ಉರಿ ದಾಳಿಗೆ ಪ್ರತೀಕಾರ, ಭಾರತದ ರಾಜತಾಂತ್ರಿಕ ಚಮತ್ಕಾರ

ಪಾಕಿಸ್ತಾನ ಇನ್ನೆಂದೂ ಬುದ್ಧಿ ಕಲಿತು ತನ್ನ ತಪ್ಪನ್ನು ತಿದ್ದಿಕೊಳ್ಳಲು ಮನಸ್ಸು ಮಾಡುವುದಿಲ್ಲ ಎಂಬುದಕ್ಕೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಯೋಧರು ದಾಳಿಯನ್ನೇ ಮಾಡಿಲ್ಲ, ಗಡಿಯಾಚೆಗಿನಿಂದ ಅಪ್ರಚೋದಿತವಾಗಿ ಗುಂಡಿನ ದಾಳಿಯನ್ನಷ್ಟೇ ಮಾಡಲಾಗಿದೆ. ನಮ್ಮ ಕಡೆ ಇಬ್ಬರೇ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ ಎಂಬ ಆತ್ಮವಂಚನೆಯ, ಹೇಡಿತನದ ಹೇಳಿಕೆಯೇ ಸಾಕು!

ಒಂದೇ ಮಾತಲ್ಲಿ ಹೇಳುವುದಾದರೆ ‘ಭಯೋತ್ಪಾದನೆ ಮತ್ತು ಮತಾಂಧತೆಯ ಉಪಟಳದ ವಿಚಾರದಲ್ಲಿ ಭಾರತ ಮಾತ್ರವಲ್ಲ, ಇಡೀ ಜಗತ್ತಿನ ದೇಶಗಳ ಸಹನೆಯ ಕಟ್ಟೆ ಒಡೆದಿತ್ತು, ಉಗ್ರವಾದಿಗಳನ್ನು ಸಾಕಿ ಸಲಹುತ್ತಲೇ ಬಂದ ಪಾಕಿಸ್ತಾನದ ಪಾಪದ ಕೊಡ ತುಂಬಿತ್ತ್ತು’- ಇದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬೇರುಬಿಟ್ಟಿರುವ ಪಾಕ್ ಪ್ರಾಯೋಜಿತ ಉಗ್ರರ ಶಿಬಿರಗಳ ಮೇಲೆ ಭಾರತದ ಯೋಧರು ಎರಗಿ ಅವರ ದಮನ ಮಾಡುವುದಕ್ಕೆ ಭಾರತ ಸರ್ಕಾರ ಮತ್ತು ಸೇನೆಗೆ ಶಕ್ತಿ ಮತ್ತು ಪ್ರೇರಣೆ ನೀಡಿದ ಮುಖ್ಯ ಕಾರಣ. ಇದರಲ್ಲಿ ಯಾವ ಅನುಮಾನವೂ ಬೇಡ.

ಹಿಂದಿನ ನೆನಪುಗಳನ್ನೊಮ್ಮೆ ಕೆದಕಿ ನೋಡಿ, ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತುವುದರ ವಿಚಾರವಾಗಿ ಈಗೀಗ ಹಾದಿಗೆ ಬರುತ್ತಿರುವ ಅಮೆರಿಕ ಎಸಗಿದ ಪ್ರಮಾದವೇನೂ ಸಣ್ಣದಲ್ಲ. ಹಾಗೆ ನೋಡಿದರೆ ಜಗತ್ತಿಗೆ ಭಯೋತ್ಪಾದನೆ ಪಿಡುಗು ಪಸರಿಸುವಲ್ಲಿ ಅಮೆರಿಕ ಮಾಡಿದ ಪ್ರಮಾದದ ಪಾಲು ಪಾಕಿಗಿಂತಲೂ ದೊಡ್ಡದು. ಜಗತ್ತಿನೆಲ್ಲೆಡೆ ಮುಸ್ಲಿಂ ಮೂಲಭೂತವಾದವನ್ನು ಅಲ್ ಕಾಯಿದಾ ಸ್ಥಾಪಕ ಒಸಾಮಾ ಬಿನ್ ಲಾಡೆನ್ ಪಸರಿಸಿದ ಎಂಬುದು ನಿಜ ಎನ್ನುವುದಾದರೆ ಅದೇ ಲಾಡೆನ್ಗೆ ದುಡ್ಡು, ಶಸ್ತ್ರಾಸ್ತ್ರ ಇತ್ಯಾದಿ ಸಕಲವನ್ನೂ ಒದಗಿಸಿ ‘ಅಲ್ ಕಾಯಿದಾ’ ಎಂಬ ವಿಷಬೀಜ ಮೊಳಕೆಯೊಡೆದು ಹೆಮ್ಮರವಾಗುವುದಕ್ಕೂ ಮೂಲ ಕಾರಣ ಅಮೆರಿಕವೇ ಎಂಬುದೂ ಅಷ್ಟೇ ಸತ್ಯ. ಅಮೆರಿಕದ ಪ್ರಮಾದದ ಹಿಂದೆ ಅಫ್ಘಾನಿಸ್ತಾನದಲ್ಲಿ ರಷ್ಯದ ಪ್ರಭುತ್ವವನ್ನು ಕಡಿಮೆ ಮಾಡುವ ಒಳಉದ್ದೇಶ ಇತ್ತೆಂಬುದು ಬೇರೆ ವಿಚಾರ. ಅದನ್ನು ಬೇರೊಂದು ಸಂದರ್ಭದಲ್ಲಿ ವಿಸõತ ಚರ್ಚೆ ಮಾಡೋಣ.

