ಚುನಾಯಿತರೆಂಬ ಕಾರಣಕ್ಕೆ ಸಚಿವರಾದರೆ ಸಾಕೆ?

ನೌಕರರು, ಮಂತ್ರಿಗಳ ಕಾರ್ಯಕ್ಷಮತೆಯನ್ನು ಒರೆಗೆ ಹಚ್ಚುವುದು ಮಾತ್ರವಲ್ಲ, ನೂರಾರು ಅನಗತ್ಯ ನಿಗಮ ಮಂಡಳಿಗಳಿಗೆ ನೇಮಕ ಮಾಡದೆ ತೆರಿಗೆದಾರರ ಕೋಟ್ಯಂತರ ರೂಪಾಯಿಗಳನ್ನು ಉಳಿಸುವ ಕೆಲಸವನ್ನೂ ಮೋದಿ ಮಾಡಿದ್ದಾರೆ. ಈ ಲೆಕ್ಕ, ಪಾರದರ್ಶಕತೆಯೆಲ್ಲ ಕೇಜ್ರಿವಾಲ್, ಸಿದ್ದರಾಮಯ್ಯನವರಂಥವರಿಗೂ ಅನ್ವಯ ಆಗಬೇಕು, ಅರ್ಥ ಆಗಬೇಕು.

MODIಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನಾರಚನೆ ರಂಪಾಟ ಇನ್ನು ಮುಂದುವರಿಯಲಾರದು. ಅದಕ್ಕೆ ಕಾರಣ ಹಲವು. ಕೈಬಿಟ್ಟವರೆಲ್ಲ ಕೈಲಾಗದವರೇ ಎಂಬುದು ಒಂದು. ಕಾಂಗ್ರೆಸ್ ಹೈಕಮಾಂಡಿಗೆ ಸಿದ್ದರಾಮಯ್ಯ ಸ್ಥಾನ ತುಂಬುವ ಬೇರೆ ಆಯ್ಕೆ ಇಲ್ಲ ಎಂಬುದು ಮತ್ತೊಂದು. ಕಮಕ್ ಕಿಮಕ್ ಎಂದರೆ ಬಾಯಿಮುಚ್ಚಿಸಲು ಅಧಿಕಾರಾರೂಢ ಸರ್ಕಾರದ ಬಳಿ ಹಲವು ಅಸ್ತ್ರಗಳಿರುತ್ತವೆ ಎಂಬುದು ಇನ್ನೊಂದು ಕಾರಣ. ಅಂಬರೀಷ್ ಬಿಟ್ಟು ಬೇರೆಯವರ ಬಾಯಿ ಮುಚ್ಚಿಸಲು ಅವರವರ ದೌರ್ಬಲ್ಯಗಳೇ ಸಾಕು.

ಇತ್ತ ಹೀಗಾದರೆ ಅತ್ತ ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆ ಎಂಬ ಜೇನುಗೂಡಿಗೆ ಕೈಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಅದಕ್ಕೆ ಅವರು ಅಣಿಯಾಗುತ್ತಿರುವ ರೀತಿ ಬಹಳ ಇಂಟರೆಸ್ಟಿಂಗ್ ಆಗಿದೆ. ಆ ವಿಷಯಕ್ಕೆ ಬರುವ ಪೂರ್ವದಲ್ಲಿ ಈ ಹಿಂದೆ ಸಂಪುಟ ರಚನೆ ಮತ್ತು ವಿಸ್ತರಣೆ ಸಂದರ್ಭದಲ್ಲಿ ನಡೆದ ಎರಡು ಐನಾತಿ ಪ್ರಸಂಗಗಳನ್ನು ಒಮ್ಮೆ ಮೆಲುಕುಹಾಕೋಣ.

