ಈಗ ಇರುವುದು ಕಾಂಗ್ರೆಸ್‌ ದೇಹ, ಕಮ್ಯುನಿಸ್ಟ್‌ ಆತ್ಮ!

ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಲೇ ಸಂವಿಧಾನ ಉಳಿಸಿ ಎಂದು ಹೋರಾಡುವುದು ಎಂದರೆ ಏನು? ಇದೆಲ್ಲವೂ ಪರದೆಯ ಹಿಂದೆ ಕಮ್ಯೂನಿಸ್ಟರು ಆಡುತ್ತಿರುವ, ಆಡಿಸುತ್ತಿರುವ ಆಟ. ಕಾಂಗ್ರೆಸ್ ಕೇವಲ ದೇಹವಷ್ಟೆ.
******************************
ಕಾಂಗ್ರೆಸ್‌ ಪಕ್ಷ ಇತ್ತೀಚೆಗೆ ಸಂವಿಧಾನದ ಜಪ ಮಾಡುತ್ತಿದೆ. ಕೇಂದ್ರದಲ್ಲಿ ಹತ್ತು ವರ್ಷದಿಂದ ಅಧಿಕಾರ ನಡೆಸುತ್ತಿರುವ ಕೇಂದ್ರ ಸರ್ಕಾರ ಸಂವಿಧಾನವನ್ನು ಬುಡಮೇಲು ಮಾಡುತ್ತಿದೆ, ಅದನ್ನು ಉಳಿಸಬೇಕಿದೆ ಎಂದು ಬೊಬ್ಬೆ ಹಾಕುತ್ತಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಬೃಹತ್‌ ʼಅಂತಾರಾಷ್ಟ್ರೀಯ ಸಮಾವೇಶʼವನ್ನೇ ನಡೆಸಿದೆ.
ಅಷ್ಟಕ್ಕೂ ಕಾಂಗ್ರೆಸ್‌ ಹೇಳುತ್ತಿರುವಂತೆ ಕೇಂದ್ರ ಸರ್ಕಾರ ಸಂವಿಧಾನವನ್ನು ಬುಡಮೇಲು ಮಾಡಿದೆ ಎಂದೇ ಇಟ್ಟುಕೊಂಡರೂ ಸರ್ಕಾರದ ವಿರುದ್ಧ ಇಷ್ಟೆಲ್ಲ ಆರೋಪ ಮಾಡುತ್ತಿರುವವರನ್ನೆಲ್ಲ ಬಂಧಿಸಿರಬೇಕಿತ್ತಲ್ಲ? ಪ್ರಧಾನಿ ನರೇಂದ್ರ ಮೋದಿಯವರು ನ್ಯಾಯಾಂಗವನ್ನೂ ತಮ್ಮ ಕಪಿಮುಷ್ಠಿಗೆ ತೆಗೆದುಕೊಂಡಿದ್ದಾರೆ ಎಂದು ಇವರೆಲ್ಲ ಆರೋಪಿಸುತ್ತಿರುವುದು ನಿಜವೇ ಆಗಿದ್ದರೆ ಈ ಕೇಂದ್ರ ಸರ್ಕಾರವೇ ಜಾರಿ ಮಾಡಿದ್ದ ಎಲೆಕ್ಟೆರೋಲ್ ಬಾಂಡ್‌ಗಳನ್ನು ಸುಪ್ರೀಂಕೋರ್ಟ್‌ ಹೊಡೆದುಹಾಕಬಾರದಿತ್ತಲ್ಲ? ದಿನನಿತ್ಯ ಕೇಂದ್ರ ಸರ್ಕಾರವನ್ನು, ಪ್ರಧಾನಿಯವರನ್ನು ತೆಗಳಿಕೊಂಡೇ ಇವರ ಆಸ್ತಿಗಳೂ ಹೆಚ್ಚಾಗುತ್ತಿವೆ ಎಂದರೆ ಈ ದೇಶದಲ್ಲಿ ಸಂವಿಧಾನ ಎನ್ನುವುದು ಸಜೀವವಾಗಿದೆ ಎಂದೇ ಅರ್ಥ. ಹಾಗೂ ಸರ್ಕಾರದ ವಿರುದ್ಧ ಇರುವವರಿಗೆ ಒಳ್ಳೆಯ ʼಆದಾಯʼವೂ ಇದೆ ಎನ್ನುವುದನ್ನೂ ನಾವು ತಿಳಿಯಬಹುದಾಗಿದೆ.
