ಕೋವಿಡ್ ಟೆಸ್ಟ್ ನಿಖರತೆ, ಅದು ತೆಗೆದುಕೊಳ್ಳುವ ಸಮಯ ಇತ್ಯಾದಿಗಳ ಬಗ್ಗೆ ತಜ್ಞ ವೈದ್ಯರು ಇನ್ನೂ ತಲೆ ಕೆಡಿಸಿಕೊಳ್ಳುತ್ತ ಇದ್ದಾರೆ. ಇಂಥ ಸಮಯದಲ್ಲಿ, ರೂರ್ಕಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಪ್ರೊಫೆಸರ್ ಒಬ್ಬರು ಕೋವಿಡ್ ಟೆಸ್ಟ್‌ಗೆ ಸುಲಭ ವಿಧಾನವೊಂದನ್ನು ಆವಿಷ್ಕರಿಸಿದ್ದಾರೆ. ಅವರ ಪ್ರಕಾರ ಎಕ್ಸ್‌ರೇ ಸ್ಕ್ಯಾನಿಂಗ್ ಬಳಸಿಕೊಂಡು, ಅದನ್ನು ಒಂದು ಸುಧಾರಿತ ಸಾಫ್ಟ್‌ವೇರ್‌ಗೆ ಫೀಡ್ ಮಾಡುವ ಮೂಲಕ ಕೇವಲ ಐದೇ ನಿಮಿಷದಲ್ಲಿ ಕೋವಿಡ್ ಫಲಿತಾಂಶ ಪಡೆಯಬಹುದಾಗಿದೆ. ಈ ಸಾಫ್ಟ್‌ವೇರ್ ಅನ್ನು ಅವರು ಆವಿಷ್ಕರಿಸಿದ್ದಾರೆ. ಇದು ಪರೀಕ್ಷಾ ವೆಚ್ಚವನ್ನು ಮಾತ್ರವಲ್ಲ ಸಮಯವನ್ನೂ ಗಣನೀಯವಾಗಿ ತಗ್ಗಿಸಲಿದೆ. ಆರೋಗ್ಯ ಕಾರ್ಯಕರ್ತರು ಪರೀಕ್ಷೆ ಸಮಯದಲ್ಲಿ ಕೋವಿಡ್‌ಗೆ ತುತ್ತಾಗುವ ಸಾಧ್ಯತೆಗಳನ್ನೂ ಗಣನೀಯವಾಗಿ ತಗ್ಗಿಸಲಿದೆ.
ರೂರ್ಕಿ ಐಐಟಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ಬೋಧಿಸುವ ಕಮಲ್ ಜೈನ್ ಅವರು ಈ ಸಂಶೋಧನೆಗೆ 40 ದಿನ ತೆಗೆದುಕೊಂಡರು. ನ್ಯುಮೋನಿಯಾ, ಕ್ಷಯ, ಮತ್ತು ಕೋವಿಡ್ ಪೀಡಿತ ಪೇಷೆಂಟ್‌ಗಳ 60,000 ಎಕ್ಸ್‌ರೇ ಸ್ಕ್ಯಾನಗಳನ್ನು ಬಳಸಿಕೊಂಡು, ಈ ಮೂರೂ ಕಾಯಿಲೆಗಳಲ್ಲಿ ರೋಗಿ ಅನುಭವಿಸುವ ಎದೆಯ ಒತ್ತಡದ ವ್ಯತ್ಯಾಸವನ್ನು ಅಧ್ಯಯನ ಮಾಡಿ, ನಂತರ ಒಂದು ಎಐ ಸಹಾಯದಿಂದ ಡೇಟಾಬೇಸ್ ಸೃಷ್ಟಿಸಿದ್ದಾರೆ. ಇದಕ್ಕೆ ಅಮೆರಿಕದ ಕ್ಲಿನಿಕಲ್ ಸೆಂಟರ್‌ನ ಡೇಟಾಬೇಸನ್ನೂ ಬಳಸಿಕೊಂಡಿದ್ದಾರೆ. ತಮ್ಮ ಈ ಆವಿಷ್ಕಾರಕ್ಕೆ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಯ ಪ್ಪಿಗೆ ಪಡೆಯಲು ಅರ್ಜಿ ಹಾಕಿದ್ದು ಪೇಟೆಂಟ್ ಕೋರಿದ್ದಾರೆ.
