ಐತಿಹಾಸಿಕ ನಿರ್ಧಾರ ಕೈಗೊಳ್ಳುವ ಅವಕಾಶ ಮುಸ್ಲಿಂ ಸಮುದಾಯದ ಎದುರಿದೆ : ವಿಸ್ತಾರ ಅಂಕಣ

ಕಾಶಿಯ ಜ್ಞಾನವಾಪಿ ಮಸೀದಿಯ ಆವರಣದಲ್ಲಿ 31 ವರ್ಷದ ನಂತರ ಪೂಜೆ ನಡೆಯುತ್ತಿದ್ದಂತೆಯೇ ದೇಶಾದ್ಯಂತ ಹಿಂದೂಗಳಲ್ಲಿ ಸಂಚಲನ ಸೃಷ್ಟಿಯಾಗಿದೆ. ಅಯೋಧ್ಯೆಯ ರೀತಿಯಲ್ಲೇ ಕಾಶಿಯಲ್ಲೂ ವಿಶ್ವೇಶ್ವರನ ಭವ್ಯ ಮಂದಿರವನ್ನು ಕಾಣಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
**********************
1992ರ ಡಿಸೆಂಬರ್‌ 6ರಂದು ಅಯೋಧ್ಯೆಯಲ್ಲಿ ಬಾಬರಿ ಕಟ್ಟಡ ಧ್ವಂಸವಾಯಿತು. ಕರಸೇವಕರು ತಮ್ಮ ಕರಗಳಿಂದಲೇ ಕಲ್ಲು, ಕಬ್ಬಿಣ ಹಿಡಿದು ಮೂರು ಗುಮ್ಮಟಗಳನ್ನು ಕೆಡವಿದರು. ಅಂದು ಕರಸೇವೆಯ ಎಚ್ಚರಿಕೆ ನೀಡಿ ಸರ್ಕಾರವನ್ನು ಬಗ್ಗಿಸಲು ಜನರನ್ನು ಹುರಿದುಂಬಿಸಿದ್ದ ನಾಯಕರು ಜನರನ್ನು ನಿಯಂತ್ರಿಸಲು ಸತತ ಪ್ರಯತ್ನ ನಡೆಸಿದರು. ಆದರೆ ನಾಯಕರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಕರಸೇವಕರು ಇರಲಿಲ್ಲ. ನೇರವಾಗಿ ಸ್ಥಳಕ್ಕೆ ನುಗ್ಗಿ ತನ್ನ ಐದು ಶತಮಾನಗಳ ಸಿಟ್ಟನ್ನು ಸಮಾಜ ಹೊರಹಾಕಿಕೊಂಡಿತು.
ಸ್ವತಂತ್ರ ಭಾರತದಲ್ಲಿ ನಮ್ಮದೇ ಸಂವಿಧಾನ, ಕಾನೂನುಗಳಿವೆ. ನಾವೇ ಒಪ್ಪಿಕೊಂಡಿರುವ, ಅಪ್ಪಿಕೊಂಡಿರುವ ಸಂವಿಧಾನ ಇದು. ಅಂತಹದ್ದರಲ್ಲಿ, ಕಾನೂನನ್ನು ಕೈಗೆತ್ತಿಕೊಂಡು ವಿವಾದಿತ ಸ್ಥಳವನ್ನು ವಶಕ್ಕೆ ಪಡೆಯುವುದು ಕಾನೂನು ಪ್ರಕಾರ ತಪ್ಪೆ. ಸ್ವತಃ ಈ ಘಟನೆಗೆ ಸಾಕ್ಷಿಯಾದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರೂ ಕರ್ನಾಟಕದಲ್ಲಿ ಸುದ್ದಿಗೋಷ್ಠಿ ನಡೆಸಿದಾಗಲೂ ಈ ಘಟನೆ ನಡೆದದ್ದು ಸರಿಯಲ್ಲ ಎಂದೇ ಹೇಳಿದರು. ಆಡ್ವಾಣಿಯವರು ಇದಕ್ಕಾಗಿ ವ್ಯಥೆ ಪಟ್ಟರು. ಆದರೆ ಅವರಾರಿಗೂ ಇದನ್ನು ತಡೆಯಲು ಸಾಧ್ಯವಾಗಲಿಲ್ಲ. ಅಷ್ಟರ ಮಟ್ಟಿಗೆ ಹಿಂದೂಗಳ ಮಡುಗಟ್ಟಿದ ಮೌನದ ಕಟ್ಟೆ ಒಡೆದಿತ್ತು.
