ಮಾಹಿತಿ ತಂತ್ರಜ್ಞಾನದ ಬಹುದೊಡ್ಡ ಕೊಡುಗೆಯೇ ಆದ ಸಾಮಾಜಿಕ ಜಾಲತಾಣ ಸೃಷ್ಟಿಯಾಗುವವರೆಗೂ ಅನಿಸಿದ್ದನ್ನು ಹೇಳಲು, ದಾಖಲಿಸಲು, ಅಭಿವ್ಯಕ್ತಿಸಲು ಎಲ್ಲರಿಗೂ ಅವಕಾಶವೇ ಇರಲಿಲ್ಲ. ಅಭಿಪ್ರಾಯ ರೂಪಿಸುವವರು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಪತ್ರಕರ್ತರು. ಸಾಹಿತಿಗಳು, ವಿಚಾರವಾದಿಗಳು, ವಕೀಲರು,ರಾಜಕಾರಣಿಗಳು- ಹೀಗೆ ಸಮಾಜದ ಒಂದಿಷ್ಟು ಮಂದಿ ಮಾತ್ರಯೇ ಆಗಿದ್ದರು. ಅವರು ಹೇಳಿದ ಅಭಿಪ್ರಾಯ-ಅನಿಸಿಕೆಗಳಿಗೆ ಮಾತ್ರ ಸಮೂಹ ಮಾಧ್ಯಮಗಳಲ್ಲಿ ಅವಕಾಶವಿತ್ತು. ಉಳಿದ ಶ್ರೀಸಾಮಾನ್ಯರು ತಮಗನಿಸಿದ್ದನ್ನು ತಮ್ಮದೇ ಆದ ಸೀಮಿತ ಖಾಸಗಿ ವಲಯದಲ್ಲಿ ಅಂದುಕೊಂಡು ಸುಮ್ಮನಿರಬೇಕಿತ್ತು. ಸಾರ್ವಜನಿಕ ವೇದಿಕೆ ಸಿಗುತ್ತಿರಲಿಲ್ಲ. ಆದರೆ, ಎಲ್ಲರೂ ತಮಗನಿಸಿದ್ದನ್ನು ಅಭಿವ್ಯಕ್ತಿ ಪಡಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದು, 21ನೇ ಶತಮಾನದ ಮಹಾಸೃಷ್ಟಿ ಎನ್ನಬಹುದಾದ ಸಾಮಾಜಿಕ ಜಾಲತಾಣಗಳು ! ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡಿದ ಅಗ್ಗಳಿಕೆ ಈ ತಾಣಗಳಿಗೆ ಸಲ್ಲಬೇಕು. ದೇಶದ ಪ್ರಧಾನಿಯಿಂದ ಹಿಡಿದು ಬಡಬೋರೇಗೌಡನೂ ತನ್ನ ಅಭಿಪ್ರಾಯವನ್ನು ಇಲ್ಲಿ ದಾಖಲಿಸಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಲು ಅತ್ಯಂತ ಸೂಕ್ತ ವೇದಿಕೆ ಎಂದು ಬಣ್ಣಿಸಲಾಗುತ್ತಿರುವ ಇಂಥ ಸಾಮಾಜಿಕ ಜಾಲತಾಣಗಳಿಂದು ಪರಸ್ಪರ ದೋಷಾರೋಪಣೆಯ ವೇದಿಕೆಗಳಾಗಿ ಪರಿಣಮಿಸಿವೆ. ಪರಿಣಾಮ, ಕೇಂದ್ರ ಸರಕಾರವೇ ಮಧ್ಯ ಪ್ರವೇಶಿಸಿ ಕಾನೂನು ರೂಪಿಸುವಷ್ಟ ಮಟ್ಟಿಗೆ ದೈತ್ಯವಾಗಿ ಬೆಳೆದುನಿಂತಿದೆ.
ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವ ಸಲುವಾಗಿ ಅನೇಕ ಮಾರ್ಗಸೂಚಿಗಳನ್ನೊಳಗೊಂಡ ಹೊಸ ನಿಯಮಾವಳಿಗಳನ್ನು ಕೇಂದ್ರ ಸರಕಾರ ಕಳೆದ ಫೆಬ್ರವರಿಯಲ್ಲಿ ರಾಜ್ಯಪತ್ರದ ಮೂಲಕ ಪ್ರಕಟಿಸಿದೆ. ಈ ವಿಷಯವೀಗ
ಟ್ವಿಟ್ಟರ್, ಫೇಸ್ಬುಕ್ನಂತಹ ಪ್ರಮುಖ ಸಾಮಾಜಿಕ ಜಾಲತಾಣಗಳು ಹಾಗೂ ಕೇಂದ್ರ ಸರಕಾರದ ನಡುವಿನ ಹಗ್ಗಜಗ್ಗಾಟ,ಆರೋಪ ಪ್ರತ್ಯಾರೋಪಕ್ಕೆ,ತಿಕ್ಕಾಟಕ್ಕೆ ಕಾರಣವಾಗಿದೆ. ಸರಕಾರದ ನಿಯಮಗಳನ್ನು ಪಾಲನೆ ಮಾಡಲು ಅಧಿಕಾರಿಯ ನಿಯೋಜನೆ, ಸಾರ್ವಜನಿಕರ ಕುಂದುಕೊರತೆಗಳನ್ನು ಬಗೆಹರಿಸುವುದು, ಸರಕಾರ ಮತ್ತು ಬಳಕೆದಾರರ ನಡುವೆ ನೋಡಲ್ ಅಧಿಕಾರಿಯ ಪಾತ್ರ- ಇಂತಹ ನಿಯಮಗಳಿಗೆ ಹೊಂದಿಕೊಳ್ಳಲು ಮೂರು ತಿಂಗಳ ಸಮಯಾವಕಾಶವನ್ನು ಕೇಂದ್ರ ಸರಕಾರ ನೀಡಿತ್ತು. ಇದೀಗ ಪ್ರಕರಣ ನ್ಯಾಯಾಲಯದ ಅಂಗಳದವರೆಗೆ ತಲುಪಿದೆ.
