ಎಲ್ಲರೂ ನೋಟ್ ಮಾಡಿಕೊಳ್ಳಲೇಬೇಕಾದ್ದು ಏನೆಂದರೆ…

ನೋಟುರದ್ದತಿ ನಿರ್ಧಾರವನ್ನು ಎರಡು ಮುಖಗಳಲ್ಲಿ ನೋಡಬೇಕಿದೆ. ಒಂದು ಸ್ವಚ್ಛ ಆರ್ಥಿಕತೆ ಮತ್ತು ಸುಭದ್ರ ಆರ್ಥಿಕತೆ ದೃಷ್ಟಿಯಿಂದ. ಮತ್ತೊಂದು ಸ್ವಚ್ಛ ರಾಜಕೀಯ ಮತ್ತು ಸಮರ್ಥ ರಾಜಕೀಯ ದೃಷ್ಟಿಕೋನದಿಂದ. ಸ್ವಚ್ಛ ಆರ್ಥಿಕತೆ ಮತ್ತು ಸ್ವಚ್ಛ ರಾಜಕೀಯ ಎರಡೂ ಮೇಳೈಸಿದರೆ ಇನ್ನೂ ಹೆಚ್ಚಿನ ಪರಿಣಾಮವನ್ನು ನಾವು ನಿರೀಕ್ಷಿಸಬಹುದು.

539wನೋಟುರದ್ದತಿ ನಿರ್ಧಾರದ ಬಳಿಕ ದಿನಕ್ಕೊಂದು ಕುತೂಹಲಕರ ಸಂಗತಿಗಳು ಬೆಳಕಿಗೆ ಬರುತ್ತಿವೆ! ಒಂದು ಕಡೆ, ನೋಟು ರದ್ದತಿ ನಿರ್ಧಾರದಿಂದ ಜನಸಾಮಾನ್ಯರಿಗೆ, ಬಡಬಗ್ಗರಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾಯಿತು. ಮತ್ತೊಂದೆಡೆ, ಮುಖ್ಯಮಂತ್ರಿ, ಮಂತ್ರಿಗಳಿಗೆ ಆಪ್ತರು ಎನ್ನಲಾಗಿರುವ ಅಧಿಕಾರಿಗಳ ಮನೆಯಲ್ಲಿ ಕೋಟಿ ಕೋಟಿ ಹೊಸನೋಟು, ಅಪಾರ ಪ್ರಮಾಣದ ಚಿನ್ನ, ಅವಸರ ಅವಸರದಲ್ಲಿ ಕ್ಯಾಷ್ ಕೊಟ್ಟು ಖರೀದಿ ಮಾಡಿರುವ ಮೂರ್ನಾಲ್ಕು ಕೋಟಿ ರೂಪಾಯಿ ಬೆಲೆಬಾಳುವ ದುಬಾರಿ ಕಾರುಗಳು ಪತ್ತೆಯಾಗುತ್ತಿವೆ. ಯಾಕ್ ರೋಷ? ಏನು ವಿಚಿತ್ರ ನೋಡಿ…
ಇನ್ನು, ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿಯುವ ಮೂಲಕವೇ ರಾಜಕೀಯ ಅಸ್ತಿತ್ವ ಕಂಡುಕೊಂಡ ಅರವಿಂದ ಕೇಜ್ರಿವಾಲ್ ನೋಟುರದ್ದತಿ ವಿರುದ್ಧ ಬೀದಿ ಹೋರಾಟಕ್ಕಿಳಿದದ್ದು ಮತ್ತು ಶಾರದಾ ಚಿಟ್‍ಫಂಡ್ ಹಗರಣದ ಕಳಂಕದ ಮಸಿ ಅಂಟಿಸಿಕೊಂಡಿರುವ ಮಮತಾ ಬ್ಯಾನರ್ಜಿ ಜತೆಗೆ ಕೈ ಜೋಡಿಸಿದ್ದು ಎರಡನೇ ಅಚ್ಚರಿ.