ಎಂಭತ್ತರ ದಶಕದ ಮಾತು. ಉತ್ತರ ಕರ್ನಾಟಕ ಭಾಗದ ಓರ್ವ ಶಾಸಕರನ್ನು ಆಗಿನ ಮುಖ್ಯಮಂತ್ರಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಆ ಪುಣ್ಯಾತ್ಮ ಅರಣ್ಯ ಖಾತೆಯ ಮೇಲೆ ಕಣ್ಣಿಟ್ಟುಕೊಂಡಿದ್ದರಂತೆ. ಅವರ ಆಸಕ್ತಿಗೆ ಕಾರಣ ಏನಿತ್ತೋ ಗೊತ್ತಿಲ್ಲ. ಸರ್ಕಾರದ ಸುತ್ತೋಲೆಯಲ್ಲಿ ಆ ಮಂತ್ರಿಗೆ ಫಾರೆಸ್ಟ್ ಖಾತೆ ನೀಡಲಾಗಿದೆ ಎಂದು ಹೇಳಲಾಗಿತ್ತು. ಅದನ್ನು ನೋಡಿದ ಮಂತ್ರಿ ಮಹಾಶಯ ಮುನಿಸಿಕೊಂಡು, ‘ನಾನು ಅರಣ್ಯ ಖಾತೆ ಕೇಳಿದರೆ ಇವರು ಫಾರೆಸ್ಟ್ ಇಲಾಖೆ ಕೊಡ್ತಾರಂತ್ರಿ’ ಎಂದು ಅವರು ಬೇಸರದಿಂದ ಗೊಣಗಿದ್ದರಂತೆ. ಇದು ಕ್ಯಾಬಿನೆಟ್ ದರ್ಜೆ ಮಂತ್ರಿಯೊಬ್ಬರ ತಿಳಿವಳಿಕೆ ಮಟ್ಟ. ಹಾಗೇ ಮತ್ತೊಂದು ಸಂದರ್ಭ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಬಿಜೆಪಿ ಸರ್ಕಾರದ ಅಪಸವ್ಯ, ಅಪವಾದಗಳು ಒಂದೆರಡೇ? ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಚರ್ಚೆ ಶುರುವಾದಾಗ ಓರ್ವ ಶಾಸಕರು ಮಂತ್ರಿಯಾಗಲು ಹಕ್ಕು ಮಂಡಿಸಿದ ರೀತಿ ಬಹಳ ವಿಶೇಷವಾಗಿತ್ತು. ‘ನಾನು ವಡ್ಡರ ಸಮುದಾಯಕ್ಕೆ ಸೇರಿದವ. ಕಲ್ಲು ಒಡೆಯುವುದು ನಮ್ಮವರ ಕುಲ ಕಸುಬು. ಹೀಗಾಗಿ ನನಗೆ ಕೊಡುವುದಾದರೆ ಗಣಿ ಖಾತೆಯನ್ನೇ ಕೊಡಬೇಕು’ ಎಂಬ ವಾದವನ್ನು ಮಾಧ್ಯಮಗಳ ಮುಖೇನವೇ ಮುಂದಿಟ್ಟಿದ್ದರು.

ಖಾತೆಯ ಆಕರ್ಷಣೆ:

