ಅಯೋಧ್ಯೆಯಲ್ಲಿ ಮಂದಿರವೇಕೆ ಬೇಕು?

ದೇವಸ್ಥಾನವೆಂದರೆ ಬರೀ ಪ್ರಾರ್ಥನೆಯ ಸ್ಥಳವಲ್ಲ, ಸಂಸ್ಕೃತಿಯ ಆಗರ
– ಡಾ.ಆರತೀ ವಿ.ಬಿ.

‘‘ವರ್ಷಸಾಹಸ್ರಗಳ ಕನಸು ನನಸಾಗಿಹುದು/ಅಹಹ ರಾಮಾಲಯವು ಬೆಳಗುತಿಹುದು/ದೀರ್ಘನಿದ್ರೆಯು ಕಳೆದು ಕ್ಷಾತ್ರತೇಜವು ಬೆಳೆದು/ರಾಮರಾಜ್ಯವು ಭುವಿಗೆ ಮರಳುತಿಹುದು’’
ರಾಮಮಂದಿರ ಮರಳಿ ತಲೆಯೆತ್ತಿದೆ! ಭಾರತವನ್ನೂ ಭಾರತೀಯತೆಯನ್ನೂ ಎತ್ತಿ ಮೆರೆಸಿದೆ! ಅಸಂಖ್ಯರ ಪ್ರಾಮಾಣಿಕ ಯತ್ನಗಳಿಗೆ ಫಲವಿತ್ತಿದೆ! ಶತಮಾನಗಳ ಶತಸಂಖ್ಯೆಗಳ ಜನರ ಸಮ್ಮಾನಿಸಿದೆ! ದೇಶಧರ್ಮಗಳಿಗೆ ಕಳಂಕವೀಯಲೆಂದೇ ಸದಾ ದುರ್ವಾಸನೆ ಬೀರುವ ವಾಮಬಾಯಿಗಳನ್ನು ಮುಚ್ಚಿಸಿದೆ! ಮತಗಳಿಗಾಗಿ ದೇಶವನ್ನೂ ದೇಶೀಯತೆಯನ್ನೂ ಬಲಿಗೊಡುವ ದೇಶದ್ರೋಹಿ ಪಕ್ಷಗಳ ಬಾಲ ಮುದುರಿಸಿದೆ! ಐನೂರಕ್ಕೂ ಹೆಚ್ಚು ವರ್ಷ ನೂರಾರು ಪೀಳಿಗೆಗಳ ಭಾರತೀಯರ ಪ್ರಾರ್ಥನೆ, ಸಂಕಲ್ಪ, ಪರಿಶ್ರಮ, ಬಲಿದಾನಗಳು ಸಾರ್ಥಕವಾಗಿವೆ. ಅಯೋಧ್ಯೆಯಲ್ಲಿ ಬಾಲರಾಮನು ಸ್ಥಿತಗೊಂಡಿದ್ದಾನೆ. ರಾಮರಾಜ್ಯವನ್ನು ಮರಳಿಸುವೆನೆಂದು ಭರವಸೆಯಿತ್ತಿದ್ದಾನೆ!
