ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಮೂರ್ತಿಭಂಜನವಲ್ಲ!

ಅಭಿವ್ಯಕ್ತಿ ಸ್ವಾತಂತ್ರ್ಯದಷ್ಟೇ ವ್ಯಕ್ತಿ ಸ್ವಾತಂತ್ರ್ಯವೂ ಮುಖ್ಯ. ವ್ಯಕ್ತಿಯ ಸಾವಿನ ಜತೆಗೆ ಆತನ ಘನತೆ, ಗೌರವಗಳೂ ಸಾಯುವುದಿಲ್ಲ ಎಂಬುದು ಕಾನೂನು ಪಂಡಿತರು ಹೇಳುವ ಮಾತು. ಹಾಗಾದರೆ ರಾಣಿ ಪದ್ಮಾವತಿಯ ವ್ಯಕ್ತಿ ಸ್ವಾತಂತ್ರ್ಯ ರಕ್ಷಣೆ, ಮಾನನಷ್ಟದ ಭರ್ತಿ ಯಾರ ಹೊಣೆ?!

ಎರಡು ದಿನದ ಹಿಂದೆ ಹಿರಿಯ ನ್ಯಾಯವಾದಿ ಸಿ.ಎಚ್.ಹನುಮಂತರಾಯಪ್ಪ ಅವರ ಜೊತೆ ಮಾತನಾಡುತ್ತಿದ್ದೆ. ಅವರೊಂದು ಮಾತನ್ನು ಹೇಳಿದರು- ‘ಮಾನಹಾನಿಗೊಳಗಾದ ವ್ಯಕ್ತಿಯ ಮರಣದ ನಂತರವೂ ಮಾನನಷ್ಟ ಮೊಕದ್ದಮೆಯನ್ನು ಮುಂದುವರಿಸಿ ನ್ಯಾಯ ಕೊಡಿಸಲು ಸಾಧ್ಯ. ಅಥವಾ ಮಾನಹಾನಿಗೊಳಗಾದ ವ್ಯಕ್ತಿ ಮರಣ ಹೊಂದಿದ್ದಾನೆ ಎಂಬ ಕಾರಣಕ್ಕಾಗಿ ಮಾನಹಾನಿಗೈದ ವ್ಯಕ್ತಿ ಕಾನೂನಿನ ಸರಪಳಿಯಿಂದ ತಪ್ಪಿಸಿಕೊಳ್ಳಲಾಗದು’ ಎಂದು. ಅದೇ ವಾದದ ಆಧಾರದಲ್ಲಿ ಪ್ರಕರಣ ಜಯಿಸಿದ ಉದಾಹರಣೆಯನ್ನು ಅವರು ಬಹಳ ಆಕರ್ಷಕವಾಗಿ ವಿವರಿಸಿದರು. ಹುಟ್ಟಿದ ಮನುಷ್ಯ ಒಂದು ದಿನ ಸಾಯಲೇಬೇಕು. ಆದರೆ ಅದೇ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಗಳಿಸಿದ ಖ್ಯಾತಿಗೆ, ಮಾನಕ್ಕೆ ಮಾತ್ರ ಸಾವಿಲ್ಲ ಎಂಬುದು ಆ ಮಾತಿನ ಒಟ್ಟು ತಾತ್ಪರ್ಯ. ಈ ಅಂಶವನ್ನು ವಿಶೇಷವಾಗಿ ವಕೀಲ ವೃಂದದವರು, ನ್ಯಾಯಾಧೀಶರು ಒಂದು ಸಾರ್ವಕಾಲಿಕ ನಿದರ್ಶನ ಎಂದು ತೆಗೆದುಕೊಳ್ಳಬೇಕು. ಹಾಗೇನೆ ಇದೇ ಮಾತು ನೂರು, ಸಾವಿರ ವರ್ಷಗಳ ಹಿಂದಿನ ಇತಿಹಾಸಕ್ಕೆ,ಇತಿಹಾಸದಲ್ಲಿ ಆಗಿಹೋದ ವ್ಯಕ್ತಿಗಳಿಗೆ, ಘಟನೆಗಳಿಗೆ ಅನ್ವಯವಾಗಬೇಕಲ್ಲವೇ?

