ದೇವರ ನಾಡ ಜನರನ್ನು ದೇವರೂ ಕಾಪಾಡಲಾರನೇ?!

ರಕ್ತಸಿಕ್ತ ಕಮ್ಯುನಿಸ್ಟ್ ಇತಿಹಾಸದ ಪುಟ ತಿರುವಿದರೆ ರೆಡ್ ಆರ್ವಿು, ಇಟಲಿಯ ರೆಡ್ ಬ್ರಿಗೇಡ್, ಫ್ರೆಂಚ್ನ ಡೈರೆಕ್ಟ್ ಆಕ್ಷನ್, ಅಡಾಲ್ಪ್ ಹಿಟ್ಲರ್, ಜೋಸೆಫ್ ಸ್ಟಾಲಿನ್, ಶ್ರೀಲಂಕಾದ ಎಲ್ಟಿಟಿಇ, ಮುಸಲೋನಿ ಕಾಣಿಸುತ್ತಾರೆ. ಆದರೆ ರಕ್ತಚೆಲ್ಲದೆ ಹತ್ಯೆ ಮಾಡಿ ಮುಗಿಸುವ ಹೊಸ ಐಡಿಯಾ ಹೇಳಿಕೊಟ್ಟ ‘ಪಿನರಾಯಿ ಪ್ಲಾನ್’ ಎಷ್ಟು ಜನರಿಗೆ ಗೊತ್ತು?

ಶ್!!….ಇದು ರಕ್ತಸಿಕ್ತ ಚರಿತೆ..

ahuti‘ನಾವು ಬಂಗಾಳಿಗಳಿಂದ ಕಲಿಯಬೇಕಿದೆ. (ವಿರೋಧಿಗಳನ್ನು ಹೇಗೆ ಕೊಲ್ಲಬೇಕೆಂಬುದನ್ನು) ನೆಲದ ಮೇಲೆ ಒಂದು ಹನಿ ರಕ್ತ ಚೆಲ್ಲದೆ ಬಂಗಾಳಿಗಳು ಆ ಕೆಲಸ ಮಾಡಿ ಮುಗಿಸುತ್ತಾರೆ. ಅನಾಮತ್ತಾಗಿ ಅವರನ್ನು (ಎದುರಾಳಿಗಳನ್ನು) ಅಪಹರಣ ಮಾಡುತ್ತಾರೆ. ಆಳದ ಗುಂಡಿ ತೆಗೆದು ಒಂದು ಚೀಲ ಉಪ್ಪನ್ನು ಮೈಮೇಲೆ ಸುರಿದು ಹೂತುಹಾಕಿಬಿಡುತ್ತಾರೆ. ರಕ್ತ ಹರಿದದ್ದು, ಎದುರಾಳಿ ಸತ್ತುಹೋದದ್ದು ಯಾವುದೂ ಹೊರ ಜಗತ್ತಿಗೆ ಗೊತ್ತೇ ಆಗುವುದಿಲ್ಲ’- ವಿಜಯನ್ ಕಾರ್ಯಕರ್ತರ ಗುಂಪಿನಲ್ಲಿ ಹೇಳಿದ ಮಾತನ್ನು ಅಬ್ದುಲ್ಲಾ ಕುಟ್ಟಿ ಉಲ್ಲೇಖಿಸುತ್ತಾರೆ. ಕೇರಳದಲ್ಲಿ ಕಮ್ಯುನಿಸ್ಟ್ ಕ್ರೌರ್ಯದ ಕುರಿತು ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿರುವ ‘ಆಹುತಿ’ ಪುಸ್ತಕದಲ್ಲಿನ ಹಲವು ಬರಹಗಳ ಪೈಕಿ ಒಂದರ ಪ್ರಮುಖಾಂಶವಿದು.

ಯಾವ ವಿಜಯನ್, ಯಾವ ಕುಟ್ಟಿ, ಎಲ್ಲಿಯ ಕಾರ್ಯಕರ್ತರು ಎಂಬುದು ಮುಂದೆ ತಿಳಿಯುತ್ತ ಹೋಗುತ್ತದೆ.

