತರೇ ಆ ಘಟನೆಗೆ ಕಾರಣ, ಗೋಮಾಂಸ ತಿಂದರೆ ಏನು ತಪ್ಪು? ಹತ್ಯೆ ಹಿಂದೆ ಕೇಂದ್ರ ಸರ್ಕಾರದ ಕುಮ್ಮಕ್ಕಿದೆ- ಈ ತೆರನಾದ ವಾದವನ್ನು ಟೀಕಾಕಾರರು ಮುಂದಿಡುತ್ತಿದ್ದಾರೆ. ಈ ವಿಷಯದಲ್ಲಿ ದೇಶದ ಪ್ರಮುಖ ಮಾಧ್ಯಮಗಳೂ ಹೊರತಲ್ಲ. ಆದರೆ ಉತ್ತರ ಭಾರತದ ಖ್ಯಾತ ಹಿಂದಿ ದೈನಿಕವೊಂದು ತುಸು ಭಿನ್ನವಾದ ವರದಿ ಮಾಡಿತು. ‘ಮೂಲತಃ ಅಖ್ಲಾಕನ ನಡವಳಿಕೆ ಕುರಿತು ಸ್ಥಳೀಯ ಮುಸ್ಲಿಂ ಸಮುದಾಯದಲ್ಲೇ ಸಾಕಷ್ಟು ಬೇಸರವಿತ್ತು. ಅದಕ್ಕೆ ಕಾರಣವಾದದ್ದು ಆತ ಹೊಂದಿದ್ದ ಪಾಕಿಸ್ತಾನ ಪರವಾದ ನಿಲುವು. ಒಂದು ವರ್ಷದ ಹಿಂದೆ ಆತ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದ ಕೂಡ. ಆ ಲಾಗಾಯ್ತಿನಿಂದಲೂ ಆತನ ವಿರುದ್ಧ ಸ್ಥಳೀಯ ಮುಸ್ಲಿಂ ಮುಖಂಡರಲ್ಲೇ ಆಕ್ರೋಶವಿತ್ತು. ಅಖ್ಲಾಕ್ ಹೊಂದಿದ್ದ ಪಾಕಿಸ್ತಾನದ ಪರ ನಿಲುವೇ ಆತನ ಹತ್ಯೆಗೆ ಕಾರಣ ಆಗಿರಲೂ ಸಾಕು’ ಎಂಬುದು ಆ ಪತ್ರಿಕಾ ವರದಿಯ ಸಾರಾಂಶ. ಅದು ಸತ್ಯ ಇರಬಹುದು, ಇಲ್ಲದೆಯೂ ಇರಬಹುದು. ತನಿಖೆಯಿಂದ ಗೊತ್ತಾಗಬೇಕಷ್ಟೆ. ಇಲ್ಲೊಂದು ವಿಚಾರ ಸ್ಪಷ್ಟ, ವಿಚಾರ ಮತ್ತು ವಿವಾದ ಏನೇ ಇದ್ದರೂ ಹತ್ಯೆ ಅದಕ್ಕೆ ಪರಿಹಾರ ಅಲ್ಲವೇ ಅಲ್ಲ. ಹಂತಕರು ಯಾರೇ ಆದರೂ ಹುಡುಕಿ ಶಿಕ್ಷಿಸಲೇಬೇಕು. ಆದರೆ ಇಲ್ಲಿ ಉದ್ಭವವಾಗುವ ಮುಖ್ಯ ಪ್ರಶ್ನೆ ಏನೆಂದರೆ ಗೋಮಾಂಸ ತಿನ್ನುವುದರ ಪರವಾದ ಧ್ವನಿ ಏಕೆ ಗಟ್ಟಿ ಆಯಿತು? ಒಂದು ಹತ್ಯೆಯ ಸಂದರ್ಭದಲ್ಲಿ, ಪರೋಪಕಾರಿ ಪ್ರಾಣಿಯಾದ ಗೋವಿನ ಮಾಂಸಭಕ್ಷಣೆಯನ್ನೇಕೆ ಎಳೆದು ತರಲಾಗುತ್ತಿದೆ ಎಂಬುದು. ಅಖ್ಲಾಕನ ಹತ್ಯೆಯ ಟೀಕಾಕಾರರ ವಾಗ್ಬಾಣ ಗೋವಂಶದ ಮೇಲೆ ಮತ್ತು ಗೋಭಕ್ತರ ಕಡೆಗೇಕೆ ತಿರುಗುತ್ತಿದೆ ಎಂಬುದು ನಿಜಕ್ಕೂ ಅಚ್ಚರಿ ತರುವಂಥದು.