ಇದೇನೆ ಇರಲಿ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹೇಗೆ ಪ್ರಕಟವಾಗುತ್ತಿದೆ, ಇದು ಬೆಳೆದು ಬಂದ ಬಗೆ, ತಲುಪಿರುವ ತಾಣದ ಬಗ್ಗೆ ಆಲೋಚಿಸೋಣ. ಆರಂಭಿಕ ದಿನಗಳಲ್ಲಿ, ಹದಿನೈದು ಪೈಸೆಯ ಕಾರ್ಡಿನಲ್ಲಿ ಬರೆಯುತ್ತಿದ್ದ ಖಾಸಗಿ ಕ್ಷಣಗಳಿಗೆ ಪರ್ಯಾಯವಾಗಿ ಒದಗಿ ಬಂದ ಈ ಜಾಲತಾಣಗಳು, ಬಳಿಕ ರಾಜಕೀಯ ಹಾಗೂ ಸಿದ್ಧಾಂತ ಪ್ರೇರಿತ ಒಲವು-ನಿಲುವುಗಳ ಅಭಿವ್ಯಕ್ತಿಗೂ ವೇದಿಕೆಯಾದವು. ಮುಂದೆ ಜನರ ನಡುವಿನ ಜಗಳ, ವಾಗ್ವಾದ, ಸಂಘರ್ಷಕ್ಕೆ ವಾಲಿದವು. ಇದೆಲ್ಲವೂ ಹೇಗಾಯಿತು ಮತ್ತು ಯಾಕಾಯಿತು ಎಂಬುದರ ಕುರಿತು ವಾಸ್ತವಿಕ ಹಾಗು ವ್ಯಾವಹಾರಿಕ ಸಂಗತಿಗಳತ್ತ ಒಮ್ಮೆ ಕಣ್ಣು ಹಾಯಿಸೋಣ
ಜಗತ್ತಿನ ಯಾವ ಸಂಗತಿಯೂ ಒಳ್ಳೆಯದು-ಕೆಟ್ಟದು, ಬೇಕಾಗಿದ್ದು-ಬೇಡವಾಗಿದ್ದು, ನಿರಾಕರಣೆ-ಸ್ವೀಕರಣೆ ಎಂಬ ಎರಡೇ ಎರಡು ರೂಪದಲ್ಲಿ ಇರುವುದಿಲ್ಲ. ನಡುವೆ ಹಲವು ಮಜಲುಗಳು, ಸಾಧ್ಯಾಸಾಧ್ಯತೆಗಳು ಇರುತ್ತವೆ. ರಾಜ ಇಲ್ಲವೇ ರಾಣಿಯೇ ಇರಬೇಕು(ಹೆಡ್ ಅಂಡ್ ಟೇಲ್) ಎಂದು ಭಾವಿಸಿಕೊಂಡು ಮೇಲಕ್ಕೆಸೆದ ನಾಣ್ಯವೂ ಒಮ್ಮೊಮ್ಮೆ ರಾಜನೂ ಅಲ್ಲದ, ರಾಣಿಯೂ ಅಲ್ಲದ ಸ್ವರೂಪದಲ್ಲಿ ನೆಟ್ಟನೇರವಾಗಿ ನಿಂತುಬಿಡುತ್ತದೆ. ಇದು ಸ್ವಾಭಾವಿಕ. ಕಪಪ್ಉ-ಬಿಳುಪಿನ ನಡುವೆ ನೂರೆಂಟು ಬಣ್ಣಗಳಿವೆ !
ಆದರೇ, ಇತ್ತೀಚಿನ ದಿನಗಳಲ್ಲಿ ಈ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ಅಭಿಪ್ರಾಯಗಳು, ಎಲ್ಲ ಸಂಗತಿಗಳೂ ಬಹುತೇಕ ಕಪ್ಪು ಅಥವಾ ಬಿಳಿ ಎಂಬ ಎರಡೇ ರೂಪಗಳು ಕಂಡು ಬರುತ್ತಿದೆ. ಇದನ್ನು ಎರಡೇ ಎರಡು ಬಣಗಳು ಮುನ್ನಡೆಸುತ್ತಿವೆ. ನರೇಂದ್ರ ಮೋದಿಯವರನ್ನು, ಅವರ ನೇತೃತ್ವದ ಕೇಂದ್ರ ಸರಕಾರವನ್ನು ಯಾವುದೇ ಸಂದರ್ಭದಲ್ಲಿ ಸಮರ್ಥನೆ ಮಾಡಿಕೊಳ್ಳುವ ಗುಂಪು ಒಂದು ಕಡೆ. ಇದು ತಮ್ಮ ವಾದವನ್ನು ಸತ್ಯ ಎಂದು ಸಾಬೀತುಪಡಿಸಲು ಅನೇಕ ಬಾರಿ ಎದುರಾಳಿಗಳ ತೇಜೋವಧೆಗೆ ಒಂದಿನಿತೂ ಹಿಂದೆಮುಂದೆ ನೋಡುವುದಿಲ್ಲ.
ಎರಡನೇ ವರ್ಗ, ಶತಾಯಗತಾಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿಯೂ ಮತ್ತು ಅವರ ಸರಕಾರದ ಪ್ರತಿಯೊಂದು ಹೆಜ್ಜೆಯನ್ನೂ ತೆಗಳುವುದಕ್ಕಾಗಿಯೇ ಟೊಂಕ ಕಟ್ಟಿದೆ.ಉದಾಹರಣೆಗೆ ಲಸಿಕೆಗೆ ಕೇಂದ್ರ ಸರಕಾರದ ಅನುಮತಿ ನೀಡಿದೆ ಎಂದರೆ, ಅದರ ಮೂರನೇ ಹಂತದ ಟ್ರಯಲ್ ಆಗಿಲ್ಲ ಎನ್ನುವುದು. ಲಸಿಕೆ ಕೊಡಲು ಆರಂಭಿಸಿದ ಕೂಡಲೆ ಇದನ್ನು ಬಡವರ ಬದಲಿಗೆ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತಿದೆ ಎಂದೋ,ಮೋದಿ ತಾನು ಮೊದಲು ತೆಗೆದುಕೊಳ್ಳದೆ ಬೇರೆಯವರ ಮೇಲೆ ಪ್ರಯೋಗ ಮಾಡುತ್ತಿದ್ದಾರೆಂದೋ ಆಕ್ಷೇಪಿಸುವುದು. ಮುಖ್ಯವಾಗಿ ಎರಡೂ ಬಣಗಳು ಪರಸ್ಪರ ಎದುರಾಳಿಗಳನ್ನು ಹಣಿಯುವುದಕ್ಕಾಗಿ ನಕಲಿ ಫೋಟೊಗಳನ್ನೊ,ಮಾರ್ಫ್ ಮಾಡಿದ ಫೋಟೊ,ಎಡಿಟ್ ಮಾಡಿದ ವಿಡಿಯೊಗಳನ್ನೋ ಹಂಚಿಕೊಳ್ಳುವ ಮಾನಗೇಡಿ ಕೆಲಸ ಧಾರಾಳವಾಗಿ ನಡೆದಿದೆ. ಎರಡೂ ಗುಂಪುಗಳ ಕುರಿತು ಬೇಸರ ತರಿಸುವ ಒಂದು ಸಮಾನ ಅಂಶವೆಂದರೆ, ತಾವು ಸುಳ್ಳು ಸುದ್ದಿಗಳನ್ನು ಹರಡಿದ್ದೇವೆ ಅಥವಾ ಹರಡುತ್ತಿದ್ದೇವೆಂದು ತಿಳಿದ ನಂತರವೂ ಅದರ ಕುರಿತು ಒಂದಿನಿತೂ ಪಶ್ಚಾತ್ತಾಪ ಹೊಂದದೇ ಇರುವುದು. ಉದಾಹರಣೆಗೆ ಎರಡು ದಿನದ ಹಿಂದೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಭಾವಚಿತ್ರವೊಂದು ವಾಟ್ಸಪ್ನಲ್ಲಿ ಹರಿದಾಡುತ್ತಿತ್ತು. ಅವರು ಕುಳಿತಿರುವ ಹಿಂಬದಿಯ ಪುಸ್ತಕದ ಕಪಾಟಿನಲ್ಲಿ “ಭಾರತವನ್ನು ಕ್ರೈಸ್ತ ದೇಶವಾಗಿ ಮತಾಂತರಿಸುವುದು ಹೇಗೆ” ಹಾಗೂ “ಪವಿತ್ರ ಬೈಬಲ್” ಪುಸ್ತಕಗಳು, ಅವೆರಡರ ಕೇಳಗೆ ಏಸುಕ್ರಿಸ್ತನ ಪ್ರತಿಮೆಯೊಂದು ಇತ್ತು. “ಸೋನಿಯಾಗಾಂಧಿ ಭಾರತವನ್ನು ಕ್ರೈಸ್ತಮಯವಾಗಿಸುತ್ತಿದ್ದಾರೆ ಎನ್ನಲು ಇದು ಬಲವಾದ ಸಾಕ್ಷಿ” ಎಂದು ಆ ಪೋಸ್ಟರ್ಗಳಲ್ಲಿ ಬರೆಯಲಾಗಿತ್ತು. ಅನೇಕ ವಾಟ್ಸಪ್ ಗುಂಪುಗಳಲ್ಲಿ ಇದನ್ನು ಹಂಚಿಕೊಳ್ಳಲಾಯಿತು. ಆದರೆ ಕೆಲವೇ ಹೊತ್ತಿನಲ್ಲಿ ಮತ್ತೊಬ್ಬರು ನಿಜವಾದ ಭಾವಚಿತ್ರವನ್ನು ಹಂಚಿಕೊಂಡರು. ಅದರಲ್ಲಿ ಎರಡು ಪುಸ್ತಕಗಳಾಗಲಿ, ಏಸುವಿನ ಪ್ರತಿಮೆಯಾಗಲಿ ಇರಲಿಲ್ಲ. 2021ರ ಮಾರ್ಚ್ನಲ್ಲಿ ಕಾಂಗ್ರೆಸ್ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ರೋಹನ್ ಗುಪ್ತಾ ಅವರು ಪ್ರಧಾನಿ ನರೇಂದ್ರ ಮೋದಿಯವರ 7 ಸೆಕೆಂಡ್ ವಿಡಿಯೋವೊಂದನ್ನು ಟ್ವೀಟ್ ಮಾಡಿದರು. “ಬಡವರಿಗೆ ಕೇವಲ ಕನಸು ತೋರಿಸಿ, ಸುಳ್ಳೂ ಹೇಳಿ ಹಾಗೂ ರಾಜ್ಯಭಾರ ಮಾಡಿ” ಎಂದು ಮೋದಿ ಆ ವಿಡಿಯೋದಲ್ಲಿ ಹೇಳಿದ್ದರು.ಅಂದರೆ, ಬಡವರಿಗೆ ಸುಳ್ಳೂ ಹೇಳಿ ಅಧಿಕಾರಕ್ಕೆ ಬನ್ನಿ ಎಂದು ಮೋದಿ ಕರೆ ನೀಡುವಂತೆ ಅದು ಭಾಸವಾಗುತ್ತಿತ್ತು. ಆದರೆ ಪೂರ್ಣ ವಿಡಿಯೋ ನೋಡಿದ ನಂತರ ತಿಳಿದದ್ದು, ಅಷ್ಟೂ ಮಾತನ್ನು ಕಾಂಗ್ರೆಸ್ ಕುರಿತು ಮೋದಿ ಹೇಳಿದ್ದರು. ವಿಡಿಯೋ ತುಣುಕನ್ನು ಈ ರೀತಿ ತಮಗಿಷ್ಟ ಬಂದಂತೆ ತುಂಡರಿಸಿ ದಾರಿತಪ್ಪಿಸುವ ಕೆಲಸಗಳು ನಡೆಯುತ್ತಲೇ ಇರುತ್ತವೆ. ಒಂದೆಡೆ ಆಲೂಗಡ್ಡೆ ಹಾಕಿದರೆ ಮತ್ತೊಂದೆಡೆ ಚಿನ್ನ ಬರುತ್ತದೆ ಎಂದು ರಾಹುಲ್ ಗಾಂದಿ ಹೇಳಿದರು ಎಂಬ ವಿಡಿಯೋವನ್ನು ಬಿಜೆಪಿ ಮತ್ತು ಮೋದಿ ಬೆಂಬಲಿಗರು ಟ್ರೋಲ್ ಮಾಡುತ್ತಿರುವುದನ್ನು ವರ್ಷಾನುಗಟ್ಟಲೆ ಹಿಂದಿನಿಂದಲೂ ನಾವು ನೋಡುತ್ತಿದ್ದೇವೆ. ಆದರೆ ಅದೂ ಸಹ ಪ್ರಧಾನಿ ಮೋದಿ ಕುರಿತು ರಾಹುಲ್ ಗಾಂಧಿ ಹೇಳಿದ ಮಾತು ಎಂಬುದು ಪೂರ್ಣ ವಿಡಿಯೋ ನೋಡಿದ ನಂತರ ತಿಳಿಯುತ್ತದೆ.
ನಕಲಿ ವಿಡಿಯೋ, ಚಿತ್ರ ಹಂಚುವುದು ಒಂದು ತಪ್ಪಾದರೆ, ತಾವು ನಕಲಿ ಭಾವಚಿತ್ರವನ್ನು, ವಿಡಿಯೋವನ್ನು ಹಂಚಿದ್ದೇವೆ ಎಂಬ ಪಶ್ಚಾತ್ತಾಪದ ನೆರಳೂ ಎರಡೂ ಗುಂಪಿನವರಲ್ಲಿ ಕಾಣದಿರುವುದು ಅದಕ್ಕಿಂತಲೂ ದೊಡ್ಡ ಅಪರಾಧ. ಇವು ಕೇವಲ ಎರಡು ಸ್ಯಾಂಪಲ್ಲುಗಳು ಮಾತ್ರ.ಬರಬರುತ್ತ ಸಾಮಾಜಿಕ ಜಾಲತಾಣಗಳಿಗೆ ಇಣುಕಿ ಹಾಕಿದಾಕ್ಷಣ ಇಂಥ ಗಲೀಜು,ಗಬ್ಬು,ಕೊಳಕು,ವಿಕೃತ ಮನಸ್ಸುಗಳ ಅಟ್ಟಹಾಸವೇ ಕಾಣಿಸುತ್ತದೆ.
ಒಟ್ಟಿನಲ್ಲಿ, ಮೋದಿ ಬೆಂಬಲಿಗರು ವರ್ಸಸ್ ಮೋದಿ ವಿರೋಧಿಗಳು ಎಂಬ ಕಪ್ಪು ಬಿಳುಪಾಗಿ ಜಾಲತಾಣ ವಿಭಜನೆಗೊಂಡಿರುವುದು ನಾವು ಸ್ಪಷ್ಟವಾಗಿ ಕಾಣಬಹುದು. ಇದನ್ನು ನೀವು ರಾಹುಲ್ ಪರವಾದ ಬಣ, ವಿರೋಧಿ ಬಣ ಎಂದೂ ಭಾವಿಸಿಕೊಳ್ಳಬಹುದು.
ಇಲ್ಲೆಲ್ಲಾ ಪರಸ್ಪರರ ವಿರುದ್ಧ ಕೆಸರೆರೆಚಾಟ ಹೊರತುಪಡಿಸಿದರೆ, ನಡುವಿನ ಅನೇಕ ಬಣ್ಣಗಳು, ಹೊಳಹುಗಳನ್ನು ಚರ್ಚಿಸಲು ಯಾರಿಗೂ ಸಮಯವಿದ್ದಂತೆ ತೋರುತ್ತಿಲ್ಲ. ಅಂಥ ನಿರ್ಮಲ ಮನಸ್ಸುಗಳು ಇದ್ದಂತೆ ತೋರುತ್ತಿಲ್ಲ.ಒಟ್ಟಿನಲ್ಲಿ ಎಲ್ಲರೂ ಎದುರಾಳಿಗಳನ್ನು ಹಳಿಯಲು ತುದಿಗಾಲಲ್ಲಿ ನಿಂತಿರುವಂತೆಯೇ ಕಾಣುತ್ತಾರೆ. ಹಾಗಾದರೆ, ತಂತ್ರಜ್ಞಾನದ ಮೂಲಕ ತಮಗೆ ಸಿಕ್ಕ ಮತ್ತು ನಮ್ಮ ಸಂವಿಧಾನದ ಮೂಲ ಆಶಯವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಅತಿ ದೊಡ್ಡ ಅಸ್ತ್ರವನ್ನು ಬಹುಪಾಲು ಜನರು ಕೈಚೆಲ್ಲಿದರೇ ಎಂಬ ಬಹುಮುಖ್ಯ ಪ್ರಶ್ನೆ ಮೂಡುತ್ತದೆ.
ಆನು ಒಲಿದಂತೆ ಆಡುವೆ, ಇತರರಿಗೆ ಕೇಡು ಬಗೆಯದಂತೆ ಎನ್ನುತ್ತಾನೆ ಬಸವಣ್ಣ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಹುದೊಡ್ಡ ವಿವೇಕವಿದು. ಇದನ್ನು ಎಲ್ಲರಲ್ಲೂ ಮೂಡಿಸುವುದು ಹೇಗೆ ?
ಜಾಲತಾಣದ ಶಕ್ತಿ ಅರಿತ ಬಿಜೆಪಿ
2014ಕ್ಕೆ ಮುನ್ನ ಸಾಮಾಜಿಕ ಜಾಲತಾಣ ಎಂದರೆ “ಕೆಲವೇ ನಗರ ಕೇಂದ್ರಿರ ಸುಶಿಕ್ಷಿತ ಮೇಲ್ವರ್ಗದ ಯುವಕರ” ಆಡುಂಬೊಲವಾಗಿತ್ತು. ತಮ್ಮ ದೈನಂದಿನ ಚಟುವಟಿಕೆಗಳನ್ನು, ಖಾಸಗಿ ಕ್ಷಣಗಳನ್ನು, ಸಣ್ಣ ಪುಟ್ಟ ಖುಷಿಗಳನ್ನು ಸ್ನೇಹಿತರ ಜತೆಗೆ ಹಂಚಿಕೊಳ್ಳಲು ಬಳಕೆ ಮಾಡುತ್ತಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ ತಂತ್ರಜ್ಞಾನ ಬಳಕೆ ಕುರಿತು ದೂರಾಲೋಚನೆ ಹೊಂದಿದ್ದ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣದ ಬಲವನ್ನು ಕಂಡರು. ವಿಶ್ವದ ಅತಿ ದೊಡ್ಡ ಸಂಖ್ಯೆಯ ಯುವಕರನ್ನು ಹೊಂದಿರುವ ದೇಶದಲ್ಲಿ ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ತಮ್ಮ ಪ್ರಧಾನಿ ಗಾದಿ ಹಾದಿ ಸುಗಮ ಎಂದರಿತರು. ಅದಕ್ಕೆ ತಕ್ಕನಾದ ವ್ಯವಸ್ಥೆ ಮಾಡಿಕೊಂಡರು. 