ಪಿನರಾಯಿ ವಿಜಯನ್ ಕೇರಳದ ಮುಖ್ಯಮಂತ್ರಿಯಾಗಿ ಆರು ತಿಂಗಳಾಗಿದೆ. ಅಷ್ಟರಲ್ಲೇ ಹುಟ್ಟೂರು ಪಿನರಾಯಿ ಗ್ರಾಮದಲ್ಲಿ ಎರಡನೇ ಭೀಕರ ಕೊಲೆ ನಡೆದಿದೆ. ಅದು ರಾಜಕೀಯ ವಿರೋಧಿಗಳ ಹತ್ಯೆ. ಕಳೆದ ಮೇನಲ್ಲಿ ಕೆ.ಟಿ. ಜಯಕ್ರಿಷ್ಣನ್, ನಾಲ್ಕು ದಿನದ ಹಿಂದೆ ಬಿಜೆಪಿ ಕಾರ್ಯಕರ್ತ ರಮಿತ್ ಬರ್ಬರವಾಗಿ ಕೊಲೆಗೀಡಾಗಿದ್ದಾರೆ. ಇಲ್ಲಿಯವರೆಗೆ ಕೇರಳದಲ್ಲಿ ಇಂಥ ಹತ್ಯೆಗಳಿಗೆ ಪ್ರತಿಕ್ರಿಯೆ ಇರುತ್ತಿರಲಿಲ್ಲ. ಈ ಬಾರಿ ಹಾಗಲ್ಲ, ಇಡೀ ಕೇರಳ ಸಿಡಿದೇಳುವ ಲಕ್ಷಣ ಕಾಣಿಸುತ್ತಿದೆ.

ಅಕಸ್ಮಾತ್ ಈ ಘಟನೆ ನಡೆದದ್ದು ಕೇರಳದಲ್ಲಲ್ಲ ಅಥವಾ ಕಮ್ಯುನಿಸ್ಟ್ ಅಥವಾ ಇನ್ನಾವುದೇ ಸೆಕ್ಯುಲರ್ ಸರ್ಕಾರದ ಮೂಗಿನಡಿಯಲ್ಲಲ್ಲ ಎಂದಾಗಿದ್ದರೆ ಕೆಲವರು ತಲೆ ಮೇಲೆ ಆಕಾಶವೇ ಬಿದ್ದಂತೆ ಬೊಬ್ಬೆ ಹೊಡೆಯುತ್ತಿದ್ದರು. ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹ, ರಾಷ್ಟ್ರಪತಿ ಆಡಳಿತದ ಪ್ರಸ್ತಾಪ, ಪ್ರಧಾನಿ, ರಾಷ್ಟ್ರಪತಿಗಳ ಮಧ್ಯಪ್ರವೇಶಕ್ಕೆ ಆಗ್ರಹ… ಮತ್ತೊಂದು ಮಗದೊಂದು ಮಾತನ್ನು ಕೇಳಿಸಿಕೊಳ್ಳಬೇಕಾಗುತ್ತಿತ್ತು. ಆದರೆ ಕೇರಳದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವುದು ಬಲಪಂಥೀಯ ಕಾರ್ಯಕರ್ತರ ಹತ್ಯೆ ಆಗಿರುವುದರಿಂದ ಯಾರೊಬ್ಬರೂ ತುಟಿ ಬಿಚ್ಚುತ್ತಿಲ್ಲ. ಇದು ಬಿಜೆಪಿ ಮತ್ತು ಸಂಘ ಪರಿವಾರದವರ ಬಲವಾದ ವಾದ.

2016ರ ಮೇನಲ್ಲಿ ಕೇರಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪಿನರಾಯಿ ನೇತೃತ್ವದ ಎಡಪಕ್ಷಗಳ ಒಕ್ಕೂಟ ಅಧಿಕಾರದ ಚುಕ್ಕಾಣಿ ಹಿಡಿಯಿತು. ಪಿನರಾಯಿ ವಿಜಯನ್ ಮುಖ್ಯಮಂತ್ರಿಯಾದರು. ಅದರ ಬೆನ್ನಲ್ಲೇ ಸಿಎಂ ತವರು ಪಿನರಾಯಿ ಗ್ರಾಮದಲ್ಲಿ ಸಂಘಪರಿವಾರದ ಕಾರ್ಯಕರ್ತ ಕೆ.ಟಿ. ಜಯಕ್ರಿಷ್ಣನ್ ಮಾಸ್ಟರ್ ಬರ್ಬರ ಹತ್ಯೆ ನಡೆಯಿತು. ಅದರ ಜೊತೆಗೆ ಕಾರ್ತಿಕ್ ಎಂಬ ಏಳು ವರ್ಷದ ಬಾಲಕನ ಕೈಯನ್ನು ಕೊಚ್ಚಿಹಾಕಲಾಯಿತು. ಆ ಬರ್ಬರ ಘಟನೆಯಿಂದ ಗ್ರಾಮದ ಜನರು ಭೀತಿಗೆ ಒಳಗಾಗಿದ್ದರು. ಭಯಭೀತರಾದದ್ದು ಅದೊಂದೇ ಘಟನೆ ಗೋಸ್ಕರವಲ್ಲ, ಇಡೀ ಕೇರಳದಲ್ಲಿ ಬಲಪಂಥೀಯರ ಹತ್ಯಾ ಸರಣಿಗಳ ಮಾಸ್ಟರ್ ಮೈಂಡ್ ಯಾರಿದ್ದರೋ ಅಂಥವರ ಕೈಗೇ ರಾಜ್ಯದ ಅಧಿಕಾರದ ಚುಕ್ಕಾಣಿ ಸಿಕ್ಕಿತಲ್ಲ, ಮುಂದೇನು ಎಂಬುದಕ್ಕಾಗಿ! ಲೇಖನದ ಆರಂಭದಲ್ಲಿನ ಹೇಳಿಕೆಗೆ ಈಗ ಎಳೆ ಸಿಕ್ಕಿರಲು ಸಾಕು. ದೇವರ ನಾಡಲ್ಲಿ ಜನರನ್ನು ದೇವರೂ ಕಾಪಾಡಲಾರ ಎನ್ನುವ ಸ್ಥಿತಿ.

