ಮುಸ್ಲಿಮರನ್ನು ದಾರಿ ತಪ್ಪಿಸಿದ್ದು ʼಕಮ್ಯುನಿಸ್ಟ್ʼ ಇತಿಹಾಸಕಾರರು! : ವಿಸ್ತಾರ ಅಂಕಣ

ಶ್ರೀರಾಮ ನಮ್ಮವನು ಎಂದು ಅಯೋಧ್ಯೆಯ ಮುಸ್ಲಿಮರೂ ಎದೆಯುಬ್ಬಿಸಿ ಹೇಳುತ್ತಿದ್ದಾರೆ. ಕಮ್ಯುನಿಸ್ಟ್‌ ಇತಿಹಾಸಕಾರರ ಸುಳ್ಳು ಪ್ರಚಾರ ವ್ಯರ್ಥವಾಗುತ್ತಿದೆ. ಇದು ಬದಲಾವಣೆಯ, ಐಕಮತ್ಯದ ಗಾಳಿ.
*****************************
2019ರಲ್ಲಿ ರಾಮ ಮಂದಿರ ಕುರಿತು ಸುಪ್ರೀಂಕೋರ್ಟ್ ತನ್ನ ಐತಿಹಾಸಿಕ ಅಂತಿಮ ತೀರ್ಪು ಪ್ರಕಟಿಸಿತು. 2.7 ಎಕರೆ ವಿವಾದಿತ ಭೂಮಿಯನ್ನು ಹಿಂದೂಗಳಿಗೆ ಕೊಡಬೇಕು, ಮುಸ್ಲಿಮರು ಮಸೀದಿ ನಿರ್ಮಿಸಿಕೊಳ್ಳಲು 5 ಎಕರೆ ಜಾಗ ಕೊಡಬೇಕು ಎಂದು ತಿಳಿಸಿತು. ಈ ತೀರ್ಪಿನ ನಂತರ ದೇಶದಲ್ಲಿ ದಂಗೆಗಳಾಗುತ್ತವೆ ಎಂದು ಎಲ್ಲರೂ ಭಾವಿಸಿದ್ದರು. ಇದಕ್ಕಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು. ದೇಶದೆಲ್ಲೆಡೆಯ ಪೊಲೀಸ್, ಅರೆ ಭದ್ರತಾ ಪಡೆ ಸೇರಿ ಎಲ್ಲರಿಗೂ ಅಲರ್ಟ್ ಮಾಡಲಾಗಿತ್ತು.
ಆಮೇಲೆ ಎಲ್ಲಿಯೂ ದಂಗೆಗಳು ಆಗಲಿಲ್ಲ ಎನ್ನುವುದು ಬೇರೆಯ ಮಾತು. ಅದಕ್ಕೆ ಇಡೀ ದೇಶದ ಜನರು ಅಭಿನಂದನಾರ್ಹರು. ಆದರೆ ಇಲ್ಲಿರುವ ಪ್ರಶ್ನೆ, ಸುಪ್ರೀಂಕೋರ್ಟ್ ತೀರ್ಪು ಹೊರಬಂದ ನಂತರ ದಂಗೆಯ ಸಾಧ್ಯತೆ ಇದ್ದದ್ದು ಯಾರಿಂದ? ಏಕೆಂದರೆ, ವಿವಾದಿತ ಕಟ್ಟಡವನ್ನು ಕರಸೇವೆಯಲ್ಲಿ ಕೆಡವುವ ಮುನ್ನವೇ ಭಾರತೀಯ ಪುರಾತತ್ವ ಸರ್ವೇಕ್ಷಣ ನಡೆಸಿದ್ದ ಸಮೀಕ್ಷೆಯಲ್ಲೆ, ಮಸೀದಿಯ ಕೆಳಭಾಗದಲ್ಲಿ, ಇಸ್ಲಾಂಗೆ ಸಂಬಂಧಿಸದ ನಿರ್ಮಾಣವೊಂದಿತ್ತು ಎನ್ನುವುದು ಸಾಬೀತಾಗಿತ್ತು. ಆನಂತರ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿ, ಬಹುಪಾಲು ಹಿಂದುಗಳಿಗೇ ಜಯವನ್ನು ನೀಡಿತ್ತು. ಭೂಮಿಯನ್ನು ಮೂರು ಭಾಗ ಮಾಡುವ ತೀರ್ಪು ಯಾವ ಕಡೆಯವರಿಗೂ ಸಮಾಧಾನ ನೀಡದ ಕಾರಣ ಸುಪ್ರೀಂಕೋರ್ಟ್ಗೆ ಹೋಗಿದ್ದರೇ ವಿನಃ, ಬಾಬರಿ ಕಟ್ಟಡದ ಸ್ಥಳದಲ್ಲಿ ಹಿಂದೂ ಸಂಸ್ಕೃತಿಯ ಅವಶೇಷವೊಂದಿತ್ತು ಎನ್ನುವುದರಲ್ಲಿ ಯಾವ ಅನುಮಾನವೂ ಉಳಿದಿರಲಿಲ್ಲ. ಅಲ್ಲಿಗೆ, ಅಯೋಧ್ಯೆ ವಿವಾದದಲ್ಲಿ ಹಿಂದೂಗಳ ಪರವಾಗಿ ತೀರ್ಪು ಹೊರಬೀಳುತ್ತದೆ ಎನ್ನುವುದರಲ್ಲಿ ಬಹುಶಃ ಮುಸ್ಲಿಮರಿಗೂ ಹೆಚ್ಚಿನ ಅನುಮಾನಗಳು ಉಳಿದಿರಲಿಲ್ಲ. ಹಾಗಾದರೆ ಸುಪ್ರೀಂಕೋರ್ಟ್ ತೀರ್ಪು ಹೊರಬಂದ ನಂತರ, ಹಿಂದೂಗಳಿಗೆ ಜಯ ಸಿಗುತ್ತದೆ ಎನ್ನುವುದು ಖಾತ್ರಿಯಾದ ಮೇಲೆ ದಂಗೆಗಳನ್ನು ಮಾಡುವ ಸಾಧ್ಯತೆ ಯಾರಿಂದ ಇತ್ತು? ಯಾವ ಪ್ರಕರಣದಲ್ಲಾದರೂ ಗೆದ್ದವರು ಗಲಾಟೆ ಮಾಡುತ್ತಾರೆಯೇ?
ಹಾಗಾದರೆ ಈ ದೇಶದ ಮುಸ್ಲಿಂ ಸಮುದಾಯದ ಕುರಿತು ಈ ರೀತಿಯ ಭಾವನೆ ಮೂಡಲು ಕಾರಣವೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳಲೇಬೇಕು. ಈಗಾಗಲೇ ಅನೇಕ ಜಿನೆಟಿಕ್ ಅಧ್ಯಯನಗಳು ಈ ಕುರಿತು ನಡೆದಿದ್ದು, ಭಾರತದಲ್ಲಿರುವ ಮುಸ್ಲಿಂ ಸಮುದಾಯದಲ್ಲಿ ಬಹುಶಃ ಕೆಲವು ಮೇಲ್ಜಾತಿ ಮುಸ್ಲಿಮರ ಜೀನ್ ಮಾತ್ರವೇ ಅರಬ್ ದೇಶಗಳೆಡೆಗೆ ಬೊಟ್ಟುಮಾಡುತ್ತದೆ. ಉಳಿದಂತೆ ಎಲ್ಲ ಮುಸ್ಲಿಂ ಜನಸಂಖ್ಯೆಯ ಜೀನ್ಗಳೂ ಹೊಂದಿಕೆಯಾಗುವುದು ಭಾರತದ ಇತರೆ ಜನಸಂಖ್ಯೆ ಅಂದರೆ ಹಿಂದೂಗಳೊಂದಿಗೆ. ಇದೇ ಮಾತನ್ನು ಆರ್ಎಸ್ಎಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಅನೇಕ ಬಾರಿ ಉಲ್ಲೇಖಿಸಿ, ಇಬ್ಬರ ಡಿಎನ್ಎ ಒಂದೇ ಅಲ್ಲವೇ ಎಂದು ತಿಳಿಸಿದ್ದಾರೆ. ಇದೇ ನೆಲದಲ್ಲಿ ಜನಿಸಿ, ವಿವಿಧ ಕಾರಣಕ್ಕೆ ಮತಾಂತರವಾಗಿರುವ ಮುಸ್ಲಿಂ ಸಮುದಾಯವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದಾರಿ ತಪ್ಪಿಸುತ್ತಿರುವುದು ಇಂದು ನಿನ್ನೆಯ ವಿಚಾರವಲ್ಲ.