ಅಲ್ಲೇ ಮಂದಿರವೇಕೆ ಬೇಕು? ಬೀದಿಬೀದಿಯಲ್ಲಿ ರಾಮನ ಗುಡಿಯಿಲ್ಲವೆ? ಮನಮನದಲ್ಲಿ ರಾಮ ಇಲ್ಲವೆ- ಎನ್ನುವ ಅನುಕೂಲ ವೇದಾಂತ ಊದುವವರೂ ಇದ್ದಾರೆ. ನಾನು, ನನ್ನದು, ಎನ್ನುವುದನ್ನು ಹಿಂದಿಟ್ಟು ದೇಶ, ಧರ್ಮ, ನ್ಯಾಯ, ಸಮಷ್ಟಿ ಹಿತದ ಉದಾರಭಾವದಿಂದ ಬದುಕುವುದೆಂದರೇನು ಎನ್ನುವ ಊಹೆಯೂ ಇಲ್ಲದ ಸ್ವಾರ್ಥಿಗಳು ಮಾತ್ರ ಹೀಗೆ ಮಾತನಾಡಲು ಸಾಧ್ಯ. ದೇಶ ಧರ್ಮ ಕೇವಲ ಭೌಗೋಳಿಕ ಅಸ್ತಿತ್ವವಲ್ಲ, ಅದು ಭಾವನೆಗಳ ಬೆಸುಗೆ, ಸ್ವಾಭಿಮಾನದ ನೆಲೆ. ಭಾವನಾಶೂನ್ಯತೆಯಿಂದ ರಾಷ್ಟ್ರವೆಂಬ ಭಾವವನ್ನು ಕಟ್ಟಲಾಗದು. ದೇಶ ಕೇವಲ ಆಧಾರ್‌ ಕಾರ್ಡಿನ ವಿಳಾಸ, ವಾಸ್ತವ್ಯಕ್ಕೆ ಆಸ್ತಿ, ಉಪಭೋಗಕ್ಕೆ ಸಂಪನ್ಮೂಲ ಎಂದು ಭಾವಿಸುವವರು ಮನುಷ್ಯತ್ವಹೀನರು. ಕಾಡುಪ್ರಾಣಿಗಳೇ ವಾಸಿ, ಅವುಗಳಿಗಾದರೂ ತಮ್ಮ ಕಾಡಿನ ಬಗ್ಗೆ ಗೌರವವಿದ್ದೀತು. ಇವರು ಮಾತ್ರ ದೇಶದ್ರೋಹಿಗಳು. ಸ್ವಾಭಿಮಾನ ದೇಶಾಭಿಮಾನ ಉಳ್ಳವರಿಗೆ, ಸತ್ಯ ಧರ್ಮ ಪರಂಪರೆಯನ್ನು ಆದರಿಸುವವರಿಗೆ ಮಾತ್ರ ಈ ಮಂದಿರದ ನಿರ್ಮಾಣ ರೋಮಾಂಚನವನ್ನೂ ಆನಂದಬಾಷ್ಪವನ್ನೂ ತರುತ್ತದೆ.
ಮಂದಿರವೇಕೆ ಬೇಕು? ಪೂಜಾಗೃಹವೇ ಇಲ್ಲವೆ? ನಿಜ, ಭಕ್ತಿಗೆ, ಪ್ರಾರ್ಥನೆಗೆ, ಧ್ಯಾನಕ್ಕೆ, ನೆಮ್ಮದಿಗೆ ಯಾವ ಸ್ಥಳವಾದರೂ ಸರಿಯೇ. ಆದರೆ ದೇವಸ್ಥಾನ ಕೇವಲ ಪ್ರಾರ್ಥನೆಯ ಸ್ಥಳವಲ್ಲ. ಮನೆಮನೆಯಲ್ಲೂ ಗೋಡೆಗಳ ಮೇಜುಗಳ ಮೇಲೂ, ನಮ್ಮ ಕೊರಳ ಹಾರಗಳಲ್ಲೂ ದೇವರ ಚಿತ್ರದ ದ್ಯೋತಕಗಳನ್ನು