ಅದಕ್ಕಿಂತ ಅಚ್ಚರಿಯ ಸಂಗತಿಯೊಂದಿದೆ. ಅದೇನೆಂದರೆ, ನೋಟುರದ್ದತಿ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ಉನ್ನತ ನಾಯಕರು ತೆಗೆದುಕೊಳ್ಳುತ್ತಿರುವ ನಿರ್ಧಾರ ಮತ್ತು ನಡೆದುಕೊಳ್ಳುತ್ತಿರುವ ರೀತಿನೀತಿಗಳು ಸರಿಯಿಲ್ಲ ಎಂದು ಆ ಪಕ್ಷದ ಬಹಳಷ್ಟು ಸಂಸದರೇ ಖಾಸಗಿಯಾಗಿ ಬೇಸರ, ಅತೃಪ್ತಿ ತೋಡಿಕೊಳ್ಳುತ್ತಿರುವುದು. ನೋಟುರದ್ದತಿ ನಿರ್ಧಾರದ ವಿಷಯದಲ್ಲಿ ಇಡೀ ದೇಶವೇ ಖುಷಿಯಿಂದ ಸ್ವಾಗತಿಸಿ ಸಂಭ್ರಮಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ಇವರಿಬ್ಬರಂತೂ ಸಂಯಮ, ಸಭ್ಯತೆ, ಸಾರ್ವಜನಿಕ ಜೀವನದಲ್ಲಿ ತೋರಬೇಕಾದ ಗಾಂಭೀರ್ಯದ ಎಲ್ಲೆಮೀರಿ ಸರ್ಕಾರದ ನಿರ್ಧಾರದ ವಿರುದ್ಧ ಮತ್ತು ವೈಯಕ್ತಿಕವಾಗಿ ಪ್ರಧಾನಿಯನ್ನು ವಾಚಾಮಗೋಚರವಾಗಿ ಬೈಯುತ್ತಿರುವುದು ಸರಿಯಲ್ಲ ಎಂದು ಆ ಪಕ್ಷದ ಸಂಸದರು, ಎರಡನೇ ಹಂತದ ನಾಯಕರು ಖಾಸಗಿಯಾಗಿ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಅಲ್ಲಿಗೆ ಕೇವಲ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.80ರಷ್ಟು ಜನರು ಮಾತ್ರವಲ್ಲ, ದೇಶದ ಶೇ.99ರಷ್ಟು ನಾಗರಿಕರು ಕಾಳಧನಿಕರ ಮೇಲಿನ ಪ್ರಹಾರವನ್ನು ಬೆಂಬಲಿಸುತ್ತಿದ್ದಾರೆ ಎಂಬುದು ಮನವರಿಕೆಯಾಗುತ್ತದೆ.

ಏನಿದು ಕಾಳಧನ?
ಸಾಕಷ್ಟು ಜನರಲ್ಲಿ ಈ ಕುರಿತು ಗೊಂದಲವಿದೆ. ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಲಕ್ಷ ಕೋಟಿ ರೂಪಾಯಿ ಲೆಕ್ಕದಲ್ಲಿ ಕೂಡಿಟ್ಟ ಹಣ ಮಾತ್ರ ಕಾಳಧನವೇ ಎಂಬುದು ಮುಖ್ಯವಾದ ಪ್ರಶ್ನೆ. ವಾಸ್ತವದಲ್ಲಿ ಹಾಗಲ್ಲ. ಅದು ದೊಡ್ಡಗಾತ್ರದ ಮತ್ತು ದೊಡ್ಡಪ್ರಮಾಣದಲ್ಲಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದಾದ ಕಾಳಧನ. ಆದರೆ ಬ್ಯಾಂಕ್ ವಹಿವಾಟಿಗೆ ಹೊರತಾಗಿ, ಲೆಕ್ಕಕ್ಕೆ ಸಿಗದ ಹಾಗೆ ಸಂಗ್ರಹವಾಗುವ ಸಣ್ಣಮೊತ್ತವೂ ಕಾಳಧನ ಎಂದೇ ಪರಿಗಣಿತವಾಗುತ್ತದೆ. ಹೀಗಾಗಿ ಈಗ ಜಾರಿಗೊಳಿಸಿರುವ ನೋಟುರದ್ದತಿ ಯೋಜನೆ ದೊಡ್ಡಪ್ರಮಾಣದ ಮತ್ತು ಸಣ್ಣಪ್ರಮಾಣದ ಕಾಳಧನವನ್ನು ಲೆಕ್ಕಹಾಕಲು ಸಹಕಾರಿ. ದೊಡ್ಡಪ್ರಮಾಣದ ಅಕ್ರಮಕ್ಕೆ ದಂಡ ವಿಧಿಸಿ, ಅರಿವಿಲ್ಲದೆ ಅಥವಾ ಅನುz್ದÉೀಶಿತವಾಗಿ ಸಣ್ಣಪ್ರಮಾಣದಲ್ಲಿ ಬ್ಯಾಂಕಿಂಗ್ ವಹಿವಾಟೇತರವಾಗಿ ಸಂಗ್ರಹಿಸುವ, ವ್ಯವಹರಿಸುವ ಮೊತ್ತವನ್ನು ಒತ್ತಾಯಪೂರ್ವಕವಾಗಿ ಬ್ಯಾಂಕಿಗೆ ತರುವ ಮೂಲಕ ಪಾರದರ್ಶಕ ಆರ್ಥಿಕ ವ್ಯವಸ್ಥೆ ರೂಪಿಸಲು ನೆರವಾಗಲಿದೆ. ಮುಖ್ಯವಾಗಿ ಶೇ.40ಕ್ಕಿಂತ ಹೆಚ್ಚಿರುವ ಬ್ಯಾಂಕಿಂಗ್ ಅನಕ್ಷರಸ್ಥರನ್ನು ಬ್ಯಾಂಕಿಂಗ್ ಸಾಕ್ಷರರನ್ನಾಗಿ ಮಾಡುವಲ್ಲಿ ಈ ಯೋಜನೆ ದೊಡ್ಡ ಕೊಡುಗೆ ನೀಡಲಿದೆ.

