ಅಂದು ವೀರೇಂದ್ರ ಪಾಟೀಲ್, ಇಂದು ಬಿಎಸ್​ವೈ, ಮುಂದ?

ಈಗಿನ ಸನ್ನಿವೇಶವನ್ನು ಅವಲೋಕಿಸಿದರೆ, ವೀರಶೈವ-ಲಿಂಗಾಯತಕ್ಕೆ ಸೂತ್ರಸಂಬಂಧ ಇಲ್ಲದವರು ಧರ್ಮ ಸ್ಥಾಪನೆಗೆ ಮುಂದಾಗಿರುವುದು ಕಾಣುತ್ತದೆ. ಈ ವಿಷಯವನ್ನು ಧರ್ಮ, ಸಂಸ್ಕೃತಿ, ಇತಿಹಾಸ, ಪುರಾಣಗಳ ತಳಹದಿಗಿಂತ ಹೆಚ್ಚಾಗಿ ರಾಜಕೀಯದ ಹಿನ್ನೆಲೆಯಿಂದ ನೋಡುವುದೇ ಉಚಿತ ಎನಿಸುತ್ತದೆ.

ಸಿಎಂ ಸಿದ್ದರಾಮಯ್ಯನವರ ಆಸಕ್ತಿಯಂತೆ ಲಿಂಗಾಯತ ಧರ್ಮದ ಸ್ಥಾಪನೆಗೆ ರಾಜ್ಯ ಸರ್ಕಾರವೇ ಪೌರೋಹಿತ್ಯ ವಹಿಸಿಕೊಂಡ ಮೇಲೆ ಹತ್ತು ಹಲವು ಟೀಕೆಗಳು ಕೇಳಿಬರುತ್ತಲೇ ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆ ಪೈಕಿ ಗಮನ ಸೆಳೆದ ಒಂದು ಹೇಳಿಕೆ-

ಅಂದು ಎಲ್ಲ ಜಾತಿಗಳನ್ನೂ ಒಂದುಮಾಡಲು

ಪ್ರಯತ್ನಪಟ್ಟರು ಅಣ್ಣ ಬಸವಣ್ಣ

ಇಂದು ಇರೋ ಜಾತಿಗಳನ್ನು ಭಾಗ ಮಾಡಿದರು ನಮ್ಮ ಸಿದ್ದಣ್ಣ!

ಆಧುನಿಕ ವಚನ ಚಿಕ್ಕದು, ಅದು ಹೊರಹೊಮ್ಮಿಸುವ ಅರ್ಥ ಬಲು ದೊಡ್ಡದು. ಜಾತಿ ಸಮೀಕ್ಷೆಯಿಂದ ಹಿಡಿದು ಲಿಂಗಾಯತ ಧರ್ಮ ಸ್ಥಾಪನೆಯವರೆಗಿನ ವಿದ್ಯಮಾನಗಳನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ!

ಜಾತಿ-ಧರ್ಮದಂತಹ ಸೂಕ್ಷ್ಮ ವಿಚಾರಗಳಲ್ಲಿ ಒಂದು ಪಕ್ಷ ಅಥವಾ ಸರ್ಕಾರ ಗಟ್ಟಿ ತೀರ್ವನಕ್ಕೆ ಬರಲು ಮೇಲ್ನೋಟಕ್ಕೆ ಕಾಣುವ ಅಂಶಗಳು ಮಾತ್ರ ಕಾರಣವಾಗಿರುವುದಿಲ್ಲ. ಅದಕ್ಕೆ ಹತ್ತು ಹಲವು ಆಯಾಮಗಳಿರುತ್ತವೆ.