ಈ ಸಂದರ್ಭದಲ್ಲಿ ನಾವು ಆಲೋಚನೆ ಮಾಡಬೇಕಿರುವ ಪ್ರಮುಖ ವಿಷಯ ಏನೆಂದರೆ, ಜಗತ್ತಿನಲ್ಲಿ ಎಲ್ಲವೂ ತನ್ನ ಆಣತಿಯಂತೆಯೇ ನಡೆಯಬೇಕೆಂದು ಬಯಸಿದ, ಅಲ್ ಕಾಯಿದಾದಂತಹ ಭಯೋತ್ಪಾದಕ ಸಂಘಟನೆಯನ್ನು ಕೈಯಾರೆ ಬೆಳೆಸಿದ ಅಮೆರಿಕಕ್ಕೆ ಭಯೋತ್ಪಾದನೆಯ ಮೊದಲ ಬಿಸಿ ತಟ್ಟಿದ್ದು ಈಗ್ಗೆ ಹದಿನಾರು ವರ್ಷಗಳ ಹಿಂದೆ. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ‘ವಿಶ್ವ ವಾಣಿಜ್ಯ ಕೇಂದ್ರ’ದ ಮೇಲೆ ಲಾಡೆನ್ ನೇತೃತ್ವದ ಅಲ್ ಕಾಯಿದಾ ಉಗ್ರರು ವೈಮಾನಿಕ ದಾಳಿ ನಡೆಸಿದಾಗ. ಆ ಒಂದು ಘಟನೆಯಿಂದ ಅಮೆರಿಕ ಮಾತ್ರವಲ್ಲ, ಜಗತ್ತಿನ ಎಲ್ಲ ದೇಶಗಳು ಮೂಲಭೂತವಾದಿಗಳು ಭವಿಷ್ಯದಲ್ಲಿ ತಂದೊಡ್ಡಬಹುದಾದ ಆತಂಕದ ಕುರಿತು ಗಂಭೀರ ಚಿಂತನೆ ಮಾಡುವಂತಾಯಿತು. ಅದೀಗ ಭಾರತದ ಸೇನೆ ಗಡಿಯಾಚೆಗಿನ ಉಗ್ರರ ಶಿಬಿರಗಳ ಮೇಲೆರಗಿದ್ದನ್ನು ಭಾರತದ ಒಳಗೆ ಮತ್ತು ಜಗತ್ತಿನ ಇತರೆಲ್ಲ ರಾಷ್ಟ್ರಗಳು ಒಕ್ಕೊರಲಿನಿಂದ ಬೆಂಬಲಿಸುವಂತಾಯಿತು.

