ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೈದು ವರ್ಷಗಳು ಕಳೆದರೂ ಬ್ರಿಟಿಷ್ ಪಳೆಯುಳಿಕೆ ವ್ಯವಸ್ಥೆಯನ್ನೇ ಉಸಿರಾಡುತ್ತಿರುವ ಜನ ಇನ್ನೂ ನಮ್ಮ ನಡುವೆ ಇದ್ದಾರೆ. ಅಂಥವರಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದರಡ ಇಂದಿಗೂ ಅಪಥ್ಯ. ಆದರೆ ನಿಜವಾದ ದೇಶಭಕ್ತರು ನೇತಾಜಿಯವರನ್ನು ಎಂದಿಗೂ ಮರೆಯಲಾರರು.
************************************************
ಅಯೋಧ್ಯೆಯಲ್ಲಿ ರಾಮಲಲ್ಲಾನ ಭವ್ಯಮಂದಿರ ಸ್ಥಾಪನೆಗೆ ಭರದ ಸಿದ್ಧತೆ ನಡೆಯುತ್ತಿದೆ. ಜ.22ರಂದು ಮಂದಿರದ ಉದ್ಘಾಟನೆಗೆ ಸಾಕ್ಷಿಯಾಗಲು ಇಡೀ ದೇಶ ಸಜ್ಜಾಗುತ್ತಿದೆ. ರಾಮ ಮಂದಿರ ಉದ್ಘಾಟನೆಯಾದ ನಂತರದಲ್ಲಿ ಪ್ರತಿದಿನ ಸುಮಾರು 50 ಸಾವಿರದಷ್ಟು ಭಕ್ತರು ಭೇಟಿ ನೀಡಿ ದರ್ಶನ ಪಡೆಯುವ ಅಂದಾಜಿದೆ. ಅಂದರೆ ಆ ಇಡೀ ನಗರ, ಈಗ ಅಯೋಧ್ಯೆ ಹೆಸರಿನಲ್ಲಿರುವ, ಹಿಂದಿನ ಫೈಜಾಬಾದ್ ಜಿಲ್ಲೆ ಅಷ್ಟು ಜನಜಂಗುಳಿಯಿಂದ ತುಂಬಿಹೋಗುತ್ತದೆ. ಆದರೆ 1986ಕ್ಕೂ ಮುನ್ನ ಈ ನಗರ ಹೀಗಿರಲಿಲ್ಲ. ಹೆಚ್ಚಿನ ಜನಸಂದಣಿ ಇಲ್ಲದ, ಸಾಮಾನ್ಯ ವ್ಯಾಪಾರ, ಸರಾಸರಿ ಜನಜೀವನವಿರುವ, ಕರ್ನಾಟಕದ 3ನೇ ಹಂತದ ಜಿಲ್ಲಾಕೇಂದ್ರದಂತೆ ಭಾಸವಾಗುತ್ತಿತ್ತು.
ಆದರೆ ಸತತ ಹೋರಾಟದ ನಂತರ 1986ರ ಫೆಬ್ರವರಿ 1ರಂದು ಫೈಜಾಬಾದ್ ನ್ಯಾಯಾಲಯ ಒಂದು ಆದೇಶ ನೀಡಿತು. ರಾಮ ಮಂದಿರಕ್ಕೆ ಹಾಕಿರುವ ಬೀಗವನ್ನು ತೆಗೆದು ರಾಮಲಲ್ಲಾನ ದರ್ಶನಕ್ಕೆ ಅವಕಾಶ ನೀಡಲು ಸೂಚಿಸಿತು. ಅಲ್ಲಿಂದ ಅಯೋಧ್ಯೆಯಲ್ಲಿ ಹಾಗೂ ಅಯೋಧ್ಯೆಗೆ ಸಂಬಂಧಿಸಿ ದೇಶಾದ್ಯಂತ ಸರಣಿ ಸಂಚಲನಗಳು ಆರಂಭವಾದವು. ನಿಧಾನವಾಗಿ ದೇಶಾದ್ಯಂತ ಆವರಿಸಿದ ಕಾವು ಕೊನೆಗೆ 1992ರ ಡಿಸೆಂಬರ್ 6ರಂದು ಬಾಬ್ರಿ ಕಟ್ಟಡ ಧ್ವಂಸವಾಗುವವರೆಗೆ ಸಾಗಿತು. ನಂತರ ನ್ಯಾಯಾಲಯದ ಕಠಿಣ ಅಗ್ನಿಪರೀಕ್ಷೆಯಲ್ಲಿ ಗೆದ್ದುಬಂದ ಶ್ರೀರಾಮ ಮಂದಿರ ಈಗ ಮತ್ತೆ ತಲೆಯೆತ್ತುತ್ತಿದೆ. ಅಂದಹಾಗೆ, ಇದೇ ನಗರದಲ್ಲಿ 1985ರ ಸೆಪ್ಟೆಂಬರ್ 16ರಂದು ಒಂದು ಘಟನೆ ನಡೆಯಿತು.