ಲಿಂಗಾಯತ ಸಮುದಾಯದ ಮೇಲೆ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಇದ್ದಕ್ಕಿದ್ದಂತೆ ಪ್ರೀತಿ ಏಕೆ ಉಕ್ಕಿಬಂತು ಎಂಬುದನ್ನು ಆಲೋಚಿಸುವ ಮುನ್ನ, ವೀರಶೈವ-ಲಿಂಗಾಯತ ಸಮುದಾಯ ಕಾಂಗ್ರೆಸ್​ನಿಂದ ದೂರವಾದದ್ದು ಏಕೆ ಎಂಬುದನ್ನೂ ಅವಲೋಕಿಸಬೇಕಾಗುತ್ತದೆ. 1990ರಲ್ಲಿ ಮುಖ್ಯಮಂತ್ರಿಯಾಗಿದ್ದ, ವೀರಶೈವ-ಲಿಂಗಾಯತ ಸಮುದಾಯದ ಅನಭಿಷಿಕ್ತ ದೊರೆಯಂತಿದ್ದ ಹಿರಿಯ ಮುತ್ಸದ್ದಿ ವೀರೇಂದ್ರ ಪಾಟೀಲರನ್ನು ಅತ್ಯಂತ ಹೀನಾಯವಾಗಿ ಮುಖ್ಯಮಂತ್ರಿ ಪದವಿಯಿಂದ ಕಿತ್ತೊಗೆದ ಪ್ರಸಂಗ ನೆನಪಾಗುತ್ತದೆ. ಗುಂಪುಗಾರಿಕೆ, ಪಕ್ಷಾಂತರ ಚಟುವಟಿಕೆಯಿಂದ ಜರ್ಜರಿತವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ವೀರೇಂದ್ರ ಪಾಟೀಲರು 1989ರ ಚುನಾವಣೆಯಲ್ಲಿ ಸಮರ್ಥ ನೇತೃತ್ವ ನೀಡಿ, 224 ಸ್ಥಾನಗಳ ಪೈಕಿ 179 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುವಂತಾಯಿತು. ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾದರು. ಆದರೆ ಹನ್ನೊಂದು ತಿಂಗಳಿಗಿಂತ ಹೆಚ್ಚು ಕಾಲ ಅವರು ಅಧಿಕಾರದಲ್ಲಿ ಉಳಿಯಲಾಗಲಿಲ್ಲ. ಹಾಗಾದರೆ ಅವರು ಅದಕ್ಷರೇ? ಊಹೂಂ ಹಾಗೆ ಹೇಳಲು ಒಂದು ಕಾರಣವೂ ಸಿಗುವುದಿಲ್ಲ. ಉದಾಹರಣೆಗೆ- ವೀರೇಂದ್ರ ಪಾಟೀಲರು ಸಿಎಂ ಆಗಿದ್ದಾಗ ಕಾವೇರಿ ನದಿಪಾತ್ರದಲ್ಲಿ ಕರ್ನಾಟಕ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ನ್ಯಾಯಾಲಯದಲ್ಲಿ ತಮಿಳುನಾಡು ತಕರಾರು ತೆಗೆಯಿತು. ಆದರೆ ಅದಕ್ಕೆ ಕ್ಯಾರೆ ಎನ್ನದ ಪಾಟೀಲರು, ‘ಕಾಯಿದೆ ಕಾನೂನಿಗೆ ಬೆಂಕಿಹಾಕ, ಜನಹಿತಕ್ಕಿಂತ ಕಾಯಿದೆ-ಕಟ್ಟಳೆ ಮುಖ್ಯವಲ್ಲ’ ಎಂದು ಹೇಳಿ ಯೋಜನೆಗಳನ್ನು ಮುಂದುವರಿಸಿದರು. ಕರ್ನಾಟಕದ ಒಟ್ಟು ವಿಧಾನಸಭಾ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಶೇ.15ರಷ್ಟು ಅಂದರೆ ಗರಿಷ್ಠ 34 ಮಂದಿ ಸಚಿವರನ್ನು ಮಾತ್ರ ನೇಮಕ ಮಾಡಲು ಈಗ ಕಾಯಿದೆ

ನಿರ್ಬಂಧವಿದೆ. ಆ ಕಾಲದಲ್ಲಿ ಹಾಗೇನೂ ಇರಲಿಲ್ಲ. ಆದರೆ ಪಾಟೀಲರು 13 ಮಂದಿ ಮಂತ್ರಿಗಳನ್ನು ಮಾತ್ರ ಸಂಪುಟದಲ್ಲಿ ನೇಮಿಸಿಕೊಂಡಿದ್ದರು. ಅಷ್ಟು ಮಾತ್ರವಲ್ಲ, ವೀರೇಂದ್ರ ಪಾಟೀಲರು ಹೈಕಮಾಂಡಿಗೆ ಕಪ್ಪಕಾಣಿಕೆ ಸಲ್ಲಿಸುವ ಸಂಸ್ಕೃತಿಯ ಕಡುವಿರೋಧಿ ಆಗಿದ್ದರು.

ವೀರೇಂದ್ರ ಪಾಟೀಲರ ರಾಜಕೀಯ ಏಳ್ಗೆ ತಡೆಯಲು ಹೇಗೆ ವ್ಯವಸ್ಥಿತವಾಗಿ ಖೆಡ್ಡಾ ತೆಗೆಯಲಾಯಿತು ಎಂಬುದಕ್ಕೆ ಇದು ನಿದರ್ಶನ. 1990ರ ಸೆಪ್ಟೆಂಬರ್ 17ರಂದು ಆಗಿನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಕೆ.ಜಾಫರ್ ಷರೀಫ್ ಬೆಂಗಳೂರಲ್ಲಿ ದಿಢೀರಾಗಿ ಪತ್ರಿಕಾಗೋಷ್ಠಿ ನಡೆಸಿ, ‘ವೀರೇಂದ್ರ ಪಾಟೀಲರು ಅದಕ್ಷ, ಅಸಮರ್ಥ, ಆಡಳಿತ ವ್ಯವಸ್ಥೆ ಕುಸಿದುಬಿದ್ದಿದೆ, ಅವರು ಅಧಿಕಾರದಲ್ಲಿ ಮುಂದುವರಿಯಲು ನಾಲಾಯಕ್, ಕಾಂಗ್ರೆಸ್ ಪಕ್ಷಕ್ಕೆ ಈಪಾಟಿ ಬಹುಮತ ಸಿಕ್ಕಿರುವುದು ರಾಜೀವ್ ಗಾಂಧಿ ಕಾರಣಕ್ಕೆ, ಪಾಟೀಲರ ಮುಖ ನೋಡಿಕೊಂಡು ರಾಜ್ಯದ ಜನರು ಮತ ಹಾಕಿಲ್ಲ’ ಎಂದೆಲ್ಲ ವಾಚಾಮಗೋಚರವಾಗಿ ಬೈದರು.

ವಾಸ್ತವದಲ್ಲಿ ಜಾಫರ್ ಷರೀಫ್ ಮುಗಿಬೀಳಲು ಎರಡು ಕಾರಣಗಳಿದ್ದವು. ಷರೀಫ್ ಸೂಚಿಸಿದ ಒಬ್ಬರನ್ನೂ ವೀರೇಂದ್ರ ಪಾಟೀಲರು ವಿಧಾನಪರಿಷತ್ತಿಗೆ, ನಿಗಮ ಮಂಡಳಿಗೆ ನೇಮಿಸಿರಲಿಲ್ಲ, ಸಚಿವರನ್ನಾಗಿ ಮಾಡಿರಲಿಲ್ಲ. ಅಲ್ಲದೆ, ಷರೀಫ್ ಪತ್ನಿ ಮತ್ತು ಮಕ್ಕಳ ಹೆಸರಿಗೆ ಸೇರಿದ ಬೆಂಗಳೂರು ಸಮೀಪದ 25 ಎಕರೆ ಜಮೀನನ್ನು ಹಸಿರು ವಲಯದ ವ್ಯಾಪ್ತಿಯಿಂದ ಕೈಬಿಟ್ಟು ಕಟ್ಟಡ ನಿರ್ವಣಕ್ಕೆ ಅನುವು ಮಾಡಿಕೊಡಬೇಕೆಂಬ ಮನವಿಯನ್ನು ಪಾಟೀಲರು ತಿರಸ್ಕರಿಸಿದ್ದರು. ಕಾಂಗ್ರೆಸ್ ಹೈಕಮಾಂಡ್ ವೀರೇಂದ್ರ ಪಾಟೀಲರನ್ನು ಅಧಿಕಾರದಿಂದ ಕೆಳಗಿಳಿಸಲು ಷರೀಫರನ್ನು ಸೂಕ್ತವಾಗಿ ಬಳಸಿಕೊಂಡಿತು. ಸ್ವಾಭಿಮಾನಿಯಾಗಿದ್ದ ಪಾಟೀಲರು ಷರೀಫ್ ಪತ್ರಿಕಾಗೋಷ್ಠಿಯ ನಂತರ ತಾವಾಗಿ ರಾಜಿನಾಮೆ ಕೊಡುತ್ತಾರೆಂಬುದು ರಾಜಕೀಯ ತಂತ್ರಗಾರಿಕೆ ಆಗಿತ್ತು. ಆದರೆ ಹಾಗಾಗಲಿಲ್ಲ.