ಕೇರಳದ ಮಾಜಿ ಸಂಸದ ಕಮ್ಯುನಿಸ್ಟ್ ಪಕ್ಷದವರೇ ಆದ ಎ.ಪಿ. ಅಬ್ದುಲ್ಲಾ ಕುಟ್ಟಿ ಹೇಳಿದ ಮಾತನ್ನು ಲೋಕಸಭಾ ಸದಸ್ಯೆ ಮೀನಾಕ್ಷಿ ಲೇಖಿ ‘ಆಹುತಿ’ ಪುಸ್ತಕದಲ್ಲಿನ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಕಣ್ಣೂರಲ್ಲಿ ನಡೆದ ಕೋಮು ಗಲಭೆಯ ಹಿನ್ನೆಲೆಯಲ್ಲಿ 2008ರ ಮಾರ್ಚ್ 5ರಂದು ಅಜಿಕ್ಕೊಳಂ ಸ್ಮಾರಕ ಭವನದಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಶಾಂತಿಸಭೆ ಕರೆದಿದ್ದರು. ಆಗ ಸಿಪಿಎಂ ಕೇರಳ ಘಟಕದ ಕಾರ್ಯದರ್ಶಿ ಆಗಿದ್ದ ಪಿನರಾಯಿ ವಿಜಯನ್ ‘ನಾವು ಹೇಗೆ ಕೆಲಸ ಮಾಡಿಮುಗಿಸಬೇಕೆಂದು ಬಂಗಾಳಿಗಳಿಂದ ಕಲಿಯಬೇಕೆಂದು’ ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದರು. ಆ ವೇಳೆ ಸಿಪಿಎಂ ಸಂಸದರಾದ ಪಿ.ಕರುಣಾಕರನ್, ಪಿ.ಸತಿದೇವಿ, ಕಣ್ಣೂರಿನ ಸಿಪಿಐಎಂ ಶಾಸಕರು ಹಾಜರಿದ್ದರು ಎಂದು ಅಬ್ದುಲ್ಲಾ ಕುಟ್ಟಿ ಹೇಳಿದ್ದರು.

