ಕಾರ್ಮಿಕ ವಲಯದಲ್ಲಿ ಕಾರ್ಮುಗಿಲು

ಕೊರೊನಾ ಸೋಂಕಿನ ಕಾರಣದಿಂದ ಜಗತ್ತಿನೆಲ್ಲೆಡೆ ನಿಂತು ಹೋಗಿರುವ ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳಿಂದಾಗಿ, ದೊಡ್ಡ ಪ್ರಮಾಣದಲ್ಲಿರುವ ಕಾರ್ಮಿಕ ವಲಯ ತತ್ತರಿಸುತ್ತಿದೆ. ಬಡವರು, ಕೆಳ ಮಧ್ಯಮವರ್ಗ ಹಾಗೂ ಮಧ್ಯಮವರ್ಗದಲ್ಲಿ ಹಂಚಿಹೋಗಿರುವ ಈ ಜನತೆಯ ಪಡಿಪಾಟಲು ಬಗ್ಗೆ ಈ ಕಾರ್ಮಿಕರ ದಿನ(ಮೇ 1) ಒಂದು ಚಿಂತನೆ.

ದಿ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ಲೆಕ್ಕಾ ಹಾಕಿರುವಂತೆ, ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿಯೇ ಇದುವರೆಗೆ ಕೆಲಸ ಕಳೆದುಕೊಂಡಿರುವವರ ಸಂಖ್ಯೆ 14 ಕೋಟಿ. ಈ ಬಿಕ್ಕಟ್ಟಿಗೆ ಮೊದಲು ನಿರುದ್ಯೋಗ ದರ 8 ಶೇಕಡದಷ್ಟಿತ್ತು. ಈಗ ಅದು ಶೇ.26ಕ್ಕೆ ಏರಿದೆ. ಈ ಸಂಖ್ಯೆ ಹೆಚ್ಚಾಗಬಹುದಲ್ಲದೇ ಕಡಿಮೆಯಾಗುವ ಸಂಭವವಿಲ್ಲ. ಹೀಗೆ ಕೆಲಸ ಕಳೆದುಕೊಂಡವರೆಲ್ಲ ಹೆಚ್ಚಾಗಿ ಕಾರ್ಮಿಕರು. ಇವರಲ್ಲಿ ಕೆಲವರಿಗೆ ಕಾರ್ಮಿಕ ಕಾನೂನುಗಳ ಬಲವಿರಬಹುದು; ಕೆಲವರಿಗೆ ಇರಲಿಕ್ಕಿಲ್ಲ. ಇವರನ್ನು ಸಂಘಟಿತ ಹಾಗೂ ಅಸಂಘಟಿತ ಎಂದು ಪರಿಗಣಿಸುವುದು ಕೂಡ ಈ ಹೊತ್ತಿನಲ್ಲಿ ಅರ್ಥವಿಲ್ಲದ ಲೆಕ್ಕಾಚಾರ. ಯಾಕೆಂದರೆ ಎಲ್ಲರ ಪಾಡೂ ಒಂದೇ ಆಗಿದೆ.
ಹಸಿವಿನತ್ತ ಕಾರ್ಮಿಕ ಕುಟುಂಬಗಳು: ಲಾಕ್‌ಡೌನ್‌ಗೂ ಮುನ್ನವೇ 25 ಕೋಟಿ ಭಾರತೀಯರು ಸಾಕಷ್ಟು ಆಹಾರ ಪಡೆಯುತ್ತಿಲ್ಲ ಎಂದು ವಿಶ್ವ ಸಂಶ್ಥೆಯ ವಿಶ್ವ ಆಹಾರ ಕಾರ್ಯಕ್ರಮ ತಿಳಿಸಿತ್ತು. ಲಾಕ್‌ಡೌನ್ ಸಂದರ್ಭದ ಉದ್ಯೋಗ ನಷ್ಟ, ಸಂಬಳ ಕಡಿತ ಇತ್ಯಾದಿಗಳಿಂದಾಗಿ ಈ ಸಂಖ್ಯೆ ದುಪ್ಪಟ್ಟಾಗಿರಬಹುದು. ಸರಕಾರ ಹಾಗೂ ಕೆಲವು ಸಂಘಟನೆಗಳು ತಾತ್ಕಾಲಿಕವಾಗಿ ದಿನದ ಒಂದು ಹೊತ್ತಿನ ಊಟವನ್ನು ಒದಗಿಸುತ್ತಿವೆ. ಆದರೆ ಇದು ಹೆಚ್ಚು ಕಾಲ ಮುಂದುವರಿಯಲಾರದು. ಇದೊಂದು ಅಭೂತಪೂರ್ವ ಮಾನವ ಬಿಕ್ಕಟ್ಟು ಎಂದು ಬಣ್ಣಿಸಲಾಗುತ್ತಿದೆ.

