ಎಂಕೆಎನ್ ಮಮಕಾರದ ಹಿಂದಿನ ಅಚ್ಚರಿ ಅಂದರೆ…

ಮುಂದೊಂದು ದಿನ ದೇಶದ ಭದ್ರತೆ, ಮಿಲಿಟರಿ ದೌರ್ಬಲ್ಯ, ಪೊಲೀಸ್ ವ್ಯವಸ್ಥೆಯ ವೈಫಲ್ಯ, ಗುಪ್ತಚರ ವಿಭಾಗದ ಆತ್ಮವಂಚನೆ, ದೇಶದ್ರೋಹದೊಂದಿಗೂ ರಾಜಿ ಮಾಡಿಕೊಳ್ಳಬೇಕಾದ ಕಾಲ ಬರಬಹುದೇ? ಯೋಚನೆ ಮಾಡುತ್ತ ಹೋದರೆ ಅಚ್ಚರಿ, ಆತಂಕ ಒಟ್ಟೊಟ್ಟಿಗೇ ಆಗುತ್ತದೆ.

16narayanana

 

ಯಾವುದನ್ನು ಇನ್ನು ಬದಲಾಯಿಸಲು ಸಾಧ್ಯವೇ ಇಲ್ಲವೆಂದು ಅನ್ನಿಸಲು ಶುರುವಾಗುತ್ತದೆಯೋ ಆಗ ನಿಧಾನವಾಗಿ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳಲು ಮನಸ್ಸು ಅಣಿಯಾಗಿಬಿಡುತ್ತದೆಯೇ?!- ಹಾಗೇ ಯೋಚನೆ ಮಾಡಿ ನೋಡಿ. ಭ್ರಷ್ಟಾಚಾರದ ವಿಚಾರದಲ್ಲಿ ಈಗ ಇಂಥದ್ದೇ ಮಾನಸಿಕತೆ ನಮ್ಮ ದೇಶದಲ್ಲಿ ಬಲವಾಗುತ್ತಿದೆ. `ರಾಜಕಾರಣದಲ್ಲಿ ಭ್ರಷ್ಟಾಚಾರ ಇದ್ದದ್ದೇ  ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಅಸಾಧ್ಯ, ಯಾರು ಕಡಿಮೆ ಭ್ರಷ್ಟರು ಎಂಬುದನ್ನು ನೋಡಿ ಗೆಲ್ಲಿಸಿ ಕಳುಹಿಸಿದರಾಯಿತು ಬಿಡಿ’ ಎಂಬ ಸಿನಿಕತನದ ಮಾತು ನಿಧಾನವಾಗಿ ಈಗ ನಮ್ಮ ಕಿವಿಮೇಲೆ ಬೀಳುತ್ತಿದೆಯಲ್ಲವೇ?

 