ಈಗ ರಾಜಸ್ತಾನದ ಮೇವಾರ ರಾಜವಂಶಸ್ಥ ದೊರೆ ರಾಣಾ ರತನ್ ಸಿಂಗ್​ನ ಪಟ್ಟದ ರಾಣಿ ‘ಪದ್ಮಿನಿ’ ವಿಚಾರಕ್ಕೆ ಬರೋಣ. ರಾಣಿ ಪದ್ಮಿನಿ ದೆಹಲಿ ಸಂಸ್ಥಾನದ ದೊರೆ ಅಲ್ಲಾವುದ್ದೀನ್ ಖಿಲ್ಜಿ ಜತೆಗೆ ಕನಸಿನ ದೃಶ್ಯದಲ್ಲಿ ಸರಸ ಸಲ್ಲಾಪದಲ್ಲಿರುವ ಸನ್ನಿವೇಶ ಒಳಗೊಂಡಿದೆ ಎನ್ನಲಾದ ‘ಪದ್ಮಾವತಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ವಿರುದ್ಧ ರಾಜಪೂತ ಸಮಾಜದ ಸ್ವಾಭಿಮಾನ ರಕ್ಷಣೆಗೆ ಟೊಂಕಕಟ್ಟಿ ನಿಂತ ಕರ್ಣಿ ಸೇನೆ ಪ್ರಬಲ ಪ್ರತಿರೋಧ ಒಡ್ಡಿದೆ. ಚಿತ್ರದ ನಿರ್ದೇಶಕ ಸಂಜಯಲೀಲಾ ಬನ್ಸಾಲಿ ಮತ್ತು ಅವರ ಪರ ವಹಿಸಿರುವವರು ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದು ಹೇಳುತ್ತಿದ್ದಾರೆ. ಹಾಗಾದರೆ ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯವೇ? ಇತಿಹಾಸದ ನಂಬಿಕೆಗಳನ್ನು ಗೌರವಿಸಿ ಕಾಪಾಡುವುದು ಮುಖ್ಯವೇ? ಅಥವಾ ಗತಿಸಿಹೋದ ರಾಣಿ ಪದ್ಮಾವತಿಯ ವ್ಯಕ್ತಿ ಸ್ವಾತಂತ್ರ್ಯ ರಕ್ಷಣೆ, ಆಕೆಯ ಖ್ಯಾತಿ ಮತ್ತು ಮಾನಹರಣ ಆಗುವುದನ್ನು ತಡೆಯುವುದು ಮುಖ್ಯವೇ ಎಂಬ ಅಂಶಗಳ ಕುರಿತು ನಾವು ಈಗ ಆಲೋಚನೆ ಮಾಡಬೇಕಿದೆ.

ಅದಕ್ಕೂ ಮೊದಲು ಇನ್ನೂ ಒಂದು ಸದಾಚಾರ ಅಥವಾ ಸಂಪ್ರದಾಯವನ್ನು ನಾವು ಪರಿಗಣನೆಗೆ ತೆಗೆದುಕೊಳ್ಳೋಣ. ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ಈ ನಡವಳಿಕೆಗೆ ಬಹಳ ಮಹತ್ವವಿದೆ. ಉದಾಹರಣೆಗೆ ನಮ್ಮ ವಿಧಾನಮಂಡಲ ಅಥವಾ ಸಂಸತ್ತಿನಲ್ಲಿ ನಡೆಯುವ ಚರ್ಚೆಗಳ ಸಂದರ್ಭಗಳಲ್ಲಿ ಯಾವುದೇ ವ್ಯಕ್ತಿಯ ವ್ಯಕ್ತಿತ್ವಕ್ಕೆ ಚ್ಯುತಿ ಉಂಟು ಮಾಡಬಲ್ಲ ಚರ್ಚೆ ಅಥವಾ ಟೀಕೆ ಮಾಡಬೇಕಾದ ಸಂದರ್ಭದಲ್ಲಿ ಆ ವ್ಯಕ್ತಿ ಎದುರಲ್ಲಿ ಇಲ್ಲದೇ ಹೋದಲ್ಲಿ (ಬದುಕಿದ್ದೂ ಎದುರಲ್ಲಿ ಇಲ್ಲದೇ ಇದ್ದಲ್ಲಿ ಅಥವಾ ಮರಣ ಹೊಂದಿದಲ್ಲಿ) ಸದನದ ಚರ್ಚೆಯ ದಾಖಲೆಗಳಿಂದ ಆ ವ್ಯಕ್ತಿಯ ಹೆಸರನ್ನು ಕೈಬಿಡಬೇಕು ಎಂಬ ಉದಾತ್ತವಾದ ಸಂಪ್ರದಾಯವಿದೆ. ಇದನ್ನು ನಾವು ಈಗ ಹೀಗೆ ವ್ಯಾಖ್ಯಾನ ಮಾಡೋಣ. ಯಾವ ವ್ಯಕ್ತಿ ತನ್ನ ಮೇಲಿನ ಟೀಕೆ ಟಿಪ್ಪಣಿಗಳಿಗೆ ಉತ್ತರ ಕೊಡಲು, ಸಮರ್ಥನೆ ಮಾಡಿಕೊಳ್ಳಲು ಎದುರಲ್ಲಿ ಇಲ್ಲವೋ ಅಂಥ ವ್ಯಕ್ತಿಯ ವಿರುದ್ಧ ಮಾಡುವ ಯಾವುದೇ ಆರೋಪ, ಟೀಕೆ ಸಹಜ ನ್ಯಾಯಕ್ಕೆ ವಿರುದ್ಧವಾದುದು ಎಂದೇ ಆಗುತ್ತದೆ. ಏಕೆಂದರೆ ಆ ವ್ಯಕ್ತಿಗೆ ಅಲ್ಲಿ ಸಮರ್ಥನೆಯ ಅವಕಾಶ ಸಿಕ್ಕಿರುವುದಿಲ್ಲ. ವ್ಯಕ್ತಿ ಸ್ವಾತಂತ್ರ್ಯಅಭಿವ್ಯಕ್ತಿ ಸ್ವಾತಂತ್ರ್ಯಳನ್ನು ನೀಡಿದ ಸಂವಿಧಾನದ ಉಗಮ ನಮ್ಮ ಶಾಸನಸಭೆಗಳಿಂದಲೇ ಆಗಿರುವುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ್ಕತ ವ್ಯಕ್ತಿಸ್ವಾತಂತ್ರ್ಯೇ ಮೇಲು ಎಂಬ ತರ್ಕಕ್ಕೆ ಬರಬೇಕಾಗುತ್ತದೆ. ಅಷ್ಟು ಮಾತ್ರವಲ್ಲ, ವ್ಯಕ್ತಿ ಸ್ವಾತಂತ್ರ್ಯ ಸಹಜ ನ್ಯಾಯದ ಸಿದ್ಧಾಂತದ ಉನ್ನತ ನಿಲುವು ಹೇಗಿದೆ ಎಂಬುದನ್ನು ನಾವು ನೋಡುವುದಾದರೆ ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಆತ್ಮದಂತಿರುವ ಸಂಸತ್ತಿನ ಮೇಲೆ ದಾಳಿ ನಡೆಸಿದ ಭಯಂಕರ ಪಾತಕಿ ಅಫ್ಝಲ್​ಗೆ ಕೂಡ ವಕಾಲತ್ತು ಹಾಕುವ, ತನ್ನನ್ನು ತಾನು ಸಮರ್ಥನೆ ಮಾಡಿಕೊಳ್ಳುವ ಅವಕಾಶವನ್ನು ನೀಡಿಲ್ಲವೇ? ಹಾಗಾದರೆ ಅದೇ ಕನಿಷ್ಟ ವ್ಯಕ್ತಿ ಸ್ವಾತಂತ್ರ್ಯ ಮೇವಾರದಂತದ ಘನ ಸಂಸ್ಥಾನದ ಎಂದೋ ಗತಿಸಿಹೋದ ಪಟ್ಟದ ರಾಣಿ ಪದ್ಮಾವತಿಗೆ ಇಲ್ಲವೇ ಎಂಬ ಪ್ರಶ್ನೆಯನ್ನು ಸಂಜಯಲೀಲಾ ಬನ್ಸಾಲಿ ಮತ್ತು