ಕೆಲಸದಿಂದ ತೆಗೆಯದಂತೆ ಮನವಿ
ಕಾರ್ಮಿಕರನ್ನು ಯಾವ ಕಾರಣಕ್ಕೂ ಕೆಲಸದಿಂದ ತೆಗೆಯಬೇಡಿ ಎಂದು ಖಾಸಗಿ ಕಂಪನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದರು. ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಾರ್ಮಿಕ ಸಚಿವಾಲಯ, ಕಾರ್ಮಿಕರನ್ನು ಕೆಲಸದಿಂದ ತೆಗೆಯದಂತೆ ಹಾಗೂ ಸಂಬಳ ಕಡಿತ ಮಾಡದಂತೆ ಖಾಸಗಿ ಕಂಪನಿಗಳಿಗೆ ನಿರ್ದೇಶನ ನೀಡಿತ್ತು. ಹಲವು ಇತರ ರಾಜ್ಯಗಳು ಕೂಡ ಕಂಪನಿಗಳಿಗೆ ಹೀಗೆ ನಿರ್ದೇಶನ ನೀಡಿವೆ.

ವಲಸೆ ಕಾರ್ಮಿಕರು ಅಸಂಖ್ಯ
ಲಾಕ್‌ಡೌನ್ ಆರಂಭವಾದ ಮೂರನೇ ದಿನವೇ ದೇಶದ ಎಲ್ಲ ದೊಡ್ಡ ಮಹಾನಗರಗಳಿಂದ ಮರುವಲಸೆ ಆರಂಭವಾಯಿತು. ಕಾರ್ಯಾಚರಣೆ ನಿಲ್ಲಿಸಿದ ಎಲ್ಲ ಅಸಂಘಟಿತ ವಲಯದ ಉದ್ದಿಮೆಗಳ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಹಳ್ಳಿಗಳತ್ತ ಮರುವಲಸೆ ಆರಂಭಿಸಿದ್ದರು. ಸದ್ಯ ಇವರ ಪ್ರಮಾಣ ಎಷ್ಟು ಎಂಬ ಲೆಕ್ಕಾಚಾರ ಯಾರ ಬಳಿಯೂ ಇಲ್ಲ. ಇದನ್ನು ಆಯಾ ರಾಜ್ಯದ ಕಾರ್ಮಿಕ ಇಲಾಖೆಗಳಿಂದ ಹುಡುಕಿಸಿ ತರಿಸುವ ಕೆಲಸ ಕೇಂದ್ರದಲ್ಲಿ ಭರದಿಂದ ನಡೆದಿದೆ. ದೇಶಾದ್ಯಂತ ಸುಮಾರು 10 ಕೋಟಿ ವಲಸೆ ಕಾರ್ಮಿಕರು ಇರಬಹುದು ಎಂಬುದು ಒಂದು ಅಂದಾಜು. ಇವರನ್ನೂ ಸೇರಿಸಿ ಒಟ್ಟಾರೆ ಬಡವರ ತುರ್ತು ದೇಖರೇಖೆಗೆ ಎಂದು ಕೇಂದ್ರ ಸರಕಾರ 1.73 ಲಕ್ಷ ಕೋಟಿ ರೂಪಾಯಿಗಳನ್ನು ಎತ್ತಿಟ್ಟಿದೆ. ಸದ್ಯ ಇವರಲ್ಲಿ ಅರ್ಧ ಭಾಗದಷ್ಟು ಮಂದಿ ಮಾತ್ರ ಹಳ್ಳಿಗಳಿಗೆ ಮರಳಿದ್ದಾರೆ. ಉಳಿದವರು ತಾತ್ಕಾಲಿಕ ಶಿಬಿರಗಳಲ್ಲಿದ್ದಾರೆ. ಒಮ್ಮೆ ಲಾಕ್‌ಡೌನ್ ತೆರವಾದ ಕೂಡಲೇ ಇವರ ಪ್ರವಾಹ ಮತ್ತೆ ಆರಂಭವಾಗಲಿದೆ.

