ವ್ಯವಸ್ಥೆ ಹಾಳಾಗಿದೆ, ಭ್ರಷ್ಟಾಚಾರ ಮಿತಿಮೀರಿದೆ ಎಂದು ಎಲ್ಲರಿಗೂ ಗೊತ್ತು. ಈ ಬಗ್ಗೆ ಕಿವಿತಮಟೆ ಹರಿದುಹೋಗುವಷ್ಟು ಮಾತುಗಳನ್ನು ಕೇಳಿದ್ದೇವೆ. ಆದರೆ ಎಲ್ಲೋ ಒಂದು ಕಡೆ ಶುದ್ಧೀಕರಣ ಪ್ರಕ್ರಿಯೆ ಆರಂಭವಾಗಲೇಬೇಕಲ್ಲವೆ?
ಈಚಿನ ಕೆಲ ನಿದರ್ಶನಗಳನ್ನು ನೋಡಿದರೆ ಆ ಕೆಲಸಕ್ಕೆ ಚಾಲನೆ ದೊರಕಿದಂತಿದೆ. ಆದರೆ ಇದಕ್ಕೂ ಅಪಸ್ವರವೆತ್ತುವವರ ಅಸಲಿಯತ್ತಾದರೂ ಏನು?
ಸುಖೀ ಜೀವನದ ಸೂತ್ರ ತಿಳಿದ ಮಹಾನುಭಾವರ ಹಿತವಚನ ಏನೆಂಬುದನ್ನು ನಾವು ಒಮ್ಮೆ ಮೆಲುಕು ಹಾಕುವುದು ಉಚಿತ. ಭಗವದ್ಗೀತೆಯನ್ನು ಉಪದೇಶಿಸಿದ ಶ್ರೀ ಕೃಷ್ಣ ಪರಮಾತ್ಮನಿಂದ ಹಿಡಿದು ಅಸಂಖ್ಯಾತ ಸಾಧು-ಸಂತರು, ದಾಸರು, ಶರಣರವರೆಗೆ, ಇಂದಿನ ಆಧುನಿಕಯುಗದ ಮ್ಯಾನೇಜ್ವೆುಂಟ್ ಗುರುಗಳವರೆಗೆ ಎಲ್ಲರೂ ಹೇಳಿದ್ದು ಒಂದೇ- ‘ನೀನು ನಿನ್ನ ಜೀವನದಲ್ಲಿ ಕಳೆದುಕೊಳ್ಳುವ ಬಗ್ಗೆ ಚಿಂತಿಸುವ ಮೊದಲು ಹುಟ್ಟುವಾಗ ತಂದಿರುವುದಾದರೂ ಏನು ಎಂಬುದನ್ನು ಆಲೋಚನೆ ಮಾಡು ಎಂಬ ಗೀತೆಯ ಸಾರವನ್ನು ಅರಿತುಕೊಂಡರೆ ಈ ಜಗತ್ತಿನಲ್ಲಿ ಆಸೆ, ಹಪಾಹಪಿ, ಮೋಸ, ವಂಚನೆ, ಅನಾರೋಗ್ಯಕರ ಪೈಪೋಟಿ ಇವೆಲ್ಲವೂ ಮಾಯವಾಗಿಬಿಡುತ್ತವೆ.’ ಇಲ್ಲಿ ಉಲ್ಲೇಖಿಸಿದ ಅನಿಷ್ಟಗಳೆಲ್ಲವೂ ನಿರಂತರವಾಗಿ ನೂರಾರು ವರ್ಷಗಳಿಂದ ಮುಂದುವರಿದುಕೊಂಡು ಬಂದಿವೆ ಎಂದರೆ ಅದಕ್ಕೆ ಕಾರಣ ಆ ಸರಳ ಸೂತ್ರವನ್ನು ಅರಿತುಕೊಳ್ಳಲು ವಿಫಲವಾಗಿರುವುದೇ ತಾನೆ? ಗೀತೋಪದೇಶದ ಗೂಢಾರ್ಥವನ್ನು ಜೀವನಕ್ಕೆ ಅನ್ವಯಿಸಿ ಮಾತೆ ಶಾರದಾದೇವಿ ‘ನಿನ್ನ ದುಃಖಕ್ಕೆ ನೀನೇ ಕಾರಣ’ಎಂದು ಹೇಳಿದ್ದಾರೆ. ಉದಾಹರಣೆಗೆ ಅವನು ನನಗೆ ಮೋಸ ಮಾಡಿದ, ಇವನು ನನಗೆ ಸುಳ್ಳು ಹೇಳಿದ ಎಂಬಿತ್ಯಾದಿ ವ್ಯರ್ಥಾಲಾಪಗಳು. ತುಸು ಆಲೋಚನೆ ಮಾಡಿದರೆ, ಯಾವುದೋ ಆಸೆಗೆ, ಇನ್ನಾವುದೋ ಭ್ರಮೆಗೆ ಸಿಲುಕಿ ನಾವೇ ಆತನ ಬಳಿಗೆ ಹೋಗಿರುತ್ತೇವೆ. ಆತ ಸಿಕ್ಕಿದ್ದೇ ಸೀರುಂಡೆ ಎಂದುಕೊಂಡು ಏಮಾರಿಸಿರುತ್ತಾನೆ ಎಂಬುದು ನಮಗೇ ಅರಿವಾಗುತ್ತದೆ. ಹಾಗೆಯೇ ‘ಆಸೆಯೇ ದುಃಖಕ್ಕೆ ಮೂಲ’ ಎಂದು ಬುದ್ಧ ಹೇಳಿದ್ದು ಅದರ ಮುಂದುವರಿದ ಭಾಗ ಅಷ್ಟೆ. ಶರಣರು, ದಾಸರು ಮೊದಲಾದವರೆಲ್ಲ ಗೀತೆ, ಬುದ್ಧನ ಮಾತುಗಳನ್ನೇ ಇನ್ನೊಂದು ರೀತಿಯಲ್ಲಿ ಹೇಳುತ್ತಾರೆ-‘ದೊಡ್ಡ ಬಂಗಲೆ ಇದ್ದ ಮಾತ್ರಕ್ಕೆ, ಹೇರಳವಾಗಿ ಹಣ ಸಂಪಾದನೆ ಮಾಡಿದ ಕಾರಣಕ್ಕೆ ಸುಖ-ಸಂತೋಷ ನಿಮ್ಮನ್ನು ಹುಡುಕಿಕೊಂಡು ಬರುವುದಿಲ್ಲ’. ಆದರೆ ಅಕ್ರಮ ಸಂಪಾದನೆ, ಕಾಳಧನ ಸಂಗ್ರಹದ ಪ್ರವೃತ್ತಿಗೆ ಕಡಿವಾಣ ಬಿತ್ತೇನು?
ನಮ್ಮಲ್ಲಿ ಭ್ರಷ್ಟಾಚಾರ, ಸ್ವಾರ್ಥ, ಸ್ವಜನಪಕ್ಷಪಾತದ ಕುರಿತು ಮಾತನಾಡುವವರಿಗೆ ಕಡಿಮೆ ಏನೂ ಇರಲಿಲ್ಲ. ಆದರೆ ಆ ಕೊರಗು, ಕಳವಳಕ್ಕೆ ಪರಿಹಾರ ಮಾತ್ರ ಸಿಕ್ಕಿರಲಿಲ್ಲ. ಯಾರು ಏನು ಬೇಕಾದರೂ ಹೇಳಲಿ. ಭ್ರಷ್ಟಾಚಾರ, ಕಾಳಧನ ಸಂಗ್ರಹ ಪ್ರವೃತ್ತಿಗೆ ನೋಟು ರದ್ದತಿ ಮರ್ವಘಾತವನ್ನೇ ಕೊಟ್ಟಿತು. ಕನಿಷ್ಠಪಕ್ಷ ದೇಶದಲ್ಲಿ ಬಚ್ಚಿಟ್ಟಿದ್ದ ಶೇ.50ರಷ್ಟು ಕಾಳಧನ ನೋಟು ರದ್ದತಿಯ ನಂತರ ನಿಷ್ಪ್ರಯೋಜಕವಾಯಿತು. ಹೇಳುವ ಹಾಗೂ ಇಲ್ಲ, ಸುಮ್ಮನೇ ಇರುವ ಹಾಗೂ ಇಲ್ಲ ಎಂಬಂತಾಯಿತು ಹಲವರ ಸ್ಥಿತಿ. ಕನಿಷ್ಠ ನಾಲ್ಕೈದು ವರ್ಷಕ್ಕೊಮ್ಮೆ ಇಂಥ ಪರಿಪಾಠ ತಂದರೆ ಕಾಳಧನ ಸಂಗ್ರಹ ಪ್ರವೃತ್ತಿ ಸಂಪೂರ್ಣ ನಿಂತುಹೋಗಬಹುದು. ಆಗ ಸಾವಿರ ರೂ. ನೋಟಿನ ಬದಲು ಎರಡು ಸಾವಿರ ರೂ. ಬಂತು. ಈಗ ನೂರು ರೂ.