ಭಾರತಕ್ಕೆ ಸ್ವಾತಂತ್ರ್ಯ ಲಭಿಸಬೇಕು ಎಂದು ಹಿಂದೂಗಳೊಟ್ಟಿಗೆ ಹೋರಾಟ ನಡೆಸುತ್ತಿದ್ದ ಮುಸ್ಲಿಮರ ಮನಸ್ಸಿನಲ್ಲಿ ಪ್ರತ್ಯೇಕತೆಯ ಬೀಜ ಬಿತ್ತಿದವರು ಸೈಯದ್ ಅಹ್ಮದ್ ಖಾನ್, ಮಹಮ್ಮದ್ ಅಲಿ ಜಿನ್ನಾ ಮುಂತಾದ ಮುಸ್ಲಿಂ ಮುಖಂಡರು. ತಮ್ಮ ಬೇಳೆ ಬೇಯಿಸಿಕೊಳ್ಳಲು ಇದು ಅನುಕೂಲವಾಗುತ್ತದೆ ಎಂದು ಬೆಂಕಿಗೆ ತುಪ್ಪ ಸುರಿದವರು ಕ್ರೈಸ್ತ ಬ್ರಿಟಿಷರು. ಭಾರತ ಸ್ವತಂತ್ರವಾದ ಮೇಲೆ ಅನೇಕರು ಪಾಕಿಸ್ತಾನಕ್ಕೆ ಹೋದರು. ಆದರೆ ಬಹುದೊಡ್ಡ ಸಂಖ್ಯೆಯ ಮುಸ್ಲಿಮರು ಭಾರತದಲ್ಲೇ ಉಳಿದರು. ಭಾರತದಲ್ಲೇ ತಮಗೆ ಸುರಕ್ಷತೆಯಿದೆ ಎಂದು ಅರಿತುಕೊಂಡರು. ಆದರೆ ಅವರ ಮನಸ್ಸಿನಲ್ಲೂ ವಿಷಬೀಜ ಬಿತ್ತುವ ಕಾರ್ಯ ಆರಂಭವಾಯಿತು.
ಬ್ರಿಟಿಷರು ಬರುವುದಕ್ಕೆ ಮುನ್ನ ಈ ದೇಶವನ್ನು ಮುಸ್ಲಿಮರೇ ಆಳುತ್ತಿದ್ದೆವು, ಈಗ ನೋಡಿದರೆ ಬ್ರಿಟಿಷರು ಅಧಿಕಾರವನ್ನು ಹಿಂದುಗಳಿಗೆ ಕೊಟ್ಟು ಹೋಗುತ್ತಿದ್ದಾರೆ. ಹೇಗಾದರೂ ಮತ್ತೆ ತಮ್ಮ ಆಳ್ವಿಕೆಯನ್ನು ಮರುಸ್ಥಾಪನೆ ಮಾಡಬೇಕು ಎಂಬ ಶಾಶ್ವತವಾದ ಮೌಢ್ಯವೊಂದನ್ನು ಬಿತ್ತಿದರು. ಇಂದಿಗೂ ಕಟ್ಟರ್ಪಂಥೀಯ ಮುಸ್ಲಿಮರಲ್ಲಿ ಈ ಭಾವನೆಯನ್ನು ಉಳಿಸಲಾಗಿದೆ. ರಾಮಮಂದಿರ ತೀರ್ಪು ಬಂದಾಗಲೂ ಅಷ್ಟೆ. ಅಲ್ಲಿ ಮಂದಿರ ಇತ್ತು ಎನ್ನುವುದನ್ನು ಸುಪ್ರೀಂಕೋರ್ಟ್ ಒಪ್ಪಿಯೇ ಇಲ್ಲ ಎಂದು ಅನೇಕರು ವಾದಿಸುತ್ತಿದ್ದಾರೆ.
