ರಾಹುಲ್ ಗಾಂಧಿ ಬ್ರಾಹ್ಮಣರೋ, ಹಿಂದುವೋ, ಅಹಿಂದುವೋ, ರೋಮನ್ ಕ್ಯಾಥೋಲಿಕ್ ಕ್ರೖೆಸ್ತರೋ ಎಂಬ ಚರ್ಚೆ ಗೊತ್ತು. ಆದರೆ ಎಡಪಂಥೀಯ ವಿಚಾರಧಾರೆಯ ಜಾತ್ಯತೀತ ನಿಲುವಿನ ನೆಹರು ಇಂದಿರಾ ಪತಿ ಫಿರೋಜ್ರಿಗೆ ಬ್ರಾಹ್ಮಣ್ಯದ ದೀಕ್ಷೆ ಕೊಟ್ಟಿದ್ದು ಗೊತ್ತೇ?
ಇಲ್ಲಿ ಕೆಲವೊಮ್ಮೆ ವಿಷಯವೇ ಅಲ್ಲದ ವಿಷಯಗಳು ಮುಖ್ಯಭೂಮಿಕೆಗೆ ಬಂದು ಒಂದು ಸಾರ್ವತ್ರಿಕ ಚುನಾವಣೆಯ ದಿಕ್ಕು ಮತ್ತು ಭವಿಷ್ಯವನ್ನೇ ಬದಲಿಸಿಬಿಡುತ್ತವೆ. ಇದು ಇಂದಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪರಿ.
ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲು ಅದೇ ಹಳೇಸೂತ್ರ ಜಾತಿ ಸಮೀಕರಣವನ್ನೇ ನೆಚ್ಚಿಕೊಂಡಿರುವುದು ದಿಟವಾಗುತ್ತಿದೆ. ಗುಜರಾತ್ನಲ್ಲಿ ಬಿಜೆಪಿ ಆಳ್ವಿಕೆ ಶುರುವಾಗಿ ಬರೊಬ್ಬರಿ 22 ವರ್ಷಗಳಾದವು. ಆರಂಭದಲ್ಲಿ ಧಾರ್ವಿುಕ ಭಾವನೆಯನ್ನು, ಅಯೋಧ್ಯೆಯಲ್ಲಿ ಮಂದಿರ ನಿರ್ವಣದ ವಿಚಾರವನ್ನು ಬಿಜೆಪಿ ರಾಜಕೀಯ ಅಸ್ತಿತ್ವದ ದಾಳವಾಗಿ ಬಳಸಿಕೊಂಡಿದ್ದು ನಿಜ. ಆದರೆ ಅದೇ ಅದೇ ಮಂದಿರ/ಧರ್ಮ ಸಾರ್ವಕಾಲಿಕವಾಗಿ ಅಧಿಕಾರಕ್ಕೆ ಆಸರೆ ಆಗಲಾರದು ಎಂದರಿತಾಗ ಅಧಿಕಾರಕ್ಕೆ ಶಾಶ್ವತ ಮತ್ತು ಕಾರ್ಯಸಾಧ್ಯ ಅಡಿಪಾಯ ಆಗಬಲ್ಲ ಅಭಿವೃದ್ಧಿ ಮಾದರಿಗೆ ಆ ಪಕ್ಷ ಹೊರಳಿತು. ಬಿಜೆಪಿ ಮತ್ತು ಸಂಘಪರಿವಾರದ ಮುಂಚೂಣಿ ನಾಯಕರ, ಅದರಲ್ಲೂ ವಿಶೇಷವಾಗಿ ನರೇಂದ್ರ ಮೋದಿ ಅವರಲ್ಲಿರುವ ದೂರಗಾಮಿ ಚಿಂತನೆ ಮತ್ತು ರಾಜಕೀಯ ಜಾಣ್ಮೆಯ ಪರಿಣಾಮವದು. ಆ ನಿಟ್ಟಿನಲ್ಲಿ ನೋಡಿದರೆ ನಮಗೆ ಹಲವು ಸಂಗತಿಗಳು ಗೋಚರಿಸುತ್ತವೆ. ಗುಜರಾತ್ನಲ್ಲಿ ಬಿಜೆಪಿ ಆಳ್ವಿಕೆ ಆರಂಭದ ಕಾಲಘಟ್ಟದಲ್ಲಿ ಗೋಧ್ರಾ ಮತ್ತು