ನಿಜ! ನಿಮ್ಮ ಆತ್ಮದ ಬೆಳಕಿಗಿಂತ ಮಿಗಿಲಾದ ಗುರು ಬೇರೆ ಯಾರೂ ಇಲ್ಲ

I look behind & after
and find that all is right.
in my deepest sorrows
there is a soul of light
ಡಿಸೆಂಬರ್ 26, 1900 ರಂದು ಬೇಲೂರು ಮಠದಿಂದ ಕುಮಾರಿ ಜೋಸೆಫೈನ್ ಮ್ಯಾಕ್ಡಾಳಿಗೆ ಸ್ವಾಮಿ ವಿವೇಕಾನಂದರು ಬರೆದ ಪತ್ರದಲ್ಲಿ ಈ ಸಾಲುಗಳಿವೆ. ಹಿಂದು ಮುಂದುಗಳನ್ನೆಲ್ಲಾ ಪರಿಶೀಲಿಸಿ ನೋಡುವಾಗ ಎಲ್ಲವೂ ಸರಿ ಇದೆ ಅಂತಲೇ ಅನಿಸುತ್ತದೆ. ನಮ್ಮ ಆಳದ ನೋವುಗಳಲ್ಲಿ ಬೆಳಕಿನ ಆತ್ಮವಿದೆ ಎಂಬುದು ಇದರ ಅರ್ಥ. ಎ ಐ ತಂತ್ರಜ್ಞಾನದಲ್ಲಿ ಮಹತ್ತರ ಸಾಧನೆ ಮಾಡಿ, ಕಂಪನಿಯೊಂದರ ಸಿ ಇ ಓ ಆಗಿದ್ದ ಮಹಿಳೆಯೊಬ್ಬರು ತನ್ನದೇ ಕರುಳ ಕುಡಿಯನ್ನು ಕೊಂದುಹಾಕಿದ ಅತ್ಯಂತ ಕ್ರೂರ ಘಟನೆಯನ್ನು ಮೊನ್ನೆಯಷ್ಟೆ ಕಂಡಿದ್ದೇವೆ. ಅಪಾರ ಬುದ್ದಿಮತ್ತೆಯುಳ್ಳ ಆ ಯುವತಿಗೆ “ಆಳದ ನೋವುಗಳಲ್ಲಿ ಬೆಳಕಿನ ಆತ್ಮವಿದೆ” ಎಂಬ ವಿವೇಕವಾಣಿಯ ವಿವೇಕವನ್ನು ಯಾರಾದರೂ ಹೇಳಿದ್ದರೆ ಅವಳು ಸ್ವಯಂ ಬೆಳಕು ಕಂಡುಕೊಂಡು ದೇಶಕ್ಕೂ ಒಂದಷ್ಟು ಕೊಡುಗೆ ನೀಡಬಲ್ಲವಳಾಗಿದ್ದಳು.
ತಂತ್ರಜ್ಞಾನ ನಮ್ಮ ಬದುಕನ್ನು ಸರಳ, ಸುಲಭವಾಗಿಸಿದೆ ನಿಜ. ಆದರೆ ಅಷ್ಟೇ ವೈಯಕ್ತಿಕ ಆವರಣವನ್ನೂ , ಒತ್ತಡಗಳನ್ನೂ ಸೃಷ್ಟಿಸಿದೆ. ಶಾಲಾ ಮಕ್ಕಳಿಂದ ಉದ್ಯೋಗಸ್ಥ ಯುವವರ್ಗದವರೆಗೆ ಅನೇಕ ತರದ ಒತ್ತಡಗಳು. ಅದನ್ನು ನಿರ್ವಹಿಸಲು ಯಾವ್ಯಾವುದೋ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಛಿದ್ರವಾಧ ಮನಸುಗಳ ಒತ್ತಡ ನಿರ್ವಹಣೆಯೂ ಹೊಸಯುಗದ ಬಹುದೊಡ್ಡ ವ್ಯಾಪಾರ. ಅಷ್ಟಾಗಿಯೂ ಆ ಎಲ್ಲ ಮಾರ್ಗಗಳೂ ವೈಯಕ್ತಿಕ ಶಾಂತಿ ಸಮಾಧಾನ ಕಂಡುಕೊಳ್ಳಲು ಸಹಾಯ ಮಾಡುತ್ತವೆಯೇ ಹೊರತು, ವ್ಯಕ್ತಿ, ಸಮೂಹ, ಸಮಾಜ, ಆ ಮೂಲಕ ದೇಶ ಎಂಬ ಸಮಗ್ರ ಚಿಂತನೆಗಲ್ಲ. ಅಂತದೊಂದು ಪ್ರಖರ ಮಾರ್ಗವಿದ್ದರೆ ಅದು ವಿವೇಕಮಾರ್ಗ!