ಜನವರಿ 22ರಂದು ಆಗಿದ್ದೂ ಅದೇ. ಜನವರಿ 1ರಿಂದ 15ರವರೆಗೆ ದೇಶಾದ್ಯಂತ ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌, ಬಿಜೆಪಿ ಸೇರಿ ಒಟ್ಟಾರೆ ಸಂಘ ಪರಿವಾರದ ಎಲ್ಲ ಸಂಘಟನೆಗಳೂ ಮನೆಮನೆಗೆ ತೆರಳಿ ಅಯೋಧ್ಯೆಯ ಅಕ್ಷತೆ, ಆಹ್ವಾನ ಪತ್ರಿಕೆ ನೀಡುವ ಕಾರ್ಯ ಕೈಗೊಂಡಿದ್ದವು. ಮನೆಗೆ ಬಂದ ಅಕ್ಷತೆ ಹಾಗೂ ಆಮಂತ್ರಣವನ್ನು ಯಾರು ತಾನೆ ತಿರಸ್ಕರಿಸುತ್ತಾರೆ? ಅನೇಕರಂತೂ ಸ್ವತಃ ರಾಮನೇ ಮನೆಗೆ ಬಂದ ಎನ್ನುವಷ್ಟು ಭಾವನಾತ್ಮಕವಾಗಿ, ಬಾಗಿಲಲ್ಲೇ ಕಾರ್ಯಕರ್ತರನ್ನು ನಿಲ್ಲಿಸಿ, ಕೈಕಾಲು ತೊಳೆದು, ಆರತಿ ಬೆಳಗಿ ಒಳಗೆ ಕರೆದುಕೊಂಡು ಅಕ್ಷತೆ ಹಾಗೂ ಆಹ್ವಾನಪತ್ರಿಕೆ ಪಡೆದರು. ಜನವರಿ 21ರ ರಾತ್ರಿ ವೇಳೆಗೆ ದೇಶದ ಯಾವ ಮೂಲೆಯಲ್ಲಿ ನೋಡಿದರೂ ಅಲ್ಲೊಂದು ರಾಮನ ಚಿತ್ರ, ಫ್ಲೆಕ್ಸ್‌, ಧ್ವಜಗಳು, ಕೇಸರಿ ತೋರಣಗಳು ರಾರಾಜಿಸುತ್ತಿದ್ದವು. ಗುಡಿಸಲಿನಿಂದ ಅಪಾರ್ಟ್‌ಮೆಂಟ್‌ವರೆಗೂ ಶ್ರೀರಾಮನ ಧ್ವಜಗಳು ಹಾರಾಡುತ್ತಿದ್ದವು. ಧ್ವಜ ಹಾರಿಸುವಂತೆ ಸಂಘಪರಿವಾರದ ಸಂಘಟನೆಗಳು ಕರೆ ನೀಡಿದವರಷ್ಟೆ ಅಲ್ಲದೆ, ಯಾವುದೇ ಸಂಘಟನೆ, ರಾಜಕೀಯದೊಂದಿಗೆ ಸಂಬಂಧವೂ ಇಲ್ಲದವರೂ ಧ್ವಜ ಹಾರಿಸಿದರು.
