ಗ್ರಾಮೀಣ ಆರ್ಥಿಕತೆ ಮೇಲೆತ್ತಿದ ಕ್ಷೀರ ಕ್ರಾಂತಿ

ಬಡತನದಿಂದ ಬಳಲುತ್ತಿದ್ದ ಭಾರತದ ಗ್ರಾಮೀಣ ಜನತೆ ತುಸುವಾದರೂ ಹಣದ ಮುಖ ನೋಡಲು ಸಾಧ್ಯವಾದದ್ದು ಕ್ಷೀರ ಕ್ರಾಂತಿಯಿಂದ. ಮಹಿಳೆಯರು ಸ್ವಾವಲಂಬಿಗಳಾಗಲು, ಮಕ್ಕಳು ಪೌಷ್ಟಿಕ ಆಹಾರ ಪಡೆಯಲು ಕಾರಣವಾದ ಈ ಕ್ಷೀರ ಕ್ರಾಂತಿ, ಹಸಿರು ಕ್ರಾಂತಿಯ ಜೊತೆಗೇ ಉಲ್ಲೇಖಿಸಬೇಕಾದ್ದು.

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ, ನಮ್ಮ ಜನತೆಗೆ ಅಗತ್ಯವಾದಷ್ಟು ಆಹಾರಧಾನ್ಯ ಬೆಳೆಯುತ್ತಿರಲಿಲ್ಲ. ಇದನ್ನು ನಿವಾರಿಸಲು ಬೃಹತ್‌ ಕೃಷಿಕ್ಷೇತ್ರಗಳ ಬಳಕೆ, ಆಧುನಿಕ ಯಂತ್ರೋಪಕರಣಗಳು, ರಸಗೊಬ್ಬರಗಳು, ಹೈಬ್ರಿಡ್‌ ತಳಿಗಳು ಇತ್ಯಾದಿಗಳನ್ನು ಬಳಸಿ ‘ಹಸಿರು ಕ್ರಾಂತಿ’ ನಡೆಸಲಾಯಿತು. 60ರ ದಶಕದಲ್ಲಿ ಇದಕ್ಕೆ ವೇಗ ದೊರೆಯಿತು. ಇದರಿಂದ ಭಾರತ ಆಹಾರಧಾನ್ಯಗಳ ವಿಚಾರದಲ್ಲಿ ಸ್ವಾವಲಂಬಿಯಾಯಿತು. ಇದೇ ಅವಧಿಯಲ್ಲಿ, ಗ್ರಾಮೀಣ ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ಹಾಗೂ ಸ್ವಾವಲಂಬನೆ ನೀಡಲು ‘ಕ್ಷೀರ ಕ್ರಾಂತಿ’ ಅರ್ಥಾತ್‌ ಹಾಲಿನ ಕ್ರಾಂತಿಯೂ ನಡೆಯಿತು. ಹಸಿರುಕ್ರಾಂತಿಯ ಮುಂಚೂಣಿಯಲ್ಲಿ ಡಾ.ಸ್ವಾಮಿನಾಥನ್‌ ಇದ್ದರೆ, ಕ್ಷೀರ ಕ್ರಾಂತಿಯ ಮುನ್ನೆಲೆಯಲ್ಲಿ ಡಾ.ವರ್ಗಿಸ್‌ ಕುರಿಯನ್‌ ಇದ್ದರು. ಇಂದು ಭಾರತ, ಹಾಲಿನ ಉತ್ಪಾದನೆಯಲ್ಲಿ ವಿಶ್ವದಲ್ಲೇ ನಂಬರ್‌ ವನ್‌ ಎನಿಸಿಕೊಂಡಿದೆ.