ಇತ್ತೀಚೆಗೆ ಸುವರ್ಣ ನ್ಯೂಸ್‌ನ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕರೊಬ್ಬರು ಈ ಮಾತನ್ನು ಹೇಳಿದಾಗ ಅಲ್ಲಿದ್ದ ನಿರೂಪಕರಿಗೂ ಅಚ್ಚರಿಯಾಯಿತು. ʼಅಲ್ಲಿ ಮಂದಿರ ಇರಲಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಹಿಂದುಗಳಿಗೆ ಭೂಮಿ ಕೊಟ್ಟುಬಿಡಿ (ಬೇಜಾರಾಗಬಾರದು ಎಂಬ ಕಾರಣಕ್ಕೆ) ಎಂದು ಸುಪ್ರೀಂಕೋರ್ಟ್ ಹೇಳಿದೆʼ ಎಂದು ಮುಸ್ಲಿಂ ಸಭಿಕರೊಬ್ಬರು ಹೇಳಿದರು. ಇಂತಹ ಮಾಹಿತಿಗಳು ಇವರ ತಲೆಗಳಿಗೆ ತುಂಬುತ್ತಿರುವವರು ಯಾರು? 1000 ಪುಟದ ತೀರ್ಪಿನಲ್ಲಿ ಎಲ್ಲಿಯಾದರೂ, ಮಂದಿರ ಇರಲಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿಯೇ ಇಲ್ಲ. ಆದರೂ ಈ ತೀರ್ಪನ್ನು ತಿರುಚಿ ಸಾಮಾನ್ಯ ಮುಸ್ಲಿಮರ ತಲೆಕೆಡಿಸುವ ಕೆಲಸ ನಡೆಯುತ್ತಿರುವುದಕ್ಕೆ ಇದೇ ಸಾಕ್ಷಿ. ಈಗ ನಾವಿರುವ ಮಾಹಿತಿ ತಂತ್ರಜ್ಞಾನ ಯುಗದಲ್ಲೂ ಎಷ್ಟರಮಟ್ಟಿಗೆ ಸುಳ್ಳು ಸುದ್ದಿಗಳನ್ನು ಹೇಳಿ ನಂಬಿಸಲಾಗುತ್ತದೆ ಎಂದರೆ ಅಂಥವರ ʼಸಾಮರ್ಥ್ಯʼ ಎಷ್ಟಿರಬಹುದು ಎನ್ನುವುದು ಅಚ್ಚರಿ ಮೂಡಿಸುತ್ತದೆ!
1990ರಲ್ಲಿ ವಾಯ್ಸ್ ಆಫ್ ಇಂಡಿಯಾ ಪ್ರಕಾಶನದ ವತಿಯಿಂದ ಅರುಣ್ ಶೌರಿ, ಹರ್ಷ್ ನಾರಾಯಣ್, ಜಯ್ ದುಬಾಷಿ, ರಾಮ್ ಸ್ವರೂಪ್ ಹಾಗೂ ಸೀತಾ ರಾಮ್ ಗೋಯೆಲ್ ಅವರನ್ನೊಳಗೊಂಡ ತಂಡ, ʼHINDU TEMPLES: WHAT HAPPENED TO THEM?ʼ ಎಂಬ ಅಧ್ಯಯನ ಸಂಪುಟಗಳನ್ನು ಪ್ರಕಟಿಸಿತು. ಕರ್ನಾಟಕದ ರಾಯಚೂರು, ವಿಜಯಪುರ, ಬಾಗಲಕೋಟೆ, ಬಾದಾಮಿ ಸೇರಿ ದೇಶದ ವಿವಿಧೆಡೆ ಇಸ್ಲಾಮಿಕ್ ಆಕ್ರಮಣಕಾರರು ಹೇಗೆ ದೇವಸ್ಥಾನಗಳನ್ನು ನಾಶಪಡಿಸಿದರು ಹಾಗೂ ಮಸೀದಿಗಳನ್ನು ನಿರ್ಮಿಸಿದರು ಎಂಬುದರ ಕುರಿತು ಕರಾರುವಕ್ಕಾದ ವಿವರ ನೀಡಿದ್ದಾರೆ. ವಿವಿಧ ಮೂಲಗಳ ಪ್ರಕಾರ ದೇಶಾದ್ಯಂತ ಸುಮಾರು 36 ಸಾವಿರ ದೇವಸ್ಥಾನಗಳು