ದುರಂತಗಳ ಸರಣಿ ತಪ್ಪಲಿ – ಕಾರ್ಮಿಕರ ಬದುಕಿಗೆ ಬೇಕು ಮಾನವೀಯ ಸ್ಪರ್ಶ

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ರೈಲ್ವೆ ಹಳಿಯ ಹಾದಿ ಹಿಡಿದು ಕಾಲ್ನಡಿಗೆಯಲ್ಲಿ ತಮ್ಮೂರಿಗೆ ವಾಪಸ್ ಹೊರಟಿದ್ದ ವಲಸೆ ಕಾರ್ಮಿಕರಲ್ಲಿ 16 ಮಂದಿ, ರೈಲಿಗೆ ಸಿಕ್ಕಿ ಸತ್ತು ಹೋಗಿದ್ದಾರೆ. ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡ ಕಾರ್ಮಿಕರು ಔರಂಗಾಬಾದ್ ಜಿಲ್ಲೆಯ ಜಲ್ನಾದಿಂದ ತಮ್ಮ ತವರು ರಾಜ್ಯ ಮಧ್ಯಪ್ರದೇಶಕ್ಕೆ ಕಾಲ್ನಡಿಗೆ ಮೂಲಕ ಹೊರಟಿದ್ದರು. ನಡೆದು ದಣಿದು ರೈಲು ಹಳಿಗೆ ತಲೆ ಆನಿಸಿ ಮಲಗಿದ್ದವರು ರೈಲು ಹರಿದು ಸತ್ತಿದ್ದಾರೆ. ವಿಪರ್ಯಾಸ ಎಂದರೆ, ಇವರು ರಸ್ತೆಯ ಮೂಲಕ ನಡೆದು ಹೋದರೆ ಪೊಲೀಸರು ತಡೆಯುತ್ತಾರೆಂಬ ಭಯದಿಂದ ರೈಲು ಹಳಿಯಲ್ಲಿ ಹೋಗುತ್ತಿದ್ದವರು. ಹಸಿದು ಸಾಯುವುದಕ್ಕಿಂತ ಊರು ಸೇರುವುದು ಮೇಲು ಎಂದು ಭಾವಿಸಿದ್ದವರು. ಆದರೆ ಸಾವಿನಿಂದ ತಪ್ಪಿಸಿಕೊಳ್ಳಲು ಅವರಿಗೆ ಆಗಲಿಲ್ಲ. ಇವರ ಕುಟುಂಬಕ್ಕೆ ಅಗತ್ಯ ಪರಿಹಾರ ಸಿಗಬೇಕು.
ಈ ದುರಂತ ಘಟನೆ, ನಮ್ಮ ವ್ಯವಸ್ಥೆಯ ಕ್ರೂರ, ಕೊಳಕು ಮುಖವೊಂದನ್ನು ಅನಾವರಣಗೊಳಿಸಿದೆ. ದುಡಿಮೆ ಸಿಗದ ನಗರದಲ್ಲಿ ಬದುಕಲು ಸಾಧ್ಯವೇ ಇಲ್ಲವೆಂಬ ಹತಾಶೆ ಈ ಕಾರ್ಮಿಕರಲ್ಲಿ ಮೂಡಲು ಕಾರಣವೇನು, ಇದಕ್ಕೆ ಯಾರು, ಎಷ್ಟು ಪ್ರಮಾಣದಲ್ಲಿ ಕಾರಣ? ಕೆಲಸದಿಂದ ಕೈಬಿಟ್ಟವರನ್ನೂ, ಸರಕಾರವನ್ನೂ ಬೊಟ್ಟು ಮಾಡಿ ತೋರಿಸಬಹುದು. ಆದರೆ, ಒಂದು ಕೆಲಸ ಹೋದರೆ ಇನ್ನೊಂದು ಕೆಲಸವನ್ನಾದರೂ ಮಾಡಿ ಬದುಕಬಹುದು ಎಂಬ ಭರವಸೆ, ಲಾಕ್‌ಡೌನ್‌ ಮುಗಿಯುವವರೆಗೆ ಆತಂಕವಿಲ್ಲದೆ, ಹಸಿಯದೆ ಇಲ್ಲಿ ಜೀವಿಸಬಹುದು ಎಂಬ ವಿಶ್ವಾಸ ಅವರಲ್ಲಿ ಮೂಡದಿರಲು ಕಾರಣವೇನು ಎಂದು ಯೋಚಿಸಬೇಕು. ಒಟ್ಟಾರೆ ವ್ಯವಸ್ಥೆಯ ಮೇಲೆ ಅವರು ಭರವಸೆ ಕಳೆದುಕೊಂಡು ಹತಶರಾಗಿರುವುದೇ ಇದಕ್ಕೆ ಕಾರಣ. ಈಗಲಾದರೂ ಈ ಅಸಂಘಟಿತ, ಶ್ರಮಿಕ ಜೀವಿಗಳ ಜೀವನ ಈ ಸಂಕಷ್ಟ ಕಾಲವನ್ನು ದಾಟಲು ಅನುಕೂಲವಾಗುವಂಥ ವಾತಾವರಣವನ್ನು ಸರಕಾರಗಳು ನಿರ್ಮಿಸಬೇಕು.
