ನಾವು ಕೊರೊನಾ ದಾಟಲಿದ್ದೇವೆ…

– ಡಾ. ಎಚ್ ಸುದರ್ಶನ್ ಬಲ್ಲಾಳ್. 

ಸದ್ಯ ನಾವೆಲ್ಲ ಎದುರಿಸುತ್ತಿರುವ ಕೊರೊನಾ ಸಾಂಕ್ರಾಮಿಕದಂತಹ ಮತ್ತೊಂದು ಸಾಂಕ್ರಾಮಿಕದ ತೀವ್ರತೆಯನ್ನು ನಾನು ಕಳೆದ 50 ವರ್ಷಗಳ ವೃತ್ತಿ ಜೀವನದಲ್ಲಿ ಕಂಡಿರಲಿಲ್ಲ. ಏಡ್ಸ್ ಪ್ರಸರಣದ ವೇಳೆ ಅಮೆರಿಕದಲ್ಲಿದ್ದೆ, ಅಲ್ಲದೆ ಎಚ್1ಎನ್1, ಸಾರ್ಸ್, ಮೆರ್ಸ್ ಮತ್ತು ಸಿಡುಬು ರೋಗಗಳಿದ್ದಂತಹ ಅನೇಕರಿಗೆ ಚಿಕಿತ್ಸೆ ನೀಡಿದ್ದೇನೆ. ಆದರೆ ಈ ಎಲ್ಲ ಸಂದರ್ಭಗಳಲ್ಲಿ ಎಂದಿಗೂ ನನಗೆ ಸದ್ಯದ ಕೊರೊನಾ ಮಾದರಿಯಂಥದ್ದು ಗೋಚರಿಸಲಿಲ್ಲ. ನಾವು ಈಗಲೂ ಈ ಕೋವಿಡ್-19 ವೈರಾಣು ಬಗ್ಗೆ ಅರಿತುಕೊಳ್ಳುವ ಸ್ಥಿತಿಯಲ್ಲಿಯೇ ಇದ್ದೇವೆ ಮತ್ತು ಜತೆಜತೆಗೆ ಅದರ ವಿರುದ್ಧ ಹೋರಾಟದ ಅನ್ವೇಷಣೆಯಲ್ಲಿದ್ದೇವೆ.
ಇತಿಹಾಸದಲ್ಲಿನ ಮಹಾಯುದ್ಧ, ಶೀತಲ ಸಮರ, ಪರಮಾಣು ಯುದ್ಧ, ಭಯೋತ್ಪಾದನೆ, ಜಗತ್ತಿನ ಮೂಲೆಮೂಲೆಯಲ್ಲಿ ಕೇಳಿಬರುತ್ತಿರುವ ಖಿನ್ನತೆ ಮತ್ತು ಇತರ ಸಾಂಕ್ರಾಮಿಕ ರೋಗಗಳಿಂದ 100 ವರ್ಷಗಳಲ್ಲಿ ಸಾಧ್ಯವಾಗಲಿಲ್ಲವೊ ಅದನ್ನು ಈ ಕೊರೊನಾ ಕೇವಲ ಕೆಲವೇ ವಾರಗಳಲ್ಲಿ ಮಾಡಿದೆ. ಅಲ್ಲದೆ ಕೊರೊನಾದ ಈ ಪರಿಣಾಮ ನಮ್ಮ ಜೀವನವನ್ನು ಪೂರ್ಣವಲ್ಲದಿದ್ದರೂ ಭಾಗಶಃವಂತೂ ಬದಲಾಯಿಸುವುದು ಖಚಿತವಾಗಿದೆ. ಮುಖ್ಯವಾಗಿ ಈ ಬದಲಾವಣೆ ಶಾಶ್ವತ ಕೂಡ!
ಲಿಂಕನ್ ಹೇಳಿದ್ದರು: ‘‘ಒಂದು ಮರ ಕತ್ತರಿಸಲು ನೀವು ನನಗೆ ಆರು ಗಂಟೆಗಳ ಸಮಯ ನೀಡಿದರೆ ಅದರಲ್ಲಿ ಮೊದಲ ನಾಲ್ಕು ತಾಸು ನಾನು ಕೊಡಲಿಯನ್ನು ಹರಿತ ಮಾಡಿಕೊಳ್ಳಲು ಬಯಸುತ್ತೇನೆ,’’ ಎಂದು. ಇದರಂತೆ ನಾನು ಆಡಳಿತ ನಿರ್ವಹಣೆ ಜವಾಬ್ದಾರಿ ಹೊತ್ತಾಗ ಲಿಂಕನ್ ಮಾತುಗಳಿಂದ ಪ್ರಭಾವಿತನಾಗಿ ಅದರ ಬಳಕೆಗೆ ಒತ್ತು ಕೊಟ್ಟೆ. ನನ್ನ ಪ್ಲಾನಿಂಗ್‌ಗಾಗಿಯೇ ದಿನದ ಬಹುಪಾಲು ಕಳೆದುಹೋಗುತ್ತಿತ್ತು. ಅದೇ ರೀತಿ ನಾವು ಪಂಚವಾರ್ಷಿಕ ಯೋಜನೆ, ಮಾಸಿಕ ಯೋಜನೆ, ದೈನಂದಿನ ಯೋಜನೆಗಳನ್ನು ರೂಪಿಸಿದೆವು. ಭವಿಷ್ಯದ ನಿರ್ಧಾರ ಹಾಗೂ ಸದ್ಯದ ಪ್ಲ್ಯಾನಿಂಗ್‌ಗಾಗಿಯೇ ನಾವು ಬಹಳಷ್ಟು ಸಮಯ ಕಳೆದುಬಿಟ್ಟೆವು. ಈಗ ನೋಡಿದರೆ ಎಲ್ಲ ಪ್ಲ್ಯಾನ್‌ಗಳು ಅಪ್ರಸ್ತುತವಾಗಿ ಕೂತಿವೆ. ಅಲ್ಲದೆ ಪ್ಲ್ಯಾನಿಂಗ್‌ಗಾಗಿ ವ್ಯಯಿಸಿದ ಸಮಯ ಕೂಡ ಮತ್ತೆ ಹಿಂದಿರುಗುವುದಿಲ್ಲ. ಹಾಗಿದ್ದೂ ನನಗೆ ಪ್ಲ್ಯಾನಿಂಗ್‌ನ ಮಹತ್ವದ ಅರಿವಿದೆ. ಇನ್ನು ಮುಂದೆ ಹೆಚ್ಚು ಸಮತೋಲನದಿಂದ ಕೂಡಿದ ಪ್ಲ್ಯಾನಿಂಗ್ ವ್ಯವಸ್ಥೆ, ಅಂದರೆ ಹೆಚ್ಚು ಸಮಯ ಕ್ರಿಯೆಗೆ ಒತ್ತು ನೀಡಿ ಮುಂದುವರಿಯುತ್ತೇನೆ.