ಭಾರತದ ಹಾಲಿನ ಮನುಷ್ಯ
ದೇಶದ ಕ್ಷೀರಕ್ರಾಂತಿಯ ಪಿತಾಮಹ ಎಂದೇ ಹೆಸರಾದವರು ಡಾ.ವರ್ಗಿಸ್‌ ಕುರಿಯನ್‌. ‘ಅಮುಲ್‌’ ಎಂಬುದು ಇಂದು ವಿಶ್ವದಲ್ಲೇ ಜನಪ್ರಿಯವಾದ ಹಾಲಿನ ಉತ್ಪನ್ನಗಳ ಬ್ರಾಂಡ್‌. ಆ ಹೆಸರಿನ ಹಿಂದಿರುವ ತಾರೆ ಈ ಕುರಿಯನ್‌. ಕೇರಳದ ಕೊಯಿಕೋಡಿನಲ್ಲಿ ಜನಿಸಿದ ಕುರಿಯನ್‌ ಅಮೆರಿಕದಲ್ಲಿ ಇಂಜಿನಿಯರಿಂಗ್‌ ಮಾಡಿ, ಬೆಂಗಳೂರಿನ ಡೈರಿ ಸಂಶೋಧನಾ ಸಂಸ್ಥೆಯಲ್ಲಿ ತರಬೇತಿ ಪಡೆದವರು. ಅಮೆರಿಕದಿಂದ 1948ರಲ್ಲಿ ಭಾರತಕ್ಕೆ ಹಿಂದಿರುಗಿದ ವರ್ಗಿಸ್‌, ಸರಕಾರಿ ಸೇವೆಗೆ ಸೇರಿ ಗುಜರಾತಿನ ಆನಂದ್‌ ನಗರದಲ್ಲಿದ್ದ ಹಾಲಿನ ಪೌಡರ್‌ ಉತ್ಪಾದಿಸುವ ಸಣ್ಣ ಘಟಕವೊಂದರಲ್ಲಿ ತಂತ್ರಜ್ಞರಾಗಿ ಕೆಲಸಕ್ಕೆ ಸೇರಿದರು. ಇದೇ ಸಮಯದಲ್ಲಿ ಕೈರಾ ಜಿಲ್ಲೆಯ ಹಾಲು ಉತ್ಪಾದನಾ ಸಂಘಟನೆ ತನ್ನ ಉಳಿಗಾಲಕ್ಕಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿದ ಕುರಿಯನ್ನರು, ಸರಕಾರಿ ಸೇವೆ ತ್ಯಜಿಸಿ ಆ ಸಂಸ್ಥೆಗೆ ಜೀವ ತುಂಬಲು ಮುಂದೆ ಬಂದರು. ಸದಸ್ಯರ ಸಹಕಾರ, ಯೋಜಿತ ಉತ್ಪಾದನೆ ಮತ್ತು ಮಾರಾಟಗಳಿಂದ ಸಂಸ್ಥೆಯನ್ನು ಮೇಲೆಬ್ಬಿಸಿದರು. ಕುರಿಯನ್ನರ ಈ ಸಾಹಸ ‘ಅಮುಲ್‌’(ಆನಂದ್‌ ಮಿಲ್ಕ್‌ ಯೂನಿಯನ್‌ ಲಿಮಿಟೆಡ್‌) ಎಂಬ ಹೊಸ ಚರಿತ್ರೆಗೆ ನಾಂದಿ ಹಾಡಿತು. ಗುಜರಾತ್‌ ಹಾಲಿನ ಒಕ್ಕೂಟದ ಯಶಸ್ಸು ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರನ್ನು ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಪ್ರೇರೇಪಿಸಿ ಡಾ. ವರ್ಗಿಸ್‌ ಕುರಿಯನ್‌ ಅವರನ್ನು ಅದರ ಅಧ್ಯಕ್ಷ ರನ್ನಾಗಿ ನೇಮಿಸುವಂತೆ ಮಾಡಿತು. 1965ರಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷ ರಾದ ವರ್ಗಿಸ್‌ ಕುರಿಯನ್ನರು ಮುಂದೆ 1973ರಲ್ಲಿ ಗುಜರಾತ್‌ ಕೋ-ಆಪರೇಟಿವ್‌ ಮಿಲ್ಕ್‌ ಮಾರ್ಕೆಟಿಂಗ್‌ ಫೆಡರೇಶನ್‌ ಸ್ಥಾಪಿಸಿ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸಮರ್ಥವಾಗಿ ವಿತರಣೆಯಾಗುವಂತೆ ವ್ಯವಸ್ಥೆ ಮಾಡಿದರು.

