ಕೊನೆಯ ಓವರ್‌ನಲ್ಲಿ ಮ್ಯಾಚ್‌ ಗೆಲ್ಲಿಸಬೇಕಾಗಿರುವ ಬೊಮ್ಮಾಯಿ!

ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರಂತೆ ಎಲ್ಲರನ್ನೂ ಒಳಗೊಳ್ಳುವ ಆಡಳಿತ ನಡೆಸಬೇಕಾಗಿದೆ.

ಕರ್ನಾಟಕದಲ್ಲಿ ಆಗಿಹೋಗಿರುವ ಮುಖ್ಯಮಂತ್ರಿಗಳ ಪಟ್ಟಿಯನ್ನು ಒಮ್ಮೆ ಗಮನಿಸಿ ನೋಡಿ. ಅವರು ಆಯ್ಕೆಯಾದ ಬಗೆ, ಸ್ವಭಾವ, ಸಾಮಾಜಿಕ ಹಿನ್ನೆಲೆ, ಜನಪ್ರಿಯತೆ, ಜನಪರತೆ, ಪ್ರತಿನಿಧಿಸಿದ ಪಕ್ಷ , ಕೌಟುಂಬಿಕ ಹಿನ್ನೆಲೆ, ಅವರಿಗೆ ಒಲಿದ ಅದೃಷ್ಟ, ಮಾಡಿ ಹೋಗಿರುವ ಕೆಲಸಗಳು- ಎಲ್ಲವನ್ನೂ ನೋಡಿದಾಗ ಮುಖ್ಯಮಂತ್ರಿಗಳ ಇತಿಹಾಸವೇ ಒಂದು ರೀತಿಯಲ್ಲಿ ರಣರೋಚಕ ಎನಿಸಿಬಿಡುತ್ತದೆ. ಬಹುಸಂಖ್ಯಾತ ಸಮುದಾಯದವರು ಮಾತ್ರವಲ್ಲ, ಯಾರೂ ಊಹಿಸಲು ಸಾಧ್ಯವೇ ಆಗದಂಥ ಅಲ್ಪಸಂಖ್ಯಾತ ಸಮುದಾಯದವರು ಇಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ. ಹೈಕಮಾಂಡ್‌ ಕೃಪೆಗೆ ಒಳಗಾದವರಷ್ಟೇ ಅಲ್ಲ, ಸ್ಥಳೀಯ ನಾಯಕರ ಇಷ್ಟಾನುಸಾರವೂ ಸಿಎಂಗಿರಿಯನ್ನು ಅಲಂಕರಿಸಿದವರೂ ಉಂಟು. ಜನರ ನಡುವೆ ಇದ್ದುಕೊಂಡು, ಹೋರಾಟ ಮಾಡಿ ಮುಖ್ಯಮಂತ್ರಿ ಪಟ್ಟವನ್ನು ಪಡೆದ ಮಹಾನುಭಾವರೂ ಇದ್ದಾರೆ. ಹಾಗಾಗಿ, ಈ ಮುಖ್ಯಮಂತ್ರಿಗಳ ಇತಿಹಾಸ ರೋಚಕ ಆಗಿರುವ ಹೊತ್ತಲ್ಲೇ, ಪ್ರಜಾಪ್ರಭುತ್ವದ ಸೌಂದರ್ಯ, ಸಾಮರ್ಥ್ಯ‌ವೂ ಹೌದು.
ಕರ್ನಾಟಕದ ಮುಖ್ಯಮಂತ್ರಿ ಕುರ್ಚಿಯಲ್ಲಿ ಹಲವರು ಕುಳಿತು ಎದ್ದು ಹೋಗಿದ್ದಾರಾದರೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವವರು ಕೆಲವರು ಮಾತ್ರ. ಈ ಮಹನೀಯರು ಮುಖ್ಯಮಂತ್ರಿ ಹುದ್ದೆಗೆ ತಮ್ಮ ವ್ಯಕ್ತಿತ್ವದ ಮೂಲಕ ಮಹಾಮೆರಗು ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಮಾಡಿರುವ ಜನಪರ ಕೆಲಸಗಳು, ಸಾಮಾಜಿಕ ಸುಧಾರಣೆಗಳು- ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಹೆಚ್ಚಿಸಿವೆ. ಉಳಿದಂತೆ ಒಂದಿಷ್ಟು ಮಂದಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ ಕಾರಣದಿಂದಲೇ, ಒಂದು ವ್ಯಕ್ತಿತ್ವ ಪಡೆದುಕೊಂಡಿದ್ದಾರೆ.