ಹಾಗಿದ್ದರೆ ಮುಂದೊಂದು ದಿನ ದೇಶದ ಭದ್ರತೆ, ಮಿಲಿಟರಿ ದೌರ್ಬಲ್ಯ, ಪೊಲೀಸ್ ವ್ಯವಸ್ಥೆಯ ವೈಫಲ್ಯ, ಗುಪ್ತಚರ ವಿಭಾಗದ ಆತ್ಮವಂಚನೆ, ದೇಶದ್ರೋಹದೊಂದಿಗೂ ರಾಜಿ ಮಾಡಿಕೊಳ್ಳಬೇಕಾದ ಕಾಲ ಬರಬಹುದೇ? ಕನಿಷ್ಠಪಕ್ಷ ಮಿಲಿಟರಿ, ಗುಪ್ತಚರ ವ್ಯವಸ್ಥೆಯಲ್ಲಾದರೂ ಭ್ರಷ್ಟಾಚಾರ, ಸ್ವಜನಪಕ್ಷಪಾತ, ರಾಜಕೀಯ ಗುಲಾಮಗಿರಿ ನುಸುಳಬಾರದು, ಜಾತಿ, ಮತಗಳ ಸೋಂಕು ಅಂಟಿಕೊಳ್ಳಬಾರದಲ್ಲವೇ? ಭಾರತೀಯ ಸೇನೆಯಲ್ಲಿ ಮುಸ್ಲಿಮರೆಷ್ಟಿದ್ದಾರೆ ಎಂಬುದನ್ನು ಸಾಚಾರ್ ಕಮಿಷನ್ ಲೆಕ್ಕಹಾಕಲು ಹೊರಟಾಗ, ಕಾರ್ಗಿಲ್ ಯುದ್ಧ ಗೆದ್ದದ್ದು ಮುಸ್ಲಿಂ ಸೈನಿಕರೆಂದು ಯಾವುದೋ ಮುಖಂಡ ಬಡಬಡಾಯಿಸಿದಾಗ ಒಳಮನಸ್ಸು ಹಾಗೆ ಚಡಪಡಿಸಿದ್ದಿದೆ. ಆದರೆ ನಿಜ ಏನು ಗೊತ್ತಾ? ಇದು ಯಾವುದೂ ಆಗಬಾರದು ಎಂದು ನಾವೇನು ನಿರೀಕ್ಷೆ ಮಾಡುತ್ತಿದ್ದೇವೆಯೋ ಅಂತಹ ಅನಿಷ್ಟ ನಮ್ಮ ಪೊಲೀಸ್ ಮತ್ತು ಗುಪ್ತಚರ ದಳದೊಳಗೆ ಪ್ರವೇಶಿಸಿ ಬಹಳ ವರ್ಷಗಳೇ ಆಗಿವೆ!

ಫ್ಲಾೃಷ್‍ಬ್ಯಾಕ್‍ಗೆ ಬನ್ನಿ…ಒಂದು ಬೊಫೋರ್ಸ್ ಮುಚ್ಚಿಹಾಕಲು ಆ ತುದಿಯಲ್ಲಿ ಸ್ವೀಡನ್ ಪ್ರಧಾನಿ ವೋಲ್ಫ್ ಪಾಮ್-ಈ ಬದಿಯಲ್ಲಿ ರಾಜೀವ್ ಗಾಂಧಿ ಇಬ್ಬರೂ ತಣ್ಣಗೆ ಕೊಲೆಯಾದದ್ದನ್ನು ಕಣ್ಣಮುಂದೆ ತಂದುಕೊಳ್ಳಿ. ರಾಜೀವ್ ಮನೆಯ ಅಡುಗೆಮನೆಯವರೆಗೆ ನೇರ ಎಂಟ್ರಿ ಪಡೆದಿದ್ದ ಒಟ್ಟಾವಿಯೊ ಕ್ವಟ್ರೋಚಿಯದ್ದು ಅದೆಂಥ ಕಲ್ಲುಹೃದಯ ಇರಬೇಕು ಅಂತ ಹಲ್ಲುಕಡಿಯದಿದ್ದರೆ ಹೇಳಿ. ಹಾಗೇ ಇಂದಿರಾ ಗಾಂಧಿ ಹತ್ಯೆಯ ಕರಾಳ ನೆನಪು ಕೂಡ. ಆರ್.ಕೆ. ಧವನ್ ಇಂದಿರಾಗೆ ಬೇರೆಲ್ಲರಿಗಿಂತ ಹೆಚ್ಚು ಆಪ್ತನಾಗಿದ್ದ. ಹೇಗೆಂದರೆ ಧವನ್ ಇಂದಿರಾಗೆ ಕಣ್ಣು-ಕಿವಿ ಎಲ್ಲವೂ ಆಗಿದ್ದ. ಆದರೂ ಇಂದಿರಾ ಪ್ರಾಣಕ್ಕಿದ್ದ ಅಪಾಯವನ್ನು ಧವನ್ ಅಷ್ಟು ಹಗುರವಾಗಿ ಹೇಗೆ ತೆಗೆದುಕೊಂಡ? ಬಹಳ ವಿಚಿತ್ರ ಅನ್ನಿಸುತ್ತದೆಯಲ್ಲವೇ.