ಕರ್ನಾಟಕದ ಸಾಹಸಗಾಥೆ
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಫೆಡರೇಶನ್‌ ಲಿಮಿಟೆಡ್‌ (ಕೆಎಂಎಫ್‌) ಕರ್ನಾಟಕದ ಡೈರಿ ಸಹಕಾರಿ ಆಂದೋಲನವನ್ನು ಮುನ್ನಡೆಸಿದ ಸಂಸ್ಥೆ. 1974ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ವಿಶ್ವ ಬ್ಯಾಂಕ್‌ ಧನಸಹಾಯ ಪಡೆದು ಗ್ರಾಮ ಮಟ್ಟದ ಡೈರಿ ಡೆವಲಪ್‌ಮೆಂಟ್‌ ಕೋಆಪರೇಟಿವ್‌(ಕೆಡಿಡಿಸಿ) ಸಂಘಟನೆಗಳೊಂದಿಗೆ ಆರಂಭಗೊಂಡಿತು. ಇಂದು ಇದು ದೇಶದ ಡೈರಿ ಸಹಕಾರಿ ಸಂಸ್ಥೆಗಳಲ್ಲಿ ಎರಡನೇ ಅತಿದೊಡ್ಡ ಸಂಸ್ಥೆಯಾಗಿದೆ. ದಕ್ಷಿಣ ಭಾರತದಲ್ಲಿ ಇದು ಹಾಲು ಮತ್ತು ಹಾಲಿನ ಉತ್ಪನ್ನಗಳ ಖರೀದಿ ಮತ್ತು ಮಾರಾಟದ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ. ಶುದ್ಧ ಮತ್ತು ತಾಜಾ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬ್ರಾಂಡ್‌ನೇಮ್‌ ‘ನಂದಿನಿ’ ಮನೆಮಾತಾಗಿದೆ. ಪ್ರಾಥಮಿಕ ಡೈರಿ ಕೋಆಪರೇಟಿವ್‌ ಸೊಸೈಟಿಗಳಿಂದ (ಡಿಸಿಎಸ್‌) ಹಾಲು ಸಂಗ್ರಹಿಸುವ ಮತ್ತು ಕರ್ನಾಟಕದ ವಿವಿಧ ನಗರ ಗ್ರಾಮೀಣ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ಹಾಲು ವಿತರಿಸುವ ಕೆಎಂಎಫ್‌ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡು 14 ಹಾಲು ಸಂಘಗಳನ್ನು ಹೊಂದಿದೆ. ಮೂರು ಹಂತದ ಸಂಘಟನೆಗಳಿವೆ- ಗ್ರಾಮ ಮಟ್ಟದಲ್ಲಿ ಡೈರಿ ಕೋಆಪರೇಟಿವ್‌ ಸೊಸೈಟಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ಖರೀದಿ, ಸಂಸ್ಕರಣೆ ಮತ್ತು ಮಾರುಕಟ್ಟೆ ಬಗ್ಗೆ ಕಾಳಜಿ ವಹಿಸುತ್ತವೆ ಮತ್ತು ಉತ್ಪಾದಕರ ಮಟ್ಟದಲ್ಲಿ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ತಾಂತ್ರಿಕ ನೆರವು ಒದಗಿಸುತ್ತವೆ. ರಾಜ್ಯ ಫೆಡರೇಶನ್‌ ಒಟ್ಟಾರೆ ರಾಜ್ಯದ ಚಟುವಟಿಕೆ ಸಮನ್ವಯಗೊಳಿಸುತ್ತದೆ. ಸಹಕಾರಿ ಹೈನುಗಾರಿಕೆಯ ಆಧಾರದ ಮೇಲೆ ಸ್ವಾವಲಂಬಿ ಗ್ರಾಮೀಣ ಆರ್ಥಿಕತೆಯನ್ನು ರಚಿಸುವಲ್ಲಿ ಕೆಎಂಎಫ್‌ ಪಾತ್ರ ಮಹತ್ವದ್ದು. ಹೈನುಗಾರಿಕೆಯನ್ನು ಗೃಹಕೈಗಾರಿಕೆಯ ಮಟ್ಟದಿಂದ ಮೇಲೆತ್ತಿ ಬೃಹತ್‌ ಉದ್ಯಮವನ್ನಾಗಿ ಪರಿವರ್ತಿಸಿದ ದೇಶದ ಕೆಲವೇ ಒಕ್ಕೂಟಗಳಲ್ಲಿ ಕೆಎಂಎಫ್‌ ಕೂಡ ಒಂದು.