jpgಈ ರೀತಿ ಖಾತೆಗಳ ಕ್ಯಾತೆಗೆ ಜೋತು ಬೀಳಲು ಇರಬಹುದಾದ ಕಾರಣಗಳಿಗೆ ಅದರದ್ದೇ ಆದ ವಿಶೇಷ ಇತಿಹಾಸವೂ ಇದೆ ಅಂತಿಟ್ಟುಕೊಳ್ಳಿ. ಸುಮಾರು ಎಂಟು-ಹತ್ತು ವರ್ಷಗಳ ಹಿಂದಿನವರೆಗೆ ಅಬಕಾರಿ ಖಾತೆ ಹೆಚ್ಚು ದುಡ್ಡು ಮಾಡಲು ಅವಕಾಶ ಇರುವ ಖಾತೆ ಎಂದೇ ಜನಜನಿತವಾಗಿತ್ತು. ಸ್ವಂತಕ್ಕೆ ದುಡ್ಡು ಮಾಡಿಕೊಳ್ಳಲು, ಚುನಾವಣೆಗೋಸ್ಕರ ಪಕ್ಷಕ್ಕೆ ನಿಧಿ ಸಂಗ್ರಹಿಸಲು, ಮತ್ತು ಚುನಾವಣೆಯಲ್ಲಿ ಬಳಕೆ ಮಾಡುವ ಸಂಪನ್ಮೂಲ ಕ್ರೋಡೀಕರಿಸಲು ಹೆಚ್ಚು ಅವಕಾಶ ಇರುವ ಏಕೈಕ ಖಾತೆ ಎಂತಲೇ ಅಬಕಾರಿ ಖಾತೆಗೆ ಕುಖ್ಯಾತಿ ಇತ್ತು. ಹೀಗಾಗಿ ಅಬಕಾರಿ ಸಚಿವ ಎಂದರೆ ಅಧಿಕಾರಾರೂಢ ಪಕ್ಷದ ಪಾಲಿಗೆ ಫೈನಾನ್ಸ್ ಮಿನಿಸ್ಟರ್​ನಂತೆಯೇ ಆಗಿರುತ್ತಿದ್ದರು. ಅವರ ದರ್ಪ, ದೌಲತ್ತು, ಭಾವಭಂಗಿಗಳೇ ಬೇರೆ ಇರುತ್ತಿದ್ದವು. ತದನಂತರದಲ್ಲಿ ಕೈಗಾರಿಕಾ ಖಾತೆಗೆ ಆ ರೀತಿಯ ಆಕರ್ಷಣೆ ಬಂತು. ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳ ಪರಿಣಾಮ ಕೈಗಾರಿಕೋದ್ಯಮಕ್ಕೆ ಹೆಚ್ಚು ಮಹತ್ವ ಸಿಕ್ಕಿತು. ಸಾವಿರ ಲಕ್ಷ ಕೋಟಿ ರೂ.ಗಳಲ್ಲಿ ಖಾಸಗಿಯವರಿಂದ ಬಂಡವಾಳ ಹೂಡಿಕೆ ಹರಿದು ಬರಲು ಶುರುವಾದ ಮೇಲೆ ಕೈಗಾರಿಕಾ ಖಾತೆಗೆ ಭಾರಿ ಮಹತ್ವ ಬಂತು. ಅದರಲ್ಲೂ ಸಾರ್ವತ್ರಿಕ ಚುನಾವಣೆಗಳಲ್ಲಿ ಬಲಾಢ್ಯ ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಿಕೆ ಮಾಡುವ ಪರಿಪಾಠ ಆರಂಭ ಆದ ಮೇಲೆ ಆ ಖಾತೆಗೆ ಇನ್ನೂ ಹೆಚ್ಚಿನ ಖದರು ಬಂತು.