ಹಾಗಾದರೆ ಬಂಗಾಳದ ಹಕೀಕತ್ತೇನು? 1997ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಶಾಸಕರೊಬ್ಬರ ಪ್ರಶ್ನೆಗೆ ಆಗ ಸಚಿವರಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ ನೀಡಿದ ವಿವರಣೆ ಕೇಳಿದರೆ ಎಂಥವರೂ ಬೆಚ್ಚಿ ಬೀಳಬೇಕು. ಬುದ್ಧದೇವ್ ಪ್ರಕಾರ 1977ರಿಂದ 2009ರ ಅವಧಿಯಲ್ಲಿ ಪಶ್ಚಿಮಬಂಗಾಳದಲ್ಲಿ ಒಟ್ಟು 55,408 ರಾಜಕೀಯ ಹತ್ಯೆಗಳು ನಡೆದಿವೆಯಂತೆ. ಆ ಅವಧಿಯುದ್ದಕ್ಕೂ ರಾಜ್ಯದಲ್ಲಿ ಎಡಪಕ್ಷಗಳ ಸರ್ಕಾರವೇ ಅಧಿಕಾರದಲ್ಲಿತ್ತೆಂಬುದನ್ನು ಗಮನಿಸಬೇಕು. ಅಂದರೆ ವಾರ್ಷಿಕ ಸರಾಸರಿ 1787, ತಿಂಗಳು ಸರಾಸರಿ 149, ದಿನದ ಸರಾಸರಿ ಐದು ಮಂದಿಯ ಹತ್ಯೆ ನಡೆದಿದೆ. ಇದನ್ನು ನೋಡಿದರೆ ಏನು ನೆನಪಾಗುತ್ತದೆ? 19, 20ನೇ ಶತಮಾನದ ಶೀತಲಸಮರ, ಪಶ್ಚಿಮ ಯುರೋಪ್ನ ಪ್ರಮುಖ ಕಮ್ಯುನಿಸ್ಟ್ ಪಂಗಡಗಳಾದ ಪಶ್ಚಿಮ ಜರ್ಮನಿಯ ರೆಡ್ ಆರ್ವಿು, ಇಟಲಿಯ ರೆಡ್ ಬ್ರಿಗೇಡ್, ಫ್ರೆಂಚ್ ನೇರ ಕಾರ್ಯಾಚರಣೆ, ಬೆಲ್ಜಿಯಂನ ಕಮ್ಯುನಿಸ್ಟ್ ಕಾಂಬ್ಯಾಟ್ ಸೆಲ್, ಏಷ್ಯಾದ ಕಮ್ಯುನಿಸ್ಟ್ ಪಂಗಡಗಳಾದ ಜಪಾನ್ನ ರೆಡ್ ಆರ್ವಿು, ಅಡಾಲ್ಪ್ ಹಿಟ್ಲರ್, ಆತನಿಗಿಂತಲೂ ಭಯಾನಕ ನೀತಿ ಅನುಸರಿಸಿದ ಜೋಸೆಫ್ ಸ್ಟಾಲಿನ್, ಸ್ಟಾಲಿನ್ ಅನುಯಾಯಿಗಳಾದ ಶ್ರೀಲಂಕಾದ ಎಲ್ಟಿಟಿಇ (ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಳಂ), ಮುಸಲೋನಿ ಇವರೆಲ್ಲ ನೆನಪಾಗುತ್ತಾರೆ ತಾನೆ. ಅವರು ನಡೆಸಿದ ಲಕ್ಷಾಂತರ, ಕೋಟ್ಯಂತರ ನರಮೇಧಗಳೂ ಕಣ್ಣಿಗೆ ಕಟ್ಟುತ್ತವೆ.

