ಆಲೋಚನೆ, ಆಚರಣೆಯಲ್ಲಿ ಭ್ರಷ್ಟತೆಯೇ ತುಂಬಿರುವಾಗ…

ಪಿಒಕೆ ಗಡಿದಾಟಿ ಹೋಗಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ದಿಟ್ಟಕ್ರಮದಿಂದಾಗಿ ಕೇಂದ್ರ ಸರ್ಕಾರದ ಮೇಲೆ ಜನರಲ್ಲಿ ಮೆಚ್ಚುಗೆ ಮೂಡಿತ್ತು. ಇದೀಗ ಕಪ್ಪುಹಣದ ಮೇಲೆ ನಡೆದ ಸರ್ಜಿಕಲ್ ದಾಳಿ ಸರ್ಕಾರದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಇದು ವಿಪಕ್ಷಗಳವರ ನಿದ್ದೆಗಡಿಸಿದೆ ಎಂಬುದು ಸ್ಪಷ್ಟ.

commentary-column-new-imageಭ್ರಷ್ಟಾಚಾರ ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ಅದಕ್ಕೊಂದು ಸುದೀರ್ಘ ಇತಿಹಾಸವೇ ಇದೆ. ಅದರ ಸ್ವರೂಪಗಳೂ ಹಲವು. ಆದರೆ ಕಾಲಾಂತರದಲ್ಲಿ ಅದು ಲಂಚಸ್ವೀಕಾರಕ್ಕೆ ಸೀಮಿತವಾಗಿಬಿಟ್ಟಿದೆ ಅಷ್ಟೆ. ವಾಸ್ತವದಲ್ಲಿ ಭ್ರಷ್ಟಾಚಾರ ಎನ್ನುವುದು ಮನುಷ್ಯನ ಮಾನಸಿಕತೆಗೆ ಸಂಬಂಧಿಸಿದ್ದು ಎಂದು ತಿಳಿದವರು ಹೇಳುತ್ತಾರೆ. ಭ್ರಷ್ಟ ಎಂದರೆ ಬಿದ್ದಿರುವುದು ಎಂಬ ಅರ್ಥವಿದೆ. ಎಲ್ಲಿ ಬಿದ್ದಿರುವುದು? ನೈತಿಕತೆಯ ಗೆರೆಯಿಂದ ಕೆಳಕ್ಕೆ ಬಿದ್ದಿರುವುದು, ಆತ್ಮಸಾಕ್ಷಿಗೆ ವಿರುದ್ಧವಾಗಿರುವುದು ಎಂಬೆಲ್ಲ ಅರ್ಥಗಳಿವೆ. ಅದನ್ನೇ ಚಾಣಕ್ಯ ಹೀಗೆ ಹೇಳಿದ್ದಾನೆ-`ಅಜ್ಞಾನ, ಕೌಶಲ್ಯ ವಿಹಿತನಾಗಿರುವುದು, ಆಲಸ್ಯದಿಂದ ಕೂಡಿರುವುದು, ಕಾಮಾಂಧನಾಗಿರುವುದು, ಕ್ರೋಧ, ಮೋಹ ತುಂಬಿಕೊಂಡಿರುವುದು, ಭಯಭೀತನಾಗುವುದು, ಜ್ಞಾನದ ದುರ್ಬಳಕೆ ಮಾಡಿಕೊಳ್ಳುವುದು, ಅಧಿಕಾರ ಮತ್ತು ಪದವಿಯ ದುರುಪಯೋಗ ಪಡಿಸಿಕೊಂಡಿರುವುದು, ಲಂಚಬಾಕನಾಗುವುದು’ ಇವೆಲ್ಲವೂ ಭ್ರಷ್ಟಾಚಾರದ ವಿವಿಧ ಮುಖಗಳು ಎಂಬುದು ಚಾಣಕ್ಯ ನೀತಿಯ ಸಾರ. ಹಣದ ರೂಪದ ಭ್ರಷ್ಟಾಚಾರವನ್ನು ನೋಟು ರದ್ದತಿ ಮೊದಲಾದ ಕ್ರಮಗಳಿಂದ ನಿಯಂತ್ರಿಸಬಹುದು. ಆದರೆ ಮಾನಸಿಕ ಭ್ರಷ್ಟತೆ ನಿಯಂತ್ರಣವೇ ದೊಡ್ಡ ಸವಾಲು. ಮಾಜಿ ಮಂತ್ರಿ ಹುಲ್ಲಪ್ಪ ಮೇಟಿ ಅವರ ಲೈಂಗಿಕ ಹಗರಣದಿಂದ ಹಿಡಿದು ರಾಹುಲ್ ಗಾಂಧಿ ಮತ್ತು ಅವರ ಮಿತ್ರಪಕ್ಷಗಳು ಸಂಸತ್ತಿನ ಅಮೂಲ್ಯ ಕಲಾಪದ ವೇಳೆಯನ್ನು ವ್ಯರ್ಥ ಮಾಡಿರುವುದರವರೆಗಿನ ನಡವಳಿಕೆಗಳು ಈ ಲೆಕ್ಕದಲ್ಲಿ ಬರುವಂಥವು.