ಈಗ ಎಲ್ಲರೂ ಮಾಡುತ್ತಿರುವಂತೆ ಅಗತ್ಯ ಅಥವಾ ಅವಶ್ಯಕ ಎಂಬ ವ್ಯಾಖ್ಯಾನದ ಮರುಪರಿಶೀಲನೆಯಲ್ಲಿ ನಿರತನಾಗಿದ್ದೇನೆ. ವಿಮಾನದಲ್ಲಿ ಕುಳಿತುಕೊಂಡು ಒಂದು ಮೀಟಿಂಗ್‌ನಿಂದ ಮತ್ತೊಂದರಲ್ಲಿ ಭಾಗವಹಿಸಲು ಹಾರಾಡುತ್ತಿದ್ದೆ. ವಿಮಾನದಲ್ಲಿಯೇ ಅದರ ತಯಾರಿಯೂ ಮಾಡುತ್ತಿದ್ದೆ. ವೈರಾಣು ಕೊಟ್ಟ ಹೊಡೆತಕ್ಕೆ ಎಲ್ಲ ವಿಮಾನಗಳು ಸ್ಥಗಿತಗೊಂಡವು. ಆದರೆ ನನ್ನ ಭಾಗವಹಿಸುವಿಕೆ ತುಂಬ ಅಗತ್ಯ ಎನಿಸುತ್ತಿದ್ದ ಮೀಟಿಂಗ್‌ಗಳು  ಮಾತ್ರ ನಾನಿಲ್ಲದೆಯೂ ಜರುಗಿದವು. ಅಲ್ಲದೆ ನಿರೀಕ್ಷೆಯ ಕೆಲಸ ಕೂಡ ಆಯಿತು. ವಿಡಿಯೊ ಕಾನರೆನ್ಸ್, ಟೆಲಿ ಕಾನರೆನ್ಸ್‌ಗಳು ಅಲ್ಪ ಮಾತುಗಳಲ್ಲಿಯೇ ಮೀಟಿಂಗ್‌ಗಳನ್ನು ಒಂದರ ನಂತರ ಮತ್ತೊಂದು ನಡೆಸಲು ನೆರವಾದವು. ತಿರುಗಾಟ ನಿಂತು, ವಾಹನ ಸಂಚಾರ ಕಡಿಮೆಯಾಗಿ ನನ್ನಿಂದಲೂ ಕೂಡ ಪರಿಸರಕ್ಕೆ ಅಲ್ಪಮಟ್ಟದ ನೆರವು ಸಿಕ್ಕಿದೆ. ಇದರಿಂದಾಗಿ ನಮ್ಮ ಭೂಮಿ ಸಂತೋಷಿಸಿದೆ ಕೂಡ.
ಕೊರೊನಾ ಪ್ರಸರಣ ಮತ್ತು ಆತಂಕದ ಈ ಕಷ್ಟಕಾಲ ನನಗೆ ಪ್ರಮುಖವಾಗಿ ಕಲಿಸಿರುವಂಥದ್ದು ನಿಮ್ಮ ಯೋಜನೆಗಳು ನಿರೀಕ್ಷೆಯಂತೆಯೇ ಕೆಲಸ ಮಾಡುವುದಿಲ್ಲ ಎನ್ನುವ ಸೂಕ್ಷ್ಮ ವಿಚಾರ. ಇದನ್ನು ಚೆನ್ನಾಗಿ ಅರಿತು, ದೋಷಗಳನ್ನು ಒಪ್ಪಿಕೊಂಡು ನನ್ನ ನಿಯಂತ್ರಣದಲ್ಲಿ ಸುಧಾರಣೆಗೆ ಸಾಧ್ಯವಾದ ಹೆಜ್ಜೆಗಳನ್ನು ಇರಿಸುತ್ತಿದ್ದೇನೆ.

ನಾನ್‌ ಕೋವಿಡ್ ಮೇಲೂ ಗಮನ: ಕೊರೊನಾ ವಿರುದ್ಧದ ವೈದ್ಯಕೀಯ ಸಮರದಲ್ಲಿ ಕೋವಿಡ್ ಸೋಂಕಿತರಲ್ಲದವರಿಗೆ ಕೂಡ ವೈದ್ಯಕೀಯ ನೆರವು ಕಷ್ಟವಾಗುತ್ತಿದೆ. ಕೊರೊನಾ ಸಮರಕ್ಕೆ ನಮ್ಮಲ್ಲಿನ ಬಹುತೇಕ ಮೂಲಸೌಕರ್ಯ ಬಳಕೆಯಾಗುತ್ತಿದೆ. ಸೊಳ್ಳೆಗಳಿಂದ ಹರಡುವ ರೋಗಗಳು, ಆಹಾರದಿಂದ ಹರಡುವಂತವು, ಶ್ವಾಸಕೋಶದ ಇತರ ಸಮಸ್ಯೆಗಳಿದ್ದವರಿಗೆ ಅಗತ್ಯವಾದ ದೀರ್ಘಕಾಲದ ಚಿಕಿತ್ಸೆ ಮತ್ತು ಆರೈಕೆ ಪೂರೈಸುವುದು ವೈದ್ಯಕೀಯ ಕ್ಷೇತ್ರದ ಮೇಲೆ ಸದ್ಯ ಹೊರೆ ಎನಿಸುತ್ತಿದೆ. ಈ ವಿಚಾರ ತುಂಬ ಪ್ರಮುಖವಾದದ್ದು. ಏಕೆಂದರೆ ಮೇಲೆ ತಿಳಿಸಿದ ರೋಗಗಳು ಮೇ ತಿಂಗಳಿಂದ ನವೆಂಬರ್ ಅವಧಿಯಲ್ಲಿ ಹೆಚ್ಚಾಗಿ ಗೋಚರವಾಗುತ್ತವೆ.