ಕಮಲ್ ಜೈನ್ ಹೇಳುವಂತೆ, ವೈದ್ಯರು ಶಂಕಿತ ರೋಗಿಯ ಎಕ್ಸ್‌ರೇ ಸ್ಕ್ಯಾನ್‌ನ್ನು ಈ ಸಾಫ್ಟ್‌ವೇರ್‌ಗೆ ಅಪ್‌ಲೋಡ್ ಮಾಡಿದರೆ, ಅದು ಡೇಟಾಬೇಸ್ ಅಧ್ಯಯನದ ಮೂಲಕ ಈ ಎಕ್ಸ್‌ರೇ ಕೋವಿಡ್ ಅಥವಾ ಕ್ಷಯ ಅಥವಾ ನ್ಯುಮೋನಿಯಾ- ಯಾವುದರದ್ದೆಂದು ತಿಳಿಸುತ್ತದೆ. ಕೋವಿಡ್‌ನಿಂದ ಉಂಟಾಗುವ ನ್ಯುಮೋನಿಯ ಇತರ ನ್ಯುಮೋನಿಯಾಗಳಿಗಿಂತ ಗಂಭಿರ ಪ್ರಮಾಣದ್ದು ಎಂಬುದು ಈ ಸಂಶೋಧಕರ ಅಭಿಪ್ರಾಯ.
ರಾರಯಪಿಡ್ ಪರೀಕ್ಷೆ: ಭಾರತ ಸರಕಾರ ಸಾಕಷ್ಟು ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸುತ್ತಿಲ್ಲ ಎಂಬುದು ಟೀಕಾಕಾರರ ಅಭಿಪ್ರಾಯ. ಇದರಲ್ಲಿ ಸ್ವಲ್ಪ ಮಟ್ಟಿಗೆ ನಿಜವೂ ಇದೆ. ದಕ್ಷಿಣ ಕೊರಿಯಾ, ಚೀನಾ ದೇಶಗಳ ಮಟ್ಟಿಗೆ ಹೋಲಿಸಿದರೆ ನಮ್ಮ ಟೆಸ್ಟಿಂಗ್ ಪ್ರಮಾಣ ಕಡಿಮೆ. ಯಾಕೆಂದರೆ ಪರೀಕ್ಷೆ ಕಿಟ್‌ಗಳ ಲಭ್ಯತೆಯೂ ಸೀಮಿತ. ದುಬಾರಿ ಕೂಡ. ಇದನ್ನು ಸರಿದೂಗಿಸಲು ಇನ್‌ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್ ಮತ್ತು ಇಂಟೆಗ್ರೇಟಿವ್ ಬಯಾಲಜಿ (ಸಿಎಸ್ಐಆರ್)ನ ಸೌವಿಕ್ ಮೈತಿ ಮತ್ತು ದೇವಜ್ಯೋತಿ ಚಕ್ರವರ್ತಿ ಅವರ ತಂಡ ಒಂದು ವಿಧಾನವನ್ನು ಆವಿಷ್ಕರಿಸಿತು. ಅದು ಕೋವಿಡ್ ಪರೀಕ್ಷಿಸುವ ಪೇಪರ್ ಸ್ಟ್ರಿಪ್ ಆಧಾರಿತ ಪರೀಕ್ಷೆ. ಒಂದು ಗಂಟೆಯಲ್ಲಿ ಅದರಿಂದ ಫಲಿತಾಂಶ ಹೊರಬೀಳುತ್ತದೆ. ಥರ್ಮಲ್ ಸೈಕ್ಲರ್ ಹೊಂದಿರುವ ಯಾವುದೇ ಸಾಮಾನ್ಯ ಲ್ಯಾಬ್ ಕೂಡ ಇದರಿಂದ ಈ ಪರೀಕ್ಷೆ ನಡೆಸಬಹುದು.
