ಬದಲಾವಣೆ ನನ್ನಿಂದಲೇ ಅಂದರೆ ಚೆನ್ನ…

ಬದುಕು ಬದಲಾಗುವುದಿಲ್ಲ ಎಂಬ ಕೊರಗಿನ ನಡುವೆಯೇ ನಮ್ಮ ಮೆಟ್ರೋದಂತಹ ಹೆಮ್ಮೆ, ಸ್ವಚ್ಛ ಭಾರತ ಅಭಿಯಾನಕ್ಕೆ ಸ್ಪಂದಿಸುವ ಸಾಮಾನ್ಯ ಮಹಿಳೆಯರು ಮತ್ತು ಮಕ್ಕಳು, ಸ್ವಾತಂತ್ರ್ಯ ತಂದುಕೊಟ್ಟ ಕ್ರಾಂತಿಕಾರಿಗಳ ಆದರ್ಶ ಪಸರಿಸುವ ಧ್ಯೇಯವಾದಿಗಳು, ಸಮಾಜಕ್ಕಾಗಿ ಜೀವ ಮುಡಿಪಿಡುವ ಕಾರ್ಯಕರ್ತರು ಭರವಸೆಯ ಸೆಲೆಯಾಗುತ್ತಾರೆ.

 ಕೆಲವೊಮ್ಮೆ ನಾವಂದುಕೊಳ್ಳುತ್ತೇವೆ, ಬದಲಾವಣೆ ಸಾಧ್ಯವೇ ಇಲ್ಲ ಅಂತ. ಆದರೆ ಜಗತ್ತು ಬದಲಾಗುತ್ತಲೇ ಇರುತ್ತದೆ. ಆಗಿರುವ ಬದಲಾವಣೆ ಕೆಲವು ಸಲ ನಮಗೆ ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ಇನ್ನು ಕೆಲ ಬಾರಿ, ಬದಲಾವಣೆ ಕಾಣುವ ಹಾಗಿದ್ದರೂ ಅದನ್ನು ನೋಡಲು ಬುಧ್ಯಾಪೂರ್ವಕವಾಗಿ ನಾವು ತಯಾರಿರುವುದಿಲ್ಲ. ಅಥವಾ ಅದು ಕಣ್ಣಿಗೆ ಕಾಣಿಸುವವವರೆಗೆ ಕಾಯಲು ತಯಾರಿರುವುದಿಲ್ಲ, ಮತ್ತಿನ್ನೇನೇನೋ…

ಬೆಂಗಳೂರಿನ ‘ನಮ್ಮ ಮೆಟ್ರೋ’ ಈಗೊಂದು ವಿಸ್ಮಯ. ಆರು ವರ್ಷಗಳ ಹಿಂದೆ ಮೆಟ್ರೋ ಕಟ್ಟುವ ಕೆಲಸ ಆರಂಭವಾದಾಗ ಎದುರಾದ ಅಡ್ಡಿ ಆತಂಕ, ಅಪಸ್ವರ ಒಂದೆರಡಲ್ಲ. ಮೆಟ್ರೋ ಲೈನ್ ನಿರ್ವಣಕ್ಕೆ ಅಪಾರ ದುಡ್ಡು ಖರ್ಚಾಗುತ್ತದೆ; ಅಷ್ಟೊಂದು ಖರ್ಚು ಮಾಡುವ ಬದಲು ಮತ್ತಿನ್ನೇನೋ ಮಾಡಬಹುದಿತ್ತು;ಮೆಟ್ರೋಗಾಗಿ ಸಾವಿರಾರು ಮರಗಳ ಮಾರಣಹೋಮ ನಡೆಯುತ್ತದೆ…ಇತ್ಯಾದಿ. ಜೀವನದಲ್ಲಿ ಒಂದು ಗಿಡವನ್ನೂ ಕೈಯಾರೆ ನೆಡದವರೇ ಆ ರೀತಿ ಆಡಿಕೊಂಡಿದ್ದು ಹೆಚ್ಚು ಅನ್ನಿ. ಬೆಂಗಳೂರು ಕಾಂಕ್ರೀಟ್ ಕಾಡಾಗಿಹೋಗುತ್ತದೆ ಎಂದರು. ಅಂದರೆ ಇಲ್ಲಿಯವರೆಗೆ ಬೆಂಗಳೂರು ನಂದನವನ ಆಗಿತ್ತು ಎನ್ನುವ ಹಾಗೆ. ಬೆಂಗಳೂರಿನ ಉದ್ದಗಲಕ್ಕೂ ಎತ್ತರದ ಕಂಬಗಳ ಮೇಲೆ ಸಾವಿರಾರು