ಭಾರತದ ಸಂದರ್ಭದಲ್ಲಿ ಗೋವಿಗೆ ಜಾತಿ, ಧರ್ಮ, ಪಂಥಗಳ ಗೋಡೆ, ಗೊಡವೆ ಯಾಕೆ ಎಂಬುದು ಮೂಲಭೂತ ವಿಚಾರ. ದೇಶದ ಆರ್ಥಿಕತೆ, ಆಹಾರ ಮತ್ತು ಜೀವನೋಪಾಯದ ಮೂಲವೇ ಕೃಷಿ. ಶೇ.90ರಷ್ಟು ಕೃಷಿಗೆ ಗೋ ಸಂತತಿಯೇ ಆಧಾರ. ಅದಕ್ಕಿಂತ ಮುಖ್ಯವಾಗಿ ಒಂದು ಅಂಕಿಅಂಶದ ಪ್ರಕಾರ ದೇಶದಲ್ಲಿ ಐದು ಎಕರೆಗಿಂತ ಕಡಿಮೆ ಹಿಡುವಳಿ ಹೊಂದಿರುವ ಸಣ್ಣ ರೈತರೇ ಶೇ.70ಕ್ಕಿಂತ ಹೆಚ್ಚಿದ್ದಾರೆ. ಈ ಸನ್ನಿವೇಶದಲ್ಲಿ ಮುಂದುವರಿದ ದೇಶಗಳಲ್ಲಿ ಅನುಸರಿಸುವ ಯಾಂತ್ರಿಕ ಕೃಷಿಗಿಂತಲೂ, ಗೋ ಆಧರಿತ ಕೃಷಿಯೇ ಹೆಚ್ಚು ಲಾಭದಾಯಕ ಮತ್ತು ಅನುಕೂಲಕರ.

ಇದು ಅನ್ನದ ವಿಚಾರ ಆಯಿತು. ಆರೋಗ್ಯ, ಆರ್ಥಿಕತೆ ಮತ್ತು ಪರಿಸರದ ದೃಷ್ಟಿಯಿಂದಲೂ ಗೋವಿನಿಂದಾಗುವ ಅನುಕೂಲ ಅಗಣಿತವಾದದ್ದು. ಅದ್ಹೇಗೆ ಅಂತೀರಾ?

ಗೋವಿನ ದೇಹರಚನೆಯೇ ವಿಶಿಷ್ಟ. ಅದರ ಗೊರಸಿನಿಂದ ಹಿಡಿದು ಎಲುಬು, ರೋಮ, ಸಗಣಿ, ಮೂತ್ರ ಎಲ್ಲವೂ ಮನುಷ್ಯನಿಗೆ ಉಪಕಾರಿಯೇ. ಹಾಗೆ ನೋಡಿದರೆ ಗೋವಿನ ಮಾಂಸವೇ ಅಪಾಯಕಾರಿ. ಮುಖ್ಯವಾದ್ದು ಗೋವಿನ ಬೆನ್ನೆಲುಬಿನಲ್ಲಿದೆ ಎನ್ನಲಾಗುವ ಸೂರ್ಯನಾಡಿ. ಈ ಸೂರ್ಯನಾಡಿಯ ಮುಖೇನ ಗೋವು ಸೂರ್ಯ ಕಿರಣವನ್ನು ಹೀರಿ ಸುವರ್ಣಕ್ಷಾರ (ಬ್ಯಾಕ್ಟೀರಿಯಾ ನಿರೋಧಕ ಶಕ್ತಿ)ವನ್ನು ತಯಾರಿಸುತ್ತದೆ. ಇದೇ ಸುವರ್ಣಕ್ಷಾರ ಗೋವಿನ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಗೋಮೂತ್ರ, ಗೋಮಯದಲ್ಲಿರುತ್ತದೆ. ತಾಯಿಯ ಎದೆಹಾಲನ್ನು ಬಿಟ್ಟರೆ ಈ ಸುವರ್ಣಕ್ಷಾರ ಹೊಂದಿರುವ ಮತ್ತೊಂದು ಜೀವಿ ಗೋಮಾತೆ ಎನ್ನುತ್ತಾರೆ ತಜ್ಞರು. ಗೋವಿನ ಮತ್ತು ಎಮ್ಮೆಯ ಹಾಲಿನ ನಡುವಿನ ಬಣ್ಣದ ವ್ಯತ್ಯಾಸಕ್ಕೆ ಈ ಸೂರ್ಯನಾಡಿಯೇ ಕಾರಣ ಎನ್ನಲಾಗುತ್ತದೆ.