ಇನ್ನು, ಬಿಹಾರ, ಜಾರ್ಖಂಡ್, ಛತ್ತೀಸ್​ಗಢ, ಒಡಿಶಾ, ನೆರೆಯ ಆಂಧ್ರಪ್ರದೇಶ ಮತ್ತು ನಮ್ಮ ಕರ್ನಾಟಕ ಮುಂತಾದ ರಾಜ್ಯಗಳ ಮಟ್ಟಿಗೆ ಹೇಳುವುದಾದರೆ ಗಣಿ ಖಾತೆಗೂ ಕೈಗಾರಿಕಾ ಖಾತೆಗೆ ಸರಿಸಮನಾದ, ಒಂದು ಲೆಕ್ಕಾಚಾರದಲ್ಲಿ ಅದಕ್ಕಿಂತ ತುಸು ಹೆಚ್ಚೇ ಆಕರ್ಷಣೆ ಬಂದಿತ್ತು. ಕಬ್ಬಿಣದ ಅದಿರನ್ನು ಭೂಮಿಯಿಂದ ಅಗೆದು ತೆಗೆದು ಮಾರಿ, ರಫ್ತು ಮಾಡಿ ಹೇರಳ ದುಡ್ಡು ಮಾಡಲು ಖಾಸಗಿಯವರಿಗೆ ಮುಕ್ತ ಅವಕಾಶ ಕೊಟ್ಟದ್ದು ಅದಕ್ಕೆ ಕಾರಣ. ಅದರ ಘನಘೊರ ಪರಿಣಾಮವನ್ನೂ ಬೇರೆಲ್ಲಾ ರಾಜ್ಯಗಳಿಗಿಂತ ಹೆಚ್ಚಾಗಿ ಕರ್ನಾಟಕದಲ್ಲಿ ನಾವು ಕಣ್ಣಾರೆ ಕಂಡಿದ್ದೇವೆ. ಒಂದು ಸಲ ಅಕ್ರಮಗಳ ಧೂಳೆಬ್ಬಿಸಿ ಸರ್ಕಾರಗಳನ್ನೇ ತನ್ನ ಗರ್ಭದೊಳಕ್ಕೆ ಹುದುಗಿಸಿಕೊಳ್ಳಲು ಹೊರಟಾಗ, ಗಣಿಗಾರಿಕೆ ಅಟಾಟೋಪಕ್ಕೆ ಕಡಿವಾಣ ಬಿತ್ತು. ಹೀಗಾಗಿ ಸಹಜವಾಗಿ ಗಣಿ ಖಾತೆ ತನ್ನ ಮಹತ್ವ ಕಳೆದುಕೊಂಡಿತು. ಬಳಿಕ ಗಣಿ ಖಾತೆಯ ಸ್ಥಾನ ಆಕ್ರಮಿಸಿಕೊಂಡಿದ್ದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಿಸಿದ ಇಲಾಖೆ. ಅದರಲ್ಲೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ), ಬೆಂಗಳೂರು ನಗರಾಭಿವೃದ್ಧಿ ಖಾತೆಗಳಿಗೆ ಎಲ್ಲಿಲ್ಲದ ಬೇಡಿಕೆ ಬಂತು. ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಕಾರಣವಾದ ಅರ್ಕಾವತಿ ಡಿನೋಟಿಫಿಕೇಶನ್ ಹಗರಣ ಅದರ ಒಂದು ರೂಪ ಮಾತ್ರ. ಎಷ್ಟೆಂದರೆ ಅರ್ಕಾವತಿ ಎಂದರೆ ಸಾಕು ಸಿಎಂ ಸಿದ್ದರಾಮಯ್ಯ ಅವರಿಗೆ ‘ಕರ್ಕಾವತಿ’ ಎಂದ ಹಾಗೆ ಕೇಳಿ ಈಗಲೂ ಬೆಚ್ಚಿಬೀಳುತ್ತಾರೆ! ಲೋಕಾಯಕ್ತ ದುರ್ಬಲಗೊಳಿಸಿದ್ದು, ಎಸಿಬಿ ಎಂಬ ಹಗ್ಗದ ಹಾವನ್ನು ಮುಂದೆ ಬಿಟ್ಟದ್ದು ಇವೆಲ್ಲ ಅದರ ಸೈಡ್ ಎಫೆಕ್ಟ್ ಎನ್ನಬಹುದು. ಇರಲಿ, ಈ ಖಾತೆ ಮತ್ತು ಖಾತೆಗಾಗಿ ನಡೆಯುವ ಕ್ಯಾತೆಗಳೆಲ್ಲ ಯಾವ ಪುರುಷಾರ್ಥಕ್ಕಾಗಿ? ಅದರ ಹಿಂದಿರುವುದು ವ್ಯಕ್ತಿಗತ ಹಿತವೋ, ಸಾರ್ವತ್ರಿಕ ಹಿತವೋ ಎಂಬುದನ್ನು ಎಲ್ಲರೂ ಆಲೋಚಿಸಬೇಕು ಎಂಬುದಕ್ಕಾಗಿ ಇಷ್ಟು ಪೀಠಿಕೆ ಹಾಕಿದ್ದು.

ಮಂತ್ರಿಗಳ ಮೌಲ್ಯಮಾಪನ:

ಸಂಪುಟ ಸೇರಲು ಎಷ್ಟೆಲ್ಲ ಸರ್ಕಸ್ ನಡೆಯುತ್ತಿರಬೇಕಾದರೆ ಅದೇ ಸಂಪುಟದಲ್ಲಿ ಯಾರನ್ನು ಇಟ್ಟುಕೊಳ್ಳಬೇಕು, ಯಾರನ್ನು ಹೊರಗೆ ಕಳಿಸಬೇಕು, ಯಾರನ್ನು ಒಳಕ್ಕೆ ಬಿಟ್ಟುಕೊಳ್ಳಬೇಕು ಎಂದು ತೀರ್ವನಿಸುವುದಕ್ಕಾಗಿ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಹೊಸ ಮಾಗೋಪಾಯ ಅನುಸರಿಸುತ್ತಿರುವುದು ಈಗ ಚರ್ಚೆಯಾಗುತ್ತಿರುವ ಪ್ರಮುಖ ವಿಚಾರ. ಅದಕ್ಕಾಗಿ ಮೋದಿಯವರು ತಮ್ಮ ಸಂಪುಟದ ಸಚಿವರು ಕಳೆದ ಎರಡು ವರ್ಷಗಳಲ್ಲಿ ಮಾಡಿರುವ ಸಾಧನೆಯ ಪರಾಮರ್ಶೆಗೆ ಮುಂದಾಗಿದ್ದಾರೆ. ಇದೊಂದು ಉತ್ತಮ ಉಪಕ್ರಮ ಎಂಬ ಅಭಿಪ್ರಾಯವೂ ರಾಜಕೀಯ ವಲಯ ಮತ್ತು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಸಾಮಾನ್ಯವಾಗಿ ಒಂದು ಸಣ್ಣ ಕಂಪನಿ ಸಹ ತನ್ನ ಸಿಬ್ಬಂದಿ ಕಾರ್ಯಕ್ಷಮತೆಯ ಮೌಲ್ಯಮಾಪನ ಮಾಡುವುದನ್ನು ಕಾಣುತ್ತೇವೆ. ಕಾಲಕಾಲಕ್ಕೆ ಪ್ರಗತಿಯ ಪರಾಮರ್ಶೆ, ಲಾಭ ನಷ್ಟದ ಲೆಕ್ಕಾಚಾರ ಮಾಡಲಾಗುತ್ತದೆ. ಹಾಗೆ ಮಾಡಿದಾಗ ಮಾತ್ರ ಆ ಕಂಪನಿ ದೀರ್ಘಕಾಲ ಉಳಿಯುತ್ತದೆ ಮತ್ತು ಬೆಳೆಯುತ್ತದೆ. ಕೇವಲ ಖಾಸಗಿ ಕಂಪನಿ ಅಂತಲ್ಲ, ಆಗೀಗ ಕೆಲವು ದಕ್ಷ ಮಂತ್ರಿಗಳು ಇಲಾಖೆಯ ಹಿರಿಯ ಅಧಿಕಾರಿಗಳನ್ನು ಮುಂದೆ ಕುಳ್ಳಿರಿಸಿಕೊಂಡು ಇಲಾಖೆಗಳ ಪರಾಮರ್ಶೆ ಮಾಡುವುದಿದೆ. ಹಾಗೆಯೇ ಸರ್ಕಾರಗಳ ಯಜಮಾನರು ಅಂತ ಕರೆಸಿಕೊಳ್ಳುವ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಸರ್ಕಾರದ ಮಂತ್ರಿಗಳನ್ನು ಮುಂದಿಟ್ಟುಕೊಂಡು ‘ಇಷ್ಟು ದಿನದ ಅವಧಿಯಲ್ಲಿ ನಿಮ್ಮ ಇಲಾಖೆಗೆ ಸಂಬಂಧಿಸಿದಂತೆ ಏನೇನು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ? ಸರ್ಕಾರದ ಯೋಜನೆಗಳನ್ನು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದೀರಿ ಮತ್ತು ಅವನ್ನು ಜನರಿಗೆ ತಲುಪಿಸಲು ಏನೇನು ಕ್ರಮ ಕೈಗೊಂಡಿದ್ದೀರಿ?’ ಎಂದು ಕೇಳಬೇಕಲ್ಲವೆ? ಸರ್ಕಾರಗಳು ಜನತೆಗೆ ಉತ್ತರದಾಯಿ ಆಗಬೇಕಾಗಿರುವುದರಿಂದ ಮಂತ್ರಿಗಳು, ಶಾಸಕರು, ಸಂಸದರ ಮೇಲೆ ಸರ್ಕಾರ ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ವಿನಿಯೋಗ ಮಾಡುವುದರಿಂದ ಮುಲಾಜಿಲ್ಲದೆ ಹಾಗೆ ಮಾಡುವುದೇ ಸರಿಯಾದ ಕ್ರಮ. ಆದರೆ ದುರ್ದೈವದ ಸಂಗತಿ ಎಂದರೆ ಇಷ್ಟುದಿನ ಯಾರೂ ಹಾಗೆ ಮಾಡಲು ಮುಂದಾಗಿರಲಿಲ್ಲ. ಅದಕ್ಕೆ ಇರುವ ಕಾರಣಗಳನ್ನು ಪ್ರತ್ಯೇಕವಾಗಿ ಹೇಳುವ ಜರೂರತ್ತಿಲ್ಲ. ಈಗ ಪ್ರಧಾನಿ ಮೋದಿ ಅದನ್ನು ಮಾಡಲು ಹೊರಟಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದೇ ಹೇಳಬೇಕು. ಪರಿಣಾಮವನ್ನು ಕಾದು ನೋಡೋಣ.

