ಕಾಶ್ಮೀರ ರಾಜಕೀಯ ಸಮಸ್ಯೆಯ ಮೂಲ ಎಲ್ಲಿದೆ ಗೊತ್ತಾ?

ಕ್ಷೇತ್ರ ಮರುವಿಂಗಡಣಾ ಆಯೋಗಗಳು ಭೌಗೋಳಿಕವಾಗಿ ದೊಡ್ಡದಾಗಿರುವ, ಹೆಚ್ಚು ಮತದಾರರನ್ನು ಹೊಂದಿರುವ ಜಮ್ಮು ಪ್ರಾಂತ್ಯಕ್ಕೆ ಕಡಿಮೆ ವಿಧಾನಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಿರುವುದರ ಮರ್ಮವೇನು ಗೊತ್ತೇ?

ಈ ಚುನಾವಣೆಗೆ ಅಂತಾರಾಷ್ಟ್ರೀಯ ಮಹತ್ವ ಇತ್ತು. ಅನುಮಾನವೇ ಬೇಡ. ಎಂಟು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯ ನಂತರದಲ್ಲಿ ದೇಶದ ಒಳಗೆ ಮತ್ತು ಹೊರಜಗತ್ತಿನಲ್ಲಿ ಅತಿ ಹೆಚ್ಚು ಜನರು ಕುತೂಹಲ-ಕಾತರದಿಂದ ಗಮನಿಸಿದ್ದು ಜಮ್ಮು ಮತ್ತು ಕಾಶ್ಮೀರದ ಚುನಾವಣೆಯನ್ನು ಎಂದರೆ ಅತಿಶಯೋಕ್ತಿಯಾಗಲಾರದು. ಎಲ್ಲರ ಮನದಲ್ಲಿ ಗಿರಕಿ ಹೊಡೆಯುತ್ತಿದ್ದ ಪ್ರಶ್ನೆ ಒಂದೇ ಆಗಿತ್ತು- ಲೋಕಸಭಾ ಚುನಾವಣೆಯಲ್ಲಿ ಮೋಡಿ ಮಾಡಿದ ಮೋದಿ ಕಾಶ್ಮೀರ ಚುನಾವಣೆಯಲ್ಲೂ ಮ್ಯಾಜಿಕ್ ಮಾಡುತ್ತಾರಾ? ಭಾರತದಲ್ಲಿ ಮಾತ್ರವಲ್ಲ, ನೆರೆಯ ಪಾಕಿಸ್ತಾನ, ಚೀನಾದಿಂದ ಹಿಡಿದು ಅಮೆರಿಕದವರೆಗೆ ಎಲ್ಲರೂ ಕಣ್ಣರಳಿಸಿಕೊಂಡು ಕಾಶ್ಮೀರ ಚುನಾವಣಾ ಫಲಿತಾಂಶಕ್ಕಾಗಿ ಕಾದಿದ್ದರು. ಕೆಲವರಲ್ಲಿ ನಿರೀಕ್ಷೆ, ಕುತೂಹಲಗಳು ಗರಿಗೆದರಿದ್ದರೆ, ಪಾಕಿಸ್ತಾನ, ಚೀನಾ ಮತ್ತು ಅಮೆರಿಕಗಳಿಗೆ ಒಳಗೊಳಗೇ ಚಡಪಡಿಕೆಯಿತ್ತು. ಕಾಶ್ಮೀರ ಚುನಾವಣೆಯೆಂಬ ಅಗ್ನಿಪರೀಕ್ಷೆಯಲ್ಲಿ ಮೋದಿ ಕೊನೆಗೂ ಅರ್ಧ ಗೆದ್ದಿದ್ದಾರೆ. ಇದಕ್ಕಾಗಿ ಮಿಷನ್-44ಗೆ ಸೋಲಾಯಿತು ಎನ್ನುವವರಿದ್ದಾರೆ. ಹಾಗಾದರೆ ವಿಷನ್ ಕಾಶ್ಮೀರವಾದರೂ ಪೂರ್ಣವಾಗುತ್ತಾ? ಕಾದು ನೋಡೋಣ.