ಇನ್ನು ಗೋಮೂತ್ರದ ವಿಚಾರ. ಆ ಬಗ್ಗೆ ಸುಮಾರು 3,500 ವರ್ಷಗಳ ಹಿಂದೆಯೇ ‘ಬಾಗಬಟ್ಟ’ ಎಂಬುವವರು ವಿವರಿಸಿದ್ದಾರೆ. ಸುಶ್ರುತ ಸಂಹಿತೆ, ಚರಕ ಸಂಹಿತೆ, ಅಷ್ಟಾಂಗ ಸಂಗ್ರಹ, ರಾಜ ನಿಘಂಟು, ಅಮೃತ ಸಾಗರ ಮುಂತಾದ ಗ್ರಂಥಗಳಲ್ಲಿ ಈ ಕುರಿತು ವಿವರಿಸಲಾಗಿದೆ ಕೂಡ.

ಗೋಮೂತ್ರಕ್ಕೆ ಭಾರತೀಯ ಚಿಕಿತ್ಸಾ ವಿಧಾನದಲ್ಲಿ ವಿಶಿಷ್ಟವಾದ ಸ್ಥಾನವಿದೆ. ರಸಾಯನ ಶಾಸ್ತ್ರದ ಪ್ರಕಾರ ಗೋಮೂತ್ರದಲ್ಲಿ 22 ಅತ್ಯುತ್ತಮವಾದ ಔಷಧೀಯ ಸತ್ವಗಳಿವೆ. ಇದು ಸರ್ವರೋಗ ಪರಿಹಾರಿ. ಗೋಮೂತ್ರದಲ್ಲಿರುವ ನೈಟ್ರೋಜನ್, ಯೂರಿಯಾ, ಅಮೋನಿಯಾ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ. ಇದರಲ್ಲಿ ಯೂರಿಕ್ ಆಮ್ಲವು ಪ್ರಾಕೃತಿಕವಾಗಿರುವುದರಿಂದ ಶರೀರದ ಸಮತೋಲನವನ್ನು ಕಾಪಾಡುತ್ತದೆ. ಗೋಮೂತ್ರದಲ್ಲಿರುವ ಅಮೋನಿಯಾ ರಕ್ತಪರಿಶುದ್ಧತೆಯನ್ನು ವೃದ್ಧಿಸುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಪರಿಣತ ವೈದ್ಯರೂ ಅದನ್ನೇ ಹೇಳುತ್ತಾರೆ.