ಭಾರತದಲ್ಲಿ ಈಗ ಅಳವಡಿಸಿಕೊಂಡಿರುವ ಸಂವಿಧಾನಕ್ಕೆ ಸುಮಾರು 70 ವರ್ಷಗಳಾಗಿರಬಹುದು. ಆದರೆ ಭಾರತೀಯರಲ್ಲಿ ಸಾಂವಿಧಾನಿಕ ಅರಿವು ಅದಕ್ಕೂ ಹಿಂದಿನಿಂದಲೂ ಇದೆ. ಸಾಂವಿಧಾನಿಕ ಹಾಗೂ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಜೀವನ ಮಾಡಬೇಕು ಎಂಬ ಕಾರಣಕ್ಕೇ ಸ್ವಾತಂತ್ರ್ಯ ಹೋರಾಟ ನಡೆದಿದ್ದು. ಸುಮ್ಮನೆ ಸುಖೀಜೀವನ ನಡೆಸೋಣ, ಅದು ಯಾವ ಮಾದರಿಯ ಸರ್ಕಾರವಾದರೇನು? ಎಂದು ಭಾರತೀಯರು ಭಾವಿಸಿದ್ದರೆ ಬ್ರಿಟಿಷ್‌ ಸರ್ಕಾರವನ್ನೇ ಉಳಿಸಿಕೊಳ್ಳುತ್ತಿದ್ದರು. ಹಾಗಾಗಿ ಯಾವುದೇ ಸರ್ಕಾರಗಳು ಬಂದರೂ ಭಾರತದಲ್ಲಿ ಸಂವಿಧಾನವನ್ನಾಗಲಿ, ಸಾಂವಿಧಾನಿಕ ವ್ಯವಸ್ಥೆಯನ್ನಾಗಲಿ ಉರುಳಿಸಲು ಸಾಧ್ಯವೇ ಇಲ್ಲ ಎನ್ನುವುದು ಸತ್ಯ. ಭಾರತದಲ್ಲಿ ಸಂವಿಧಾನವನ್ನು ಉರುಳಿಸುವ ಪ್ರಯತ್ನಗಳು ಸಾಕಷ್ಟು ನಡೆದಿವೆ. ಅವೆಲ್ಲವೂ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಎನ್ನುವುದು ಪ್ರಮುಖ ಸಂಗತಿ. 1953ರಿಂದ ಮೊದಲುಗೊಂಡು 2009ರವರೆಗೆ ಭಾರತದಲ್ಲಿ ಕೇಂದ್ರದ ಕಾಂಗ್ರೆಸ್‌ ಸರ್ಕಾರವು ಬರೊಬ್ಬರಿ 41 ರಾಜ್ಯ ಸರ್ಕಾರಗಳನ್ನು ಕೆಡವಿ ರಾಷ್ಟ್ರಪತಿ ಆಳ್ವಿಕೆ ಹೇರಿದೆ. ಇನ್ನು 1975ರಲ್ಲಿ ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡಿ ತುರ್ತು ಪರಿಸ್ಥಿತಿ ಹೇರಿದ್ದೇ ಕಾಂಗ್ರೆಸ್‌. ಇದೇ ಅವಧಿಯಲ್ಲಿ ಸಂಸತ್‌ ಅಸ್ತಿತ್ವದಲ್ಲೇ ಇಲ್ಲದಿರುವಾಗ ಸಂವಿಧಾನದ ತಿದ್ದುಪಡಿ ಮಾಡಿ ʼಜಾತ್ಯತೀತʼ ಪದವನ್ನು ಪೀಠಿಕೆಯಲ್ಲಿ ತುರುಕಿದ್ದೂ ಕಾಂಗ್ರೆಸ್‌.
ಸಂವಿಧಾನ ಉಳಿಸುವುದು ಎಂದರೆ, ಕೇವಲ ಒಂದು ಮಹಾ ಸಮ್ಮೇಳನ ನಡೆಸಿ ಅಲ್ಲಿ ತಮಗಿಷ್ಟ ಬಂದವರಿಗೆ ವೇದಿಕೆ ನೀಡಿ ಭಾಷಣ ಮಾಡಿಸುವುದಲ್ಲ. ಭಾರತ ಬದುಕಿರುವುದು ಹೇಗೆ ಸಮಾಜದಲ್ಲೋ, ಸಂವಿಧಾನ ಬದುಕಿರುವುದೂ ಸಮಾಜದಲ್ಲೆ. ಸಮಾಜದ ಆರೋಗ್ಯವನ್ನು ಸರಿಪಡಿಸುವುದರ ಹೊರತಾಗಿ ಸಂವಿಧಾನವನ್ನು ರಕ್ಷಿಸುವುದು ಅಸಾಧ್ಯ.