ರಾಜೀವ್ ಜೀವನದ ದುರಂತದ್ದು ಇನ್ನೊಂದು ಕತೆ. ರಾಜೀವ್ ಹತ್ಯೆ ಸಂಚು ಎಲ್ಲೂ ಗುರಿ ತಪ್ಪದೆ ಕಾರ್ಯರೂಪಕ್ಕೆ ಬರಲು ಹೆಚ್ಚು ನೆರವಾದದ್ದು ಈ ದೇಶದ ಗುಪ್ತಚರ (ಇಂಟಲಿಜೆನ್ಸ್ ಬ್ಯೂರೋ) ದಳ ಅಂದರೆ ಯಾರಾದರೂ ನಂಬಲು ಸಾಧ್ಯವೇ? ಹಾಗಿದ್ದರೆ ಗುಪ್ತಚರ ದಳವೇ ಸಂಚಿನ ಭಾಗವಾಗಿತ್ತೇ? ನಮ್ಮ ದೇಶದ ಸರ್ಕಾರ, ಪೊಲೀಸ್, ಮಿಲಿಟರಿ ಎಲ್ಲವೂ ಬಲವಾಗಿ ನೆಚ್ಚಿಕೊಂಡಿರುವ ಗುಪ್ತಚರ ದಳ ಅಷ್ಟು ದುರ್ಬಲವೇ? ಈ ಅನುಮಾನದ ಹಿನ್ನೆಲೆಯಲ್ಲಿ ರಾಜೀವ್ ಹತ್ಯಾ ಪ್ರಕರಣದ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಗದೀಶ್ ಶರಣ್ ವರ್ಮಾ ತನಿಖಾ ವರದಿಯಲ್ಲಿ ಏನು ಉಲ್ಲೇಖಿಸಿದ್ದಾರೋ ಅದರ ಸಾರಾಂಶವನ್ನು ಯಥಾವತ್ತಾಗಿ ಇಲ್ಲಿ ಪ್ರಸ್ತಾಪಿಸಿದ್ದೇನೆ. ಆಗಿನ ಗುಪ್ತಚರದ ದಳದ ಪ್ರಮುಖರ ಪಾತ್ರದ ಕುರಿತ ನಿರ್ಣಯವನ್ನು ಓದುಗರಿಗೇ ಬಿಡುತ್ತೇನೆ.