‘ಆಹುತಿ’ ಪುಸ್ತಕದಲ್ಲಿ ಪರುಮಳ ಹತ್ಯಾಕಾಂಡಕ್ಕೆ ಸಂಬಂಧಿಸಿ ಒಂದು ಅಧ್ಯಾಯವಿದೆ. ಅನು, ಸುಜಿತ್ ಮತ್ತು ಕಿಮ್ ಎಂಬ ಮೂವರು ಎಬಿವಿಪಿ ಕಾರ್ಯಕರ್ತರು ಪರುಮಳ ದೇವಸ್ವಂ ಮಂಡಳಿಯ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು. ಈ ಮೂವರು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಕಾಲೇಜಿನಲ್ಲಿ ಇವರನ್ನು ಮೂಲೆಗುಂಪು ಮಾಡಲು ಎಲ್ಲ ರೀತಿಯ ಪ್ರಯತ್ನಗಳೂ ನಡೆಯುತ್ತವೆ. ಕೊಲೆ ಬೆದರಿಕೆ ಹಾಕಲಾಗುತ್ತದೆ. ಎಬಿವಿಪಿ ಜೊತೆ ಗುರುತಿಸಿಕೊಂಡರೆ ಸಾವಿನ ಮನೆಯ ಕದ ತಟ್ಟಿದಂತೆಯೇ ಎಂಬ ಭಾವನೆ ಆ ಕಾಲೇಜಿನಲ್ಲಿರುತ್ತದೆ. ಒಂದು ದಿನ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಇವರ ಮೇಲೆರಗುತ್ತಾರೆ. ಬಚಾವಾಗಲು ಮೂವರೂ ಪಂಪಾ ನದಿಗೆ ಹಾರುತ್ತಾರೆ. ಈಜಿ ನದಿಯ ಮತ್ತೊಂದು ದಡ ಸೇರಲು ಯತ್ನಿಸುತ್ತಾರೆ. ಆಗ ನದಿ ದಡದಿಂದ ಗೂಂಡಾಗಳು ಇವರ ಮೇಲೆ ಕಲ್ಲೆಸೆಯಲು ಶುರು ಮಾಡುತ್ತಾರೆ. ತುಂಬಿ ಹರಿಯುತ್ತಿದ್ದ ನದಿಯಲ್ಲಿ ಈಜಲಾಗದೆ ಇವರು ಒದ್ದಾಡುತ್ತಾರೆ. ಅಲ್ಲೇ ನದಿ ದಡದಲ್ಲಿ ಬಟ್ಟೆ ಒಗೆಯುತ್ತಿದ್ದ ಕೆಲ ಮಹಿಳೆಯರು ಈ ಘಟನೆಗೆ ಸಾಕ್ಷಿ ಆಗುತ್ತಾರೆ. ಯುವಕರನ್ನು ರಕ್ಷಿಸಲು ಆ ಮಹಿಳೆಯರು ತಮ್ಮ ಕೈಲಿದ್ದ ಸೀರೆಯನ್ನು ನದಿ ನೀರಿಗೆ ಬೀಸುತ್ತಾರೆ, ಸೀರೆಯನ್ನು ಹಿಡಿದುಕೊಂಡು ಬಚಾವಾಗಲಿ ಎಂದು. ಆಗ ಗೂಂಡಾ ಪಡೆ ಮಹಿಳೆಯರ ಮೇಲೇ ಕಲ್ಲು ಬೀಸಿ ಹಲ್ಲೆ ಮಾಡಿದಾಗ ಅವರು ಅಸಹಾಯಕರಾಗಿ ಕೈಚೆಲ್ಲುತ್ತಾರೆ. ಮೂವರು ಯುವಕರ ಹೋರಾಟದ ಬದುಕಿನಲ್ಲಿ ಅದೇ ಕೊನೆಯ ಘಳಿಗೆ ಆಗಿಹೋಗುತ್ತದೆ. ಇದೊಂಥರಾ ವಿಜಯನ್ ಹೇಳಿದ ‘ಬಂಗಾಳ ಪ್ರಯೋಗ’ದಂತೆ ಭಾಸವಾಗುವುದಿಲ್ಲವೇ? ಒಂದು ಹನಿ ರಕ್ತವೂ ಭೂಮಿ ಮೇಲೆ ಬೀಳದಂತೆ ವಿರೋಧಿಗಳನ್ನು ಮುಗಿಸಿಬಿಡುವುದು! ಆ ಯುವಕರು ನದಿಗೆ ಹಾರುವ ಮುನ್ನ ಮದ್ಯಪಾನ ಮಾಡಿದ್ದರು ಎಂಬ ಮರಣೋತ್ತರ ಪರೀಕ್ಷಾ ವರದಿ ಈ ಪ್ರಕರಣಕ್ಕೆ ವ್ಯವಸ್ಥಿತವಾಗಿ ಹೊಡೆದ ಕೊನೆ ಮೊಳೆಯಾಗುತ್ತದೆ. ಈ ರೀತಿಯ ಅಮಾನುಷ ಕೃತ್ಯಗಳಲ್ಲಿ ಸರ್ಕಾರಿ ಯಂತ್ರವೇ ಹೇಗೆ ಶಾಮೀಲಾಗುತ್ತದೆ ಎಂಬುದಕ್ಕೆ ಈ ವರದಿಯೇ ಸಾಕ್ಷಿ.

ಮತ್ತೊಂದು ಅಧ್ಯಾಯ ಇನ್ನೂ ಘನಘೊರ. 1999ರ ಡಿಸೆಂಬರ್ 1ರ ಬೆಳಗ್ಗೆ 10-30ರ ಸುಮಾರಿಗೆ ಕೆ.ಟಿ.ಜಯಕ್ರಿಷ್ಣನ್ ಮಾಸ್ಟರ್ರನ್ನು ಅವರು ಪಾಠ ಮಾಡುತ್ತಿದ್ದ ಕಣ್ಣೂರು ಜಿಲ್ಲೆಯ ಪನೂರು ಸಮೀಪದ ಕೂರುಪರಂಬು ಶಾಲೆಯ ಕೊಠಡಿಯಲ್ಲಿ 8-10 ವರ್ಷದ ಮಕ್ಕಳ ಎದುರಿನಲ್ಲೇ ಇರಿದು ಕೊಲೆ ಮಾಡಲಾಗುತ್ತದೆ. ಜಯಕ್ರಿಷ್ಣನ್ ಬಿಜೆಪಿ ಯುವಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾಗಿದ್ದರು. ಜೀವ ಬೆದರಿಕೆ ಇದ್ದ ಕಾರಣಕ್ಕೆ ಕೇರಳ ಸರ್ಕಾರವೇ ಇವರಿಗೆ ಅಂಗರಕ್ಷಕರನ್ನೂ ನೀಡಿತ್ತು. ಕಮ್ಯುನಿಸ್ಟ್ ಕಾರ್ಯಕರ್ತರು ಶಾಲೆಗೆ ನುಗ್ಗಿದಾಗ ಹೊರಗಡೆ ಇದ್ದ ಅಂಗರಕ್ಷಕ ಮಾಯವಾಗಿದ್ದ. ಜಯಕ್ರಿಷ್ಣನ್ ಕೊಲೆ ವಿಷಯದಲ್ಲಿ ಶಾಲೆಯ ಯಾವುದೇ ಮಕ್ಕಳು, ಅಧ್ಯಾಪಕರು ಅಥವಾ ಇನ್ನಾರೇ ಆಗಲಿ ವಿಷಯ ಬಹಿರಂಗಪಡಿಸಿದರೆ ಅವರಿಗೂ ಇದೇ ಗತಿ ಬರುತ್ತದೆ ಎಂಬ ಎಚ್ಚರಿಕೆ ಸಂದೇಶ ವನ್ನು ಶಾಲೆಯ ಕಪ್ಪುಹಲಗೆಯ ಮೇಲೆ ಬರೆದಿಟ್ಟು ಕೊಲೆಗಡುಕರು ತೆರಳುತ್ತಾರೆ.

ಕೋಳಿಕ್ಕೋಡ್ನ ಮರದ್ ಹತ್ಯಾಕಾಂಡ ಇಡೀ ದೇಶದಲ್ಲಿ ತಲ್ಲಣ ಸೃಷ್ಟಿಸಿದ ಪ್ರಕರಣ. 2002ರ ಜನವರಿ 2ರಂದು ಬಿಜೆಪಿ ಕಾರ್ಯಕರ್ತರಾದ ಶಿಮ್ತ್ ಮತ್ತು ಕುಂಜುಮೋನ್ ನಾರಾಯಣ ಎಂಬಿಬ್ಬರನ್ನು ಎನ್ಡಿಎಫ್ನ ಮೂಲಭೂತವಾದಿ ಕಾರ್ಯಕರ್ತರು ಹತ್ಯೆ ಮಾಡುತ್ತಾರೆ. ಆ ಘಟನೆಯ ಬಳಿಕ ಸಮುದ್ರ ತೀರದ ಮರದ್ನಲ್ಲಿ ಸದಾ ಭೀತಿಯ ವಾತಾವರಣ ಇದ್ದೇ ಇತ್ತು. 2003 ಮೇ 2ರ ರಾತ್ರಿ ಮರದ್ನಲ್ಲಿ ಅದಕ್ಕಿಂತಲೂ ಭಯಾನಕ, ಅಮಾನುಷವಾದ ಮತ್ತೊಂದು ಹತ್ಯಾಕಾಂಡ ನಡೆಯುತ್ತದೆ. ನಡುರಾತ್ರಿ ಸುಮಾರು ನೂರು ಜನರಿದ್ದ ಹಂತಕರ ಪಡೆ ಬೋಟ್ನಲ್ಲಿ ಮರದ್ ಗ್ರಾಮಕ್ಕೆ ನುಗ್ಗುತ್ತದೆ. ಹಂತಕರ ಕೈಯಲ್ಲಿ ಕತ್ತಿ, ಖಡ್ಗ, ಜಿಲೆಟಿನ್ ಬಾಂಬ್ಗಳಿದ್ದವು. ಹಗಲೆಲ್ಲ ಮೀನುಗಾರಿಕೆಯಲ್ಲಿ ತೊಡಗಿ ದಣಿದಿದ್ದ ಮೀನುಗಾರರು ಸಮುದ್ರದ ತಟದಲ್ಲಿ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆ ಪೈಕಿ ಎಂಟು ಮಂದಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಯಿತು. ಪ್ರಕರಣದ ತನಿಖೆಗೆ ಮರದ್ ಕಮಿಷನ್ ನೇಮಕವಾಯಿತು. ಈ ಆಯೋಗ ಕೂಲಂಕಷ ತನಿಖೆ ಮಾಡಿ ವರದಿ ನೀಡಿತು. ನಂತರ ಎ.ಕೆ. ಆಂಟನಿ ಸರ್ಕಾರ ಜಿಲ್ಲಾ ನ್ಯಾಯಾಧೀಶ ಥಾಮಸ್ ಪಿ.ಜೋಸೆಫ್ ನೇತೃತ್ವದ ನ್ಯಾಯಾಂಗ ಆಯೋಗ ರಚಿಸಿತು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಥಾಮಸ್ ಆಯೋಗ ಸಲಹೆ ಮಾಡಿತು. ಅಲ್ಲಿಗೆ ಆ ಪ್ರಕರಣದ ತನಿಖೆ ಕೇವಲ ಗಾಳಿಯಲ್ಲಿ ಗುದ್ದಾಟ ಎಂಬಂತಾಯಿತು.