ಬೆಂಗಳೂರಿನ ಒಂದು ಪ್ರದೇಶದಲ್ಲಿ ನನ್ನ ಪರಿಚಯಸ್ಥರೊಬ್ಬರಿದ್ದಾರೆ. ಅವರು ಹೇಳಿದ ಘಟನೆ. ಹಿಂದಿನ ದಿನ ಅಲ್ಲಿನ ಯುವಕರು ಹರಟೆ ಹೊಡೆಯುತ್ತ ಕುಳಿತಿದ್ದರು. ಅವರಲ್ಲೊಬ್ಬ, ಎಲ್ಲ ಕಡೆ ರಾಮನ ಧ್ವಜ ಹಾರಿಸುತ್ತಿದ್ದಾರೆ, ಫೋಟೊ ಇಟ್ಟು ಪೂಜೆ ಮಾಡುತ್ತಿದ್ದಾರೆ. ನಮ್ಮ ರೋಡಲ್ಲಿ ನೋಡಿದರೆ ಏನೂ ಕಾಣುತ್ತಿಲ್ಲ ಎಂದ. ಕೂಡಲೆ ಅಲ್ಲಿದ್ದವರಲ್ಲಿ, ನಾವೇನೋ ಅಪರಾಧ ಮಾಡುತ್ತಿದ್ದೇವೆ ಎಂಬ ಭಾವನೆ ಮೂಡಿತು. ದೇಶವೆಲ್ಲ ಸಂಭ್ರಮಿಸುತ್ತಿರುವಾಗ ನಾವು ಮಾತ್ರ ಸುಮ್ಮನಿರುವುದು ಹೇಗೆ? ಈಗಲೆ ತಯಾರಿ ಮಾಡೋಣ ಎಂದು ನಿರ್ಧರಿಸಿದರು. ಜನವರಿ 22ರ ಬೆಳಗ್ಗೆ ರಸ್ತೆಯೆಲ್ಲ ಸಿಂಗಾರವಾಗಿತ್ತು. ಶ್ರೀರಾಮನ ಒಂದು ದೊಡ್ಡ ಫ್ಲೆಕ್ಸ್‌ ನಿಲ್ಲಿಸಿ ಅದರೆದುರು ದೀಪ ಹಚ್ಚಿ, ದೊಡ್ಡ ಎಲ್‌ಇಡಿ ಟಿವಿಯನ್ನೂ ಅಳವಡಿಸಿದರು. ಸಾರ್ವಜನಿಕರೆಲ್ಲ ಅಯೋಧ್ಯೆಯ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಂಡರು. ನಂತರ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ನೀಡಿದರು.
ನನ್ನ ಸ್ನೇಹಿತರು ಹೇಳಿದ ಈ ರೀತಿಯ ಘಟನೆಗಳು ದೇಶದ ಅನೇಕ ಕಡೆಗಳಲ್ಲಿ ನಡೆಯಿತು. ಕಮ್ಯುನಿಸ್ಟರು ಅಲ್ಪಸ್ವಲ್ಪ ರಾಜಕೀಯವಾಗಿ ಉಳಿದಿರುವ ಕೇರಳದಲ್ಲೂ ಇಂಥಾ ಅಭೂತಪೂರ್ವ ಸಡಗರದ ವಿಡಿಯೋ ಒಂದು ವೈರಲ್ ಆಗಿದ್ದನ್ನು ನಾವೆಲ್ಲಾ ನೋಡಿದೆವು.