ಈ ಮಾತಿಗೆ ಪೂರಕವಾಗಿ ಹಲವು ಕಾರಣಗಳು ಸಿಗುತ್ತವೆ. ಸ್ವಾತಂತ್ರ್ಯಾನಂತರ ಪಾಕಿಸ್ತಾನ ನಾಲ್ಕು ಬಾರಿ ಅಧಿಕೃತವಾಗಿ ಕಾಲು ಕೆರೆದು ಭಾರತದ ಮೇಲೆ ಯುದ್ಧ ಸಾರಿದೆ. ಅದಕ್ಕೆ ಹೊರತಾಗಿ ಜಮ್ಮು ಕಾಶ್ಮೀರ ಮತ್ತು ಭಾರತದ ಇತರೆಡೆಗಳಲ್ಲಿ ಪಾಕಿಸ್ತಾನ ತನ್ನ ಭಯೋತ್ಪಾದಕರ ಮೂಲಕ ನಿರಂತರವಾಗಿ ಛಾಯಾಯುದ್ಧವನ್ನು ಮುಂದುವರಿಸಿದೆ. ಹೀಗೆ ಪಾಕಿಸ್ತಾನ ಭಾರತದ ಮೇಲೆ ನಡೆಸಿದ ಪ್ರತ್ಯಕ್ಷ ಮತ್ತು ಪರೋಕ್ಷ ಯುದ್ಧದಲ್ಲಿ ಭಾರತದ ಲಕ್ಷಾಂತರ ಸೈನಿಕರು/ಪೊಲೀಸರು, ಅಮಾಯಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಲಕ್ಷಾಂತರ ಜನರು ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಕಾಶ್ಮೀರದಲ್ಲಿ ಭಯೋತ್ಪಾದನೆ, ಗಡಿಯಲ್ಲಿ ಭಯೋತ್ಪಾದಕ ಉಪಟಳ, ಪಾಕ್ ಆಕ್ರಮಿತ ಕಾಶ್ಮೀರದಿಂದ ಭಾರತಕ್ಕೆ ಎದುರಾಗುತ್ತಿರುವ ಆತಂಕವನ್ನು ವಿಶ್ವಸಂಸ್ಥೆ ಮತ್ತು ಇತರ ಜಾಗತಿಕ ವೇದಿಕೆಗಳಲ್ಲಿ ಭಾರತ ಸರ್ಕಾರ ಪ್ರಸ್ತಾಪಿಸಿದ್ದಕ್ಕೆ, ಅಲವತ್ತುಕೊಂಡಿದ್ದಕ್ಕೆ, ದೈನೇಸಿ ಅನ್ನಿಸಿಕೊಂಡಿದ್ದಕ್ಕೆ ಲೆಕ್ಕವೇ ಇಲ್ಲ. ಆದರೂ ಅಮೆರಿಕಕ್ಕೆ, ಪ್ರಪಂಚದ ಇತರ ರಾಷ್ಟ್ರಗಳಿಗೆ ಭಾರತದ ಆರ್ತನಾದ ಕೇಳಿಸಿಯೇ ಇರಲಿಲ್ಲ. ನೋವು, ನರಳಾಟ ಅರ್ಥವಾಗಿರಲಿಲ್ಲ! ಯಾವಾಗ ವಿಶ್ವವಾಣಿಜ್ಯ ಕೇಂದ್ರದ ಮೇಲೆ ಲಾಡೆನ್ ಬಂಟರ ದಾಳಿ ನಡೆಯಿತೋ ಆಗ ಭಯೋತ್ಪಾದನೆಯ ಕಾರಣ ಮತ್ತು ಅದರ ಪರಿಣಾಮಗಳು ಮೊದಲು ಅಮೆರಿಕಕ್ಕೆ ತದನಂತರ ಇಂಗ್ಲೆಂಡ್, ರಷ್ಯಾ, ಫ್ರಾನ್ಸ್, ಜರ್ಮನಿ ಇತ್ಯಾದಿ ದೇಶಗಳಿಗೆ ಅಲ್ಪಸ್ವಲ್ಪವಾದರೂ ಅರ್ಥವಾಗತೊಡಗಿತು. ಇಷ್ಟು ವರ್ಷಗಳ ತರುವಾಯ ಈಗ ಭಯೋತ್ಪಾದನೆ ವಿಷಯದಲ್ಲಿ ಎಲ್ಲರೂ ಮೈಚಳಿ ಬಿಟ್ಟು ಮಾತನಾಡತೊಡಗಿದ್ದಾರೆ. ಈ ಸದವಕಾಶವನ್ನು ಪ್ರಧಾನಿ ಮೋದಿ ಸಮರ್ಥವಾಗಿ ಮತ್ತು ವ್ಯವಸ್ಥಿತವಾಗಿ ಬಳಸಿಕೊಂಡಿದ್ದಾರೆ.