ಈ ದುರಂತವನ್ನು ಅಥವಾ ಇಂಥ ಸಂಭಾವ್ಯ ದುರಂತಗಳನ್ನು ಹೇಗೆ ತಪ್ಪಿಸಬಹುದಿತ್ತು? ಈ ಶ್ರಮಜೀವಿಗಳ ಬದುಕಿಗೆ ಒಂದು ಮಾನವೀಯ ಸ್ಪರ್ಶವನ್ನು ನೀಡುವ ಮೂಲಕ ಖಂಡಿತವಾಗಿಯೂ ಇದನ್ನು ನಿವಾರಿಸಲು ಸಾಧ್ಯವಿತ್ತು. ಇವರು ದುಡಿಮೆ ಮಾಡುತ್ತಿದ್ದ ನಗರಗಳಲ್ಲಿಯೇ ಇವರನ್ನು ತಾತ್ಕಾಲಿಕ ವಸತಿಗಳಲ್ಲಿ ಇರಿಸಿ, ಮುಂದಿನ ಉದ್ಯೋಗ ಸಿಗುವವರೆಗೆ ಕನಿಷ್ಠ ಆಹಾರ ವ್ಯವಸ್ಥೆ ಮಾಡಬಹುದಿತ್ತು. ಅಥವಾ ಊರಿನಲ್ಲೇ ದುಡಿದು ಬದುಕುತ್ತೇವೆಂದು ಇವರು ನಿರ್ಧರಿಸಿದ್ದರೆ, ರೈಲುಗಳನ್ನು ಓಡಿಸಿ ಉಚಿತ ಪ್ರಯಾಣದ ಮೂಲಕ ಅವರವರ ಊರುಗಳಿಗೆ ತಲುಪಿಸುವ ಯತ್ನ ಮಾಡಬೇಕಿತ್ತು. ಇದು ಮಾನವೀಯ ನಿಲುವುಗಳನ್ನು ಹೊಂದಿರುವ ಯಾವುದೇ ಸರಕಾರ ಅಥವಾ ಸಂಸ್ಥೆಗಳು ಕೈಗೊಳ್ಳಬೇಕಾದ ಉಪಕ್ರಮ. ನಮ್ಮ ನಗರ ವ್ಯವಸ್ಥೆಯಲ್ಲಿ ಇಂಥದೊಂದು ಮೌಲ್ಯವ್ಯವಸ್ಥೆಯೇ ಗೈರುಹಾಜರಿ. ಅತ್ತ ಊರಿಗೆ ಹೋಗಲೂ ಬಿಡುವುದಿಲ್ಲ; ಇತ್ತ ನಗರದಲ್ಲೂ ಕೆಲಸವಿಲ್ಲ ಎಂಬಂಥ ಸನ್ನಿವೇಶದಲ್ಲಿ ಹೊರಟ ಈ ದುರ್ಬಲರನ್ನು ಪೊಲೀಸ್ ವ್ಯವಸ್ಥೆ ಕೂಡ ಹಿಂಸಿಸುತ್ತದೆ.
ನಮ್ಮ ನಗರಗಳಲ್ಲಿ ಯಾವ ವಲಯಗಳಲ್ಲಿ ಎಷ್ಟು ಮಂದಿ ಕಾರ್ಮಿಕರಿದ್ದಾರೆ ಎಂಬ ಡೇಟಾ ನಮ್ಮ ಸರಕಾರಗಳ ಬಳಿ ಇಲ್ಲ. ಕಾರ್ಮಿಕ ಇಲಾಖೆಯಿದೆ; ಆದರೆ ಅದರ ಬಳಿ ಇಂಥವರ ಬಗ್ಗೆ ದಾಖಲೆಗಳೂ ಇಲ್ಲ. ನೋಂದಾಯಿಸಿಕೊಂಡವರು ಅತ್ಯಲ್ಪ. ನೋಂದಾಯಿತರಿಗೂ ನೀಡಲಾಗುವ ಸೌಲಭ್ಯಗಳು ಕಡಿಮೆ. ಇವರ ಒಂದು ಸಮಗ್ರ ಡೇಟಾಬೇಸ್ ತಯಾರಿಸುವ ಅಗತ್ಯವಿದೆ. ಎಲ್ಲ ಪ್ರಜೆಗಳಿಗೆ ಗುರುತುಪತ್ರ ನೀಡುವ ಕೆಲಸ ಸರಕಾರಕ್ಕೆ ಸಾಧ್ಯವಿದ್ದಾಗ, ಇದೇನೂ ಕಷ್ಟದ ಕೆಲಸವಲ್ಲ. ಲಾಕ್‌ಡೌನ್‌ನಂಥ ಸಂಕಷ್ಟದ ಸಂದರ್ಭಗಳಲ್ಲಿ ಆಯಾ ಕುಟುಂಬದ ವೃತ್ತಿ, ಆದಾಯಕ್ಕನುಗುಣವಾಗಿ ಪರಿಹಾರ ವ್ಯವಸ್ಥೆ ಕಲ್ಪಿಸಲು ಸರಕಾರಕ್ಕೆ ಇದರಿಂದ ಸುಲಭ ಸಾಧ್ಯವಾಗುತ್ತದೆ. ಸರಕಾರ ಹಾಗೂ ನಾಗರಿಕ ಸಮಾಜ ಹೆಚ್ಚು ಹೆಚ್ಚು ಮಾನವೀಯವಾದಂತೆ ಶ್ರಮಿಕರ ಬದುಕು ಹಸನಾಗಿ ಇಂಥ ದುರಂತಗಳು ತಪ್ಪಬಹುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top