ಇದು ಸಂಘಟನೆಗಳ ಆಕಾಂಕ್ಷೆ, ನಿರೀಕ್ಷೆಯನ್ನು ಮೀರಿ, ಒಂದು ಜನಸಮುದಾಯ ಸ್ಪಂದಿಸಿದಾಗ ಏನಾಗುತ್ತದೆ ಎನ್ನುವುದಕ್ಕೆ ಸಾಕ್ಷಿ. ಈಗ ಅಯೋಧ್ಯೆ ವಿಚಾರದ ನಂತರ ಕಾಶಿ ವಿಶ್ವನಾಥನ ಕಡೆಗೆ ದೇಶದ ಜನರ ದೃಷ್ಟಿ ನೆಟ್ಟಿದೆ. ಜ್ಞಾನವಾಪಿ ಮಸೀದಿಯು ಹಿಂದೂ ದೇವಾಲಯವನ್ನು ಕೆಡವಿ ನಿರ್ಮಿಸಿರುವ ಕಟ್ಟಡ ಎಂದು ಹೇಳಲು ಯಾವುದೇ ಭಾರತೀಯ ಪುರಾತತ್ವ ಸರ್ವೇಕ್ಷಣದ ಅಧಿಕಾರಿಯೋ, ಶಿಲಾಶಾಸನ ತಜ್ಞರೋ ಬೇಕಾಗಿಲ್ಲ. ಮಸೀದಿಯ ಹಿಂಭಾಗದಲ್ಲಿ ಈಗಲೂ ಜೀವಂತವಾಗಿರುವ ದೇವಾಲಯದ ಕಟ್ಟಡ ನೋಡಿದರೂ ಸಾಕು, ಮಸೀದಿಯಿರುವ ಸ್ಥಳದಲ್ಲಿ ಆಕಾಶದ ಕಡೆಗೆ ಮುಖ ಮಾಡಿಕೊಂಡು ಕುಳಿತ ನಂದಿಯ ಭಾವಚಿತ್ರವನ್ನು ನೋಡಿದರೂ ಸಾಕು, ಜನಸಾಮಾನ್ಯರಿಗೂ ಈ ವಿಚಾರ ಮನವರಿಕೆ ಆಗುತ್ತದೆ. ಆದರೂ ವಿಚಾರ ನ್ಯಾಯಾಂಗ ವಿಚಾರಣೆಯಲ್ಲಿರುವ ಕಾರಣ ಪುರಾತತ್ವ ಸರ್ವೇಕ್ಷಣ ಸಮೀಕ್ಷೆಯನ್ನು ನಡೆಸಲಾಗಿದೆ. ಅಲ್ಲಿ ಸಿಕ್ಕ ಸಾಕ್ಷಿಗಳು, ಈ ಸ್ಥಳದಲ್ಲಿ ಹಿಂದೂ ದೇವಾಲಯ ಇತ್ತು ಎನ್ನುವುದನ್ನು ಅಯೋಧ್ಯೆಯ ಉತ್ಖನನಕ್ಕಿಂತಲೂ ಸ್ಪಷ್ಟವಾಗಿ ಸಾರಿಸಾರಿ ಹೇಳುತ್ತಿವೆ.
ಈ ನಡುವೆ, ಮಸೀದಿಯ ನೆಲಮಹಡಿಯಲ್ಲಿ ಪೂಜೆಗೆ ಅವಕಾಶ ನೀಡಬೇಕು ಎಂಬ ಹಿಂದೂ ಕಕ್ಷಿದಾರರ ಮನವಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ, ಪೂಜೆಯೂ ಆರಂಭವಾಗಿದೆ. 31 ವರ್ಷದ ನಂತರ ಪೂಜೆ ನಡೆಯುತ್ತಿದ್ದಂತೆಯೇ ದೇಶಾದ್ಯಂತ ಹಿಂದೂಗಳಲ್ಲಿ ಸಂಚಲನ ಸೃಷ್ಟಿಯಾಗಿದೆ. ಅಯೋಧ್ಯೆಯ ರೀತಿಯಲ್ಲೇ ಕಾಶಿಯಲ್ಲೂ ವಿಶ್ವೇಶ್ವರನ ಭವ್ಯ ಮಂದಿರವನು ಕಾಣಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಈ ನಡುವೆ, ಜ್ಞಾನವಾಪಿ ಮಸೀದಿಯ ನಿರ್ವಹಣೆಯನ್ನು ಮಾಡುತ್ತಿರುವ ಅಂಜುಮನ್‌ ಇಂತೆಜಾಮಿಯಾ ಸಮಿತಿಯು ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಶುಕ್ರವಾರ ʼಬನಾರಸ್‌ ಬಂದ್‌ʼಗೆ ಕರೆ ನೀಡಿದ್ದು ಆಘಾತಕಾರಿ ವಿಚಾರ. ಈ ಬಂದ್‌ ಕುರಿತು ಲಭ್ಯ ವರದಿಗಳ ಪ್ರಕಾರ, ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಬಂದ್‌ ಯಶಸ್ವಿಯಾಗಿದೆ. ಆದರೆ ಇನ್ನಿತರೆ ಪ್ರದೇಶಗಳಲ್ಲಿ ಬೆಂಬಲ ಸಿಕ್ಕಿಲ್ಲ. ವ್ಯಾಪಾರ ವ್ಯವಹಾರ ಸಾಮಾನ್ಯ ರೀತಿಯಂತೆಯೇ ನಡೆದಿದೆ. ಮೊದಲನೆಯದಾಗಿ, ಹಿಂದೂ ಕಕ್ಷಿದಾರರು ಪೂಜೆಗೆ ನ್ಯಾಯಾಲಯ ಅವಕಾಶ ನೀಡಿದ ನಂತರವಷ್ಟೆ ಒಳಪ್ರವೇಶಿಸಿದ್ದಾರೆ. ಅಂದರೆ ನ್ಯಾಯಾಲಯದ ವ್ಯವಸ್ಥೆ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದಾರೆ. ಆದರೆ ಮುಸ್ಲಿಂ ಕಕ್ಷಿದಾರರು ನ್ಯಾಯಾಲಯಕ್ಕೆ ʼತಮಗೆ ಬೇಕಾದಂತೆ ತೀರ್ಪು ಬಂದರೆ ಮಾತ್ರ ಒಪ್ಪುವʼ ಮಾನಸಿಕತೆಯನ್ನು ಹೊಂದಿರುವರೇ ಎಂಬ ಅನುಮಾನಗಳು ಮೂಡುತ್ತಿವೆ. ನ್ಯಾಯಾಂಗದ ತೀರ್ಪನ್ನು ವಿರೋಧಿಸಿ ಬಂದ್‌ಗೆ ಕರೆ ನೀಡುವುದು ಯಾವುದೇ ಕಾರಣಕ್ಕೆ ಒಪ್ಪತಕ್ಕಂತಹ ವಿಚಾರವಲ್ಲ. ಬಾಯಿ ತೆರೆದರೆ ಸಂವಿಧಾನ, ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಹೆಸರೇಳಿ ರಾಜಕೀಯ ಮಾಡುವ ಕಾಂಗ್ರೆಸ್‌ ಹಾಗೂ ಇನ್ನಿತರೆ ಪಕ್ಷಗಳು ಈಗ ಮಾತ್ರ ಬಾಯಿಗೆ ಬೀಗ ಹಾಕಿಕೊಂಡಿರುವುದು ನಿರೀಕ್ಷಿತವೆ. ಎರಡನೆಯದಾಗಿ, ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಬಂದ್‌ ನೀಡಿದ್ದರಿಂದಾಗಿ ಕಾಶಿಯನ್ನೇ ಹಿಂದೂ ಹಾಗೂ ಮುಸ್ಲಿಂ ಎಂದು ವಿಭಜಿಸುವ ಕಾರ್ಯಕ್ಕೂ ಇದು ಅವಕಾಶ ನೀಡಿದೆ. ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಬಂದ್‌ಗೆ ಬೆಂಬಲಿಸಿದವರದ್ದು ಸರಿಯೋ ಅಥವಾ ನ್ಯಾಯಾಲಯದ ತೀರ್ಪನ್ನು ಮಾನ್ಯ ಮಾಡುವುದು ಸರಿಯೋ? ಮುಸ್ಲಿಂ ಸಮುದಾಯಕ್ಕೆ ದಾರಿತಪ್ಪಿಸಿ ಇಂತಹ ಕೃತ್ಯಗಳಿಗೆ ಪ್ರಚೋದನೆ ನೀಡುವ ದೊಡ್ಡ ಬುದ್ಧಿಜೀವಿ ವರ್ಗವೇ ಈ ದೇಶದಲ್ಲಿದೆ. ಈ ಕುರಿತು ಕಳೆದ ವಾರದ ಲೇಖನದಲ್ಲೇ ಪ್ರಸ್ತಾಪಿಸಲಾಗಿತ್ತು.