ನಟಿ ದೀಪಿಕಾ ಪಡುಕೋಣೆಗೆ ಕೇಳಬೇಕಾಗುತ್ತದೆ. ಇಲ್ಲಿ ರಾಣಿ ಪದ್ಮಾವತಿ ಬದುಕಿಲ್ಲದೇ ಇರುವುದರಿಂದ ಮತ್ತು ಮೇವಾರ ಸಂಸ್ಥಾನದ ಕುರಿತು ರಾಜಸ್ಥಾನದಲ್ಲಿ ಅಪಾರ ಗೌರವ ಇರುವುದರಿಂದ ನನ್ನ ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯ್ಕತಲೂ ವ್ಯಕ್ತಿ ಸ್ವಾತಂತ್ರ್ಯ್ಕೆ ಹೆಚ್ಚಿನ ಒತ್ತನ್ನು ನೀಡಬೇಕು. ಪದ್ಮಾವತಿ ಸಿನಿಮಾದ ವಿಷಯದಲ್ಲಿ ಸವೋಚ್ಚ ನ್ಯಾಯಾಲಯದ ನ್ಯಾಯಾಧೀಶರೂ ಇದನ್ನೇ ಪರಿಗಣಿಸುತ್ತಾರೆ ಎಂದು ಭಾವಿಸೋಣ.

ಸ್ವಾತಂತ್ರ್ಯ ಅರ್ಥ: ನಮಗೆ ಸ್ವಾತಂತ್ರ್ಯದೆ. ಎಂಥ ಸ್ವಾತಂತ್ರ್ಯ ಮಾತನಾಡುವ ಸ್ವಾತಂತ್ರ್ಯ ಬದುಕುವ ಸ್ವಾತಂತ್ರ್ಯ ಆಸ್ತಿಪಾಸ್ತಿ ಸಂಪಾದನೆ ಮಾಡುವ ಸ್ವಾತಂತ್ರ್ಯ ಇತ್ಯಾದಿ ಇತ್ಯಾದಿ. ಅದೆಲ್ಲಕ್ಕೂ ಒಂದು ಚೌಕಟ್ಟು ಮತ್ತು ಇತಿಮಿತಿಯಿದೆ. ಅದನ್ನು ಮೀರಿದಾಗ ಅದು ಸ್ವಾತಂತ್ರ್ಯ ಎನಿಸಿಕೊಳ್ಳುವುದಿಲ್ಲ, ಅದು ಸ್ವೇಚ್ಛಾಚಾರವಾಗಿ ಪರಿಣಮಿಸುತ್ತದೆ. ಸ್ವೇಚ್ಛಾಚಾರವನ್ನು ತಡೆಯಲು ಸೂಕ್ತವಾದ ಕಾನೂನುಗಳೂ ನಮ್ಮ ವ್ಯವಸ್ಥೆಯಲ್ಲಿ ಇವೆ.

ಮೂರ್ತಿಭಂಜನ ಪ್ರವೃತ್ತಿಯ ಪರಿಣಾಮ: ಇದನ್ನು ದುರಂತ ಎನ್ನದೆ ವಿಧಿಯಿಲ್ಲ. ಏಕೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಇಂದು ಮೂರ್ತಿಭಂಜನ ಪ್ರವೃತ್ತಿಯಾಗಿ, ಸಾಮಾಜಿಕ, ಸಾಂಸ್ಕೃತಿಕ ಅಸ್ಮಿತೆಗೆ ಧಕ್ಕೆ ತರುವ ಪಿಡುಗಾಗಿ ಪರಿಣಮಿಸಿದೆ. ಅದನ್ನು ನಾವು ಮಾನಸಿಕ ವಿಕೃತಿ, ದೇಶದ್ರೋಹದ ಪ್ರವೃತ್ತಿ ಎಂತಲೂ ಹೇಳಬಹುದು. ಇದಕ್ಕೆಲ್ಲ ಮೂಲ ಕಾರಣ, ಬ್ರಿಟಿಷ್ ಪ್ರಣೀತ ಶಿಕ್ಷಣ ಮತ್ತು ಎಡಪಂಥೀಯ ಚಿಂತನೆಯ ಹೇರಿಕೆಯ ಪರಿಣಾಮ ಎಂಬುದನ್ನು ನಾವು ಪ್ರಮುಖವಾಗಿ ಗಮನಿಸಬೇಕಿದೆ.