ನಾಶವಾಗಿರಬಹುದು. ಹಾಗಾದರೆ ಇದೀಗ ಹಿಂದೂಗಳು ಆ ಎಲ್ಲ ಸ್ಥಳಗಳಲ್ಲೂ ಮಂದಿರ ನಿರ್ಮಾಣಕ್ಕೆ ಕೇಳುತ್ತಿದ್ದಾರೆಯೇ? ಇಲ್ಲ. ಈಗಲ್ಲ, ಅನೇಕ ದಶಕಗಳಿಂದಲೂ ಹಿಂದೂಗಳು ಕೇಳುತ್ತಿರುವುದು ಅಯೋಧ್ಯೆ, ಕಾಶಿ ಹಾಗೂ ಮಥುರಾ ಮಾತ್ರ. ಯಾವುದೇ ಮಹಾಪುರುಷ, ದೈವೀಪುರುಷ ಜನ್ಮಿಸಿದ ಸ್ಥಳಕ್ಕೆ ಹಿಂದೂ ಧರ್ಮದಲ್ಲಿ ಮಹತ್ವವಿದೆ. ಅಯೋಧ್ಯೆಗಿಂತಲೂ ಹತ್ತುಪಟ್ಟು ದೊಡ್ಡ ದೇವಾಲಯವನ್ನು ಇನ್ನೊಂದು ಕಡೆ ಕಟ್ಟಬಹುದು. ಆದರೆ ಅದು ಭವ್ಯ ಮಂದಿರವಾಗುತ್ತದೆಯಷ್ಟೇ ವಿನಃ ಜನ್ಮಸ್ಥಾನ ಮಂದಿರ ಎಂದಿಗೂ ಆಗುವುದಿಲ್ಲ. ಹಾಗೆಯೇ ಮಥುರಾ. ಯುಗಯುಗಗಳಿಂದಲೂ ಜೀವಂತವಾಗಿ ನಡೆದುಕೊಂಡುಬಂದಿರುವ ನಗರವೆಂದರೆ ಕಾಶಿ. ಅಲ್ಲಿನ ವಿಶ್ವೇಶ್ವರ ದೇವಾಲಯವು ಈ ನಾಡಿನ ಹಿಂದೂಗಳ ಶ್ರದ್ಧಾಕೇಂದ್ರ. ಈ ಮೂರ್ನಾಲ್ಕು ಸ್ಥಳಗಳನ್ನು ಮುಸ್ಲಿಮರು ತಾವಾಗಿಯೇ ಬಿಟ್ಟುಕೊಟ್ಟರೆ ಏನು ಕಳೆದುಕೊಂಡಂತಾಗುತ್ತಿತ್ತು?
ರಾಮಮಂದಿರದ ಕೆಳಗಿನ ಅವಶೇಷಗಳ ಕುರಿತು ವಿಶೇಷ ಅಧ್ಯಯನ ನಡೆಸಿ ಸುಪ್ರೀಕೋರ್ಟ್ ಎದುರು ಅನೇಕ ಸಾಕ್ಷ್ಯಗಳನ್ನು ಒದಗಿಸಿದ ಸಂಶೋಧಕಿ ಮೀನಾಕ್ಷಿ ಜೈನ್ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಈ ಕುರಿತು ಮಾತನಾಡುತ್ತಿದ್ದರು. ʼ. . .ಬಿಜೆಪಿ, ವಿಎಚ್‌ಪಿ , ಆರ್ ಎಸ್ಎಸ್ ಮುಂತಾದ ಸಂಘಟನೆಗಳು ರಾಮಮಂದಿರ ನಿರ್ಮಾಣ ವಿಚಾರಕ್ಕೆ ಕೈಹಾಕುವ ದಶಕ, ಶತಮಾನಗಳ ಹಿಂದೆಯೇ ಪರ್ಷಿಯನ್ನರು, ಪಾಶ್ಚಿಮಾತ್ಯರು ಅಯೋಧ್ಯೆ ರಾಮಮಂದಿರದ ಕುರಿತು ದಾಖಲೆಗಳನ್ನು ಬರೆದಿಟ್ಟಿದ್ದರು. ಇಡೀ ವಿವಾದದಲ್ಲಿ ಹೊಸ ಸಾಕ್ಷ್ಯ ಎಂದರೆ ಎಎಸ್ಐ ನಡೆಸಿದ ಸರ್ವೇಕ್ಷಣೆ ಮಾತ್ರ. . . “. “. . . ಹಾಗಾಗಿ, 1989ರ ವೇಳೆಗೆ ಈ ದೇಶದ ಮುಸ್ಲಿಮರು, ಬಾಬರಿ ಕಟ್ಟಡದ ವಿಚಾರದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದರು. ಈ ಜಾಗವನ್ನು