ಜಾಗತಿಕ ಬಿಕ್ಕಟ್ಟು
ಕಾರ್ಮಿಕ ಸಮಸ್ಯೆ ಭಾರತೀಯರಿಗೆ ಮಾತ್ರ ಮೀಸಲಾದ್ದಲ್ಲ. ಜಗತ್ತಿನಾದ್ಯಂತ 43 ಕೋಟಿ ಸಣ್ಣ- ದೊಡ್ಡ ಉದ್ದಿಮೆಗಳು ತುಂಬಾ ಆರ್ಥಿಕ ಏಟು ತಿಂದಿವೆ. ಇವುಗಳಲ್ಲಿ ದುಡಿಯುತ್ತಿರುವ 160 ಕೋಟಿ ಕಾರ್ಮಿಕರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾದ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ಒ) ಹೇಳಿದೆ. ಭಾರತದಲ್ಲಿ ಸುಮಾರು 40 ಕೋಟಿ ಮಂದಿ ಹಸಿವಿನ ಕ್ರೂರ ದವಡೆಯಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಎಂದು ಅದು ಹೇಳಿದೆ. ಜಾಗತಿಕವಾಗಿ ಸುಮಾರು 330 ಕೋಟಿ ಕಾರ್ಮಿಕರಿದ್ದು, ಅವರಲ್ಲಿ 200 ಕೋಟಿ ಮಂದಿ ಅಸಂಘಟಿತ ಆರ್ಥಿಕತೆಯ ಭಾಗವಾಗಿರುವವರು. ಇವರು ಅಪಾಯಕ್ಕೆ ಹೆಚ್ಚು ತುತ್ತಾಗುವವರು.

ಭಾರತೀಯ ಕಾರ್ಮಿಕರ ಸ್ಥಿತಿಗತಿ
– ಗ್ರಾಮೀಣ 25% ಹಾಗೂ ನಗರದ 12% ಕುಟುಂಬಗಳು ಅನಿಯತ ಸಂಬಳದ ಕಾರ್ಮಿಕರನ್ನು ಅವಲಂಬಿಸಿವೆ.
– ಪಟ್ಟಣಗಳಲ್ಲಿ 40% ಮಂದಿ ನಿಯತ ಸಂಬಳದವರು. ಆದರೆ ಎಲ್ಲರಿಗೂ ಉದ್ಯೋಗ ಸುರಕ್ಷತೆ ಇದೆ ಎಂದೇನಿಲ್ಲ.
– 70% ಕೃಷಿಯೇತರ ವಲಯಗಳ ಕಾರ್ಮಿಕರು ಮಾಲಿಕರೊಂದಿಗೆ ಯಾವುದೇ ಲಿಖಿತ ಒಪ್ಪಂದ ಹೊಂದಿಲ್ಲ. 50% ಮಂದಿಗೆ ಆರೋಗ್ಯವಿಮೆ ಮತ್ತಿತರ ಸೌಲಭ್ಯಗಳಿಲ್ಲ.