ಇಟ್ಟುಕೊಂಡು ಧ್ಯಾನಿಸುವವರು ನಾವು. ಹಾಗಿದ್ದೂ ದೇವಸ್ಥಾನವೆನ್ನುವುದಕ್ಕೆ ನಮ್ಮಲ್ಲಿ ಅಷ್ಟೊಂದು ಆದರ ಏಕೆ? ಅಲ್ಲಿ ದೇವರ ವಿಶೇಷ ಸನ್ನಿಧಿ ನಮ್ಮ ಅನುಭವಕ್ಕೆ ಬರುತ್ತದೆ. ಆಗಮೋಕ್ತ ದೇವತಾತತ್ವಗಳನ್ನು ವಿಧಿಯುಕ್ತವಾಗಿ ಭಕ್ತಿಪುರಸ್ಸರವಾಗಿ ಆಹ್ವಾನಿಸಿ ಬಹುಜನಹಿತಾಯ ಅರ್ಚಿಸಲಾಗುತ್ತದೆ. ಪುರೋಹಿತ ಎಂದರೆ ಪುರದ ಹಿತವನ್ನು ಚಿಂತಿಸುವವನು. ದೇವಸ್ಥಾನದಲ್ಲಿ ಜರುಗುವ ಪೂಜೆ ಉತ್ಸವಗಳು ಸರ್ವರ ಹಿತಕ್ಕಾಗಿಯೇ ಜರುಗುವುದು. ದೇಗುಲದ ವಿಶಾಲ ಪಡಸಾಲೆಯಲ್ಲೋ, ಜಗಲಿಯಲ್ಲೋ ಕುಳಿತು, ಭವ್ಯ ವಿಮಾನವನ್ನೂಮುಗಿಲೆತ್ತರದ ಗೋಪುರವನ್ನೂ ನೋಡುತ್ತಿದ್ದರೆ, ಎದೆ ಸಂತಸದಿಂದ ಹಿಗ್ಗುತ್ತದೆ. ಗರ್ಭಗುಡಿಯ ದೇವರ ಮುಂದೆ ಕೈಮುಗಿದು ನಿಂತಾಗ ಅಹಮಿಕೆ ಕರಕರಗಿ ಭಕ್ತಿಯ ಸಾಗರದಲ್ಲಿ ತೇಲಾಡಿದ ಆನಂದಾತಿಶಯ ಒದಗುತ್ತದೆ. ದಿವ್ಯ ಮಂತ್ರಗಳ ಶ್ರವಣ, ಘಂಟೆಜಾಗಟೆಗಳ ಸುಭಗನಾದ, ಅರಸಿನ ಕುಂಕುಮ, ತುಪ್ಪ ಧೂಪ ಹೂಪರ್ಣಗಳ ಸಾತ್ವಿಕ ಪರಿಮಳ, ಧಾರ್ಮಿಕ ಕಲಾಪ ಭಜನೆ ನಮಸ್ಕಾರ ಸೇವೆಗಳು ಎಲ್ಲವೂ- ನಮ್ಮ ಮನೋನ್ನತಿಗೆ ಸೋಪಾನಗಳೇ. ನಾನು ನನ್ನ ಮನೆ ಎಂದೇ ಮುದುಡುವ ಮನಸ್ಸು, ಚಣಕಾಲ ಅದೆಲ್ಲವನ್ನೂ ಮರೆತು ಉದಾರವಾಗುತ್ತದೆ, ಪ್ರಫುಲ್ಲವಾಗುತ್ತದೆ. ದೇಗುಲಭಿತ್ತಿಗಳ ಕಲೆ, ಶಿಲ್ಪ, ಚಿತ್ರಗಳು, ಪುರಾಣೇತಿಹಾಸಗಳ ಕಥಾನಕಗಳೂ ನಮ್ಮನ್ನು ದೇವಚಿಂತನೆಗೂ ಕಲಾಸ್ವಾದಕ್ಕೂ ಏರಿಸಿ ಮುದವೀಯುತ್ತವೆ.