1990-ಶ್ರೀಲಂಕಾದ ಜಾಫ್ನಾ ದ್ವೀಪದಿಂದ ಹೊರಟ ಕಮರ್ಷಿಯಲ್ ಹಡಗು `ಸನ್ ಬರ್ಡ್’ ಉದ್ದೇಶಿತ ವಿಧ್ವಂಸಕ ಕೃತ್ಯಕ್ಕೆ ಬೇಕಾದಷ್ಟು ಆರ್‍ಡಿಎಕ್ಸ್, ಮದ್ದು-ಗುಂಡು ಹಾಗೂ ಇತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಮಿಳುನಾಡು ಕರಾವಳಿಗೆ ತಂದಿಳಿಸಿದ್ದು ಸ್ಥಳೀಯ ಗುಪ್ತಚರ ದಳಕ್ಕೆ ಗೊತ್ತಾಗಿತ್ತು. ತಮಿಳುನಾಡು ಗುಪ್ತಚರ ದಳದ ಡೆಪ್ಯುಟಿ ಡೈರೆಕ್ಟರ್ ತಿರುವೇಂಗದಂ ಅವರು ರಾಜ್ಯದ ಗೃಹ ಸಚಿವ, ಮುಖ್ಯಮಂತ್ರಿ, ಕೇಂದ್ರ ಗೃಹ ಸಚಿವ, ಕೇಂದ್ರ ಗುಪ್ತಚರ ದಳದ ಮುಖ್ಯಸ್ಥರಿಗೆ ಗೌಪ್ಯ ಪತ್ರ ಬರೆದು ಆ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಆ ಬಗ್ಗೆ ಯಾರೊಬ್ಬರೂ ಕಿಂಚಿತ್ತೂ ತಲೆಕೆಡಿಸಿಕೊಳ್ಳಲಿಲ್ಲ. ಇದೆಲ್ಲ ಗೊತ್ತಿರುವ ಹಳೇ ವಿಚಾರ ಎಂಬ ಧೋರಣೆ ಇದಕ್ಕೆ ಕಾರಣ ಇರಬಹುದೇ? ಇದೊಂದು ಉದಾಹರಣೆ ಮಾತ್ರ, ಇಂಥ ಹತ್ತಾರು ಸಂದೇಶಗಳನ್ನು ಗುಪ್ತಚರ ದಳದ ಕೆಳಹಂತದ ಸಿಬ್ಬಂದಿ ತಮಿಳುನಾಡು ಹಾಗೂ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಕಾಲಕಾಲಕ್ಕೆ ರವಾನಿಸುತ್ತಲೇ ಇದ್ದರು. ಯಾವುದಕ್ಕೂ ಪ್ರತಿಕ್ರಿಯೆ ಕೇಳಲೇಬೇಡಿ.

1990 ಜನವರಿ 30 – R&AW (Research and Analysis Wing) ಮತ್ತೊಂದು ಮಾಹಿತಿ ಕಳಿಸಿತು. ತಮಿಳುನಾಡಲ್ಲಿ ಎಲ್‍ಟಿಟಿಇ ಉಗ್ರರು ತಳವೂರಿದ್ದಾರೆ. ಪೊರೂರಲ್ಲಿ ಮೂರು ಮನೆಗಳನ್ನು ಬಾಡಿಗೆ ಪಡೆದು ಅವರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ತಮಿಳುನಾಡಿನ ಕರುಣಾನಿಧಿ ಸರ್ಕಾರವನ್ನು ವಜಾ ಮಾಡಿದ ಬಳಿಕ ಅವರೆಲ್ಲ ಮತ್ತಷ್ಟು ಸಿಟ್ಟಿಗೆದ್ದಿದ್ದಾರೆ. `ತಮಿಳು ಉಗ್ರರ ಟಾರ್ಗೆಟ್ ರಾಜೀವ್ ಗಾಂಧಿ’ ಎಂಬ ಸ್ಪಷ್ಟ ಸಂದೇಶ ರವಾನೆಯಾಗುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದೇಕೋ ಮೌನ ಮುರಿಯುವುದಿಲ್ಲ!

1991 ಫೆಬ್ರವರಿ ಮೊದಲ ವಾರ R&AW ಮತ್ತೊಂದು ಗೌಪ್ಯ ಸಂದೇಶ ರವಾನಿಸುತ್ತದೆ. ಅದರಲ್ಲಿ ಮತ್ತಷ್ಟು ನಿಖರ ಮಾಹಿತಿ ಇತ್ತು. ತಿರುಚ್ಚಿ ಎಲ್‍ಟಿಟಿಇ ಅಡಗುದಾಣದಿಂದ ಜಾಫ್ನಾದ ಬೇಸ್-14ಗೆ (ವೇಳುಪಿಳ್ಳೈ ಪ್ರಭಾಕರನ್ ನೆಲೆ) ರವಾನೆಯಾದ ವೈರ್‍ಲೆಸ್ ಸಂದೇಶದ ಜಾಡು ಸಿಕ್ಕಿದೆ. ಅದರ ಪ್ರಕಾರ ತಮಿಳುನಾಡಿನ ಓರ್ವ ಶಾಸಕ ಮತ್ತು ಓರ್ವ ಡಾಕ್ಟರ್ ಎಲ್‍ಟಿಟಿಇ ಉಗ್ರರಿಗೆ ಬೆನ್ನೆಲುಬಾಗಿ ನಿಂತುಕೊಂಡಿದ್ದಾರೆ. ಇವರೆಲ್ಲ ರಾಜೀವ್ ಹತ್ಯೆಗೆ ಟೊಂಕ ಕಟ್ಟಿದ್ದಾರೆ ಎಂದು ಸ್ಪಷ್ಟ ಮಾಹಿತಿ ನೀಡಲಾಗುತ್ತದೆ. ಉಹೂಂ, ಯಾರೊಬ್ಬರೂ ಎಚ್ಚೆತ್ತುಕೊಳ್ಳುವುದಿಲ್ಲ.

