ಕೇರಳದ ಈ ಮಾದರಿ ಕರ್ನಾಟಕಕ್ಕೆ ಖಂಡಿತ ಬೇಡ… ( 15 .07 .2017 )

ಕರ್ನಾಟಕ ಮತ್ತೊಂದು ಕೇರಳ ಆಗುತ್ತಿದೆಯೇ? ಈ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಮತ್ತೊಮ್ಮೆ ಚಾಲ್ತಿಗೆ ಬಂದಿದೆ, ಚರ್ಚೆಗೆ ತಿರುಗಿದೆ. ಕೇರಳ ಅಂದರೆ ಮೊದಲು ನೆನಪಾಗುತ್ತಿದ್ದುದು ಧಾರ್ವಿುಕತೆ, ಅಧ್ಯಾತ್ಮ, ಕಲೆ, ಸಂಗೀತ, ನೃತ್ಯ, ಕಲಾತ್ಮಕ ದೇವಾಲಯಗಳ ವೈಭವದ ಪರಂಪರೆ ಇತ್ಯಾದಿ. ಆ ದೃಷ್ಟಿಯಲ್ಲಿ ನೋಡಿದರೆ ಕೇರಳ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ಭಾರತಕ್ಕೆ, ಅದರಾಚೆಗಿನ ಪ್ರಪಂಚಕ್ಕೆಲ್ಲ ಮಾದರಿಯೆಂದರೂ ಅತಿಶಯೋಕ್ತಿಯಲ್ಲ. ಅಂತಹ ಕೇರಳದ ಮಾದರಿ ದೂರದ ಇಸ್ರೇಲ್​ವರೆಗೂ ಹಬ್ಬಿರುವುದನ್ನು ನಾವು ಕೇಳಿದ್ದೇವೆ, ಪ್ರತ್ಯಕ್ಷ ನೋಡಿದ್ದೇವೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪ್ರಧಾನಿಗೆ ಕೇರಳದ ಐತಿಹಾಸಿಕ, ಪಾರಂಪರಿಕ ಕಲಾಕೃತಿ, ಅಮೂಲ್ಯ ವಸ್ತುಗಳನ್ನು ನೆನಪಿನ ಕಾಣಿಕೆಯಾಗಿ ನೀಡಿದರು. ಕೇರಳದ ಈ ಸಾಂಸ್ಕೃತಿಕ ಸಂಬಂಧದ ಕೊಂಡಿ ಇಂದು ನಿನ್ನೆಯದಲ್ಲ. ಸಾವಿರ ವರ್ಷಗಳ ಅನುಬಂಧ ಎಂಬುದನ್ನು ಪ್ರಧಾನಿ ಇಸ್ರೇಲ್​ಗೆ ನೆನಪಿಸಿದರು. ಅಷ್ಟು ಮಾತ್ರವಲ್ಲ, ಕೇರಳ ಅಂದ್ರೆ ದೇವರ ಸ್ವಂತ ನಾಡು, ನಿಸರ್ಗ ಸಿರಿಯ ತವರು ಅಂತೆಲ್ಲ ದೇಶವಿದೇಶಗಳಲ್ಲಿ ಪ್ರಸಿದ್ಧಿಯನ್ನೂ ಪಡೆದುಕೊಂಡಿದೆ. ಆ ದೃಷ್ಟಿಯಲ್ಲಿ ಕೇರಳ ಕರ್ನಾಟಕಕ್ಕೆ ಮಾತ್ರವಲ್ಲ, ದೇಶವಿದೇಶಗಳಿಗೂ ಮಾದರಿಯಾದರೆ ಹೆಮ್ಮೆಯ ವಿಚಾರವೇ ತಾನೆ?