ಹಾಲಿ ವಿವಾದಕ್ಕೆ ಕಾರಣ ಆಗಿರುವ ‘ಪದ್ಮಾವತಿ’ ಸಿನಿಮಾದ ವಿಷಯ ಬದಿಗಿಟ್ಟು ಕೆಲ ಪ್ರಕರಣಗಳ ಕುರಿತು ಆಲೋಚನೆ ಮಾಡೋಣ. ಉದಾಹರಣೆಗೆ ದಿವಂಗತ ಎಂ.ಎಫ್. ಹುಸೇನ್ ಸೃಷ್ಟಿಸಿದ ಅವಾಂತರಗಳು. ಆತ ಓರ್ವ ಮುಸ್ಲಿಂ ಕಲಾಕಾರನಾಗಿ ಮುಸ್ಲಿಂ ದೇವ/ದೇವತೆಗಳು, ಆಚರಣೆಗಳು, ಸ್ತ್ರೀ ಸ್ವಾತಂತ್ರ್ಯ ವ್ಯಕ್ತಿ ಸ್ವಾತಂತ್ರ್ಯಳ ಕುರಿತು ವಿಡಂಬನೆ ಮಾಡಿದ್ದರೆ ದೊಡ್ಡ ವ್ಯಕ್ತಿ ಆಗಿರುತ್ತಿದ್ದರು. ಆದರೆ ಅವರು ಪ್ರಸಿದ್ಧಿಗೋಸ್ಕರ ಹಿಂದುಗಳ ಆರಾಧ್ಯ ದೈವ, ಆದರ್ಶ ಪುರುಷ ಎನಿಸಿಕೊಂಡಿರುವ ಶ್ರೀರಾಮ/ಸೀತಾಮಾತೆ/ಶ್ರೀರಾಮ ಭಕ್ತ ಹನುಮ/ಶ್ರೀ ಕೃಷ್ಣ, ರಾಧೆ ಇಂಥವರನ್ನೇ ಬೆತ್ತಲಾಗಿ, ಲೈಂಗಿಕವಾಗಿ ಚಿತ್ರಿಸಿದರು. ಖ್ಯಾತಿಯೋ ಕುಖ್ಯಾತಿಯೋ ಒಟ್ಟಿನಲ್ಲಿ ಪ್ರಚಾರವನ್ನಂತೂ ಗಿಟ್ಟಿಸಿಕೊಂಡರು. ಆತ ಎಂತಹ ದುರಹಂಕಾರಿ ಎಂದರೆ ಕೊನೆಗೊಂದು ನೆಪಮಾತ್ರಕ್ಕೂ ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ಇದನ್ನೆಲ್ಲ ಗಮನಿಸಿದರೆ ನನ್ನ ದೃಷ್ಟಿಯಲ್ಲಿ ಅವರೊಬ್ಬ ಮಹಾನ್ ಕಲಾಕಾರನಲ್ಲ ಬದಲಾಗಿ ಮನುಷ್ಯತ್ವದ ವಿರೋಧಿ. ಆದರೆ ನಮ್ಮಲ್ಲಿ ಕೆಲವರು ವಿಚಾರವಾದಿಗಳೆಂದು ಕರೆಸಿಕೊಂಡವರು ಅಂಥ ಎಂ.ಎಫ್.ಹುಸೇನರನ್ನೂ ಅಭಿವ್ಯಕ್ತಿ ಸ್ವಾತಂತ್ರ್ಯ ಛತ್ರಿಯಡಿ ರಕ್ಷಣೆಗೆ ಮುಂದಾದರು. ಬಹುಶಃ ಇದನ್ನು ಯಾವ ನಾಗರಿಕ ಸ್ವಾತಂತ್ರ್ಯೂ ಒಪ್ಪುವುದಿಲ್ಲ. ಹಾಗಾದರೆ ಶ್ರೀರಾಮ, ಸೀತಾಮಾತೆ, ಹನುಮ, ಕೃಷ್ಣ, ರಾಧೆಯರ ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಇವರಿಗೆ ಸ್ವಾತಂತ್ರ್ಯ ಅಧಿಕಾರಗಳನ್ನು ಕೊಟ್ಟವರು ಯಾರು? ಈ ದೇಶದ ಬಹುಪಾಲು ಜನರ ನಂಬಿಕೆಯ ಸ್ವಾತಂತ್ರ್ಯವನ್ನಾದರೂ ಗೌರವಿಸಬೇಕಲ್ಲವೇ? ಸ್ವಾತಂತ್ರ್ಯ ಅರ್ಥ ವ್ಯಾಖ್ಯಾನ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವುದೇ ಹಾಗಾದರೆ?

