ಮಥುರಾದಲ್ಲೂ ಗತವೈಭವ ಮರುಕಳಿಸುವ ದಿನಗಳು ದೂರವಿಲ್ಲ : ವಿಸ್ತಾರ ಅಂಕಣ

ಕಾನೂನಿನ ತೊಡಕುಗಳು ಆದಷ್ಟು ಬೇಗ ನಿವಾರಣೆಯಾದಲ್ಲಿ ರಾಮಜನ್ಮಭೂಮಿಯ ಹಾಗೇ ಕೃಷ್ಣಜನ್ಮಭೂಮಿಯಲ್ಲೂ ಫ್ರೆಂಚ್ ವ್ಯಾಪಾರಿ ವರ್ಣಿಸಿದ ಹಳೆ ವೈಭವ ಮತ್ತೊಮ್ಮೆ ತಲೆ ಎತ್ತಲಿದೆ.
———-
ಧರ್ಮ ಯಾವುದೇ ಇರಲಿ. ಎಲ್ಲರ ಮನೆಗಳಲ್ಲೂ ಅವರವರ ಧಾರ್ಮಿಕ ನಂಬಿಕೆಗಳಿಗನುಗುಣವಾದ ಸಂಕೇತಗಳಿರುತ್ತವೆ. ಮನೆಯೊಳಗೆ ಒಂದು ಪೂಜಾಕೇಂದ್ರ, ಪೂಜಾಪದ್ಧತಿ ಪರಂಪರಾನುಗತವಾಗಿ ನಡೆದುಕೊಂಡು ಬಂದಿರುತ್ತದೆ. ಇದ್ದಕ್ಕಿದ್ದಂತೆ ಯಾರೋ ಕಳ್ಳ ಮನೆಗೆ ನುಗ್ಗಿ ಎಲ್ಲವನ್ನೂ ದೋಚಿದ್ದಲ್ಲದೇ ಆ ಮನೆಯ ದೇವಮಂದಿರವನ್ನು ಕೆಡವಿ ತನ್ನ ದೇವರನ್ನು ಅಲ್ಲಿ ಸ್ಥಾಪಿಸಿ, ನೀವಿನ್ನು ಈ ಮನೆಯಲ್ಲಿ ವಾಸಿಸಬಹುದು. ಆದರೆ ನಿಮ್ಮ ದೇವರ ಪೂಜಾಸ್ಥಳ ಮಾತ್ರ ನನ್ನದು ಅಂದರೆ ಹೇಗಾಗಬೇಡ? ದೇಶವನ್ನೆ ಒಂದು ಮನೆ ಎಂದು ಭಾವಿಸಿದರೆ ನಮ್ಮ ಧಾರ್ಮಿಕ ಶ್ರದ್ಧಾಕೇಂದ್ರಗಳೇ ನಮ್ಮ ಪೂಜಾಸ್ಥಳಗಳು. ದೇವಾಲಯಗಳನ್ನು ಧ್ವಂಸಮಾಡಿ, ಅದರ ಮೇಲೆ ಮಸೀದಿ ಕಟ್ಟಿದ ಮೊಘಲರ ನಡೆ, ಇತಿಹಾಸದ ನೀಚಾತಿನೀಚ ದುಷ್ಕೃತ್ಯ ಮತ್ತು ಅಕ್ಷಮ್ಯ!
ಹಾಗೆ ದೇಶದುದ್ದಕ್ಕೂ ಅನೇಕಾನೇಕ ದೇವಾಲಯಗಳ ಮೇಲೆ ದಾಳಿಗಳಾಗಿವೆ. ಇಂದಿಗೂ ಅನೇಕ ಕಡೆ, ದಾಳಿಗೆ ತುತ್ತಾದ ಶಿಲ್ಪಗಳು, ಮೂರ್ತಿಗಳು ಭಗ್ನಗೊಂಡು, ಮುಕ್ಕಾಗಿ ಮೂಕವಾಗಿ ನಿಂತಿವೆ. ಒಂದು ಕಡೆ ದೇವಾಲಯಗಳನ್ನು ನಿರಂತರವಾಗಿ ಭಗ್ನಗೊಳಿಸುತ್ತಾ ಹೋದ ಮುಸ್ಲಿಂ ದಾಳಿಕೋರರು, ಮತ್ತೆ ಕೆಲವು ಕಡೆ ಇಡೀ ದೇಗುಲಗಳನ್ನೆ ಕೆಡವಿ ಹಾಕಿ, ಅದೆಲ್ಲವನ್ನೂ ಮುಚ್ಚಿ ಹಾಕಿ, ಅದರ ಮೇಲೆ ಮಸೀದಿ ಕಟ್ಟಿ ನೀಚತನ ಮೆರೆದಿದ್ದಾರೆ. ಅಯೋಧ್ಯೆ, ಗ್ಯಾನವ್ಯಾಪಿ ಮತ್ತು ಮಥುರಾಗಳಂತಹ ಬಹುಮುಖ್ಯ ಹಿಂದೂ ಶ್ರದ್ಧಾಕೇಂದ್ರಗಳನ್ನೆ ಅದಕ್ಕಾಗಿ ಆರಿಸಿಕೊಂಡಿದ್ದಾರೆ. ಇದು ವಿಕೃತಿಯಲ್ಲದೇ ಮತ್ತೇನು ?
ಜಗತ್ತಿನ ಬೇರೆ ಯಾವ ದೇಶಕ್ಕೂ ಧರ್ಮಕ್ಕೂ ಇರದಷ್ಟು ತಾಳ್ಮೆ ಸಹಿಷ್ಣುತೆ ಹಿಂದೂಗಳಿಗೂ, ಭಾರತೀಯರಿಗೂ ಇದೆ. ಇತಿಹಾಸದಲ್ಲಿ ನಡೆದುಹೋದ ಎಲ್ಲ ಪ್ರಮಾದಗಳು ಗೊತ್ತಿದ್ದರೂ ನೂರಾರು ವರ್ಷಗಳವರೆಗೆ ನೆಲದ ಕಾನೂನನ್ನೆ ನಂಬಿ ಕಾಯುತ್ತಾ ಇರುವುದೇ ಸಾಕ್ಷಿ. ಬಹುಶಃ ನಮ್ಮ ಧರ್ಮ ನಮಗೆ ಕಲಿಸಿರುವುದು ಇಂತಹ ಔದಾರ್ಯವನ್ನೆ. ಆ ಕಾಯುವಿಕೆಗೆ ಕಡೆಗೂ ಫಲ ಸಿಗುವ ಕಾಲ ಇದೀಗ ಬಂದಂತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠೆಯಾದದ್ದೇ ತಡ, ಒಂದೊಂದೇ ಶ್ರದ್ಧಾಕೇಂದ್ರಗಳು, ಹೂತುಹೋಗಿದ್ದ ಗರ್ಭಗುಡಿಗಳು ತಮ್ಮ ನೂರಾರು ವರ್ಷಗಳ ಅಜ್ಞಾತವಾಸದಿಂದ ಬಿಡುಗಡೆಗೊಂಡು ಮೇಲೇಳಲು ಸಜ್ಜಾಗುತ್ತಿವೆ. ಕಳೆದ ಡಿಸೆಂಬರ್‌ನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ತನ್ನ ವರದಿ ಸಲ್ಲಿಸುವುದರ ಮೂಲಕ, 1991ರಿಂದ ನಡೆಯುತ್ತಿದ್ದ ಕಾಶಿಯ ಗ್ಯಾನವ್ಯಾಪಿ ಮಸೀದಿ ಪ್ರಕರಣ ಹೊಸ ತಿರುವು ಪಡೆದು ದೇಶಾದ್ಯಂತ ಸಂಚಲನ ಮೂಡಿಸಿದೆ.
