ಗಾಂಧಿ ಹತ್ಯೆ ಪ್ರಕರಣದ ಕುರಿತು ಹಲವು ಅನುಮಾನಗಳು ಈಗಲೂ ಬಗೆಹರಿಯದೆ ಉಳಿದಿವೆ. ರಾಷ್ಟ್ರದ ಪ್ರಮುಖ ಘಟನೆಗಳು ಹಾಗೂ ತಿರುವುಗಳ ಕುರಿತಾದ ಸತ್ಯವನ್ನು ತಿಳಿಯುವ ಹಕ್ಕು ಸಾಮಾನ್ಯ ಜನರಿಗೆ ಇದೆ. ಈ ನಿಟ್ಟಿನಲ್ಲಿ ಡಾ.ಕೆ.ಎಸ್. ನಾರಾಯಣಾಚಾರ್ಯರು ರಚಿಸಿರುವ ಕೃತಿ ಮಹತ್ವದ ಮಾಹಿತಿಗಳನ್ನು, ಹೊಸ ಹೊಳಹುಗಳನ್ನು ಒದಗಿಸುತ್ತದೆ.
ಗಾಂಧೀಜಿ ಹತ್ಯೆ ಮಾಡಿದವರು ಯಾರು ಎಂಬ ಪ್ರಶ್ನೆ 1948ರಿಂದ ಚರ್ಚೆಯಾಗುತ್ತಲೇ ಇದೆ. ಹತ್ಯೆ ಮಾಡಿದಾತ ನಾಥೂರಾಮ್ ಗೋಡ್ಸೆ ಎಂದು ದಾಖಲೆಗಳು ಹೇಳಿದ್ದರೂ ಅದನ್ನು ಸಂಪೂರ್ಣ ನಂಬುವುದು ಈ ದೇಶದ ಜನಕ್ಕೆ ಸಾಧ್ಯವಾಗುತ್ತಿಲ್ಲ. ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಒಬ್ಬನೇ ಒಬ್ಬ ನಿರಪರಾಧಿಗೂ ಶಿಕ್ಷೆಯಾಗಬಾರದು ಎಂಬ ನಮ್ಮ ನ್ಯಾಯವ್ಯವಸ್ಥೆಯ ಮನಸ್ಥಿತಿ ದೇಶವಾಸಿಗಳದೂ ಆಗಿರುವುದರಿಂದ, ಗಾಂಧಿ ಹತ್ಯೆ ಹೆಸರಿನಲ್ಲಿ ನಿರಪರಾಧಿಗೆ ಶಿಕ್ಷೆಯಾಗಿಹೋಯಿತೇ ಎಂಬ ಪ್ರಶ್ನೆ ಇದ್ದೇ ಇದೆ. ಅದಕ್ಕೆ ಪೂರಕವಾಗಿ ಹತ್ತಾರು ಸಂಗತಿಗಳಿವೆ. ಹೀಗಾಗಿ ಇಂದಿಗೂ ಹತ್ಯೆಯ ಹಿಂದಿನ ಸತ್ಯದ ಹುಡುಕಾಟಕ್ಕೆ ಇವು ಪ್ರೇರಣೆ ನೀಡುತ್ತಲೇ ಇವೆ. ಗಾಂಧಿ ಹತ್ಯೆ ಕುರಿತಾದ ವಿವರಗಳನ್ನು ಬಿಚ್ಚಿಡುವ ಪುಸ್ತಕ ಖ್ಯಾತ ವಿದ್ವಾಂಸ ಡಾ. ಕೆ. ಎಸ್. ನಾರಾಯಣಾಚಾರ್ಯ ಅವರು ಬರೆದಿರುವ ‘ಗಾಂಧಿಯನ್ನು ನಿಜವಾಗಿ ಕೊಂದವರು ಯಾರು?’ ಕೃತಿ. ‘ಹೂ ರಿಯಲಿ ಕಿಲ್ಡ್ ಗಾಂಧಿ’ ಹೆಸರಿನ ಆ ಪುಸ್ತಕದ ಇಂಗ್ಲಿಷ್ ಅವತರಣಿಕೆ ಏ.11ರಂದು ವಿಜಯವಾಣಿ ಕಚೇರಿಯಲ್ಲಿ ಬಿಡುಗಡೆ ಯಾಗಿದೆ. ನಾವು ಬೆಚ್ಚುವಂಥ, ಬೆರಗಾಗುವಂಥ ಸಂಗತಿಗಳು ಇದರಲ್ಲಿವೆ. ಅಂಥ ಕೆಲ ಅಂಶಗಳ ಸಂಗ್ರಹರೂಪ ಇಲ್ಲಿದೆ.