ಹಾಗಾದರೆ ಭ್ರಷ್ಟಾಚಾರ, ಅನೈತಿಕತೆ ರಾಜಕೀಯಕ್ಕೆ ಮಾತ್ರ ಸೀಮಿತವಾಗಿದ್ದೇ ಎಂಬುದು ನಂತರ ಪ್ರಶ್ನೆ. ಹಾಗೆ ಹೇಳಲು ಸಾಧ್ಯವಿಲ್ಲ. ರಾಜಕೀಯ ಭ್ರಷ್ಟಾಚಾರ ಆರಂಭವಾಗುವುದು ಬೃಹತ್ ಖಾಸಗಿ ಕಂಪನಿಗಳಿಂದ ಎಂಬ ಬಲು ಪ್ರಸಿದ್ಧ ಮಾತಿದೆ. ಖಾಸಗಿ ಕಂಪನಿಗಳು ಮತ್ತು ರಾಜಕೀಯ ಅಧಿಕಾರ ಕೇಂದ್ರದಲ್ಲಿರುವವರ ಮಿಲಾಪಿಯಿಂದ ಭ್ರಷ್ಟಾಚಾರ ಅನ್ನುವುದು ವ್ಯಾಪಕ ಸ್ವರೂಪವನ್ನು ಪಡೆದುಕೊಂಡಿದೆ ಅಷ್ಟೆ. ಅನೈತಿಕ ವ್ಯವಹಾರದ ಇತಿಹಾಸವೂ ಅಂಥದ್ದೇ. ನಾವು ರಾಜಕಾರಣಿಗಳು ಮಾತ್ರ ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಕಳೆದುಕೊಂಡವರು ಎಂದು ಸುಲಭವಾಗಿ ಹೇಳಿಬಿಡುತ್ತೇವೆ. ಅಂಥವರು ಬೇರೆ ಕ್ಷೇತ್ರಗಳಲ್ಲೂ ಸಿಗುತ್ತಾರೆ. ಉದಾಹರಣೆಗೆ ಇನ್ಫೋಸಿಸ್‍ನ ಮಾಜಿ ಅಧಿಕಾರಿ ಫಣೀಶ್‍ಮೂರ್ತಿ ಪ್ರಕರಣವನ್ನೇ ನೋಡಿ. ಅವರಿಗೆ ಒಳ್ಳೆ ಸಂಬಳವಿತ್ತು. ಉನ್ನತ ವ್ಯಾಸಂಗ ಮಾಡಿದ್ದರು. ಕಾರ್ಪೊರೇಟ್ ಜಗತ್ತಿನ ಶಿಸ್ತು ಮತ್ತು ಸ್ಮಾರ್ಟ್‍ನೆಸ್ ಅನ್ನು ಅವರಿಗೆ ಕಲಿಸಿಕೊಡಬೇಕಿರಲಿಲ್ಲ. ಆದರೂ ಆಗಬಾರದ್ದು ಆಯಿತು. ಫಣೀಶ್‍ಮೂರ್ತಿ ತೀರಾ ಅವಮಾನಕರ ರೀತಿಯಲ್ಲಿ ಇನ್ಫೋಸಿಸ್ ಕಂಪನಿಯಿಂದ ಹೊರನೂಕಿಸಿಕೊಳ್ಳಬೇಕಾಗಿ ಬಂತು. ಅಂದರೆ ಈ ಪ್ರವೃತ್ತಿ ಓದು, ಉದ್ಯೋಗ, ಜವಾಬ್ದಾರಿ ಎಲ್ಲದನ್ನು ಮೀರಿದ್ದು ಮತ್ತು ಮನುಷ್ಯನ ಮಾನಸಿಕ ಸ್ಥಿತಿಗತಿಗೆ ಸಂಬಂಧಿಸಿದ್ದು ಎಂಬುದು ಸ್ಪಷ್ಟ.