ಸರಕಾರಿ ಮತ್ತು ಖಾಸಗಿ ವಲಯದ ಆರೋಗ್ಯ ಸೇವಾದಾರರು ಕೋವಿಡ್ ಸೋಂಕಿತರಲ್ಲದ ಇತರ ಗಂಭೀರ ಸಮಸ್ಯೆಗಳಿರುವವರು ಮತ್ತು ಎದುರಾಗಬಲ್ಲ ಬೇರೆ ರೀತಿಯ ಅನಾರೋಗ್ಯಗಳತ್ತಲೂ ಗಮನ ಹರಿಸುವ ಕಾಲ ಇದು. ಈ ವರ್ಷ ಪೂರ್ತಿ ಕೊರೊನಾಗಾಗಿಯೇ ನಮ್ಮ ಎಲ್ಲ ವೈದ್ಯಕೀಯ ಸಿದ್ಧತೆಗಳು ಮೀಸಲಾಗುತ್ತಿವೆ. ಮುಂದೆ ಕೊರೊನಾ ಹೊರತಾದ ರೋಗಿಗಳ ಚಿಕಿತ್ಸೆ ಬೇಡಿಕೆ ಏಕಾಏಕಿ ದೊಡ್ಡದಾಗಿ ಎದುರಾದರೂ ನಾವು ನಿಭಾಯಿಸಬೇಕಿದೆ.

ಸಾರ್ವಜನಿಕ ಜಾಗೃತಿ ಒಂದೇ ಪರಿಹಾರ: ಕೊರೊನಾ ಪ್ರಸರಣ ತಡೆ ಮುನ್ನೆಚ್ಚರಿಕೆ ಕ್ರಮಗಳ ಎಷ್ಟು ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆಯೋ ಅಷ್ಟೇ ಶ್ರಮದಿಂದ ಕೊರೊನಾ ಹಬ್ಬಿಸಿರುವ ಆತಂಕದ ವಾತಾವರಣ ತಿಳಿಗೊಳಿಸಲು ಮುಂದಾಗಬೇಕು. ಸಾರ್ವಜನಿಕರು ಗಾಬರಿಗೊಳ್ಳದೆ ಕೊರೊನಾ ಹೊರತಾದ ಇತರ ಕಾಯಿಲೆಗಳಿಗೆ ನೇರವಾಗಿ ಅಥವಾ ಪರೋಕ್ಷ ವಾಗಿ ಸೂಕ್ತ ಚಿಕಿತ್ಸೆಗಳನ್ನು ತಡಮಾಡದೆ ಪಡೆಯಬೇಕು. ಈ ವಿಚಾರದಲ್ಲಿ ಅಲಕ್ಷ್ಯ ಅಥವಾ ಕೊರೊನಾ ಆತಂಕದ ಸಬೂಬು ಒಳ್ಳೆಯದಲ್ಲ. ಈಗಾಗಲೇ ಹಲವು ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಇಲ್ಲದ ಇತರ ರೋಗಿಗಳಿಗೆ ಸ್ಕ್ರೀನಿಂಗ್, ಟೆಲಿ ಕನ್ಸಲ್ಟೆನ್ಸಿ, ಆಪ್ತ ಸಮಾಲೋಚನೆ ಮೂಲಕ ವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ. ಈ ವೇಳೆ ಆಸ್ಪತ್ರೆಗೆ ಭೇಟಿ ನೀಡುವುದು ಸುರಕ್ಷಿತವಾಗಿಯೇ ಇದೆ ಎಂಬ ಭರವಸೆಯನ್ನು ಜನರಲ್ಲಿ ಮೂಡಿಸಬೇಕಿದೆ. ಇದು ಆದ್ಯತೆಯ ವಿಷಯ ಕೂಡ.