***
ಗಾಂಧೀಜಿಯನ್ನು ನಿಜವಾಗಿ ಕೊಂದವರು ಯಾರು?: ಗಾಂಧಿಯವರನ್ನು ರಾಜಕೀಯ ನಕಾಶೆಯಿಂದ ಅಳಿಸಿಬಿಡಲು ಹೊರಟವರು ಎರಡು ವಿಭಿನ್ನ ಪಟ್ಟಭದ್ರರ ಗುಂಪುಗಳು. ಇವುಗಳ ಗುರಿ, ಧ್ಯೇಯ, ಬೇರೆಯೇ ಇದ್ದವು. ಆದರೆ ಗಾಂಧಿಹತ್ಯೆ ಎಂಬ ಏಕಾಂಶದಲ್ಲಿ ಭಿನ್ನತೆ ಇರಲಿಲ್ಲ. ಒಂದರ ನಿಯೋಜಿತ, ನಾಥೂರಾಮ್ ಗೋಡ್ಸೆ. ಇನ್ನೊಂದರ ಮುಖಂಡ ಒಬ್ಬ ಕಾಂಗ್ರೆಸ್ಸಿಗ! 1978ರ ವರೆಗೆ ಅವನು ಜೀವಂತ ಇದ್ದ. ಪುಣೆಯಲ್ಲಿ ಎಲ್ಲರ ಕಂಗಳಿಗೆ ಕಾಣುವಂತೆ, ಬೇಕಾದೆಡೆ, ನಿರ್ಭಯವಾಗಿ ಓಡಾಡುತ್ತಿದ್ದ -ನಿರಪರಾಧಿಯಂತೆ. ಗಾಂಧಿಯವರನ್ನು ‘ಮುಗಿಸುವ’ ಕಾಯಕದ ಹೊಣೆ ಇಬ್ಬರ ಮೇಲೂ ಇತ್ತು ಎಂಬುದು ಸಾಮಾನ್ಯ ಅಂಶ.
ಮ್ಯಾಜಿಸ್ಟ್ರೇಟರ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುವ ಮುನ್ನ ಗಾಂಧಿ ಹತ್ಯಾ ಪ್ರಕರಣದ ಇಬ್ಬರು ಮುಖ್ಯ, ಅತೀ ಮುಖ್ಯ-ಸಾಕ್ಷೀದಾರರ, ಹೇಳಿಕೆಗಳನ್ನು ಪೊಲೀಸರು ಆರೋಪಿಗೆ ಕೊಡಲೇ ಇಲ್ಲ! ಗಾಂಧೀಜಿ ಪ್ರಾರ್ಥನಾ ಸಭೆಗೆ ಬರುವಾಗ ಯಾರ ಭುಜಗಳ ಮೇಲೆ ಎರಡು ಕೈಗಳನ್ನಿಟ್ಟು ಬರುತ್ತಿದ್ದರೋ ಆ ಇಬ್ಬರ ಹೇಳಿಕೆ ದಾಖಲಾಗಲಿಲ್ಲ. ಇಲ್ಲಿ ಅನಿವಾರ್ಯವಾಗಬೇಕಿದ್ದ ಆ ಸಾಕ್ಷಿಗಳಾದರೂ ಯಾರು? ಒಬ್ಬಳು ಸರ್ದಾರ ಪಟೇಲರ ಮಗಳು. ಇನ್ನೊಬ್ಬಳು ಗಾಂಧಿ ದತ್ತುಪುತ್ರಿ. ಇವರಿಬ್ಬರೂ ಇತ್ತ ಹೇಳಿಕೆಗಳು ಆಮೇಲೆ ಪತ್ರಿಕೆಗಳಲ್ಲಿ ಬಂದವು. ಅವರ ಪ್ರಕಾರ ಗೋಡ್ಸೆ, ಗಾಂಧಿಗೆ ಕೈ ಮುಗಿಯುತ್ತಿದ್ದಾಗ ಬೇರೊಬ್ಬ ಎತ್ತರದ, ಖಾದಿಧಾರಿ, ಕುರ್ತಾ, ಪೈಜಾಮಾ ಧರಿಸಿದ್ದವನು ಗೋಡ್ಸೆಯ ಹಿಂದಿನಿಂದ ಬಂದವನೇ, ನಾಥೂರಾಮ್ ಬಲ ತೋಳ ಕೆಳಗಿನಿಂದ ಗುಂಡು ಹಾರಿಸಿದ. ಇವರನ್ನು ಸರ್ಕಾರಿ ವಕೀಲರು ಏಕೆ ಹಾಜರುಪಡಿಸಲಿಲ್ಲ? ವಿಚಾರಿಸಲಿಲ್ಲ? ಏಕೆ, ಪಾಟೀಸವಾಲಿಗೆ ಒಳಪಡಿಸಲಿಲ್ಲ?