ಜನರನ್ನು ಹೊತ್ತು ರೈಲು ಸಾಗುವುದರಿಂದ ಏನಾಗುತ್ತೋ ಭಗವಂತನೇ ಬಲ್ಲ. ಭೂಕಂಪ ಆದರೆ…ವಿಧ್ವಂಸಕ ಕೃತ್ಯಗಳು ನಡೆದರೆ… ಆ ರೇಗಳಿಗೆ ಲೆಕ್ಕವಿಲ್ಲ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸ್ಟೀಲ್ ಬ್ರಿಜ್ ನಿರ್ವಣಕ್ಕೂ ಇಂಥದ್ದೇ ಅಡ್ಡಿ ಎದುರಾಗಿ ಆ ಯೋಜನೆ ನಿಂತೇಹೋಯಿತು. ಮೆಟ್ರೋ ಸಂಚಾರ ಹಂತಹಂತವಾಗಿ ಶುರುವಾದ ನಂತರ ಈ ಅಪಸ್ವರಗಳಿಗೆ ಬೀಗಬಿದ್ದಿದೆ.

ನಮ್ಮ ಮೆಟ್ರೋದಿಂದ ಆಗಿರುವ ಅಗಾಧ ಅನುಕೂಲಗಳ ಕಡೆ ಗಮನ ಹರಿಸೋಣ. ಮೊದಲನೆಯದ್ದು, ಈಗ ಮೆಟ್ರೋ ಮಾರ್ಗದ ಸುತ್ತ ಇರುವ ಯಾವುದೇ ಪ್ರದೇಶಕ್ಕೆ ಇಷ್ಟೇ ನಿಮಿಷಕ್ಕೆ ತಲುಪುತ್ತೇನೆಂದು ನಿಖರವಾಗಿ ಹೇಳಬಹುದು. ಈ ಮೊದಲು ಬೆಂಗಳೂರಲ್ಲಿ ಐದರಿಂದ ಹತ್ತು ಕಿ.ಮೀ. ದೂರ ಸಾಗಲು ಸಹ ಕನಿಷ್ಠ ಒಂದೂವರೆ ಗಂಟೆ ಬೇಕಾಗುತ್ತಿತ್ತು ಅಂತಿಟ್ಟುಕೊಳ್ಳಿ. ಈಗ ಅದೇ ದೂರವನ್ನು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷಗಳಲ್ಲಿ ತಲುಪಬಹುದು. ಅದೂ ಆಯಾಸ ಮತ್ತು ಆತಂಕವಿಲ್ಲದೆ. ಇದು ಒಂದಾದರೆ, ಮೆಟ್ರೋ ಬೆಂಗಳೂರಿನ ಮತ್ತು ಈ ರಾಜ್ಯದ ಜನರ ಆಲೋಚನೆ ಮತ್ತು ವ್ಯವಹಾರದಲ್ಲಿ ಹೇಗೆ ರಚನಾತ್ಮಕ ಬದಲಾವಣೆ ತರಬಹುದು ಎಂಬುದು ಊಹೆಗೂ ನಿಲುಕದ್ದು. ಸಾರ್ವಜನಿಕ ಸಾರಿಗೆ ಎಂದಾಕ್ಷಣ ಕಣ್ಣೆದುರು ಬರುವುದು ಗಬ್ಬು ನಾರುವ ಬಸ್ಸುಗಳು ಮತ್ತು ಬಸ್​ಸ್ಟಾ್ಯಂಡುಗಳು, ರೈಲುಗಳು, ರೈಲ್ವೆ ನಿಲ್ದಾಣಗಳು. ಸಾರ್ವಜನಿಕ ಸಾರಿಗೆ ಅವಲಂಬಿಸುವುದು ವಿಧಿಯಿಲ್ಲದ ಅನಿವಾರ್ಯ ಕರ್ಮವೇ ಹೊರತು ಇಷ್ಟಪಟ್ಟು ಮಾಡುವ ಕೆಲಸವಲ್ಲ. ಆದರೆ ಮೆಟ್ರೋ ರೈಲು ಅದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಭಾಷ್ಯ ಬರೆದಿದೆ ಎಂದರೆ ತಪ್ಪಲ್ಲ.