– ಮನೆಯಿಂದಲೇ ಕೆಲಸ
ದೇಶದಲ್ಲಿ ಕಾರ್ಮಿಕರೆಂದು ಪರಿಗಣಿಸಬಹುದಾದವರಲ್ಲಿ ಶೇ.60 ಮಂದಿ ದೈಹಿಕ ದುಡಿಮೆ ಮಾಡುವವರು. ಇವರು ವರ್ಕ್ ಫ್ರಮ್‌ ಹೋಮ್ ಮಾಡಲು ಸಾಧ್ಯವಿಲ್ಲ. ಮನೆಯಿಂದಲೇ ಕೆಲಸ ಮಾಡಬಹುದಾದ ಹೆಚ್ಚಿನವರು ಬ್ಲೂ ಕಾಲರ್ ಹಾಗೂ ವೈಟ್ ಕಾಲರ್ ಜಾಬ್‌ಗಳಲ್ಲಿದ್ದು, ಕಾರ್ಮಿಕ ನಿಯಮಾವಳಿಗಳ ಅಡಿಯಲ್ಲಿ ಬರುತ್ತಿಲ್ಲ. ಉನ್ನತ ವಲಯದ ಉದ್ಯೋಗಿಗಳಲ್ಲಿ ಶೇ. 50 ಮಂದಿ ವರ್ಕ್ ಫ್ರಮ್‌ ಹೋಮ್ ಸೌಲಭ್ಯ ಪಡೆದಿದ್ದಾರೆ. ಶೇ.70 ಮಂದಿ ಸಂಬಳ ಕಡಿತದ ಆತಂಕ ಎದುರಿಸುತ್ತಿದ್ದಾರೆ. ಶೇ. 30 ಮಂದಿ ಕೆಲಸ ಕಳೆದುಕೊಳ್ಳುವ ಭೀತಿ ಅನುಭವಿಸುತ್ತಿದ್ದಾರೆ.

ಕೆಲಸ ಕಡಿತದ ವಲಯಗಳು
ಹೆಚ್ಚಿನ ಎಲ್ಲ ವಲಯಗಳು ಕಾರ್ಮಿಕರ ಸಂಖ್ಯೆ ಕಡಿತ ಮಾಡಲೇಬೇಕಾದ ಅನಿವಾರ್ಯತೆ ಎದುರಿಸುತ್ತಿವೆ. ನಿರ್ಮಾಣ ವಲಯದಲ್ಲಿ ಕೆಲಸ ನಿಂತುಹೋಗಿದೆ. ಲಾಕ್‌ಡೌನ್ ತೆಗೆದ ನಂತರವೂ ರಿಯಾಲ್ಟಿಗೆ ಮೊದಲಿನ ಬೇಡಿಕೆ ಹುಟ್ಟಲಾರದು. ಆಟೋಮೊಬೈಲ್, ಜವಳಿ, ಹೋಟೆಲ್, ಪ್ರವಾಸೋದ್ಯಮ ಕ್ಷೇತ್ರಗಳಿಗೂ ಇದು ಅನ್ವಯಿಸಲಿದೆ. ಕೃಷಿ ಕ್ಷೇತ್ರದಲ್ಲಿ ಮಾತ್ರ ಸ್ವಲ್ಪ ದುಡಿಮೆಯ ಸಾಧ್ಯತೆ ಈಗ ಇದೆ. ಆದರೆ ಇತರ ಕ್ಷೇತ್ರಗಳಲ್ಲಿ ಕೆಲಸ ಕಳೆದುಕೊಂಡವರ ಪೈಪೋಟಿ ಹಾಗೂ ಮರುವಲಸೆಯ ಪರಿಣಾಮ ಕೂಲಿಯಲ್ಲಿ ಕಡಿತವಾಗಲಿದೆ.