ಗೋಡ್ಸೆಯು ‘ನಮಸ್ತೇ’ ಮಾಡಿದ ಮೇಲೆ ಪಿಸ್ತೂಲನ್ನು ತೆಗೆದುಕೊಂಡು ಗುರಿಯಿಡುವ ಮುನ್ನವೇ, ಅವನನ್ನು ಹತ್ತಿರವಿದ್ದ ಮಿಲಿಟರಿ ರಕ್ಷಕ, ಅವನು ಮುಂಗೈನ ಕಟ್ಟನ್ನು ಬಿಡಿಸಿಕೊಳ್ಳಲಾಗದಂತೆ ಭದ್ರವಾಗಿ ಹಿಡಿದುಕೊಂಡ. ಇನ್ನೊಬ್ಬ ಅವನ ಹಿಂತಲೆಯ ಬದಿಗೆ ಲಾಠಿಯಿಂದ ಬಲವಾಗಿ ಹೊಡೆದ. ಇದೆಲ್ಲ ಪೊಲೀಸ್ ವರದಿಯಲ್ಲೇ ಇದೆ! ಆಗ ವಶಪಡಿಸಿಕೊಂಡ ಗೋಡ್ಸೆ ಕೈಯಲ್ಲಿದ್ದ ಪಿಸ್ತೂಲಿನಲ್ಲಿ ಎಲ್ಲ ಗೋಲಿಗಳು ಇದ್ದವು. ಒಟ್ಟು ಏಳು ಗೋಲಿಗಳು ಎಂಬುದು ಸತ್ಯ ವರದಿ. ಗೋಡ್ಸೆ ಪಿಸ್ತೂಲಿನಿಂದ ಗುಂಡುಗಳೇ ಹಾರಿರಲಿಲ್ಲ. ಹಾಗಾದರೆ ಗಾಂಧಿಯನ್ನು ಕೊಂದ ಗೋಲಿಗಳು ಎಲ್ಲಿಯವು? ಯಾರು ಚಲಾಯಿಸಿದವು? ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯಾರು? ಅವರೇಕೆ ಪ್ರತ್ಯಕ್ಷ ಸಾಕ್ಷಿಗಳನ್ನು ಹಾಜರುಪಡಿಸಿ ಎಂದು ಕೇಳಲಿಲ್ಲ, ಅದಕ್ಕೇನು ಹಿನ್ನೆಲೆ?
ಸಂಚು?: ಸರ್ಕಾರಿ ನಿಯಂತ್ರಣದ ಪೊಲೀಸ್ ಅಧಿಕಾರಿಗಳಿಗೆ ಗಾಂಧಿಯನ್ನು ಕೊಲ್ಲಲು ಬಯಸಿದ್ದ ಈ ಎರಡೂ ಗುಂಪುಗಳ ಚಲನವಲನ ಗುರಿಗಳ ಬಗ್ಗೆ ಗೂಢಚಾರ ಮಾಹಿತಿ ಇದ್ದಿರಬೇಕಲ್ಲ? ಇದ್ದಿದ್ದರೆ ಆ ಕೊಲೆಯ ಮುಂಚಿನ ಹತ್ತು ದಿನಗಳವರೆಗೆ ಎರಡೂ ಗ್ಯಾಂಗಿನ ಒಬ್ಬನನ್ನಾದರೂ ಇವರು ಏಕೆ ದಸ್ತಗಿರಿ ಮಾಡಿ ಬಾಯಿ ಬಿಡಿಸಲಿಲ್ಲ? ಬಿಡಿಸಿದ್ದರೂ ಮುಚ್ಚಿಟ್ಟರೇ?… ಅಂದರೆ ಸರ್ಕಾರದಲ್ಲೇ ಯಾರಿಗೋ ಗಾಂಧಿ ಸಾಯುವುದು ಬೇಕಿತ್ತು. ಅದಕ್ಕೇನೋ ಒಳಮರ್ಮ, ಕಾರಣ ಇದ್ದಿರಲು ಬೇಕು. ಸರ್ಕಾರಕ್ಕೆ ಗಾಂಧಿ ಹತ್ಯೆ ಬೇಕಿತ್ತು. ಅದು ನಡೆದ ಮೇಲೆ ಬೇರಾರನ್ನೋ ನೇಣು ಹಾಕಿ, ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸಿ, ಶಾಶ್ವತವಾಗಿ ಅವರನ್ನು ಭಯೋತ್ಪಾದಕರನ್ನಾಗಿ ಬಿಂಬಿಸುತ್ತಾ, ನಿರಾತಂಕವಾಗಿ ಆಡಳಿತ ನಡೆಸಬಹುದು. ಕಾಂಗ್ರೆಸ್ಸು ಅಪರಾಧಿ ಸ್ಥಾನದಲ್ಲಿ ಸಿಕ್ಕಿ ಬೀಳಬಾರದು. ನಿಜ ಅಪರಾಧಿ ತಲೆಮರೆಸಿಕೊಳ್ಳಲಿ ಎಂದು.