ಸಾರ್ವಜನಿಕ ಸಾರಿಗೆ ಬಸ್ಸುಗಳು ಸಮಯಕ್ಕೆ ಸರಿಯಾಗಿ ಹೊರಟಿದ್ದನ್ನು, ಸಮಯಕ್ಕೆ ಸರಿಯಾಗಿ ತಲುಪಿದ್ದನ್ನು ಎಂದಾದರೂ ಕಂಡಿದ್ದೀವಾ? ಅದೇ ಮೆಟ್ರೋ ರೈಲು ಇಂತಿಷ್ಟು ನಿಮಿಷಕ್ಕೆ ಅಂತ ಹೊರಟು ಇಂತಿಷ್ಟೇ ಸಮಯಕ್ಕೆ ತಲುಪಿಸುತ್ತದೆ. ಸಾರ್ವಜನಿಕ ಸಾರಿಗೆಯಲ್ಲಿ ಹತ್ತುವಾಗ ಇಳಿಯುವಾಗ ಕ್ಯೂ ಪಾಲಿಸಿದ್ದನ್ನು ಕಂಡಿದ್ದೀವಾ? ಮೆಟ್ರೋದಲ್ಲಿ ಹಾಗೆ ಮಾಡದೇ ವಿಧಿಯಿಲ್ಲ. ಸರ್ಕಾರಿ ಬಸ್ ಎಂದರೆ, ಎಲ್ಲಿ ಬೇಕಾದಲ್ಲಿ ತಿಂದು ಕುಡಿದು ಉಗುಳಿ ಹೋಗಬಹುದು. ಶೇಂಗಾಸಿಪ್ಪೆ, ಕಡ್ಲೇಕಾಯಿ ಸಿಪ್ಪೆಯನ್ನು ಚೆಲ್ಲಬಹುದು ಎಂಬಹಾಗಿದೆ. ತಿರುಗಿ ಕೇಳಿದರೆ ನಿಮಗೇನು ಸಂಬಂಧ ಅಂತಾರೆ. ಕಾರಣ ಅಲ್ಲಿ ಬಿಗಿ ಇಲ್ಲ. ಆದರೆ ಮೆಟ್ರೋದಲ್ಲಿ ಹಾಗಲ್ಲ. ನಿಮ್ಮ ಒಂದೊಂದು ಚಲವಲನವನ್ನೂ ಗಮನಿಸಲು 360 ಡಿಗ್ರಿ ಕ್ಯಾಮೆರಾಗಳಿವೆ. ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದೇ ಹೋದರೆ ಹಿಡಿದು ಕೇಳಲು ಪಕ್ಕಾ ವ್ಯವಸ್ಥೆಯಿದೆ. ಅದರ ಪರಿಣಾಮ ಅದೆಂಥಾ ಶಿಸ್ತು, ನೇರವಂತಿಕೆ ಇದೆ ಅಂತೀರಿ. ಎಲ್ಲದಕ್ಕಿಂತ ಮುಖ್ಯವಾದ ಇನ್ನೊಂದು ವಿಚಾರವಿದೆ. ದುಬಾರಿ ಎಂಬ ಕಾರಣಕ್ಕೆ ಮುಕ್ಕಾಲು ಭಾಗ ನಮ್ಮ ಜನರಿಗೆ ವಿಮಾನಯಾನದ ಅನುಭವ ದಕ್ಕಿರುವುದಿಲ್ಲ. ವಿಮಾನ ನಿಲ್ದಾಣಗಳನ್ನು ಒಳಹೊಕ್ಕು ನೋಡುವ ಅವಕಾಶ ಸಿಕ್ಕಿರುವುದಿಲ್ಲ. ಅದಕ್ಕಾಗಿ ಬೇಸರಪಡುವ ಅಗತ್ಯವಿಲ್ಲ. ಯಾವುದೇ ಮೆಟ್ರೋ ನಿಲ್ದಾಣಕ್ಕೆ ಹೋದರೂ ವಿಮಾನನಿಲ್ದಾಣದ ಶುಚಿತ್ವ, ಶಿಸ್ತು, ಸಮಯ ಪಾಲನೆ, ಸುರಕ್ಷತೆಯ ಅನುಭವ ನಿಮಗಾಗುತ್ತದೆ. ಸಮಯಪಾಲನೆ ಮತ್ತು ಸುರಕ್ಷತೆ ದೃಷ್ಟಿಯಿಂದ ಮೆಟ್ರೋ ವಿಮಾನ ಯಾನಕ್ಕಿಂತ ಹೆಚ್ಚು ನಿಖರ ಅಂದರೆ ತಪ್ಪಲ್ಲ. ನಮ್ಮ ಮೆಟ್ರೋಗೆ ಪ್ರಯಾಣಿಕರು ಈಗ ಚುಂಬಕದಂತೆ ಆಕರ್ಷಿತರಾಗುತ್ತಿದ್ದಾರೆ. ಈ ವ್ಯವಸ್ಥೆ, ಶಿಸ್ತು, ಸ್ವಚ್ಛತೆ, ಸುರಕ್ಷತೆ, ಸಮಯಪಾಲನೆ ನಮ್ಮ ಬಸ್ ನಿಲ್ದಾಣಗಳಲ್ಲಿ ಬರುವುದು ಯಾವಾಗ? ಮೆಟ್ರೋ ರೂಪಿಸಿದ ಸರ್ಕಾರ ಮತ್ತು ಮೆಟ್ರೋದಲ್ಲಿ ಓಡಾಡಿದ ಜನರು ಮನಸ್ಸು ಮಾಡಿದಾಗ ಅದು ಸಾಕಾರ ಆಗುತ್ತದೆ. ತುಸು ಸಮಯ ಹಿಡಿಯಬಹುದು ಅಷ್ಟೆ.

ಮುಂಬೈನ ಬಾಂದ್ರಾದ ಒಂದು ತುದಿಯಿಂದ ಮಹಾನಗರದ ಮತ್ತೊಂದು ತುದಿಗೆ ಬಡವ, ಶ್ರೀಮಂತ, ಉನ್ನತ ಅಧಿಕಾರಿ ಎಂಬ ಯಾವ ತಾರತಮ್ಯವೂ ಇಲ್ಲದೆ ಎಲ್ಲರೂ ಒಂದೇ ರೈಲಲ್ಲಿ ಓಡಾಡುವುದನ್ನು ಕೇಳಿ ಬೆರಗಾಗಿದ್ದ ನಮಗೆ ಇಲ್ಲಿಯೂ ಅಂತಹ ದಿನಗಳು ಇಷ್ಟು ಬೇಗ ಸಾಕಾರ ಆಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಎಷ್ಟು ಖುಷಿ ಅಲ್ಲವೇ? ದಿನಕ್ಕೆ ಮೂರೂವರೆ ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಈಗ ನಮ್ಮ ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಈಗಿರುವ ಮೂರು ಬೋಗಿ ಆರಕ್ಕೆ ಏರಿಕೆಯಾದರೆ ಪ್ರಯಾಣಿಸುವವರ ಸಂಖ್ಯೆಯೂ ದುಪ್ಪಟ್ಟಾಗುತ್ತದೆ, ಆ ಒಬ್ಬೊಬ್ಬ ಪ್ರಯಾಣಿಕನೂ ಸಹ ಬದಲಾವಣೆಯ ಹರಿಕಾರನೇ ಆಗುತ್ತಾನೆ, ಅನುಮಾನ ಬೇಡ.