hpk-jpegಐಸಿಸ್ ಜಗತ್ತಿಗೆ ಕಲಿಸಿದ ಪಾಠ: ವಿಶ್ವವಾಣಿಜ್ಯ ಕೇಂದ್ರದ ದಾಳಿಯ ನಂತರ ಅಮೆರಿಕ ಲಾಡೆನ್ ಮತ್ತು ಆತನ ಅಲ್ ಕಾಯಿದಾವನ್ನು ಹೆಡೆಮುರಿ ಕಟ್ಟಿತು ನಿಜ. ಆದರೆ ಜಗತ್ತಿನ ರಾಷ್ಟ್ರಗಳಿಗೆ ಅದಕ್ಕಿಂತ ಭಯಾನಕ ಸವಾಲು ಎದುರಾದದ್ದು ಐಸಿಸ್ ಉಗ್ರರಿಂದ. ಅಲ್ ಕಾಯಿದಾ ಉಗ್ರರ ವಿಷಯದಲ್ಲಿ ಮುಸ್ಲಿಮೇತರ ಮತ್ತು ಕ್ರೖೆಸ್ತ ಬಹುಸಂಖ್ಯಾತ ರಾಷ್ಟ್ರಗಳು ಎಚ್ಚೆತ್ತುಕೊಂಡಿದ್ದವು. ಆದರೆ ಐಸಿಸ್ ಉಗ್ರರ ಉಪಟಳದಿಂದ ಸ್ವತಃ ಇರಾಕ್, ಇರಾನ್, ಸೌದಿ ಅರೇಬಿಯಾದಂತಹ ಮುಸ್ಲಿಂ ಬಾಹುಳ್ಯದ ರಾಷ್ಟ್ರಗಳೂ ಚಿಂತೆಗೀಡಾದವು. ಇಂತಹ ಮೂಲಭೂತವಾದದಿಂದ ಯಾರಿಗೂ ನೆಮ್ಮದಿಯಿಲ್ಲ ಎಂಬುದನ್ನು ಆ ರಾಷ್ಟ್ರಗಳು ಅರಿತುಕೊಂಡವು. ಸೆ.18ರಂದು ಉರಿ ವಲಯದಲ್ಲಿ ಭಾರತೀಯ ಸೈನಿಕರ ಮೇಲೆ ಪಾಕಿಸ್ತಾನಿ ಉಗ್ರರು ದಾಳಿ ಮಾಡಿ ನಡೆಸಿದ ಹತ್ಯಾಕಾಂಡಕ್ಕೆ ಭಾರತ ಪ್ರತೀಕಾರ ಧೋರಣೆ ತಳೆದ ನಂತರ ಪಾಕಿಸ್ತಾನದೊಂದಿಗೆ ಸ್ನೇಹ ಹೊಂದಿದ್ದ ಇರಾನ್ ಮತ್ತು ನೆರೆಯ ಬಾಂಗ್ಲಾದೇಶ, ಕುವೈತ್, ಯುಎಇ, ಕತಾರ್ನಂತಹ ಮುಸ್ಲಿಂ ರಾಷ್ಟ್ರಗಳೂ ಭಾರತದ ಪರ ನಿಂತವು. ಈ ದೇಶಗಳು ಪಾಕಿಸ್ತಾನ ವಿರೋಧಿ ಧೋರಣೆಯನ್ನು ಗಟ್ಟಿಯಾಗಿ ತಾಳುವಲ್ಲಿ ಐಸಿಸ್ ಉಗ್ರರು ಜಗತ್ತಿನಲ್ಲಿ ಸೃಷ್ಟಿಸಿರುವ ಆತಂಕ, ಇಡೀ ಇಸ್ಲಾಮಿಗೆ ತರುತ್ತಿರುವ ಕಳಂಕ ಇತ್ಯಾದಿಗಳೇ ಕಾರಣ ಎಂಬುದನ್ನು ಯಾರೂ ಅಲ್ಲಗಳೆಯಲಾಗದು.

ಅನುಕೂಲಕ್ಕಾದ ‘ನೆರೆಹೊರೆ ಮೊದಲು’ ಎಂಬ ನಿಲುವು: ಆರಂಭದಲ್ಲಿ ಪ್ರಧಾನಿ ಮೋದಿಯ ವಿದೇಶಾಂಗ ನೀತಿಯ ಕುರಿತು ಹಲವು ಅನುಮಾನದ ಮಾತುಗಳು ಕೇಳಿಬಂದದ್ದು ನಿಜ. ಆದರೆ ಆ ಅನುಮಾನಗಳನ್ನು ದೂರ ಮಾಡಿದ್ದು ನೆರೆಹೊರೆ ಮೊದಲೆಂಬ ನಿಲುವಿನ ಮೂಲಕ 2014ರಲ್ಲಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರಕ್ಕೆ ಪಾಕಿಸ್ತಾನದ ಪ್ರಧಾನಿಯಿಂದ ಹಿಡಿದು ದಕ್ಷಿಣ ಏಷ್ಯಾದ ಎಲ್ಲ ನಾಯಕರನ್ನು ನವದೆಹಲಿಗೆ ಆಹ್ವಾನಿಸಿದ್ದು. ಅದಾದ ಕೆಲವೇ ದಿನಗಳಲ್ಲಿ ರಷ್ಯಾದ ಉಫಾ ಶೃಂಗಕ್ಕೂ ಮೊದಲು ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್ ಕಾಶ್ಮೀರದ ಪ್ರತ್ಯೇಕತಾವಾದಿಗಳ ಜತೆಗೆ ಮಾತುಕತೆಗೆ ಮುಂದಾದಾಗ ಭಾರತ-ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ರದ್ದು ಮಾಡಿ ಮೋದಿ ಸರ್ಕಾರ ತನ್ನ ಖಡಕ್ ನಡೆ ಪ್ರದರ್ಶಿಸಿತು. ಅದು ಕಾಶ್ಮೀರದ ವಿಷಯದಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸಲು ಅವಕಾಶ ಇಲ್ಲ ಎಂಬುದರ ಸ್ಪಷ್ಟ ಸೂಚನೆ ಆಗಿತ್ತು. ಅಷ್ಟಾದರೂ 2015ರಲ್ಲಿ ಪ್ಯಾರಿಸ್ ಹವಾಮಾನ ಶೃಂಗದ ಸಂದರ್ಭದಲ್ಲಿ ಪ್ರಧಾನಿ ಮೋದಿ ಪಾಕ್ ಪ್ರಧಾನಿ ಷರೀಫ್ ಜೊತೆ ಮುಖಾಮುಖಿ ಆಗುವುದನ್ನು ನಿರಾಕರಿಸಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಎಲ್ಲರೂ ಹುಬ್ಬೇರಿಸುವಂತಾದ್ದು ಆಫ್ಘಾನಿಸ್ತಾನ ಪ್ರವಾಸದಿಂದ ವಾಪಸಾಗುವ ವೇಳೆ ಲಾಹೋರ್ನಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಮೊಮ್ಮಗಳ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಾಶಯ ಹೇಳಿದ್ದು. ಈ ಘಟನೆ ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸಂಬಂಧದ ವಿಷಯದಲ್ಲಿ ಹೊರ ಜಗತ್ತಿಗೆ ಸ್ಪಷ್ಟ ಸಂದೇಶ ರವಾನಿಸಿತ್ತು. ಆದರೆ ಅದಾಗಿ ಒಂದು ವಾರದಲ್ಲಿ ನಡೆದ ವಿದ್ಯಮಾನವೇ ಬೇರೆ. ಪ್ರಧಾನಿ ಮೋದಿಯ ರಾಜತಾಂತ್ರಿಕ ನಡೆಯನ್ನು ಮರೆಮಾಚಲು ಹೂಟ ಹೂಡಿದ ಪಾಕಿಸ್ತಾನ ಪಂಜಾಬ್ನ ಪಠಾಣ್ಕೋಟ್ನ ವಾಯುನೆಲೆ ಮೇಲೆ ಉಗ್ರರ ದಾಳಿಗೆ ಕುಮ್ಮಕ್ಕು ನೀಡಿತು. ಆ ಘಟನೆಯಲ್ಲಿ ಪಾಕ್ ಉಗ್ರರ ಕೈವಾಡ ಇರುವುದನ್ನು ಆರಂಭದಲ್ಲಿ ಒಪ್ಪಿಕೊಂಡು ನಂತರ ಅದನ್ನು ನಿರಾಕರಿಸಿತು. ಅಷ್ಟು ಸಾಲದ್ದಕ್ಕೆ ಇದು ಪಾಕಿಸ್ತಾನದ ಮೇಲೆ ಕಪ್ಪುಚುಕ್ಕೆ ಇಡಲು ಭಾರತ ನಡೆಸುತ್ತಿರುವ ನಾಟಕ ಎಂದು ಗೂಬೆ ಕೂರಿಸಿತು ಬೇರೆ. ಆಗಲೂ ಭಾರತ ತಾಳ್ಮೆಯನ್ನು ಕಳೆದುಕೊಂಡಿರಲಿಲ್ಲ.

ಉಪಾಯಕ್ಕೆ ಬಂದ ಹೊಕ್ಕು-ಮಿಕ್ಕು ಗೆಲ್ಲುವ ತಂತ್ರ: ಕಳೆದ ಆಗಸ್ಟ್ 15ರಂದು ಕೆಂಪುಕೋಟೆಯಿಂದ ಭಾಷಣ ಮಾಡುವ ವೇಳೆ ಪ್ರಧಾನಿ ಮೋದಿ ಬಲೂಚಿಸ್ತಾನ, ಗಿಲ್ಗಿಟ್-ಬಾಲ್ಟಿಸ್ತಾನ ಪ್ರಸ್ತಾಪ ಮಾಡಿದ್ದು, ಪಠಾಣ್ಕೋಟ್ ವಾಯುನೆಲೆ ಮೇಲೆ ಪಾಕ್ ಪ್ರೇರಿತ ಉಗ್ರರು ನಡೆಸಿದ ದಾಳಿಗೆ ನೀಡಿದ ಪರೋಕ್ಷ ಉತ್ತರವಾಗಿತ್ತು. ಭಾರತದ ಈ ನಡೆಯಿಂದ ಪಾಕಿಸ್ತಾನ ವಿಚಲಿತವಾಗಿದ್ದು ಅಷ್ಟಿಷ್ಟಲ್ಲ. ಭಾರತ ಸರ್ಕಾರದ ಸ್ನೇಹದ ರೀತಿ ಮತ್ತು ಸಮರದ ನೀತಿ ಇವೆರಡರಿಂದಲೂ ಪಾಠ ಕಲಿಯದ ಪಾಕಿಸ್ತಾನ ಉರಿ ವಲಯದಲ್ಲಿ ಭಾರತದ ಸೇನಾ ಕ್ಯಾಂಪ್ನ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಮೂಲಕ ತನ್ನ ಹದ್ದು ಮೀರಿತ್ತು. ಆ ಮೂಲಕ ಇಡೀ ಜಗತ್ತಿನೆದುರು ತಾನೆಂತಹ ಬದ್ಮಾಶ್ ದೇಶ ಎಂಬುದನ್ನು ತಾನೇ ನಿರೂಪಿಸಿಕೊಳ್ಳಲು ಸೂಕ್ತ ವೇದಿಕೆಯನ್ನು ನಿರ್ವಿುಸಿಕೊಂಡುಬಿಟ್ಟಿತು.