ಹಳೆಯದರ ಮೆಲುಕು: 1948ರ ಜ. 20ರಂದು ನಡೆದ ಗನ್ ಕಾಟನ್ ಸ್ಪೋಟದ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಗೃಹಮಂತ್ರಿ ಆಗಿದ್ದವರು ಮೊರಾರ್ಜಿ ದೇಸಾಯಿಯವರು. ಅವರನ್ನು ಪ್ರೊ. ಜೈನ್ ಎಂಬ ಮುಂಬೈ ಗಣ್ಯರು ಭೇಟಿಯಾಗಿ ಹೇಳಿದರು: ‘ಈ ಗನ್ ಕಾಟನ್ ಸ್ಪೋಟದ ಪ್ರಕರಣದಲ್ಲಿ ಅಪರಾಧಿ ಎಂದು ನೀವು ಬಂಧಿಸಿದ ಮದನಲಾಲ್ ಪಹವಾ ಎಂಬ ಸಿಂಧಿ ಯುವಕ, ಡೆಲ್ಲಿಯಲ್ಲಿ ಸೆರೆಯಾದವರು, ಕೆಲವು ಪುಸ್ತಕ, ಹಸ್ತಪ್ರತಿ ಮಾರಾಟ ಮಾಡುತ್ತಿದ್ದವರು. ಅವುಗಳಲ್ಲಿ ಗಾಂಧಿಹತ್ಯೆಯ ಮುನ್ಸೂಚನೆ ಇರುವಂತಿತ್ತು. ಗಾಂಧಿಯವರಿಗೆ ಅಪಾಯ ಸೂಚನೆಗಳು ಈ ಪುಸ್ತಕಗಳಲ್ಲಿದ್ದವು. ಆದರೆ ತಾವು ಇದನ್ನು ನಂಬಲಿಲ್ಲ. ಆಗ ಗಂಭೀರವಾಗಿಯೂ ಪರಿಗಣಿಸಲಿಲ್ಲ. ಈಗ ಗಾಂಧಿ ಸತ್ತ ಮೇಲಾದರೂ, ಈ ಬಂಧಿತ ಮದನ್ಲಾಲ್ರನ್ನು ಹೆಚ್ಚಿನ ವಿಚಾರಣೆಗೆ ಗುರಿಪಡಿಸಿ, ಸತ್ಯ ಬಾಯಿ ಬಿಡಿಸಿ’ ಎಂದರು.
ಮೊರಾರ್ಜಿ ಇದನ್ನು ಮುಂಬೈ ಪೊಲೀಸ್ ಕಮಿಷನರ್ಗೆ ಅಂದೇ ತಿಳಿಸಿದರು ಸಹ. ಆದರೆ 30ನೇ ಜನವರಿ 1948ರಲ್ಲಿ ಗಾಂಧಿ ಕೊಲೆಯಾದ ಮೇಲೂ ಯಾರೂ ವಿಚಾರಿಸಲಿಲ್ಲ. ದೆಹಲಿಯಿಂದ ಇಬ್ಬರು ಪೊಲೀಸು ಅಧಿಕಾರಿಗಳು ಮುಂಬೈಗೆ ಬಂದರೇನೋ ಹೌದು. ಮಹಾರಾಷ್ಟ್ರ ಪೊಲೀಸರಿಂದ ಹೆಚ್ಚಿನ ಮಾಹಿತಿ ಪಡೆಯಲು. ಅವರೇ ಹೇಳಿದ ಪ್ರಕಾರ ಮುಂಬೈ ಪೊಲೀಸರಿಂದ ಏನೂ ಮಾಹಿತಿ ಸಿಗಲಿಲ್ಲ. ಮೊರಾರ್ಜಿ ಕೊಟ್ಟ ಸುಳಿವು ಎಲ್ಲಿ ಹೋಯ್ತು? ಅಂದರೆ? ಮಹಾರಾಷ್ಟ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರವೂ ಉಪೇಕ್ಷಿಸಿತ್ತು.