ಸುಮಾರು ಒಂದೂವರೆ ವರ್ಷದ ಹಿಂದಿನ ಒಂದು ಘಟನೆ. ಶಿವಮೊಗ್ಗ ಮೂಲಕವಾಗಿ ರಾತ್ರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಸುಮಾರು ಒಂದೂವರೆ ಗಂಟೆಯ ಸಮಯ. ಬಸ್ ಡೈವರ್ ಶಿವಮೊಗ್ಗದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಚಹಾಕ್ಕಾಗಿ ಬಸ್ ನಿಲ್ಲಿಸಿದ್ದ. ನಮ್ಮಂಥ ಪತ್ರಕರ್ತರಿಗೆ ಕಣ್ ಬಿಟ್ಟ ತಕ್ಷಣ ಪೇಪರ್ ಓದುವ ರೂಢಿ. ನಾನು ಸಾಮಾನ್ಯವಾಗಿ ಪೇಪರು ಮಾರುವವರ ಬಳಿ ಪೇಪರು ತೆಗೆದುಕೊಂಡು ಸುಮ್ಮನಾಗದೆ ಅವರೊಂದಿಗೆ ವಿಚಾರವಿನಿಮಯ ಮಾಡಿಕೊಳ್ಳುವುದು ರೂಢಿ. ಬೆಳಗಾಗುವವರೆಗೆ ನೀವೆಷ್ಟು ಪೇಪರು ಮಾರುತ್ತೀರಿ? ಯಾವ್ಯಾವ ಪೇಪರು ಎಷ್ಟು ಮಾರಾಟವಾಗುತ್ತದೆ ಇತ್ಯಾದಿ ಕುರಿತು ಮಾತನಾಡುತ್ತಿದ್ದೆ. ನಮ್ಮ ಹಿಂಬಂದಿಯ ಬೆಂಚಿನ ಮೇಲೆ ಕೂತಿದ್ದ 30-35 ವರ್ಷ ವಯಸ್ಸಿನ ಮಹಿಳೆ ಯಾವುದೋ ಬಸ್ಸಿಗೆ ಕಾಯುತ್ತಿದ್ದರು. ನಾಲ್ಕೈದು ವರ್ಷ ವಯಸ್ಸಿನ ಮಗು ಜೊತೆಗೆ. ಮಗು ಹಠ ಮಾಡಿ ಚಾಕೋಲೇಟ್ ತಿಂದಿತು. ಚಾಕೋಲೇಟ್ ಕವರನ್ನು ಅಲ್ಲೇ ಬಸ್​ಸ್ಟಾ್ಯಂಡಲ್ಲಿ ಬಿಸಾಡಲು ಮುಂದಾದಾಗ ಆಕೆ, ‘ಪುಟ್ಟಾ.. ಹಾಗೆಲ್ಲ ಬಿಸಾಕಬೇಡ, ಮೋದಿ ಅಂಕಲ್ ನೋಡುತ್ತಿದ್ದಾರೆ’ಎಂದಳು! ಆ ಮಾತು ನನ್ನನ್ನು ಹಲವು ದಿನಗಳ ಕಾಲ ಕಾಡುತ್ತಿತ್ತು. ಸ್ವಚ್ಛ ಭಾರತ ಅಭಿಯಾನದಿಂದ ಇಷ್ಟು ಲಕ್ಷ ಶೌಚಗೃಹ ಕಟ್ಟಲಾಯಿತು, ಇಷ್ಟು ಸಾವಿರ ಕೋಟಿಯನ್ನು ಖರ್ಚು ಮಾಡಲಾಯಿತು, ಇಷ್ಟು ಗ್ರಾಮ, ಊರುಗಳು ಬಯಲುಶೌಚಮುಕ್ತವಾದವು ಎಂದೆಲ್ಲ ಸರ್ಕಾರಗಳು ಲೆಕ್ಕ ಒಪ್ಪಿಸುತ್ತವೆ. ಆದರೆ ನನ್ನ ದೃಷ್ಟಿಯಲ್ಲಿ ನಿಜವಾದ ಪರಿಣಾಮ ಎಂದರೆ ಮನುಷ್ಯನ ಆಲೋಚನಾ ಕ್ರಮದಲ್ಲಿ ಆಗುವ ಬದಲಾವಣೆ. ನಡುರಾತ್ರಿ ಬಸ್ಸಿಗೆ ಕಾಯುವ ವೇಳೆ ಮಗು ಚಾಕೋಲೇಟ್ ಕವರ್ ಎಸೆಯುವಾಗ ನೆನಪಾಗುವ ಸ್ವಚ್ಛಭಾರತ ಅಭಿಯಾನ ನಿಜಾರ್ಥದಲ್ಲಿ ಯಶಸ್ವಿ ಆದ ಹಾಗೆ. ಶಾಲೆಗೆ ಹೋಗುವ ಬಾಲಕಿ ಅಪ್ಪನಿಗೆ, ಮದುವೆ ಆಗಬೇಕಿರುವ ಯುವತಿ ಗಂಡಿನಕಡೆಯವರಿಗೆ ಶೌಚಗೃಹ ನಿರ್ವಿುಸಲು ಹಕ್ಕೊತ್ತಾಯ ಮಾಡುವುದಿದೆಯಲ್ಲ ಅದು ನಿಜವಾದ ಬದಲಾವಣೆ. ಇದು ಬಹಳಷ್ಟು ಮಂದಿ ಜನನಾಯಕರೆನಿಸಿಕೊಂಡವರಿಗೆ, ಟೀಕಾಕಾರರಿಗೆ ಅರ್ಥ ಆಗಬೇಕಷ್ಟೆ.