ಸಮಾಜದಲ್ಲಿ ಆರೋಗ್ಯ ಸರಿಯಾಗಿರುವುದು ಎಂದರೆ ಏನರ್ಥ? ಎಲ್ಲರೂ ಸಂತೋಷದಿಂದಿರುವುದು ಎಂದೇ? ಹೌದು ಎನ್ನುವುದು ಬಹುಶಃ ಇದು ಅಧ್ಯಾತ್ಮಕ ಉತ್ತರ ಆಗಬಹುದು. ಅಧ್ಯಾತ್ಮದ ಪ್ರಕಾರ ಯೋಚಿಸಿದರೆ ಈ ಪ್ರಪಂಚದಲ್ಲಿರುವ ಎಲ್ಲ ಆತ್ಮಗಳೂ ʼPotentially Devine’. ಹಾಗಾದರೆ ಈಗಲೂ ಸಮಾಜದಲ್ಲಿ ಅತ್ಯಾಚಾರ, ಆನಾಚಾರ, ಕೊಲೆ, ಸುಲಿಗೆ, ದಂಗೆಗಳು ನಡೆಯುತ್ತಲೇ ಇರುತ್ತವೆಯಲ್ಲಾ ? ಯಾಕೆ , ಇವೆಲ್ಲವುಗಳನ್ನೂ ಅನ್ಯಗ್ರಹ ಜೀವಿಗಳು ಬಂದು ಮಾಡುತ್ತವೆಯೇಯೇ? ಇಲ್ಲ. ಇಲ್ಲಿನ ಸಮಾಜದಲ್ಲಿರುವ ಕೆಲವು ʼಆತ್ಮʼಗಳೇ ಈ ಕೃತ್ಯಗಳನ್ನೂ ಮಾಡುತ್ತವೆ ಎನ್ನುವುದು ವಾಸ್ತವ. ಹಾಗಾಗಿ ಸಮಾಜದಲ್ಲಿರುವ ಎಲ್ಲರನ್ನೂ ಖುಷಿಪಡಿಸುವುದು ಅಸಾಧ್ಯ.
ಹೆಚ್ಚಿನ ಜನರನ್ನು ಖುಷಿಯಾಗಿರಿಸಬೇಕು. ಅದಕ್ಕಾಗಿ ಕಡಿಮೆ ಸಂಖ್ಯೆಯಲ್ಲಿರುವ ಕಿಡಿಗೇಡಿಗಳನ್ನು ಅಂಕೆಯಲ್ಲಿರಬೇಕು. ಅಂಕೆಯಲ್ಲಿಡಬೇಕು ಎಂದರೆ ಅದಕ್ಕೆ ಸೂಕ್ತ ಕಾನೂನು, ಸುವ್ಯವಸ್ಥೆ ಕಾಪಾಡುವ ಸಂಸ್ಥೆಗಳಿರಬೇಕು. ಈ ಸಂಸ್ಥೆಗಳು ದುಷ್ಟರಿಗೆ ಶಿಕ್ಷೆ ನೀಡುತ್ತ ಹೋದಂತೆಲ್ಲ ಮತ್ತಷ್ಟು ದುಷ್ಟರು ಹುಟ್ಟುವುದನ್ನು ತಡೆಯಬಹುದು. ಹಾಗಾಗಿಯೇ, ಎಲ್ಲರೂ ಪರಬ್ರಹ್ಮನ ಸ್ವರೂಪ ಎಂದ ಹಿಂದೂ ಧರ್ಮವೇ, ʼದುಷ್ಟ ಶಿಕ್ಷಣ-ಶಿಷ್ಟ ರಕ್ಷಣʼ ಎಂಬ ಮಾತನ್ನೂ ಹೇಳಿದೆ. ಸಮಾಜದಲ್ಲಿರುವ ಎಲ್ಲರನ್ನೂ ಖುಷಿಪಡಿಸುತ್ತೇವೆ ಎಂದು ಹೇಳುತ್ತ ಕಾಂಗ್ರೆಸ್‌ ಪಕ್ಷವು ಅದಕ್ಕೆ ತುಷ್ಟೀಕರಣದ ʼಪರಿಹಾರʼವನ್ನು ಕಂಡುಕೊಂಡಿದೆ. ಯಾವುದೇ ದೇಶದಲ್ಲಿ ಒಂದು ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ ಎಂದರೆ ಆ ಸಮುದಾಯ ಇತರೆ ಸಮುದಾಯಗಳ ಮೇಲೆ ಸವಾರಿ ಮಾಡುತ್ತದೆ ಎನ್ನುವುದು ಪಾಶ್ಚಾತ್ಯ ಸಮಾಜಗಳಿಗೆ ಅನ್ವಯವಾಗುವ ಥಿಯರಿ. ಆ ದೇಶಗಳಲ್ಲೆಲ್ಲ ನಡೆದಿದ್ದು ಅದೆ. ಯಹೂದಿಗಳು, ಕ್ರೈಸ್ತರು, ಮುಸ್ಲಿಮರು ಹೆಚ್ಚಿನ ಸಂಖ್ಯೆಗೆ ಹೊರಳಿದ ಕೂಡಲೆ ನಡೆಸಿದ್ದು ನರಮೇಧಗಳನ್ನೆ. ಅಲ್ಲಿನ ಸಂದರ್ಭಕ್ಕೆ ಅನುಗುಣವಾಗಿ ಈ ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಎಂಬ ಪರಿಕಲ್ಪನೆ ಮೂಡಿತು. ಈ ಎಲ್ಲ ನರಮೇಧಗಳೂ ನಡೆದದ್ದು ʼಮತʼದ ಆಧಾರದಲ್ಲಿಯೆ. ಹಾಗಾಗಿ ಕಮ್ಯುನಿಸ್ಟ್‌ ಸಿದ್ಧಾಂತದ ಪಿತಾಮಹ ಕಾರ್ಲ್‌ ಮಾರ್ಕ್ಸ್‌, ʼರಿಲೀಜನ್‌ ಎಂದರೆ ಅಫೀಮುʼ ಎಂದ. ಇನ್ನೊಂದೆಡೆ ಕ್ರಿಶ್ಚಿಯನ್‌ ಚರ್ಚುಗಳು ಹೇರುತ್ತಿದ್ದ ಒತ್ತಡಗಳನ್ನು ಸಹಿಸಲಾಗದೆ ರಾಜಕಾರಣಿಗಳು ಚರ್ಚುಗಳಿಂದ ಅಂತರ ಕಾಯ್ದುಕೊಳ್ಳುವ ಸಲುವಾಗಿ ʼಜಾತ್ಯತೀತತೆʼ ಎಂಬ ಸಿದ್ಧಾಂತವನ್ನು ಹುಟ್ಟುಹಾಕಿಕೊಂಡರು.
ಪಾಶ್ಚಾತ್ಯ ವಿದ್ವಾಂಸರು ರೂಪಿಸಿದ್ದ ಪುಸ್ತಕಗಳನ್ನೇ ಮಕ್ಕಿ ಕಾ ಮಕ್ಕಿ ಕಂಠಪಾಠ ಮಾಡುವ ನಮ್ಮ ಬುದ್ಧೀಜೀವಿಗಳು ಅದನ್ನೇ ಸೆಮಿನಾರುಗಳಲ್ಲಿ ರೇಡಿಯೋ ರೀತಿ ಹೇಳುತ್ತಾ, ಅದೇ ನಿಜ ಎನ್ನುವ ಭಾವನೆ ಮೂಡಿಸಿದ್ದಾರೆ. ಪಶ್ಚಿಮದಲ್ಲಿದ್ದ ಮೆಜಾರಿಟಿ-ಮೈನಾರಿಟಿ ವಾದವನ್ನು ಭಾರತದಲ್ಲಿ ಹಿಂದೂಗಳು-ಮುಸ್ಲಿಮರು ಹಾಗೂ ಕ್ರೈಸ್ತರು ಎಂದು ಓದಿಕೊಂಡರು. ರಿಲೀಜನ್‌ ಎನ್ನುವುದು ಅಫೀಮು ಎನ್ನುವುದಕ್ಕೆ ಹಿಂದೂ ಧರ್ಮವು ಅಫೀಮು ಎಂದು ಓದಿಕೊಂಡರು. ಕೊನೆಗೆ, ಜಾತ್ಯತೀತತೆಯನ್ನು, ಹಿಂದೂ ಧರ್ಮದಿಂದ ರಾಜ್ಯಾಡಳಿತ ಅಂತರ ಕಾಯ್ದುಕೊಳ್ಳುವುದೇ ಜಾತ್ಯತೀತತೆ ಎಂದು ಓದಿಕೊಂಡರು. ಅಲ್ಲಿಗೆ ಇಡೀ ಭಾರತವನ್ನು ಪಶ್ಚಿಮದ ಕನ್ನಡಕದಿಂದ ನೋಡಿದರು. ಈ ಎಲ್ಲ ವಿಚಾರಗಳನ್ನೂ ಭಾರತದಲ್ಲಿ ಪ್ರತಿಪಾದಿಸಿದವರು ಕಮ್ಯುನಿಸ್ಟ್‌ ಸಿದ್ಧಾಂತ ಪ್ರೇರಿತ ಬುದ್ಧಿಜೀವಿಗಳು. ಆದರೆ ಅವರಾರಿಗೂ ಭಾರತದಲ್ಲಿ ನೆಲೆಯೇ ಇರಲಿಲ್ಲ. ಭಾರತದಲ್ಲಿ ಪಾಶ್ಚಿಮಾತ್ಯ ಸಿದ್ಧಾಂತವನ್ನು ಅಳವಡಿಸುವ ಕಮ್ಯುನಿಸ್ಟ್‌ ʼಆತ್ಮʼಕ್ಕೆ ದೇಹವೊಂದು ಬೇಕಾಗಿತ್ತು. ಹಾಗೂ ಹೀಗೂ ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸಂ ರಾಜಕೀಯ ನಡೆಯಿತಾದರೂ ಅದನ್ನು ದೇಶಾದ್ಯಂತ ವಿಸ್ತರಿಸಲು ಆಗಲಿಲ್ಲ. ಈಗಂತೂ ಪಶ್ಚಿಮ ಬಂಗಾಳದಲ್ಲೂ ನೆಲೆ ಕಳೆದುಕೊಂಡಿದ್ದು, ಕೇರಳದಲ್ಲಿ ಕೊನೆಯ ಕೊಂಡಿ ಇದೆ. ಹಾಗಾಗಿ ಕಮ್ಯುನಿಸ್ಟ್‌ ಸಿದ್ಧಾಂತದ ʼಆತ್ಮʼಕ್ಕೆ ದೇಹವಾಗಿ ಸಿಕ್ಕಿದ್ದೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಎಂಬ ಪಕ್ಷ.
ತಮ್ಮೆಲ್ಲ ಸಿದ್ಧಾಂತಗಳನ್ನೂ ಕಾಂಗ್ರೆಸ್‌ ಪಕ್ಷದ ಮೇಲೆ ಹೊರಿಸುತ್ತಾ, ಹೀಗೆ ಸರ್ಕಾರ ನಡೆಸಿದರೇನೇ ಅದು ಸರ್ಕಾರ, ಇಲ್ಲದಿದ್ದರೆ ಅನಾಚಾರ ಎಂದು ತಲೆಗೆ ತುಂಬಿದರು. ಕಾಂಗ್ರೆಸ್‌ ಪಕ್ಷವಂತೂ ಒಡೆದು ಚೂರು ಚೂರಾಗಿ ತನಗೊಂದು ಭದ್ರ ಸೈದ್ಧಾಂತಿಕ ನೆಲೆಯೇ ಇಲ್ಲದಂತಾಗಿತ್ತು. ಹೆಸರಿನಲ್ಲಿ ರಾಷ್ಟ್ರೀಯ ಎಂದಿದ್ದರೂ ತನ್ನಲ್ಲಿರುವ ರಾಷ್ಟ್ರೀಯತೆಯನ್ನು ಮರೆತು ಆರ್ಯ-ದ್ರಾವಿಡ ಸಿದ್ಧಾಂತದ ಕಮ್ಯುನಿಸಂ ಬಲೆಗೆ ಸಿಕ್ಕಿ ಈಗಲೂ ನರಳಾಡುತ್ತಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂವಿಧಾನ, ಐಕ್ಯತೆ ಸಮಾವೇಶಕ್ಕೆ ನಿತಾಶಾ ಕೌಲ್‌ರಂಥವರನ್ನು ಕರೆಸಿ ಭಾಷಣ ಮಾಡಿಸಲು ಕಾಂಗ್ರೆಸ್‌ ಸರ್ಕಾರ ಮುಂದಾಗುತ್ತದೆ. ನಿತಾಶಾ ಕೌಲ್‌ ಯಾರು? ಕಾಶ್ಮೀರವು ಭಾರತಕ್ಕೆ ಸೇರಿದ್ದು ಎನ್ನುವುದನ್ನು ಒಪ್ಪದಿರುವಾಕೆ. ದೇಶವನ್ನು ಒಡೆಯಲು ಸಂಚು ರೂಪಿಸುತ್ತಿರುವ ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವಾಕೆ. ದೇಶ ಒಡೆಯುವ ಸಂಚು