ಈ ಪೇಪರ್ ಸ್ಟ್ರಿಪ್ ವಿಧಾನ ಕೆಲಸ ಮಾಡುವುದು ಅತ್ಯಾಧುನಿಕ ಕ್ರಿಸ್ಪ್ಆರ್-ಸಿಎಎಸ್9 ತಂತ್ರಜ್ಞಾನದಲ್ಲಿ. ಇದು ಮಾದರಿಯ ಆರ್‌ಎನ್‌ಎಯನ್ನು ಡಿಎನ್ಎಯಾಗಿ ಪರಿವರ್ತಿಸಿ, ಹಿಗ್ಗಿಸಿ, ಅದರಲ್ಲಿರುವ ವೈರಾಣು ಅಂಶಗಳಿಗೆ ಹುಡುಕಾಡುತ್ತದೆ. ಈ ಕಿಟ್‌ನ ಬೆಲೆ ಬರೀ 500 ರೂ.
ಹೈದರಾಬಾದ್ ಐಐಟಿಯ ಅಗ್ಗದ ವೆಂಟಿಲೇಟರ್: ಹೈದರಾಬಾದ್ ಐಐಟಿ ತಂಡ ಅಗ್ಗವಾಗಿ ಸಿದ್ಧಪಡಿಸಿದ ನಾನಾ ನಮೂನೆಯ ವೆಂಟಿಲೇಟರ್ ಮಾದರಿಗಳನ್ನು ಹೊಂದಿದೆ. ತುರ್ತು ಸಂದರ್ಭದಲ್ಲಿ ಉಸಿರಾಟಕ್ಕೆ ಅಳವಡಿಸಬಹುದಾದ ಬ್ಯಾಗ್ ವಾಲ್ವ್ ಮಾಸ್ಕ್‌ಗಳನ್ನು ವಿದ್ಯುಚ್ಛಕ್ತಿ ಪೂರೈಕೆ ವ್ಯವಸ್ಥೆಯೊಂದಿಗೆ ಜೋಡಿಸಿ ಬಳಸಬಹುದು. ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಬಹುದು. ಬೆಲೆ ಸುಮಾರು 5000 ರೂ., ದೊಡ್ಡ ವೆಂಟಿಲೇಟರ್‌ಗಳ ನೂರನೇ ಒಂದು ಭಾಗ!
ಶಂಕಿತರ ಪತ್ತೆ ಆ್ಯಪ್
ಕೋವಿಡ್ ಸೋಂಕಿತರ ಮಾಹಿತಿ ನೀಡುವ ಆರೋಗ್ಯ ಸೇತು ಆ್ಯಪ್ ಅನ್ನು ಬಳಸಿಕೊಳ್ಳಲು ಕೇಂದ್ರ ಸರಕಾರ ಕರೆ ನೀಡುತ್ತಿದೆ. ಇದಲ್ಲದೆ, ಹಲವು ರಾಜ್ಯ ಸರಕಾರಗಳು ಕೂಡ ತಮ್ಮದೇ ಆ್ಯಪ್ ಬಳಸಿ, ಕೋವಿಡ್ ಸೋಂಕಿತರನ್ನು ಹಾಗೂ ಕ್ವಾರಂಟೈನ್‌ನಲ್ಲಿ ಇರಬೇಕಾದವರನ್ನು ನಿಗಾದಲ್ಲಿ ಇಡುವ ಕೆಲಸ ಮಾಡುತ್ತಿವೆ. ಕೆಲವರು ಖಾಸಗಿಯಾಗಿ ಇಂಥ ಆ್ಯಪ್ ಅಭಿವೃದ್ಧಿಪಡಿಸುವ ಯತ್ನವನ್ನು ಮಾಡಿದ್ದಾರೆ. ಉದಾಹರಣೆಗೆ ದಿಲ್ಲಿ ಐಐಟಿಯ ಸಂಶೋಧಕರ ಒಂದು ತಂಡ ಒಂದು ಆ್ಯಪ್ ಆವಿಷ್ಕರಿಸಿದೆ. ಇದು ಬ್ಲೂಟೂತ್ ಮಾಧ್ಯಮದ ಮೇಲೆ ಕೆಲಸ ಮಾಡುವ ತಂತ್ರಜ್ಞಾನ. ನಿಮ್ಮ ಆಸುಪಾಸಿನ ಎರಡು ಮೀಟರ್ ಆವರಣದಲ್ಲಿ ಕೊರೋನಾ ಸೋಂಕಿತ ವ್ಯಕ್ತಿ ಇದ್ದರೆ ಈ ಆ್ಯಪ್ ಥಟ್ಟನೆ ನಿಮ್ಮನ್ನು ಅಲರ್ಟ್ ಮಾಡುತ್ತದೆ.