ನೋಟುರದ್ದತಿ ಆಲೋಚನೆ ಹೊಸದೇ?
ಈ ಆಲೋಚನೆ ಹೊಸದೇ ಎಂಬುದು ಮತ್ತೊಂದು ಪ್ರಶ್ನೆ. ಖಂಡಿತವಾಗಿ ಹೊಸದಲ್ಲ. ಇಂದಿರಾ ಗಾಂಧಿ, ಚಂದ್ರಶೇಖರ್ ಅವರುಗಳು ಪ್ರಧಾನಿ ಆಗಿದ್ದಾಗ ದೇಶ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಭದ್ರತಾ ಠೇವಣಿ ಆಗಿರುವ ಬಂಗಾರವನ್ನು ವಿಶ್ವಬ್ಯಾಂಕ್‍ನಲ್ಲಿ ಒತ್ತೆ ಇಡುವ ಪ್ರಸಂಗ ಬಂದಾಗಲೂ ಕಾಳಧನ ಮತ್ತು ಲೆಕ್ಕಕ್ಕೆ ಸಿಗದ ಬಂಗಾರವನ್ನು ಚಲಾವಣೆಗೆ ತರುವ ಯೋಜನೆಯ ಪ್ರಸ್ತಾಪವನ್ನು ಆರ್ಥಿಕ ತಜ್ಞರು ಸರ್ಕಾರದ ಮುಂದಿಟ್ಟಿದ್ದರು. ಹಾಗೆಯೇ ಎಂಭತ್ತರ ದಶಕದಲ್ಲಿ ಪಿ.ವಿ. ನರಸಿಂಹ ರಾವ್ ಪ್ರಧಾನಿ ಆಗಿದ್ದಾಗ ಡಾ. ಮನಮೋಹನ ಸಿಂಗ್ ಅವರು ದೇಶದ ಹಣಕಾಸು ಸಚಿವರಾಗಿದ್ದಾಗ ಮತ್ತೊಮ್ಮೆ ನೋಟುರದ್ದತಿಗೆ ಆಲೋಚನೆ ಮಾಡಲಾಗಿತ್ತು. ಆದರೆ ರಾಜಕೀಯ ಒತ್ತಡದಿಂದ ಆ ಎರಡೂ ಸಂದರ್ಭಗಳಲ್ಲಿ ನೋಟುರದ್ದತಿ ನಿರ್ಧಾರವನ್ನು ಕೈಬಿಡಲಾಯಿತು. ಈಗ ಆ ನಿರ್ಧಾರ ಜಾರಿಗೊಂಡಿದೆ.

ನೋಟುರದ್ದತಿ ನಿರ್ಧಾರದ ಮೂಲ ಎಲ್ಲಿ?