ಹಾಗೆಯೇ ಕಾಲಾನಂತರದಲ್ಲಿ ಕೇರಳಕ್ಕೆ ಅದರದ್ದೇ ಆದ ಪ್ರಸಿದ್ಧಿಯ ಜೊತೆಗೇ ಮತೀಯ ಹಿಂಸಾಚಾರದ ಕುಪ್ರಸಿದ್ಧಿಯೂ ಬಂತೆಂಬುದನ್ನು ಅಲ್ಲಗಳೆಯಲಾಗದು. ಕೇರಳದ ಈ ಕುಪ್ರಸಿದ್ಧಿಯ ಇತಿಹಾಸ ಆರಂಭವಾದದ್ದು 1921ರಲ್ಲಿ ಮಲಪ್ಪುರಂನಲ್ಲಿ ನಡೆದ ಮಾಪಿಳ್ಳೆ ದಂಗೆ ಅಥವಾ ಮೋಪ್ಳಾ ದಂಗೆಯ ಮೂಲಕ. ಅದನ್ನು ಕೇರಳದ ಕೋಮುವಾದಿ ರಕ್ತಸಿಕ್ತ ಇತಿಹಾಸದ ಮೊದಲ ಅಧ್ಯಾಯ ಎಂದೂ ಹೇಳುತ್ತಾರೆ. ಮಾಪಿಳ್ಳೆ ದಂಗೆ ವೇಳೆ ಲಕ್ಷಕ್ಕೂ ಹೆಚ್ಚು ಅಮಾಯಕ ಹಿಂದೂಗಳು ಪ್ರಾಣ ಕಳೆದುಕೊಂಡರು. ಆ ನಂತರದಲ್ಲಿ ಕೇರಳವನ್ನು ಆಳಿದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಸರ್ಕಾರಗಳು ಸತತವಾಗಿ ಮತೀಯವಾದವನ್ನು ಬೆಂಬಲಿಸಿ ಪೋಷಿಸುತ್ತಲೇ ಬಂದವು. ಅದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ 1969ರಲ್ಲಿ ಮುಸ್ಲಿಂ ಬಾಹುಳ್ಯದ ಪ್ರತ್ಯೇಕ ಮಲಪ್ಪುರಂ ಜಿಲ್ಲೆಯನ್ನು ಸೃಷ್ಟಿಸಿದ್ದು. ಇಎಂಎಸ್ ನಂಬೂದರಿಪಾದ್ ನೇತೃತ್ವದ ಕಮ್ಯುನಿಸ್ಟ್ ಸರ್ಕಾರ ಆ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿತು. ಅಷ್ಟು ಮಾತ್ರವಲ್ಲ ಹಿಂದೂ ಬಾಹುಳ್ಯ ಇರುವ ಉತ್ತರ ಕೇರಳದ ಕಾಸರಗೋಡು, ಕಣ್ಣೂರು, ವಯನಾಡು ಮತ್ತು ಕೊಯಿಕ್ಕೋಡು ಹಾಗೂ ದಕ್ಷಿಣ ಕೇರಳದ ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಇಡುಕ್ಕಿ, ಕೊಟ್ಟಾಯಂ, ಅಲಪ್ಪುಳ, ಪಟ್ಟಣಂತಿಟ್ಟ, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳನ್ನು ಕ್ರಮವಾಗಿ ಉತ್ತರ ಮತ್ತು ದಕ್ಷಿಣ ಜಿಲ್ಲೆಗಳೆಂದು ವಿಭಜಿಸಿ ಜಾತಿ-ಮತದ ಆಧಾರದಲ್ಲಿ ಶಾಶ್ವತ ವೋಟ್ ಬ್ಯಾಂಕ್ ಕೋಟೆಗಳನ್ನು ಸ್ವಘೊಷಿತ ಸೆಕ್ಯುಲರ್ ಪಕ್ಷಗಳಾದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಮಾಡಿಕೊಂಡು ಬಂದವು. ಇದರ ಪರಿಣಾಮ ಮಾತ್ರ ಘನಘೊರವೇ ಆಯಿತು.