ಭಾರತದ ಮೊದಲ ಟೆಸ್ಟ್ ಕಿಟ್
ಭಾರತದಲ್ಲಿ ಮೊದಲ ಬಾರಿಗೆ ಕಡಿಮೆ ವೆಚ್ಚದ ಕೋವಿಡ್ ಪರೀಕ್ಷೆ ಕಿಟ್ ತಯಾರಿಸಿದ ಸಂಸ್ಥೆ ಪುಣೆಯ ಮೈಲ್ಯಾಬ್. ಇದರ ಆವಿಷ್ಕಾರಕ್ಕೆ ನ್ಯಾಷನಲ್ ಇನ್ಸ್‌ಇಟ್ಯೂಟ್ ಆಫ್ ವೈರಾಲಜಿಯ ಮಾನ್ಯತೆ ದೊರೆತಿದೆ. ಮೊದಲು ಕೋವಿಡ್ ಪರೀಕ್ಷೆ ಫಲಿತಾಂಶ ಬರಲು ನಾಲ್ಕು ಗಂಟೆ ಸಮಯ ಬೇಕಾಗುತ್ತಿತ್ತು. ಮೈಲ್ಯಾಬ್‌ನ ಆವಿಷ್ಕಾರದಿಂದ ಅದು ಎರಡೂವರೆ ಗಂಟೆಗೆ ಇಳಿಯಿತು. ಸದ್ಯ ಅದು 20000 ಕಿಟ್‌ಗಳನ್ನು ಪ್ರತಿದಿನ ಉತ್ಪಾದಿಸಿ ಸರಕಾರಿ ಪ್ರಯೋಗಾಲಯಗಳಿಗೆ ಒದಗಿಸುತ್ತಿದೆ. ಒಂದು ಕಿಟ್‌ನ ಬೆಲೆ ಕೇವಲ 1200 ರೂ. ಈ ಟೆಸ್ಟ್ ಕಿಟ್ ಆವಿಷ್ಕಾರದ ಹಿಂದೆ ಒಂದು ಮನಸ್ಸು ಆರ್ದ್ರಗೊಳಿಸುವ ಕತೆಯಿದೆ. ಇದನ್ನು ಸಂಶೋಧಿಸುವ ವಿಜ್ಞಾನಿಗಳ ತಂಡದಲ್ಲಿ ಮಿನಾಲ್ ದಖವೇ ಭೋಸಲೆ ಎಂಬ ತುಂಬು ಗರ್ಭಿಣಿಯೊಬ್ಬರಿದ್ದರು. ಕಿಟ್ ಸಿದ್ಧಪಡಿಸುವ ಗಡುವು ಹಾಗೂ ಮಿನಾಲ್ ಅವರ ಹೆರಿಗೆ ದಿನಾಂಕ ಏಕಕಾಲಕ್ಕೆ ಬಂದಿತ್ತು. ಗರ್ಭಕ್ಕೆ ಸಂಬಂಧಿಸಿದ ಏನೋ ಸಮಸ್ಯೆ ಇದ್ದಾಗಲೂ ಅವರು ಅದಕ್ಕೆ ಚಿಕಿತ್ಸೆ ಪಡೆಯುತ್ತಲೇ ಸಂಶೋಧನೆಯಲ್ಲಿ ಪೂರ್ತಿ ತೊಡಗಿಕೊಂಡಿದ್ದರು. ಮಾರ್ಚ್ 18ರಂದು ಅವರು ಕಿಟ್ ಸಿದ್ಧಪಡಿಸಿ ವೈರಾಲಜಿ ಇನ್ಸ್‌ಟಿಟ್ಯೂಟ್‌ಗೆ ನೀಡಿದ್ದೂ ಹೆರಿಗೆ ನೋವು ಬಂದು ಆಸ್ಪತ್ರೆಗೆ ದಾಖಲಾದದ್ದೂ ಏಕಕಾಲದಲ್ಲಿ ನಡೆದವು. ಏಕಕಾಲಕ್ಕೆ ಎರಡು ಸಾರ್ಥಕ ಕ್ಷಣಗಳು ಮಿನಾಲ್ ಅವರಿಗೆ ದಕ್ಕಿದವು.