ನಾವು ದಿನಾಂಕ ಅಥವಾ ವರ್ಷವನ್ನು ಲೆಕ್ಕಹಾಕಿ ಹೇಳುವುದಾದರೆ ಕಾಳಧನಿಕರ ಮೇಲಿನ ಪ್ರಹಾರದ ಆಲೋಚನೆ 1975-77ರ ಅವಧಿಯಲ್ಲಿ ಪ್ರಥಮವಾಗಿ ಮೊಳಕೆಯೊಡೆಯಿತು ಎನ್ನಬಹುದು. ದೇಶದ ಮೇಲೆ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕೊನೆಗೊಂಡು ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಸರ್ಕಾರ/ಕಾಂಗ್ರೆಸ್ಸೇತರ ಮೊದಲ ಭಾರತ ಸರ್ಕಾರದ ಆಡಳಿತದ ಕಾಲದಲ್ಲಿ ಲೋಕಪಾಲ್ ವ್ಯವಸ್ಥೆ ಜಾರಿಗೊಳಿಸುವ ಚರ್ಚೆ ಶುರುವಾಯಿತು. ಅದರ ಪರಿಣಾಮವಾಗಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಲೋಕಾಯುಕ್ತ ಸಂಸ್ಥೆ ಕಾರ್ಯಾರಂಭ ಮಾಡಿತು. ಆ ನಂತರ ದೇಶದ ವಿವಿಧ ರಾಜ್ಯಗಳಲ್ಲಿ ಲೋಕಾಯಕ್ತ ಸಂಸ್ಥೆಗಳು ಕಾರ್ಯಾರಂಭ ಮಾಡಿದವು. ಇವೆಲ್ಲ ಶುರುವಾಗಿದ್ದು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು, ಅಕ್ರಮ ಸಂಪತ್ತಿನ ಕ್ರೋಢಿಕರಣ ಪ್ರವೃತ್ತಿಯನ್ನು ನಿಗ್ರಹಿಸಬೇಕು ಎಂಬ ಉz್ದÉೀಶಕ್ಕಾಗಿ. ಆದರೆ ಇಂದಿಗೂ ಲೋಕಪಾಲ್ ವ್ಯವಸ್ಥೆ ಜಾರಿಯ ಕುರಿತು ಚರ್ಚೆ ನಡೆಯುತ್ತಿದೆಯೇ ಹೊರತು ಪರಿಣಾಮಕಾರಿ ಜಾರಿ ಆಗಲೇ ಇಲ್ಲ.

ಅಣ್ಣಾ ಹಜಾರೆ ಆರಂಭಿಸಿದ ಹೋರಾಟ
ಹತ್ತು ವರ್ಷಗಳ ಕಾಲ ಎರಡು ಅವಧಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸಿದಾಗ ಭ್ರಷ್ಟಾಚಾರ ಮಿತಿಮೀರಿತ್ತು. ಅದರ ಪರಿಣಾಮ ದೇಶದ ಜನರಲ್ಲಿ ರಾಜಕೀಯ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ಮಡುಗಟ್ಟಿತ್ತು. ಅದನ್ನು ಅರಿತ ಸರ್ವೋದಯವಾದಿ ಅಣ್ಣಾ ಹಜಾರೆ ಜನಲೋಕಪಾಲ್ ಜಾರಿಗೆ ಆಗ್ರಹಿಸಿ ದೊಡ್ಡಮಟ್ಟದ ಹೋರಾಟ ಆರಂಭಿಸಿದರು. ಆಗ ಅಣ್ಣಾ ಹಜಾರೆ ಆರಂಭಿಸಿದ ಭ್ರಷ್ಟಾಚಾರ ವಿರೋಧಿ ಹೋರಾಟ ಎರಡು ಕವಲಾಯಿತು. ಒಂದು ಕವಲು ಕೇಜ್ರಿವಾಲ್ ಆದರೆ ಮತ್ತೊಂದು ಬಿಜೆಪಿ. ರಾಜಕೀಯವಾಗಿ ಕೇಜ್ರಿವಾಲ್‍ಗಿಂತಲೂ ಬಲಾಢ್ಯವಾಗಿರುವ ಬಿಜೆಪಿ ದೇಶಾದ್ಯಂತ ಜನರ ಭಾವನೆಗಳನ್ನು ತನ್ನತ್ತ ಸೆಳೆದು ಮತಗಳಾಗಿ ಪರಿವರ್ತನೆ ಮಾಡುವಲ್ಲಿ ಸಫಲವಾಯಿತು. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಾರ್ಯಸೂಚಿಯೊಂದಿಗೆ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಸರ್ಕಾರ ನೋಟುರದ್ದತಿ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಟ್ಟಿಹೆಜ್ಜೆ ಇಟ್ಟಿದೆ. ಅದೇ ಕೇಜ್ರಿವಾಲ್ ಅವರು ಸರ್ಕಾರದ ನಿರ್ಧಾರವನ್ನು ವಿರೋಧಿಸುವ ಮೂಲಕ ಜನರಲ್ಲಿ ಪ್ರಶ್ನೆ ಹುಟ್ಟುಹಾಕಿದ್ದಾರೆ.