ಈ ಸಂದರ್ಭದಲ್ಲಿ ಮಹರ್ಷಿ ಅರವಿಂದರ ಮಾತನ್ನು ನೆನಪಿಸಿಕೊಳ್ಳುವುದು ಉತ್ತಮ. ಅವರು ಒಂದು ಕಡೆ ಹೇಳುತ್ತಾರೆ- ಭಾರತದ ವ್ಯವಸ್ಥೆಯ ಪ್ರತಿಯೊಂದು ಹಂತದಲ್ಲಿ ಮತ್ತು ಪ್ರತಿಯೊಬ್ಬ ವ್ಯಕ್ತಿಗೆ ಅಧ್ಯಾತ್ಮದ ಲೇಪ ಬೇಕು’ ಎಂದು. `ಅಧ್ಯಾತ್ಮದ ಆಸ್ವಾದವೇ ಭಾರತದ ವರ್ತಮಾನ ಮತ್ತು ಭವಿಷ್ಯತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ’ ಎಂಬುದು ಅರವಿಂದರ ಖಚಿತ ಅಭಿಪ್ರಾಯವಾಗಿತ್ತು. ಅಧ್ಯಾತ್ಮ ಅಂದರೆ ಸನ್ಯಾಸಕ್ಕೆ ಸಂಬಂಧಿಸಿದ್ದು ಅಂತ ಸಾಮಾನ್ಯವಾಗಿ ನಾವು ಭಾವಿಸುತ್ತೇವೆ. ಅಥವಾ ಧರ್ಮ, ಜಾತಿ ಸಂಬಂಧಿಸಿದ್ದು ಎಂಬ ತೀರ್ಮಾನಕ್ಕೆ ಬಂದು ಬಿಡುತ್ತವೆ. ಆದರೆ ಅರವಿಂದರ ಅಭಿಪ್ರಾಯದಲ್ಲಿ ಅಧ್ಯಾತ್ಮವೆಂದರೆ ಮನಸ್ಸಿನ ಸಂಯಮಕ್ಕೆ, ನಿಯಂತ್ರಣಕ್ಕೆ, ವ್ಯಕ್ತಿತ್ವವನ್ನು ಹದಗೊಳಿಸುವುದಕ್ಕೆ ಸಂಬಂಧಿಸಿದ್ದು. ಅಂತಿಮವಾಗಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳುವ ವ್ರತಕ್ಕೆ ಅಣಿಗೊಳಿಸುವುದಕ್ಕೆ ಸಂಬಂಧಿಸಿದ್ದು ಎಂದು ಹೇಳುತ್ತಾರೆ ಅರವಿಂದರು. ಅದರ ವಿಧಾನಗಳನ್ನು ಅವರು ವಿವರಿಸುತ್ತಾರೆ. ಆ ವಿಧಾನಗಳಲ್ಲಿ ಅರ್ಥಭ್ರಷ್ಟರಿಗೆ (ಲಂಚಕೋರರಿಗೆ), ಮತಿಭ್ರಷ್ಟರಿಗೆ, ವಚನಭ್ರಷ್ಟರಿಗೆ, ಪದಭ್ರಷ್ಟರಿಗೆ, ಧರ್ಮಭ್ರಷ್ಟರಿಗೆ, ಆಚಾರ-ವಿಚಾರಭ್ರಷ್ಟರಿಗೆ, ಪಕ್ಷಭ್ರಷ್ಟರಿಗೆಲ್ಲ ಪರಿಹಾರ ಹೇಳಲಾಗಿದೆ. ಯಾರ್ಯಾರಿಗೆ ಏನು ಬೇಕೋ ಅವರು ಅದನ್ನು ತೆಗೆದುಕೊಳ್ಳಬಹುದು. ಅಂದ ಮೇಲೆ ಮೇಟಿ ಬಗ್ಗೆ, ನೋಟು ರದ್ದತಿ ವಿರೋಧಿಸುವವರ ಬಗ್ಗೆ ಹೆಚ್ಚಿಗೆ ಏನು ಹೇಳುವುದು…
ದೇಶದ ಎಲ್ಲ ಸಮಸ್ಯೆಗಳಿಗೆ ಮೂಲ ಅಧಿಕಾರ ದುರುಪಯೋಗ ಮತ್ತು ರಾಜಕೀಯ ಭ್ರಷ್ಟಾಚಾರ ಎಂಬುದರ ಕುರಿತು ಕಳೆದ ಹತ್ತು ಇಪ್ಪತ್ತು ವರ್ಷಗಳಿಂದ ನಿರಂತರ ಚರ್ಚೆ ಆಗುತ್ತಿರುವುದನ್ನು ನಾವೆಲ್ಲ ನೋಡಿದ್ದೇವೆ ಮತ್ತು ಕೇಳಿದ್ದೇವೆ. ದೇಶದ ಒಳಗೆ ಮತ್ತು ಹೊರಗೆ ಇರುವ ಕಾಳಧನವನ್ನು ಲೆಕ್ಕದ ವ್ಯಾಪ್ತಿಗೆ ತರುವುದು ಹೇಗೆ ಎಂಬುದರ ಕುರಿತು ಲೆಕ್ಕವಿಲ್ಲದಷ್ಟು ಚರ್ಚೆಗಳು ನಡೆದಿದೆ. ಶಾಸನಸಭೆಗಳ ನೂರಾರು ಗಂಟೆಗಳ ಅಮೂಲ್ಯ ಸಮಯ, ಹಣ ವ್ಯಯವಾಗಿದೆ. ಆದರೆ ಪರಿಣಾಮಕಾರಿ ಕ್ರಮ ಜಾರಿಗೊಳಿಸುವುದು ಮಾತ್ರ ಇದುವರೆಗೂ ಆಗಿರಲಿಲ್ಲ. ಅದು ಆಲೋಚನೆಯ ಅಭಾವವೋ, ಇಚ್ಛಾಶಕ್ತಿಯ ಅಭಾವವೋ ಎಂಬುದು ವಿಮರ್ಶೆಗೆ ಒಳಪಡಿಸಬೇಕಾದ ವಿಚಾರ. ಆದರೆ ಅದೆಲ್ಲವನ್ನೂ ಮೀರಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಒಂದು ಕಠಿಣಾತಿ ಕಠಿಣ ನಿರ್ಣಯಕ್ಕೆ ಬಂತು. ಅದು ನೋಟು ರದ್ದತಿ ತೀರ್ಮಾನ. ದೇಶದ ಒಳಗೆ ಮತ್ತು ಹೊರಗೆ ಇರುವ ಕಾಳಧನವನ್ನು ನಿಷ್ಕ್ರಿಯಗೊಳಿಸಲು ಇರುವ ಅತ್ಯುತ್ತಮ ಉಪಾಯ ನೋಟು ರದ್ದತಿ ಎಂಬುದು ಆರ್ಥಿಕ ತಜ್ಞರು, ಆಡಳಿತ ಪರಿಣತರು ಪಕ್ಷಾತೀತವಾಗಿ ವ್ಯಕ್ತಪಡಿಸಿರುವ ಅಭಿಪ್ರಾಯ. ಆದರೆ ರಾಹುಲ್ ನೇತೃತ್ವದ ಕಾಂಗ್ರೆಸ್ ಮತ್ತು ಅದರ ಕೆಲ ಸಹವರ್ತಿ ಪಕ್ಷಗಳಿಗೆ ಸರ್ಕಾರದ ನಿರ್ಧಾರ ಅಪಥ್ಯವಾಯಿತು. ಪ್ರಜಾತಂತ್ರ ವ್ಯವಸ್ಥೆಯೊಳಗೆ ಅಭಿಪ್ರಾಯಭೇದ ಸ್ವಾಗತಾರ್ಹ ನಿಜ. ಆದರೆ ಅದನ್ನು ಮಂಡಿಸುವುದಕ್ಕೆ ಒಂದು ವಿಧಾನವಿದೆಯಲ್ಲ. ಇಂಥ ಮಹತ್ವದ ವಿಷಯಗಳು ಸಂಸತ್ತಿನಲ್ಲಿ ಚರ್ಚೆಯಾಗಬೇಕೇ ಹೊರತು ಹಾದಿಬೀದಿಯಲ್ಲಲ್ಲ. ಆದರೆ ನೋಟ್ ಬ್ಯಾನ್ ವಿಷಯದಲ್ಲಿ ವಿಪಕ್ಷಗಳು ಸಂಸತ್ತಿನಲ್ಲಿ ನಡೆದುಕೊಳ್ಳುತ್ತಿರುವ ರೀತಿ ರಿವಾಜು ನೋಡಿದರೆ ಇವರ ಆಂತರ್ಯದ ಬೇಗುದಿ ಎಂಥವನಿಗೂ ಅರ್ಥವಾಗುತ್ತದೆ.
ವಿರೋಧದ ಕಾರಣ ಏನು?: ನೋಟು ರದ್ದತಿಯಿಂದ ಕಾಳಧನ ನಿಗ್ರಹ ಎಷ್ಟರಮಟ್ಟಿಗೆ ಆಗುತ್ತದೆ ಎಂಬುದು ನಂತರದ ವಿಚಾರ. ಆದರೆ ಈ ನಿರ್ಧಾರದಿಂದ ಆಗುವ ರಾಜಕೀಯ ಮತ್ತು ಆರ್ಥಿಕ ಪರಿಣಾಮಗಳು ಅಗಾಧ. ಒಂದು ದುಡ್ಡು, ನೋಟು ಅಂತ ಯಾರಿಗೆಲ್ಲ ಗೊತ್ತಿದೆಯೋ ಅವರೆಲ್ಲರಿಗೂ ಮೋದಿ ಎಂದರೆ ಯಾರು ಎನ್ನುವುದು ಗೊತ್ತಾಗಿದೆ. ರಾಜಕೀಯ ಲಾಭದ ದೃಷ್ಟಿಯಿಂದ ನೋಡುವುದಾದರೆ ಇದೊಂದು ಮಧ್ಯರಾತ್ರಿಯ ಕ್ರಾಂತಿ ಎನ್ನಲು