ಅದೆಲ್ಲ ಹೇಗೂ ಇರಲಿ, ಫಲಿತಾಂಶ ಹೊರಬರುತ್ತಿದ್ದಂತೆ ಕಾಶ್ಮೀರದ ಕಾಂಗ್ರೆಸ್ ನಾಯಕರೊಬ್ಬರು ಎನ್‍ಡಿಟಿವಿ ಚರ್ಚೆಯಲ್ಲಿ ಭಾಗವಹಿಸಿ ಆಡಿದ ಮಾತು ನಗುತರಿಸುವಂತಿತ್ತು. ಅವರು “ನನಗೆ ಈಗಲೂ ವಿಶ್ವಾಸವಿದೆ, ಕಾಶ್ಮೀರ ಕಣಿವೆಯಲ್ಲಿ ಬಿಜೆಪಿಗೆ ಖಾತೆ ತೆರೆಯಲೂ ಬಿಡುವುದಿಲ್ಲ. ಅದು ಸೆಕ್ಯುಲರ್ ಪಕ್ಷಗಳ ನಿಜವಾದ ಗೆಲುವು ಮತ್ತು ತಾಕತ್ತು. ಕಾಶ್ಮೀರದಲ್ಲಿ ಈ ಸಲವೂ ಸೆಕ್ಯುಲರ್ ಪಕ್ಷಗಳೇ ಸರ್ಕಾರ ರಚಿಸುತ್ತವೆ. ಅದಕ್ಕೋಸ್ಕರ ನಾವು ಯಾವುದೇ ಹೊಂದಾಣಿಕೆಗೆ ಸಿದ್ಧ” ಅಂದುಬಿಟ್ಟರು. ಪತ್ರಕರ್ತೆ ಬರ್ಖಾ ದತ್ ಅಷ್ಟೇ ನೇರಾನೇರವಾಗಿ, “ಹಾಗಾದರೆ ಬಿಜೆಪಿಯನ್ನು ಬೆಂಬಲಿಸಿ ಅತಿಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಿದ ಜಮ್ಮು ಮತ್ತು ಲಡಾಖ್‍ನ ಮತದಾರರೆಲ್ಲ ಕಮ್ಯುನಲ್‍ಗಳು, ಮತಾಂಧರು ಅಂತೀರಾ?” ಅಂತ ಮರುಪ್ರಶ್ನಿಸಿದರು. ಮೊದಲು ಭಯಂಕರ ಜೋಷ್‍ನಲ್ಲಿ ಮಾತನಾಡುತ್ತಿದ್ದ ಆ ನಾಯಕರಿಂದ ಉತ್ತರ ಹೊರಡಲೇ ಇಲ್ಲ. ಇದು ಜಮ್ಮು-ಕಾಶ್ಮೀರ ರಾಜಕಾರಣದ ಅಸಲಿ ಮುಖ ಮತ್ತು ಸೆಕ್ಯುಲರ್ ರಾಜಕಾರಣಿಗಳ ನಿಜವಾದ ವರಸೆಯ ಒಂದು ಸ್ಯಾಂಪಲ್ ಎನ್ನಬಹುದು.

ನಿಜ, ಕಾಶ್ಮೀರದಲ್ಲಿ ಆಳಕ್ಕೆ ಬೇರುಬಿಟ್ಟಿರುವ ಮತಾವಲಂಬಿ ರಾಜಕಾರಣ, ಪ್ರತ್ಯೇಕತಾವಾದ ಅಥವಾ ಕಾಶ್ಮೀರದ ಸ್ವಾಯತ್ತೆಯನ್ನು ವಿರೋಧಿಸುವ ಯಾವುದೇ ರಾಜಕೀಯ ಪಕ್ಷ ಸಾರ್ವತ್ರಿಕ ಚುನಾವಣೆಯಲ್ಲಿ ಈಗ ಬಿಜೆಪಿ ಪಡೆದ ಸ್ಥಾನಗಳಿಗಿಂತ ಉತ್ತಮ ಸಾಧನೆಯನ್ನು ಮಾಡುವುದು ತೀರಾ ಕಷ್ಟ. ಅದಕ್ಕೆ ಮುಖ್ಯವಾದ ಕಾರಣಗಳು ಎರಡು. ಮೊದಲನೆಯದು- ಕಾಶ್ಮೀರ ಕಣಿವೆಯಲ್ಲಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಸೆಕ್ಯುಲರ್‍ವಾದದ ಹೆಸರಲ್ಲಿ ಜನರಲ್ಲಿ ಬೆಳೆಸಿರುವ ಜಾತಿವಾದದ ವಿಷಬೀಜ. ಎರಡನೆಯದು- ಆ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಮತೀಯ ತಾರತಮ್ಯದಿಂದ ಕೂಡಿದ ವಿಧಾನಸಭಾ ಕ್ಷೇತ್ರ ಮರುವಿಂಗಡಣೆ.