1991-ಮಾರ್ಚ್ 5-6ರಂದು ಮದ್ರಾಸ್‍ನಲ್ಲಿ ನೆಲೆಯೂರಿದ್ದ ರಾಜೀವ್ ಹತ್ಯೆಯ ಪ್ರಧಾನ ಸೂತ್ರಧಾರ ಶಿವರಸನ್ ಜಾಫ್ನಾದಲ್ಲಿ ರಾಜೀವ್ ಹತ್ಯೆ ಸಂಚನ್ನು ನಿಭಾಯಿಸುತ್ತಿದ್ದ ಪೊಟ್ಟು ಅಮ್ಮನ್‍ಗೆ ವೈರ್‍ಲೆಸ್ ಮೆಸೇಜ್ ಕಳಿಸಿದ `Was Rajiv to be killed in Madras or in New Delhi? if it was New Delhi, the operation would take more time as it would require more elaborate operations. More safe -houses would have to be got ready in New Delhi. But if Rajiv were to be assasinated in Madras, the stage was already set’. ರಾಜೀವ್‍ರನ್ನು ಮದ್ರಾಸ್‍ನಲ್ಲಿ ಕೊಲ್ಲಬೇಕೋ ಅಥವಾ ಡೆಲ್ಲಿಯಲ್ಲೋ ಎಂಬುದನ್ನು ಅಂತಿಗೊಳಿಸಲು ಶಿವರಸನ್ ಪೊಟ್ಟು ಅಮ್ಮನ್ ಕಣಿ ಕೇಳುತ್ತಾನೆ. ದೆಹಲಿಯಲ್ಲಾದರೆ ಇನ್ನೂ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ಮದ್ರಾಸ್‍ನಲ್ಲಿ ಅನ್ನುವುದಾದರೆ ವೇದಿಕೆ ಸಿದ್ಧವಾಗಿದೆ ಎನ್ನುತ್ತಾನೆ. ಈ ವೈರ್‍ಲೆಸ್ ಸಂದೇಶದ ಮಾಹಿತಿ ಲಭ್ಯವಾಗಿದ್ದರೂ ಗುಪ್ತಚರ ದಳ ಮುಂದೆ ಆರು ತಿಂಗಳವರೆಗೆ ಅದನ್ನು ಡೀಕೋಡ್ ಮಾಡುವ ಗೋಜಿಗೇ ಹೋಗುವುದಿಲ್ಲ. ಅಷ್ಟೊತ್ತಿಗೆ ಆಗಬಾರದ ಘಟನೆ ಆಗಿ ಹೋಗಿರುತ್ತದೆ.