ಅಡ್ಡಿಯಿಲ್ಲ. ಬಿಜೆಪಿ ಮುಂದೆ ಇಪ್ಪತ್ತು ವರ್ಷ ಕಾಲ ಬೆವರು ಹರಿಸಿದರೂ ತಲುಪಲಾಗದಷ್ಟು ವಿಸ್ತಾರಕ್ಕೆ ರಾತ್ರಿ ಕಳೆದು ಬೆಳಕು ಹರಿಯುವುದರೊಳಗೆ ಮೋದಿ ತಲುಪಿದ್ದಾರೆ. ಎರಡನೆಯದ್ದು ಅರ್ಥ ಕ್ರಾಂತಿಗೆ ಸಂಬಂಧಿಸಿದ್ದು. ಯಾರಿಗೆಲ್ಲ ದುಡ್ಡು, ನೋಟು ಅನ್ನುವುದು ತಿಳಿದಿದೆಯೋ ಅವರೆಲ್ಲರಿಗೂ ಏಕೆ ಬ್ಯಾಂಕ್ ಖಾತೆ ಹೊಂದಬೇಕು ಮತ್ತು ಬ್ಯಾಂಕ್ ಮೂಲಕವೇ ಏಕೆ ಹೆಚ್ಚಿನ ವಹಿವಾಟನ್ನು ನಡೆಸಬೇಕು ಎಂಬುದರ ಮಹತ್ವ ಗೊತ್ತಾಗಿದೆ. ಒಂದು ವೇಳೆ ಸರ್ಕಾರ ಇಂತಹ ಜಾಗೃತಿಗೆ ಒಂದು ವಿಶೇಷ ಯೋಜನೆ ರೂಪಿಸಿ ನೂರಾರು ಕೋಟಿ ರೂಪಾಯಿ ವ್ಯಯಿಸಿದ್ದರೂ ಈ ಮಟ್ಟಿನ ಜಾಗೃತಿ ಸಾಧ್ಯವಾಗುತ್ತಿರಲಿಲ್ಲವೇನೋ? ಎರಡನೆಯ ಸಂಗತಿ ವಿಪಕ್ಷಗಳ ತಲೆಬಿಸಿಗೆ ಕಾರಣವಲ್ಲ. ಆತಂಕ ಸೃಷ್ಟಿಸಿರುವುದು ಮೊದಲನೆಯ ಅಂಶ. ಜಾತಿ, ಪಕ್ಷ, ಪಂಗಡ, ಪಂಥಗಳನ್ನೆಲ್ಲ ಮೀರಿ ಸರ್ಕಾರದ ಕ್ರಮ ಜನರ ಮನಸ್ಸನ್ನು ತಟ್ಟಿದೆ. ನೋಟು ನಿಷೇಧದಂತಹ ಕಠಿಣಾತಿ ಕಠಿಣ ಕ್ರಮವನ್ನು ಒಂದಿಷ್ಟೂ ಅಳುಕಿಲ್ಲದೆ, ಮಾಹಿತಿ ಸೋರಲು ಬಿಡದೆ ತೆಗೆದುಕೊಂಡಿದ್ದಕ್ಕೆ ಅನಕ್ಷರಸ್ಥರಲ್ಲೂ ಖುಷಿ ಮೂಡಿಸಿದೆ. ಆದರೆ ಕೆಲ ಪಕ್ಷಗಳ ಪಾಲಿಗೆ ಈ ನಿರ್ಧಾರ ನಿದ್ದೆಗೆಡಿಸಿದೆ. ಅದಕ್ಕೆ ರಾಜಕೀಯ ಪಂಡಿತರು ಮಾಡುತ್ತಿರುವ ವಿಶ್ಲೇಷಣೆ ಏನು ಗೊತ್ತೇ?