ಸಂನ್ಯಾಸಿಗಳು ಅಂದರೆ ಲೌಕಿಕದ ಯಾವ ವಿಚಾರಗಳ ಕುರಿತೂ ಆಸ್ಥೆ ಇರದ, ಸದಾ ಅಲೌಕಿಕದ, ಮುಕ್ತಿಯ ಮಾತಾಡುತ್ತಾ ಇರುವವರು, ಸಂನ್ಯಾಸ ಮತ್ತು ಬಿಸಿರಕ್ತದ ಯೌವ್ವನ ಎರಡೂ ಹೊಂದಿಸಿ ಬರೆಯಲಾರದ ಪದಗಳು ಎಂಬೆಲ್ಲಾ ಮೇಲ್ನೋಟದ ಮತ್ತು ಸೀಮಿತ ಕಲ್ಪನೆಯನ್ನು ಒಡೆದುಹಾಕಿ, ವೀರತ್ವ, ಯೌವ್ವನ, ಸಂನ್ಯಾಸತ್ವಗಳನ್ನು ಸಮೀಕರಿಸಿದವರು ವಿವೇಕಾನಂದರು. ಹಾಗಾಗಿಯೇ ಅವರು ವೀರಸಂನ್ಯಾಸಿ! ಅವರ ಒಂದೊಂದು ಮಾತುಗಳು ವಿದ್ಯುತ್ ವಾಣಿ!!
ಇವತ್ತು ಯೂಟ್ಯೂಬಿನಲ್ಲಿ ಅತ್ಯಂತ ಹೆಚ್ಚು ವೀಕ್ಷಣೆಗಳಿರುವುದು ಮೋಟಿವೇಷನಲ್ ಸ್ಪೀಚ್ಗಳಿಗೆ. ಮೊದಲೇ ಹೇಳಿದಂತೆ ಹೊಸಕಾಲದ ಯುವಕರ ಒತ್ತಡಗಳು ಹೊರಗಿನ ಅಂತಹ ಸಮಾಧಾನ ಮತ್ತು ಉತ್ಸಾಹ ತುಂಬುವ ಮಾತುಗಳನ್ನು ಹೆಚ್ಚು ಹೆಚ್ಚು ಬಯಸುತ್ತಿವೆ. ಆದರೆ ವಿವೇಕಾನಂದರು ಬಹಳ ಹಿಂದೆಯೇ ಸಾರ್ವಕಾಲಿಕವಾಗಿ ಮತ್ತು ಸೀಮಾತೀತವಾಗಿ ಸಲ್ಲಬಹುದಾದ ಅಂತಹ ಎನರ್ಜಿ ಬೂಸ್ಟರ್ನಂತಹ ಮಾತುಗಳನ್ನು ನೂರಾರು ಸಂಖ್ಯೆಯಲ್ಲಿ ಹೇಳಿದ್ದಾರೆ.