ಅಲ್ಲಿನ ರಾಮಭವನದಲ್ಲಿ ವಾಸಿಸುತ್ತಿದ್ದ ಭಗವಾನ್ಜಿ ಎಂಬ ಗುಪ್ತ ಸನ್ಯಾಸಿಯೊಬ್ಬರು ಅಂದು ಕೊನೆಯುಸಿರೆಳೆದರು. ಗುರುಬಸಂತ್ ಸಿಂಗ್ ಅವರಿಗೆ ಸೇರಿದ ಆ ಕಟ್ಟಡದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿದ್ದ ಭಗವಾನ್ಜಿ ಅವರಿಗೆ ಗುಮನಾಮಿ ಬಾಬಾ ಎಂಬ ಹೆಸರೂ ಇತ್ತು. ಈ ವ್ಯಕ್ತಿಯನ್ನು ನೋಡುವುದು ಅಷ್ಟು ಸುಲಭವಾಗಿರಲಿಲ್ಲ. ಅವರ ಹತ್ತಿರದ ಅನುಚರರು ಮನಸ್ಸು ಮಾಡಿದರೆ ಮಾತ್ರ ಸಾಧ್ಯ. ಅಥವಾ ಒಂದು ಚೀಟಿಯನ್ನು ಬರೆದು, ತಮ್ಮ ಹಿನ್ನೆಲೆ, ಪರಿಚಯ, ಭೇಟಿಯ ಉದ್ದೇಶವನ್ನು ತಿಳಿಸಬೇಕು. ಇಷ್ಟೆಲ್ಲದರ ನಂತರವೂ ಭೇಟಿ ಲಭ್ಯವಾಗುತ್ತದೆ ಎಂದಿಲ್ಲ. ದೂರದೂರದ ಕೋಲ್ಕತ್ತದಿಂದಲೂ ಕೆಲವರು ಆಗಮಿಸಿ ಭೇಟಿ ಮಾಡಿ ತೆರಳುತ್ತಿದ್ದರು. ಆದರೆ ಭೇಟಿ ಮಾಡಿದವರಾಗಲಿ, ಭಗವಾನ್ಜಿ ಸುತ್ತಮುತ್ತ ಇರುವವರಾಗಲಿ ಯಾವ ವಿಷಯವನ್ನೂ ಬಾಯಿ ಬಿಡುತ್ತಿರಲಿಲ್ಲ. ಹಾಗಾಗಿ ಸುತ್ತಮುತ್ತಲಿನ ಜನರಿಗೆ ಅವರು ಗುಮನಾಮಿ ಬಾಬಾ ಆಗಿಯೇ ಉಳಿದರು.
ಅವರ ನಿಧನದ ನಂತರ ನಿಧಾನವಾಗಿ ಸುದ್ದಿ ಹರಡಿತು. ಈ ರಾಮಭವನದಲ್ಲಿ ವಾಸವಿದ್ದ ಭಗವಾನ್ಜಿ ಮತ್ತಾರೂ ಅಲ್ಲ, ದೇಶದ ನಿಜವಾದ ಮಣ್ಣಿನ ಮಗ, ದೇಶದ ಮೊದಲ ಪ್ರಧಾನಮಂತ್ರಿ ಸುಭಾಷ್ಚಂದ್ರ ಬೋಸ್ ಎಂಬ ಮಾತು ಬಲವಾಯಿತು. 1986ರಲ್ಲಿ ಫೈಜಾಬಾದಿಗೆ ಭೇಟಿ ನೀಡಿದ ಸುಭಾಷ್ ಬೋಸ್ ಸಂಬಂಧಿ ಲಲಿತಾ ಬೋಸ್, ಭಗವಾನ್ಜಿ ಅವರ ಕೊಠಡಿಯಲ್ಲಿರುವ ವಸ್ತುಗಳೆಲ್ಲವೂ ನೇತಾಜಿ ಅವರದ್ದೇ ಆಗಿವೆ ಎಂದು ಖಚಿತಪಡಿಸಿದಾಗ ಅನುಮಾನ ಬಲವಾಯಿತು. ಇಂದಿಗೂ ಸುಭಾಷರ ಕುರಿತು ಈ ವಾದ ಜೀವಂತವಾಗಿಯೇ ಇದೆ ಹಾಗೂ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟರು, ರಷ್ಯಾದಲ್ಲಿ ಮೃತಪಟ್ಟರು ಎಂಬ ವಾದಗಳಿಗಿಂತಲೂ ಬಲವಾಗಿದೆ.