ಮುಖ್ಯವಾಗಿ ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆಗೆ ಮುಂದಿನ ಫೆಬ್ರವರಿ-ಮಾರ್ಚ್‍ನಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನೋಟ್ ಬ್ಯಾನ್ ಕಾರಣಕ್ಕೆ ರಾಜಕೀಯ ಪಕ್ಷಗಳು ತಕ್ಷಣಕ್ಕೆ ಎರಡು ರೀತಿಯ ಸವಾಲನ್ನು ಎದುರಿಸಬೇಕಾಗಿದೆ ಬಂದಿದೆ. ಉದಾಹರಣೆಗೆ ಉತ್ತರಪ್ರದೇಶವೊಂದರಲ್ಲೇ ಎಲ್ಲ ರಾಜಕೀಯ ಪಕ್ಷಗಳು ಸೇರಿ ಅಂದಾಜು ಮೂವತ್ತೈದರಿಂದ ನಲವತ್ತು ಸಾವಿರ ಕೋಟಿ ರೂಪಾಯಿಯನ್ನು ಮುಂದಿನ ಚುನಾವಣೆಗೆ ವ್ಯಯ ಮಾಡುವುದಕ್ಕೆ ತಯಾರಿ ಮಾಡಿಕೊಂಡಿದ್ದವು. ಆ ಹಣವೀಗ ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಲಿದೆ. ಅದೇ ಪರಿಸ್ಥಿತಿ ಚುನಾವಣೆ ನಡೆಯಲಿರುವ ಎಲ್ಲ ರಾಜ್ಯಗಳಲ್ಲೂ ಎದುರಾಗಿದೆ. ನೋಟ್ ಬ್ಯಾನ್ ಪೂರ್ವದಲ್ಲಿ, ಬಿಜೆಪಿ-ಅಕಾಲಿದಳದ ಮೈತ್ರಿಕೂಟದಿಂದ ಪಂಜಾಬ್ ಕೈಜಾರಲಿದೆ ಎಂದು ಬಹುತೇಕ ರಾಜಕೀಯ ವಿಶ್ಲೇಷಣೆಗಳು ಹೇಳಿದ್ದವು. ಆದರೆ ಅದೇ ಪಂಜಾಬ್‍ನ ಮತದಾರರ ಮನಸ್ಥಿತಿಯಲ್ಲಿ ಅಗಾಧ ಬದಲಾವಣೆ ಕಂಡುಬರುತ್ತಿದೆ ಎಂದು ಮತ್ತದೇ ರಾಜಕೀಯ ವಿಶ್ಲೇಷಕರು ಹೇಳತೊಡಗಿದ್ದಾರೆ. ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲೂ ಬಿಜೆಪಿ ವಲಯದಲ್ಲಿ ಹೊಸ ಹುಮ್ಮಸ್ಸು ಕಂಡುಬರುತ್ತಿದೆ ಎನ್ನಲಾಗುತ್ತಿದೆ. ಉತ್ತರಾಖಂಡದಲ್ಲಿ ಈಗಾಗಲೇ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿಯೇ ಇತ್ತು. ಗೋವಾದಲ್ಲೂ ಆ ಪಕ್ಷಕ್ಕೆ ಪೂರಕ ವಾತಾವರಣ ಮತ್ತೆ ನಿರ್ಮಾಣವಾಗುತ್ತಿದೆ ಎನ್ನಲಾಗುತ್ತಿದೆ. ಇದು ನೋಟ್ ಬ್ಯಾನ್ ವಿಷಯದಲ್ಲಿ ರಾಹುಲ್ ಗಾಂಧಿ ಆದಿಯಾಗಿ ಕೆಲ ವಿಪಕ್ಷ ಮುಖಂಡರ ಆರ್ಭಟ ಆಕ್ರೋಶಕ್ಕೆ ಮುಖ್ಯ ಕಾರಣ ಎಂಬುದು ಒಂದು ಅಭಿಪ್ರಾಯ.
ನೋಟ್ ರದ್ದತಿಯನ್ನು ಶರಂಪರ ವಿರೋಧಿಸುತ್ತಿರುವವರಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಹುಲ್ ಗಾಂಧಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಅಷ್ಟೆ. ಕಳೆದ ಲೋಕಸಭಾ ಚುನಾವಣೆಯಿಂದ ಹಿಡಿದು ಬಿಜೆಪಿ ತನ್ನ ಮತಗಳಿಕೆ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದೆ. ಅದಕ್ಕೆ ಪೂರಕವಾಗಿ ನೋಟ್ ಬ್ಯಾನ್ ಘೋಷಣೆಯ ನಂತರದಲ್ಲಿ ಇತ್ತೀಚೆಗೆ ಅಲ್ಲಿನ ಕೆಲ ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗರಿಷ್ಠ ಪ್ರಮಾಣದ ಮತಗಳಿಸಿರುವುದು ಮಮತಾ ಆತಂಕ ಹೆಚ್ಚಿಸಿದ್ದರೆ, ಶಾರದಾ ಚಿಟ್‍ಫಂಡ್ ಹಗರಣವೂ ಸೇರಿ ವಿವಿಧ ಬಾಬತ್ತಿನಲ್ಲಿ ಕೂಡಿಟ್ಟಿದ್ದ ಪಕ್ಷದ ನಿಧಿಗೆ ಸಂಚಕಾರ ಬಂದಿರುವುದು ಮಮತಾ ಅಕ್ರೋಶಕ್ಕೆ ಕಾರಣ ಎನ್ನಲಾಗುತ್ತಿದೆ.