ಆಗದ ಕಾರ್ಯ, ಲೋಪಮಾತ್ರ: ಗಾಂಧಿ ಹತ್ಯೆಯ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಏಕೆ ಒಳಪಡಿಸಲಿಲ್ಲ? ಏಕೆಂದರೆ, ಯಾವ ಗುಂಡಿನೇಟು, ಎಷ್ಟು, ಯಾರವು, ಯಾರ ಪಿಸ್ತೂಲು, ರಿವಾಲ್ವರ್ದ್ದು ಎಂದು ಬಹಿರಂಗವಾಗುವುದು, ಪಟ್ಟಭದ್ರರಿಗೆ ಬೇಕಿರಲಿಲ್ಲ! ಒಬ್ಬ ಪೊಲೀಸು ಅಧಿಕಾರಿ, ಅಲ್ಲಿದ್ದವನೆಂದು ಹೇಳಿಕೊಂಡು ಸಾಕ್ಷಿ ನುಡಿದು ಹೇಳಿದ್ದು- ‘ನಾನು ಗುಂಡಿನ ಶಬ್ದ ಕೇಳಿದೆ. ಆ ಶಬ್ದ ಬಂದತ್ತ ತಿರುಗಿ ನೋಡಿದೆ. ಗೋಡ್ಸೆಯ ಪಿಸ್ತೂಲು ಹೊಗೆಯಾಡುತ್ತಿತ್ತು. ಅಲ್ಲಿ ಮಿಂಚು- ಗುಂಡು ಚಲಿಸುವಾಗ ಸಾಮಾನ್ಯವಾಗಿ ಕಾಣುವುದು ಕಾಣಿಸಿತು’ ಎಂದು. ಇಲ್ಲಿ ತಾಂತ್ರಿಕವಾದ ತಪ್ಪು ಕಲ್ಪನೆ, ಪ್ರಮಾದವೊಂದಿದೆ. ಅದು ಪೊಲೀಸರ ಬಾಯಲ್ಲಿ ಬರಲಾರದ ದೋಷಾರೋಪಣೆ- ಹೇಗೆ?
ಗೋಡ್ಸೆ ಬಳಿ ಇದ್ದದ್ದು ಇಟಾಲಿಯನ್ ಬ್ರಾಂಡು ಪಿಸ್ತೂಲು! ‘ಅದನ್ನೇ ಚಾಲಿಸಿದ್ದು’ ಎಂಬುದು ಆರೋಪವಲ್ಲವೇ? ಈ ಬ್ರಾಂಡು ಪಿಸ್ತೂಲು, ಗೋಲಿ ಚಾಲಿಸುವಾಗ ಶಬ್ದವನ್ನು ಮಾಡುವುದಿಲ್ಲ, ಹೊಗೆಯನ್ನೂ ಬಿಡುವುದಿಲ್ಲ!
ಪಂಚನಾಮೆ: ‘ಪಂಚನಾಮೆ’ಯ ನಾಟಕವಾಯ್ತು. ಇಲ್ಲೇನು ಹೇಳಿದೆ? ಮೂರು ಗುಂಡುಗಳು ಗಾಂಧಿಯ ಶರೀರದ ಎಡಭಾಗದ ಕೆಳಗಿನಿಂದ ಹಾದು, ಪಕ್ಕೆಲುಬುಗಳನ್ನು ಒಡೆದುಕೊಂಡು, ಶರೀರದ ಆಚೆಗೆ ಬಲಗಡೆಯ ಮೇಲುಭಾಗದಿಂದ ತೂರಿ ಹೋದವು’ ಎಂದು. ಇಷ್ಟು ಸಾಕಲ್ಲ? ಇವು ಗೋಡ್ಸೆಯವಾಗಿರಲು ಶಕ್ಯವಿರಲಿಲ್ಲ! ನೆನಪಿಡಿ- ಬರೀ 3 ಗುಂಡುಗಳು. ಇದಾದ ಎಷ್ಟೋ ಹೊತ್ತಿನ ಮೇಲೆ ಅಪರಾಧ ಶೋಧ ಶಾಸ್ತ್ರ ವಿಭಾಗಾಧಿಕಾರಿ ಬರುತ್ತಾನೆ. ಅವನ ಹೇಳಿಕೆಯಂತೆ, ಗಾಂಧಿ ಶರೀರದೊಳಗೆ ಹಾದುಹೋದವು ‘4 ಗುಂಡುಗಳಂತೆ’. ತನ್ನ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ, ಅವು ‘ಜೀವಂತ’ ಸಾಚಾ ‘ಗೋಲಿ’ ಎಂತ ಪ್ರಯೋಗದಲ್ಲಿ ತಿಳಿಯಿತಂತೆ.