ತುರ್ತು ಕ್ರಮಕ್ಕೆ ವಿಶ್ವ ಸಂಸ್ಥೆ ಕರೆ
ಇದೊಂದು ಅತಿ ದೊಡ್ಡ ಮಾನವ ಬಿಕ್ಕಟ್ಟು. ಎಲ್ಲ ದೇಶಗಳೂ ಸಂಘಟಿತರಾಗಿ ಈ ಬಿಕ್ಕಟ್ಟನ್ನು ಎದುರಿಸದಿದ್ದರೆ ದೊಡ್ಡ ಸಂಖ್ಯೆಯ ಜನತೆ ಹಸಿವಿಗೆ ತುತ್ತಾಗಲಿದೆ. ಕಾರ್ಮಿಕರ ಹಾಗೂ ಉದ್ಯಮದ ಹಿತವನ್ನು ರಕ್ಷಿಸುವ ಕಾಯಿದೆಗಳನ್ನು ರಚಿಸುವುದು, ಸಾಮಾಜಿಕ ಸುರಕ್ಷತಾ ವ್ಯವಸ್ಥೆಗಳನ್ನು ರೂಪಿಸುವುದು, ಸರಕಾರಗಳ ಬಳಿ ಇರುವ ಹೆಚ್ಚಿನ ನಿಧಿಗಳನ್ನು ಕಾರ್ಮಿಕ ಕಲ್ಯಾಣ ವ್ಯವಸ್ಥೆಗೆ ಹರಿಸುವುದು ಮಾಡಬೇಕು. ಅಂತಾರಾಷ್ಟ್ರೀಯ ಕಾರ್ಮಿಕ ಚೌಕಟ್ಟನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವಿಶ್ವ ಸಂಸ್ಥೆಯ ಕಾರ್ಮಿಕ ಘಟಕ ವಿಶ್ವ ಸಮುದಾಯಕ್ಕೆ ಸೂಚಿಸಿದೆ.
ಭಾರತಕ್ಕೆ ವರವಾಗಲಿದೆಯೇ?
ಕಗ್ಗತ್ತಲ ನಡುವೆ ಬೆಳ್ಳಿ ರೇಖೆ ಎಂಬಂತೆ ಕೆಲವು ತಜ್ಞರು ಹೊಸ ತರ್ಕವೊಂದನ್ನು ಮುಂದಿಡುತ್ತಿದ್ದಾರೆ. ಅದರ ಪ್ರಕಾರ,ಲಾಕ್‌ಡೌನ್‌ಗಳು ತೆರವಾದ ಬಳಿಕ, ಹೊಸ ಕಾರ್ಮಿಕ ಮಾರುಕಟ್ಟೆಗಳು ಕ್ರಿಯಾಶೀಲವಾಗಲಿವೆ. ಈ ಹೊಸ ಮಾರುಕಟ್ಟೆಗಳಲ್ಲಿ ದುಡಿಯುವ ವಯಸ್ಸಿನ ಯುವ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ. ಎಲ್ಲ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಉದ್ದಿಮೆಗಳು ಚೀನಾದ ಬಿಗಿಮುಷ್ಟಿಯ ಔದ್ಯಮಿಕ ಜಗತ್ತಿನಿಂದ ಆಚೆಗೆ ಬರಲು ತವಕಿಸುತ್ತಿದ್ದು, ಭಾರತದಲ್ಲಿ ಪರ್ಯಾಯ ನೆಲೆ ಕಾಣಲಿವೆ. ಆ ಸಂದರ್ಭದಲ್ಲಿ ಸೃಷ್ಟಿಯಾಗುವ ಹೊಸ ಕಾರ್ಮಿಕ ಮಾರುಕಟ್ಟೆಯನ್ನು ಭಾರತದ ಕಾರ್ಮಿಕರು ಸಮೃದ್ಧಗೊಳಿಸಲಿದ್ದಾರೆ. ಈ ಮಾರುಕಟ್ಟೆಗಳಲ್ಲಿ ಆಟೋಮೊಬೈಲ್- ಉತ್ಪಾದನೆ ಮೊದಲಾದವುಗಳಲ್ಲದೆ ಐಟಿ- ಬಿಟಿ ಮುಂತಾದ ಸೇವಾ ವಲಯಗಳೂ ಸೇರಲಿವೆ. ಈಗಾಗಲೇ ಅಮೆರಿಕದ ಅಧ್ಯಕ್ಷ ಟ್ರಂಪ್, ತಮ್ಮ ನೆಲೆಗಳನ್ನು ಚೀನಾದಿಂದ ಭಾರತಕ್ಕೆ ಬದಲಾಯಿಸುವಂತೆ ತಮ್ಮ ದೇಶದ ಕಂಪನಿಗಳಿಗೆ ಕರೆ ನೀಡಿದ್ದಾರೆ. ಭಾರತದಲ್ಲಿ ದೊರೆಯುವ ಅಗ್ಗದ ದುಡಿಮೆಗಾರರು ಈ ಉದ್ದಿಮೆಗಳಿಗೆ ಲಾಭಕರವೆನಿಸಲಿದ್ದಾರೆ.