ಮುಂದೆ ನಿರ್ವಣವಾದದ್ದು ಮತ್ತೊಂದು ರೀತಿಯ ಸನ್ನಿವೇಶ. ಷರೀಫ್ ಪತ್ರಿಕಾಗೋಷ್ಠಿ ನಡೆಸಿ ಹದಿನೈದು ದಿನದೊಳಗೆ ಹೈ.ಕ.ಭಾಗದಲ್ಲಿ, ಬೆಂಗಳೂರು ಸುತ್ತಮುತ್ತ ಕೋಮುಗಲಭೆಗಳು ಶುರುವಾದವು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮುಖ್ಯಮಂತ್ರಿ ವಿಫಲರಾಗಿದ್ದಾರೆಂಬ ಕುಂಟುನೆಪವಿಟ್ಟುಕೊಂಡು, ಯಾವುದೋ ಕಾರ್ಯನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಕಾಂಗ್ರೆಸ್ ವರಿಷ್ಠ ರಾಜೀವ ಗಾಂಧಿ ಬೆಂಗಳೂರು ವಿಮಾನಿಲ್ದಾಣದಲ್ಲಿ ವೀರೇಂದ್ರ ಪಾಟೀಲರ ಪದಚ್ಯುತಿ ನಿರ್ಧಾರವನ್ನು ಪ್ರಕಟಿಸಿಬಿಟ್ಟರು. ವಾಸ್ತವದಲ್ಲಿ ರಾಜೀವ್ ಆ ನಿರ್ಧಾರ ಪ್ರಕಟಿಸುವ ಸಂದರ್ಭದಲ್ಲಿ ವೀರೇಂದ್ರ ಪಾಟೀಲರಿಗೆ ಪಾರ್ಶ್ವವಾಯು(ಸ್ಟ್ರೋಕ್) ತಗುಲಿ ವಿಶ್ರಾಂತಿಯಲ್ಲಿದ್ದರು. ಅನಾರೋಗ್ಯಪೀಡಿತರಾದ ಹಿರಿಯ ನಾಯಕನನ್ನು ಭೇಟಿ ಮಾಡುವ ಬದಲು ಅವರ ಪದಚ್ಯುತಿ ನಿರ್ಧಾರ ಪ್ರಕಟಿಸಿದ್ದರು. ಆ ಮೇಲೆ ರಾಜಕೀಯ ವಿಶ್ಲೇಷಕರ ಆಲೋಚನೆಗೆ ನಿಲುಕಿದ ಸಂಗತಿ ಎಂದರೆ, ವೀರೇಂದ್ರ ಪಾಟೀಲರು 1978ರಲ್ಲಿ ಇಂದಿರಾ ಗಾಂಧಿ ವಿರುದ್ಧ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ವಿರೋಧಿ ಪಾಳಯದ ಒಮ್ಮತದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರ ಸೇಡನ್ನು ರಾಜೀವ ಗಾಂಧಿ ಈ ರೀತಿಯಲ್ಲಿ ತೀರಿಸಿಕೊಂಡಿದ್ದರು ಎಂಬುದು. ಇದ್ದರೂ ಇರಬಹುದು, ಏಕೆಂದರೆ ಇಂದಿರಾ ಮರಣದ ನಂತರ ಅವರ ಉತ್ತರಾಧಿಕಾರಿ ಆಗುವ ಇಂಗಿತ ವ್ಯಕ್ತಪಡಿಸಿದ್ದ ಪ್ರಣವ್ ಮುಖರ್ಜಿ ಅವರನ್ನು ರಾಜೀವ ಗಾಂಧಿಯಿಂದ ಹಿಡಿದು ಸೋನಿಯಾ, ರಾಹುಲ್​ರವರೆಗೆ ಹೇಗೆ ನಡೆಸಿಕೊಂಡರು ಎಂಬುದನ್ನು ನೋಡಿದರೆ ಲೆಕ್ಕಾಚಾರ ತಾಳೆ ಆಗುತ್ತದೆ.

ವೀರೇಂದ್ರ ಪಾಟೀಲರು ಮತ್ತೆಂದೂ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರಲೇ ಇಲ್ಲ. ಅದರ ಪರಿಣಾಮವೋ ಎಂಬಂತೆ 1990ರಿಂದ ಈಚೆಗೆ 28 ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ವೀರಶೈವ-ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ರಾಜಕೀಯದಲ್ಲಿ ಒಟ್ಟಿಗೆ ಇದ್ದಾಗ ಮತ್ತು ರಾಜಕೀಯವಾಗಿ ಬೇರ್ಪಟ್ಟಾಗಲೂ ಕೂಡ ವೀರೇಂದ್ರ ಪಾಟೀಲರ ಅತ್ಯಾಪ್ತ ಸ್ನೇಹಿತರಾಗಿದ್ದವರು ದಿ.ರಾಮಕೃಷ್ಣ ಹೆಗಡೆ. ಈ ಜೋಡಿಯನ್ನು ಆ ಕಾಲದಲ್ಲಿ ಲವ-ಕುಶ ಎಂದೇ ಕರೆಯುತ್ತಿದ್ದರು. ಆ ಕಾರಣಕ್ಕೆ ವೀರೇಂದ್ರ ಪಾಟೀಲರು ಅಧಿಕಾರ ವಂಚಿತರಾದ ಬಳಿಕ ಲಿಂಗಾಯತ ಸಮುದಾಯ ಜನತಾ ಪರಿವಾರದ ರಾಮಕೃಷ್ಣ ಹೆಗಡೆ ಅವರಲ್ಲಿ ವೀರೇಂದ್ರ ಪಾಟೀಲರ ನೇತೃತ್ವವನ್ನು ಕಂಡರು. ಉ.ಕ./ಹೈ.ಕ. ಭಾಗದಲ್ಲಿ ಹೆಗಡೆ ಗಳಿಸಿದ್ದ ಜನಪ್ರಿಯತೆ ಈ ಮಾತಿಗೆ ಸಾಕ್ಷಿ.

ಮೂವತ್ತು ವರ್ಷಗಳ ಹಿಂದೆ ಆದ ಪ್ರಮಾದವನ್ನು ಈಗೇಕೆ ಕೆದಕುವುದು ಎಂದರೆ, ಈಗಲೂ ಮಾಡಲು ಹೊರಟಿರುವುದು ಅದೇ ಪ್ರಮಾದವನ್ನೇ. ಒಂದು ವೇಳೆ ವೀರಶೈವ-ಲಿಂಗಾಯತ ಸಮುದಾಯದ ಅಗ್ರಗಣ್ಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸದೇ ಹೋಗಿದ್ದಿದ್ದರೆ ಈಗ ಲಿಂಗಾಯತ ಧರ್ಮ ಸ್ಥಾಪನೆಯ ಪ್ರಸ್ತಾಪ ಇರುತ್ತಿರಲಿಲ್ಲ. ವೀರಶೈವ-ಲಿಂಗಾಯತರನ್ನು ಬೇರ್ಪಡಿಸಿದರೆ ಯಡಿಯೂರಪ್ಪ ಅವರ ಅಧಿಕಾರದ ಕನಸಿಗೆ ಭಂಗ ತರಬಹುದು ಎಂಬುದೊಂದೇ ಆಲೋಚನೆ. ಹಾಗಾದರೆ ಈ ಧರ್ಮ ಸ್ಥಾಪನೆಯ ಯತ್ನದ ಹಿಂದೆ ಇರುವುದು ಲಿಂಗಾಯತ ಸಮುದಾಯದ ಹಿತೋದ್ದೇಶವೋ… ದುರುದ್ದೇಶವೋ? ವಿದ್ಯಾವಂತ, ಬುದ್ಧಿವಂತ, ಸ್ವಾಭಿಮಾನಿ ಮತ್ತು ಸಂಘಟಿತ ಸಮುದಾಯಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವೀರಶೈವ ಅಥವಾ ಲಿಂಗಾಯತರು ಇದನ್ನು ಅರ್ಥ ಮಾಡಿಕೊಳ್ಳಲಾರರೇ? ಇನ್ನು ತರ್ಕಕ್ಕೆ ಬರುವುದಾದರೆ…ಲಿಂಗಾಯತರು ಹಿಂದೂ ಅಲ್ಲವೇ?

ಪ್ರಮಾಣ ಯಾವುದು?

# ಭಗವಾನ್ ಶಿವನ ಪುತ್ರ ಭಗವಾನ್ ವೀರಭದ್ರನೇ ವೀರಶೈವ ತತ್ತ್ವದ ಪ್ರತಿಪಾದಕ ಮತ್ತು ಸಂಸ್ಥಾಪಕ ಎಂಬುದು ನಂಬಿಕೆ. ಸಿದ್ಧಾಂತ ಶಿಖಾಮಣಿಯಲ್ಲಿ ವೀರಶೈವ ತತ್ತ್ವಶಾಸ್ತ್ರದ ಪೂರ್ತಿ ವಿವರಣೆ ಇದೆ. ಇದರ ಮೂಲ ಹಿಂದು ಸಂಪ್ರದಾಯ ಮತ್ತು ಆಚರಣೆಗಳೇ ಆಗಿವೆ ಎಂಬುದು ತಜ್ಞರು ಕಂಡುಕೊಂಡ ಸತ್ಯ.

# ವೀರಶೈವ ಸಮುದಾಯದ ಜಗದ್ಗುರು ಪಂಚಾಚಾರ್ಯರು ಒಂದೊಂದು ಯುಗಾರಂಭದಲ್ಲಿ ಲಿಂಗದಿಂದ ಅವತರಿಸಿ ವೀರಶೈವ ಧರ್ಮವನ್ನು ಸಂಸ್ಥಾಪಿಸಿದರು ಎಂಬುದು ನಂಬಿಕೆ. ಹಲವು ದೇವಸ್ಥಾನಗಳು ವೀರಶೈವ ಪಂಚ ಪೀಠಗಳ ಅಧೀನದಲ್ಲಿದ್ದು, ಹಿಂದೂ ಧರ್ಮದ ಎಲ್ಲ ನಂಬಿಕೆಗಳ ಜನರು ಇಲ್ಲಿನ ಭಕ್ತರೂ ಆಗಿದ್ದಾರೆ.