ಗೋಮೂತ್ರದಲ್ಲಿ ಮನುಷ್ಯ ದೇಹಕ್ಕೆ ಅನುಕೂಲಕರವಾದ 35ಕ್ಕೂ ಹೆಚ್ಚು ರಾಸಾಯನಿಕಗಳು ಇರುವುದನ್ನು ಇತ್ತೀಚೆಗೆ ಆರೋಗ್ಯ ವಿಜ್ಞಾನಿಗಳು ಗುರುತಿಸಿದ್ದಾರೆ. ಉದಾಹರಣೆಗೆ ಒಂದು ಲೀಟರ್ ಗೋಮೂತ್ರದಲ್ಲಿ 20ರಿಂದ 60 ಮಿಲಿ ಲೀಟರ್ ಎಲೈಂಟೈನ್, 0.10ರಿಂದ 1.40 ಮಿಲಿ ಗ್ರಾಂ ಕ್ಯಾಲ್ಸಿಯಂ, 0.10ರಿಂದ 1.1 ಮಿಲಿ ಇ.ಕ್ಲೋರೈಡ್ ಐಯಾನ್​ಗಳು, 15ರಿಂದ 20 ಮಿಲಿ ಗ್ರಾಂ ಕ್ರಿಯೆಟೈನ್, 3.7 ಗ್ರಾಂ ಮೆಗ್ನೀಷಿಯಂ, 20ರಿಂದ 28 ಮಿಲಿ ಗ್ರಾಂ ಅಮೋನಿಯಾ, 0.8ರಿಂದ 1.5 ಮಿಲಿ ಇ.ಕ್ಯೂ ಪೊಟ್ಯಾಶಿಯಂ, 0.2ರಿಂದ 1.1 ಮಿಲಿ ಇ.ಕ್ಯೂ ಸೋಡಿಯಂ, 3ರಿಂದ 5 ಮಿಲಿ ಗ್ರಾಂ ಸಲ್ಪೇಟ್, 1ರಿಂದ 4 ಮಿಲಿ ಗ್ರಾಂ ಯೂರಿಕ್ ಆಸಿಡ್ ಇತ್ಯಾದಿ ಖನಿಜಗಳ ಆಗರ ಎಂಬುದು ವಿಜ್ಞಾನಿಗಳು ಹೇಳುವ ಮಾತು. ಸರಾಸರಿಯಾಗಿ ಒಂದು ಗೋವು ದಿನಕ್ಕೆ 5 ಲೀಟರ್ ಮೂತ್ರ ಕೊಡುತ್ತದೆ. ಒಬ್ಬ ಮನುಷ್ಯ ಆರೋಗ್ಯದಿಂದಿರಲು ಪ್ರತಿನಿತ್ಯ ಸುಮಾರು 25 ಮಿಲಿ ಲೀಟರ್ ಗೋಮೂತ್ರ ಸಾಕು.

ಗೋಮೂತ್ರ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಗೆ ರಾಮಬಾಣ ಎಂಬುದು ಎಲ್ಲದಕ್ಕಿಂತ ಮುಖ್ಯವಾದದ್ದು. ಮನುಷ್ಯನ ದೇಹದಲ್ಲಿ ಕುರ್ಕಮೀನ್ ಎಂಬ ಅಂಶದ ಕೊರತೆ ಆದಾಗ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಗೋಮೂತ್ರದಲ್ಲಿರುವ ಅಪಾರ ಪ್ರಮಾಣದ ಕುರ್ಕಮೀನ್ ಅಂಶ ಕ್ಯಾನ್ಸರ್, ಹೃದ್ರೋಗದಂತಹ ಗಂಭೀರ ಕಾಯಿಲೆಗಳಿಂದ ಹಿಡಿದು ಅಜೀರ್ಣ, ವಾತ ಪ್ರಕೃತಿ, ಭೇದಿಯಂತಹ ಸಾಮಾನ್ಯ ಕಾಯಿಲೆಗೂ ಪ್ರಯೋಜನಕಾರಿ ಎಂದು ಆಯುರ್ವೆದ ವೈದ್ಯರು ಹೇಳುತ್ತಾರೆ.

ಗೋಮೂತ್ರದ ಲಾಭದ ಬಗ್ಗೆ ಪಾರಂಪರಿಕವಾಗಿ ಏನು ವಿವರಿಸಲಾಗಿದೆಯೋ ಅದನ್ನು ಇತ್ತೀಚಿನ ವರ್ಷಗಳಲ್ಲಿ ಕೇಂದ್ರೀಯ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಕೇಂದ್ರ (ಸಿಆರ್​ಐಆರ್) ಮತ್ತು ಲಖನೌನ ಸಿಎಸ್​ಐಆರ್​ನ ಅಂಗಸಂಸ್ಥೆ ಸೆಂಟ್ರಲ್ ಇನ್​ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಅಂಡ್ ಮೆಡಿಸಿನಲ್ ಪ್ಲಾಂಟ್ (ಸಿಐಎಂಎಪಿ) ಕೂಡ ದೃಢಪಡಿಸಿವೆ. ಗೋಮೂತ್ರದಿಂದ ಮನುಷ್ಯನ ದೇಹದಲ್ಲಿ ಅಪಾರವಾದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು 2001ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ ಭಾರತದಲ್ಲಿ ಬಡತನಕ್ಕೆ ಮೂಲ ಕಾರಣ ಅನಾರೋಗ್ಯ. ಇಲ್ಲಿ ಶಿಕ್ಷಣದ ದುಪ್ಪಟ್ಟು ಹಣವನ್ನು ಔಷಧಕ್ಕೆ ಖರ್ಚು ಮಾಡಲಾಗುತ್ತಿದೆ. ಗೋ ಸಂಪತ್ತಿನ ಸದ್ಬಳಕೆ ಮಾಡಿಕೊಂಡರೆ ಈ ಸಂಕಷ್ಟದಿಂದ ಪಾರಾಗಲು ಸಾಧ್ಯ ಎಂಬುದು ತಜ್ಞರ ಮಾತು.