ಸತ್ಯ ಹೀಗಿತ್ತು!: ಗಾಂಧಿಯನ್ನು ಕೊಂದವನು ಇಟಾಲಿಯನ್ ಪಿಸ್ತೂಲ್ ಪ್ರಯೋಗಿಸಿದವನಲ್ಲ! ಬೇರೊಬ್ಬ, ಅವನದು ರಿವಾಲ್ವರ್ ಆಗಿತ್ತು. ಎರಡೂ ಆಯುಧಗಳ ರೀತಿ, ಪ್ರಯೋಗ, ಪರಿಣಾಮಗಳು ಬೇರೆಯೇ ಇದ್ದವು. ಇದನ್ನು ಪ್ರಯೋಗಿಸಿದವನು, ಗಾಂಧಿ ಜತೆಗಿದ್ದ ಹೆಣ್ಣುಮಕ್ಕಳು ಧೃಢೀಕರಿಸಿದ ಖಾದರ್!
ಪಂಚನಾಮೆಯಲ್ಲಿ ಹೇಳಿದ್ದೇನು?: ಗುಂಡುಗಳು ಹೊಕ್ಕ ಶರೀರ ಭಾಗದಲ್ಲಿ (ಎಡಕೆಳಗಡೆ) ತೂತುಗಳು ಸಣ್ಣವಿದ್ದವೆಂದೂ, ಹೊರಬಂದ ಶರೀರ ಭಾಗದಲ್ಲಿ (ಮೇಲಿನ ಬಲಗಡೆ) ತುಂಬಾ ದೊಡ್ಡವಾಗಿದ್ದವೆಂದೂ! ಒಟ್ಟು ಮೂರು, ನಾಲ್ಕಲ್ಲ!
ಹಾಗಾದರೆ ಈ ಬಗೆಯ ವ್ಯಾಪಾರ ರಿವಾಲ್ವರ್ ಗುಂಡಿಗೆ ಸಾಧ್ಯ?
ಗಾಂಧಿ ಶರೀರವನ್ನು, ಅಂತ್ಯಸಂಸ್ಕಾರಕ್ಕಾಗಿ, ನೀರಿನಿಂದ ತೊಳೆದು ಶುದ್ಧಿ ಮಾಡಲು ತೊಡಗಿದಾಗ, ಖಾಲಿ ಗುಂಡೊಂದು ಅವರುಟ್ಟಿದ್ದ ವಸ್ತ್ರದ ಮಡಿಕೆಗಳಿಂದ ಹೊರಬಿತ್ತು.
ಇದನ್ನು ಕೋರ್ಟಿನಲ್ಲಿ ಹಾಜರುಪಡಿಸಲಿಲ್ಲವೇಕೆ?
ಇದು ಕೋರ್ಟಿನಲ್ಲಿ ಹಾಜರುಪಡಿಸಲ್ಪಟ್ಟಿದ್ದರೆ, ಗೋಡ್ಸೆ ನಿರಪರಾಧಿ ಎಂದು ಸಾಬೀತಾಗಿ, ಸರ್ಕಾರಿ ವಕೀಲರ ವಾದ ನಿಮೂಲನವಾಗುತ್ತಿತ್ತು ಅದಕ್ಕಾಗಿ. ಪ್ರಯೋಗವಾದದ್ದು ಮೂರೇ ಗೋಲಿ ಆಗಿ ಅದರಲ್ಲಿ ಇದೂ ಸೇರಿದ್ದರೆ ಇದರ ಸೈಜು, ಪ್ರಯೋಗ ರಂಧ್ರದ್ದು ಸರಿ ಹೊಂದದೆ, ಗೋಡ್ಸೆಗೆ ಬಿಡುಗಡೆಯಾಗುತ್ತಿತ್ತು. ಯಾವ ಗೋಲಿಯನ್ನೂ ನ್ಯಾಯಾಧೀಶ ನೇರ ಕಂಗಳಿಂದ ನೋಡಲೇ ಇಲ್ಲ. ಎಲ್ಲವೂ ‘ಹೇಳಿಕೆಗಳ’ ಮೇಲೆ ನಿಂತು, ತೀರ್ಪು ಹೊರಬಿತ್ತು.