ಆತಂಕಕ್ಕೆ ಕಾರಣ: ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ಕ್ರೌರ್ಯ ಅನೇಕರಿಗೆ ಗೊತ್ತಿದೆ. ಏಕೆಂದರೆ ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರೇ ಕಮ್ಯುನಿಸ್ಟ್ ದಾಳಿಕೋರರ ಗುರಿಯಾಗಿದ್ದರು. ಆದರೆ ಕೇರಳದ ಕಮ್ಯುನಿಸ್ಟ್ ಕ್ರೌರ್ಯ ಅದಕ್ಕಿಂತ ಕರಾಳ ಮತ್ತು ಭಿನ್ನ. ಅಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರೇ ನೇರವಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಲ್ಲಿ ತೊಡಗಿದ್ದಾರೆಂಬ ಬಲವಾದ ಆರೋಪವಿದೆ. ಇದುವರೆಗೆ ನೂರಕ್ಕೂ ಹೆಚ್ಚು ಬಲಪಂಥೀಯ ಕಾರ್ಯಕರ್ತರು ಬರ್ಬರವಾಗಿ ಹತ್ಯೆಯಾಗಿದ್ದಾರೆ. ವಿಚಿತ್ರ ಅಂದರೆ ಅಲ್ಲಿನ ಸರ್ಕಾರ ಅಂತಹ ಒಂದೇ ಒಂದು ಹತ್ಯಾಪ್ರಕರಣವನ್ನು ಭೇದಿಸಿಲ್ಲ. ಅದರ ಜೊತೆಗೆ ಈಗ ಕೇರಳದಲ್ಲಿ ಮುಸ್ಲಿಂ ಲೀಗ್, ಸ್ಟೂಡೆಂಟ್ ಇಸ್ಲಾಮಿಕ್ ಮೂವ್​ವೆುಂಟ್(ಸಿಮಿ), ಇಸ್ಲಾಮಿಕ್ ಸೇವಕ್ ಸಂಘ(ಐಎಸ್​ಎಸ್), ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಂತಾದ ಮತೀಯ ಸಂಘಟನೆಗಳು ಮತೀಯ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ. ಇದೀಗ ಸಿಮಿ ಮತ್ತು ಐಎಸ್​ಎಸ್​ಗೆ ಪರ್ಯಾಯವಾಗಿ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್(ಎನ್​ಡಿಎಫ್) ತಲೆ ಎತ್ತಿದೆ. ಪಿಎಫ್​ಐ, ಕೆಎಫ್​ಡಿ, ಎಸ್​ಡಿಪಿಐ ಹೀಗೆ ದಿನೇ ದಿನೆ ಹೊಸ ಹೊಸ ಹೆಸರುಗಳಲ್ಲಿ ಕಟ್ಟರ್ ಮತೀಯ ಸಂಘಟನೆಗಳು ಹುಟ್ಟಿಕೊಳ್ಳುತ್ತಲೇ ಇವೆ. ಕೇರಳದಿಂದ ಆಮದಾದ ಈ ಸಂಘಟನೆಗಳ ನೇರವಾದ ಕೈವಾಡ ಶಿವಮೊಗ್ಗದ ಗಣಪತಿ ಮೆರವಣಿಗೆ ಮೇಲಿನ ದಾಳಿ, ಮಡಿಕೇರಿಯ ಕುಟ್ಟಪ್ಪ, ಬೆಂಗಳೂರಿನ ಶಿವಾಜಿನಗರದ ರುದ್ರೇಶ್ ಹತ್ಯೆ ಹಾಗೂ ಇತ್ತೀಚೆಗೆ ನಡೆದ ಬಂಟ್ವಾಳದ ಶರತ್ ಹತ್ಯೆಯ ಹಿಂದೆ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕೇರಳದ ಈ ಮಾದರಿ ಕರ್ನಾಟಕದಲ್ಲಿ ಮತೀಯ ಸಾಮರಸ್ಯ ಕೆಡಿಸುತ್ತಿದೆ. ಶಾಂತಿಭಂಗಕ್ಕೆ ಕಾರಣವಾಗುತ್ತಿದೆ ಎಂಬುದು ಹಲವರ ಆತಂಕಕ್ಕೆ ಕಾರಣವಾಗಿದೆ.

ಮುಖ್ಯವಾಗಿ ಬೆಂಗಳೂರಿನ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಇಂಥ ಕೆಲ ಸಂಘಟನೆಗಳ ಕೈವಾಡ ಇರುವುದನ್ನು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಪತ್ತೆಹಚ್ಚಿದ್ದರು. ಸರ್ಕಾರಕ್ಕೆ ವರದಿಯನ್ನೂ ಕೊಟ್ಟಿದ್ದರು. ಶಿವಮೊಗ್ಗದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಕೋಮುಗಲಭೆಯಲ್ಲಿ, ಮಡಿಕೇರಿಯ ಕುಟ್ಟಪ್ಪ ಹತ್ಯೆಯ ಹಿಂದೆ ಕೂಡ ಕೇರಳ ಮೂಲದ ಜನರು ಮತ್ತು ಸಂಘಟನೆಗಳ ಪಾತ್ರ ಇರುವುದನ್ನು ಪೊಲೀಸರು ವರದಿಯಲ್ಲಿ ಹೇಳಿದ್ದರು. ಅದೇ ಪ್ರಕರಣವನ್ನು ಕ್ಯಾಬಿನೆಟ್​ಗೆ ತಂದು ಪ್ರಕರಣದ ವಿಚಾರಣೆ ಕೈಬಿಡಲಾಯಿತು. ಮೂಲಭೂತ ಸಂಘಟನೆಗಳ ವಿಷಯದಲ್ಲಿ ಈ ರೀತಿ ನಡೆದುಕೊಳ್ಳುವ ಸರ್ಕಾರ ಮಂಗಳೂರಿನಂತಹ ಸೂಕ್ಷ್ಮ ಪ್ರದೇಶದಲ್ಲಿ ಪರಿಸ್ಥಿತಿಯನ್ನು ನ್ಯಾಯಸಮ್ಮತವಾಗಿ ನಿಭಾಯಿಸಬಲ್ಲುದೇ ಎಂಬ ಅನುಮಾನ ಎಲ್ಲರನ್ನೂ ಕಾಡತೊಡಗಿದೆ.

ಕಾರಣ ಇಷ್ಟೆ, ಬಂಟ್ವಾಳದ ಘಟನೆಯ ವಿಚಾರದಲ್ಲಿ ರಾಜ್ಯಸರ್ಕಾರ ಸಾಕಷ್ಟು ತಡವಾಗಿ ಎಚ್ಚೆತ್ತುಕೊಂಡಿತು. ಅಷ್ಟು ಮಾತ್ರವಲ್ಲ, ಬಂಟ್ವಾಳದ ಶರತ್ ಹತ್ಯೆಯ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ದಾಳಿ ನಡೆಸಿದವರು ಹಿಂದುಗಳೇ ಇರಲಿ…‘ ಎಂದು ಹೇಳಿ ನಂತರ ‘ಮಂ…ಮಂ…ಮುಂ..ಮುಂ…‘ ಎಂದು ತಡವರಿಸಿ ಯಾವುದೇ ಸಂಘಟನೆ ಅಥವಾ ವ್ಯಕ್ತಿಗಳಿದ್ದರೂ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಸರ್ಕಾರ ಆ ಪರಿ ಅಸಹಾಯಕವಾಗಿದೆಯೇ ಎಂಬ ಅನುಮಾನಕ್ಕೂ ಎಡೆಮಾಡಿಕೊಟ್ಟಿತು.