ಇಷ್ಟೆಲ್ಲ ಖರ್ಚು ಮಾಡಿ ಮಂದಿರ ಕಟ್ಟುವ ಬದಲು ಉದ್ಯೋಗಾವಕಾಶ ಕಲ್ಪಿಸಬಹುದಿತ್ತು ಎನ್ನುವ ಅಪಸ್ವರವೆತ್ತುವವರು ಅರ್ಥವ್ಯವಸ್ಥೆಯನ್ನು ಸಮೃದ್ಧಗೊಳಿಸುವಲ್ಲಿ ದೇಗುಲಗಳ ಪಾತ್ರವೇ ಹೆಚ್ಚು ಎನ್ನುವ ಸತ್ಯವನ್ನು ಮರೆತಿರಬೇಕು. ದೇಗುಲವು ಸುವ್ಯವಸ್ಥಿತವಾಗಿ ನಡೆದರೆ ಅದೊಂದು ಲಕ್ಷ್ಮೀಕಟಾಕ್ಷದ ಸ್ಥಾನವೇ ಆಗುತ್ತದೆ. ಏಕೆಂದರೆ ಭಾರತದ ಮಟ್ಟಿಗಂತೂ ಈ ದೇವಸ್ಥಾನವೆನ್ನುವುದು ನಿತ್ಯಜೀವನದ ಕೇಂದ್ರಬಿಂದುವೇ ಆಗಿದೆ. ಪ್ರಾಚೀನ ದೇಗುಲಗಳ ಬೃಹತ್‌ ಅಂಗಣ, ಪಡಸಾಲೆ, ಪ್ರಾಕಾರ, ವಸಂತಮಂಟಪಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ದುರುಳ ಆಕ್ರಮಣಕಾರರು ಬಂದು, ದೇಗುಲಗಳನ್ನು ಧ್ವಂಸಗೊಳಿಸಿದಾಗ ನಾಶವಾದದ್ದು ಕೇವಲ ಕಟ್ಟಡಗಳಲ್ಲ, ಅವುಗಳೊಡನೆ ಅದೆಷ್ಟೋ ಕಲಾಪರಂಪರೆಗಳು, ಉತ್ಸವ ಪರಂಪರೆಗಳು, ವಿದ್ಯಾಪರಂಪರೆಗಳು, ಉದ್ಯೋಗ ವ್ಯಾಪಾರೋದ್ಯಮಗಳು, ದಾನಧರ್ಮಾದಿ ಸೇವಾಕಲಾಪಗಳು, ಅದೆಷ್ಟೋ ಜನರ ಜೀವಿಕೆಗಳೂ ನಾಶವಾದವು! ಪಾಳುಬಿದ್ದ ದೇಗುಲಗಳ ಊರುಗಳನ್ನು ನೋಡಿ, ಅಲ್ಲಿ ಕಲಾಹೀನತೆ ಎದ್ದು ಕಾಣುತ್ತದೆ. ಅಲ್ಲಿ ದೇಗುಲವಷ್ಟೇ ಅಲ್ಲ, ಜನಜೀವನದ ಆಧಾರವೂ ನಾಶವಾಯಿತು.
ಮಂದಿರವನ್ನು ನಿಮಿತ್ತವಾಗಿಟ್ಟುಕೊಂಡು ಭಾರತೀಯ ಸಂಸ್ಕೃತಿಯೇ ಹೇಗೆ ಅರಳಿತು ಎನ್ನುವುದನ್ನು ಗಮನಿಸಬೇಕು. ಪ್ರಾಚೀನ ಹಾಗೂ ಮಧ್ಯಯುಗಗಳ ರಾಜರು ದೇಗುಲ ನಿರ್ಮಾಣಕ್ಕಾಗಿ ಅಪಾರ ಸಂಪತ್ತನ್ನೂ, ಶ್ರಮವನ್ನೂ ವಿನಿಯೋಗಿಸುತ್ತಿದ್ದದ್ದು ಸುಮ್ಮನೆ ಅಲ್ಲ. ದೇಗುಲ ನಿರ್ಮಿಸುವ ಕೆಲಸವೇ ದೊಡ್ದ ಉದ್ಯಮ! ಒಂದೊಂದು ದೇಗುಲವೂ ದಶಕಗಳ ಕಾಲ ನಿರ್ಮಾಣವಾದಂತಹವೇ. ಆ ಕಟ್ಟಡಗಳಿಗಾಗಿ ಎಷ್ಟು ವಾಸ್ತುಶಿಲ್ಪಿಗಳೂ, ಸ್ಥಪತಿಗಳೂ, ಮೇಸ್ತ್ರಿಗಳೂ, ಕರ್ಮಕಾರರೂ, ಮರಗೆಲಸದವರೂ, ಕೂಲಿಗಳು, ಮೇಲ್ವಿಚಾರಕರೂ, ಲೆಕ್ಕಿಗರೂ, ಅಮಾತ್ಯರೂ, ಸಲಹೆಗಾರರೂ ಬೇಕಾಗುತ್ತಿದ್ದರೆನ್ನುವುದನ್ನು ಊಹಿಸಬಹುದು! ಆನೆ- ಕುದುರೆ- ರಥ- ಗಾಡಿಗಳನ್ನು ಬಳಸುತ್ತಿದ್ದಾಗ ಅದೆಷ್ಟು ಕುದುರೆಸವಾರರೂ, ಮಾವುತರೂ, ಪ್ರಾಣಿಗಳನ್ನು ಸಾಕಿದವರೂ ಬೇಕಾಗುತ್ತಿದ್ದರು ಎನ್ನುವುದನ್ನೂ ಊಹಿಸಬಹುದು. ಅಷ್ಟು ಜನರಿಗೂ ಊಟ ವಸತಿ ಸಂಬಳ ಸುರಕ್ಷೆಯ ವ್ಯವಸ್ಥೆಗೂ ಅದೆಷ್ಟು ಗಮನ ಹರಿಸಿರಬೇಕು! ದೇಗುಲದ ನಿರ್ಮಾಣದಲ್ಲಿ ಅದೆಷ್ಟು ಧರ್ಮಶಾಸ್ತ್ರ ಕೋವಿದರೂ ಶಿಲ್ಪಶಾಸ್ತ್ರ ಪರಿಣತರೂ ಜ್ಯೋತಿಷಿಗಳೂ ಕಲಾವಿದರೂ ಅರ್ಥನಿಪುಣರೂ ಕೈಜೋಡಿಸಿರಬೇಕು! ಇವರಿಗೆಲ್ಲ ಒಂದು ಜೀವಮಾನದ ಉದ್ಯೋಗ ಸೃಷ್ಟಿಯಾದಂತೆಯೆ!
ಮಂದಿರ ತಲೆಯೆತ್ತಿದ ಮೇಲಂತೂ ನೂರಾರು ಜನರ ಜೀವಿಕೆಗೆ ಶಾಶ್ವತ ಆಧಾರವಾಗುತ್ತದೆ. ಪೂಜಕರಿಗೆ ಅಡುಗೆಯವರಿಗೆ ಸಿಬ್ಬಂದಿಗೆ ಉದ್ಯೋಗಾವಕಾಶ, ಭಕ್ತರಿಗೆ ಯಾತ್ರಿಕರಿಗೆ ವ್ಯವಸ್ಥಾನಿಮಿತ್ತ ಅದೆಷ್ಟು ವೃತ್ತಿಗಳು! ನಿತ್ಯ ಹಾಗೂ ಕಾಲಕಾಲೀನ ಉತ್ಸವ ಗೀತನೃತ್ಯಾದಿ ಕಲಾಪಗಳ ವ್ಯವಸ್ಥೆಯಲ್ಲಿ ಅದೆಷ್ಟು ಕಲಾಪೋಷಣೆ! ಭೂರಿ ಪ್ರಮಾಣದ ಪ್ರಸಾದದ ವ್ಯವಸ್ಥೆಗೆ ಅದೆಷ್ಟು ದವಸಧಾನ್ಯ ತರಕಾರಿ ಹಣ್ಣುಗಳ ಅಡುಗೆ- ವ್ಯಾಪಾರ- ಹಾಗೂ ಸೇವಕರ ವ್ಯವಸ್ಥೆ!