ಇದು ಇಂದು ನಿನ್ನೆಯ ಕತೆಯಲ್ಲ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)ದ ಮೂಲಕ ಸುಮಾರು 1920ರ ಹೊತ್ತಿಗೆ ಎಡಪಂಥೀಯ ವಾದ ಭಾರತದಲ್ಲಿ ಬೇರುಬಿಟ್ಟಿತು. ಕಮ್ಯುನಿಸ್ಟ್ ಪಾರ್ಟಿಯಲ್ಲಿ ಆರಂಭದಿಂದಲೂ ಮೇಲ್ವರ್ಗದವರೇ ಮೇಲುಗೈ ಸಾಧಿಸಿದ್ದು. ಈಗಲೂ ಅದೇ ಸ್ಥಿತಿ ಇದೆ. ಬಹುತೇಕ ಕಮ್ಯುನಿಸ್ಟ್ ನಾಯಕರು ಇಂಗ್ಲಿಷ್ ಶಿಕ್ಷಣ ಪಡೆದವರು ಮತ್ತು ಇಂಗ್ಲಿಷರಿಂದ ಪ್ರಭಾವಿತರಾದವರೇನೆ.

ಮಾರ್ಕ್ಸ್ವಾದ ಯಾವತ್ತೂ ಜನಸಾಮಾನ್ಯರ ಪರವಾಗಿರಲಿಲ್ಲ. ಕಮ್ಯುನಿಸ್ಟರು ಜರ್ಮನಿ, ರಷ್ಯಾ, ಬ್ರಿಟನ್ ಏಜೆಂಟರಂತೆಯೇ ಕೆಲಸ ಮಾಡುತ್ತ ಬಂದವರು ಎಂದು ಇತಿಹಾಸ ಹೇಳುತ್ತದೆ. ಸ್ವಾತಂತ್ರ್ಯೂರ್ವದಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಬೆಂಬಲಿಸಿದ್ದು ಕಮ್ಯುನಿಸ್ಟ್ ಇತಿಹಾಸದ ಮತ್ತೊಂದು ಕರಾಳ ಅಧ್ಯಾಯ. ಮುಸ್ಲಿಂ ಲೀಗ್ನ ಪಾಕಿಸ್ತಾನ ಬೇಡಿಕೆ ಮಾತ್ರವಲ್ಲ, ಸಿಖ್ಖರ ಪ್ರತ್ಯೇಕ ರಾಷ್ಟ್ರ ಬೇಡಿಕೆಯನ್ನೂ ಇವರು ಬೆಂಬಲಿಸಿದ್ದರು. ಸ್ವಾತಂತ್ರ್ಯಾನಂತರವೂ ಪಾಕಿಸ್ತಾನದ ಆಶಯದಂತೆ ಹೈದರಾಬಾದ್ ನಿಜಾಮರ ಜೊತೆ ಕೈಜೋಡಿಸಿ ಹೈದರಾಬಾದ್ ಪ್ರತ್ಯೇಕತಾವಾದ ಬೆಂಬಲಿಸಿದ್ದರು ಎಂದು ಕೆಲ ಉಲ್ಲೇಖಗಳು ಹೇಳುತ್ತವೆ. ಚೀನಾ ಬೆಂಬಲಕ್ಕೆ ನಿಂತ ಕಮ್ಯುನಿಸ್ಟರು ರಾಷ್ಟ್ರನಿಷ್ಠ ನೇತಾಜಿಯನ್ನು ಕತ್ತೆ ಎಂದು ಜರಿದರು.