ಈ ದೇಶದಲ್ಲಿ ಆಗಿಹೋದ ಯಾವುದೇ ಮಹಾನ್ವ್ಯಕ್ತಿಗಳನ್ನು ನಾವು ಸಮಗ್ರವಾಗಿ ತಿಳಿಯದಿರುವುದು ಮುಖ್ಯವಾಗಿ ಅರೆಬರೆ ತಿಳಿದು ಮಾತಾಡುವುದು ಬಹುದೊಡ್ಡ ಸಮಸ್ಯೆ, ಕೆಲವೊಮ್ಮೆ ಅಪಾಯಕಾರಿ ಕೂಡ. ವಿವೇಕಾನಂದರು ಹಿಂದುತ್ವದ ಬಗ್ಗೆ ಪ್ರಖರವಾಗಿ ಮಾತಾಡಿದರು ಎಂಬುದನ್ನಷ್ಟೆ ಉಪದೇಶಿಸುವರು, ಅವರು ಹಿಂದುತ್ವದ ಬಗ್ಗೆ ಏನು ಹೇಳಿದರು, ಸಹಿಷ್ಣುತೆಯ ಬಗ್ಗೆ ಅವರ ನಿಲುವು ಏನಾಗಿತ್ತು ಎಂದು ಬಾಯಿಬಿಡುವುದಿಲ್ಲ. ಧರ್ಮಜಾಗೃತಿಯ ವಿಷಯ ಪಕ್ಕಕ್ಕಿಟ್ಟು ನೋಡಿದರೂ, ಯುವಮನಸ್ಸುಗಳನ್ನು ಬಡಿದೆಬ್ಬಿಸುವ ಅವರ ಮಾತುಗಳು ಪಂಥಾತೀತವಾದವು. ಯೌವ್ವನಕ್ಕೆ ಯಾವ ಧರ್ಮ, ಯಾವ ಜಾತಿ? ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಯಾರೇ ಕೂತು ಓದಿ, ಕೇಳಿ ಸ್ಪೂರ್ತಿ ಪಡೆಯಬಹುದಾದ ಒಳಬೆಳಕಿನ ವಾಣಿಗಳು ಅವು.
“ಒಂದು ವಿಚಾರವನ್ನು ಕೈಗೆತ್ತಿಕೊಳ್ಳಿ, ಅದನ್ನೆ ನಿಮ್ಮ ಬದುಕಾಗಿಸಿಕೊಳ್ಳಿ, ಆ ಕುರಿತು ಕನಸು ಕಾಣಿರಿ, ಸದಾ ಯೋಚಿಸಿರಿ. ಆ ವಿಚಾರಕ್ಕಾಗಿಯೇ ಜೀವಿಸಿ, ನಿಮ್ಮ ಇಡೀ ಮೆದುಳು, ದೇಹ, ಮಾಂಸಖಂಡಗಳು, ನರ, ದೇಹದ ಪ್ರತಿಭಾಗವೆಲ್ಲ ಆ ವಿಚಾರವೇ ಆಗಿರಲಿ. ಯಶಸ್ಸಿಗೆ ಇರುವುದು ಅದೊಂದೇ ದಾರಿ” ಎನ್ನುತ್ತಾರೆ ವಿವೇಕಾನಂದರು. ಸೋಶಿಯಲ್ ಮೀಡಿಯಾ ಕಾಲದಲ್ಲಿ ಎಲ್ಲೆಲ್ಲಿಯೋ ಚದುರಿಹೋಗುತ್ತಿರುವ ಯುವಜನರ ಸಮಯ ಮತ್ತು ಚಿಂತನೆಗಳನ್ನು, ಗೊಂದಲಗಳನ್ನು ಬಗೆಹರಿಸಲು ಇದಕ್ಕಿಂತಲೂ ಸೂತ್ರ ಬೇಕೇ?
“ನೀವು ನಿಮ್ಮೊಳಗೇ ಬೆಳೆಯಬೇಕು. ಬೇರಾರೂ ಕಲಿಸಲಾರರು. ನಿಮ್ಮ ಆತ್ಮದ ಬೆಳಕಿಗಿಂತ ಮಿಗಿಲಾದ ಗುರು ಬೇರಾರೂ ಇಲ್ಲ” ಅನ್ನುತ್ತಾರೆ. ಒಳಗೆ ಗಟ್ಟಿಯಾಗದೇ ಪ್ರತಿಯೊಂದು ಕೆಲಸಕ್ಕೂ ಪ್ರತಿ ಮಾಹಿತಿಗೂ ಹೊರಗನ್ನು ಆಶ್ರಯಿಸುತ್ತಿರುವ ತಂತ್ರಜ್ಞಾನದ ಫಲವಾದ ಮಾನಸಿಕ ಅಂಗವೈಕಲ್ಯಕ್ಕೆ ವಿವೇಕರು ಅದಾಗಲೇ ತಮ್ಮ ಹರಿತ ವಿಚಾರಗಳ ಮದ್ದರೆದು ಕೊಟ್ಟಿದ್ದಾರೆ.
ಜಿಮ್ಮಿಗೆ ಹೋಗಿ ಸಿಕ್ಸ್ ಪ್ಯಾಕುಗಳನ್ನು ಎಣಿಸುವುದು ಹೊಸ ರೂಢಿ. “ಇಡೀ ಜಗತ್ತೇ ಒಂದು ಜಿಮ್ನಾಷಿಯಂ, ನಾವು ಒಳಗಿನಿಂದ ಗಟ್ಟಿಯಾಗಬೇಕು” ಅನ್ನುವ ವಿವೇಕರು, ತಾಕತ್ತು ಎಂಬುದು ಶರೀರದ, ಉಬ್ಬಿದ ಮಾಂಸಖಂಡಗಳ ಸಂಗತಿಯಷ್ಟೇ ಅಲ್ಲ ಎನ್ನುತ್ತಾರೆ. “ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ನೀವು ಮಾತಾಡಿ. ಇಲ್ಲವಾದರೆ ಜಗತ್ತಿನ ಅತ್ಯುತ್ತಮ ವ್ಯಕ್ತಿಯ ಭೇಟಿಯನ್ನು ನೀವು ತಪ್ಪಿಸಿಕೊಳ್ಳಬಹುದು” ಎಂದಿದ್ದಾರೆ. ಓದು ಅಥವಾ ಕೆಲಸದಿಂದ ಬಿಡುವು ಸಿಕ್ಕರೆ ಮೊಬೈಲು ಮೀಟುತ್ತಾ ಹತ್ತು ಹಲವು ಸೋಶಿಯಲ್ ಮೀಡಿಯಾ ಪ್ಲಾಟ್ಫಾಮ್ಗಳಲ್ಲಿ ನಮಗೇ ಅರಿವಿರದೇ ಗಂಟೆಗಟ್ಟಲೆ ಕಳೆದುಹೋಗಿ, ನಮಗೇ ಅರಿವಿರದೇ ಯಾರ್ಯಾರನ್ನೋ ಏನೇನನ್ನೋ ನಮ್ಮೊಳಗೆ ತುಂಬಿಕೊಳ್ಳುತ್ತಾ, ಸ್ವತಃ ನಮ್ಮನ್ನು ನೆನಪಿಸಿಕೊಳ್ಳಲೂ ನಮಗೆ ಸಮಯವಿಲ್ಲದಂತೆ , ನಮ್ಮನ್ನೆ ನಾವು ಮರೆಯುವಂತೆ ಆಗಿದೆ ಈಗ. ಆದರೆ ಈ ಯಾವ ಆವಿಷ್ಕಾರಗಳೂ ಆಗಿರದ ಹೊತ್ತಲ್ಲಿ ವಿವೇಕಾನಂದರು ನಿಮಗಾಗಿಯೂ ಕೊಂಚ ಸಮಯ ಎತ್ತಿಡಿ, ನಿಮ್ಮೊಳಗೂ ಇಣುಕಿ ಅಂದಿದ್ದಾರೆ ಮಾತ್ರವಲ್ಲ, ಜಗತ್ತಿನ ಅತ್ಯುತ್ತಮ ಮನುಷ್ಯ ನೀನೇ ಅನ್ನುವ ಮೂಲಕ ನಮ್ಮೊಳಗೇ ಇರಬಹುದಾದ ಆದರೆ ನಾವು ಮರೆತಿರಬಹುದಾದ, ನಿರ್ಲಕ್ಷಿಸಿರಬಹುದಾದ ನಮ್ಮದೇ ಉತ್ತಮ ರೂಪವನ್ನು ನಮಗೇ ತೋರಿಸುವ ಕನ್ನಡಿಯಾಗಿದ್ದಾರೆ. ಅದೂ ಅತ್ಯಂತ ಕಡಿಮೆ ಶಬ್ದಗಳ ಮೂಲಕ. ವೀರಸನ್ಯಾಸಿಯ ಮಾತಿನ ತಾಕತ್ತು ಅಂತದು. “ಬುದ್ದಿ ಮತ್ತು ಹೃದಯಗಳ ನಡುವೆ ತಾಕಲಾಟ ಉಂಟಾದರೆ ಸದಾ ಹೃದಯದ ಮಾತನ್ನೆ ಕೇಳಿ” ಅನ್ನುತ್ತಾರೆ . ಇದೊಂದು