# ಮಹಾಭಾರತದ ಅನುಶಾಸನ ಪರ್ವದಲ್ಲಿ ಯುಧಿಷ್ಠಿರ ಮತ್ತು ಭೀಷ್ಮರ ನಡುವಿನ ಮಾತುಕತೆಯಲ್ಲಿ ಲಿಂಗಧಾರಣೆ ತತ್ತ್ವಶಾಸ್ತ್ರದ ವಿಚಾರ ಪ್ರಸ್ತಾಪವಾಗುತ್ತದೆ. ಇಂತಹ ಅಭ್ಯಾಸ ಗುರು ಬಸವಣ್ಣನವರ ಜನನಕ್ಕೂ ಮುಂಚಿತವಾಗಿಯೇ ಇತ್ತೆಂಬುದನ್ನು ಇದು ತೋರಿಸುತ್ತದೆ.

# ಸಿಂಧೂ ಕಣಿವೆ ನಾಗರಿಕತೆ(3ನೇ ಶತಮಾನ)ಯ ಹರಪ್ಪ ಮತ್ತು ಮೊಹಂಜದಾರೋಗಳಲ್ಲಿ ಉತ್ಖನನ ಮಾಡುವಾಗ ಇಷ್ಟಲಿಂಗ ಮತ್ತು ಸ್ಥಾವರಲಿಂಗವನ್ನು ಬಿಂಬಿಸುವಂತಹ ಪ್ರತಿಮೆಗಳು ಪತ್ತೆಯಾಗಿದ್ದವು ಎಂದು ಭಾರತದ ಪುರಾತತ್ತ್ವ ಸರ್ವೆಕ್ಷಣಾಲಯದ ಮಹಾನಿರ್ದೇಶಕ ಸರ್ ಜಾನ್ ಹುಬರ್ಟ್ ಮಾರ್ಷಲ್ 1931ರಲ್ಲಿ ಪ್ರಕಟವಾದ ಕೃತಿಯಲ್ಲಿ ತಿಳಿಸಿದ್ದಾರೆ.

# ಶೃಂಗೇರಿ ಶಾರದಾಪೀಠದ ‘ಗುರುವಂಶಕಾವ್ಯ’ ಕೃತಿಯಲ್ಲೂ ಪ್ರಸ್ತಾಪವಿರುವ ಪರಮ ಪವಿತ್ರ ಚಂದ್ರಮೌಳೇಶ್ವರ ಲಿಂಗ(ಶಿವಲಿಂಗ)ವನ್ನು ರಂಭಾಪುರಿಯ ಜಗದ್ಗುರು ರೇಣುಕಾಚಾರ್ಯರು 8ನೇ ಶತಮಾನದಲ್ಲಿ ಆದಿಶಂಕರಾಚಾರ್ಯರಿಗೆ ನೀಡಿದರೆಂಬ ಉಲ್ಲೇಖವಿದೆ. ವೀರಶೈವ-ಲಿಂಗಾಯಿತ ಮತ್ತು ಇತರೆ ಹಿಂದೂ ಆಚರಣೆಗಳ ನಡುವೆ ವ್ಯತ್ಯಾಸ ಇಲ್ಲ ಎಂಬುದಕ್ಕೆ ಇದು ನಿದರ್ಶನ.

# ಪ್ರಗತಿಪರ ದೃಷ್ಟಿಕೋನ ಹೊಂದಿದ್ದ ಬಸವಣ್ಣನವರನ್ನು ಹಿಂದೂ ನಂಬಿಕೆ ವಿಶ್ವಾಸಗಳ ಸುಧಾರಕ ಎಂದೇ ಪರಿಗಣಿಸಲಾಗುತ್ತದೆ.

# ಬಸವಣ್ಣನವರು ಇಷ್ಟಲಿಂಗ ಧಾರಣೆಯ ಪರಿಕಲ್ಪನೆಯನ್ನು ಉತ್ತೇಜಿಸಿದರು. ಇದು ವೀರಶೈವರಲ್ಲಿ ಅದಾಗಲೇ ಇದ್ದಂತಹ ಆಚರಣೆಯಾಗಿತ್ತು. ಅವರ ವಚನಗಳಲ್ಲಿ ಅಥವಾ ಬರವಣಿಗೆಯಲ್ಲಿ ಎಲ್ಲೂ ‘ಲಿಂಗಾಯತ’ ಪದ ಬಳಸಿಲ್ಲ. =ಕರ್ನಾಟಕ ಸರ್ಕಾರ 2016ರಲ್ಲಿ ಪ್ರಕಟಿಸಿದ ವಚನ ಮಹಾಸಂಪುಟ(ಪೊ›.ಕಲಬುರಗಿ ಸಂಪಾದಕತ್ವ)ದ ಮೂರನೇ ಆವೃತ್ತಿಯ 1092ನೇ ವಚನದಲ್ಲಿ ಬಸವಣ್ಣ ವೀರಶೈವ ಎಂಬ ಉಲ್ಲೇಖವಿದೆ.