ಭಾರತೀಯರಲ್ಲಿ ಅಲ್ಪಸಂಖ್ಯಾತರಾರು?: ಇದು ಕೇವಲ ಕರ್ನಾಟಕ ಸರ್ಕಾರ ಅಥವಾ ಸಿದ್ದರಾಮಯ್ಯನವರ ಸಮಸ್ಯೆಯಲ್ಲ. ಬಹುತೇಕ ಸೆಕ್ಯುಲರ್​ವಾದಿಗಳ ಸಮಸ್ಯೆ ಮತ್ತು ಗೊಂದಲ. ದೇಶ 1947ರಲ್ಲಿ ವಿಭಜನೆ ಆದದ್ದು ಧರ್ಮದ ಆಧಾರದಲ್ಲಿ. ಆ ನಂತರವೂ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎಂದು ಕರೆಯುವ, ಗುರುತಿಸುವ ಸಂಪ್ರದಾಯವನ್ನು ಸೆಕ್ಯುಲರ್ ಚಿಂತಕರು ಬಿಡಲಿಲ್ಲ. ಅಂದೇ ಏನಾದರೂ ಈ ವಿಭಜಕ ಪದಕ್ಕೆ ಇತಿಶ್ರೀ ಹೇಳಿ ‘ಎಲ್ಲರೂ ಭಾರತೀಯರು‘ ಎಂದು ಪರಿಗಣಿಸುವ ಖಡಕ್ ನಿರ್ಣಯವನ್ನು ಅಂದಿನ ಕಾಂಗ್ರೆಸ್ ನಾಯಕರು ತೆಗೆದುಕೊಂಡಿದ್ದರೆ ಮುಸ್ಲಿಂ ಎಂಬುದು ಭಾರತದಲ್ಲಿರುವ ಇತರ ಮತ ಧರ್ಮಗಳಂತೆಯೇ ಬೆರೆತು ಹೋಗುತ್ತಿತ್ತು. ಅಲ್ಪಸಂಖ್ಯಾತರೂ ಇತರ ಜಾತಿ, ಮತ. ಪಂಥಗಳಂತೆಯೇ ಹತ್ತರ ಜೊತೆ ಹನ್ನೊಂದು ಎಂಬ ಅರಿವು ಮೂಡಿದ್ದರೆ ಇಂದು ನಾವು ನೀವು ಎದುರಿಸುತ್ತಿರುವ ಸಮಸ್ಯೆ ಇರುತ್ತಲೇ ಇರಲಿಲ್ಲ. ಬೇಕಾದರೆ ಜನಸಂಖ್ಯಾ ಲೆಕ್ಕಾಚಾರವನ್ನೇ ನೋಡೋಣ. ಇತ್ತೀಚಿನ ಜನಗಣತಿ ಪ್ರಕಾರ ಹಿಂದುಗಳು ಶೇ.79.8ರಷ್ಟಿದ್ದಾರೆ. ತದನಂತರದ ಸ್ಥಾನ ಮುಸ್ಲಿಮರದ್ದು. ಮುಸ್ಲಿಮರು ಶೇ.14.2ರಷ್ಟಿದ್ದಾರೆ. ಸಿಖ್ಖರು ಶೇ.1.9, ಜೈನರು ಶೇ. 0.37, ಬೌದ್ಧರು ಶೇ.04ರಷ್ಟಿದ್ದಾರೆ. ಭಾರತದಲ್ಲಿರುವ ಇತರ ಸಾವಿರಾರು ಜನಜಾತಿಗಳ ಪ್ರಮಾಣ ಇದಕ್ಕಿಂತ ಕಡಿಮೆ. ಹಾಗಾದರೆ ನಿಜವಾದ ಅಲ್ಪಸಂಖ್ಯಾತರು ಯಾರು? ಅವರೆಲ್ಲ ಕ್ಯಾತೆ ತೆಗೆಯಹೊರಟರೆ ಏನಾದೀತು? ಮುಖ್ಯವಾಗಿ ಜಾತಿ ಇರುವುದು ಇಲ್ಲಿನ ವೈವಿಧ್ಯ ಸಂಸ್ಕೃತಿಗಳ ಪ್ರತೀಕವೇ ಹೊರತು ಪೈಪೋಟಿ ಅಥವಾ ಮತಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಲ. ಕಾಶ್ಮೀರದಲ್ಲಿರುವ ಅಲ್ಪಸಂಖ್ಯಾತರ ಗೋಳು ಗೋಳಲ್ಲವೇ? ಅವರಿಗೋಸ್ಕರ ಯಾರು ಕಣ್ಣೀರು ಸುರಿಸುತ್ತಾರೆ? ಕನಿಕರ ಪಡುತ್ತಾರೆ? ಯೋಚನೆ ಮಾಡಬೇಕಲ್ಲವೇ?