ಆದರೆ ಅದೆಲ್ಲದಕ್ಕಿಂತ ಹೆಚ್ಚು ಆತಂಕಕಾರಿ ಈ ರಕ್ತಸಿಕ್ತ ಇತಿಹಾಸ. 1967ರಲ್ಲಿ ಕನು ಸನ್ಯಾಲ್ ನಕ್ಸಲ್ಬರಿಯಲ್ಲಿ ನಕ್ಸಲ್ ಚಳವಳಿ ಹುಟ್ಟುಹಾಕಲು ಕಮ್ಯುನಿಸ್ಟ್ ಸರ್ಕಾರವೇ ಎಲ್ಲ ರೀತಿಯ ನೆರವು ನೀಡಿದ್ದು. 2013ರಲ್ಲಿ ಕೇಂದ್ರ ಗೃಹಖಾತೆ ಸಹಾಯಕ ಸಚಿವರು ರಾಜ್ಯಸಭೆಯಲ್ಲಿ ನೀಡಿದ ಉತ್ತರದ ಪ್ರಕಾರ ನಕ್ಸಲರು ಒಟ್ಟು 7,881 ಮಂದಿ ಅಮಾಯಕರ ಹತ್ಯೆ ಮಾಡಿದ್ದಾರೆ. ದೇಶದ ರಕ್ಷಣಾ ಪಡೆಗಳು ಹೇಳುವ ಪ್ರಕಾರ ಈಗ ದೇಶದಲ್ಲಿ ಆಂತರಿಕ ಸುರಕ್ಷೆಗೆ ನಕ್ಸಲರೇ ದೊಡ್ಡ ಅಪಾಯವಾಗಿ ಪರಿಣಮಿಸಿದ್ದಾರೆ. ಮಾವೋವಾದಿ ನಕ್ಸಲರು ಛತ್ತೀಸ್ಗಢ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಿಂದ ವಾರ್ಷಿಕವಾಗಿ 1500 ಕೋಟಿ ರೂಪಾಯಿಯನ್ನು ಅಕ್ರಮವಾಗಿ ಸಂಗ್ರಹ ಮಾಡುತ್ತಿದ್ದಾರೆ. ಹಾಗೆ ಸಂಗ್ರಹವಾದ ಮೊತ್ತವನ್ನು ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಬಳಸಲಾಗುತ್ತಿದೆ. ಚೀನಾ, ಪಾಕಿಸ್ತಾನದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ನಕ್ಸಲರ ಕೈಸೇರುತ್ತಿವೆ. ಇಂತಹ ಇನ್ನೂ ಎಷ್ಟೋ ಭಯಾನಕ ಸತ್ಯಗಳನ್ನು ‘ಆಹುತಿ’ಯಲ್ಲಿ ಕಣ್ಣಿಗೆ ಕಟ್ಟುವಂತೆ ದಾಖಲಿಸಲಾಗಿದೆ. ಕೇರಳದಲ್ಲಿ ಬಲಪಂಥೀಯರು ಎಡಪಕ್ಷಗಳ ಕ್ರೌರ್ಯಕ್ಕೆ ಬಲಿಯಾದದ್ದಕ್ಕಿಂತ ಪಶ್ಚಿಮ ಬಂಗಾಳದ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚು ಸಾವುನೋವು ಅನುಭವಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷವೇ ಅದನ್ನು ಮರೆತುಬಿಟ್ಟಿದೆ. ಎಷ್ಟು ವಿಚಿತ್ರ ನೋಡಿ. ಮೂವತ್ತು ವರ್ಷ ಪಶ್ಚಿಮ ಬಂಗಾಳದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಇತ್ತ ಕೇರಳದಲ್ಲಿ ಬಲಪಂಥೀಯ ಸಂಘಪರಿವಾರದ ಇನ್ನೂರು ಮುನ್ನೂರು ಕಾರ್ಯಕರ್ತರು ಹತ್ಯೆಗೊಳಗಾದರೂ ಯಾರೂ ಕೇಳುವವರೇ ಇಲ್ಲ. ಎಂಥ ದೇಶ ಎಂಥಾ ಜನ. 1957ರಿಂದ ಈವರೆಗೆ ನಡೆಯುತ್ತ ಬಂದಿರುವ ಕೇರಳದ ಮನಕಲಕುವ ರಕ್ತಸಿಕ್ತ ಚರಿತ್ರೆ ‘ಆಹುತಿ’ಯಲ್ಲಿ ಸಚಿತ್ರವಾಗಿ ದಾಖಲಾಗಿದೆ. ವಿನಾ ಕಾರಣ ಜೀವ ಕಳೆದುಕೊಂಡವರು 200ಕ್ಕೂ ಹೆಚ್ಚು ಮಂದಿ. ಆ ಎಲ್ಲರ ಸಚಿತ್ರ ರಕ್ತಚರಿತೆ ಮನಸ್ಸಿನಲ್ಲಿ ಕಳವಳ ಮೂಡಿಸುತ್ತದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top