ಸ್ಥಳೀಯರ ಪಾಲಿಗಂತೂ ದೇಗುಲವು ಜಪತಪಾನುಷ್ಠಾನ ದೇವದರ್ಶನಕ್ಕಷ್ಟೇ ಒದಗುತ್ತಿತ್ತೆಂದಲ್ಲ, ಮಕ್ಕಳ ಶಿಕ್ಷಣ, ಪಂಚಾಯತಿ, ಕೋವಿದರ ಶಾಸ್ತ್ರಚರ್ಚೆ, ಅನ್ನಸಂತರ್ಪಣೆ, ಮನೆಗಳ ಮದುವೆ ಮುಂಜಿ ಅನ್ನಪ್ರಾಶನ ನಾಮಕರಣಾದಿ ಸಂಸ್ಕಾರ, ಜಾತ್ರೆ ರಥೋತ್ಸವ ತೆಪ್ಪೋತ್ಸವ, ಋುತೂತ್ಸವ, ಹರಕೆ- ದಾನಾದಿ ಕಲಾಪ, ರಾಜಮಹಾರಾಜರ ವರ್ಧಂತಿ- ವಿಜಯೋತ್ಸವ, ಯಾತ್ರಾರ್ಥಿಗಳ ವಾಸ್ತವ್ಯ- ಊಟೋಪಚಾರ, ಕವಿಕಲಾವಿದರ ಪ್ರತಿಭಾಪ್ರದರ್ಶನ, ಭಕ್ತಿಯ ಭವ್ಯಾಭಿವ್ಯಕ್ತಿಗೂ ದೇಗುಲಗಳೇ ನೆಲೆಯಾಗಿದ್ದವು! ಊರಲ್ಲಿ ಮಂದಿರ ತಲೆಯೆತ್ತಿತೆಂದರೆ ಊರೇ ಲಕ್ಷ್ಮೀಕ್ಷೇತ್ರವಾಗುವುದರಲ್ಲಿ ಸಂದೇಹವೇ ಇಲ್ಲ.
ಇದೆಲ್ಲ ಗತಕಾಲದ ಮಾತು ಎಂದು ತಿಳಿಯಬೇಡಿ. ಇಂದಿಗೂ ಇದೇ ವಾಸ್ತವ. ಭವ್ಯ ದೇಗುಲಗಳು ತಲೆಯೆತ್ತಿ ನಿಂತಲ್ಲೆಲ್ಲ ವಿಪುಲ ಉದ್ಯೋಗಾವಕಾಶ, ವ್ಯಾಪಾರ, ಕಲೆಕಾವ್ಯಗಳ ವೇದಿಕೆ, ಪ್ರವಾಸೋದ್ಯಮ, ಉತ್ಸವಾಚರಣೆಗಳು- ನಡೆಯುವುದನ್ನು ಕಾಣಬಹುದು. ನಂಜನಗೂಡು, ಬನಶಂಕರಿ, ಧರ್ಮಸ್ಥಳ, ಶೃಂಗೇರಿ, ಉಡುಪಿಗಳಲ್ಲದೆ ತಿರುಪತಿ, ಜಗನ್ನಾಥಪುರಿ, ಕಾಂಚೀಪುರಂ, ಚಿದಂಬರಂ, ದ್ವಾರಕಾ, ಕಾಶಿ ಮುಂತಾದಲ್ಲಿ ಬಹುಪಾಲು ಆರ್ಥಿಕ ಸಂಪತ್ತಿನ ಉತ್ಪಾದನೆ ಆಗುವುದೇ ದೇವಸ್ಥಾನಗಳ ಸುತ್ತ! ಆ ಊರುಗಳಲ್ಲಿ ಆ ದೇವಸ್ಥಾನಗಳಿಲ್ಲದಿದ್ದಲ್ಲಿ ಈ ಸಮೃದ್ಧಿ ಇರುತ್ತಿರಲಿಲ್ಲ! ಈ ಕ್ಷೇತ್ರಗಳು ಆಪಾರ ಜನಧನಗಳ ಆಕರ್ಷಣೆಯ ಕೇಂದ್ರಗಳು! ಅಸಂಖ್ಯರ ಜೀವನ ಪೋಷಿಸುವ ಮಾತೃಸದೃಶ ಧಾಮಗಳು.