ನೋಟಿನ ಬದಲು ಇನ್ನೂರು ರೂ. ನೋಟು ಬರುತ್ತಿದೆ. ನೂರು, ಇನ್ನೂರು, ಐನೂರು, ಎರಡು ಸಾವಿರ ರೂ. ಬೇರೆ ಬೇರೆ ಸರಣಿಗಳಲ್ಲಿ ಪ್ರಿಂಟ್ ಮಾಡುತ್ತಿರುವುದನ್ನು ನೋಡಿದರೆ ಇನ್ನು ಮುಂದೆ ನೋಟು ರದ್ದತಿಯನ್ನು ವ್ಯವಸ್ಥಿತವಾಗಿ, ಯಾರಿಗೂ ತಾಪತ್ರಯ ಆಗದಂತೆ ಮಾಡುವ ಆಲೋಚನೆ ಸರ್ಕಾರಕ್ಕೆ ಇರಬಹುದು ಎಂಬುದು ನಿಚ್ಚಳ ಆಗುತ್ತದೆ. ಕೈಯಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣ ಸಂಗ್ರಹಿಸದೇ ಬ್ಯಾಂಕ್ ಮೂಲಕವೇ ವಹಿವಾಟು ಮಾಡುವ ಅನಿವಾರ್ಯತೆ ಸೃಷ್ಟಿಯಾದರೆ ಕಾಳಧನದ ಕುರಿತು ಮಾತನಾಡುವ ಪ್ರಮೇಯವೇ ಇರದು. ಇರಲಿ, ಈಗ ಹೇಳ ಹೊರಟಿರುವುದು ಮುಂದಿನ ಹಂತದ ಕುರಿತು. ಇಂದಿನಿಂದ ಜಾರಿಗೆ ಬಂದಿರುವ ಜಿಎಸ್ಟಿ (ಗೂಡ್ಸ್ ಆಂಡ್ ಸರ್ವಿಸ್ ಟ್ಯಾಕ್ಸ್) ಮತ್ತು ಅದರ ಪರಿಣಾಮಗಳ ಕುರಿತು.
ಸುತ್ತಮುತ್ತಲ ವಾತಾವರಣವನ್ನೊಮ್ಮೆ ಗಮನಿಸಿ. ನೋಟು ರದ್ದತಿ ಸಂದರ್ಭದಲ್ಲಿ ಯಾರೆಲ್ಲ ಬಡಬಗ್ಗರ ಬಗ್ಗೆ ಕಣ್ಣೀರಿನ ಬುಗ್ಗೆಯನ್ನೇ ಉಕ್ಕಿಸಿದ್ದರೋ ಅವರೇ ಇದೀಗ ಜಿಎಸ್ಟಿ ಜಾರಿಯ ಸಂದರ್ಭದಲ್ಲಿಯೂ ಚಡಪಡಿಸುತ್ತಿದ್ದಾರೆ- ಬಿಲದಲ್ಲಿ ಹೊಗೆ ಹಾಕಿದಾಗ ಇಲಿ ಹೆಗ್ಗಣಗಳು ಒದ್ದಾಡಿದಂತೆ. ಒಂದು ಪಾರದರ್ಶಕ ವ್ಯವಸ್ಥೆ ಜಾರಿಗೊಳ್ಳುತ್ತಿರುವುದನ್ನು, ಮುಖ್ಯವಾಗಿ ದೇಶಕ್ಕೆ ತೆರಿಗೆ ಸ್ವಾತಂತ್ರ್ಯ ಪ್ರಾಪ್ತಿ ಆಗುವುದನ್ನು ಕಣ್ತುಂಬಿಕೊಳ್ಳಲು ದೇಶದ ಜನರು ಕಾತರದಿಂದ ಕಾಯುತ್ತಿದ್ದರೆ ಜಿಎಸ್ಟಿ ಜಾರಿಯಿಂದ ಕಣ್ಣುರಿಗೆ ತುತ್ತಾದವರು ಪಲಾಯನ ಮಾಡಿಬಿಟ್ಟಿದ್ದಾರೆ. ಸೋನಿಯಾ ಗಾಂಧಿ ಆರ್ಥಿಕ ತಜ್ಞೆ ಅಲ್ಲ. ಅಕಸ್ಮಾತ್ತಾಗಿ, ಅನಿವಾರ್ಯವಾಗಿ ರಾಜಕೀಯಕ್ಕೆ ಬಂದವರು. ಹೀಗಾಗಿ ಅವರು ಜಿಎಸ್ಟಿ ವಿಶೇಷ ಅಧಿವೇಶನಕ್ಕೆ ಬೆನ್ನುಹಾಕಿದರೆ ಅಚ್ಚರಿಯಿಲ್ಲ. ಯಾವುದರ ಬಗ್ಗೆಯೂ ಗಾಂಭೀರ್ಯದ ಗಂಧವೇ ಇಲ್ಲದ, ಅನನುಭವಿ ರಾಹುಲ್ ಗಾಂಧಿ ಇದ್ಯಾವುದೂ ಸಂಬಂಧವೇ ಇಲ್ಲ ಅನ್ನುವ ಹಾಗೆ ವಿದೇಶದಲ್ಲಿ ಹಾಯಾಗಿದ್ದರೆ ಪರವಾಗಿಲ್ಲ. ಆದರೆ ಆರ್ಬಿಐ ಗವರ್ನರ್ ಆಗಿದ್ದ, ಹಣಕಾಸು ಸಚಿವರೂ ಆಗಿದ್ದ, ಆರ್ಥಿಕ ಸುಧಾರಣೆಯ ಹರಿಕಾರ ಎಂದು ಹೇಳಿಕೊಳ್ಳುವ, ನಮ್ಮ ಅವಧಿಯಲ್ಲೇ ಜಿಎಸ್ಟಿಗೆ ಓನಾಮ ಹೇಳಿದ್ದು ಎಂದು ಹೇಳಿಕೊಳ್ಳುವ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಜಿಎಸ್ಟಿ ಜಾರಿ ವಿಶೇಷ ಅಧಿವೇಶನಕ್ಕೆ ಬಹಿಷ್ಕಾರ ಹಾಕುತ್ತಾರೆಂದರೆ ಇವರ ಮಾನಸಿಕ ದಾಸ್ಯಕ್ಕೆ ಏನನ್ನಬೇಕೋ ಗೊತ್ತಾಗುತ್ತಿಲ್ಲ.
ಇರಲಿ, ಜಿಎಸ್ಟಿ ಒಂದು ಕ್ಲಿಷ್ಟವಾದ ವಿಚಾರ. ಅದು ಮೂಲದಲ್ಲಿ ಅಂದುಕೊಂಡ ರೀತಿಯಲ್ಲಿ ಈಗ ಜಾರಿಗೂ ಬರುತ್ತಿಲ್ಲ. ಹೀಗಾಗಿ ಜನಸಾಮಾನ್ಯರ ದೃಷ್ಟಿಯಿಂದ ಜಿಎಎಸ್ಟಿ ಏನು ಎತ್ತ ಎಂಬುದನ್ನು ಮಾತ್ರ ತಿಳಿದುಕೊಳ್ಳೋಣ.
ಸರ್ವರಿಗೂ ಸಮಪಾಲು ಮತ್ತು ಬಾಳು: ಇದುವರೆಗೆ ಈ ದೇಶದಲ್ಲಿ ಕರಾರುವಾಕ್ಕಾಗಿ ತೆರಿಗೆ ಕಟ್ಟುತ್ತಿದ್ದವರು ತಿಂಗಳ ಸಂಬಳಕ್ಕೆ ಕೆಲಸ ಮಾಡುವ ನೌಕರರು ಮತ್ತು ಪ್ರಾಮಾಣಿಕವಾಗಿ ಉದ್ದಿಮೆ ನಡೆಸುವ ಉದ್ಯಮಪತಿಗಳು ಮಾತ್ರ. ನೌಕರರು ನೂರಕ್ಕೆ ನೂರರಷ್ಟು ಮಂದಿ ತೆರಿಗೆ ಕಟ್ಟುತ್ತಿದ್ದರೆ, ಶೇ.ಇಪ್ಪತ್ತರಿಂದ ಮೂವತ್ತರಷ್ಟು ಮಂದಿ ಉದ್ಯಮಿಗಳು/ವ್ಯಾಪಾರಸ್ಥರು ಮಾತ್ರ ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಿದ್ದರು. ಇನ್ನು ಮುಂದೆ ವ್ಯಾಪಾರಿಗಳು, ಉದ್ಯಮಿಗಳು ಮತ್ತು ಗ್ರಾಹಕರು ಇವರೆಲ್ಲರೂ ಪಾರದರ್ಶಕವಾಗಿ ತೆರಿಗೆ ಸಲ್ಲಿಸುವ ಪ್ರಕ್ರಿಯೆಯಲ್ಲಿ ಒಳಗೊಳ್ಳಲೇಬೇಕಾಗುತ್ತದೆ. ಅದರ ಪರಿಣಾಮ ಏನೆಂದರೆ ಶೇ. ಇಪ್ಪತ್ತರಿಂದ ಮೂವತ್ತರಷ್ಟು ಜನರ ಮೇಲಿದ್ದ ತೆರಿಗೆ ಹೊರೆ, ಉಳಿದ ಎಪ್ಪತ್ತು ಎಂಭತ್ತರಷ್ಟು ಜನರ ಹೆಗಲಿಗೂ ವರ್ಗಾವಣೆ ಆಗಲಿದೆ. ಇದರ ನೇರ ಪರಿಣಾಮ ಎರಡು. ಒಂದು ತೆರಿಗೆ ಸಂಗ್ರಹದ ವ್ಯಾಪ್ತಿ ಶೇ.50ರಿಂದ ಶೇ.60ರಷ್ಟು ವಿಸ್ತಾರವಾಗಲಿದೆ. ಎರಡನೆಯದ್ದು ತೆರಿಗೆ ಬೇಸ್ ವಿಸ್ತಾರದ ಪರಿಣಾಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ತೊಡಕಾಗಿರುವ ಹಣಕಾಸಿನ ಕೊರತೆ ನಿವಾರಣೆಯಾಗುತ್ತದೆ. ತೆರಿಗೆ ಸಂಗ್ರಹ ವ್ಯಾಪ್ತಿ ಹೆಚ್ಚುವುದರಿಂದ ತೆರಿಗೆ ಪ್ರಮಾಣ ಇಳಿದರೆ ಅಥವಾ ಜಿಎಸ್ಟಿ ತೆರಿಗೆ ಅನುಸರಿಸುವ ಕೆಲ ಇತರ ದೇಶಗಳಂತೆ ಆದಾಯ ತೆರಿಗೆಯನ್ನು ರದ್ದುಮಾಡಿದರೂ ಅಚ್ಚರಿಯಿಲ್ಲ.
ಇಲ್ಲಿಯವರೆಗೆ ತೆರಿಗೆಯನ್ನು ನಿರ್ಧರಿಸುತ್ತಿದ್ದುದು ಆಯಾ ಸರ್ಕಾರಗಳು, ಹಣಕಾಸು ಮಂತ್ರಿಗಳು. ಇನ್ನು ಮುಂದೆ ರಾಜ್ಯ ಅಥವಾ ಕೇಂದ್ರ ಸರ್ಕಾರ ಮಂಡಿಸುವ ಬಜೆಟ್ನಲ್ಲಿ ತೆರಿಗೆ ನಿರ್ಧಾರ ಆಗುವುದಿಲ್ಲ. ಬಜೆಟ್ಗಿಂತ ಮೊದಲು ನಡೆಯುತ್ತಿದ್ದ ಉಳ್ಳವರ ಲಾಬಿ ನಡೆಯುವುದಿಲ್ಲ. ತೆರಿಗೆ ಏರಿಕೆಗೆ ಮುಖ ನೋಡಿ ಮಣೆಹಾಕುವ, ದುಡ್ಡು ಕೊಟ್ಟು ತೆರಿಗೆ ಮಿತಿ ಖರೀದಿಸುವ ಕೆಟ್ಟ ಸಂಪ್ರದಾಯಕ್ಕೆ ತೆರೆ ಬೀಳಲಿದೆ. ಜಿಎಸ್ಟಿ ಮಂಡಳಿ(ಕೌನ್ಸಿಲ್)ಇನ್ನು ತೆರಿಗೆ ಪ್ರಮಾಣವನ್ನು ನಿರ್ಧರಿಸುತ್ತದೆ. ಇದುವರೆಗೆ ಬಜೆಟ್ ಮಂಡನೆ ಎಂದರೆ ಯಾವುದು ಅಗ್ಗ ಆಗುತ್ತದೆ ಯಾವುದು ದುಬಾರಿ ಆಗುತ್ತದೆ ಎಂದು ಕುತ್ತಿಗೆ ಉದ್ದ ಮಾಡಿ ನೋಡಿ ನೋವು ತರಿಸಿಕೊಳ್ಳುತ್ತಿದ್ದವರು ಇನ್ನುಮುಂದೆ ನಮ್ಮೂರಿನ ರಸ್ತೆ, ಶಾಲೆ, ಆಸ್ಪತ್ರೆ, ವಿದ್ಯುತ್ಗೆ ನಮ್ಮ ಶಾಸಕರು, ಮಂತ್ರಿಗಳು ರಾಜ್ಯದ ಬೊಕ್ಕಸದಿಂದ ಎಷ್ಟು ದುಡ್ಡು ತರುತ್ತಾರೆ ಎಂದು ಕೇಳುವ-ನೋಡುವ ಕಾಲ ಬರುತ್ತದೆ.
ನಿಜಕ್ಕೂ ತೆರಿಗೆ ಎಷ್ಟು ಏನು?: ಇಲ್ಲಿವರೆಗೆ ಒಂದು ವಸ್ತುವಿನ ಮೇಲೆ ಸ್ಥಳೀಯ ಸಂಸ್ಥೆಗಳು, ರಾಜ್ಯಸರ್ಕಾರಗಳು, ಕೇಂದ್ರ ಸರ್ಕಾರಗಳು ಹತ್ತಾರು ವಿಧದ ತೆರಿಗೆ ವಿಧಿಸುತ್ತಿದ್ದವು. ನಿಜಕ್ಕೂ ಯಾವುದಕ್ಕೆ ಎಷ್ಟು ತೆರಿಗೆ ಎಂದು ಜನಸಾಮಾನ್ಯರಿಗೆ ಗೊತ್ತಾಗದ ಪರಿಸ್ಥಿತಿ ಇತ್ತು. ಪ್ರತ್ಯಕ್ಷ ತೆರಿಗೆಗಿಂತ ಪರೋಕ್ಷ ತೆರಿಗೆಯೇ ಹೆಚ್ಚಿರುತ್ತಿತ್ತು. ಇನ್ನು ಈ ಗೋಜಲು ಇರುವುದಿಲ್ಲ. ಒಂದು ವಸ್ತುವಿನ ಮೇಲೆ ಒಂದು ತೆರಿಗೆ, ಒಂದು ದರ ಇರಲಿದೆ.
ಪಾರದರ್ಶಕತೆ ಯುಗಾರಂಭ: ಇಲ್ಲಿಯವರೆಗೆ ಒಂದು ವಸ್ತುವನ್ನು ಕೊಂಡುಕೊಂಡರೆ ಅದರ ಮೂಲ ಬೆಲೆ ಎಷ್ಟು ತೆರಿಗೆ ಪಾಲೆಷ್ಟು ಎಂಬುದು ಗೊತ್ತಾಗುತ್ತಿರಲಿಲ್ಲ. ಇನ್ನು ಕೊಂಡುಕೊಳ್ಳುವುದು ಒಂದು ಸೂಜಿಯೇ ಆದರೂ ಅದರ ಉತ್ಪಾದನಾ ವೆಚ್ಚ ಎಷ್ಟು, ತೆರಿಗೆ ಎಷ್ಟು, ಲಾಭದ ಮಾರ್ಜಿನ್ ಎಷ್ಟು ಎಂಬುದು ಕಟ್ಟಕಡೆಯ ಗ್ರಾಹಕನೂ ತಿಳಿದುಕೊಳ್ಳಬಹುದು.
ಒಕ್ಕೂಟ ವ್ಯವಸ್ಥೆಗೆ ಬೆಲೆ ಬರುತ್ತಿದೆ: ಇಲ್ಲಿವರೆಗೆ ಒಕ್ಕೂಟ ವ್ಯವಸ್ಥೆ, ಭಾರತ ಅಂದರೆ ಏಕರಾಷ್ಟ್ರ ಎಂಬುದು ನಮ್ಮ ಸಂವಿಧಾನದಲ್ಲಿ ಮತ್ತು ರಾಜಕಾರಣಿಗಳ ಭಾಷಣದಲ್ಲಿ ಮಾತ್ರ ಇತ್ತು. ಇನ್ನುಮುಂದೆ ಜಿಎಸ್ಟಿ ಪರಿಣಾಮ ಒಂದು ರಾಷ್ಟ್ರ-ಒಂದೇ ತೆರಿಗೆ ಆಚರಣೆಗೆ ಬಂದು ನಿಜವಾದ ಒಕ್ಕೂಟ ವ್ಯವಸ್ಥೆ ಕಾಣಿಸಲಿದೆ. ತೆರಿಗೆ ದರ ನಿರ್ಧರಿಸುವ ಜಿಎಸ್ಟಿ ಕೌನ್ಸಿಲ್ನಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಸಮಾನ ಪ್ರಾತಿನಿಧ್ಯ ಇರುವುದು ಇದಕ್ಕೆ ಕಾರಣ.