2013ರಲ್ಲೆ ದೇಶದ ರಾಜಕಾರಣಿಗಳ ಪೈಕಿ ಟ್ವಿಟ್ಟರ್ ಫಾಲೋಯರ್ ಗಳ ಸಂಖ್ಯೆಯಲ್ಲಿ ಮೋದಿ ಮುಂಚೂಣಿಯಲ್ಲಿದ್ದರು(26.62 ಲಕ್ಷ). ನಂತರದಲ್ಲಿ ಶಶಿ ತರೂರ್(19.5 ಲಕ್ಷ), ಸುಷ್ಮಾ ಸ್ವರಾಜ್(7.44 ಲಕ್ಷ), ಅರವಿಂದ ಕೇಜ್ರಿವಾಲ್(6.74 ಲಕ್ಷ), ಉಮರ್ ಅಬ್ದುಲ್ಲಾ (3.71 ಲಕ್ಷ) ಇದ್ದರು. ಆದರೆ ಅಂದಿನ ಕಾಂಗ್ರೆಸ್ ಸೇರಿ ಇನ್ನಿತರೆ ಪಕ್ಷಗಳ ನಾಯಕರ ಅಭಿಪ್ರಾಯ ಹೇಗಿತ್ತು? ನಮ್ಮ ಸಾಂಪ್ರದಾಯಿಕ ರ್ಯಾಲಿ, ಮನೆಮನೆ ಸಂಪರ್ಕದಂತಹ ತಂತ್ರಗಳೇ ಸಾಕು. ಈ ಸಾಮಾಜಿಕ ಜಾಲತಾಣಗಳಿಂದ ಒಂದಷ್ಟು ಪ್ರಚಾರ ಮಾಡಬಹುದೇ ವಿನಃ ಮತಗಳಾಗಿ ಅವು ಪರಿವರ್ತನೆ ಆಗುವುದಿಲ್ಲ ಎಂಬಂತಿತ್ತು. ಆದರೆ ಮೋದಿ ನೇತೃತ್ವದ ಚುನಾವಣಾ ಯಂತ್ರವು ಬೃಹತ್ ಮೊತ್ತವನ್ನು ಚುನಾವಣಾ ಪ್ರಚಾರಕ್ಕೆ ವ್ಯಯಿಸುವುತ್ತಿರುವುದನ್ನು ಕಂಡು ಕಾಂಗ್ರೆಸ್ ಎಚ್ಚೆತ್ತುಕೊಳ್ಳಲು ಮುಂದಾಯಿತು. ಮೋದಿಯವರು 2009ರಲ್ಲೆ ಟ್ವಿಟರ್ ಖಾತೆ, 2005ರಲ್ಲೆ ವೈಯಕ್ತಿಕ ವೆಬ್ಸೈಟ್ ಹೊಂದಿದ್ದರೆ, 2012-13ರಲ್ಲೂ ಸ್ವತಃ ರಾಹುಲ್ ಗಾಂಧಿಯವರೂ ಸಾಮಾಜಿಕ ಜಾಲತಾಣದಿಂದ ದೂರವೇ ಇದ್ದರು. ಇದ್ದಕ್ಕಿದ್ದಂತೆ ನವದೆಹಲಿಯಲ್ಲಿ ಒಂದು ದಿನದ ಸಾಮಾಜಿಕ ಜಾಲತಾಣ ಕ್ರಾಶ್ ಕೋರ್ಸ್ ಆಯೋಜನೆ ಮಾಡಲಾಯಿತು. ರಾಹುಲ್ ಗಾಂಧಿ, ಶಶಿ ತರೂರ್ ಸೇರಿ 250ಕ್ಕೂ ಹೆಚ್ಚು ನಾಯಕರಿಗೆ ಫೇಸ್ಬುಕ್, ಟ್ವಿಟರ್ ಕಂಪನಿ ಪ್ರತಿನಿಧಿಗಳೂ ತರಬೇತಿ ನೀಡಿದರು. ನಂತರ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಸಾಕಷ್ಟು ಕ್ರಿಯಾಶೀಲವಾಯಿತಾದರೂ ಬಿಜೆಪಿ ಆ ವೇಳೆಗೆ ಬಹುದೂರ ಸಾಗಿತ್ತು.
ಈ ವೇಳೆ ಬಿಜೆಪಿ ತನ್ನ ಮಾಹಿತಿಯನ್ನು ಹಂಚಿಕೊಳ್ಳುವುದಷ್ಟೆ ಅಲ್ಲದೆ ಎದುರಾಳಿಗಳನ್ನು ಹಳಿಯಲು ವಿವಿಧ ಮಾರ್ಗಗಳಿಂದ ಅಪಪ್ರಚಾರವನ್ನೂ ಮಾಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಕಾಂಗ್ರೆಸ್ ಎಷ್ಟೇ ಪ್ರಯತ್ನಿಸಿದರೂ ಅದಾಗಲೇ ಬಹುದೂರ ಸಾಗಿದ್ದ ಬಿಜೆಪಿ ಸಾಮಾಜಿಕ ಜಾಲತಾಣ ಶಕ್ತಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ, ಮೂರು ದಶಕದಲ್ಲೆ ಕೇಳರಿಯದ ಚುನಾವಣಾ ಫಲಿತಾಂಶವನ್ನು ದೇಶ ಕಂಡಿತು. ಅಚ್ಚರಿಯ ಸೀಟುಗಳೊಂದಿಗೆ ಮೋದಿ ಪ್ರಧಾನಿಯಾಗುವಲ್ಲಿ ಈ ದೇಶದ ಯುವಕರ ಪಾತ್ರ ಇತ್ತು, ಆ ಯುವಕರನ್ನು ಸೆಳೆಯುವಲ್ಲಿ ಸಾಮಾಜಿಕ ಜಾಲತಾಣವೇ ಮುಖ್ಯ ಮಾರ್ಗವಾಗಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.