ಸವಾಲುಗಳು ಮುಂದಿವೆ
ಭಾರತದಲ್ಲಿ ದೊಡ್ಡ ಪ್ರಮಾಣದ ದುಡಿಯುವ ಪ್ರಾಯದ ಜನತೆಯಿದೆ. ದುಡಿಯುವ ಪ್ರಾಯದ ಜನತೆಯ ಪ್ರಮಾಣ ಒಟ್ಟಾರೆ ಜನಸಂಖ್ಯೆಯ 66.4%ದಷ್ಟಿದೆ. ಆದರೆ 15 ವರ್ಷಕ್ಕಿಂತ ಮೇಲಿನವರನ್ನು ಪರಿಗಣಿಸಿದರೆ ಕಾರ್ಮಿಕ ಶಕ್ತಿ ಸಹಭಾಗಿತ್ವ 49.8% ಮಾತ್ರ. ಚೀನಾಕ್ಕೆ ಪೈಪೋಟಿ ನೀಡಬೇಕಾದರೆ ಭಾರತೀಯ ಕಾರ್ಮಿಕರನ್ನು ತಂತ್ರಜ್ಞಾನ ಕುಶಲಿಗಳಾಗಿಸಬೇಕಿದೆ. ಆದರೆ ಭಾರತದಲ್ಲಿ ದೊಡ್ಡ ಪ್ರಮಾಣದ ಜನತೆಗೆ ಡಿಜಿಟಲ್ ಸೌಕರ್ಯ ಲಭ್ಯವಿಲ್ಲ. 2019ರ ಮಾನವಾಭಿವೃದ್ಧಿ ವರದಿಯ ಪ್ರಕಾರ ದೇಶದಲ್ಲಿ ಡಿಜಿಟಲ್ ಸಾಧನಗಳು ಲಭ್ಯವಿರುವ ಕುಟುಂಬಗಳು 32% ಮಾತ್ರ. ದೊಡ್ಡ ಪ್ರಮಾಣದಲ್ಲಿ ಡಿಜಿಟೈಸ್ ಆಗದೆ ಈ ಕಂದಕವನ್ನು ದಾಟುವುದು ಸಾಧ್ಯವೇ ಇಲ್ಲ. 2019ರ ಭಾರತೀಯ ಕೌಶಲ್ಯ ವರದಿಯ ಪ್ರಕಾರ, ಸಾಗಾಟಕ್ಕೆ ಸಂಬಂಧಿಸಿದ 40-50% ಉದ್ಯೋಗಗಳು ಇಷ್ಟರಲ್ಲೇ ಆಟೋಮೇಶನ್ ಆಗಲಿವೆ. ಅದರಲ್ಲಿ ಉತ್ಪಾದನೆ, ವಾಣಿಜ್ಯ ಸೇವೆ, ಸಾರಿಗೆ, ಪ್ಯಾಕೇಜಿಂಗ್, ಶಿಪ್ಪಿಂಗ್‌ಗಳೆಲ್ಲ ಸೇರಿವೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top