ತೈಲ, ರಿಯಲ್ ಎಸ್ಟೇಟ್, ಮದ್ಯ, ಕೃಷಿ ಹೊರಗಿದೆಯಲ್ಲ?: ಕೆಲ ವರ್ಷಗಳ ಹಿಂದೆ ರಾಜಕೀಯದಲ್ಲಿ ಮದ್ಯದ ಲಾಬಿ ಪ್ರಭಾವಿ ಆಗಿತ್ತು. ನಂತರದಲ್ಲಿ ರಿಯಲ್ ಎಸ್ಟೇಟ್ ಆ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಪೆಟ್ರೋಲ್, ಡೀಸೆಲ್ನ ಮೂಲ ಬೆಲೆ ಎಷ್ಟು? ನಾವು ತೆರುವ ಬೆಲೆಯ ಅರ್ಧದಷ್ಟು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತರಹೇವಾರಿ ತೆರಿಗೆ ಪರಿಣಾಮ ತೈಲ ಬೆಲೆ ದುಪ್ಪಟ್ಟಾಗಿದೆ. ಇಲ್ಲೂ ಏಕರೂಪ ತೆರಿಗೆ ತರಲು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ರಾಜ್ಯಸರ್ಕಾರಗಳು ಸುತಾರಾಂ ಒಪ್ಪಲಿಲ್ಲ. ಹೀಗಾಗಿ ಜಿಎಸ್ಟಿ ಲಾಭ ಇಂಧನ ಬಳಕೆದಾರರಿಗೆ ಸಿಗುತ್ತಿಲ್ಲ. ಇನ್ನು ಈಗಾಗಲೇ ಕೃಷಿ ವಲಯ ಅನಾದರಕ್ಕೊಳಗಾಗಿದೆ ಎಂಬ ಗುಲ್ಲಿದೆ. ಈಗ ಜಿಎಸ್ಟಿ ವ್ಯಾಪ್ತಿಗೆ ತಂದು ಬಿಟ್ಟರೆ ರೈತಾಪಿ ವರ್ಗಗಳಿಗೆ ಅನ್ಯಾಯ ಆಗುತ್ತದೆ ಎಂಬ ಗುಲ್ಲೇಳುತ್ತದೆ. ಹೀಗಾಗಿ ಕೃಷಿ ಕ್ಷೇತ್ರ ಜಿಎಸ್ಟಿಯಿಂದ ಹೊರಗಿದೆ. ಹಾಗಾದರೆ ಈಗ ಸರ್ಕಾರಗಳು ಗೊಬ್ಬರಕ್ಕೆ, ಕೃಷಿ ಉಪಕರಣಕ್ಕೆ ತೆರಿಗೆ ಹಾಕುತ್ತಿಲ್ಲವೇ? ರೈತರು ಬೆಳೆಯುವ ಬೆಳೆಯನ್ನು ಪ್ಯಾಕ್ ಮಾಡಿ ದುಬಾರಿ ಬೆಲೆಗೆ ಮಾರುತ್ತಿಲ್ಲವೇ? ಇದೆಲ್ಲದರ ಆದಾಯದ ಲಾಭ ರೈತರಿಗೇ ನೇರವಾಗಿ ಸಿಗುತ್ತಿದೆಯೇ? ಜಿಎಸ್ಟಿಯಿಂದ ಕೃಷಿಕರಿಗೆ ಅನ್ಯಾಯ ಆಗುತ್ತಿದೆ ಎಂದು ಬೊಬ್ಬೆ ಹೊಡೆಯುವವರು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಬೇಡವೇ?
ಗ್ರಾಹಕರಿಗೆ ಹೊರೆ ಆಗುತ್ತದೆಯೇ?: ಈಗ ಜಿಎಸ್ಟಿಯಿಂದ ಒಂದು ಬಿಸ್ಕತ್ ಪ್ಯಾಕಿಗೆ ಶೇ.18ರಷ್ಟು ತೆರಿಗೆ ವಿಧಿಸಲಾಗುತ್ತದೆ ಎಂದರೆ ಈ ಹಿಂದೆ ಅದರ ಮೇಲಿನ ತೆರಿಗೆ ಭಾರಿ ಕಡಿಮೆ ಇತ್ತು ಎಂದಲ್ಲ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ವಿಧಿಸುವ ಹತ್ತಾರು ತೆರಿಗೆ ಸೇರಿ ಅಷ್ಟೇ ಆಗುತ್ತಿತ್ತು. ಅಥವಾ ಒಂದು ಎರಡು ಪರ್ಸೆಂಟ್ ಹೆಚ್ಚು ಕಡಿಮೆ ಆಗಬಹುದು. ಸಾಕಷ್ಟು ವಸ್ತುಗಳ ಮೇಲೆ ತೆರಿಗೆ ಇಳಿಕೆಯೂ ಆಗುತ್ತಿದೆ.