# ಅಖಿಲ ಭಾರತೀಯ ವೀರಶೈವ ಮಹಾಸಭಾ 1904ರಲ್ಲಿ ಸ್ಥಾಪಿಸಲ್ಪಟ್ಟಿತು. ಧಾರವಾಡದಲ್ಲಿ ಅಂಗೀಕರಿಸಿದ ಅದರ ಮೊದಲ ನಿರ್ಣಯದಲ್ಲಿ ಬಸವಣ್ಣನವರು ಯಾವುದೇ ಧರ್ಮದ ಸ್ಥಾಪಕರಲ್ಲ. ಅವರು ಅದಾಗಲೇ ಇದ್ದ ವೀರಶೈವ ತತ್ತ್ವಶಾಸ್ತ್ರದ ಪುನರುದ್ಧಾರಕ ಎಂದು ಉಲ್ಲೇಖಿಸಲಾಗಿದೆ.

ಅಂದು ಹಾಗೆ ಇಂದು ಹೀಗೆ?: ಶ್ಯಾಮನೂರು ಶಿವಶಂಕರಪ್ಪ(ಕಾಂಗ್ರೆಸ್​ನ ಹಿರಿಯ ನಾಯಕ) ಅಧ್ಯಕ್ಷತೆಯಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭಾ 2013ರಲ್ಲಿ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅಂದಿನ ಇಂಧನ ಸಚಿವ ವೀರಪ್ಪ ಮೊಯಿಲಿ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಧರ್ಮವನ್ನು ಪರಿಗಣಿಸುವಂತೆ ಮನವಿ ಮಾಡಿತ್ತು. ಮಹಾಸಭಾದ ಮನವಿಯನ್ನು ಆಗಿನ ಯುಪಿಎ ಸರ್ಕಾರ ತಿರಸ್ಕರಿಸಿ, ‘ವೀರಶೈವ-ಲಿಂಗಾಯತರು ಹಿಂದೂಗಳ ಭಾಗವೇ ಹೊರತು ಸ್ವತಂತ್ರ ಧರ್ಮವಲ್ಲ’ ಎಂದು ಹೇಳಿತ್ತು.

ಈ ಕುರಿತ ಮನವಿಯನ್ನು ಅಲ್ಪಸಂಖ್ಯಾತರ ಇಲಾಖೆ ಮತ್ತು ಅಲ್ಪಸಂಖ್ಯಾತರ ಆಯೋಗಕ್ಕೂ ಕಳುಹಿಸಲಾಗಿದೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿ ರಚಿಸಿ(22.12.2017) ಈ ಮನವಿ ಪರಿಶೀಲಿಸಿ, ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಿತ್ತು.

2018ರ ಜ.6ರಂದು ಮೊದಲ ಸಭೆ ನಡೆಸಿದ ಈ ಸಮಿತಿ, ಅಧ್ಯಯನ ನಡೆಸಿ ವರದಿ ಸಲ್ಲಿಸಲು ಆರು ತಿಂಗಳು ಬೇಕು ಎಂದು ಹೇಳಿತ್ತು. ಆದಾಗ್ಯೂ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒತ್ತಡಕ್ಕೆ ಮಣಿದು ಫೆ.2 ಮತ್ತು 3ರಂದು ಸಾರ್ವಜನಿಕ ಅಭಿಪ್ರಾಯ ಆಲಿಸುವ ಕೆಲಸಕ್ಕೆ ಮುಂದಾಯಿತು. ಅವುಗಳ ಪರಿಶೀಲನೆ ಮತ್ತು ಆಯ್ದವನ್ನು ದಾಖಲಿಸುವ ಕೆಲಸವನ್ನು ಫೆ.26, 27, 28ರಂದು ಮಾಡಲು ನಿರ್ಧರಿಸಿತು.