ರಾಜೀವ್ ಜೀವಕ್ಕೆ ಇಷ್ಟೆಲ್ಲಾ ಅಪಾಯ ಇದೆ ಎಂಬುದು ಗೊತ್ತಿದ್ದೂ 1991ರ ಫೆಬ್ರವರಿ ಮಧ್ಯಭಾಗದಲ್ಲಿ ಅವರಿಗೆ ನೀಡಲಾಗಿದ್ದ ವಿಶೇಷ ಭದ್ರತಾ ಪಡೆ (SPG Protection) ರಕ್ಷಣೆಯನ್ನು ಹಿಂಪಡೆಯುವ ಅತ್ಯಂತ ಅವಿವೇಕದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತದೆ. ಲೋಕಸಭಾ ಚುನಾವಣೆ ವೇಳೆ ರಾಜೀವ್ ಜೀವಕ್ಕೆ ಅಪಾಯ ಸಾಧ್ಯತೆ ಇದೆಯೆಂಬ R&AW ಮತ್ತು ಗುಪ್ತಚರ ದಳದ ಮುನ್ಸೂಚನೆ ಇರುವಾಗ ಭದ್ರತಾ ಕವಚವನ್ನು ಮತ್ತಷ್ಟು ಬಿಗಿಗೊಳಿಸುವ ಬದಲು ರಕ್ಷಣೆ ಹಿಂಪಡೆಯುವ ಮೂರ್ಖತನದ ಕೆಲಸ ಮಾಡಲಾಗುತ್ತದೆ. ಹೋಗಲಿ, ಪರ್ಯಾಯ ಭದ್ರತಾ ಏರ್ಪಾಡು ಮಾಡುವ ಬಗ್ಗೆಯೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲವನ್ನೂ ಮೂಕವಾಗಿ ಗಮನಿಸುತ್ತಿದ್ದ ಕೇಂದ್ರ ಗುಪ್ತಚರದಳ ಮತ್ತೆ ಮೌನಕ್ಕೆ ಶರಣಾಗುತ್ತದೆ.

ಅಷ್ಟೇ ಅಲ್ಲ, ರಾಜೀವ್‍ಗೆ ಒದಗಿಸಿದ್ದ ವಿವಿಐಪಿ ಭದ್ರತಾ ನಿಯಮದ ಪ್ರಕಾರ ಅವರ ಬೆಂಗಾವಲು ಪಡೆಯಲ್ಲಿ ಒಂದು ಅಂಬುಲೆನ್ಸ್ ಇರಬೇಕು. ಅದರಲ್ಲಿ ರಾಜೀವ್ ರಕ್ತದ ಗುಂಪಿಗೆ ಸೇರಿದ ಐದರಿಂದ ಆರು ಮಂದಿ ಪೊಲೀಸ್ ಪೇದೆಗಳು ಸತತ ಜತೆಯಲ್ಲೇ ಇರಬೇಕಿತ್ತು. ಆದರೆ ವಾಸ್ತವದಲ್ಲಿ ರಾಜೀವ್ ಹತ್ಯೆ ನಡೆದಾಗ ಸ್ಥಳದಲ್ಲಿ ಅಂಬುಲೆನ್ಸ್ ಇರಲೇ ಇಲ್ಲ. ಬಾಂಬ್ ಸಿಡಿದು ಛಿದ್ರವಾಗಿದ್ದ ರಾಜೀವ್ ದೇಹವನ್ನು ಮಾಮೂಲಿ ಪೊಲೀಸ್ ವ್ಯಾನಲ್ಲಿ ಮದ್ರಾಸ್‍ಗೆ ಸಾಗಿಸಲಾಗುತ್ತದೆ. ಶ್ರೀಪೆರಂಬುದೂರಿಂದ ಮದ್ರಾಸ್‍ಗೆ 40 ಕಿ.ಮೀ. ದೂರ. ಒಂದು ವೇಳೆ ಭಯೋತ್ಪಾದಕ ದಾಳಿಯಲ್ಲಿ ರಾಜೀವ್ ಅರೆಜೀವವಾಗುಳಿಯುತ್ತಿದ್ದರೂ ಮದ್ರಾಸ್‍ಗೆ ಬರುವವರೆಗೆ ಅವರು ಬದುಕಿರಬಾರದು ಎಂಬುದು ಆ ಷಡ್ಯಂತ್ರದ ಉದ್ದೇಶವಾಗಿತ್ತೆಂದು ತನಿಖಾ ಆಯೋಗ ಅಭಿಪ್ರಾಯಪಟ್ಟಿದೆ.

