ಈ ಘಟನೆ ಈ ಸ್ವರೂಪ ಪಡೆದುಕೊಂಡಿದ್ದೇ ಕರ್ನಾಟಕ ಪೊಲೀಸರ ವೈಫಲ್ಯಕ್ಕೆ ಮತ್ತೊಂದು ಸಾಕ್ಷಿ ಮತ್ತು ಪುರಾವೆ!!

ತಪ್ಪು ಯೋಧನದ್ದೋ ಪೊಲೀಸರದೋ? ತನಿಖೆಗೆ ಆದೇಶ
– ಮಾಸ್ಕ್‌ ಧರಿಸದ ಕಮಾಂಡೊನ ಬಂಧನದ ವಿವಾದ ಸ್ಫೋಟ
– ಬಂಧನ ಖಂಡಿಸಿ ಸಿಆರ್‌ಪಿಎಫ್‌ನಿಂದ ರಾಜ್ಯ ಡಿಜಿಪಿಗೆ ಪತ್ರ
– ಯೋಧನ ಸೆರೆಗೆ ಕಾರಣ ಅನುಚಿತ ವರ್ತನೆ: ಪೊಲೀಸರ ಸಮರ್ಥನೆ

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದಲ್ಲಿ ಏ.23ರಂದು ಸಿಆರ್‌ಪಿಎಫ್‌ ಕೋಬ್ರಾ ಕಮಾಂಡೋ ಘಟಕದ ಯೋಧ ಮತ್ತು ಪೊಲೀಸ್‌ ಸಿಬ್ಬಂದಿ ನಡುವಿನ ಜಟಾಪಟಿ – ಯೋಧನ ಬಂಧನ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಘಟನೆಯ ತನಿಖೆ ನಡೆಸುವಂತೆ ಒತ್ತಾಯಿಸಿ ಸಿಆರ್‌ಪಿಎಫ್‌ ಹಿರಿಯ ಅಧಿಕಾರಿಗಳು ರಾಜ್ಯ ಪೊಲೀಸ್‌ ಇಲಾಖೆಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಸದಲಗಾ ಠಾಣೆ ಪೊಲೀಸರು ಐಪಿಸಿ 353, 303, 504 ಮತ್ತು ಸಾಂಕ್ರಾಮಿಕ ರೋಗ ಕಾಯಿದೆ ಉಲ್ಲಂಘನೆ ಆರೋಪದ ಅಡಿ ಯಕ್ಸಂಬಾ ಗ್ರಾಮದ ನಿವಾಸಿ, ಸಿಆರ್‌ಪಿಎಫ್‌ ಯೋಧ ಸಚಿನ್‌ ಸಾವಂತ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅಂದೇ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹಿಂಡಲಗಾ ಕಾರಾಗೃಹಕ್ಕೆ ಕಳುಹಿಸಿದ್ದರು.

ಅಂದು ಏನಾಗಿತ್ತು ?
ಯಕ್ಸಂಬಾ ಗ್ರಾಮದ ಸಚಿನ್‌ ಸಾವಂತ ಕೋಲ್ಕತ್ತದ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜೆ ಮೇಲೆ ಲಾಕ್‌ಡೌನ್‌ಗೂ ಮೊದಲೆ ಊರಿಗೆ ಬಂದಿದ್ದರು. ಏ.23ರಂದು ಸಚಿನ್‌ ತನ್ನ ಸ್ನೇಹಿತರ ಜತೆಗೂಡಿ ಮಾಸ್ಕ್‌ ಇಲ್ಲದೆ ಮನೆ ಮುಂದೆ ನಿಂತಿದ್ದನ್ನು ಕಂಡ ಗಸ್ತಿನಲ್ಲಿದ್ದ ಇಬ್ಬರು ಪೊಲೀಸ್‌ ಸಿಬ್ಬಂದಿ ಮಾಸ್ಕ್‌ ಧರಿಸುವಂತೆ ಎಚ್ಚರಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಯೋಧ ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿತ್ತು.

ಯಾವ ಪ್ರಕರಣ?
ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿ ಹೊಟ್ಟೆಗೆ ಒದ್ದು ಹಲ್ಲೆ ನಡೆಸಿದ್ದರಿಂದ ಸದಲಗಾ ಠಾಣೆ ಪೊಲೀಸರು ಸಾರ್ವಜನಿಕ ಅಧಿಕಾರಿ ಮೇಲೆ ಹಲ್ಲೆ, ಉದ್ದೇಶಪೂರ್ವಕವಾಗಿ ಗಾಯಗೊಳಿಸಿದ್ದು ಮತ್ತು ಸಾರ್ವಜನಿಕ ಶಾಂತಿಗೆ ಭಂಗ ಮಾಡಿದ್ದು ಹಾಗೂ ಸಾಂಕ್ರಾಮಿಕ ರೋಗ ಕಾಯಿದೆ ಉಲ್ಲಂಘಿಸಿದ ಆರೋಪದಲ್ಲಿ ಯೋಧ ಸಚಿನ್‌ ಸಾವಂತ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಂಗದ ವಶಕ್ಕೆ ನೀಡಿದ್ದಾರೆ ಎಂದು ಪೊಲೀಸ್‌ ವರಿಷ್ಠ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಆದರೆ, ಮನೆ ಮುಂದೆ ವಾಹನ ತೊಳೆಯುತ್ತಿದ್ದ ಸಚಿನ್‌ ಮಾಸ್ಕ್‌ ಧರಿಸಿಲ್ಲ ಎನ್ನುವ ಕಾರಣಕ್ಕೆ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಪ್ರಚೋದಿಸಿದ್ದಾರೆ ಎನ್ನುವುದು ಕುಟುಂಬದ ಸದಸ್ಯರ ಆರೋಪ.