ಅತ್ಯಂತ ಶಕ್ತಿಶಾಲೀ ಸೂತ್ರ. ಬದುಕಿನ ಯಾವುದೇ ಸಮಯಕ್ಕೆ, ಯಾವುದೇ ಸ್ಥಿತಿಗೆ ಅನ್ವಯಿಸಬಹುದಾದ ಸೂತ್ರ. ಇದನ್ನು ಅಳವಡಿಸಿಕೊಂಡರೆ ಜಗತ್ತಿನ ಯಾವ ಯುವಕನೂ ಭಯೋತ್ಪಾದಕನಾಗಲಾರ. ಯಾಕೆಂದರೆ ಯಾವ ಮನುಷ್ಯ ಹೃದಯವೂ ಇನ್ನೊಬ್ಬ ಮನುಷ್ಯನನ್ನು ಕೊಲ್ಲು ಅನ್ನುವುದಿಲ್ಲ! ಸಹಿಷ್ಣುತೆಯ ಬಗ್ಗೆ ಮಾತಾಡುತ್ತಾರೆ. “ಯಾರನ್ನೂ ಹೀಯಾಳಿಸಬೇಡಿ, ಸಾಧ್ಯವಾದರೆ ಸಹಾಯ ಮಾಡಿ, ಇಲ್ಲವೇ ಭಿನ್ನಹಾದಿಯವರನ್ನು ಅವರಷ್ಟಕ್ಕೆ ಹೋಗಲು ಬಿಡಿ” ಅನ್ನುತ್ತಾರೆ. “ಹಿರಿದು ಯಾವುದೇ ಇರಲಿ, ಅದನು ಮೆರೆಯುವ ದೇಶ ನನ್ನದು, ಎಲ್ಲ ದಿಕ್ಕಿನ ಬೆಳಕಿಗು ಬಾಗಿಲ ತೆರೆಯುವ ದೇಶ ನನ್ನದು” ಎಂಬ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಸಾಲುಗಳನ್ನು ವಿವೇಕರು ಅಂದೇ ಒಪ್ಪಿದಂತಿದೆ.
ಬಹುತೇಕ ಯುವಮನಸ್ಸುಗಳನ್ನು ಕುರಿತೇ ಇರುವ ಅವರ ಪ್ರಖರ ಮಾತುಗಳು, ಬದುಕು ಮುಗಿದೇಹೋಯಿತು ಎಂಬ ಸ್ಥಿತಿಯಲ್ಲಿರುವ ಯಾವುದೇ ಜೀವದೊಳಗೆ ಯೌವ್ವನವನ್ನು ಮರುಸ್ಥಾಪಿಸಿ, ಸೋತ ಜೀವಗಳಿಗೆ ಮರುಜೀವ ನೀಡಿ, ಹೊಸಶಕ್ತಿಸಂಚಾರ ಉಂಟುಮಾಡುತ್ತವೆ. ನಿಶ್ಚಲ ಸ್ಥಿತಿಗೆ ಚಲನೆಯನ್ನೂ, ಚಲನೆಗೆ ವೇಗವನ್ನೂ, ವೇಗಕ್ಕೆ ಸಂಯಮ ಮತ್ತು ಸರಿಯಾದ ಮಾರ್ಗವನ್ನೂ ತೋರಿಸುವ ವಿವೇಕರ ಸಮಚಿತ್ತದ ಮಾತುಗಳು ಬೆಳಕನ್ನೆ ಸಂಗ್ರಹಿಸಿ ಇಟ್ಟಂತೆ ಅನೇಕ ಗ್ರಂಥಗಳಲ್ಲಿ ಸಂಗ್ರಹಿಸಲ್ಪಟ್ಟಿವೆ. ಆ ವಿವೇಕಬೆಳಕಿನ ರಶ್ಮಿ ತಾಕಿದರೂ ಪ್ರತಿಯುವಕ/ಯುವತಿಯೂ ಬೆಳಕಾಗುತ್ತಾರೆ. ಆ ಮೂಲಕ ದೇಶವೂ ಪ್ರಜ್ವಲಿಸಲಿದೆ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top