ಇದು ಇಂದು ನಿನ್ನೆಯದಲ್ಲ. 1951ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಮಾಡಿದ ವಿಧಾನಸಭಾ ಕ್ಷೇತ್ರ ವಿಂಗಡಣೆ ಸಂದರ್ಭದಲ್ಲೇ ಭಯಂಕರ ಪ್ರಮಾದವೆಸಗಲಾಗಿದೆ. ಆ ಮೂಲಕ ಅತ್ಯಂತ ಹಿಂದುಳಿದ ಪ್ರದೇಶಗಳಾದ ದೋಡಾ (ಕಿಶ್ತವಾರ್ ಮತ್ತು ರಾಂಬನ್), ಉಧಮ್‍ಪುರ, ಕಥುವಾ, ರಾಜೋರಿ, ಕುಪ್ವಾರಾ, ಬಾರಾಮುಲ್ಲಾದ ಬಡ ಜನರಿಗೆ ದೊಡ್ಡ ದ್ರೋಹವನ್ನೇ ಮಾಡಲಾಗಿದೆ. ಕಾಶ್ಮೀರ ಕಣಿವೆಯ ಪೂಂಛ್ ಮತ್ತು ಕಾರ್ಗಿಲ್ ಪ್ರದೇಶದ್ದೂ ಅದೇ ಕತೆ. ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿ ಜನಸಂಖ್ಯೆಯನ್ನು ಮಾತ್ರವಲ್ಲ, ಅಲ್ಲಿನ ಭೌಗೋಳಿಕ ಸನ್ನಿವೇಶವನ್ನೂ ಪರಿಗಣಿಸಬೇಕು ಅಂತ 1957ರ ಪ್ರಜಾಪ್ರಾತಿನಿಧ್ಯ ಕಾಯಿದೆ ಮತ್ತು ಜಮ್ಮು-ಕಾಶ್ಮೀರ ಸಂವಿಧಾನದ 50ನೇ ವಿಧಿ ಇವೆರಡರಲ್ಲೂ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಕ್ಷೇತ್ರ ಮರುವಿಂಗಡಣಾ ಆಯೋಗಗಳು ಸಂವಿಧಾನ ಮತ್ತು ಪ್ರಜಾಪ್ರಾತಿನಿಧ್ಯ ಕಾಯಿದೆಯ ಆಶಯವನ್ನು ಎಲ್ಲೂ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. 2001ರಲ್ಲಿ ನಡೆಸಿದ ಜನಗಣತಿ ಪ್ರಕಾರ, ಜಮ್ಮುವಿನ 26 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ 30,59,986 ಮತದಾರರಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಜಮ್ಮುವಿನ ಮೂರನೇ ಎರಡರಷ್ಟು ಪ್ರದೇಶ ದುರ್ಗಮ ಗುಡ್ಡಗಾಡು, ಪರ್ವತ ಪ್ರದೇಶಗಳಿಂದ ಕೂಡಿದೆ. ಅಲ್ಲಿ ಸುವ್ಯವಸ್ಥಿತವಾದ ರಸ್ತೆ ಸಂಪರ್ಕವೂ ಇಲ್ಲ. ಆದರೆ ಈ ಪ್ರದೇಶಕ್ಕೆ 37 ವಿಧಾನಸಭಾ ಕ್ಷೇತ್ರಗಳನ್ನು ಮತ್ತು ಎರಡು ಲೋಕಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಕೇವಲ 15,953 ಚ.ಕಿ.ಮೀ. ವಿಸ್ತಾರವಾದ ಪ್ರದೇಶ ಮತ್ತು 29 ಲಕ್ಷ ಮತದಾರರನ್ನಷ್ಟೇ ಹೊಂದಿರುವ ಕಾಶ್ಮೀರ ಕಣಿವೆಗೆ 46 ವಿಧಾನಸಭಾ ಕ್ಷೇತ್ರಗಳು ಮತ್ತು 3 ಲೋಕಸಭಾ ಕ್ಷೇತ್ರಗಳನ್ನು ನೀಡಲಾಗಿದೆ. ಅಚ್ಚರಿಯಾಗುವುದಿಲ್ಲವೇ?