ಸಮಾಜ ಬದಲಾಗಬೇಕು, ಅದಕ್ಕಾಗಿ ನಾನು ಏನಾದರೂ ಕೊಡುಗೆ ಕೊಡಬೇಕು ಎಂದು ಆಲೋಚಿಸುವವರ ಸಂಖ್ಯೆ ಬೆರಳೆಣಿಕೆಯಷ್ಟಿರುತ್ತದೆ. ಈ ಭಾರತೀಯ ಸಮಾಜ ಸಾವಿರ ವರ್ಷಗಳ ಸವಾಲು-ಸಂಘರ್ಷಗಳನ್ನು ಎದುರಿಸಿ ತಲೆಯೆತ್ತಿ ಎದೆಯೆತ್ತಿ ಮುನ್ನಡೆಯುತ್ತಿರುವುದಕ್ಕೆ ಕಾರಣರೂ ಆ ಬೆರಳೆಣಿಕೆಯಷ್ಟು ಜನರೇ. ಉದಾಹರಣೆಗೆ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಕ್ರಾಂತಿಕಾರಿಗಳು ಎಷ್ಟು ಜನರಿದ್ದರು? ಕಣ್ಣಿಗೆ ಕಾಣಿಸುವವರ ಸಂಖ್ಯೆ ಮೂರಂಕಿ ದಾಟುವುದಿಲ್ಲ. ನಿಜವಾಗಿ ಬ್ರಿಟಿಷರು ಕಾಲುಕೀಳುವಂತೆ ಮಾಡಿದ್ದು ಅವರೇನೆ. ಆದರೆ ಅವರ್ಯಾರೂ ತಮ್ಮನ್ನು ತಾವು ಗ್ರೇಟ್ ಎಂದು ಕರೆಸಿಕೊಳ್ಳಲಿಲ್ಲ. ಅವರಲ್ಲಿ ಬಹಳಷ್ಟು ಮಂದಿಯ ಹೆಸರು ಗೊತ್ತಿಲ್ಲ. ಫೋಟೊಗಳೂ ಇಲ್ಲ. ಆದರೂ ಅವರೇ ನಮಗೆ ಇಂದಿಗೂ ಇಷ್ಟ ಆಗುವುದು.