ಕಾಳಧನದ ಅಗಾಧತೆ ಎಷ್ಟು?
ಇದು ಬಗೆದಷ್ಟೂ ಆಳ. ಅದಕ್ಕಿಂತ ಹೆಚ್ಚಾಗಿ ಭಯಾನಕ. ಭಾರತದ ಸಂದರ್ಭದಲ್ಲಿ ಕಾಳಧನ ಸಮಾನಾಂತರ ಆರ್ಥಿಕತೆ ಎಂಬ ಕುಖ್ಯಾತಿ ಗಳಿಸಿದೆ. ಒಂದು ಸಮೀಕ್ಷೆಯ ಪ್ರಕಾರ, ದೇಶದ ಎಂಭತ್ತರಷ್ಟು ಸಂಪತ್ತು ಶೇ.20ರಷ್ಟು ಜನರ ಕೈಯಲ್ಲಿ ಸಂಗ್ರಹವಾಗಿದೆ. ದೇಶದ ಶೇ.80ರಷ್ಟು ಜನರು ಶೇ.20ರಷ್ಟು ಸಂಪತ್ತನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಧನ ಸಂಪತ್ತು ಮತ್ತು ಭೂ ಸಂಪತ್ತು ಎರಡೂ ಸೇರಿವೆ. ಇದರಲ್ಲಿ ಸಮತೋಲನ ಸಾಧಿಸಬೇಕಾದರೆ ಲೆಕ್ಕಕ್ಕೆ ಬಾರದ ಸಂಪತ್ತು ಲೆಕ್ಕಕ್ಕೆ ಬರದೇ ಬೇರೆ ದಾರಿ ಇಲ್ಲವೇ ಇಲ್ಲ. ಅಥವಾ ಇದೇ ರೀತಿಯ ಅಸಮತೋಲನಕ್ಕೆ ನಾವು ಒಗ್ಗಿಕೊಳ್ಳಬೇಕಿದೆ. ಆದರೆ ಇವೆರಡರಲ್ಲಿ ಒಂದನ್ನು ಆಯ್ದುಕೊಳ್ಳಲು ಅವಕಾಶ ನೀಡಲು ತಯಾರಿಲ್ಲ ಎಂದು ವ್ಯಾಖ್ಯಾನಿಸಬಹುದಾಗಿದೆ.

ಬಡವರಿಗೆ ತೊಂದರೆ ಆಗುತ್ತದೆಯೇ?
ಕಾಂಗ್ರೆಸ್ ಪಕ್ಷ ಬುಡದಿಂದಲೂ ಬಡವರ ಹೆಸರಿನಲ್ಲೇ ರಾಜಕೀಯ ಮಾಡುತ್ತ ಬಂದಿರುವುದು ಗೊತ್ತಿರುವ ವಿಚಾರ. ಹೀಗಾಗಿ ನೋಟುರದ್ದತಿ ವಿಷಯದಲ್ಲೂ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು, ಮಮತಾ ಬ್ಯಾನರ್ಜಿ ಇತ್ಯಾದಿ ನಾಯಕಮಣಿಗಳು ತಮಗೆ ತೊಂದರೆ ಆಗುತ್ತಿದೆ ಎಂದು ನೇರವಾಗಿ ಹೇಳುವ ಬದಲು ಜನಸಾಮಾನ್ಯರಿಗೆ, ಬಡಬಗ್ಗರಿಗೆ ತೊಂದರೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಅದು ಅರ್ಧಸತ್ಯ. ಬ್ಯಾಂಕ್ ವಹಿವಾಟಿನ ಗಂಧವೇ ಇಲ್ಲದ, ಕೂಲಿಯ ರೂಪದಲ್ಲಿ ನಗದು ಪಡೆದು ಜೀವನ ನಡೆಸುವವರಿಗೆ, ದೈನಂದಿನ ಖರ್ಚುವೆಚ್ಚಕ್ಕೆ ಪ್ರಾಮಾಣಿಕ ದುಡಿಮೆಯನ್ನೇ ಆಧರಿಸಿ ಬದುಕುವ ಲಕ್ಷಾಂತರ ಮಂದಿಗೆ ತುಸು ಕಷ್ಟ ಆಗಿರುವುದು ನಿಜ. ಆದರೆ ಭವಿಷ್ಯದ ಒಳಿತಿಗಾಗಿ ಮತ್ತು ಉಜ್ವಲ ಭವಿಷ್ಯಕ್ಕಾಗಿ ಈ ತೊಂದರೆಯನ್ನು ಅನುಭವಿಸುವುದು ಅನಿವಾರ್ಯ. ಮುಖ್ಯವಾಗಿ ಇದು ಕಷ್ಟ ಅನುಭವಿಸುವವರಿಗೆ ಚೆನ್ನಾಗಿ ತಿಳಿದಿದೆ ಕೂಡ.

ಕಾಡುವ ಸಮಸ್ಯೆಗಳಿಗೆ ಪರಿಹಾರ
ದೇಶವನ್ನು ಹೆಚ್ಚು ಸಂಕಷ್ಟಕ್ಕೆ ತಳ್ಳಿರುವ ಸಂಗತಿಗಳಲ್ಲಿ ರಾಜಕೀಯ ಭ್ರಷ್ಟಾಚಾರ, ಭಯೋತ್ಪಾದನೆ, ನಕ್ಸಲ್ ಹಿಂಸಾಚಾರ ಪ್ರಮುಖವಾದವು. ರಾಜಕೀಯ ಭ್ರಷ್ಟಾಚಾರ ಜನರ ತೆರಿಗೆ ಹಣಕ್ಕೆ ತೂತು ಕೊರೆದು ದಾರಿದ್ರೃಕ್ಕೆ ಕಾರಣವಾಗಿದ್ದರೆ, ಭಯೋತ್ಪಾದನೆ ಮತ್ತು ನಕ್ಸಲ್‍ವಾದ ದೇಶವನ್ನು ಆಂತರಿಕವಾಗಿ ಅಸುರಕ್ಷತೆಗೆ ದೂಡಿವೆ. ಭ್ರಷ್ಟ ರಾಜಕೀಯ ಕೂಟ ಚುನಾವಣೆ ಎಂಬ ಪವಿತ್ರ ವ್ಯವಸ್ಥೆಯನ್ನೇ ಆಪೆÇೀಶನ ತೆಗೆದುಕೊಂಡಿದ್ದರೆ ಭಯೋತ್ಪಾದನೆ ಮತ್ತು ನಕ್ಸಲ್‍ವಾದ ದೇಶದ ಅರ್ಧಭಾಗವನ್ನು ಭಯದ ಕೂಪಕ್ಕೆ ನೂಕಿದ್ದವು. ರಾಜಕೀಯ ಭ್ರಷ್ಟಾಚಾರದ ಮೂಲಕ ಸಂಗ್ರಹಿಸಿದ ಕಾಳಧನಕ್ಕೆ ಅಂಕೆಯಿಲ್ಲ. ಭಯೋತ್ಪಾದನೆಯಲ್ಲಿ ತೊಡಗಿರುವವರು ಸಂಗ್ರಹಿಸಿರುವ ಕಾಳಧನ ಮತ್ತು ಚಲಾವಣೆಯಲ್ಲಿರುವ ಖೋಟಾನೋಟಿನ ಪ್ರಮಾಣ ಲಕ್ಷ ಕೋಟಿಗಳಲ್ಲಿದೆ. ಗಣಿಗಾರಿಕೆ ಮತ್ತು ರಾಜಕೀಯ ಹಫ್ತಾದ ಮೂಲಕ ನಕ್ಸಲರು ಸಂಗ್ರಹಿಸಿದ್ದ ಕಾಳಧನದ ಮೊತ್ತ ಸುಮಾರು 90 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈಗ ನೋಟುರದ್ದತಿಯಿಂದ ಶೇ.75ರಷ್ಟು ರಾಜಕಾರಣಿಗಳ ಬಳಿ ಇರುವ ಕಾಳಧನ, ಶೇ. ನೂರರಷ್ಟು ಭಯೋತ್ಪಾದಕರು ಮತ್ತು ನಕ್ಸಲರ ಬಳಿ ಸಂಗ್ರಹವಾಗಿರುವ ಕಾಳಧನ ನಿರುಪಯುಕ್ತವಾಗಿದೆ. ಸರ್ಕಾರಕ್ಕೆ ಒಮ್ಮೆ ಶಹಬ್ಬಾಸ್ ಎನ್ನೋಣವೇ?