ಅಯೋಧ್ಯೆಯ ತೀರ್ಪು ಹೊರಬಂದ ನಂತರದಲ್ಲಿ ಹಿಂದೂಗಳು ಹಾಗೂ ಹಿಂದೂ ಸಂಘಟನೆಗಳು ಕಾಶಿಯತ್ತ ಮುಖ ಮಾಡಿವೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಇದು ಶುದ್ಧ ಸುಳ್ಳು. ಅಯೋಧ್ಯೆ, ಕಾಶಿ ಹಾಗೂ ಮಥುರಾದಲ್ಲಿ ಕ್ರಮವಾಗಿ ರಾಮಲಲ್ಲಾ, ಶಿವ ಹಾಗೂ ಕೃಷ್ಣನ ಮಂದಿರ ನಿರ್ಮಾಣ ಮಾಡಬೇಕೆಂಬುದು ಹಿಂದೂ ಸಮಾಜ ಕಳೆದ ಆರೇಳು ದಶಕದಿಂದ ಜಪಿಸುತ್ತಿರುವ ಮಂತ್ರ.
1992ರಲ್ಲಿ ಬಾಬರಿ ಕಟ್ಟಡ ಧ್ವಂಸವಾದ ನಂತರ ಲೋಕಸಭೆ ಅಧಿವೇಶನದಲ್ಲಿ ಗದ್ದಲವೋ ಗದ್ದಲ. ಯಾವ ಕಲಾಪವೂ ನಡೆಯಲಿಲ್ಲ. ಗದ್ದಲದ ನಡುವೆ ಸದನವನ್ನು ನಡೆಸುವುದು ಅಸಾಧ್ಯ ಎನ್ನುವಂತಾಯಿತು. ಹಾಗಾಗಿ ಸದನವನ್ನು ಮುಂದೂಡಲಾಯಿತು. ಈ ಸಮಯದಲ್ಲಿ ಉಪಸ್ಥಿತರಿದ್ದ ಕೆಲವು ಸದಸ್ಯರು ಘೋಷಣೆ ಹಾಕಿದ್ದು, “ʼಯಹ್ ತೋ ಪಹಲೀ ಝಾಂಕೀ ಹೈ, ಮಥುರಾ ಕಾಶೀ ಬಾಕೀ ಹೈʼ ಎಂದು. ಅಂದರೆ, ಅಯೋಧ್ಯೆ ಕೇವಲ ಆರಂಭವಷ್ಟೆ, ಮಥುರಾ ಹಾಗೂ ಕಾಶಿಯ ಕಾರ್ಯ ಬಾಕಿಯಿದೆ ಎಂದು. ಅಯೋಧ್ಯೆಯಷ್ಟೇ ಪ್ರಮಾಣದಲ್ಲಿ ಮಥುರಾ ಹಾಗೂ ಕಾಶಿಯ ಕಾರ್ಯವನ್ನೂ ಹಿಂದೂ ಸಮಾಜ ಗಂಭೀರವಾಗಿ ಪರಿಗಣಿಸಿದೆ. ಉತ್ಖನನದಂತಹ ಸಾಕ್ಷ್ಯಾಧಾರ ಸಂಗ್ರಹದ ಮೂಲಕ ಪ್ರಕರಣವು ನ್ಯಾಯಾಂಗದ ಮಾರ್ಗದಲ್ಲಿ ಹೊರಟರೆ, ಕಾಶಿ ಹಾಗೂ ಮಥುರಾದಲ್ಲಿ ಮಸೀದಿಗಳ ಕೆಳಗೆ ಹಿಂದೂ ದೇವಾಲಯಗಳಿದ್ದವು ಎಂದು ನಿರೂಪಿಸುವುದು ಬಹಳ ಕಷ್ಟವೇನಲ್ಲ ಎನ್ನುವುದು ಮೇಲ್ನೋಟಕ್ಕೇ ಕಾಣುತ್ತಿದೆ.