ಆದರೆ 2019, ಇದೀಗ 2021ರ ವೇಳೆಗೆ ಪರಿಸ್ಥಿತಿ ಬದಲಾಗಿದೆ. ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಕಾಂಗ್ರೆಸ್ ಸಾಕಷ್ಟು ಪ್ರಗತಿ ಸಾಧಿಸಿದೆ.ನೇರವಾಗಿ ಹೇಳಬೇಕೆಂದರೆ ಆಳುವ ಸರಕಾರಕ್ಕೆ ಕಾಂಗ್ರೆಸ್ ಹಾಗೂ ಇತರ ಪ್ರಾದೇಶಿಕ ಪಕ್ಷಗಳು ನಿದ್ದೆಗೆಡುವಂತೆ ಮಾಡಿದೆ.ಪ್ರಮುಖ ಜಾಲತಾಣ ಸಂಸ್ಥೆಗಳ ಜತೆಗೆ ಸಂಪರ್ಕ ಹಾಗೂ ರಣತಂತ್ರದೊಂದಿಗೆ ಕಾಂಗ್ರೆಸ್ ಮುನ್ನುಗ್ಗಲು ಕೆಲ ಸಮಯ ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯಾಗಿದ್ದ ಕರ್ನಾಟಕದ ರಮ್ಯಾ ಅವರೂ ಕಾರಣ ಎನ್ನಲಾಗುತ್ತದೆ. ಇದೇ ವೇಳೆ, ನಕಲಿ ಖಾತೆ ಸೃಷ್ಟಿಸಲು ಕಾರ್ಯಕರ್ತರಿಗೆ ಸೂಚಿಸಿದರು ಎಂಬ ಆರೋಪವೂ ರಮ್ಯಾ ಅವರ ಮೇಲೆ ಬಂದಿತ್ತು. ಆಗಿಂದಾಗ್ಗೆ, ಬಿಜೆಪಿ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧವೂ ಕಾಂಗ್ರೆಸ್ ಸೇರಿ ವಿವಿಧ ಟ್ವಿಟ್ಟಿಗರು ಇದೇ ಆರೋಪವನ್ನು ಮಾಡುತ್ತಾರೆ.
ಅಂದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮ ಸಮವಾಗಿವೆ ಎಂಬುದಕ್ಕೆ ಇದೊಂದು ಪುರಾವೆ ಅಷ್ಟೆ. ಈ ಹಿಂದೆ ರಾಜಕೀಯ ಪಕ್ಷಗಳು ಬೀದಿಯಲ್ಲಿ ನಿಂತು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದವು. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ವೇಳೆ ಹಾಗೂ ನಂತರ ಭುಗಿಲೆದ್ದಿರುವ ಹಿಂಸಾಚಾರ ಹೊರತುಪಡಿಸಿ ಈಗಂತೂ ದೇಶದ ರಾಜಕೀಯ ಕ್ಷೇತ್ರದಲ್ಲಿ ಬೀದಿ ಕಾಳಗ ಬಹುತೇಕ ಕಡಿಮೆ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲೆ ಗುಂಪುಕಟ್ಟಿಕೊಂಡು ದಾಳಿ ಮಾಡುವುದು ನಡೆದಿದೆ. ಯಾರೇ ಆಗಲಿ ತಮ್ಮ ವಿರುದ್ಧ ಮಾತನಾಡಿದರೆ ಅವರ ವಯಸ್ಸು, ಅನುಭವ, ಸ್ತ್ರೀ ಎಂಬುದನ್ನೂ ನೋಡದೆ ಮುಗಿಬಿದ್ದು ಕೊಳಕು ಪದಗಳಿಂದ ಹಲ್ಲೆ ಮಾಡಿ ತೇಜೋವಧೆ ಮಾಡಲಾಗುತ್ತದೆ. ದಿನಂಪ್ರತಿ ಸೈಬರ್ ಠಾಣೆಗಳಿಗೂ ದೂರು ದಾಖಲಾಗುತ್ತಿವೆಯಾದರೂ ಯಾವುದೇ ಪ್ರಯೋಜನವಿಲ್ಲ. ಇಷ್ಟು ದೊಡ್ಡ “ದೊಂಬಿ” ಕಾಳಗವನ್ನು ಯಾರೋ ಕೆಲವರು ಮಾಡಲು ಸಾಧ್ಯವೇ ಇಲ್ಲ. ಸರಕಾರವಿರಲಿ, ರಾಜಕೀಯ ಪಕ್ಷವಿರಲಿ, ಸಂಘ ಸಂಸ್ಥೆಯಿರಲಿ ದೊಡ್ಡ ಪ್ರಮಾಣದ ಬೆಂಬಲ ಇರಲೇಬೇಕು ಎಂಬುದು ಯಾರಿಗಾದರೂ ತಿಳಿದ ವಿಷಯವೇ ಆಗಿದೆ.