ಯಾವುದೇ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದರೆ ಹೆಚ್ಚುಗಾರಿಕೆಯ ಅಹಮನ್ನು ನೆತ್ತಿಗೇರಿಸಿಕೊಂಡಿರುವ ಅಧಿಕಾರಶಾಹಿಯನ್ನು ಸರಿಯಾಗಿ ದುಡಿಸಿಕೊಳ್ಳುವ ಜಾಣ್ಮೆ, ತಾಕತ್ತು ಅರ್ಹತೆ ಇರುವ ಮಂತ್ರಿಗಳನ್ನು ಇಟ್ಟುಕೊಳ್ಳಲೇಬೇಕು.

ಅಮೆರಿಕ ಮಾದರಿ:

ವಾಸ್ತವದಲ್ಲಿ ಜನರಿಂದ ಆಯ್ಕೆಯಾಗಿ ಓರ್ವ ಶಾಸಕನಾಗುವುದಕ್ಕೂ, ಸಂಸದನಾಗುವುದಕ್ಕೂ, ಕೇಂದ್ರ ಮತ್ತು ರಾಜ್ಯದ ಮಂತ್ರಿಮಂಡಲದಲ್ಲಿ ಮಂತ್ರಿಯಾಗುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಜನರಿಂದ ಚುನಾಯಿತನಾದ ಎಂಬ ಕಾರಣಕ್ಕೆ ಅರ್ಹತೆಯಿಲ್ಲದಿದ್ದರೂ ಮಂತ್ರಿ ಮಾಡಬೇಕೆಂಬ ಸಂಪ್ರದಾಯವೇ ತರ್ಕವಿಲ್ಲದ್ದು. ಒಂದೆಡೆ ತಾನೇ ಸರ್ವಸ್ವ ಎಂಬಂತೆ ವರ್ತಿಸುವ ಅಧಿಕಾರಶಾಹಿ ಲಾಬಿ, ಮತ್ತೊಂದೆಡೆ ವಿಷಯದ ಪರಿಣತಿ, ಕನಿಷ್ಠ ಆಡಳಿತದ ಜ್ಞಾನವೂ ಇಲ್ಲದ ಜನಪ್ರತಿನಿಧಿಗಳು. ಈ ಕಂದಕವೇ ಅರ್ಧ ದೇಶ ಅಭಿವೃದ್ಧಿಯಲ್ಲಿ ಹಿಂದೆ ಬೀಳಲು ಮತ್ತು ತೆರಿಗೆ ಹಣ ತಲುಪಬೇಕಾದಲ್ಲಿ ತಲುಪದೇ ಇರಲು ಮುಖ್ಯ ಕಾರಣ. ಇದಕ್ಕೆ ಅಮೆರಿಕ, ಜಪಾನ್, ಸಿಂಗಾಪುರ, ಚೀನಾದಂತಹ ಕೆಲ ಮುಂದುವರಿದ ದೇಶಗಳು ಮಾರ್ಗ ಕಂಡುಕೊಂಡಿವೆ. ಉದಾಹರಣೆಗೆ ಅಮೆರಿಕದಲ್ಲಿ ನಮ್ಮಲ್ಲಿನ ಮಂತ್ರಿಗಳಿಗೆ ಸರಿಸಮಾನ ಹುದ್ದೆಗಳಿಗೆ ಅವರವರ ಪರಿಣಿತಿ ಆಧರಿಸಿ ಸರ್ಕಾರದ ಸೇವೆಯಲ್ಲಿರುವವರನ್ನು ಅಥವಾ ಹೊರಗಿನವರನ್ನು ಅಧ್ಯಕ್ಷರು ನೇಮಕ ಮಾಡಿಕೊಳ್ಳುವ ಪರಿಪಾಠವಿದೆ. ಅಧ್ಯಕ್ಷರ ನೇಮಕಾತಿಗೆ ಸೆನೆಟ್​ನ ಔಪಚಾರಿಕ ಅನುಮೋದನೆ ಸಿಕ್ಕರೆ ಸಾಕು. ಸಂಸತ್ ಸದಸ್ಯರನ್ನೇ ಸಚಿವ ಪದವಿಗೆ ನೇಮಕ ಮಾಡಿಕೊಳ್ಳಬೇಕೆಂಬ ಗೊಡವೆ ಅಮೆರಿಕ ಸರ್ಕಾರಕ್ಕಿಲ್ಲ. ಬೇರೆಲ್ಲ ವಿಷಯಗಳಲ್ಲಿ ಅಮೆರಿಕವನ್ನು ಅನುಸರಿಸುವ ಭಾರತ ಸಚಿವರ ಆಯ್ಕೆ ವಿಚಾರದಲ್ಲೂ ಆ ದೇಶವನ್ನು ಅನುಸರಿಸಬಹುದಲ್ಲವೇ?