ಜಮ್ಮುವಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 84,270 ಮತದಾರರನ್ನು ಹಂಚಿಕೆ ಮಾಡಿರೆ, ಅದೇ ಕಾಶ್ಮೀರ ಕಣಿವೆಯಲ್ಲಿ 62,673 ಮತದಾರರಿಗೆ ಒಂದು ವಿಧಾನಸಭಾ ಕ್ಷೇತ್ರದಂತೆ ಹಂಚಿಕೆ ಮಾಡಲಾಗಿದೆ. ಭೌಗೋಳಿಕವಾಗಿಯೂ ಅಷ್ಟೆ, ಜಮ್ಮುವಿನ ಪ್ರತಿ ವಿಧಾನಸಭಾ ಕ್ಷೇತ್ರ 710 ಚ.ಕಿ.ಮೀ. ವ್ಯಾಪ್ತಿ ಹೊಂದಿದ್ದರೆ, ಕಾಶ್ಮೀರ ಕಣಿವೆಯಲ್ಲಿ 346 ಚ.ಕಿ.ಮೀ. ಲೋಕಸಭಾ ಕ್ಷೇತ್ರವೂ ಅಷ್ಟೆ, ಜಮ್ಮುವಿನಲ್ಲಿ ಒಂದು ಕ್ಷೇತ್ರದ ಮತದಾರರ ಸಂಖ್ಯೆ 15.29 ಲಕ್ಷ ಇದ್ದರೆ, ಕಾಶ್ಮೀರದಲ್ಲಿ ಕೇವಲ 9.61 ಲಕ್ಷ ಮತದಾರರಿಗೆ ಒಂದು ಕ್ಷೇತ್ರವನ್ನು ಗುರುತು ಮಾಡಲಾಗಿದೆ. ಜಿಲ್ಲೆಗಳ ರಚನೆಯಲ್ಲೂ ಅದೇ ತಾರತಮ್ಯ. ಜಮ್ಮುವಿನಲ್ಲಿ 2,629 ಚ.ಕಿ.ಮೀ.ಗೆ, ಕಾಶ್ಮೀರದಲ್ಲಿ 1594 ಚ.ಕಿ.ಮೀ.ಗೆ ಒಂದು ಜಿಲ್ಲೆ ರಚಿಸಲಾಗಿದೆ. ಯಾಕೆ ಹೀಗೆ? ಹಿಂದು ಮತ್ತು ಮುಸ್ಲಿಂ ಜನಸಂಖ್ಯೆ ಆಧಾರದಲ್ಲಿ ರಾಜಕಾರಣವೆಂಬುದನ್ನು ಬಿಟ್ಟರೆ ಬೇರೆ ಕಾರಣ ಸಿಗುವುದಿಲ್ಲ.

ಜಮ್ಮು-ಕಾಶ್ಮೀರ ಸಂವಿಧಾನ ಈ ವ್ಯವಸ್ಥೆಗೆ ವಿರುದ್ಧವಾಗಿದೆ ಎಂಬುದಕ್ಕೆ ಒಂದು ನಿದರ್ಶನ ಕೊಡುತ್ತೇನೆ. 50ನೇ ವಿಧಿ ಅನುಸಾರವಾಗಿ ಈಗಲೂ ವಿಧಾನಪರಿಷತ್ ಸದಸ್ಯರ ಸಂಖ್ಯೆಯನ್ನು ಹಂಚಿಕೆ ಮಾಡಲಾಗಿದೆ. ಆ ಪ್ರಕಾರ ಜಮ್ಮು ಪ್ರಾಂತ್ಯದಿಂದ 14 ಮತ್ತು ಕಾಶ್ಮೀರ ಪ್ರಾಂತ್ಯದಿಂದ 12 ಮಂದಿ ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿದೆ. ಹಾಗಾದರೆ ವಿಧಾನಸಭಾ ಸದಸ್ಯರ ಆಯ್ಕೆಗೂ ಅದೇ ಮಾನದಂಡ ಅನುಸರಿಸಬೇಕಲ್ಲವೇ? ಕ್ಷೇತ್ರ ಮರುವಿಂಗಡಣಾ ಆಯೋಗ ಹಾಗೆ ಮಾಡಿದ್ದಲ್ಲಿ ಜಮ್ಮು ಪ್ರಾಂತಕ್ಕೆ 45ರಿಂದ 46 ಮತ್ತು ಕಾಶ್ಮೀರ ಕಣಿವೆಗೆ 37ರಿಂದ 38 ವಿಧಾನಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಬೇಕಿತ್ತು. ಅಚ್ಚರಿಯೆಂದರೆ ಎಂದೂ ಹಾಗೆ ಯೋಚನೆ ಮಾಡುವುದೇ ಇಲ್ಲ.