ಆದರೂ ಕೆಲವು ಬುದ್ಧಿಜೀವಿಗಳು ಮುಸ್ಲಿಮರ ದಾರಿತಪ್ಪಿಸಿ, ಅವರನ್ನು ನ್ಯಾಯಾಲಯದ ವಿರುದ್ಧವೇ ಎತ್ತಿಕಟ್ಟುತ್ತಿದ್ದಾರೆ. ದೇಶದಲ್ಲಿ ಮುಸ್ಲಿಂ ಆಕ್ರಮಣಕಾರರಿಂದ ನಾಶವಾಗಿರುವುದು 36 ಸಾವಿರಕ್ಕೂ ಹೆಚ್ಚು ಮಂದಿರಗಳು. ಆದರೆ ಹಿಂದೂಗಳು ಅದೆಲ್ಲವನ್ನೂ ಕೇಳುತ್ತಿಲ್ಲ. ಬದಲಿಗೆ, ಮೂರು ಸ್ಥಳಗಳನ್ನು ಮಾತ್ರ ಕೇಳುತ್ತಿದ್ದಾರೆ. ಮುಸ್ಲಿಂ ಸಮಾಜ ನ್ಯಾಯಾಲಯದಲ್ಲಿ ಸೆಣಸಲು ಎಲ್ಲ ಸಾಂವಿಧಾನಿಕ ಹಕ್ಕೂ ಇದೆ. ಆದರೆ ಅಯೋಧ್ಯೆಯ ಮಂದಿರ ವಿಚಾರದಲ್ಲಿ ನ್ಯಾಯಾಲಯದ ಮೂಲಕವೇ ಹಿಂದೂ ಸಮಾಜ ಗೆದ್ದಿತು. ಈಗಲೂ ನ್ಯಾಯಾಂಗ ಪ್ರಕ್ರಿಯೆಯ ಬದಲಿಗೆ, ಮುಸ್ಲಿಂ ಸಮುದಾಯವೇ ಸ್ವಯಂಪ್ರೇರಿತವಾಗಿ ಎರಡು ಸ್ಥಳಗಳನ್ನು ಮಂದಿರ ನಿರ್ಮಾಣಕ್ಕೆ ನೀಡಿಬಿಟ್ಟರೆ ಭಾರತದಲ್ಲಿ ಸೌಹಾರ್ದತೆಯ ಹೊಸ ಇತಿಹಾಸ ಆರಂಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಎಷ್ಟೇ ಎಂದರೂ ಐತಿಹಾಸಿಕವಾಗಿ ನೋಡಿದರೆ, ಈಗಿನ ಭಾರತೀಯ ಮುಸ್ಲಿಮರ ಪೂರ್ವಜರೂ ಹಿಂದೂಗಳೆ. ಇವೆರಡೂ ಸ್ಥಳಗಳನ್ನು ಮಂದಿರ ನಿರ್ಮಾಣಕ್ಕೆ ಬಿಟ್ಟುಕೊಡುವುದರಿಂದ ಅವಮಾನ ಎಂದು ಭಾವಿಸುವ ಬದಲು ತಮ್ಮ ಪೂರ್ವಜನರಿಗೆ ನೀಡುತ್ತಿರುವ ಉಡುಗೊರೆ ಎಂದೂ ಭಾವಿಸಬಹುದು. ಆದರೆ ತುಷ್ಟೀಕರಣದ ಹೆಸರಿನಲ್ಲಿ ಮುಸ್ಲಿಮರ ಓಟು ಪಡೆಯುತ್ತ, ಮುಸ್ಲಿಂ ಸಮಾಜವನ್ನು ಅಭಿವೃದ್ಧಿಯಾಗಲೂ ಬಿಡದ ಕೆಲವು ಬುದ್ಧಿಜೀವಿಗಳು ಹಾಗೂ ರಾಜಕೀಯ ಪಕ್ಷಗಳು ಇದಕ್ಕೆ ಅವಕಾಶ ಕೊಡುತ್ತವೆಯೇ ಎನ್ನುವುದು ಪ್ರಶ್ನೆ. ಆದರೆ ಮುಸ್ಲಿಂ ಸಮುದಾಯದ ಎದುರು ಒಂದು ಐತಿಹಾಸಿಕ ನಿರ್ಧಾರ ಕೈಗೊಳ್ಳುವ ಸದವಕಾಶವಂತೂ ಇದೆ ಎನ್ನುವುದು ಮಾತ್ರ ಸತ್ಯ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top