ಕನಿಷ್ಠಪಕ್ಷ ಹಣಕಾಸು, ವಿಜ್ಞಾನ, ತಂತ್ರಜ್ಞಾನ, ಕೃಷಿ, ಮೂಲಸೌಕರ್ಯ ಅಭಿವೃದ್ಧಿ ಇತ್ಯಾದಿ ವಿಶೇಷ ಇಲಾಖೆಗಳಲ್ಲಾದರೂ ಅದನ್ನು ಅನುಸರಿಸಬೇಕಲ್ಲವೆ? ಆ ದೃಷ್ಟಿಯಿಂದ ನೋಡಿದರೆ ಆರ್ಥಿಕ ತಜ್ಞ ಮನಮೋಹನ್ ಸಿಂಗ್​ರನ್ನು ಹಣಕಾಸು ಸಚಿವರನ್ನಾಗಿ ಮಾಡಿ ಪಿ.ವಿ. ನರಸಿಂಹರಾವ್ ಅವರು ಒಳ್ಳೆಯ ಕೆಲಸ ಮಾಡಿದ್ದರು. ಆಗ ಪಿವಿಎನ್ ಆ ನಿರ್ಧಾರಕ್ಕೆ ಬಾರದೇ ಹೋಗಿದ್ದರೆ ಜಾಗತೀಕರಣ, ಉದಾರೀಕರಣದ ಯುಗದಲ್ಲಿ ಭಾರತಕ್ಕೆ ಬಹಳ ನಷ್ಟ ಆಗುತ್ತಿತ್ತು ಅಲ್ಲವೇ?

ಮತ್ತೆ ಮೋದಿ ವಿಚಾರಕ್ಕೇ ಬರುವುದಾದರೆ ಕೇಂದ್ರ ಸರ್ಕಾರಿ ನೌಕರರನ್ನು, ಮಂತ್ರಿಗಳನ್ನು ಹನ್ನೆರಡು ಹದಿನಾಲ್ಕು ತಾಸು ದುಡಿಸಿ ಕಾರ್ಯಕ್ಷಮತೆಯನ್ನು ಒರೆಗೆ ಹಚ್ಚುವುದು ಮಾತ್ರವಲ್ಲ, ನೂರಾರು ಅನಗತ್ಯ ನಿಗಮ ಮಂಡಳಿಗಳಿಗೆ ನೇಮಕ ಮಾಡದಿರುವ ಮೂಲಕ ತೆರಿಗೆದಾರರ ಕೋಟ್ಯಂತರ ರೂಪಾಯಿಗಳನ್ನು ಉಳಿಸುವ ಕೆಲಸವನ್ನೂ ಮಾಡಿದ್ದಾರೆ. ಈ ಲೆಕ್ಕ, ಪಾರದರ್ಶಕತೆಯೆಲ್ಲ ಕೇಜ್ರಿವಾಲ್ ಅಂಥ ಸುಧಾರಣಾವಾದಿಗಳಿಗೆ, ಸಿದ್ದರಾಮಯ್ಯ ಅವರಂಥ ಸಮಾಜವಾದಿಗಳಿಗೂ ಅನ್ವಯ ಆಗಬೇಕು. ಅರ್ಥ ಆಗಬೇಕು. ಅನಗತ್ಯ ಸಂಸದೀಯ ಕಾರ್ಯದರ್ಶಿಗಳ ನೇಮಕದಂಥ ರೂಢಿಯನ್ನು ಬಿಡಬೇಕು. ಸುಧಾರಣೆ ವಿಷಯದಲ್ಲಿ ಆದದ್ದು ಅಲ್ಪ, ಆಗಬೇಕಾದ್ದು ಅಗಾಧ! ಏನಂತೀರಿ…

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top