ಹಿಂದೂಗಳಿಗೇ ಬಿಟ್ಟುಬಿಡುವುದು ಸರಿಯಾದದ್ದು ಎಂಬ ನಿರ್ಧಾರಕ್ಕೆ ಬರುತ್ತಿದ್ದರು. ಆದರೆ 1989ರಲ್ಲಿ ಈ ದೇಶದ ಮಾರ್ಕ್ಸಿಸ್ಟ್, ಕಮ್ಯುನಿಸ್ಟ್ ಇತಿಹಾಸಕಾರರು ರಾಮಜನ್ಮಭೂಮಿ ವಿಚಾರಕ್ಕೆ ಕೈಹಾಕಿದರು. ಮುಸ್ಲಿಮರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೆ ನೀವು ಜಾಗವನ್ನು ಬಿಟ್ಟುಕೊಡಬೇಡಿ ಎಂದರು. ಇದಕ್ಕೆ ಬೇಕಾಗಿರುವ ಸಾಕ್ಷ್ಯಗಳನ್ನು ನಾವು ಒದಗಿಸುತ್ತೇವೆ ಎಂದು ದಾರಿತಪ್ಪಿಸಿದರು” ಎಂದು ಮೀನಾಕ್ಷಿ ಜೈನ್ ತಿಳಿಸಿದ್ದರು.
ಹಾಗೆ ನೋಡಿದರೆ, 19ನೇ ಶತಮಾನದಲ್ಲಿ ಅಯೋಧ್ಯೆಗೆ ಭೇಟಿ ನೀಡುವ ಬ್ರಿಟಿಷ್ ಅಧಿಕಾರಿಯೊಬ್ಬರು, ಮಂದಿರದ ಕುರುಹುಗಳು ಪತ್ತೆಯಾಗಿದ್ದ ಆ ಕಟ್ಟಡವನ್ನು ವಿವಾದಾಸ್ಪದ ಕಟ್ಟಡ ಎಂದೇ ದಾಖಲಿಸಿದ್ದಾರೆ. ಮಾತ್ರವಲ್ಲ, ವಿವಾದಾಸ್ಪದ ಕಟ್ಟಡದಲ್ಲಿ ರಾಮ ಮಂದಿರದ ಕುರುಹುಗಳಿವೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಕಮ್ಯುನಿಸ್ಟರು ಈ ಪ್ರಕರಣಕ್ಕೆ ಪ್ರವೇಶ ನೀಡುವವರೆಗೂ ಅದಕ್ಕೆ ವಿವಾದಾಸ್ಪದ ಕಟ್ಟಡ ಎಂದೇ ಕರೆಯಲಾಗುತ್ತಿತ್ತು. ಇದೆಲ್ಲದರ ಆಧಾರದ ಮೇಲೆಯೇ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, ವಿವಾದಾಸ್ಪದ ಕಟ್ಟಡದಲ್ಲಿ ರಾಮನ ಪೂಜೆಗೆ ಅವಕಾಶ ನೀಡುತ್ತಾರೆ. ಸ್ವಾರಸ್ಯ ಅಂದ್ರೆ, ಇದಕ್ಕೆ ಅಯೋಧ್ಯೆಯ ಮುಸ್ಲಿಮರೂ ವಿರೋಧ ವ್ಯಕ್ತಪಡಿಸುವುದಿಲ್ಲ. ಅಸಲು ಅವರಿಗೆ ಅದು ಬಾಬರಿ ಮಸೀದಿ ಎಂಬುದರ ಕುರಿತು ಖಚಿತ ಅಭಿಪ್ರಾಯವೂ ಇರಲಿಲ್ಲ. ಆದರೆ ಈ ಹಂತದಲ್ಲಿ ಕಮ್ಯುನಿಸ್ಟರು ಮಧ್ಯ ಪ್ರವೇಶಿಸಿ, ಇದೊಂದು ಬಾಬರಿ ಮಸೀದಿಯಾಗಿದ್ದು, ಯಾವುದೇ ಕಾರಣಕ್ಕೂ ರಾಮನನ್ನು ಪೂಜಿಸಲು ಅವಕಾಶ ನೀಡಬಾರದು ಎಂದು ಮುಸ್ಲಿಮರನ್ನು ಎತ್ತಿಕಟ್ಟುತ್ತಾರೆ. ಒಟ್ಟಾರೆ, ವಿವಾದಾಸ್ಪದ ಕಟ್ಟಡವನ್ನು ಮಸೀದಿ ಮಾಡಿದ್ದು ಕಮ್ಯುನಿಸ್ಟರು.