ಇನ್ನೊಂದು ವಿಚಾರ. ಹೃದಯದ ಕಾಯಿಲೆ ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳಲ್ಲಿ ಶೇ.50 ರಷ್ಟು ಕಡಿಮೆ. ಕ್ಯಾನ್ಸರ್​ನಂತಹ ಮಾರಣಾಂತಿಕ ಕಾಯಿಲೆ ಶೇ. 40ರಷ್ಟು ಕಡಿಮೆ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ. ಈ ಕಾರಣಕ್ಕಾಗಿ ಅಮೆರಿಕದಂತಹ ಮುಂದುವರಿದ ಮತ್ತು ಮಾಂಸಾಹಾರಪ್ರಿಯ ದೇಶದಲ್ಲೂ ಮಾಂಸಾಹಾರ ಸೇವನೆ ಪ್ರಮಾಣ 2004ರಿಂದೀಚೆಗೆ ವೇಗವಾಗಿ ಇಳಿಕೆಯಾಗುತ್ತಿದೆ. ಅದೇ ವೇಳೆ ಭಾರತದಂತಹ ಅಭಿವೃದ್ಧಿಶೀಲ ಅಥವಾ ನೇಪಾಳದಂತಹ ಹಿಂದುಳಿದ ದೇಶದಲ್ಲಿ ಮಾಂಸಾಹಾರ ಸೇವನೆ ವಿಪರೀತ ಏರಿಕೆಯಾಗುತ್ತಿದೆ.

ಗೋಮಯ ಅಥವಾ ಸಗಣಿಯಲ್ಲಿ ಪ್ರಮುಖವಾಗಿ 18 ರೀತಿಯ ಖನಿಜಗಳಿವೆ. ನೈಟ್ರೋಜನ್, ಫಾಸ್ಪೆರಸ್, ಪೊಟಾಶಿಯಂ ಹೇರಳವಾಗಿರುತ್ತದೆ. ಸಗಣಿಯಲ್ಲಿ ಪರಿಸರವನ್ನು ಪ್ರದೂಷಣದಿಂದ ರಕ್ಷಿಸುವ ಅಂಶಗಳಿವೆ. ವಿಕಿರಣದ ದುಷ್ಪರಿಣಾಮವನ್ನು ತಡೆಯುವ ಶಕ್ತಿಯಿದೆ. ಸಗಣಿ ಅತ್ಯುತ್ತಮ ಆಂಟಿ ಸೆಪ್ಟಿಕ್ ಮತ್ತು ಆಂಟಿಬಯಾಟಿಕ್ ಹಾಗೂ ಅತ್ಯುತ್ತಮ ಕೀಟನಾಶಕ ಕೂಡ. ಸಗಣಿಯಲ್ಲಿ ಬೆಳೆದ ಬೆಳೆಯಲ್ಲಿ ದೇಹಕ್ಕೆ ಅಗತ್ಯವಾದ ವಿಟಮಿನ್ ಬಿ-12 ಹೇರಳವಾಗಿ ಸಿಗುತ್ತದೆ ಎಂದು ಆಹಾರ ವಿಜ್ಞಾನಿಗಳು ಹೇಳುತ್ತಾರೆ. ಹಿಂದೆ ಋಷಿ ಮುನಿಗಳು ಈ ಮೂಲಕವೇ ವಿಟಮಿನ್ ಬಿ-12 ಪೋಷಕಾಂಶವನ್ನು ಪಡೆದು ದೀರ್ಘಾಯುಷ್ಯ ಹೊಂದುತ್ತಿದ್ದರು ಎಂಬುದನ್ನು ಹಲವಾರು ಆಧಾರಗಳು ಹೇಳುತ್ತವೆ.