ಕಂಪನ ಹೆಚ್ಚಾಗಿರುವುದು ಎಲ್ಲಿ?
ನೋಟ್‍ರದ್ದತಿಯ ಕಂಪನ ಹೆಚ್ಚಾಗಿರುವುದು ಒಂದು ರಿಯಲ್ ಎಸ್ಟೇಟ್ ಉದ್ಯಮ ವಲಯದಲ್ಲಿ, ಮತ್ತೊಂದು ಚಿನಿವಾರ ಪೇಟೆಯಲ್ಲಿ. ಕಾರಣ ಇಷ್ಟೆ, ಅತಿಹೆಚ್ಚು ಅಪಾರದರ್ಶಕ/ಅಪ್ರಾಮಾಣಿಕ ವಹಿವಾಟು ನಡೆಯುವುದು ಈ ಎರಡು ಕ್ಷೇತ್ರಗಳಲ್ಲಿ. ಒಂದು ಪರಿಣತ ಅಂದಾಜಿನ ಪ್ರಕಾರ, ರಿಯಲ್ ಎಸ್ಟೇಟ್ ಉದ್ಯಮ ಮತ್ತು ಚಿನಿವಾರ ಪೇಟೆಯಲ್ಲಿ ಶೇ.40ರಷ್ಟು ಲೆಕ್ಕಕ್ಕೆ ಸಿಗದ ವಹಿವಾಟು ನಡೆಯುತ್ತದೆ. ಆದಕಾರಣ ಈ ಎರಡೂ ಕ್ಷೇತ್ರಗಳಲ್ಲಿ ಹೆಚ್ಚು ತಲ್ಲಣ ಆಗುವುದು ಸಹಜ. ಆದರೆ ಇದು ತಾತ್ಕಾಲಿಕ ಎಂದು ತಜ್ಞರೆಲ್ಲರೂ ಹೇಳುತ್ತಿದ್ದಾರೆ. ಪರಿಣಾಮ ಏನಾಗುತ್ತದೆ ಎಂದರೆ ರಿಯಲ್ ಎಸ್ಟೇಟ್ ಮತ್ತು ಚಿನಿವಾರ ಪೇಟೆಯಲ್ಲಿ ಆಗಿರುವ ಅಸಹಜ ಬೆಳವಣಿಗೆ ಸಹಜತೆಗೆ ಬರುತ್ತದೆ. ಶ್ರೀಮಂತರಲ್ಲದವರೂ ಭೂಮಿ, ಮನೆ ಮತ್ತು ಚಿನ್ನವನ್ನು ನೋಡುವ ಕಾಲ ಬರುತ್ತದೆ ಎಂದು ತಜ್ಞರು ಅಂದಾಜು ಮಾಡುತ್ತಿದ್ದಾರೆ. ಇದರಿಂದ ವಹಿವಾಟು ಹೆಚ್ಚಾದರೆ ಈ ಎರಡೂ ಉದ್ಯಮಗಳಲ್ಲಿ ಲವಲವಿಕೆ ಬರುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಣದ ಹರಿವು ಜಾಸ್ತಿ ಆಗುವುದರಿಂದ ಗೃಹಸಾಲ ಮತ್ತು ಇತರ ಸಾಲದ ಮೇಲಿನ ಬಡ್ಡಿದರ ನಿರೀಕ್ಷೆಯಂತೆ ಇಳಿಕೆಯಾದರೆ ಮತ್ತಷ್ಟು ಅನುಕೂಲ ಆಗುತ್ತದೆ ಎಂಬ ಅಭಿಪ್ರಾಯವೂ ಇದೆ.