ಕಾಶ್ಮೀರದಲ್ಲಿ ಪಾಕ್ ಗಡಿ ದಾಟಿ ಹೋಗಿ ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿ ಭಾರತೀಯ ಯೋಧರ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಂಡಿದ್ದು, ಅದರ ಬೆನ್ನಲ್ಲೇ ನಡೆದ ಆರ್ಥಿಕ ಸರ್ಜಿಕಲ್ ದಾಳಿ ಇವೆರಡೂ ಸಹಜವಾಗಿ ಕೇಂದ್ರ ಸರ್ಕಾರದ ವರ್ಚಸ್ಸನ್ನು ಹೆಚ್ಚಿಸಿವೆ. ಇದರಿಂದ ವಿಚಲಿತವಾಗಿರುವ ವಿಪಕ್ಷಗಳು ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂಬ ನೆಪವೊಡ್ಡಿ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ. ದೇಶದಲ್ಲಿ ನಡೆಯಬಾರದ ಅನಾಹುತ ನಡೆದುಹೋಗಿದೆ ಎಂದು ಬಿಂಬಿಸಲು ಪ್ರಯಾಸಪಡುತ್ತಿವೆ.
ಇದರ ಜೊತೆಗೆ ಮುಂದಿನ ಕೇಂದ್ರ ಬಜೆಟ್ ಮಂಡನೆ ದಿನಾಂಕ ಪ್ರಕಟ ಆಗಿರುವುದು ಪ್ರತಿಪಕ್ಷಗಳಲ್ಲಿ ಮತ್ತಷ್ಟು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ನೋಟ್ ರದ್ದತಿ ನಂತರ ಕೆಲ ಆರ್ಥಿಕ ಕ್ರಮಗಳನ್ನು ಮುಂದಿನ ಬಜೆಟ್ಟಿನಲ್ಲಿ ಮಂಡಿಸಬಹುದು ಎಂಬುದರ ಮುನ್ಸೂಚನೆ ಸಿಕ್ಕಿರುವುದರಿಂದ ಫೆಬ್ರವರಿ ಮೊದಲ ವಾರದಲ್ಲಿ ಬಜೆಟ್ ಮಂಡನೆಗೆ ಅವಕಾಶ ಕೊಡಬಾರದು ಎಂಬ ಪ್ರಸ್ತಾಪವನ್ನು ಮುಂದಿಡುವ ಮೂಲಕ ಬಜೆಟ್‍ಅಧಿವೇಶನವೂ ಸರಿಯಾಗಿ ನಡೆಯುವುದು ಅನುಮಾನ ಎಂಬಂತಾಗಿದೆ.
ವಿರೋಧಿಗಳ ವಿರೋಧ ಹೀಗೇ ಮುಂದುವರಿಯುತ್ತದೆ. ಕಾರಣ ಇಷ್ಟೇ. ಆಲೋಚನೆಯಲ್ಲಿ, ಆಚರಣೆಯಲ್ಲಿ ಎಲ್ಲದರಲ್ಲೂ ಭ್ರಷ್ಟತೆಯೇ ಮನೆಮಾಡಿದೆ. ಇಂತಹವರಿಗೆ ಚಾಣಕ್ಯ, ಅರವಿಂದರ ಭಾವನೆಗಳೆಲ್ಲ ಅರ್ಥ ಆಗುವುದೆಲ್ಲಿಂದ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top