ಭಾಷಾ ಭೇದ ಯಾತಕ್ಕೆ?: ನಿಜವಾಗಿ ಸೆಕ್ಯುಲರಿಸಂ ಬಗ್ಗೆ ಯೋಚಿಸುವವರು ಜನಜಾತಿಗಳನ್ನು ಮತ/ಧರ್ಮದ ಆಧಾರದಲ್ಲಿ ವಿಂಗಡಿಸುವ ಬದಲು ಅವರನ್ನು ಬೆಸೆಯುವುದು ಹೇಗೆ, ಒಗ್ಗೂಡಿಸುವುದು ಹೇಗೆ ಎಂದು ಯೋಚಿಸಬೇಕು. ಆಗ ಪ್ರತ್ಯೇಕ ಅರೇಬಿಕ್ ಶಾಲೆಗಳನ್ನು ತೆರೆಯುವ ಬದಲು ಇರುವ ಎಲ್ಲ ಶಾಲೆಗಳಲ್ಲಿ ಅರೇಬಿಕ್ ಕಲಿಕೆಗೆ ಅವಕಾಶ ಕಲ್ಪಿಸುವ ಅಥವಾ ಯಾವ ಪ್ರದೇಶದಲ್ಲಿ ಅಗತ್ಯವಿದೆಯೋ ಅಲ್ಲಿಯೇ ಇರುವ ಸಾರ್ವತ್ರಿಕ ಶಾಲೆಗಳಲ್ಲಿ ಅರೇಬಿಕ್ ಅನ್ನೂ ಒಂದು ಭಾಷೆಯಾಗಿ ಕಲಿಸುವ ಆಲೋಚನೆ ಹೊಳೆಯಬಹುದು.

ಅಧಿಕಾರಿಗಳ ನೇಮಕ ಹೀಗೇಕೆ?: ನಮ್ಮ ಸರ್ಕಾರಗಳು ಅನುಸರಿಸುತ್ತಿರುವ ಅನೇಕ ಅನಿಷ್ಟ ಪದ್ಧತಿಗಳಲ್ಲಿ ಎಲ್ಲಿ ಯಾವ ಮತ-ಧರ್ಮದವರು ಹೆಚ್ಚಿದ್ದಾರೆ ಎಂಬುದನ್ನು ನೋಡಿಕೊಂಡು ಅಧಿಕಾರಿಗಳನ್ನು ನಿಯೋಜನೆ ಮಾಡುವುದು ಮತ್ತು ವರ್ಗಾವಣೆ ಮಾಡುವುದು ಕೂಡ ಒಂದು. ಉದಾಹರಣೆಗೆ ಭಟ್ಕಳ, ಕಲಬುರ್ಗಿ, ಉಳ್ಳಾಲ, ಬಿಸಿ ರೋಡ್​ಗಳಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಅಧಿಕಾರಿಗಳನ್ನೇ ನೋಡಿ ನೋಡಿ ನೇಮಕ ಮಾಡುವುದು. ಹಾಗೆ ಮಾಡುವುದರಿಂದ ಜನರಿಗೆ ಯಾವ ಸಂದೇಶ ರವಾನೆಯಾಗುತ್ತದೆ ಎಂದು ಯೋಚಿಸಬೇಡವೆ? ಆಯಾ ಜಾತಿಯ ಅಧಿಕಾರಿಗಳು ಆಯಾ ಜಾತಿಯ ಜನರ ಹಿತವನ್ನು ಮಾತ್ರ ಕಾಪಾಡುತ್ತಾರೆಂಬ ತಪ್ಪುಸಂದೇಶ ಇದರಿಂದ ರವಾನೆ ಆಗುವುದಿಲ್ಲವೇ? ಇದರಿಂದ ಯಾವ ಸೆಕ್ಯುಲರ್ ಪುರುಷಾರ್ಥ ಸಾಧನೆಯಾಗುತ್ತದೆ?