ಅಲ್ಲಿಂದಾಚೆಗೆ ಏನು ನಡೆಯಿತೋ ಗೊತ್ತಿಲ್ಲ- ಮಾ.19ರಂದು ಸಚಿವ ಸಂಪುಟ ಸಭೆ ಈ ಸಮಿತಿಯ ಶಿಫಾರಸು ವರದಿ ಸ್ವೀಕರಿಸಿತಲ್ಲದೆ ನಿರ್ಧಾರವನ್ನೂ ಪ್ರಕಟಿಸಿತು-ಲಿಂಗಾಯತರು/ವೀರಶೈವ ಲಿಂಗಾಯಿತರು-ಬಸವಧರ್ಮದಲ್ಲಿ ನಂಬಿಕೆ ಇರಿಸಿರುವವರನ್ನು ಧಾರ್ವಿುಕ ಅಲ್ಪಸಂಖ್ಯಾತರ ವಿಭಾಗಕ್ಕೆ ಸೇರ್ಪಡೆಗೊಳಿಸಲಾಗುವುದು. ಈ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೂ ಕಳುಹಿಸಿ ಪ್ರತ್ಯೇಕ ಧರ್ಮ ಸ್ಥಾನಮಾನ ಒದಗಿಸುವಂತೆ ಕೇಳಿಕೊಳ್ಳುವುದು.

ಅಲ್ಪಸಂಖ್ಯಾತರ ಸ್ಥಾನಮಾನ ಸಿಕ್ಕಿದರೂ, ಹಾಲಿ ಇರುವಂತಹ ಮೀಸಲಿನಲ್ಲಿ ಯಾವುದೇ ವ್ಯತ್ಯಾಸ ಆಗಲಾರದು ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ. ಈಗಾಗಲೇ ಇರುವಂಥ 3ಬಿ ವಿಭಾಗದ ಮೀಸಲಾತಿ ಮುಂದುವರಿಯುತ್ತದಷ್ಟೇ.

ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಕಾಯ್ದೆ 1992ರ ಪ್ರಕಾರವೇ ಕೇಂದ್ರ ಸರ್ಕಾರ ಈಗಾಗಲೇ ಇರುವ ಧರ್ಮವನ್ನು ಅಲ್ಪಸಂಖ್ಯಾತ ಧರ್ಮವೆಂದು ಪರಿಗಣಿಸಬಹುದಷ್ಟೇ. ಕರ್ನಾಟಕದಲ್ಲೇ ಧರ್ಮವೆಂದು ಗುರುತಿಸಿಕೊಳ್ಳದ ಲಿಂಗಾಯಿತವನ್ನು ಹೇಗೆ ಅಲ್ಪಸಂಖ್ಯಾತ ಧರ್ಮ ಎಂದು ಪರಿಗಣಿಸಲು ಸಾಧ್ಯ? ಬಾಲ್ ಪಾಟೀಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ (2005) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಲ್ಪಸಂಖ್ಯಾತರು ಮತ್ತು ಅವರ ಹಕ್ಕುಗಳ ಕುರಿತು ವಿಸ್ತೃ ವಿವರ ನೀಡಿದೆ.

ಸಾಮಾಜಿಕ ಸಾಮರಸ್ಯದ ದೃಷ್ಟಿಯಿಂದ ಉಚಿತವಲ್ಲದ, ಸೆಕ್ಯುಲರ್ ಸಿದ್ಧಾಂತಕ್ಕೆ ವಿರುದ್ಧವಾದ, ಲಿಂಗಾಯತ ಸಮುದಾಯಕ್ಕೆ ಭಾವನಾತ್ಮಕವಾಗಿ ಮತ್ತು ವ್ಯಾವಹಾರಿಕವಾಗಿ ಪ್ರಯೋಜನವಿಲ್ಲದ ಕೆಲಸಕ್ಕೆ ಸರ್ಕಾರ ಯಾತಕ್ಕೆ ಕೈಹಾಕಿದೆ?

ಕಾರಣದ ಎಳೆ ಸಿಗುತ್ತದೆ- ಹರಿಯಾಣದಲ್ಲಿ ಜಾಟ್ ಚಳವಳಿ, ಗುಜರಾತದಲ್ಲಿ ಪಟೇಲ್ ಚಳವಳಿ, ಮಹಾರಾಷ್ಟ್ರದಲ್ಲಿ ಮರಾಠಾ-ದಲಿತ ಸಂಘರ್ಷ. ಕರ್ನಾಟಕದಲ್ಲಿ ಲಿಂಗಾಯತ ಧರ್ಮ ಸ್ಥಾಪನೆ ಪ್ರಸ್ತಾಪ, ಹಿಂದೂ ಮತಬ್ಯಾಂಕ್ ಹಂಚಿಕೆ ಮತ್ತು ಕೇಂಬ್ರಿಜ್ ಅನಾಲಿಟಿಕಾ ಇತ್ಯಾದಿ!

ಇವನಾರವ ಇವನಾರವ ನಮ್ಮವ… ಎಂದು ಹೇಳುವುದಾದರೂ ಹೇಗೆ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top