ಆ ಹನ್ನೆರಡು ದಿನಗಳು: ಉರಿ ಸೇನಾ ಕ್ಯಾಂಪ್ನ ಮೇಲೆ ಭಯೋತ್ಪಾದಕ ದಾಳಿ ನಡೆದದ್ದು ಸೆಪ್ಟೆಂಬರ್ 17ರ ಮಧ್ಯರಾತ್ರಿಯಲ್ಲಿ. 19 ಭಾರತೀಯ ಯೋಧರು ಪ್ರಾಣ ಕಳೆದುಕೊಂಡರು ನಿಜ. ಮಾರನೇ ದಿನವೇ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ಯೋಜನೆಯನ್ನು ಭಾರತ ಸರ್ಕಾರ ತೆಗೆದುಕೊಂಡಿತು. ಮೊದಲು ನಡೆದದ್ದು ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ಸಮಾಲೋಚನೆ. ಅಲ್ಲೇ ಎಲ್ಲವೂ ತೀರ್ವನವಾಗಿತ್ತು.

ಅಮಾವಾಸ್ಯೆಯ ಹಿಂದಿನ ದಿನದ ಕಗ್ಗತ್ತಲಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ತರಬೇತಿ ನೆಲೆಗಳ ಮೇಲೆ ದಾಳಿ ಮಾಡುವುದೂ ತೀರ್ವನವಾಗಿತ್ತು. ಈ ಹತ್ತು ದಿನಗಳ ಕಾಲಾವಧಿಯಲ್ಲಿ ಜಾಗತಿಕ ಸಮುದಾಯದ ಬೆಂಬಲವನ್ನು ಹೇಗೆ ಗಳಿಸಬೇಕು, ಭಾರತದ ಗಡಿಗೆ ಹೊರತಾಗಿ ಆಫ್ಘಾನಿಸ್ತಾನ ಮತ್ತು ಇರಾನ್ ಗಡಿಯಲ್ಲಿ ಪಾಕಿಸ್ತಾನದ ಗಮನವನ್ನು ಹೇಗೆ ಸೆಳೆಯಬೇಕು ಎಂಬುದೆಲ್ಲವೂ ತೀರ್ವನವಾಗಿತ್ತು. ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಜಗತ್ತಿನ ದೇಶಗಳೆದುರು ಪಾಕಿಸ್ತಾನದ ಬಣ್ಣ ಬಯಲು ಮಾಡಿದರು. ಇತ್ತ ಇಸ್ಲಾಮಿಕ್ ಭಯೋತ್ಪಾದನೆಗೆ ಪಾಕಿಸ್ತಾನ ನೇರ ಕುಮ್ಮಕ್ಕು ಕೊಡುತ್ತಿರುವುದರಿಂದ ಲಾಹೋರ್ನಲ್ಲಿ ನಡೆಯುವ ಸಾರ್ಕ್ ಶೃಂಗವನ್ನು ಬಹಿಷ್ಕರಿಸುವುದಾಗಿ ಆಫ್ಘಾನಿಸ್ತಾನ, ಬಾಂಗ್ಲಾ, ಭೂತಾನ್ ಬಹಿರಂಗ ಘೊಷಣೆ ಮಾಡಿದವು. ರಾಜತಾಂತ್ರಿಕವಾಗಿ ಇಷ್ಟೆಲ್ಲ ನಡೆಯುತ್ತಿರುವುದರ ಜೊತೆಗೆ ಎನ್ಐಎ ಅಧಿಕಾರಿಗಳು ಉರಿ ದಾಳಿಯಲ್ಲಿ ಪಾಕಿಸ್ತಾನ ಸೇನೆ ಮತ್ತು ಸರ್ಕಾರದ ನೇರ ಪಾಲುದಾರಿಕೆ ಇರುವ ಕುರಿತು ಸಮಗ್ರ ಮಾಹಿತಿ ಕಲೆಹಾಕಿ ಪಾಕಿಸ್ತಾನ ಸರ್ಕಾರಕ್ಕೆ ಮತ್ತು ವಿಶ್ವ ಸಮುದಾಯಕ್ಕೂ ರವಾನಿಸಿದವು. ಅದಕ್ಕೆ ಸರಿಯಾಗಿ ಅಮಾವಾಸ್ಯೆಯ ಕಗ್ಗತ್ತಲ ರಾತ್ರಿ ಬಂದೇ ಬಿಟ್ಟಿತ್ತು. ಇರಾನ್ ಮತ್ತು ಆಫ್ಘಾನಿಸ್ತಾನ ಗಡಿಯಲ್ಲೂ ಪಾಕ್ ಸೈನಿಕರ ಮೇಲೆ ಗುಂಡಿನ ದಾಳಿ ಜೋರಾಗಿತ್ತು. ಅದೇ ಸಮಯದಲ್ಲಿ ಗಡಿ ನಿಯಂತ್ರಣ ರೇಖೆಗುಂಟ ಪಾಕ್ ಆಕ್ರಮಿತ ಕಾಶ್ಮೀರದ ಏಳು ಕಡೆಗಳಲ್ಲಿ ಇರುವ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ನಿರ್ದಿಷ್ಟ, ಯೋಜನಾಬದ್ಧ ದಾಳಿ ನಡೆಸಿ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿತ್ತು. ಅದೆಲ್ಲ ಸರಿ ಮುಂದೇನು, ಪಾಕಿಸ್ತಾನ ಮತ್ತು ಪಾಕಿಸ್ತಾನ ಪ್ರೇರಿತ ಉಗ್ರ ಸಂಘಟನೆಗಳ ಮುಂದಿನ ನಡೆ ಏನು ಎನ್ನುವುದು ಈಗ ಕಾಡುವ ಪ್ರಶ್ನೆ.

ಪಾಕ್ ವಿಷಯದಲ್ಲಿ ಕಠಿಣ ನಿಲುವು ಬೇಕು: ಈಗಿನ ಸನ್ನಿವೇಶದಲ್ಲಿ ಪಾಕಿಸ್ತಾನ ಅಕ್ಷರಶಃ ಏಕಾಂಗಿ. ಭಾರತದ ಹೊಡೆತ ಮತ್ತು ಜಾಗತಿಕ ಒತ್ತಡದಿಂದ ಅದು ಹೆದರಿ ಕಮರಿಹೋಗಿದೆ ಈಗ. ಅಣ್ವಸ್ತ್ರವಲ್ಲ ಗಟ್ಟಿ ಉಸಿರನ್ನೇ ತೆಗೆಯುವ ಸ್ಥಿತಿಯಲ್ಲಿ ಆ ದೇಶ ಈಗಿಲ್ಲ. ಭಾರತದೊಂದಿಗೆ ಹಗೆ ಸಾಧಿಸುವ ಚೀನಾ ಕೂಡ ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನದೊಂದಿಗೆ ತನ್ನ ಸಹಮತ ಇಲ್ಲ ಎಂದು ಘೊಷಿಸಿರುವುದು ಮಹತ್ವದ್ದು. ಪಾಕನ್ನು ಸಂಪೂರ್ಣ ಸದೆಬಡಿಯಲು ಇದಕ್ಕಿಂತ ಉತ್ತಮ ಸಂದರ್ಭ ಇನ್ನು ಸಿಗುವುದು ಅನುಮಾನ. ಈ ಸಂದರ್ಭದಲ್ಲಿ ಕನಿಷ್ಠ ಐದು ವರ್ಷ ಕಾಲ ಪಾಕಿಸ್ತಾನದೊಂದಿಗೆ ವಾಣಿಜ್ಯಿಕ, ರಾಜಕೀಯ, ರಾಜತಾಂತ್ರಿಕ ಸಂಬಂಧ ಕಡಿದುಕೊಂಡು ಜಗತ್ತಿನೆದುರು ಆ ದೇಶವನ್ನು ಮತ್ತಷ್ಟು ಬೆತ್ತಲುಗೊಳಿಸಬೇಕು. ಆರ್ಥಿಕವಾಗಿ, ವಾಣಿಜ್ಯಿಕವಾಗಿ, ರಾಜತಾಂತ್ರಿಕವಾಗಿ ಮರ್ವಘಾತ ನೀಡಬೇಕು. ಮುಖ್ಯವಾಗಿ ಯಾವ ಕಾರಣಕ್ಕೂ ಆ ದೇಶದೊಂದಿಗೆ ಸ್ನೇಹಹಸ್ತ ಚಾಚಲು ಹೋಗಬಾರದು.