ಸಮಸ್ಯೆ ಶಾಶ್ವತವಲ್ಲ: ನಮ್ಮ ದೇಶ ಈಗಾಗಲೇ ಸಾರ್ಸ್, ಎಚ್1ಎನ್1, ಪ್ಲೇಗ್, ಸಿಡಿಬು, ಪೊಲಿಯೊದಂತಹ ಮಹಾಮಾರಿಗಳನ್ನು ಯಶಸ್ವಿಯಾಗಿ ಜಯಿಸಿದೆ. ಯುದ್ಧಗಳನ್ನು, ಭೀಕರ ಪ್ರವಾಹ, ಬರ ಪರಿಸ್ಥಿತಿಗಳನ್ನು ನಾವುಗಳು ಆತ್ಮಸ್ಥೈರ್ಯದಿಂದ ನಿಭಾಯಿಸಿದ್ದೇವೆ. ನಮ್ಮಲ್ಲಿ ತಾಳ್ಮೆಯಿಂದ ಕಾಲ ಸರಿಯುವುದನ್ನು ನೋಡುವ ಸ್ಥಿರಚಿತ್ತವಿದೆ. ಅದನ್ನು ನಂಬಿಕೊಂಡು ನಾಳಿನ ಉತ್ತಮ ಭವಿಷ್ಯದ ಭರವಸೆ ಹೊತ್ತು ನಡೆಯೋಣ. ಖಂಡಿತವಾಗಿಯೂ ಈ ಸಮಸ್ಯೆ ಶಮನವಾಗಲಿದೆ. ಈ ಸಾಂಕ್ರಾಮಿಕವನ್ನು ಕೂಡ ನಾವು ಒಗ್ಗಟ್ಟಾಗಿ ಕೆಲವೇ ತಿಂಗಳಲ್ಲಿ ದಾಟಿ ಮುನ್ನಡೆಯಲಿದ್ದೇವೆ. ಮುಂಚಿನಂತೆ ಸಾಮಾನ್ಯ ಸ್ಥಿತಿಯ ಜನಜೀವನ ಕಾಣಲಿದ್ದೇವೆ ಎನ್ನುವುದು ನಾನು ನಿಮಗೆ ನೀಡುವ ಸಂದೇಶ.
ಕಷ್ಟಗಳ ಕಾರ್ಮೋಡದ ನಡುವೆ ಕಲಿಕೆಯ ಕೋಲ್ಮಿಂಚನ್ನು ಕೊರೊನಾ ತರಲಿದೆ. ಅನಿಶ್ಚಿತತೆಯೊಂದಿಗೂ ಹಿತವಾಗಿ ಬದುಕುವ, ಅಪರಿಮಿತ ಹಾಗೂ ಅನಿರೀಕ್ಷಿತ ಸಂದರ್ಭಗಳನ್ನು ನಿಭಾಯಿಸುವ ಪಾಠದ ಕೋಲ್ಮಿಂಚು ಅದಾಗಲಿದೆ.
(ಲೇಖಕರು ಮಣಿಪಾಲ್ ಹೆಲ್ತ್ ಎಂಟರ್ಪ್ರೈಸಸ್ ಲಿ. ಚೇರ್ಮನ್)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top