ಇದರ ಬೆನ್ನಲ್ಲೆ ನಮ್ಮ ಕೃಷ್ಣನ ಊರಾದ ಮಥುರಾದ ಪ್ರಕರಣವೂ ಹೊಸಸ್ವರೂಪ ಪಡೆಯುತ್ತಿದೆ. ಉತ್ತರಪ್ರದೇಶದ ಮೈನ್ಪುರಿಯ ಅಜಯ್ ಪ್ರತಾಪ್ ಸಿಂಗ್ ಅವರು ಸಲ್ಲಿಸಿದ್ದ ಆರ್‌ಟಿಐಗೆ ಪ್ರತ್ಯುತ್ತರವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ ಐ) ಮಾಹಿತಿ ನೀಡಿದ್ದು, 1670 ರಲ್ಲಿ ಮಥುರಾದ ಕೇಶವ ದೇವಾಲಯವಿದ್ದ ಕತ್ರಾ ದಿಬ್ಬದ ಮೇಲೆ ಕೆಲವು ಭಾಗಗಳನ್ನು ಕೆಡವಲಾಯ್ತು ಮತ್ತು ಅದರ ಮೇಲೆ ಶಾಹಿ ಈದ್ಗಾ ಮಸೀದಿ ಕಟ್ಟಲಾಯ್ತು ಎಂಬ ಮಹತ್ವದ ವರದಿ ನೀಡಿದೆ. ಈ ವರದಿಯನ್ನು ಅದು 1920ರ ಗೆಜೆಟ್ ದಾಖಲೆಗಳ ಆಧಾರದಲ್ಲಿ ನೀಡಿದೆ. ಗ್ಯಾನವ್ಯಾಪಿ ಮಾದರಿಯಲ್ಲೆ ಮಸೀದಿ ಪರಿಶೀಲನೆಗೆ ಅಲಹಾಬಾದ್ ಹೈಕೋರ್ಟ್ ಆಯುಕ್ತರನ್ನು ನೇಮಿಸಿದ್ದನ್ನು ಸುಪ್ರೀಂ ಕೋರ್ಟ್ ತಡೆಯಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು, ಸುಪ್ರೀಂಕೋರ್ಟ್ ಅದನ್ನು ನಿರಾಕರಿಸಿದೆ.
ನಮ್ಮ ತಾಳ್ಮೆ ದೊಡ್ಡದು! ಮತ್ತು ನಾವು ನಮ್ಮ ನೆಲದ ಕಾನೂನನ್ನು ಗೌರವಿಸುತ್ತೇನೆ. ತಡವಾದರೂ ಸರಿ ಕಾನೂನಿನ ಮೂಲಕವೇ ನಮ್ಮ ಶ್ರದ್ಧಾಕೇಂದ್ರಗಳ ಬಾಗಿಲುಗಳನ್ನು ಮತ್ತೆ ತೆರೆಯಲಿದ್ದೇವೆ. ಸಮಿತಿ ಹೋರಾಟ ಮುಂದುವರಿಸಿದೆ. ಇಷ್ಟೆಲ್ಲಾ ಸಮಸ್ಯೆ, ತೊಡಕುಗಳಿಗೆ ಕಾರಣವೂ ಒಂದು ಕಾನೂನೇ ಆಗಿದೆ. ಅದು ಆರಾಧನ ಸ್ಥಳಗಳ ಕಾಯ್ದೆ 1991 (places of worship act-1991) ಇದರ ಪ್ರಕಾರ ಅಯೋದ್ಯೆಯನ್ನು ಹೊರತುಪಡಿಸಿ ದೇಶದ ಉಳಿದ ಶ್ರದ್ಧಾಕೇಂದ್ರಗಳು ಆಗಸ್ಟ್ 15, 1947 ರಲ್ಲಿ ಯಾವ ಸ್ಥಿತಿಯಲ್ಲಿದ್ದವೋ ಅದೇ ಯಥಾಸ್ಥಿತಿಯಲ್ಲಿರತಕ್ಕದ್ದು ಬದಲಿಸಕೂಡದು ಎಂಬುದು. ಧಾರ್ಮಿಕ ಹಕ್ಕು ಕೂಡ ಸಂವಿಧಾನ ನಮಗೆ ಕೊಟ್ಟಿರುವ ಮೂಲಭೂತ ಹಕ್ಕು. ಲೂಟಿಕೋರರ ದಾಳಿಗೊಳಗಾದ ನಮ್ಮ ಪರಂಪರಾನುಗತ ಶ್ರಧ್ಧಾಕೇಂದ್ರಗಳನ್ನು ಮರಳಿ ಕೇಳುವುದು ಧಾರ್ಮಿಕ ಹಕ್ಕಿನ ಭಾಗವಲ್ಲವೇ ಎಂಬ ವಾದವೂ ನಡೆದಿದೆ. ಅಯೋದ್ಯಾ ಪ್ರಕರಣ ಮತ್ತು ಗ್ಯಾನವ್ಯಾಪಿ ಪ್ರಕರಣದಲ್ಲಿ ಸಿಕ್ಕ ಪ್ರೈಮಾಫೇಸೀ ದಾಖಲೆಗಳು, ಈಗ ಮಥುರಾದ ಕೇಶವ ದೇವಾಲಯದ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಶತಮಾನಗಳ ಕಾಯುವಿಕೆಯನ್ನು ಅಂತ್ಯಗೊಳಿಸುವ ದಿಕ್ಕಿನತ್ತಲೇ ಸಾಗುತ್ತಿವೆ. ನ್ಯಾಯವಾಗಿ ಸಿಗಬೇಕಾದ್ದನ್ನು ನ್ಯಾಯಾಲಯದ ಮೂಲಕವೇ ಪಡೆಯಲು ಕಾದು, ಅದಕ್ಕಾಗಿ ನೂರಾರು ವರ್ಷಗಳು ನಿರಂತರ ಕಾದ ಭಾರತೀಯರ, ಹಿಂದೂಗಳ ನಡೆ ಜಗತ್ತಿಗೆ ಬಹುದೊಡ್ಡ ಪಾಠವೂ ಆಗಲಿದೆ.
ಔರಂಗಜೇಬ್ ದೇವಾಲಯ ಕೆಡವಿ ಮಸೀದಿ ಕಟ್ಟಿದ್ದು 1670 ರಲ್ಲಿ ಎಂದು ದಾಖಲೆಗಳು ಹೇಳುತ್ತವೆ. ಅದಕ್ಕೂ ಮುಂಚೆ ಅಂದರೆ 1650ರ ಆಸುಪಾಸಿನಲ್ಲಿ ಮಥುರಾಗೆ ಭೇಟಿ ನೀಡಿದ್ದ ಫ್ರೆಂಚ್ ವ್ಯಾಪಾರಿ ಬ್ಯಾಪ್ಟಿಸ್ಟ್ ಟಾವೆರ್ನಿಯರ್ ತನ್ನ ಪ್ರವಾಸ ಕಥನದಲ್ಲಿ ಕೆಂಪು ಬಣ್ಣದ ಕಲ್ಲುಗಳಿಂದ ಹತ್ತುಕಿಲೋಮೀಟರ್ ದೂರದಿಂದಲೇ ಕಾಣಬಹುದಾಗಿದ್ದ ಮಥುರಾ ದೇವಾಲಯವನ್ನು ವರ್ಣಿಸಿದ್ದಾನೆ. ಪುರಿ, ಬನಾರಸ್ ಬಳಿಕ ಮಥುರಾ ತಾನು ಅತ್ಯಂತ ಶ್ರೀಮಂತ ಮತ್ತು ದೊಡ್ಡ ದೇವಾಲಯವಾಗಿತ್ತು ಎಂದು ಬರೆಯುತ್ತಾ ದೇವಾಲಯದ ಕಂಬಗಳು ಶಿಲ್ಪಗಳನ್ನು ವರ್ಣಿಸಿದ್ದಾನೆ. ಕಾನೂನಿನ ತೊಡಕುಗಳು ಆದಷ್ಟು ಬೇಗ ನಿವಾರಣೆಯಾದಲ್ಲಿ ರಾಮಜನ್ಮಭೂಮಿಯ ಹಾಗೇ ಕೃಷ್ಣಜನ್ಮಭೂಮಿಯಲ್ಲೂ ಫ್ರೆಂಚ್ ವ್ಯಾಪಾರಿ ವರ್ಣಿಸಿದ ಹಳೆ ವೈಭವ ಮತ್ತೊಮ್ಮೆ ತಲೆ ಎತ್ತಲಿದೆ.