ಟಿಕೆಟ್ ಹಂಚಿಕೆ ಅನಿಷ್ಟ: ಇದಕ್ಕಿಂತಲೂ ವೈರುಧ್ಯದ ವಿಚಾರ ಅಂದರೆ, ರಾಜಕೀಯ ಪಕ್ಷಗಳು ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ರೀತಿ. ಯಾವ ಪ್ರದೇಶದಲ್ಲಿ ಯಾವ ಜಾತಿ, ಧರ್ಮಕ್ಕೆ ಸೇರಿದ ಮತದಾರರು ಎಷ್ಟಿದ್ದಾರೆ? ಎಲ್ಲಿ ಯಾವ ಜನಜಾತಿಯವರು ಹೆಚ್ಚಿದ್ದಾರೆಂಬುದನ್ನು ಅಳೆದು ಸುರಿದು ನೋಡಿ ಟಿಕೆಟ್ ಹಂಚಿಕೆ ಮಾಡುವ ಪ್ರವೃತ್ತಿಯನ್ನು ಬಹುತೇಕ ರಾಜಕೀಯ ಪಕ್ಷಗಳು ರೂಢಿಸಿಕೊಂಡಿವೆ. ಮುಸ್ಲಿಮರು ಹೆಚ್ಚಿರುವ ಕಡೆ ಮುಸ್ಲಿಂ ಅಭ್ಯರ್ಥಿಗಳು, ಇತರ ಜಾತಿ ಧರ್ಮದವರು ಹೆಚ್ಚಿರುವ ಕಡೆ ಅಂಥವರು. ನಿಜವಾದ ಸೆಕ್ಯುಲರಿಸಂ ಜಾರಿಗೆ ಬರಬೇಕೆಂದರೆ ಈ ಲೆಕ್ಕಾಚಾರ, ಪರಿಪಾಠಕ್ಕೆ ತಿಲಾಂಜಲಿ ಬಿಡಬೇಕು ತಾನೆ. ಇದನ್ನೆಲ್ಲ ಸಂಬಂಧಪಟ್ಟವರು ಕೇಳಿಕೊಳ್ಳುತ್ತಾರೆಯೇ? ಆಚರಣೆಗೆ ತರುತ್ತಾರೆಯೇ ಎಂಬುದೇ ಮೂಲಭೂತವಾದ ಪ್ರಶ್ನೆ…

ಜಾತೀಯತೆಯನ್ನೇ ಹಾಸಿ ಹೊದ್ದುಕೊಂಡವರಿಂದ ಜಾತ್ಯತೀತತೆಯ ಗಿಳಿಪಾಠವನ್ನು ಕೇಳಿಸಿಕೊಳ್ಳಬೇಕಾಗಿ ಬಂದಿರುವುದು ಈ ದೇಶದ ದುರದೃಷ್ಟವಲ್ಲದೆ ಇನೇನು? ಹೇಳಬೇಕಾದ್ದನ್ನು ಹೇಳುವುದು ಧರ್ಮ ಮತ್ತು ನ್ಯಾಯ… ಅಷ್ಟೆ…

(ಲೇಖಕರು ‘ವಿಜಯವಾಣಿ’ ಸಂಪಾದಕರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top