ಇತರ ರಾಜ್ಯಗಳಲ್ಲೂ ಹಾಲಿನ ಹೊಳೆ
ಭಾರತದಲ್ಲಿ ಗುಜರಾತ್‌ ಮತ್ತು ಕರ್ನಾಟಕ ಹೆಚ್ಚಿನ ಹಾಲು ಉತ್ಪಾದನೆ ನಡೆಸುತ್ತಿದ್ದರೂ, ಇತರ ರಾಜ್ಯಗಳೂ ಹಿಂದೆ ಬಿದ್ದಿಲ್ಲ. ಪ್ರತಿ ರಾಜ್ಯವೂ ಅದರದೇ ಹಾಲು ಒಕ್ಕೂಟ ರಚಿಸಿಕೊಂಡು ಗ್ರಾಮೀಣ ರೈತರಿಗೆ ಆದಾಯ ಒದಗಿಸಲು ಶ್ರಮಿಸಿವೆ. ಇವುಗಳಲ್ಲಿ ಹೆಚ್ಚಿನ ಸಾಧನೆ ಮಾಡಿದ ಸಂಸ್ಥೆಗಳೆಂದರೆ ಉತ್ತರ ಪ್ರದೇಶದ ನೋಯಿಡಾದ ಮದರ್‌ ಡೈರಿ, ಗುಜರಾತ್‌ನ ಮೆಹ್ಸಾನಾದ ದೂದ್‌ಸಾಗರ್‌, ಕೇರಳದ ಮಿಲ್ಮಾ ಹಾಲು ಸಹಕಾರ ಒಕ್ಕೂಟ, ತಮಿಳುನಾಡಿನ ಆವಿನ್‌ ಹಾಲು ಸಹಕಾರ ಒಕ್ಕೂಟ, ಪಂಜಾಬ್‌ನ ವರ್ಕಾ ಹಾಲು ಸೊಸೈಟಿ, ಬಿಹಾರದ ಸುಧಾ ಡೈರಿ ಇತ್ಯಾದಿ.

ವಿಶ್ವ ಕ್ಷೀರ ದಿನ
2001ರಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಜೂನ್‌ 1ನ್ನು ವಿಶ್ವ ಕ್ಷೀರ ದಿನವಾಗಿ ಆಚರಿಸಲು ಆರಂಭಿಸಿತು. ಜಗತ್ತಿನ ಎಲ್ಲೆಡೆ ಆರೋಗ್ಯಕರ ಆಹಾರವಾದ ಹಾಲನ್ನು ಎಲ್ಲರಿಗೆ ದೊರೆಯುವಂತೆ ಮಾಡುವುದು, ಮಕ್ಕಳಿಗೆ ಅಪೌಷ್ಟಿಕತೆ ಉಂಟಾಗದಂತೆ ತಡೆಯಲು ಹಾಲು ಮತ್ತು ಡೈರಿ ಉತ್ಪನ್ನಗಳು ದೊರೆಯುವಂತೆ ಮಾಡುವ ಜಾಗೃತಿ ಮೂಡಿಸುವುದು ಈ ದಿನ ಆಚರಣೆಯ ಉದ್ದೇಶವಾಗಿದೆ.