ಈ ಮೂರ್ತಿಭಂಜನ ಪ್ರವೃತ್ತಿ ಇಂದಿಗೂ ಬಳುವಳಿಯಾಗಿ ಉಳಿದುಕೊಂಡಿರುವುದು ಮೊಘಲ್ ಇತ್ಯಾದಿ ತರಹೇವಾರಿ ಮುಸ್ಲಿಂ ದಾಳಿಕೋರರ ಆಳ್ವಿಕೆಯ ಫಲವಾಗಿ. ಸ್ವಾತಂತ್ರ್ಯಾ ನಂತರದ ಇಷ್ಟು ವರ್ಷಗಳ ನಂತರವೂ ಆ ಪ್ರವೃತ್ತಿ ಮುಂದುವರೆದುಕೊಂಡು ಬಂದಿರುವುದು ಬ್ರಿಟಿಷರು ಶಿಕ್ಷಣದ ಹೆಸರಲ್ಲಿ ಬಿತ್ತಿದ ವಿಷಬೀಜದ ಫಲವಾಗಿ. ಅದನ್ನೀಗ ಉಣ್ಣುತ್ತಿದ್ದೇವೆ, ಅನುಭವಿಸುತ್ತಿದ್ದೇವೆ.

ಅಷ್ಟೇ ಏಕೆ ರಾಣಾಪ್ರತಾಪ್, ಶಿವಾಜಿ ಇವರೆಲ್ಲ ಸ್ವಾರ್ಥಕ್ಕಾಗಿ ಕಾದಾಡಿದವರು, ಆಜಾದ್, ಭಗತ್​ಸಿಂಗ್, ಸುಭಾಷ್ ಇವರೆಲ್ಲ ದಾರಿ ತಪ್ಪಿದ ಪಡ್ಡೆಗಳು ಅಂತ ಎಡಪಂಥೀಯ ಇತಿಹಾಸಕಾರರು ಬರೆಯಲಿಲ್ಲವೇ? ಇಂಥ ಸಾವಿರ ಉದಾಹರಣೆಗಳು ಸಿಗುತ್ತವೆ.

ತಪ್ಪು ಆಲೋಚನೆಯ ಅವಾಂತರಗಳು: ತಪ್ಪು ಆಲೋಚನೆಯ ಕ್ರಮದಿಂದ ಎಂಥ ಅವಾಂತರಗಳಾಗುತ್ತವೆ ಎಂಬುದಕ್ಕೆ ಜ್ವಲಂತ ಉದಾಹರಣೆಯೆಂದರೆ ರಾಮಮಂದಿರ ಮತ್ತು ಬಾಬರೀ ಮಸೀದಿ ವಿವಾದ. ಇಲ್ಲಿ ಹಿಂದು ಮುಸ್ಲಿಂ ಎಂಬುದಕ್ಕಿಂತ ಹೆಚ್ಚಾಗಿ ದೇಶಿ/ಪರದೇಶಿ ಎಂದು, ಆರಾಧ್ಯ ಪುರುಷ ಮತ್ತು ಆಕ್ರಮಣಕಾರ ಎಂಬ ನೆಲೆಯಲ್ಲಿ ಆಲೋಚನೆ ಮಾಡಿದ್ದರೆ ಸಾಕಿತ್ತು. ಮರುಕ್ಷಣದಲ್ಲೇ ಸಮಸ್ಯೆ ಪರಿಹಾರ ಆಗುತ್ತಿತ್ತು. ಅದಕ್ಕೂ ಮೀರಿ ಬೇಕಾದರೆ ಪ್ರಾಚ್ಯವಸ್ತು ಇಲಾಖೆ ನೀಡುವ ಪುರಾವೆಗಳನ್ನು ಗಮನಿಸಿಕೊಂಡರೆ ಸಾಕು. ಅದಿಲ್ಲ ಎಂದರೆ ನಮ್ಮ ಸ್ವಾತಂತ್ರ್ಯ ಸೇನಾನಿಗಳು ಬ್ರಿಟಿಷರ ವಿರುದ್ಧ ಹೋರಾಡಿದ್ದೂ ಕೂಡ ತಪ್ಪು/ಜನರಲ್ ಡಯರ್​ಗೆ ಗುಂಡಿಟ್ಟು ಕೊಂದದ್ದು ತಪ್ಪು ಎಂದು ಯಾರಾದರೂ ಮಾನವಹಕ್ಕುಗಳ ವಾರಸುದಾರರು ಮುಂದಿನ ದಿನಗಳಲ್ಲಿ ವಕಾಲತ್ತು ವಹಿಸಿದರೆ ಅಚ್ಚರಿಪಡಬೇಕಿಲ್ಲ. ಈ ಅಪಚಾರದ ಪರಂಪರೆಯಲ್ಲಿ, ಮೂರ್ತಿಭಂಜನದ ಇತಿಹಾಸದಲ್ಲಿ ರಾಣಿ ಪದ್ಮಾವತಿ ಮೊದಲಿಗಳಲ್ಲ, ಕೊನೆಯದೂ ಆಗಲಾರದು.

ಇತಿಹಾಸ, ವಿಚಾರವಂತಿಕೆ ಹೆಸರಲ್ಲಿ ವೇದ ಸುಳ್ಳು, ಮನುವಾದ, ಆರ್ಯರು ವಲಸಿಗರು, ಮಹಿಳಾ ಸ್ವಾತಂತ್ರ್ಯ್ಕೆ ಧಕ್ಕೆ, ರಾಮ ಸುಳ್ಳು, ರಾಮಾಯಣ ಸುಳ್ಳು, ಕೃಷ್ಣ ಸುಳ್ಳು, ಭಗವದ್ಗೀತೆ ಸುಡಬೇಕು ಎಂದು ಹೇಳುವವರು, ಸೆಕ್ಯುಲರ್ ಮತ್ತು ಕಮ್ಯುನಲ್ ಎಂಬ ಹೊಸ ವ್ಯಾಖ್ಯಾನಗಳನ್ನು ಮುಂದಿಟ್ಟವರು, ಅಸಹಿಷ್ಣುತೆಯೆಂದು ಜರಿದವರು, ಜಗತ್ತಿನ ವಿವಿಧ ಮತಗಳೊಂದಿಗೆ ‘ಭಾರತೀಯ ಧರ್ಮ’ವನ್ನು ಸಮೀಕರಿಸಿದವರು, ಮೂಢನಂಬಿಕೆ, ಜಾತೀಯತೆಯ ವಿರೋಧಿ ಪ್ರತಿಪಾದನೆ ಮಾಡುವವರು, ಹೊಸ ಹೊಸ ಧರ್ಮಗಳ ಸ್ಥಾಪನೆಗೆ ಮುಂದಾದವರು ಮಾಡುವ ಅವಾಂತರಗಳ ಸರಣಿಯ ಮುಂದುವರೆದ ಭಾಗವಿದು. ಇಂತಹ ಮೂರ್ತಿಭಂಜನ ಪ್ರವೃತ್ತಿ ನಿಂತಾಗಲೇ ಭಾರತದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ…ಅಲ್ಲವೇ???

ಕೊನೇ ಮಾತು: ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡಿ… ಇದೇ ಮಾತನ್ನು ಈಗ ಫೇಸ್ ಬುಕ್  /ವಾಟ್ಸ್ ಆ್ಯಪ್  ಸಂದೇಶಗಳಿಗೂ ಅನ್ವಯ ಮಾಡಿ!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top