ಕಾಶ್ಮೀರ ಹಿಡಿತಕ್ಕೆ ಬರಬೇಕು: ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರದ ಕಾರ್ಯವೈಖರಿ ವಿಷಯದಲ್ಲಿ ರಾಷ್ಟ್ರವಾದಿ ಜಮ್ಮು-ಕಾಶ್ಮೀರದ ನಾಗರಿಕರಿಗೆ, ಜಮ್ಮು-ಕಾಶ್ಮೀರ ವಿಷಯ ತಜ್ಞರಿಗೆ ಒಂದಿಷ್ಟೂ ತೃಪ್ತಿ ಇಲ್ಲ ಎಂಬುದು ಬಹಿರಂಗ ಸತ್ಯ. ಈ ಹಿನ್ನೆಲೆಯಲ್ಲಿ ಅಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಮತ್ತು ರಾಜ್ಯದ ಅಖಂಡತೆಯನ್ನು ಕಾಯ್ದುಕೊಳ್ಳುವುದೇ ಕೇಂದ್ರ ಸರ್ಕಾರದ ಆದ್ಯತೆ ಆಗಬೇಕೇ ಹೊರತು ಕಾಶ್ಮೀರದಲ್ಲಿನ ಮೈತ್ರಿ ಸರ್ಕಾರದ ಮೂಲಕ ಸೆಕ್ಯುಲರ್ ರಾಜಕೀಯದ ಸಂದೇಶ ಕಳಿಸುವುದಲ್ಲ.

ಆಂತರಿಕ ಸುರಕ್ಷೆಗೆ ಬೇಕು ಆದ್ಯತೆ: ಭಯೋತ್ಪಾದಕರು ಸಕ್ರಿಯವಾಗಿರುವುದು ಪಾಕಿಸ್ತಾನದ ಗಡಿಯಲ್ಲಿ ಮಾತ್ರವಲ್ಲ, ದೇಶದ ಒಳಗೆ ನಾನಾ ಕಡೆಗಳಲ್ಲಿ ಪಾಕ್ ಪ್ರೇರಿತ ಉಗ್ರರ ಸ್ಲೀಪರ್ ಸೆಲ್ಗಳು ಕೆಲಸ ಮಾಡುತ್ತಿವೆ ಎಂಬುದನ್ನು ಗುಪ್ತಚರ ದಳ ಹತ್ತಾರು ಸಂದರ್ಭಗಳಲ್ಲಿ ಹೇಳಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಭಯೋತ್ಪಾದನೆ ಭಾರತದ ಆಂತರಿಕ ಸಮಸ್ಯೆ ಎಂದು ಬಿಂಬಿಸುವ ದೃಷ್ಟಿಯಿಂದ ಪಾಕಿಸ್ತಾನ ದೇಶದೊಳಗಿರುವ ಸ್ಲೀಪರ್ ಸೆಲ್ಗಳಿಗೆ ಕುಮ್ಮಕ್ಕು ಕೊಡುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು. ಈ ಹಿನ್ನೆಲೆಯಲ್ಲಿ ಆಂತರಿಕ ಸುರಕ್ಷೆಯ ಬಗ್ಗೆ ಕೇಂದ್ರ ಸರ್ಕಾರ ತುರ್ತು ಗಮನ ಹರಿಸಬೇಕಿದೆ.

‘ಆಕ್ರಮಣಕಾರಿ ನೀತಿಯೇ ಉತ್ತಮ ರಕ್ಷಣಾ ಉಪಾಯ’ ಅನ್ನುವ ಮಾತಿದೆ. ಚೀನಾದ ಖ್ಯಾತ ಮಿಲಿಟರಿ ತಂತ್ರಗಾರ ಸನ್ ಜು, ಇಟಲಿಯ ತತ್ತ್ವಶಾಸ್ತ್ರಜ್ಞ ನಿಕೋಲ್ ಮೆಕೆವೆಲ್ಲಿ, ಅಮೆರಿಕದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೀರೋ ಜಾರ್ಜ್ ವಾಷಿಂಗ್ಟನ್, ಮಾವೋ ಜಡಾಂಗ್ ಮುಂತಾದವರೆಲ್ಲ ಇದೇ ನೀತಿಯ ಮೇಲೆ ಒಲವುಳ್ಳವರಾಗಿದ್ದರು. ಈಗಿನ ಸಂದರ್ಭದಲ್ಲಿ ಭಾರತಕ್ಕೂ ಇದೇ ನೀತಿ ಸರಿಯಾದದ್ದು ಎಂದು ತೋರುತ್ತದೆ. ಮುಂದಿನ ಆಟವನ್ನು ಕಾದು ನೋಡಿದರಾಯಿತು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top