1992ರಲ್ಲಿ ಕ್ಷೇತ್ರ ಮರುವಿಂಗಡಣಾ ಆಯೋಗ 1957ರ ಪ್ರಜಾಪ್ರಾತಿನಿಧ್ಯ ಕಾಯಿದೆ ಅನುಸಾರ ಜಮ್ಮು-ಕಾಶ್ಮೀರದಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಯತ್ನಕ್ಕೆ ಮುಂದಾಗಿತ್ತು. ಅಂತಿಮ ವರದಿ ಕೂಡ ಸಿದ್ಧವಾಗಿತ್ತು. ಆಗಿನ ಮುಖ್ಯಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅದಕ್ಕೆ ಒಪ್ಪಿಗೆ ಮುದ್ರೆ ಒತ್ತುವವರಿದ್ದರು. ಆದರೆ ಆಯೋಗದ ಅಧ್ಯಕ್ಷ ಜಸ್ಟೀಸ್ ಕೆ.ಕೆ. ಗುಪ್ತಾ ಆ ಯೋಜನೆ ತಿರಸ್ಕರಿಸಿ ವಿಧಾನಸಭಾ ಕ್ಷೇತ್ರಗಳ ವಿಂಗಡಣೆಯನ್ನು ಮೊದಲಿನಂತೆಯೇ ಉಳಿಸಿಕೊಳ್ಳುತ್ತಾರೆ. ಇದಕ್ಕೆ ಯಾರು ಕಾರಣ? ಬೇರಾರೂ ಅಲ್ಲ, ಸೆಕ್ಯುಲರ್ ಮಾನಸಿಕತೆಯ ಸರ್ಕಾರಗಳು.

ಈ ತಾರತಮ್ಯವನ್ನು ಜಿಲ್ಲೆಗಳ ರಚನೆ ಮತ್ತು ಕ್ಷೇತ್ರ ಮರುವಿಂಗಡಣೆಯಲ್ಲಿ ಮಾತ್ರ ಮಾಡಿದ್ದಾರೆ ಅನ್ನುವ ಹಾಗಿಲ್ಲ, ರಾಜ್ಯದ ಅಭಿವೃದ್ಧಿ ವಿಚಾರದಲ್ಲೂ ಹಾಗೇ ನಡೆದುಕೊಳ್ಳಲಾಗಿದೆ. ಉದಾಹರಣೆಗೆ ಜಮ್ಮು-ಮತ್ತು ಕಾಶ್ಮೀರದ ಮೂಲಾಧಾರವಾದ ಪ್ರವಾಸೋದ್ಯಮ ಬಜೆಟ್ ಹಂಚಿಕೆಯಲ್ಲೂ ಎಲ್ಲ ಸರ್ಕಾರಗಳು ತಾರತಮ್ಯ ನೀತಿ ಅನುಸರಿಸಿವೆ. ಪ್ರವಾಸೋದ್ಯಮ ಬಜೆಟ್‍ನಲ್ಲಿ ಜಮ್ಮುವಿಗೆ ಶೇ.1ರಷ್ಟು ಪಾಲು ನೀಡಿದರೆ, ಶೇ.90ರಷ್ಟನ್ನು ಕಾಶ್ಮೀರಕ್ಕೆ ಧಾರೆ ಎರೆಯಲಾಗಿದೆ. ವ್ಯಾಪಾರ, ವಹಿವಾಟು ಮತ್ತು ಪ್ರವಾಸೋದ್ಯಮದಿಂದ ಜಮ್ಮು ಪ್ರದೇಶದಿಂದ ಬರುವ ಆದಾಯ ಸಿಂಹಪಾಲಿದ್ದರೂ, ಅಭಿವೃದ್ಧಿ ಅನುದಾನ ಮಾತ್ರ ಬಿಡಿಗಾಸು! ಅಷ್ಟೇ ಸಾಲದ್ದಕ್ಕೆ ಕಾಶ್ಮೀರ ಕಣಿವೆಗೆ ಉಚಿತ ವಿದ್ಯುತ್, ಜಮ್ಮು ಪ್ರಾಂತ್ಯದಲ್ಲಿ ಶೇ.75ರಷ್ಟು ವಿದ್ಯುತ್ ಶುಲ್ಕ, 370ನೇ ವಿಧಿ ಬಳಸಿಕೊಂಡು ದೊಡ್ಡ ಸಂಖ್ಯೆಯ ನಾಗರಿಕರು ಮತದಾನ ಮಾಡದಂತೆ ನಿರ್ಬಂಧ, ಕಾಶ್ಮೀರ ಕಣಿವೆಯಲ್ಲಿ ನಕಲಿ ಮತದಾರರಿಗೂ ಮತದಾನಕ್ಕೆ ಅವಕಾಶ. ಯಾಕೆ ಹೀಗೆ? ಜಾತಿ, ಧರ್ಮ ಆಧಾರಿತ ಓಲೈಕೆ ನೀತಿ ಕಾರಣ. ಜಮ್ಮುವಿನಲ್ಲಿ ಬಹುಪಾಲು ಹಿಂದುಗಳಿರುವುದರಿಂದ ಸರ್ಕಾರಗಳದ್ದು ಮಲತಾಯಿ ಧೋರಣೆ. ಕಾಶ್ಮೀರ ಕಣಿವೆಯಲ್ಲಿರುವವರು ಬಹುಪಾಲು ಮುಸ್ಲಿಮರು. ಅದಕ್ಕಾಗಿ ವಿಶೇಷ ಪ್ರೀತಿ, ಮಮಕಾರ. ಇದನ್ನೇ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕೃಪಾಪೋಷಿತ ಪಕ್ಷಗಳು ಸೆಕ್ಯುಲರ್ ನೀತಿ ಅಂತ ಕರೆದುಕೊಳ್ಳುವುದು.

ಸುಳ್ಳು ಹೇಳುವುದು, ವಿತಂಡವಾದ ಮುಂದಿಡುವುದು ಮತ್ತು ದೇಶದ್ರೋಹಕ್ಕೆ ಒಂದು ಮಿತಿ ಬೇಡವೇ? ಜಮ್ಮು-ಕಾಶ್ಮೀರ ಭಾರತದಲ್ಲಿ ಸಂಪೂರ್ಣ ವಿಲೀನವಾಗಿರಲಿಲ್ಲ, ಕಾಶ್ಮೀರದಲ್ಲಿ 1953ಕ್ಕಿಂತ ಹಿಂದಿನ ಪರಿಸ್ಥಿತಿ ನಿರ್ಮಾಣ ಆಗಬೇಕು, ಪ್ರತ್ಯೇಕತಾವಾದಿಗಳ ಅಭಿಪ್ರಾಯ ಆಲಿಸಬೇಕು ಅಂತ ಕಾಶ್ಮೀರದಲ್ಲಿರುವ ಪಾಕ್ ಮಾನಸಿಕತೆಯ ರಾಜಕೀಯ ನಾಯಕರು ಹೇಳುತ್ತಾರೆ. ಅದಕ್ಕೆ ನೆಹರುರಿಂದ ಹಿಡಿದು ಕಾಂಗ್ರೆಸ್ ಸರ್ಕಾರದ ಕೊನೇ ಗೃಹಮಂತ್ರಿ ಪಿ.ಚಿದಂಬರಂ ಅವರವರೆಗೆ ಎಲ್ಲ ಕಾಂಗ್ರೆಸ್ ನಾಯಕರು ತಲೆ ಅಲ್ಲಾಡಿಸುತ್ತಾರೆ. ಇವರಿಗೆ ನಿಜ ಇತಿಹಾಸ ಗೊತ್ತಿಲ್ಲವೇ?

1947ರ ಭಾರತ ಸ್ವಾತಂತ್ರೃ ಕಾಯಿದೆ (1935ರ ಗವರ್ನಮೆಂಟ್ ಆಫ್ ಇಂಡಿಯಾ ಆ್ಯಕ್ಟ್ ಒಳಗೊಂಡಿತ್ತು) ಪ್ರಕಾರ ಯಾವುದೇ ಒಂದು ಸಂಸ್ಥಾನ ಭಾರತ ಅಥವಾ ಪಾಕಿಸ್ತಾನದ ಜತೆಗೆ ಸೇರುವ ಸ್ವಾತಂತ್ರೃವಿತ್ತು ನಿಜ. ಅದಕ್ಕೆ ಅನುಸಾರವಾಗಿ 1947ರ ಅಕ್ಟೋಬರ್ 26ರಂದು ಕಾಶ್ಮೀರದ ರಾಜ ಹರಿಸಿಂಗ್ ಜಮ್ಮು-ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸುವ ಒಪ್ಪಂದಕ್ಕೆ ಸಹಿಹಾಕಿದರು. ಅಕ್ಟೋಬರ್ 27ರಂದು ಗವರ್ನರ್ ಜನರಲ್ ಮೌಂಟ್‍ಬ್ಯಾಟನ್ ಆ ಘೋಷಣೆಗೆ ಷರಾ ಹಾಕಿದರು. ಅದಕ್ಕೆ ಸಂಬಂಧಿಸಿದ ದಾಖಲೆಗಳು ಈಗಲೂ ಲಭ್ಯ. ಆದರೆ ಕಾಶ್ಮೀರ ಭಾರತದಲ್ಲಿ ಸಂಪೂರ್ಣ ವಿಲೀನವಾಗಿದೆ ಎನ್ನಲು ಸೆಕ್ಯುಲರ್ ನಾಯಕರು ಈಗಲೂ ತಯಾರಿಲ್ಲ.

kashmira3

ಸಂವಿಧಾನದ 370ನೇ ವಿಧಿಯ ವಿಷಯದಲ್ಲೂ ಇದೇ ನಾಟಕ ನಡೆಯುತ್ತಿದೆ. 1947ರಲ್ಲಿ ಡಾ.ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಂವಿಧಾನ ರಚನಾ ಸಮಿತಿಯ ಮೂಲ ಕರಡಿನಲ್ಲಿ ಆರ್ಟಿಕಲ್ 370ರ ಪ್ರಸ್ತಾಪವೇ ಇರಲಿಲ್ಲ. ಅದಕ್ಕೋಸ್ಕರವೇ ಆಗ ಕಾಶ್ಮೀರ ವ್ಯವಹಾರಗಳಿಗೆ ಸಂಬಂಧಿಸಿ ಕೇಂದ್ರ ಸಚಿವರಾಗಿದ್ದ ಗೋಪಾಲಸ್ವಾಮಿ ಅಯ್ಯಂಗಾರ್ ಅವರು ಸಂವಿಧಾನ ರಚನಾ ಸಮಿತಿ ಮುಂದೆ 306-ಎ ವಿಧಿ (ಈಗ ಆರ್ಟಿಕಲ್ 370)ಯನ್ನು ಶೇಖ್ ಅಬ್ದುಲ್ಲಾರ ಆಶಯದಂತೆ ಮಂಡಿಸುತ್ತಾರೆ. ಅದನ್ನು ಒಪ್ಪಲು ಅಂಬೇಡ್ಕರ್ ಸುತರಾಂ ತಯಾರಿರಲಿಲ್ಲ. ಹೀಗಾಗಿ ಅಂಬೇಡ್ಕರ್‍ರನ್ನು ಕಂಡು ಮಾತನಾಡುವಂತೆ ನೆಹರು ಅವರು ಶೇಖ್ ಅಬ್ದುಲ್ಲಾಗೆ ಸೂಚಿಸುತ್ತಾರೆ. ಹಾಗೆ ಮಾತನಾಡಲು ಬಂದ ಅಬ್ದುಲ್ಲಾಗೆ, “ಭಾರತವು ಕಾಶ್ಮೀರವನ್ನು ರಕ್ಷಿಸಬೇಕೆಂಬುದು ನಿಮ್ಮ ಅಪೇಕ್ಷೆ. ಭಾರತವೇ ಕಾಶ್ಮೀರಕ್ಕೆ ಅನ್ನ, ಆಹಾರವನ್ನೂ ನೀಡಬೇಕೆಂದು ಹೇಳುತ್ತೀರಿ.