ಹೌದು. ಇಂತಹದ್ದೊಂದು ಕಾನೂನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಅನೇಕ ನ್ಯಾಯಾಲಯ ಆದೇಶಗಳ ಬೆಂಬಲವೂ ಇದೆ. ಮಕ್ಕಳ ಅಶ್ಲೀಲತೆ ಕುರಿತಂತೆ 2018ರ ಪ್ರಜ್ವಲಾ ಪ್ರಕರಣ, 2019ರ ಫೇಸ್ಬುಕ್ ಪ್ರಕರಣಗಳಲ್ಲಿ, ಯಾರು ಪೋಸ್ಟ್ ಮಾಡಿದರು ಎಂಬುದನ್ನು ತಿಳಿಯಲು ಸೂಕ್ತ ಮಾರ್ಗಸೂಚಿ ಇರಬೇಕು ಎಂದು ನ್ಯಾಯಾಲಯಗಳು ಅಭಿಪ್ರಾಯಪಟ್ಟಿದ್ದವು. ಈಗಿನ ಸರಕಾರದ ಅವಧಿಯಲ್ಲೆ ರಾಜ್ಯಸಭೆಯಲ್ಲಿ ಈ ಕುರಿತು ಚರ್ಚೆಗಳು ನಡೆದಿದ್ದವು. ವಾಟ್ಸಪ್ನಲ್ಲಿ ಸಂದೇಶಗಳನ್ನು ಸಂಕೇತಕರಣಗೊಳಿಸುವ ವ್ಯವಸ್ಥೆಯನ್ನು ಸಡಿಲಗೊಳಿಸಿ ಸಂದೇಶದ ಮೂಲ ತಿಳಿಯಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ನೇತೃತ್ವದ ರಾಜ್ಯಸಭೆ ಸಮಿತಿಯೇ ಶಿಫಾರಸು ಮಾಡಿತ್ತು. ಆದರೆ ತನ್ನ ವಿರುದ್ಧ ಹಾಗೂ ತಮ್ಮ ನಾಯಕರ ವಿರುದ್ಧ ತಮ್ಮ ತಂಡ ತಡೆಯಲಾಗದಷ್ಟು ಅಪಪ್ರಚಾರ ತೀವ್ರವಾಗಿದೆ ಎನ್ನುವಾಗ ಕೇಂದ್ರ ಸರಕಾರಕ್ಕೆ ಐಟಿ ಕಾನೂನಿನ ನೆನಪಾಗಿದೆ.
ಕಾನೂನು ರೂಪಿಸಿ ಕಂಪನಿಗಳ ಮೇಲೆ ನಿಗಾ ವಹಿಸುವುದು ಒಂದೆಡೆ ಇರಲಿ. ಎಲ್ಲ ಪಕ್ಷಗಳೂ ತಮ್ಮ “ಟ್ರೋಲ್ ಆರ್ಮಿ”ಗಳಿಗೆ ಒಂದಿಷ್ಟು ಸಂಯಮವನ್ನು ಕಲಿಸುತ್ತಾರೆಯೇ? ಸಾಮಾಜಿಕ ಜಾಲತಾಣದಲ್ಲಿ ಸೃಜನಾತ್ಮಕ ಟೀಕೆಗಳನ್ನು ಮಾಡಲು ತಮ್ಮ ಕಾರ್ಯಕರ್ತರಿಗೆ ಪ್ರೋತ್ಸಾಹಿಸುವುದು, ತಪ್ಪು ಸಂದೇಶ ಹರಿಬಿಟ್ಟಿದ್ದಕ್ಕೆ ಆತ್ಮಾವಲೋಕನದ ತರಬೇತಿಯನ್ನು ನೀಡಲು ಸಿದ್ಧವಾಗಿವೆಯೇ?
ಕಡೆಮಾತು:
ಸಾಮಾಜಿಕ ಜಾಲತಾಣಗಳ ಪ್ರಯೋಜನದ ಅರಿವೇ ಇಲ್ಲದ ಸಂದರ್ಭದಲ್ಲಿ, ಅದರ ಲಾಭ ಪಡೆದು ಯಾವುದೇ ಪಕ್ಷ ಅಧಿಕಾರಕ್ಕೆ ಬರುವುದು, ಬಂದಿರುವುದು ತಪ್ಪಲ್ಲ. ಆದರೆ ಅಧಿಕಾರಕ್ಕೆ ಬಂದ ಬಳಿಕ, ಅದರ ಪ್ರಯೋಜನ ಎಲ್ಲರಿಗೂ ಸಿಗುವಂತೆ ಮಾಡುವುದು ಜಾಣತನ. ಅದನ್ನು ಬಿಟ್ಟು, ಜಾಲತಾಣಗಳ ಪ್ರಯೋಜನ ಇತರೆ ಪಕ್ಷಗಳಿಗೂ ಸಿಗುತ್ತಿದೆ ಎಂದೋ, ಜಾಲತಾಣಗಳಿಂದ ತನಗೆ ನಷ್ಟವಾಗುತ್ತಿದೆ ಎಂದೋ ಭಾವಿಸಿ, ಅದರ ಪ್ರಯೋಜನ ಯಾರಿಗೂ ಸಿಗದಂತೆ ಮಾಡಲು ಸರಕಾರ ಮುಂದಾಗುವುದು ಮೂರ್ಖತನವಷ್ಟೆ. ಕೇಂದ್ರ ಸರಕಾರ ರೂಪಿಸುವ ಶಾಸನಗಳಿಗೆ ಇಂಥದ್ದೊಂದು ಜಾಣತನ/ಮೂರ್ಖತನದ ವಿವೇಕ ಇರಬೇಕು,ಹಾಗಿದ್ದರಷ್ಟೇ ಚೆನ್ನ.