ಒಂದರಲ್ಲಿ ಎಂಟು ವೆಂಟಿಲೇಟರ್
ಕೋವಿಡ್ ವಿರುದ್ಧದ ಯುದ್ಧದಲ್ಲಿ, ಪರಿಸ್ಥಿತಿ ತೀರಾ ಹದಗೆಟ್ಟರೆ, ವೆಂಟಿಲೇಟರ್‌ಗಳು ಕಡಿಮೆ ಬೀಳಬಹುದು. ಆಗ ಕಡಿಮೆ ವೆಚ್ಚದಲ್ಲಿ, ಹೆಚ್ಚಿನ ಸಂಖ್ಯೆಯ ವೆಂಟಿಲೇಟರ್‌ಗಳು ಅನಿವಾರ್ಯವಾಗುತ್ತವೆ. ದೇಶದಲ್ಲಿ ವೆಂಟಿಲೇಟರ್‌ಗಳನ್ನು ಒದಗಿಸುತ್ತಿರುವ ಆಗ್ವಾ ಸಂಸ್ಥೆಯೇ ಈಗ ಒಂದು ವೆಂಟಿಲೇಟರ್‌ನಲ್ಲಿ ಎಂಟು ರೋಗಿಗಳಿಗೆ ಚಿಕಿತ್ಸೆ ನೀಡಬಹುದಾದ ತಂತ್ರಜ್ಞಾನವನ್ನು ಸುಧಾರಿಸಿ ಅದನ್ನು ಅಳವಡಿಸಲು ಮುಂದಾದಾಗಿದೆ. ತುರ್ತು ಸನ್ನಿವೇಶದ ಅಗತ್ಯಕ್ಕೆ ತಕ್ಕಂತೆ ಅದು ವೆಂಟಿಲೇಟರ್‌ಗಳನ್ನು ಒದಗಿಸಲಿದೆ.
ಹರ್ಬಲ್ ಸ್ಯಾನಿಟೈಸರ್
ರೂರ್ಕಿ ಐಐಟಿಯ ಸಿದ್ಧಾರ್ಥ ಶರ್ಮ ಮತ್ತು ವೈಭವ್ ಜೈನ್ ಎಂಬ ಇಬ್ಬರು ತರುಣರು ಸಸ್ಯಮೂಲದ ಸ್ಯಾನಿಟೈಸರ್ ಆವಿಷ್ಕರಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅಮೆರಿಕದ ಸೋಂಕುರೋಗ ತಡೆ ಮತ್ತು ನಿಯಂತ್ರಣ ಸಂಸ್ಥೆಯ ಮಾನದಂಡಗಳಿಗೆ ಅನುಗುಣವಾಗಿ ಈ ಸ್ಯಾನಿಟೈಸರ್ ಅನ್ನು ಅವರು ಆವಿಷ್ಕರಿಸಿದ್ದು, ರೂರ್ಕಿ ಐಐಟಿಯಲ್ಲಿ ಇದನ್ನು ಉಚಿತವಾಗಿ ಎಲ್ಲರಿಗೆ ಒದಗಿಸಲಾಗಿದೆ.
ದಿಲ್ಲಿ ಐಐಟಿಯ ಪರೀಕ್ಷೆ ಕಿಟ್
ದಿಲ್ಲಿ ಐಐಟಿಯ ಸಂಶೋಧಕರ ಒಂದು ತಂಡ ಕೂಡ ಒಂದು ಟೆಸ್ಟಿಂಗ್ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಕೂಡ ಅಗ್ಗದ ದರದಲ್ಲಿ ಪರೀಕ್ಷೆ ಮಾಡಬಹುದಾದದ್ದು. ಪ್ರಯೋಗಾಲಯ ಹಂತದಲ್ಲಿ ಯಶಸ್ವಿಯಾಗಿರುವ ಇದು ಪುಣೆಯ ವೈರಾಲಜಿ ಸಂಸ್ಥೆಯಲ್ಲಿ ಹೆಚ್ಚಿನ ತಪಾಸಣೆಗೆ ಒಳಗಾಗುತ್ತಿದೆ.