ಗೋ ಸಂತತಿಯನ್ನೇ ಕೃಷಿ ಮತ್ತು ಸಾಗಾಟಕ್ಕೆ ಬಳಕೆ ಮಾಡುವುದರಿಂದ ಅಪಾರ ಪ್ರಮಾಣದ ಇಂಧನವನ್ನು ಉಳಿಸಬಹುದು ಎಂಬುದು ಒಂದು ಅಭಿಪ್ರಾಯವಾದರೆ, ದನದ ಸಗಣಿ ಬಳಸಿ ತಯಾರಿಸುವ ಗೋಬರ್ ಗ್ಯಾಸನ್ನು ಜನಪ್ರಿಯಗೊಳಿಸಿದರೆ ಶೇ.40ರಷ್ಟು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಬಹುದು ಎಂಬ ಅಭಿಪ್ರಾಯವಿದೆ. ಒಂದು ಹಸು ವರ್ಷಕ್ಕೆ ಸುಮಾರು 4,500 ಲೀಟರ್ ಬಯೋಗ್ಯಾಸ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಅದರಿಂದ ಅಂದಾಜು 6.80 ಕೋಟಿ ಟನ್ ಕಟ್ಟಿಗೆ ಉಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಗುಜರಾತ್​ನಲ್ಲಿ ಒಂದು ಸಕಾರಾತ್ಮಕ ಹೆಜ್ಜೆ ಇಡಲಾಗಿದ್ದು, ಅಲ್ಲಿನ ಈಡರ್ ಎಂಬಲ್ಲಿ ಸಗಣಿಯಿಂದ ಅನಿಲ ವಿದ್ಯುತ್ ಉತ್ಪಾದಿಸುವ ಘಟಕವನ್ನು ಸ್ಥಾಪಿಸಲಾಗಿದೆ.

ಇಷ್ಟೆಲ್ಲ ಇದ್ದರೂ ಭಾರತದಲ್ಲಿ ಗೋ ಸಂತತಿ ನಶಿಸುತ್ತಿರುವ ಪ್ರಮಾಣ ಗಮನಿಸಿದರೆ ದಿಗಮೆಯಾಗುತ್ತದೆ. 1951ರಲ್ಲಿ ನಡೆಸಿದ ಪಶು ಗಣತಿ ಪ್ರಕಾರ ಪ್ರತಿ ಸಾವಿರ ಜನಸಂಖ್ಯೆಗೆ 430 ಗೋವುಗಳಿದ್ದವು. 1960ರಲ್ಲಿ ಅದು 400ಕ್ಕೆ ಇಳಿಯಿತು. 1971ರಲ್ಲಿ 326ಕ್ಕೆ ಇಳಿಯಿತು. 1981ರಲ್ಲಿ 278, 1991ರಲ್ಲಿ 202, 2001ರಲ್ಲಿ 110 ಗೋವುಗಳಿದ್ದವು. 2011ರ ಹೊತ್ತಿಗೆ 20 ಗೋವುಗಳಿಗೆ ಇಳಿಕೆಯಾಗಿದೆ. ಅದಕ್ಕೆ ಕಾರಣ ಕಸಾಯಿಖಾನೆ ಮತ್ತು ಗೋಮಾಂಸದ ರಫ್ತು ವಹಿವಾಟು. ವಾರ್ಷಿಕ ಅಂದಾಜು 22,250 ಕೋಟಿ ರೂಪಾಯಿ ಮೌಲ್ಯದ ಗೋಮಾಂಸವನ್ನು ಭಾರತದಿಂದ ರಫ್ತು ಮಾಡಲಾಗುತ್ತಿದೆ. ಅದೇ ಗೋ ಸಂತತಿ ರಕ್ಷಣೆ ಮಾಡಿದರೆ ಆರೋಗ್ಯ, ಕೃಷಿ, ಆರ್ಥಿಕತೆ, ಇಂಧನ ಇತ್ಯಾದಿಗಳಿಂದ ಹಲವು ಸಹಸ್ರ-ಲಕ್ಷ ಕೋಟಿ ರೂಪಾಯಿಗಳನ್ನು ಗಳಿಸಲು ಮತ್ತು ಉಳಿಸಲು ಸಾಧ್ಯವಿದೆ. ಆ ಬಗ್ಗೆ ಯೋಚನೆ ಮಾಡಲು ನಮ್ಮ ಸರ್ಕಾರಗಳಿಗೆ ಮನಸ್ಸಿಲ್ಲ ಮತ್ತು ವ್ಯವಧಾನವೂ ಇಲ್ಲ.