ಗ್ರಾಮ ಆರ್ಥಿಕತೆಯ ಬೆನ್ನೆಲುಬು
ಗ್ರಾಮೀಣ ಆರ್ಥಿಕತೆಯ ಎರಡು ಬೆನ್ನೆಲುಬುಗಳಲ್ಲಿ ಒಂದು ಕೃಷಿ ಆಗಿದ್ದರೆ, ಇನ್ನೊಂದು ಹೈನುಗಾರಿಕೆ. ಸುಮಾರು 2 ಕೋಟಿ ಜನ ತಮ್ಮ ದೈನಂದಿನ ಬದುಕಿಗೆ ಜಾನುವಾರುಗಳನ್ನು ಆಶ್ರಯಿಸಿದ್ದಾರೆ. ಇಂದು ಭಾರತೀಯನ ದೈನಂದಿನ ಸರಾಸರಿ ಹಾಲು ಲಭ್ಯತೆ 375 ಗ್ರಾಂ. ದೇಶದಲ್ಲಿ 19 ಕೋಟಿ ದನಗಳು, 11 ಕೋಟಿ ಎಮ್ಮೆಗಳಿರಬಹುದು ಎಂಬ ಅಂದಾಜು. ಇವುಗಳಿಂದ ಸುಮಾರು 1.5 ಕೋಟಿ ಮಂದಿಗೆ ಉದ್ಯೋಗ ದೊರೆತಿದೆ. ದನ- ಎಮ್ಮೆಗಳು ಹಾಲಿನ ಜೊತೆಗೆ ಗೊಬ್ಬರವನ್ನೂ ನೀಡಿ ತಲಾಂತರಗಳಿಂದ ಕೃಷಿಯನ್ನು ಪೊರೆದಿವೆ. ಹೈನುಗಾರಿಕೆ ನಮ್ಮವರಿಗೆ ಕೇವಲ ಉದ್ಯೋಗವಷ್ಟೇ ಅಲ್ಲದೆ, ಜೀವನಶೈಲಿಯೂ ಆಗಿದೆ. ಗ್ರಾಮೀಣರು ತಮ್ಮ ದನಕರುಗಳನ್ನು ದೇವರೆಂದೇ ಭಾವಿಸುತ್ತಾರೆ.

ಮಹಿಳೆಯರ ಸಬಲೀಕರಣ
ದೇಶದ ಶೇ.25ರಷ್ಟು ಗ್ರಾಮಿಣ ಮಹಿಳೆಯರು ಹೈನುಗಾರಿಕೆಯಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಅಧ್ಯಯನಗಳು ತಿಳಿಸುತ್ತವೆ. ಮಹಿಳೆಯೇ ಕುಟುಂಬದ ಮುಖ್ಯ ದುಡಿಮೆಯ ಮೂಲವಾಗಿರುವಲ್ಲಿ ಹೆಚ್ಚಿನವರು ಹೈನುಗಾರಿಕೆಯನ್ನು ಆಶ್ರಯಿಸಿದ್ದಾರೆ.

ಭಾರತದ ಕ್ಷೀರಬಲ
15- ರಾಜ್ಯಮಟ್ಟದ ಸಹಕಾರಿ ಹಾಲು ಉತ್ಪಾದನೆ ಸಂಘಗಳು
189- ಜಿಲ್ಲಾ ಹಾಲು ಉತ್ಪಾದಕರ ಸಂಘಗಳು
1.56 ಲಕ್ಷ- ಗ್ರಾಮೀಣ ಸಹಕಾರಿ ಸಂಘಗಳು
1.52 ಕೋಟಿ- ಹಾಲು ಉತ್ಪಾದಕರು
45 ಲಕ್ಷ- ಮಹಿಳಾ ಸದಸ್ಯರು
17.8 ಕೋಟಿ ಟನ್‌- ವಾರ್ಷಿಕ ಹಾಲು ಉತ್ಪಾದನೆ

ರಾಜ್ಯದ ಕ್ಷೀರಬಲ
14- ಹಾಲು ಒಕ್ಕೂಟಗಳು
13,000 ಹಾಲು ಸಹಕಾರ ಸಂಘಗಳು
25.33 ಲಕ್ಷ- ಹಾಲು ಉತ್ಪಾದಕರು
74.66 ಲಕ್ಷ ಕಿಲೋ- ಪ್ರತಿದಿನದ ಹಾಲು ಉತ್ಪಾದನೆ
37.46 ಲಕ್ಷ ಲೀಟರ್‌- ಪ್ರತಿದಿನದ ಹಾಲು ಮಾರಾಟ
20.04 ಕೋಟಿ ರೂ.- ಹೈನುಗಾರರಿಗೆ ಪ್ರತಿದಿನದ ಪಾವತಿ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top