ಒಟ್ಟಾರೆ ಹೇಳುವುದಾದರೆ ಈಗ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನೋಟುರದ್ದತಿ ನಿರ್ಧಾರವನ್ನು ಮುಖ್ಯವಾಗಿ ಎರಡು ಮುಖದಲ್ಲಿ ನೋಡಬೇಕಿದೆ. ಒಂದು ಸ್ವಚ್ಛ ಆರ್ಥಿಕತೆ ಮತ್ತು ಸುಭದ್ರ ಆರ್ಥಿಕತೆ ದೃಷ್ಟಿಯಿಂದ. ಮತ್ತೊಂದು ಸ್ವಚ್ಛ ರಾಜಕೀಯ ಮತ್ತು ಸಮರ್ಥ ರಾಜಕೀಯ ದೃಷ್ಟಿಕೋನದಿಂದ. ವಿಶೇಷವೆಂದರೆ ಸ್ವಚ್ಛ ಆರ್ಥಿಕತೆ ಮತ್ತು ಸ್ವಚ್ಛ ರಾಜಕೀಯ ಎರಡೂ ಮೇಳೈಸಿದರೆ ಇನ್ನೂ ಹೆಚ್ಚಿನ ಪರಿಣಾಮವನ್ನು ನಾವು ನಿರೀಕ್ಷಿಸಬಹುದು ಎಂಬುದರಲ್ಲಿ ಅನುಮಾನ ಬೇಡ. ಏನಿಲ್ಲ ಅಂದರೂ ಒಂದು ಉತ್ತಮ ಆಲೋಚನೆಗೆ, ಜಾಗೃತಿಗೆ ಈ ಕ್ರಮ ಮೂಲಕಾರಣ ಆಗಲಿದೆ.

ಹೀಗೆ ಮಾಡಿದರೆ ಉತ್ತಮ
ಸರ್ಕಾರ ಈಗ ತೆಗೆದುಕೊಂಡಿರುವ ಕ್ರಮ ಹೆಚ್ಚು ಪರಿಣಾಮಕಾರಿ ಆಗಬೇಕೆಂದರೆ ಸರ್ಕಾರಿ ಅಧಿಕಾರಿಗಳು ತಾವು ಲಂಚ ತೆಗೆದುಕೊಳ್ಳುವುದಿಲ್ಲ ಎಂದು ತೀರ್ಮಾನಿಸಬಹುದು- ಜಪ್ಪಯ್ಯ ಅಂದರೂ ಲಂಚ ಕೊಡುವುದಿಲ್ಲ ಎಂಬ ತೀರ್ಮಾನಕ್ಕೆ ಜನರು ಬರಬಹುದು- ಹಣ ತೆಗೆದುಕೊಂಡು ವೋಟ್ ಹಾಕುವುದಿಲ್ಲ ಎಂದು ಮತದಾರರು- ಹಣಕೊಟ್ಟು ಮತ ಖರೀದಿಸುವುದಿಲ್ಲ ಎಂದು ರಾಜಕೀಯ ನೇತಾರರು (ಬಿಜೆಪಿ ನಾಯಕರಾದರೂ ಹಾಗೆ ಮಾಡಬೇಕು) ಶಪಥ ಮಾಡಬಹುದು. ಕೊನೇಪಕ್ಷ ಬಿಲ್ ಇಲ್ಲದೆ ಯಾವುದೇ ವಸ್ತು ಖರೀದಿಸುವುದಿಲ್ಲ, ಬ್ಯಾಂಕ್ ಅಕೌಂಟ್‍ಗೆ ಹೊರತಾಗಿ ಹಣಕಾಸು ವ್ಯವಹಾರ ಮಾಡುವುದಿಲ್ಲ ಎಂದು ತೀರ್ಮಾನಿಸಿದರೂ ಅಗಾಧ ಬದಲಾವಣೆಯಾಗುತ್ತದೆ.
ಕೊನೇಮಾತು… ಇಷ್ಟು ದಿನ ಅಕ್ರಮ ಕುಳಗಳು ಜನಸಾಮಾನ್ಯರನ್ನು ಗೋಳು ಹೊಯ್ದುಕೊಂಡು ಮಜಾ ತೆಗೆದುಕೊಳ್ಳುತ್ತಿದ್ದರು. ಈಗ ಅಕ್ರಮ ಕುಳಗಳು ಪಡುತ್ತಿರುವ ಪಡಿಪಾಟಲನ್ನು ನೋಡಿಕೊಂಡು ಶ್ರೀಸಾಮಾನ್ಯ ಮಜಾ ತೆಗೆದುಕೊಳ್ಳುವ ಕಾಲ ಬಂದಿದೆ. ಈಗ ಸಿಕ್ಕಿಬಿದ್ದಿರುವುದು ಚಿಕ್ಕರಾಯಪ್ಪ, ಜಯಚಂದ್ರ ಇಂಥವರು. ದೊಡ್ಡ ರಾಯಪ್ಪಗಳು ಮುಂದೆ ಸಿಕ್ಕಿಬೀಳುತ್ತಾರೆಂದು ನಿರೀಕ್ಷೆ ಇಟ್ಟುಕೊಳ್ಳೋಣ…

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top