ಮುಸ್ಲಿಂ ಸಮುದಾಯವೂ ಈ ʼದಾರಿತಪ್ಪಿಸಲು ಅತ್ಯಂತ ಬದ್ಧತೆ ಹೊಂದಿರುವʼ ಕಮ್ಯುನಿಸ್ಟರನ್ನು ನಂಬಿತು. ಹೀಗೆಯೇ ಕಾಲ ಕಳೆದಂತೆ ಇಡೀ ಮುಸ್ಲಿಂ ಸಮುದಾಯಕ್ಕೆ ಬಾಬರಿ ಕಟ್ಟಡ ಎನ್ನುವುದು ಸ್ವಾಭಿಮಾನದ ಸಂಕೇತ ಎಂಬಂತೆ ಬಿಂಬಿಸಿ ವಿವಾದವನ್ನು ಜೀವಂತವಾಗಿಡಲಾಯಿತು. ಇಸ್ಲಾಂ ನಂಬಿಕೆ ಇರುವುದು ದೇವರ ಮೇಲೆಯೇ ವಿನಃ ಈ ದೇಶದ ಮೇಲೆ ಆಕ್ರಮಣ ಮಾಡಿದವರ ಮೇಲಲ್ಲ ಎನ್ನುವುದನ್ನು ತಿಳಿಸಬೇಕಾಗಿದೆ. ತಮ್ಮ ನಂಬಿಕೆ, ಆಚರಣೆಗಳಿಗೆ ಧಕ್ಕೆಯಾಗುವಂತೆ ಭಾರತವು ಯಾವುದೇ ಸಮುದಾಯದೊಂದಿಗೆ ನಡೆದುಕೊಂಡಿಲ್ಲ. ಆದರೆ ಅನವಶ್ಯಕವಾಗಿ ಕಮ್ಯುನಿಸ್ಟ್ ಬುದ್ಧಿಜೀವಿಗಳ ಸುಳಿಯಲ್ಲಿ ಸಿಲುಕುವುದರಿಂದ ಯಾವ ಸಮುದಾಯಕ್ಕೂ ಲಾಭವಿಲ್ಲ. ಇದೀಗ ರಾಮಮಂದಿರ ನಿರ್ಮಾಣ ಆಗುತ್ತಿದೆ. ಇಂತಹ ಸುಳಿಗಳಿಂದ ಹೊರಬಂದು ತಮ್ಮ ಸಮುದಾಯದ ಏಳಿಗೆ, ಆ ಮೂಲಕ ಒಟ್ಟಾರೆ ದೇಶದ ಏಳಿಗೆಯತ್ತ ಮುಸ್ಲಿಂ ಸಮುದಾಯವು ಗಮನಹರಿಸಲು ಆ ಸಮುದಾಯದ ಮುಖಂಡರು ಅವಕಾಶ ಮಾಡಿಕೊಡಬೇಕಷ್ಟೆ.
ಅದೃಷ್ಟವಶಾತ್ ಇಂಥದ್ದೊಂದು ಬದಲಾವಣೆ ಅಯೋಧ್ಯೆಯ ಮುಸ್ಲಿಮರಲ್ಲಿ ಕಾಣಿಸಿಕೊಂಡಿದೆ. ಕಮ್ಯೂನಿಷ್ಟರನ್ನು ನಂಬಿ ವಿವಾದಾಸ್ಪದ ಜಾಗಕ್ಕಾಗಿ ದಾವೆ ಹೂಡಿದ್ದ ಮುಸಲ್ಮಾನರು ಕೂಡ, ಜ.22ರ ಪ್ರಾಣ ಪ್ರತಿಷ್ಠಾನ ಮಹೋತ್ಸವದಲ್ಲಿ ಸಂಭ್ರಮದಿಂದ ಭಾಗವಹಿಸುತ್ತಿದ್ದಾರೆ. ರಾಮ ನಮ್ಮವನು ಎಂದು ಎದೆಯುಬ್ಬಿಸಿ ಹೇಳುತ್ತಿದ್ದಾರೆ. ಬದಲಾವಣೆಯ ಗಾಳಿ ಬೀಸಲಿ
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top