ಎಂದರೆ ಏನು? ದೇಶವಿರೋಧಿ ಕೃತ್ಯ. ಅಂದರೆ ಇದು ದೇಶದ ಸಾರ್ವಭೌಮತ್ವವನ್ನು ಪ್ರಶ್ನಿಸಿದಂತಾಗುತ್ತದೆ. ಅಂತಿಮವಾಗಿ ಇದು, ದೇಶದ ಸಾರ್ವಭೌಮತೆಯನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡುವ ಭಾರತೀಯ ಸಂವಿಧಾನಕ್ಕೆ ವಿರುದ್ಧವಾದ ನಡೆ. ಹಾಗಾದರೆ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಲೇ ಸಂವಿಧಾನ ಉಳಿಸಿ ಎಂದು ಹೋರಾಡುವುದು ಎಂದರೆ ಏನು? ಇದೆಲ್ಲವೂ ಪರದೆಯ ಹಿಂದೆ ಕಮ್ಯುನಿಸ್ಟರು ಆಡುತ್ತಿರುವ, ಆಡಿಸುತ್ತಿರುವ ಆಟ. ಕಾಂಗ್ರೆಸ್‌ ಕೇವಲ ದೇಹವಷ್ಟೆ.
ಹಾಂ, ಸಂವಿಧಾನವನ್ನೇ ಬುಡಮೇಲು ಮಾಡಲು ಯತ್ನಿಸಿದ ಇಂದಿರೆಯಾ ತುರ್ತುಪರಿಸ್ಥಿತಿಯನ್ನೇ ನಮ್ಮ ಸಂವಿಧಾನ ಅರಗಿಸಿಕೊಂಡಿದೆ. ಅದು ಅಷ್ಟೊಂದು ಬಲಶಾಲಿ. ಮಾನ್ಯ ಪ್ರಧಾನಿಯವರು ಈ ಸಂವಿಧಾನದ ಆಸರೆಯಲ್ಲೇ ಚುನಾವಣೆ ಗೆಲ್ಲುತ್ತಿರುವುದು, ದೇಶ ಆಳುತ್ತಿರುವುದು. ಸಂವಿಧಾನದ ಬಗ್ಗೆ ಅವರಿಗಿರುವ ಬದ್ಧತೆ ಕಾಂಗ್ರೆಸ್ಗೂ ಇಲ್ಲ !
ಕಡೆಮಾತು:
ನಿತಾಶಾ ಕೌಲ್‌ ಅವರು ಮಾತನಾಡಲು ಅವಕಾಶ ನೀಡಬೇಕಿತ್ತು. ಆಕೆಯ ವಾಕ್ ಸ್ವಾತಂತ್ರ್ತವನ್ನೇ ಭಾರತ ಸರಕಾರ ಹರಣ ಮಾಡಿದೆ ಎಂದೇ ಕಮ್ಯುನಿಸ್ಟ್ ಆತ್ಮಗಳು ಕಥೆಕಟ್ಟುತ್ತಿವೆ, ದೇಹ ಹೊತ್ತಿರುವ ಕಾಂಗ್ರೆಸ್ – ಈ ಮಾತನ್ನು ಅನುಮೋದಿಸುತ್ತದೆ !
ಸತ್ಯ ಏನೆಂದರೆ, ನರೇಂದ್ರ
ಮೋದಿ ಅವರು ಹೊರದೇಶದಲ್ಲಿ ಕಾಲಿಡಬಾರದು,ಭಾಷಣ ಮಾಡಬಾರದು ಎಂದು ಹೊರನೆಲದಲ್ಲಿ ಪ್ರತಿಪಾದಿಸಿದ ಮಹಿಳೆ ಈ ತಾಯಿ ! ಇಂಥವರ ಪರವಾಗಿ ವಾಕ್ ಸ್ವಾತಂತ್ರ್ಯದ ಮಾತನ್ನು ಗುರಾಣಿಯಾಗಿ ಬಳಸಲಾಗಿದೆ.
— ಹರಿಪ್ರಕಾಶ ಕೋಣೆಮನೆ, ರಾಜ್ಯ ಬಿಜೆಪಿ ವಕ್ತಾರ
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top