ಭಾರತದ ಬೇರೆ ಭಾಗಗಳಲ್ಲಿ ಕಾಶ್ಮೀರಿಗಳಿಗೆ ಸಮಾನ ಹಕ್ಕಿರಬೇಕೆಂದೂ ಹೇಳುತ್ತೀರಿ. ಆದರೆ ಕಾಶ್ಮೀರದಲ್ಲಿ ಭಾರತ ಸರ್ಕಾರಕ್ಕೆ ಮತ್ತು ಭಾರತದ ನಾಗರಿಕರಿಗೆ ಯಾವುದೇ ಹಕ್ಕು-ಅಧಿಕಾರ ನೀಡಲು ನಿರಾಕರಿಸುತ್ತೀರಿ. ಗೊತ್ತಿರಲಿ, ನಾನು ಭಾರತದ ಕಾನೂನು ಮಂತ್ರಿಯಾಗಿ ದೇಶಕ್ಕೆ ವಂಚನೆಯಾಗಲು ಬಿಡುವುದಿಲ್ಲ” ಎಂದು ಅಂಬೇಡ್ಕರ್ ಖಡಾಖಂಡಿತವಾಗಿ ಹೇಳುತ್ತಾರೆ. ಅಂಬೇಡ್ಕರ್ ಮನವೊಲಿಸಲು ಗೋಪಾಲಸ್ವಾಮಿ ಅಯ್ಯಂಗಾರ್, ಅಬುಲ್ ಕಲಾಂ ಆಜಾದ್ ಯಾರೊಬ್ಬರಿಗೂ ಆಗುವುದಿಲ್ಲ. ಆಗ ಆ ಹೊಣೆಯನ್ನು ಪಂಡಿತ್ ನೆಹರು ಅವರು ಸರ್ದಾರ್ ಪಟೇಲರಿಗೆ ವಹಿಸುತ್ತಾರೆ. ಪಟೇಲ್ ಮತ್ತು ಅಂಬೇಡ್ಕರ್ ಇಬ್ಬರೂ ಅರೆಮನಸ್ಸಿನಿಂದ ಮತ್ತು ತಾತ್ಕಾಲಿಕ ಎಂಬ ಷರತ್ತಿನ ಮೇಲೆ 370ನೇ ವಿಧಿಗೆ ಒಪ್ಪಿಗೆ ಸೂಚಿಸುತ್ತಾರೆ. ಇದು ಐತಿಹಾಸದ ಕಟುಸತ್ಯ. ಆದರದು ಸೆಕ್ಯುಲರ್ ಮಾನಸಿಕತೆಗೆ ಹಿತವೆನಿಸುವುದಿಲ್ಲ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲು ಅಂಬೇಡ್ಕರ್ ನಿರಾಕರಿಸಿದ್ದಕ್ಕೋ ಏನೋ ಅಲ್ಲಿ ಇಂದಿಗೂ ಎಸ್ಸಿ-ಎಸ್ಟಿ-ಒಬಿಸಿ ಮೀಸಲಾತಿ ಇಲ್ಲವೇ ಇಲ್ಲ. ಅದನ್ನು ಯಾರೂ ಪ್ರಶ್ನೆ ಮಾಡುವುದೂ ಇಲ್ಲ. ಈ ಅಪಾಯ, ಅನ್ಯಾಯ, ಈ ಡೋಲಾಯಮಾನ ಭಾರತದ ಸಾರ್ವಭೌಮತೆಗೆ ಒಳಪಟ್ಟ ಅಧಿಕೃತ ಭೂಭಾಗದಲ್ಲಿ ಇನ್ನೆಷ್ಟು ದಿನ ಮುಂದುವರೆಯಬೇಕು? ತೀರಾ ವಿಚಿತ್ರ!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top