ರೋಗ ಲಕ್ಷಣವಿಲ್ಲದವರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆ! – ಡಬ್ಲ್ಯೂಎಚ್ಒ ಹೇಳಿಕೆಯಿಂದ ಜಗತ್ತಿನಾದ್ಯಂತ ಚರ್ಚೆ ಶುರು

ವಿಕ ಸುದ್ದಿಲೋಕ ಬೆಂಗಳೂರು.
ಕೋವಿಡ್-19 ವೈರಸ್‌ನ ಯಾವುದೇ ಲಕ್ಷ ಣಗಳು ತೋರದವರಿಂದ (ಅಸಿಮ್ಟಮ್ಯಾಟಿಕ್) ಸೋಂಕು ಪ್ರಸರಣ ಸಾಧ್ಯತೆ ಕಡಿಮೆ ಎಂಬ ಹೊಸ ಪ್ರತಿಪಾದನೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದುವರೆಗೆ ಸೋಂಕು ಲಕ್ಷಣವಿಲ್ಲದ ವ್ಯಕ್ತಿ ಯಾರ ಅರಿವಿಗೂ ಬಾರದಂತೆ ಹಲವರನ್ನು ಸೋಂಕಿನ ಸುಳಿಗೆ ಸಿಲುಕಿಸುವ ಅಪಾಯವಿದೆ ಎಂಬ ಆತಂಕವಿತ್ತು. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೋವಿಡ್-19ಗೆ ಸಂಬಂಧಿಸಿದ ತಾಂತ್ರಿಕ ತಂಡದ ಮುಖ್ಯಸ್ಥೆಯಾಗಿರುವ ಡಾ. ಮಾರಿಯಾ ವ್ಯಾನ್ ಕೆರ್ಕೋವ್ ಅವರು, ‘‘ಲಭ್ಯವಿರುವ ಕೆಲವು ಅಧ್ಯಯನಗಳ ವರದಿಯಾಧಾರ ಮೇಲೆ ಹೇಳುವುದಾದರೆ ಅಸಿಮ್ಟಮ್ಯಾಟಿಕ್ ವ್ಯಕ್ತಿಗಳಿಂದ ಸೋಂಕು ಪ್ರಸರಣಗೊಳ್ಳುವುದು ತೀರಾ ವಿರಳ’’ ಎಂದು ಹೇಳಿದ್ದರು. ಕೆಲವರು ಈ ಹೇಳಿಕೆಯನ್ನು ಬೆಂಬಲಿಸಿದ್ದರೆ, ಇನ್ನು ಕೆಲವರು ಇದು ದಿಕ್ಕು ತಪ್ಪಿಸುವ ಹೇಳಿಕೆ ಎಂದು ಕಿಡಿ ಕಾರಿದ್ದಾರೆ.
ಡಾ. ಕೆರ್ಕೊವ್ ನೀಡಿದ ಹೇಳಿಕೆ ಹೆಚ್ಚು ಚರ್ಚೆಗೆ ಕಾರಣವಾಗುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆ ಯು ಟರ್ನ್ ಹೊಡೆದಿದೆ. ಕೆರ್ಕೋವ್ ಅವರು ಸೀಮಿತ ಅಧ್ಯಯನ ವರದಿಗಳನ್ನಾಧರಿಸಿ ಹೇಳಿದ್ದಾರೆ. ಈ ಬಗ್ಗೆ ಇನ್ನೂ ವಿಸ್ತಾರವಾಗಿ ಅಧ್ಯಯನ ನಡೆಸಬೇಕಿದೆ ಎಂದು ಹೇಳಿದೆ. ಏತನ್ಮಧ್ಯೆ, ‘‘ಕೋವಿಡ್ 19 ಅರಿಯುವ ಪ್ರಯತ್ನ ಇನ್ನೂ ಬೆಳೆಯುತ್ತಿರುವ ವಿಜ್ಞಾನವಾಗಿದೆ,’’ ಎಂದು ಡಾ. ಕೆರ್ಕೋವ್ ಅವರ ಬೆಂಬಲಕ್ಕೆ ನಿಂತಿದ್ದಾರೆ ಡಬ್ಲ್ಯೂಎಚ್ಒನ ಮತ್ತೊಬ್ಬ ತಜ್ಞ ಮೈಕ್ ರಾಯನ್ ಅವರು.

ಪ್ರಸರಣ ಕಡಿಮೆ ಯಾಕೆಂದರೆ..
ಕೊರೊನಾ ಸಾಮಾನ್ಯವಾಗಿ ಹರಡುವುದು ಕೆಮ್ಮು, ಸೀನಿನ ಹನಿಗಳಿಂದ. ರೋಗಲಕ್ಷಣಗಳಿಲ್ಲದ ವ್ಯಕ್ತಿಗೆ ಈ ಸಮಸ್ಯೆ ಕಡಿಮೆ ಇರುವುದರಿಂದ ಪ್ರಸರಣದ ತೀವ್ರತೆ ಕಡಿಮೆಯಾಗುತ್ತದೆ.
ಒಂದು ಅಧ್ಯಯನದ ಪ್ರಕಾರ ಅಸಿಮ್ಟಮ್ಯಾಟಿಕ್ ವ್ಯಕ್ತಿಯ ಬಳಸಿದ ಹಲ್ಲುಜ್ಜುವ ಬ್ರಷ್, ಟವೆಲ್, ಮಗ್, ಮಾಸ್‌ಗಳಲ್ಲೂ ವೈರಾಣು ಕಂಡು ಬಂದಿಲ್ಲ.

ಲಕ್ಷಣರಹಿತ ಪ್ರಕರಣ 80%
ದೇಶದಲ್ಲಿ ಶೇ. 80% ಪ್ರಕರಣಗಳಲ್ಲಿ ರೋಗ ಲಕ್ಷಣಗಳೇ ಇಲ್ಲ. ಕರ್ನಾಟಕದಲ್ಲೂ ಈ ಪ್ರಮಾಣ ಇಷ್ಟೇ ಇದೆ.
ಲಕ್ಷಣರಹಿತರಿಂದ ರೋಗ ಹರಡುವಿಕೆ ಪ್ರಮಾಣ ಕಡಿಮೆ ಎಂದಾದರೆ ಕೊರೊನಾ ಬಗೆಗಿನ ಆತಂಕವೂ ಕಡಿಮೆ ಆದೀತು
ಕೋವಿಡ್ ಮೂಲವಾದ ಚೀನಾ ವುಹಾನ್ ಸಿಟಿಯಲ್ಲಿ ಸೋಂಕಿತರಾಗಿದವರ ಪೈಕಿ 300 ಜನರಲ್ಲಿ ರೋಗ ಲಕ್ಷ ಣಗಳೇ ಇರಲಿಲ್ಲ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 1,174 ಮಂದಿಯಲ್ಲೂ ಸೋಂಕು ದೃಢಪಟ್ಟಿಲ್ಲ. ಅಸಿಮ್ಟಮ್ಯಾಟಿಕ್ ವ್ಯಕ್ತಿಗಳು ಬಳಸಿದ ವಸ್ತುಗಳಲ್ಲೂ ವೈರಾಣು ಕಂಡು ಬಂದಿಲ್ಲ ಎಂದು ಚೀನಾದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top