ಹತ್ಯೆಗೇನು ಕಾರಣ?: ಭಾರತ ವಿಭಜನೆಯಾದಾಗ, ಅವಿಭಕ್ತ ಖಜಾನೆಯಿಂದ ಪಾಕ್ 55 ಕೋಟಿ ರೂಪಾಯಿ ಕೊಡಬೇಕೆಂದು ಬ್ರಿಟಿಷರೆದುರು ಒಪ್ಪಂದವಾಗಿತ್ತಷ್ಟೆ! ಅದೇ ಆಗ ಪಾಕ್, ತನ್ನ ಸೇನೆಯನ್ನು ‘ಗುಡ್ಡಗಾಡು ಜನರ’ ಸೋಗಿನಲ್ಲಿ ಕಾಶ್ಮೀರದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡಿತ್ತು. ಆಕ್ರಮಣ ಹಿಂತೆಗೆದುಕೊಳ್ಳುವ ತನಕ ಈ ಹಣವನ್ನು ಪಾಕ್ಗೆ ಕೊಡತಕ್ಕದ್ದಲ್ಲ ಎಂಬ ಠರಾವನ್ನು ಪಾರ್ಲಿಮೆಂಟು, ಕ್ಯಾಬಿನೆಟ್ಟು ‘ಪಾಸ್’ಮಾಡಿತ್ತು. ಇಡೀ ದೇಶವೇ ಸಿಟ್ಟಾಗಿದ್ದ ಈ ಕ್ರೂರ, ಕರಾಳ ಯುದ್ಧ ಕಾಲದಲ್ಲಿ ಭಾರತ ಸಾರ್ವಭೌಮತೆಯ ಅಪಾಯದ, ಸೇನಾಸಾಮರ್ಥ್ಯ ಇನ್ನೂ ಬಲಿತಿರದಿದ್ದ ಆ ದುಷ್ಕಾಲದಲ್ಲಿ ಗಾಂಧಿ ಆ 55 ಕೋಟಿ ಹಣವನ್ನು ಪಾಕ್ಗೆ ಕೊಡಲೇಬೇಕೆಂದು ಹಠ ಹಿಡಿದು, ಉಪವಾಸ ಕುಳಿತುಬಿಟ್ಟರು. ಅಲ್ಲಿಯ ತನಕ ಗೋಡ್ಸೆಗೆ ಗಾಂಧಿಯನ್ನು ಹತ್ಯೆ ಮಾಡುವ ಚಿಂತನೆಯೂ ತಲೆಯಲ್ಲಿ ಬಂದಿರಲಿಕ್ಕಿಲ್ಲ! ಜಗತ್ತಿಗೆ ಆತ ಯಾರೆಂದೂ ತಿಳಿದಿರಲಿಲ್ಲ. ಗಾಂಧಿಯ ಹಠ ಕೆಲಸ ಮಾಡಿತ್ತು. ಆಕ್ರಮಣಕಾರರಿಗೆ ತಲೆಬಾಗಿ ಭಾರತ ಸರ್ಕಾರ ಹಣ ಕೊಟ್ಟಿತು. ಈ 55 ಕೋಟಿ ಬಲಾತ್ಕಾರ ಹಣ ಸಂದಾಯಕ್ಕೆ ಗಾಂಧಿ ಉಪವಾಸ ಕೂಡುವ ಮುನ್ನ ಗೋಡ್ಸೆ ಎರಡು ಉದ್ದೇಶಗಳಿಗಾಗಿ ಶಸ್ತ್ರಾಸ್ತ್ರ ಖರೀದಿಗೆ ಹಣ ಸಂಗ್ರಹಿಸುತ್ತಿದ್ದ ವರದಿಗಳಿವೆ. ದೆಹಲಿಯಲ್ಲಿ ಪಾಕ್ ಸಭೆ ನಡೆಯಲಿದ್ದ ಕಟ್ಟಡವನ್ನು ಸ್ಪೋಟಿಸುವುದು ಹಾಗೂ ಭಾರತದ ಅವಿಭಾಜ್ಯ ಸೇನೆಯ, ವಿಭಜಿತ ಅಂಶ, ಖಂಡವಾಗಿ, ಆಗ ಪಾಕ್ಗೆ ಹೊರಟಿದ್ದ ಶಸ್ತ್ರಾಸ್ತ್ರ ಸರಂಜಾಮು ಹೊತ್ತೊಯ್ಯುತ್ತಿದ್ದ ರೈಲನ್ನು ನಡುವೆ ಸ್ಪೋಟಿಸಿ, ಈ ಶಸ್ತ್ರಗಳು ಪಾಕ್ಗೆ ದೊರೆಯದಂತೆ ಮಾಡುವುದು ಆ ಉದ್ದೇಶ.