ಗೋಧ್ರೋತ್ತರ ಹಿಂಸಾಚಾರದ ಘಟನೆಗಳು ನಡೆದವು. ಕೆಲ ಸ್ಥಾಪಿತ ಹಿತಾಸಕ್ತಿಗಳ ಕುಮ್ಮಕ್ಕಿನಿಂದಾಗಿ ಅದು ಅತಿರಂಜಿತವಾಗಿ, ಅವಾಸ್ತವಿಕವಾಗಿ ಸದ್ದು ಮಾಡಿದ್ದೂ ಹೌದು. ಅದನ್ನು ಬಿಟ್ಟರೆ ದೇಶ-ವಿದೇಶದಲ್ಲಿ ಹೆಚ್ಚು ಚರ್ಚೆಗೆ ಕಾರಣವಾದದ್ದು ಗುಜರಾತ್ ಮಾದರಿ ಅಭಿವೃದ್ಧಿ ಕೆಲಸ ಮಾತ್ರ. ಅಲ್ಲಿನ ಅಭಿವೃದ್ಧಿ ಮಾದರಿ ಜಾತಿ, ಮತ, ಧರ್ಮ, ಪ್ರಾಂತ ಇವೆಲ್ಲವುಗಳ ಎಲ್ಲೆಯನ್ನೂ ಮೀರಿ ಜನರಲ್ಲಿ ಹೊಸ ಆಸೆ ಚಿಗುರಿಸಿತು. ನವೀನ ಭರವಸೆ ಮೂಡಿಸಿತು. ಅದೇ ಗುಜರಾತ್ ಅಭಿವೃದ್ಧಿ ಕನಸು 2014ರ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೂ ಅಚ್ಚರಿಯ ಪರಿಣಾಮ ಬೀರಿತು. ಆ ನಂತರ ಸಾಲುಸಾಲಾಗಿ ನಡೆದ ವಿಧಾನಸಭಾ ಚುನಾವಣೆಗಳ ಫಲಿತಾಂಶದ ಮೇಲೆಯೂ ಗುಜರಾತ್ ಅಭಿವೃದ್ಧಿ ಮಾದರಿ ಮತ್ತು ಪ್ರಧಾನಿ ಮೋದಿ ಆಡಳಿತದ ಆಕರ್ಷಣೆ ನೇರ ಪರಿಣಾಮ ಬೀರಿತು. ಇದನ್ನು ಗಮನಿಸಿಯಾದರೂ ರಾಹುಲ್ ಗಾಂಧಿಯವರಂಥ ಹೊಸ ತಲೆಮಾರಿನ ನಾಯಕರು ಭಾರತದ ರಾಜಕೀಯ ವ್ಯವಸ್ಥೆ ಮತ್ತು ಜನರ ನಿರೀಕ್ಷೆಗಳು ವಿಭಿನ್ನ ದಿಕ್ಕಿನತ್ತ ಮುಖ ಮಾಡಿರುವುದನ್ನು ಅರಿಯಬೇಕಿತ್ತು. ಆಗ ಅವರ ರಾಜಕೀಯ ಗುರಿಗಳು ಎಲ್ಲೋ ಒಂದೆಡೆ ಗೆಲುವಿನ ಹಂತವನ್ನು ಸಂಧಿಸುತ್ತಿದ್ದವು. ಆಗ ರಾಹುಲ್ ಗಾಂಧಿಯವರು ಚುನಾವಣಾ ಹೊಸ್ತಿಲಲ್ಲಿ ದೇವಾಲಯಗಳ ಸಂದರ್ಶನ ಮಾಡುವ ಅಗತ್ಯವೂ ಇರುತ್ತಿರಲಿಲ್ಲ. ಅಥವಾ ತಮ್ಮ ಜಾತಿಮೂಲದ ನೆಲೆಯನ್ನು ಚರ್ಚೆಯ ಮುನ್ನೆಲೆಗೆ ತರುವ ಅಗತ್ಯವೂ ಬೀಳುತ್ತಿರಲಿಲ್ಲ. ದುರಂತ ಎಂದರೆ ಈಗ ಆಗುತ್ತಿರುವ ಬೆಳವಣಿಗೆಗಳು ಈ ಲೆಕ್ಕಾಚಾರಗಳಿಗೆ ತದ್ವಿರುದ್ಧ. ಇನ್ನು ಈ ರಾಜಕೀಯ ತಂತ್ರಗಾರಿಕೆಯ ಪರಿಣಾಮ ಏನಾದೀತು?
ಜಾತಿಮೂಲದ ಜಿಜ್ಞಾಸೆ ಮೊದಲಲ್ಲ: ಹಠಾತ್ತಾಗಿ ಆದ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿ ಅವರ ಜಾತಿಮೂಲ ಯಾವುದು? ಅವರು ಬ್ರಾಹ್ಮಣರೋ, ಹಿಂದುವೋ, ಕ್ರೖೆಸ್ತರೋ? ಎಂಬ ಚರ್ಚೆ ಈಗ ರಾಷ್ಟ್ರ ರಾಜಕಾರಣದ ಮುಖ್ಯಭೂಮಿಕೆಗೆ ಬಂದು ನಿಂತಿದೆ.
ಇಲ್ಲಿಯವರೆಗೆ ರಾಹುಲ್ ತಾಯಿ ಸೋನಿಯಾ ಜಾತಿ, ರಾಷ್ಟ್ರೀಯತೆ, ಪೌರತ್ವದ ಕುರಿತು ಸಾಕಷ್ಟು ಬಾರಿ ಚರ್ಚೆ ನಡೆದಿದೆ. ವಿವಾದಕ್ಕೆ ತಿರುಗಿದ್ದೂ ಇದೆ. ಆದರೆ ರಾಹುಲ್ ಮತ್ತು ಪ್ರಿಯಾಂಕಾ ಅವರ ನಾಯಕತ್ವ ಸಾಮರ್ಥ್ಯದ ಕುರಿತು ಚರ್ಚೆ ಆಗಿದೆಯೇ ಹೊರತು ಅವರ ಜಾತಿಮೂಲದ ಕುರಿತಾಗಿರಲಿಲ್ಲ. ಅದಕ್ಕೆ ಕಾರಣ ಇವರು ರಾಜೀವ್ ಗಾಂಧಿ ಮಕ್ಕಳು ಎಂಬುದು. ಆದರೆ ಜಾತಿಮೂಲದ ವಿವಾದವನ್ನು ಸ್ವತಃ ರಾಹುಲ್ ಗಾಂಧಿಯವರೇ ಮೈಮೇಲೆ ಎಳೆದುಕೊಂಡಿದ್ದಾರೆ. ಮೊದಲು ಪ್ರಸ್ತಾಪವಾದದ್ದು ಕೆಲ ವರ್ಷಗಳ ಹಿಂದೆ ರಾಹುಲ್ ಮತ್ತು ಪ್ರಿಯಾಂಕಾ ಅಮೆರಿಕ ಪ್ರವಾಸ ಕೈಗೊಂಡಿದ್ದಾಗ. ‘ನ್ಯೂಯಾರ್ಕ್ ಟೈಮ್್ಸ’ಗೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಇವರು ರೋಮನ್ ಕ್ಯಾಥೋಲಿಕ್ ಸಮುದಾಯಕ್ಕೆ ಸೇರಿದವರು ಎಂದು ಆ ಪತ್ರಿಕೆ ವರದಿ ಮಾಡಿತ್ತು. ಆ ನಂತರ ಕಳೆದ 2012ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಏನೋ ಸಮರ್ಥನೆ ಮಾಡಲು ಹೋಗಿ ತಾನು ಜನಿವಾರ ಧರಿಸುವ ಬ್ರಾಹ್ಮಣ ಎಂದು ರಾಹುಲ್ ಹೇಳಿಕೊಂಡಿದ್ದರು. ಇದೀಗ ಗುಜರಾತಿನ ಸೋಮನಾಥ ದೇವಾಲಯಕ್ಕೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಸಂದರ್ಶಕರ ಮಾಹಿತಿ ಪುಸ್ತಕದಲ್ಲಿ ಹಿಂದೂಯೇತರ ಕಾಲಂನಲ್ಲಿ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರ ಗಾಂಧಿ ನೆಹರು ಕುಟುಂಬದಲ್ಲಿ ಜಾತಿ ಜಿಜ್ಞಾಸೆ ಇದೇ ಮೊದಲಲ್ಲ ಎಂಬದು. ಅದನ್ನು ತಿಳಿಯಲು ಗಾಂಧಿ/ನೆಹರು ಕಾಲಕ್ಕೇ ಹಿಂದಿರುಗಬೇಕಾಗುತ್ತದೆ. ಸ್ವಾತಂತ್ರ್ಯ ಕಾಲಘಟ್ಟದಲ್ಲಿ ಗಾಂಧಿ/ನೆಹರುರವರ ಒಡನಾಡಿಯಾಗಿದ್ದ ಫಿರೋಜ್ರೊಂದಿಗೆ ನೆಹರು ಪುತ್ರಿ ಇಂದಿರಾಗೆ ಪ್ರೇಮಾಂಕುರವಾಗುತ್ತದೆ. ಜಾತಿಯಿಂದ ಕರ್ಮಠ ಬ್ರಾಹ್ಮಣನಾಗಿದ್ದ ನೆಹರುಗೆ, ಪುತ್ರಿ ಇಂದಿರಾಳನ್ನು ಪಾರ್ಸಿ ಸಮುದಾಯಕ್ಕೆ ಸೇರಿದ ಫಿರೋಜ್ಗೆ ಮದುವೆ ಮಾಡಿಕೊಡಲು ಸುತರಾಂ ಒಪ್ಪಿಗೆ ಇರಲಿಲ್ಲ. ಆಗ ಕೆಲ ಆಪ್ತರು ಕೊಟ್ಟ ಸಲಹೆ ಮೇರೆಗೆ ಫಿರೋಜ್ಗೆ ಶಾಸ್ತ್ರೋಕ್ತವಾಗಿ ಉಪನಯನ ಮಾಡಿಸಿ ಬ್ರಾಹ್ಮಣ ಸಂಪ್ರದಾಯಕ್ಕೆ ಪರಿವರ್ತನೆ ಮಾಡಿದ್ದರು ನೆಹರು. ಅಷ್ಟು ಮಾತ್ರವಲ್ಲ, ಪುತ್ರಿಯ ಪ್ರೇಮಪ್ರಕರಣದಿಂದ ವಿಚಲಿತರಾಗಿದ್ದ ನೆಹರುಗೆ ಧೈರ್ಯ ತುಂಬಿದ ಜೈನ ಬನಿಯಾ ಜಾತಿಗೆ ಸೇರಿದ್ದ ಮೋಹನದಾಸ ಗಾಂಧಿ, ಫಿರೋಜ್ಗೆ ತನ್ನ ಜಾತಿಸೂಚಕವನ್ನು ಧಾರೆ ಎರೆಯುವ ವಾಗ್ದಾನ ಮಾಡಿ ಸಮಾಧಾನ ಮಾಡಿದ್ದರು. ಹೀಗಾಗಿ ಇಂದಿರಾ ಪತಿ ಫಿರೋಜ್ ಗಾಂಧಿ ಆಗುತ್ತಾರೆ. ಫಿರೋಜ್ ಪತ್ನಿ ಇಂದಿರಾ, ಇಂದಿರಾ ಗಾಂಧಿ ಆಗುತ್ತಾರೆ. ಇದನ್ನು ಇಂದಿರಾಗೆ ರಾಜಕೀಯ ಗುರುಗಳಾಗಿದ್ದ ಕೆ.ಎಂ. ಮುನ್ಶಿ ಮತ್ತು ಸರೋಜಿನಿ ಮಹಿಷಿ ಅನೇಕ ಸಂದರ್ಭಗಳಲ್ಲಿ ಹಂಚಿಕೊಂಡಿದ್ದಾರೆ. ಡಾ. ಸುಬ್ರಮಣಿಯನ್ ಸ್ವಾಮಿ ಅದನ್ನು ಹಲವು ಸಂದರ್ಭಗಳಲ್ಲಿ ಉಲ್ಲೇಖಿಸಿದ್ದಾರೆ ಕೂಡ. ಹಾಗಾದರೆ ಇಲ್ಲೊಂದು ಪ್ರಶ್ನೆ, ನೆಹರು ಅವರ ಪಾಶ್ಚಾತ್ಯ ಚಿಂತನೆ, ಎಡಪಂಥದ ವಿಚಾರ, ಜಾತ್ಯತೀತ ನಿಲುವು ಪುತ್ರಿ ವಿವಾಹದ ಸಂದರ್ಭದಲ್ಲಿ ಯಾಕೆ ಜಾಗೃತವಾಗಲಿಲ್ಲ ಎಂಬುದು. ಅಂದಮೇಲೆ ಇಷ್ಟು ವರ್ಷಗಳ ತರುವಾಯ ಚಂದ್ರಶೇಖರ ಪಾಟೀಲರಂತಹ ಜಾತ್ಯತೀತವಾದಿಗಳು ‘ನಾನು ನಾಸ್ತಿಕ; ಹೀಗಾಗಿ ಕನ್ನಡ ಭುವನೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದಿಲ್ಲ’ ಎಂದು ಹೇಳುವುದನ್ನು ಎಷ್ಟರಮಟ್ಟಿಗೆ, ಹೇಗೆ ತೆಗೆದುಕೊಳ್ಳಬೇಕೆಂಬುದನ್ನು ಓದುಗರ ಆಯ್ಕೆಗೇ ಬಿಡುತ್ತೇನೆ.