ಇಲ್ಲಿವರೆಗೆ ಸಾಮಾನ್ಯ ರೂಢಿ ಹೇಗಿತ್ತು ಅಂದರೆ ಒಂದು ವಸ್ತು ಕೊಂಡಾಗ ಬಿಲ್ಗಿಲ್ ಬೇಡಪ್ಪ, ಎರಡು ರೂಪಾಯಿ ಕಡಿಮೆಗೆ ಕೊಡು ಅನ್ನುತ್ತಿದ್ದರು. ಇನ್ನು ಮುಂದೆ ಗ್ರಾಹಕರು, ವ್ಯಾಪಾರಸ್ಥರು, ಉದ್ಯಮಿಗಳು ಬಿಲ್ ಕೊಡುವವನು ಮತ್ತು ಬಿಲ್ಲನ್ನು ಕೇಳಿ ಪಡೆಯುವವನ ಜೊತೆ ಮಾತ್ರ ವಹಿವಾಟು ಮಾಡುವ ಸ್ಥಿತಿ ಬರುತ್ತದೆ. ಇದಕ್ಕಿಂತ ದೊಡ್ಡ ಕ್ರಾಂತಿ ಇನ್ನೇನಿದೆ ಹಾಗಾದರೆ?
ಅಂತಾರಾಷ್ಟ್ರೀಯವಾಗಿ ಗೌರವ ಹೆಚ್ಚುತ್ತದೆ: ಇದುವರೆಗೆ ಭಾರತದಲ್ಲಿದ್ದ ಸಂಕೀರ್ಣ, ಗೊಂದಲಕಾರಿ ತೆರಿಗೆ ಪದ್ಧತಿಯಿಂದ ವಿದೇಶಿ ಉದ್ಯಮಿಗಳು ಭಾರತ ಎಂದರೆ ಮೂಗು ಮುರಿಯುವ ಪರಿಸ್ಥಿತಿ ಇತ್ತು. ಇನ್ನು ವಿದೇಶಿ ಬಂಡವಾಳ ಸರಾಗವಾಗಿ ಹರಿದು ಬರಲಿದೆ ಎಂಬುದು ತಜ್ಞರ ಅಭಿಪ್ರಾಯ.
ತೆರಿಗೆ ನಷ್ಟ, ಲಾಭ ಇತ್ಯಾದಿ ತಾಂತ್ರಿಕ ಅಂಶಗಳ ಹೊರತಾಗಿ ಆಲೋಚಿಸಿದರೂ, ನಮಗೊಂದು ಪಾರದರ್ಶಕ ತೆರಿಗೆ ಪದ್ಧತಿ ಬೇಡವೇ? ಜೀವನದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮೆರೆಯುವುದರಿಂದ ವ್ಯಕ್ತಿ ಉದ್ಧಾರ ಆಗುತ್ತಾನೆ ಅಂತ ನಂಬುವುದಾದರೆ ಭಾರತದಂತಹ ಇಷ್ಟು ದೊಡ್ಡ ದೇಶಕ್ಕೆ ಬಲವಂತವಾಗಿಯಾದರೂ ಅಳವಡಿಸಿಕೊಳ್ಳುವ ಪಾರದರ್ಶಕತೆ, ಪ್ರಾಮಾಣಿಕತೆ ಶಕ್ತಿ ತುಂಬಲಾರದೇ? ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ, ತೆರಿಗೆ ವಂಚನೆ ತಹಬಂದಿಗೆ ಬರಲಿದೆ, ಮುಖ್ಯವಾಗಿ ರಾಜಕಾರಣಿಗಳಿಗೆ ಹೆಚ್ಚಿನ ಲಾಭ ಇಲ್ಲ ಅನ್ನುವುದೇ ಜಿಎಸ್ಟಿ ವಿರುದ್ಧ ಕೊಸರು ತೆಗೆಯುವುದಕ್ಕೆ ಕಾರಣವಾಯಿತೇ? ಇಷ್ಟೇ ಅಲ್ಲ, ಇನ್ನು ಎಲ್ಲ ಸೇವೆಗಳಿಗೂ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗುತ್ತಿದೆ. ಇದರಿಂದ ಪಾರದರ್ಶಕತೆ ಮತ್ತಷ್ಟು ಹೆಚ್ಚುತ್ತದೆ.
‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ಬಸವಣ್ಣನ ಮಾತೆಲ್ಲ ಈಗ ನಡೆಯಾಕಿಲ್ಲಣ್ಣ ಅಂತ ಇವರು ಹೇಳಿದರೂ ಅಚ್ಚರಿ ಇಲ್ಲ, ಏನಂತೀರಿ?!
( ಲೇಖಕರು ‘ವಿಜಯವಾಣಿ’ ಸಂಪಾದಕರು )