ಏಕೆ? ನೆಹರು ‘ನಮಗೆ ಪಾಕ್ ಜೊತೆಗೆ ಯುದ್ಧ ಬೇಡ. ನಾವು ಸ್ನೇಹಪ್ರಿಯರು. ಅಹಿಂಸಾವಾದಿಗಳು. ನಮಗೆ ಯಾತರ ಭಯ? ಈ ಆಯುಧಗಳಿಂದೇನು’? ಎನ್ನುತ್ತ ಬ್ರಿಟಿಷ್ ಸೇನೆಯ ಆಯುಧಗಳನ್ನೆಲ್ಲ ಪಾಕ್ಗೆ ‘ದಾನ’ ಇತ್ತಿದ್ದರು. ‘ಗಾಂಧಿವಾದದಡಿ ಆಡಳಿತ’ ಎಂಬುದು ನೆಹರು ಮಂತ್ರ, ಘೊಷಣೆಯಾಗಿತ್ತು. ಈ ಎರಡೂ ಘಟನೆಗಳು ಗೋಡ್ಸೆಯನ್ನು ಮಾತ್ರವಲ್ಲ, ಯಾವ ದೇಶಾಭಿಮಾನಿ ಭಾರತೀಯನನ್ನು ಕೆರಳಿಸಬೇಕಾಗಿದ್ದ ಕಾಲ! ಗೋಡ್ಸೆ ರೇಗಿದ್ದು ಅಚ್ಚರಿಯೇ?
ಗೋಡ್ಸೆ ಹೇಳಿದ್ದು: ನಾಥೂರಾಮ್ ತನ್ನ ವಕೀಲರಿಗೆ ಖಡಾಖಂಡಿತವಾಗಿ ಹೇಳಿದ್ದು. ‘ಇಲ್ಲಿ ನಾನೊಬ್ಬನೇ ಅಪರಾಧಿ-ಗಾಂಧಿ ಹತ್ಯೆಯಲ್ಲಿ ಬೇರಾವ ಪಿತೂರಿಯೂ ಇಲ್ಲ. ಎಲ್ಲ ಸ್ವಯಂಪ್ರೇರಣೆಯಿಂದ ಎಂದು ನಿರೂಪಿಸಬೇಕು ಎಂತ. ಆದುದರಿಂದ ನಾಥೂರಾಮ್ ಪರ ವಕೀಲರು, ಎದುರಾಳಿಗಳ ಪರ-ಸರ್ಕಾರಿ ಸಾಕ್ಷ್ಯಳನ್ನು, ಪರೀಕ್ಷಿಸುವ, ಪಾಟೀ ಸವಾಲಿನ ಗೋಜಿಗೆ ಹೋಗಬಾರದೆಂದು ಗೋಡ್ಸೆ ಆಜ್ಞೆ ಮಾಡಿದ್ದು. ಆದುದರಿಂದಲೇ ಯಾರನ್ನೂ ಪರೀಕ್ಷಿಸಲೂ ಇಲ್ಲ. ಅಲ್ಲೇ ಪರೀಕ್ಷಿಸಿದ್ದರೆ ನಿಜ ಅಪರಾಧಿ ಅವನ ಹಿಂದಿನ ಖಾದೀಧಾರಿಗಳು, ಪಿತೂರಿಗಾರರು ಬಯಲಾಗುತ್ತಿದ್ದರು. ಆಗಬೇಕಿತ್ತು. ಗೋಡ್ಸೆ ಬಯಸಿದ್ದೇ ಬೇರೆ, ‘ರಾಜಕಾರಣಿ’ ಮಾಡಿದ್ದೇ ಬೇರೆಯಾಗಿ, ಇಂದಿಗೂ ಸುಳ್ಳಿಗೇ ಪಟ್ಟಾಭಿಷೇಕ ಆಗಿದೆ.
ಇದನ್ನು ಬಿಡಿ, ಗಾಂಧಿ ಮೈ ಹೊಕ್ಕ ಗುಂಡುಗಳೆಷ್ಟು ? ಹೊರಬಂದವು ಎಷ್ಟು? ಎಂಬುದನ್ನೆಲ್ಲ ಏಕೆ ಯಾರೂ ವಿಚಾರಿಸಲಿಲ್ಲ? ಖಾಲಿ ಗುಂಡುಗಳನ್ನೇಕೆ ಯಾರೂ ಪರೀಕ್ಷಿಸಲಿಲ್ಲ? ಈ ಗಡಿಬಿಡಿ ಏಕೆ? ಏನರ್ಥ? ಏನು ಸಿದ್ಧ ಮಾಡಲು ಯಾರು ಹೊರಟಿದ್ದರು? ಬಗೆಹರಿಯದ ಪ್ರಶ್ನೆಯಾಗಿ ಉಳಿದಿದೆ!
(ಲೇಖಕರು ‘ವಿಜಯವಾಣಿ’ ಸಂಪಾದಕರು)