ಜಾತಿಯ ರಾಜಕೀಯಕರಣ ಬಿಟ್ಟು ಯೋಚನೆ ಮಾಡುವುದಾದರೆ ಭಾರತದಲ್ಲಿ ಜಾತಿ ವ್ಯವಸ್ಥೆಗೆ ಅದರದ್ದೇ ಆದ ಹಿನ್ನೆಲೆ, ಅರ್ಥವಂತಿಕೆ ಇದೆ. ಇಂದಿನ ವಿಕೇಂದ್ರೀಕರಣ ವ್ಯವಸ್ಥೆಯೇ ಹಿಂದಿನ ಜಾತಿ ವ್ಯವಸ್ಥೆ ಆಗಿತ್ತು. ಸಣ್ಣಪುಟ್ಟ ಸಮುದಾಯಗಳಲ್ಲಿ ಸಮಾಜ ಸಂಘಟಿತವಾಗಬೇಕೆಂಬುದು ಅದರ ಘನ ಉದ್ದೇಶವಾಗಿತ್ತು. ಜಾತಿ ವ್ಯವಸ್ಥೆ ಜಾನಪದ, ಸಾಂಸ್ಕೃತಿಕ ವೈವಿಧ್ಯತೆಯ ಪ್ರತೀಕವೂ ಆಗಿತ್ತು. ಮುಖ್ಯವಾಗಿ ಅದರಲ್ಲಿ ಸಂಘರ್ಷದ ಉದ್ದೇಶ ಇರಲೇ ಇಲ್ಲ. ಹೀಗಾಗಿ ಜಾತಿ ವ್ಯವಸ್ಥೆಯನ್ನು ನಾಶ ಮಾಡುತ್ತೇನೆನ್ನುವುದು ಮತ್ತು ಜಾತಿ ಹಿನ್ನೆಲೆಯಲ್ಲಿ ಸಂಘರ್ಷಕ್ಕೆ ಮುಂದಾಗುವುದು ಈ ಎರಡೂ ಮಹಾತಪ್ಪು. ಭಾರತದಲ್ಲಿ ಇದುವರೆಗೆ ಹತ್ತು ಹಲವು ಮತಗಳು, ಪಂಥಗಳು ಹುಟ್ಟಿಕೊಂಡಿವೆ. ಒಂದೊಂದು ಜಾತಿ, ಮತ, ಪಂಥದಲ್ಲೂ ಉದಾತ್ತತೆಯಿದೆ. ಮಾನವಕುಲದ ಹಿತಚಿಂತನೆಯೇ ಅಡಗಿದೆ. ದೈವೀಕಲ್ಪನೆಯೂ ಅಷ್ಟೇ. ದಶಾವತಾರದ ಕಲ್ಪನೆ ಭಾರತೀಯ ಚಿಂತನೆಯ ಸ್ವೀಕಾರಗುಣ ಮತ್ತು ಹೃದಯ ವೈಶಾಲ್ಯದ ಫಲ ಎಂಬುದು ತಿಳಿದವರು ಹೇಳುವ ಮಾತು. ಅಂದರೆ ಈಗ ಇರುವುದು ಮಾತ್ರವಲ್ಲ, ಮುಂದೆ ಬರುವ ದೇವ ದೇವತೆಗಳನ್ನೂ ಸ್ವಾಗತಿಸಿ ಒಂದಾಗಿಸಿಕೊಳ್ಳಲು ಭಾರತೀಯರು ಅಣಿಯಾಗಿದ್ದಾರೆ ಅಂತಲೂ ಭಾವಿಸಬೇಕಲ್ಲವೇ? ಈ ಚಿಂತನೆಯ ಮೇಲೆ ಆಧುನಿಕ ಭಾರತದ ಸೌಧವನ್ನು ಕಟ್ಟಬೇಕು ತಾನೆ..