ಭದ್ರತಾ ನಿಯಮದ ಪ್ರಕಾರ ರಾಜೀವ್ ಅಂದು ಭಾಗವಹಿಸಿದ ಚುನಾವಣಾ ರ್ಯಾಲಿಯ ವೀಡಿಯೋ ಚಿತ್ರೀಕರಣ ಮಾಡಲಾಗಿದೆ ನಿಜ. ಆದರೆ ಅದು ಸಂಪೂರ್ಣವಾಗಿ ಅಸ್ಪಷ್ಟವಾಗಿದೆ. ಎಷ್ಟು ಅಂದರೆ ರಾಜೀವ್ ಬದಿಯಲ್ಲಿ, ಎದುರಲ್ಲಿ ಯಾರಿದ್ದಾರೆಂಬುದು ವಿಡಿಯೋದಲ್ಲಿ ಕಾಣಿಸುವುದೇ ಇಲ್ಲ. ಏನಿದರ ಮರ್ಮ ಅಂತ ಜಸ್ಟಿಸ್ ವರ್ಮಾ ರಾಜೀವ್ ಹತ್ಯೆಯ ಕಾಲಕ್ಕೆ ಗುಪ್ತಚರ ದಳದ ಮುಖ್ಯಸ್ಥರಾಗಿದ್ದ, ಈಗ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ ಎಂ.ಕೆ. ನಾರಾಯಣನ್‍ಗೆ ಕೇಳಿದರೆ ಅವರ ಬಳಿ ಉತ್ತವಿರಲಿಲ್ಲ.

ಅದಕ್ಕೆ ಎಂ.ಕೆ.ನಾರಾಯಣನ್ ಕೊಟ್ಟ ಲಿಖಿತ ವಿವರಣೆ ಹೀಗಿದೆ: `It has not yet been possible to establish whether the lady made her way into the sterilised area once Rajiv Gandhi approached or whether she previously managed to stand in the line as one of those offering salutation to Rajiv Gandhi. Video pictures of the meeting are presently being scanned to try and identify the lady’. ರಾಜೀವ್‍ಗೆ ಹಾರ ಹಾಕುವುದಕ್ಕಾಗಿ ಅವರು ವೇದಿಕೆಗೆ ಆಗಮಿಸುವ ಪೂರ್ವದಲ್ಲೇ ಆಕೆ ಸಿದ್ಧವಾಗಿ ನಿಂತಿದ್ದಳೋ ಅಥವಾ ವೇದಿಕೆಗೆ ಬಂದ ನಂತರ ಬಂದಳೋ ಎಂಬುದು ವೀಡಿಯೋ ನೋಡಿದರೆ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ಅದಕ್ಕಾಗಿ ವೀಡಿಯೋವನ್ನು ಸ್ಕಾೃನ್ ಮಾಡಿಸಲಾಗುತ್ತಿದೆ ಅಂತ ನಾರಾಯಣನ್ ಹೇಳಿದ್ದರು. ಮುಂದೆಂದೂ ಆ ಕ್ಯಾಸೆಟ್ ಸ್ಕಾೃನ್ ಆಗಿ ತನಿಖಾ ಆಯೋಗಕ್ಕಾಗಲೀ, ಕಾರ್ತಿಕೇಯನ್ ನೇತೃತ್ವದ ವಿಶೇಷ ತನಿಖಾ ತಂಡದ ಕೈಗಾಗಲೀ ಸಿಗಲೇ ಇಲ್ಲ. ಆ ದಿನ ಮದ್ರಾಸ್‍ನ ಮೀನಂಬಕಂ ವಿಮಾನ ನಿಲ್ದಾಣದಲ್ಲಿ ರಾಜೀವ್ ಇಳಿದಾಗಿನಿಂದ ಶ್ರೀಪೆರಂಬುದೂರು ರ್ಯಾಲಿಯವರೆಗೆ ಎಲ್ಲವನ್ನೂ ತಮಿಳುನಾಡು ಕಾಂಗ್ರೆಸ್ ಘಟಕ ವಿಡಿಯೋ ಚಿತ್ರೀಕರಣ ಮಾಡಿತ್ತು. ಆ ಕ್ಯಾಸೆಟ್ ಕೂಡ ತನಿಖಾ ಆಯೋಗದ ಕೈಗೆ ಸಿಗಲಿಲ್ಲ. ಅದನ್ನು ತಮಿಳುನಾಡು ಪೆÇಲೀಸರು ವಶಪಡಿಸಿಕೊಂಡಿದ್ದರೆಂದು ಎಷ್ಟೋ ದಿನಗಳ ನಂತರ ಹೇಳಲಾಯಿತು.