ಮಾಂಸಾಹಾರ ದೇಹಕ್ಕೆ ಮಾತ್ರವಲ್ಲ, ಬಾಹ್ಯ ಪರಿಸರಕ್ಕೂ ಮಾರಕವೇ. ಮಾಂಸ ತಯಾರಿಕೆ ಜಾಗತಿಕ ತಾಪಮಾನ ಏರಿಕೆಗೆ ಮುಖ್ಯ ಕಾರಣ ಎಂಬ ಅಂಶವನ್ನು ಸಂಶೋಧನೆಗಳು ಸಾಬೀತು ಮಾಡಿವೆ. ಉದಾಹರಣೆಗೆ-ಜಾಗತಿಕ ಕಾರು, ವಿಮಾನ, ರೈಲ್ವೆ ಮತ್ತು ಹಡಗು ಉದ್ಯಮಗಳಿಂದಾಗುವ ಹಸಿರುಮನೆ ಅನಿಲ (ಗ್ರೀನ್ ಹೌಸ್ ಗ್ಯಾಸ್)ಕ್ಕಿಂತಲೂ ಹೆಚ್ಚಿನ ಹಾನಿಯನ್ನು ಮಾಂಸಾಹಾರ ತಯಾರಿಕಾ ಉದ್ಯಮವೊಂದೇ ಉಂಟು ಮಾಡುತ್ತಿದೆ. ಒಂದು ಅಧ್ಯಯನದ ಪ್ರಕಾರ ಜಾಗತಿಕವಾಗಿ ಮಾಲಿನ್ಯಕಾರಕ ಹಸಿರುಮನೆ ಅನಿಲದ ಉತ್ಪಾದನೆಯಲ್ಲಿ ಮಾಂಸೋದ್ಯಮದ ಪಾಲು ಶೇ.65ರಷ್ಟು. ಮಾಂಸಾಹಾರ ತಯಾರಿಕೆ ಸಂದರ್ಭದಲ್ಲಿ ಬಿಡುಗಡೆಯಾಗುವ ಮಿಥೇನ್ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಇಂಗಾಲದ ಡೈ ಆಕ್ಸೈಡ್​ಗಿಂತ ಶೇ.23 ಪಟ್ಟು ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಗೋವಧೆ ಪುರಸ್ಕರಿಸುವವರಿಗೆ ಇದೆಲ್ಲ ಗೊತ್ತಾಗುವುದು ಯಾವಾಗ?

ಗೋವು ಬದುಕಿದ್ದಾಗ ಮಾತ್ರವಲ್ಲ ಸಾವಿನ ನಂತರವೂ ಅದು ಪರೋಪ ಕಾರಿಯೇ. ಹಾಲು, ಹೈನಷ್ಟೇ ಅಲ್ಲ, ಅದರ ರೋಮದಿಂದ ಆಮ್ಲಜನಕ ಹೊರ ಸೂಸುತ್ತದೆ, ಮೂತ್ರ ಮತ್ತು ಸಗಣಿ ಜೀವರಕ್ಷಕ, ಎಲುಬಿನಿಂದ ಗೊಬ್ಬರ, ಗೊರಸಿ ನಿಂದ ಸುವಾಸಿತ ಧೂಪ ತಯಾರಿಸಬಹುದು. ಒಂದೇ ಎರಡೇ? ಆದರೂ ಆಳುವವರಿಗೆ, ಹಳಿಯುವವರಿಗೆ ಏಕೆ ಅರ್ಥವಾಗುತ್ತಿಲ್ಲ ಗೋವಿನ ಮಹಿಮೆ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top