ಈ ತೀರ್ಥಗಳಲ್ಲಿ ಅದೆಷ್ಟು ಮಂದಿ ಪೂಜಕರೂ, ಸಿಬ್ಬಂದಿಯೂ, ಶಿಲ್ಪಿಗಳೂ, ಕಲಾವಿದರೂ, ಪಂಡಿತರೂ, ಚಾಲಕರೂ, ಅಡುಗೆಯವರೂ, ಸೇವಕರೂ ಆಶ್ರಯ ಪಡೆಯುತ್ತಾರೆ! ಅದೆಷ್ಟು ಪ್ರವಾಸೋದ್ಯಮ ಬೆಳೆಯುತ್ತದೆ ಇಲ್ಲಿ! ಈ ಪ್ರದೇಶಗಳಿಗೆ ಇತರ ಪ್ರದೇಶಗಳನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿಗಳು, ಉಪಮಾರ್ಗಗಳೂ, ಅಂಗಡಿ ಹೊಟೆಲ್‌ಗಳು, ಮನರಂಜನೆಯ ತಾಣಗಳು, ಸರಕಾರಿ ಹಾಗೂ ಖಾಸಗಿ ಸಾರಿಗೆ ಬಸ್‌ ವ್ಯವಸ್ಥೆಗಳೂ, ಟ್ಯಾಕ್ಸಿಗಳೂ, ಆಟೊಗಳೂ, ಬೀದಿ ವ್ಯಾಪಾರಿಗಳು- ಎಲ್ಲರೂ ಬದುಕುತ್ತಾರೆ. ದೇಗುಲಗಳ ಅಕ್ಕಪಕ್ಕದ ಊರುಗಳು, ವನಗಳೂ ಜಲಪಾತಗಳು ನಿಸರ್ಗತಾಣಗಳು ಬೆಳಕಿಗೆ ಬರುತ್ತವೆ!
ಹಿಂದೆ ದೇಗುಲಗಳ ಆಶ್ರಯದಲ್ಲಿ ಗುರುಕುಲಗಳೂ, ಶಾಸ್ತ್ರಕಾವ್ಯಗೋಷ್ಠಿಗಳು ನಡೆಯುತ್ತಿದ್ದಂತೆ, ಇಂದು ವಿದ್ಯಾಸಂಸ್ಥೆಗಳು ನಡೆಯುತ್ತಿವೆ, ಆಸ್ಪತ್ರೆಗಳೂ ನಡೆದಿವೆ. ಇದೆಲ್ಲ ಸೇರಿ ಆ ಊರಿಗೂ ಪ್ರದೇಶಕ್ಕೂ ರಾಜ್ಯಕ್ಕೂ ಅದೆಷ್ಟು ಕೀರ್ತಿ ಮಾನ್ಯತೆ ತರುತ್ತವೆ!