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರನ್ನು ಬಿಟ್ಟರೆ ನಮಗೆ ಬಹಳ ಅಚ್ಚುಮೆಚ್ಚು ಅನ್ನಿಸಿರುವ ಹೆಸರುಗಳ ಪೈಕಿ ದಿ. ರಾಜೀವ ದೀಕ್ಷಿತ್ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಹುಟ್ಟಿದ್ದು ಅಲಹಾಬಾದ್​ನ ಸಾಮಾನ್ಯ ಮನೆತನದಲ್ಲಿ. ಬದುಕಿದ್ದು 43 ವರ್ಷಗಳು ಮಾತ್ರ. ಖರಗ್​ಪುರ ಐಐಟಿಯಲ್ಲಿ ಪದವಿ ಪಡೆದು ಇಡೀ ಜೀವನವನ್ನು ಸ್ವದೇಶಿ ಚಿಂತನೆಯ ಪ್ರಸಾರಕ್ಕೆ ಮೀಸಲಿಟ್ಟದ್ದರು. ಆಜಾದಿ ಬಚಾವೋ ಆಂದೋಲನ ಎಂಬ ಒನ್ ಮ್ಯಾನ್ ಆರ್ವಿು ಅವರದ್ದು. ಸ್ವದೇಶಿ ಆರ್ಥಿಕತೆ, ಉದ್ಯಮ, ಆಹಾರ ಪದ್ಧತಿ, ಪ್ರಾಚೀನ ಜ್ಞಾನ-ವಿಜ್ಞಾನದ ಕುರಿತು ಸತತವಾಗಿ ಮೂರ್ನಾಲ್ಕು ಗಂಟೆಗಳ ಕಾಲ ಅವರು ಮಾತನಾಡಿದರೂ ಎದುರಿದ್ದ ಜನರು ಕದಲುತ್ತಿರಲಿಲ್ಲ. ಆ ಒಬ್ಬ ವ್ಯಕ್ತಿ ನೂರಾರು ಬಹುರಾಷ್ಟ್ರೀಯ ಕಂಪನಿಗಳಿಗೆ ಸಿಂಹಸ್ವಪ್ನವಾಗಿದ್ದರು. ಅದೇ ಅವರಿಗೆ ಮುಳುವಾಯ್ತೋ ಗೊತ್ತಿಲ್ಲ,2010ರಲ್ಲಿ ಛತ್ತೀಸ್​ಗಢದ ಭಿಲಾಯ್ನಲ್ಲಿ ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದರು. ಆದರೆ ಈಗಲೂ ಊರೂರಲ್ಲಿ ಕನಿಷ್ಠ ಹತ್ತಿಪ್ಪತ್ತು ಮಂದಿ ರಾಜೀವ್ ದೀಕ್ಷಿತ್ ಅನುಯಾಯಿಗಳು ಕಾಣಸಿಗುತ್ತಾರೆ. ಅವರ ಮೂಲಕ ರಾಜೀವ್ ಚಿಂತನೆಯ ಪ್ರವಾಹ ಹರಿಯತ್ತಲೇ ಇದೆ.

ರಾಜಸ್ತಾನದ ರಾಜೇಂದ್ರ ಸಿಂಗ್ ಜಲಸಂರಕ್ಷಣೆಯಲ್ಲಿ ದೊಡ್ಡ ಸಾಹಸಿ, ಸಾಧಕ. ತರುಣ ಭಾರತ ಸಂಘ ಎಂಬ ಸಂಘಟನೆ ಮೂಲಕ ಅಲ್ಲಿನ ಹನ್ನೊಂದು ಜಿಲ್ಲೆಗಳ 850 ಹಳ್ಳಿಗಳಲ್ಲಿ 4500ಕ್ಕೂ ಹೆಚ್ಚು ಮಿನಿ ಡ್ಯಾಂಗಳನ್ನು ಕಟ್ಟುವ ಮೂಲಕ ಮರುಭೂಮಿಯಲ್ಲಿ ನೀರುಕ್ಕುವಂತೆ ಮಾಡಿದ್ದಾರೆ. ಐದಕ್ಕೂ ಹೆಚ್ಚು ಬತ್ತಿದ ನದಿಗಳಲ್ಲಿ ಜೀವಸೆಲೆ ಹರಿಯುವಂತೆ ಮಾಡಿದ್ದಾರೆ.