ನೇತಾಜಿ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಮುಕುಟಮಣಿ. ಸ್ವಾತಂತ್ರ್ಯ ಹೋರಾಟದ ಬಗ್ಗೆ ಬದ್ಧತೆ ಮಾತ್ರವಲ್ಲದೆ, ಅದಕ್ಕೆ ಅವರಲ್ಲಿದ್ದ ಧೈರ್ಯ, ನಿರಂತರ ಪ್ರಯತ್ನಗಳನ್ನು ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ. 1897ರಲ್ಲಿ ಒಡಿಶಾದ ಕಟಕ್ನಲ್ಲಿ ಜನಿಸಿದ ಬೋಸ್ ಅವರದ್ದು ಒಂದು ಶಿಕ್ಷಿತರ ಕುಟುಂಬ. ಈ ಕಾರಣದಿಂದಾಗಿಯೇ ಅಂದಿನ ಬ್ರಿಟಿಷ್ ಸರ್ಕಾರದ ಸೇವೆಗೆ ಸೇರ್ಪಡೆಯಾದರೂ ಭಾರತದ ಸ್ವಾತಂತ್ರ್ಯ ಹೋರಾಟದ ಕಡೆಗೆ ಆಕರ್ಷಿತರಾಗಿ ಸಂಪೂರ್ಣ ಇತ್ತ ಧುಮುಕಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಸುಭಾಷ್, ಗಾಂಧೀಜಿಯವರಿಂದ ಬಹಳವಾಗಿ ಪ್ರೇರಿತಗೊಂಡವರು. ಆದರೆ ಬರಬರುತ್ತ ಗಾಂಧೀಜಿಯವರ ಅಹಿಂಸಾತ್ಮಕ ಮಾರ್ಗದಿಂದ ಸ್ವಾತಂತ್ರ್ಯ ಲಭಿಸುವ ಸಾಧ್ಯತೆಯು ಕ್ಷೀಣ ಎನ್ನುವುದು ಸುಭಾಷರಿಗೆ ತಿಳಿಯತೊಡಗಿತು. ಬ್ರಿಟಿಷರ ಜತೆಗೆ ಇದ್ದುಕೊಂಡೇ ಅವರಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ ಬ್ರಿಟಿಷರನ್ನು ಶಸ್ತ್ರಾಸ್ತ್ರ, ಸೈನ್ಯದಿಂದಲೇ ಎದುರಿಸಬೇಕು ಎಂದು ನಿರ್ಧರಿಸಿದರು.
ಈ ಮಾರ್ಗದಲ್ಲಿದ್ದರೂ ಕಾಂಗ್ರೆಸ್ ಮೂಲಕವೇ ಕ್ರಾಂತಿಕಾರಕ ಹೋರಾಟ ನಡೆಸುವ ಮನಸ್ಸಿದ್ದ ನೇತಾಜಿ ಒಮ್ಮೆ ಕಾಂಗ್ರೆಸ್ ಅಧ್ಯಕ್ಷರೂ ಆದರು. ಎರಡನೇ ಬಾರಿಗೆ 1939ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಬೋಸ್ ಅವರ ಕುರಿತು ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಲೆದ್ದಿತು. ಮುಖ್ಯವಾಗಿ ಗಾಂಧಿಯವರು ಪ್ರತಿಪಾದಿಸುತ್ತಿದ್ದ ಅಹಿಂಸಾವಾದಕ್ಕೆ ಪೂರ್ಣ ಬದ್ಧತೆಯನ್ನು ಸುಭಾಷ್ ಹೊಂದಿಲ್ಲ ಎಂಬ ಕಾರಣವನ್ನು ಇಟ್ಟುಕೊಂಡು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿದ್ದ ಅನೇಕರು ರಾಜೀನಾಮೆ ನೀಡಿದರು. ಇದೆಲ್ಲದರಿಂದ ಬೇಸರಗೊಂಡ ನೇತಾಜಿ, ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದರು.