ಮನವಿಟ್ಟು ಪೂಜಿಸಲು ದೇವರಮನೆ ಸಾಕು ಎನ್ನುವವರು ಗಮನಿಸಬೇಕು, ದೇವರ ಸನ್ನಿಧಿಯು ಮನುಷ್ಯನಿಗೆ ನೆಮ್ಮದಿಯನ್ನಷ್ಟೇ ಅಲ್ಲ, ಬಹುಮುಖಿಯಾದ ಸಮೃದ್ಧ ಬದುಕನ್ನೇ ಕಟ್ಟಿಕೊಡುತ್ತದೆ. ಭಾವಭಕ್ತಿಗಳನ್ನೂ ಸ್ವಾಭಿಮಾನವನ್ನೂ ಬೆಳಗುತ್ತದೆ. ಗತವೈಭವವನ್ನು ನೆನಪಿಸಿ ಜವಾಬ್ದಾರಿಯನ್ನೂ ನೆನಪಿಸುತ್ತದೆ. ಅಯೋಧ್ಯಾ ರಾಮಮಂದಿರವೂ ಅಷ್ಟೇ, ನಿರ್ಮಾಣದ ಹಂತದಲ್ಲೇ ಸಾವಿರಾರು ಜನರ ಜೀವಿಕೆಗ ಆಧಾರವಾಗಿದೆ. ನಿರ್ಮಾಣವಾದ ಮೇಲಂತೂ ಲಕ್ಷ್ಮೀಕಟಾಕ್ಷದ ಕಡಲೇ ಆಗುತ್ತದೆ. ಚಿರಕಾಲದವರೆಗೂ ಸಮೃದ್ಧವಾದ ಪ್ರವಾಸೋದ್ಯಮವನ್ನು ಒದಗಿಸಿ, ಸಾವಿರಾರು ವೃತ್ತಿಪ್ರವೃತ್ತಿಗಳ ಜನರನ್ನು ಅನಾದಿಕಾಲದವರೆಗೂ ಪೋಷಿಸುತ್ತದೆ. ಕಲೆ- ಕಾವ್ಯ- ಗೀತ- ನೃತ್ಯಗಳ ಸರಸ್ವತೀ ಭಂಡಾರವಾಗುತ್ತದೆ. ಭಕ್ತಿ- ಭಜನೆ- ಪೂಜೆ- ವ್ರತೋತ್ಸವಗಳ ಪುಣ್ಯಧಾಮವಾಗುತ್ತದೆ. ರಾಮನನ್ನೂ ರಾಮಾಯಣ ಪುಣ್ಯಕಥೆಯನ್ನೂ ನಮ್ಮ ಹೃನ್ಮನಗಳಲ್ಲಿ ಸದಾ ಬೆಳಗುವ ಭವ್ಯಸ್ಮಾರಕವಾಗುತ್ತದೆ. ದೌಷ್ಟ್ಯವೂ ಪಾಪಿಗಳೂ ಎಷ್ಟು ಮೆರೆದರೂ ಕೊನೆಗೂ ಮೂಲೆಗೆ ಮುದುರಲೇಬೇಕು ಎನ್ನುವುದನ್ನೂ ಸಾರುತ್ತದೆ. ಪ್ರಾಮಾಣಿಕ ಪರಿಶ್ರಮ ಸತ್ಯ ತ್ಯಾಗ ಕೊನೆಗೂ ಜಯಿಸಬೇಕೆನ್ನುವುದನ್ನೂ ವ್ಯಾಖ್ಯಾನಿಸುತ್ತದೆ.
ರಾಮನು ತನಗಾಗಿ ಬದುಕದೆ ದುಷ್ಟದಮನ- ಶಿಷ್ಟರಕ್ಷ ಣೆಗಾಗಿ ಟೊಂಕ ಕಟ್ಟಿ ನಿಂತ ವೀರ, ನೀನೂ ಹಾಗೆ ಬದುಕು ಎನ್ನುವ ಪ್ರೇರಣೆಯನ್ನಿತ್ತು, ಭಾರತೀಯ ಹೃದಯಕ್ಕೆ ಅತ್ಯವಶ್ಯವಾಗಿರುವ ಕ್ಷಾತ್ರತೇಜವನ್ನೇ ಹುರಿದುಂಬಿಸುತ್ತದೆ! ಸರ್ವರಿಗೂ ನ್ಯಾಯವನ್ನೊದಗಿಸಿ ದೇಶದ ಧರ್ಮದ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವ ರಾಮರಾಜ್ಯದ ಕಲ್ಪನೆಗೆ ಇದು ಹತ್ತಿರವಾಗಿದೆಯಲ್ಲವೆ?
(ಲೇಖಕರು ಆಧ್ಯಾತ್ಮ ಚಿಂತಕರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top