ದೂರದ ಮಾತೇಕೆ? ಇತ್ತೀಚೆಗೆ ತಾನೆ ಹಾವೇರಿಯ ಅಕ್ಕಮಹಾದೇವಿ ಹೊಂಡದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಯುವಾ ಬ್ರಿಗೇಡಿನ ಕಾರ್ಯಕರ್ತರ ಉತ್ಸಾಹವನ್ನು ಫೇಸ್​ಬುಕ್ ಲೈವಲ್ಲಿ ನೋಡಿದೆ ಪುಳಕಿತನಾದೆ. ಸಾಮಾಜಿಕ ಕಾರ್ಯಕರ್ತ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಆ ಐತಿಹಾಸಿಕ ಕೆರೆ ಕೆಲವೇ ಗಂಟೆಗಳಲ್ಲಿ ಸ್ವಚ್ಛಗೊಂಡಿತು. ಗದಗ, ಧಾರವಾಡ, ಬೆಳಗಾವಿ, ವಿಜಯಪುರ ಹೀಗೆ ಊರೂರಲ್ಲಿ ನಿಸ್ವಾರ್ಥ ಯುವಕರ ಟೋಳಿಯನ್ನು ಕಟ್ಟಿಕೊಂಡು ಸಾವಿರಾರು ನೀರನೆಲೆಗಳನ್ನು ಪುನರುಜ್ಜೀವನ ಮಾಡುವ ಕೆಲಸವನ್ನು ಇವರು ಕೈಗೆತ್ತಿಕೊಂಡಿದ್ದಾರೆ. ಅದರ ಜೊತೆ-ಜೊತೆಗೆ ಇದೀಗ ‘ನನ್ನ ಕನಸಿನ ಕರ್ನಾಟಕ’ ಎಂಬ ಶಿರೋನಾಮೆಯಲ್ಲಿ ಊರೂರು ಸುತ್ತಿ ಜನಜಾಗೃತಿ ಮಾಡುವ ಕಾಯಕದಲ್ಲಿ ಸೂಲಿಬೆಲೆ ತೊಡಗಿಸಿಕೊಂಡಿದ್ದಾರೆ. ಓದಿದ್ದು ಬಿಇ. ಉತ್ತಮ ಉದ್ಯೋಗ ಮಾಡಿಕೊಂಡು ಮದುವೆ, ಮನೆ ಅಂತ ಹಾಯಾಗಿರಬಹುದಿತ್ತು. ಆದರೆ ಅವರಿಗೆ ಖುಷಿ ಕೊಡುವ ಕೆಲಸವೇ ಬೇರೆ.

ಉತ್ತಮ ಕೆಲಸ ಮಾಡುವ ರಾಜಕಾರಣಿಗಳೂ ಅಲ್ಲಲ್ಲಿ ನಮಗೆ ಸಿಗುತ್ತಾರೆ. ಚನ್ನಪಟ್ಟಣದ ಸಿ.ಪಿ.ಯೋಗೀಶ್ವರ್ ಅಂಥವರಲ್ಲೊಬ್ಬರು. ಅವರು ಪಕ್ಷಾಂತರಿ, ಅಧಿಕಾರದ ಬೆನ್ನತ್ತಿ ಹೋಗುವವರು ಇತ್ಯಾದಿ ಅಪವಾದಗಳಿವೆ, ನಿಜ. ಆದರೆ ಯಾರೂ ಮಾಡದ ಉತ್ತಮ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅದು- ಕೆರೆ ತುಂಬಿಸುವ ಕಾಯಕ. ನದಿ ನೀರನ್ನು ಸಾಲಾಗಿ ಕೆರೆಗಳಿಗೆ ತುಂಬಿಸಿ ಚನ್ನಪಟ್ಟಣದ ಹೊಲಗದ್ದೆಗಳು ನಳನಳಿಸುವಂತೆ ಮಾಡಿ ರೈತರ ಬಾಳಲ್ಲಿ ನೆಮ್ಮದಿ ತುಂಬಿದ್ದಾರೆ.

ಇಂಥವರ ಸಂಖ್ಯೆ ಹೆಚ್ಚಿದರೆ ಈ ದೊಡ್ಡ ದೇಶದಲ್ಲಿ ವಿಕಾಸ, ಪರಿವರ್ತನೆ ಎಂಬ ಕನಸಿಗೆ ಜೀವಕಳೆ ಬರುತ್ತದೆ.

ಬದಲಾವಣೆ ಎಂಬುದು ಹೊರಗಿನಿಂದ ಬರುವಂಥದ್ದಲ್ಲ, ಒಳಗಿನಿಂದ ಮೂಡಿ ಬರಬೇಕು. ಅಭಿವೃದ್ಧಿ ಎಂಬುದು ಬೇರೆಯವರು ತಂದು ಕೊಡುವುದಲ್ಲ ಅದನ್ನು ಸೃಷ್ಟಿಸಲು ಮುಂದಾಗಬೇಕು. ಮುಖ್ಯವಾಗಿ ನಾನಲ್ಲ ನಾವು, ನೀನಲ್ಲ ನಾನು, ಅಪೇಕ್ಷಿತ ಬದಲಾವಣೆ ನನ್ನಿಂದಲೇ ಎಂಬ ಆಲೋಚನೆ ರೂಢಿಸಿಕೊಳ್ಳಬೇಕು ಎಂಬುದಕ್ಕಾಗಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top