ಜಾತಿ ಮತ್ತು ದೇಗುಲಗಳು ಹೇಗೆ ರಾಜಕೀಯಕರಣಗೊಳ್ಳುತ್ತಿವೆ ಎಂಬುದಕ್ಕೆ ಗುಜರಾತಿನ ಈಗಿನ ಸನ್ನಿವೇಶವೇ ಪ್ರತ್ಯಕ್ಷ ಸಾಕ್ಷಿ. ವೋಟಿಗೋಸ್ಕರ ರಾಹುಲ್ ಅಪ್ಪಟ ದೈವಭಕ್ತ ಆಗುತ್ತಿದ್ದಾರೆ. ಅದರ ಬೆನ್ನಲ್ಲೇ ಹಾರ್ದಿಕ್ ಪಟೇಲ್ ಪಟೇಲ್ ಸಮುದಾಯವನ್ನು, ಜಿಗ್ನೇಶ್ ಮೇವಾನಿ ದಲಿತ ಸಮುದಾಯವನ್ನು, ಅಲ್ಪೇಶ್ ಠಾಕೂರ್ ಇತರ ಹಿಂದುಳಿದ ವರ್ಗಗಳನ್ನು ಬೇರ್ಪಡಿಸಿ ರಾಹುಲ್ ಮಡಿಲು ತುಂಬಲು ಯೋಜನೆ ರೂಪಿಸಿದ್ದಾರೆ. ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ ಅಂತಲೇ ಇಟ್ಟುಕೊಳ್ಳೋಣ. ಈಗ ಭರವಸೆ ನೀಡಿರುವಂತೆ ಪಟೇಲ್ ಸಮುದಾಯಕ್ಕೆ ರಾಹುಲ್ ಎಲ್ಲಿಂದ ಮೀಸಲಾತಿ ಕಲ್ಪಿಸುತ್ತಾರೆ. ಸಂವಿಧಾನದ ಪ್ರಕಾರ ಮೀಸಲಾತಿ ಶೇ. 50ರ ಮಿತಿ ದಾಟುವ ಹಾಗಿಲ್ಲ. ಹಾಗಾದರೆ ಪಟೇಲರಿಗೆ ಮೀಸಲಾತಿ ಕೊಡಲು ಯಾವ ಜಾತಿಯ ಮೀಸಲಾತಿಯನ್ನು ಇವರು ಕಡಿತ ಮಾಡುತ್ತಾರೆ. ಅಷ್ಟು ಮಾತ್ರವಲ್ಲ, ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ದಲಿತರಿಗೆ ಮತ್ತು ಹಿಂದುಳಿದವರಿಗೆ ಇನ್ನೂ ಯಾಕೆ ನ್ಯಾಯ ಸಿಕ್ಕಿಲ್ಲ ಎಂದು ಅಲ್ಪೇಶ್ ಠಾಕೂರ್ ಮತ್ತು ಜಿಗ್ನೇಶ್ ಮೇವಾನಿ ಆಲೋಚನೆ ಮಾಡಬೇಕಲ್ಲವೇ?
ಇರಲಿ… ಅಕಸ್ಮಾತ್ ಈ ಸಲದ ಗುಜರಾತ್ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಸೋಲಾದರೆ ಮುಂದಿನ ಬಾರಿ ರಾಮಮಂದಿರ ನಿರ್ಮಾಣ ಆಂದೋಲನಕ್ಕೇ ರಾಹುಲ್ ನೇತೃತ್ವ ವಹಿಸಲು ಮುಂದಾಗಬಹುದು ಅಲ್ಲವೇ? ಅಚ್ಚರಿ ಏನಿಲ್ಲ… ಯಾಕೆ ಗೊತ್ತೇ? ವಿವಾದಿತ ಕಟ್ಟಡದ ಬೀಗಮುದ್ರೆ ತೆರೆದು ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ನಿತ್ಯಪೂಜೆಗೆ ಅವಕಾಶ ಮಾಡಿಕೊಟ್ಟದ್ದು ಆಗಿನ ಪ್ರಧಾನಿ ರಾಜೀವ ಗಾಂಧಿ ಅವರೇನೇ!