ಮುಂದೆ ಸುಭಾಷರ ಜೀವನ ಹೊಸ ತಿರುವು ಪಡೆದುಕೊಂಡಿತು. ಭಾರತೀಯ ರಾಷ್ಟ್ರೀಯ ಸೇನೆಯನ್ನು (ಐಎನ್ಎ) ಎರಡನೇ ವಿಶ್ವಯುದ್ಧದ ಸಮಯದಲ್ಲಿ ಸ್ಥಾಪಿಸಿದರು. ಬ್ರಿಟಿಷರನ್ನು ಎದುರಿಸಲು ಜರ್ಮನಿ ಹಾಗೂ ಜಪಾನ್ ನೆರವನ್ನು ಪಡೆದುಕೊಳ್ಳಲು ಮುಂದಾದರು. ಜಪಾನ್ನಿಂದ ಸೆರೆ ಹಿಡಿಯಲ್ಪಟ್ಟಿದ್ದ ಭಾರತೀಯರನ್ನು ಒಳಗೊಂಡ ಐಎನ್ಎ ಕಟ್ಟಿದ ನೇತಾಜಿ, ಬ್ರಿಟಿಷ್ ಸರ್ಕಾರದ ಎದುರು ಸಶಕ್ತ ಸೈನ್ಯವೊಂದನ್ನೇ ಕಟ್ಟಿಬಿಟ್ಟರು. ಸಿಂಹಸ್ವಪ್ನವಾಗಿ ಕಾಡತೊಡಗಿದ ನೇತಾಜಿ ಅವರನ್ನು ಹೇಗಾದರೂ ನಿವಾರಿಸಿಕೊಳ್ಳಬೇಕೆಂದು ಬ್ರಿಟಿಷರು ಸದಾ ಬಯಸುತ್ತಿದ್ದರು. ಭಾರತಕ್ಕೆ 1947ರ ಆಗಸ್ಟ್ 15ರಂದು ಅಧಿಕೃತವಾಗಿ ಸ್ವಾತಂತ್ರ್ಯ ಲಭಿಸಿತು. ಈ ದಿನಾಂಕದ ಕುರಿತು ನಮಗೆಲ್ಲ ಹೆಮ್ಮೆ ಇದ್ದೇ ಇದೆ. ಆದರೆ ಅದಕ್ಕೂ ಮುನ್ನವೇ ಅಂದರೆ 1943ರ ಡಿಸೆಂಬರ್ 30ರಂದು ಭಾರತದ ಭಾಗವೇ ಆದ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಸುಭಾಷರು ತ್ರಿವರ್ಣಧ್ವಜವನ್ನು ಹಾರಿಸಿ ಭಾರತದ ಸ್ವಾತಂತ್ರ್ಯವನ್ನು ಘೊಷಿಸಿದರು. ಅಲ್ಲಿನ ಮೊದಲ ಪ್ರಧಾನಿಯಾದರು. ಪೋರ್ಟ್ಬ್ಲೇರ್ ಅನ್ನು ರಾಜಧಾನಿಯಾಗಿಸಿ ಸ್ಥಾಪನೆಯಾದ ಆಜಾದ್ ಹಿಂದ್ ಸರ್ಕಾರವು ಬ್ರಿಟಿಷರ ನಿದ್ದೆಗೆಡಿಸಿತು. ಜತೆಗೆ, ಸ್ವತಂತ್ರ ಭಾರತಕ್ಕೆ ತಾವೇ ಮುಖ್ಯಸ್ಥರಾಗಬೇಕು ಎಂದು ಬಯಸಿದ್ದ ಅನೇಕರಿಗೂ ಆತಂಕ ಉಂಟುಮಾಡಿತು.