ನಮ್ಮ ಪ್ರಧಾನಿಗಳು ಮೇಲಿಂದ ಮೇಲೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದೇ ಹೇಳುತ್ತಾರೆ. ಸಹಿಷ್ಣುಗಳು ನಾವು ಹೌದು. ಆದರೆ ಸ್ವಾಭಿಮಾನಹೀನರಾಗಬೇಕಿಲ್ಲ. ಅದೂ ನಮ್ಮ ಧಾರ್ಮಿಕ, ಸಾಂಸ್ಕೃತಿಕ ಅಸ್ಮಿತೆಯ ವಿಷಯದಲ್ಲಿ ಖಂಡಿತವಾಗಿ ರಾಜಿಯಾಗಬೇಕಿಲ್ಲ. ಬಹುಶಃ ಇದು ಭಾರತೀಯ ಅನಿಸಿಕೊಂಡ ಎಲ್ಲರ ಆಶಯವೂ ಹೌದು. ನಮ್ಮ ದೇಶದ ಮನೆಮನೆಗಳ ಆರಾಧ್ಯ ದೈವ, ದೇವನಾದರೂ ಮಾನವನಂತೆ ಬಾಳಿಬದುಕಿ, ಅನೇಕ ಜೀವನಪಾಠಗಳನ್ನೂ, ತತ್ವಾದರ್ಶಗಳನ್ನೂ ಹೇಳಿಹೋದ ಕೃಷ್ಣ ತನ್ನದೇ ಪುರದಲ್ಲಿ ತಾನೇ ಮರೆಯಾಗಿ ನಿಂತಿದ್ದಾನೆ. ತನ್ನದೇ ನಾಟಕದಲ್ಲಿ ತಾನೇ ಪಾತ್ರಧಾರಿಯಾದವನು ಅವನು. ತನ್ನ ಸ್ವಹಿತಕ್ಕಾಗಿ ಪಾತ್ರ ಬದಲಿಸಿದವನಲ್ಲ. ತಾನೇ ಬರೆದರೂ ಎಲ್ಲರಂತೆ ನಾನೂ ಒಂದು ಪಾತ್ರ ಅಂದುಕೊಂಡವನು. ಇದು ಕೂಡ ಅವನು ಬರೆದದ್ದೇ ನಾಟಕವಿರಬಹುದು. ಅವನ ಅಂಕದ ಪರದೆ ಇನ್ನೇನು ತೆರೆಯಬಹುದು. ಫ್ರೆಂಚ್ ಪ್ರವಾಸಿ ವರ್ಣಿಸಿದ ಹವಳದಂತಾ ಕಣ್ಣುಗಳ ಕೃಷ್ಣನನ್ನು ನಾವೂ ಸದ್ಯದಲ್ಲೆ ಕಾಣಬಹುದು. ಆ ದಿನಗಳು ಬೇಗ ಬರಲಿ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top