ಈ ಕುರಿತು ಈಗ ಸಿಆರ್‌ಪಿಎಫ್‌ ಎಡಿಜಿಪಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು, ”ಕಮಾಂಡೋ ತರಬೇತಿ ಪೂರ್ಣಗೊಳಿಸಿರುವ ಯೋಧ ಸಚಿನ್‌ ಸಾವಂತ್‌ ನಿಯಮ ಉಲ್ಲಂಘಿಸಿದ ಕುರಿತು ಸಿಆರ್‌ಪಿಎಫ್‌ ಗಮನಕ್ಕೂ ತರದೆ ಅಪರಾಧಿ ರೀತಿಯಲ್ಲಿ ಬೇಡಿ ಹಾಕಿ ಕೂಡಿ ಹಾಕಿರುವುದು ಸರಿಯಲ್ಲ. ಈ ಕುರಿತು ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.

ಪರ-ವಿರೋಧ ಚರ್ಚೆ
ಯೋಧ ಮತ್ತು ಪೊಲೀಸರ ನಡುವಿನ ಜಟಾಪಟಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಕೆಲ ನೆಟ್ಟಿಗರು ‘ಕಾನೂನು ಎಲ್ಲರಿಗೂ ಸಮಾನವಾದ್ದರಿಂದ ಪೊಲೀಸರು ಕೈಗೊಂಡಿರುವ ಕ್ರಮ ಸರಿಯಾಗಿದೆ’ ಎಂದಿದ್ದರೆ, ಕೆಲವರು’ ಕಮಾಂಡೋ ತರಬೇತಿ ಪೂರ್ಣಗೊಳಿಸಿರುವ ಜವಾಬ್ದಾರಿಯುತ ಯೋಧನನ್ನು ಅಪರಾಧಿಯಂತೆ ಬೇಡಿ ಹಾಕಿ ಕೂಡಿ ಹಾಕಿರುವುದು ತಪ್ಪು’ ಎಂದಿದ್ದಾರೆ.

ಮಾಸ್ಕ್‌ ಧರಿಸಿಲ್ಲ ಎನ್ನುವ ಒಂದೇ ಕಾರಣದಿಂದ ಯೋಧ ಎನ್ನುವುದನ್ನೂ ಗಮನಿಸದೇ ಸಾರ್ವಜನಿಕವಾಗಿ ಹಿಂಸಿಸಿ, ಕೈದಿಯಂತೆ ಕೈಗೆ ಕೋಳ ತೊಡಿಸಿ ಬಂಧಿಸಿರುವುದನ್ನು ಯಾವುದೇ ಕಾರಣಕ್ಕೂ ಸಮರ್ಥನೆ ಮಾಡಲು ಸಾಧ್ಯವಿಲ್ಲ. ಬಂಧಿತ ಯೋಧನನ್ನು ಗೌರವದಿಂದ ಬಿಡುಗಡೆ ಮಾಡಬೇಕು ಮತ್ತು ತಪ್ಪಿತಸ್ಥ ಪೊಲೀಸ್‌ ಸಿಬ್ಬಂದಿಯ ಮೇಲೆ ತನಿಖೆ ನಡೆಸಿ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಒತ್ತಾಯಿಸುತ್ತೇನೆ.
– ರಮೇಶ್‌ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

ಪೊಲೀಸ್‌ ಠಾಣೆಗೆ ಕರೆತಂದಾಗಲೂ ಸಚಿನ್‌ ಸಾವಂತ ವಿಚಾರಣೆಗೆ ಸಹಕಾರ ನೀಡದೆ ಕೂಗಾಡುತ್ತ ಅನುಚಿತ ವರ್ತನೆ ತೋರಿದ್ದರು. ಮಹಿಳಾ ಸಿಬ್ಬಂದಿಯೂ ಇರುವ ಠಾಣೆಯಲ್ಲಿ ಕನಿಷ್ಠ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಸುಲಭವಾಗಿ ಹತ್ತಿಕ್ಕುವ ಶಕ್ತಿ ಯೋಧನಿಗೆ ಇತ್ತು ಎನ್ನುವ ಕಾರಣದಿಂದ ಠಾಣೆಯಲ್ಲಿ ಕಟ್ಟಿ ಹಾಕಲಾಗಿತ್ತು.
– ಲಕ್ಷ್ಮಣ ನಿಂಬರಗಿ, ಎಸ್ಪಿ, ಬೆಳಗಾವಿ

ಸಣ್ಣ ವಿಷಯಕ್ಕೆ ಯೋಧನ ಕೈಗೆ ಕೊಳ ಹಾಕಿರುವುದು ತಪ್ಪು. ಅದರಲ್ಲೂ ಕೈಗೆ ಕೊಳಹಾಕಿ ಠಾಣೆಯಲ್ಲಿ ಕೂಡಿ ಹಾಕಿದ ಫೋಟೋವನ್ನು ಪೊಲೀಸರೇ ವೈರಲ್‌ ಮಾಡಿದ್ದು ಇನ್ನೂ ದೊಡ್ಡ ತಪ್ಪು. ಗಡಿ ಕಾಯುವ ಯೋಧರು ದೇಶದೊಳಗೂ ತುರ್ತು ಪರಿಸ್ಥಿತಿ ನಿಭಾಯಿಸುವಂತ ಸಂದರ್ಭ ಎದುರಾಗಿದೆ ಎನ್ನುವುದನ್ನು ರಾಜ್ಯದ ಪೊಲೀಸರು ಅರಿತು ನಡೆದುಕೊಳ್ಳಬೇಕು.
– ಚಂದ್ರಶೇಖರ ಸವಡಿ, ಮಾಜಿ ಯೋಧ. ಬೆಳಗಾವಿ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top