ನೇತಾಜಿ ಅವರು ಗಾಂಧೀಜಿಯವರನ್ನು ಗೌರವಿಸುತ್ತಿದ್ದರು. ಜತೆಗೆ ಅವರ ಕೆಲವು ಧೋರಣೆಗಳನ್ನು ಅಷ್ಟೇ ಸ್ಪಷ್ಟವಾಗಿ ವಿರೋಧಿಸುತ್ತಿದ್ದರು. ಆದರೆ ಅವರ ಮಾರ್ಗದಲ್ಲಿ ಸ್ವಾತಂತ್ರ್ಯಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಗೌರವವೂ ಇತ್ತು. ಅದರಿಂದಾಗಿಯೇ ಐಎನ್ಎನಲ್ಲಿದ್ದ ರೆಜಿಮೆಂಟ್ಗಳಿಗೆ ಗಾಂಧೀಜಿ, ಜವಾಹರಲಾಲ್ ನೆಹರು, ಮೌಲಾನಾ ಆಜಾದ್ ಹಾಗೂ ತಮ್ಮ ಹೆಸರುಗಳನ್ನು ಇರಿಸಿದ್ದರು. ಒಂದು ಸಂಪೂರ್ಣ ಮಹಿಳಾ ರೆಜಿಮೆಂಟ್ಗೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹೆಸರನ್ನಿಟ್ಟಿದ್ದರು. ಹಾಗಾಗಿ ಗಾಂಧಿ ಹಾಗೂ ಬೋಸರ ನಡುವಿನ ಸಂಬಂಧವನ್ನು ನೇರವಾಗಿ ವಿಶ್ಲೇಷಿಸುವುದು ಕಷ್ಟ. ಕ್ರಾಂತಿಕಾರಿಗಳಂತೆ ನೇರವಾಗಿ ಎಲ್ಲರನ್ನೂ ತಿರಸ್ಕರಿಸಿ ಹೋಗುತ್ತಿದ್ದವರಲ್ಲ ನೇತಾಜಿ. ಈ ಸಂಕೀರ್ಣ ಸಂಬಂಧದ ನಡುವೆಯೂ ನೇತಾಜಿ ಅವರಿಗೆ ನ್ಯಾಯವನ್ನು ಒದಗಿಸಲು ಗಾಂಧಿಯವರಿಂದ ಸಾಧ್ಯವಿತ್ತು ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. 1945ರಲ್ಲಿ ನೇತಾಜಿ ಇದ್ದಕ್ಕಿದ್ದಂತೆ ಮಾಯವಾಗಿದ್ದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.
ಭಾರತದ ಸ್ವಾತಂತ್ರ್ಯ ಹೋರಾಟವು 1857ರ ಸಂದರ್ಭದಲ್ಲಿ ಸಶಸ್ತ್ರ ಕ್ರಾಂತಿಯಾಗಿ ಹೊರಹೊಮ್ಮಿತು. ನಂತರದಲ್ಲಿ ಜನಸಾಮಾನ್ಯರು ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಪ್ರಯತ್ನಗಳು ಹಂತಹಂತವಾಗಿ ನಡೆದವು. ಬಹುತೇಕ ಹೋರಾಟಗಳು ಬ್ರಿಟಿಷರ ಮನವೊಲಿಸಿ, ಅವರನ್ನು ಅಲ್ಲಲ್ಲಿ ಬೆದರಿಸಿ, ಕೆಲವೊಮ್ಮೆ ಒಲಿಸಿ ಹೇಗಾದರೂ ಗುರಿಸಾಧನೆ ಮಾಡಿಕೊಳ್ಳಬೇಕು ಎನ್ನುವಂಥವೇ ಆಗಿದ್ದವು. ಕ್ರಾಂತಿಕಾರಿಗಳು ಭೂಗತರಾಗಿದ್ದು ಬ್ರಿಟಿಷರನ್ನು ಮದ್ದುಗುಂಡುಗಳ ಮೂಲಕ ಹೆದರಿಸಿ ಓಡಿಸುವ ಮಾರ್ಗ ಅನುಸರಿಸಿದ್ದರು. ಸುಭಾಷರು ಆಯ್ದುಕೊಂಡ ಮಾರ್ಗವು ನೇರವಾಗಿ ಬ್ರಿಟಿಷರೊಂದಿಗೆ ಸೇನಾಹೋರಾಟ ನಡೆಸುವಂಥದ್ದು. ಈ ಹಿಂದಿನ ವಾರದ ಲೇಖನದಲ್ಲಿ ಸ್ವಾತಂತ್ರ್ಯವೀರ ಸಾವರ್ಕರರ ಕುರಿತು ತಿಳಿದಿದ್ದೆವು. ‘ಭಾರತೀಯ ಸೈನ್ಯವು ಹೆಚ್ಚೆಚ್ಚು ಬ್ರಿಟಿಷರಿಂದಲೇ ತುಂಬಿದೆ. ಬ್ರಿಟಿಷರನ್ನು ವಿರೋಧಿಸುತ್ತ, ಸೈನ್ಯಕ್ಕೆ ಸೇರುವುದು ಬೇಡ’ ಎಂದು ಯುವಕರಿಗೆ ನಾಯಕರು ತಿಳಿಸುತ್ತಿದ್ದರು. ಆದರೆ ಹೆಚ್ಚೆಚ್ಚು ಭಾರತೀಯರು ಬ್ರಿಟಿಷ್ ಸೈನ್ಯಕ್ಕೆ ಸೇರಬೇಕು ಎಂದು ಸಾವರ್ಕರ್ ಬಯಸಿದ್ದರು. ಅದರಲ್ಲೂ ಹೆಚ್ಚು ಹಿಂದೂ ಯುವಕರು ಸೇನೆಗೆ ಸೇರಬೇಕು. ಒಂದು ಸಮಯದಲ್ಲಿ ದೇಶಾದ್ಯಂತ ಬ್ರಿಟಿಷರ ವಿರುದ್ಧ ವಾತಾವರಣ ನಿರ್ವಣವಾದರೆ, ಇದೇ ಸೈನಿಕರು ದಂಗೆ ಏಳುವ ಮೂಲಕ ಬ್ರಿಟಿಷರನ್ನು ಸೋಲಿಸಬಹುದು ಎಂದು ಆಲೋಚಿಸಿದ್ದರು. ಮಹಾರ್ ಯುವಕರು ಸೈನ್ಯಕ್ಕೆ ಸೇರಬೇಕು ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ವಾದವನ್ನೂ ಸಾವರ್ಕರ್ ಬೆಂಬಲಿಸಿದ್ದರು. ಸೈನ್ಯವನ್ನು ಭಾರತೀಕರಣಗೊಳಿಸಬೇಕು ಎಂಬ ಸಾವರ್ಕರ್ ವಾದವು ಸುಭಾಷರಿಗೆ ಬಹಳ ಇಷ್ಟವಾಗಿತ್ತು. ಈ ವಿಚಾರಗಳ ಕುರಿತು ಸಾವರ್ಕರರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು.
ಸ್ವಾತಂತ್ರಾ್ಯನಂತರದಲ್ಲಿ ಭಾರತದ ಅನೇಕ ಆಡಳಿತ ವ್ಯವಸ್ಥೆಗಳು, ನಡವಳಿಕೆಗಳು, ಹೆಸರುಗಳಲ್ಲೂ ವಸಾಹತು ಮಾನಸಿಕತೆ ಢಾಳಾಗಿ ಕಾಣಿಸುತ್ತದೆ. ಬ್ರಿಟಿಷರು ಉಳಿಸಿಹೋಗಿರುವ ಪಳೆಯುಳಿಕೆಗಳನ್ನು ತೆಗೆದುಹಾಕಲು ಈಗ 75 ವರ್ಷದ ನಂತರ ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುವ ಅನಿವಾರ್ಯತೆ ಎದುರಾಗಿದೆ. ನೌಕಾದಳದಲ್ಲಿದ್ದ ಬ್ರಿಟಿಷ್ ಲಾಂಛನವನ್ನು ತೆಗೆದು ಛತ್ರಪತಿ ಶಿವಾಜಿ ಮಹಾರಾಜರ ಲಾಂಛನವನ್ನು ಅಳವಡಿಸಲು 75 ವರ್ಷ ಬೇಕಿತ್ತೇ? ಬ್ರಿಟಿಷರಿಂದ ಸ್ವಾತಂತ್ರ್ಯ ಲಭಿಸಿತು ಎಂಬ ಕಾಂಗ್ರೆಸಿಗರ ಮಾತಿನಲ್ಲೇ ವ್ಯಂಗ್ಯವಿದೆ. ‘ಬ್ರಿಟಿಷರಿಂದ ಸ್ವಾತಂತ್ರ್ಯ ಲಭಿಸುವುದಲ್ಲ, ಅದನ್ನು ಪಡೆದುಕೊಳ್ಳಬೇಕು, ಬ್ರಿಟಿಷರಿಂದ ಕಿತ್ತುಕೊಳ್ಳಬೇಕು’ ಎಂದು ಬಯಸಿದ್ದವರು ನೇತಾಜಿ. ಹಾಗೆ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಅವರನ್ನು ಓಡಿಸಿದ್ದರೆ ಆಗ ಬ್ರಿಟಿಷರ ಅವಶೇಷಗಳನ್ನು ಅಳಿಸಿಹಾಕಲೂ ಅವಕಾಶಗಳು ಹೆಚ್ಚಿದ್ದವು. ಆದರೆ ನರಿಬುದ್ಧಿಯ ಬ್ರಿಟಿಷರು ನೇತಾಜಿ ಅವರನ್ನು ಬುದ್ಧಿವಂತಿಕೆಯಿಂದ ತೆರೆಮರೆಗೆ ಸರಿಸಿ ಗಾಂಧೀಜಿ, ನೆಹರು ಕೈಗೆ ಸ್ವಾತಂತ್ರ್ಯವನ್ನು ‘ಕೊಟ್ಟು’ ಹೊರಟುಹೋದರು. ಬ್ರಿಟಿಷರ ಜಾಗದಲ್ಲಿ ಭಾರತೀಯರು ಕುಳಿತರು ಎನ್ನುವುದನ್ನು ಬಿಟ್ಟರೆ ಹೆಚ್ಚಿನ ಬದಲಾವಣೆ ಆಗಲೇ ಇಲ್ಲ. ನೇತಾಜಿ ಅವರನ್ನು ಹೀರೋ ಆಗಿ ಮೆರೆಸಿದರೆ ಬ್ರಿಟಿಷರ ಕಪಟಬುದ್ಧಿ, ಸಂಚು, ಅವರು ನಡೆಸಿದ ಹಿಂಸಾಚಾರಗಳು ಬಯಲಾಗುತ್ತವೆ. ತಾವು ಭಾರತದಲ್ಲಿರುವ ಅನಾಗರಿಕರನ್ನು ನಾಗರಿಕರನ್ನಾಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಳ್ಳು ಹೇಳಿ ಆಡಳಿತ ನಡೆಸುತ್ತಿದ್ದ ಮುಖವೂ ಬಯಲಾಗುತ್ತದೆ. ಆದರೆ ಗಾಂಧೀಜಿ ಅವರನ್ನು ಹೀರೋ ಆಗಿ ಮೆರೆಸಿದರೆ ಈ ಅಪಾಯವಿಲ್ಲ. ಗಾಂಧೀಜಿಯವರ ಸತ್ಯಾಗ್ರಹಕ್ಕೂ ಬ್ರಿಟಿಷರು ಓಗೊಡುತ್ತಿದ್ದರು, ಅಹಿಂಸಾತ್ಮಕ ಚಳವಳಿಗೆ ಅವಕಾಶ ನೀಡಿದ್ದರು ಎಂದರೆ ಬ್ರಿಟಿಷರು ಪ್ರಜಾತಾಂತ್ರಿಕ ಆಡಳಿತ ನಡೆಸುತ್ತಿದ್ದರು ಎಂದು ಭಾಸವಾಗುತ್ತದೆ.
ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದಲ್ಲಿ ಬ್ರಿಟಿಷ್ ಪಳೆಯುಳಿಕೆ ವ್ಯವಸ್ಥೆಯನ್ನೇ ಉಸಿರಾಡುತ್ತಿರುವವರಿಗೆ ಇದೇ ಕಾರಣಕ್ಕೆ ಇಂದಿಗೂ ನೇತಾಜಿ ಎಂದರೆ ಅಪಥ್ಯ. ಆದರೆ ನಿಜವಾದ ದೇಶಭಕ್ತರಾದವರು ನೇತಾಜಿಯವರನ್ನು ಮರೆಯಬಾರದು ಎನ್ನುವುದೇ ಸತ್ಯ.