ರಾಜೀವ್ ಹತ್ಯೆಯ ಕಾಲಕ್ಕೆ ಒಂದರಮೇಲೊಂದರಂತೆ ಗುಪ್ತಚರ ದಳದ ವೈಫಲ್ಯದ ಸರಣಿಯೇ ನಡೆಯಿತು. ಆಗ ಅದರ ಮುಖ್ಯಸ್ಥರಾಗಿದ್ದವರು ಎಂ.ಕೆ.ನಾರಾಯಣನ್. ವಿಚಿತ್ರ ಅಂದರೆ 2004ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸೇವೆಯಿಂದ ನಿವೃತ್ತರಾಗಿದ್ದ ನಾರಾಯಣನ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹಾಗಾರರನ್ನಾಗಿ ನೇಮಿಸಲಾಯಿತು. ಯುಪಿಎ ಭಾಗ 2ರಲ್ಲೂ ಅವರೇ ಭದ್ರತಾ ಸಲಹಾಗಾರರಾಗಿ ಮುಂದುವರಿದರು. 2008ರಲ್ಲಿ ಮುಂಬೈ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ನಾರಾಯಣನ್ ವಿರುದ್ಧ ಕಟು ಟೀಕೆ ಕೇಳಿಬಂತು. ಅದರ ಪರಿಣಾಮ ನಾರಾಯಣನ್ ರಾಜೀನಾಮೆ ನೀಡಿದ್ದರು. ಆದರೆ ನಾರಾಯಣನ್ ರಾಜೀನಾಮೆಯನ್ನು ಪ್ರಧಾನಿ ಸಿಂಗ್ ಮತ್ತು ಸೋನಿಯಾ ಒಪ್ಪುವುದಿಲ್ಲ. ಈಗ ಅವರಿಗೆ ಬರೋಬ್ಬರಿ 80 ವರ್ಷ. 2010ರಲ್ಲಿ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ಅವರು ಬೇಡ ಅಂದರೂ ಮೇಡಂ ಕೃಪೆಯಿಂದ ಒಂದಲ್ಲ ಒಂದು ದೊಡ್ಡ ಹುದ್ದೆ ನಾರಾಯಣನ್‍ಗೆ ಒಲಿದು ಬರುತ್ತಲೇ ಇದೆ. ಏನಾಶ್ಚರ್ಯ… ಇಂದಿರಾ ಹತ್ಯೆಯ ಬಳಿಕ ಧವನ್ ಮಂತ್ರಿಯಾದರು…ನಂತರ ಎಐಸಿಸಿಯಲ್ಲಿ ಆಯಕಟ್ಟಿನ ಜಾಗಕ್ಕೆ ಬಂದು ಕುಳಿತರು. ಹಾಗೇ ರಾಜೀವ್ ಹತ್ಯೆಯ ಬಳಿಕ ಏನೇನಾಯಿತು ಬೇರೆ ವಿವರಣೆ ಬೇಕಿಲ್ಲ ಅಲ್ಲವೇ.. ಏನನ್ನೋಣ ಇದಕ್ಕೆ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top