ಬಸವರಾಜ ಬೊಮ್ಮಾಯಿ ಅವರ ರಾಜ್ಯಭಾರ ಶುರುವಾಗಿರುವ ಈ ಹೊತ್ತಲ್ಲಿ ಕರ್ನಾಟಕದ ಕೆಲವು ಮುಖ್ಯಮಂತ್ರಿಗಳ ಬಗ್ಗೆ, ಅವರ ಆಡಳಿತದ ಬಗ್ಗೆ ಮೆಲುಕು ಹಾಕೋಣ. ಏಕೆಂದರೆ, ಇತಿಹಾಸದಿಂದ ಹಾಲಿ ಸಿಎಂ ಮಾತ್ರವಲ್ಲ, ನಾವೆಲ್ಲರೂ ಕಲಿಯಬೇಕಾದ ಪಾಠ ಸಾಕಷ್ಟಿದೆ.
ಭೂ ಸುಧಾರಣೆ, ಜೀತ ಪದ್ಧತಿ ನಿರ್ಮೂಲನೆ, ಋುಣ ಪರಿಹಾರ ಕಾಯಿದೆ, ಕನಿಷ್ಠ ಕೂಲಿ ನಿಗದಿ, ಹಿಂದುಳಿದ ಜಾತಿಗಳಿಗೆ ಮೀಸಲು- ಹೀಗೆ ನಾನಾ ರೀತಿಯ ಸಕಾರಣಗಳಿಗೆ ದೇವರಾಜ ಅರಸು ಹೆಸರು ಇಂದಿಗೂ ಹಸಿರು. ಕರ್ನಾಟಕದ ನೆಲದಲ್ಲಿ ಬಹುದೊಡ್ಡ ಸಾಮಾಜಿಕ ಸುಧಾರಣೆ ಮಾಡಿ, ಸಾಮಾಜಿಕ ನ್ಯಾಯ ಎಂಬ ಪರಿಪಾಲನೆ ಯೋಗ್ಯ ಆಶಯವನ್ನೇ ಚಾಲನೆಗೆ ತಂದ ನೈಜ ಹಾಗೂ ಜನಪರ ಮುಖ್ಯಮಂತ್ರಿ ಎಂದರೆ ಅರಸು ಹೆಸರನ್ನು ಹೇಳಲೇಬೇಕು.
ಅಭಿವೃದ್ಧಿ ಎಂದರೆ ಕೇವಲ ರಸ್ತೆ, ವಿದ್ಯುತ್‌, ನೀರು, ಸಾರಿಗೆ ಸೌಲಭ್ಯ ನೀಡುವುದಷ್ಟೇ ಅಲ್ಲ, ಈ ನಾಗರಿಕ ಸೌಲಭ್ಯ ಇಲ್ಲದ ಕೊಂಪೆಯ ಜನರಿಗೂ ಅನ್ನ-ಅಕ್ಷ ರ-ಅಧಿಕಾರ ನೀಡಿ, ಅವರನ್ನು ಮುಖ್ಯಧಾರೆಗೆ ತರುವುದೂ ಅರಸು ಅಭಿವೃದ್ಧಿಯ ಒಂದು ಮಾದರಿ. ಹೀಗಾಗಿಯೇ ಏನೋ, ಜನ ಕಲ್ಯಾಣದ ಮಾತುಗಳು ಬಂದಾಗಲೆಲ್ಲಾ ಸಹಜವಾಗಿ ಅರಸು ನೆನಪಾಗುತ್ತಾರೆ.
ಅರಸು ನಂತರ ಮುಖ್ಯಮಂತ್ರಿ ಪೀಠಕ್ಕೊಂದು ಹೊಳಪು ತಂದುಕೊಟ್ಟವರು ರಾಮಕೃಷ್ಣ ಹೆಗಡೆ. ಅಚ್ಚರಿಯ ರೀತಿಯಲ್ಲಿ ಹೆಗಡೆ ಮುಖ್ಯಮಂತ್ರಿ ಆದರಾದರೂ, ಒಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಚಾಣಾಕ್ಷ ತೆಯಿಂದಲೇ ಎಲ್ಲವನ್ನೂ ನಿರ್ವಹಿಸಿದರು. ಕರ್ನಾಟಕ ಕಂಡ ಜನಪರ ಮುಖ್ಯಮಂತ್ರಿಗಳ ಸಾಲಲ್ಲಿ ಹೆಗಡೆಯವರೂ ನಿಲ್ಲುತ್ತಾರೆ. ಇದರಲ್ಲಿ ಎರಡನೇ ಮಾತೇ ಇಲ್ಲ. ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಬಲ ನೀಡಿದ್ದು, ಆ ವ್ಯವಸ್ಥೆ ಮೂಲಕವೇ ಅಸಂಖ್ಯಾತ ಸ್ಥಳೀಯ ರಾಜಕೀಯ ನಾಯಕತ್ವವನ್ನು ಕಟ್ಟಿದ್ದು, ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಪ್ರಬಲ ಲೋಕಾಯುಕ್ತವನ್ನು ಜಾರಿಗೆ ತಂದಿದ್ದನ್ನು ಯಾರೂ ಮರೆಯುವಂತಿಲ್ಲ. ವಿದ್ಯಾರ್ಥಿಗಳಿಗೆ ಸಮವಸ್ತ್ರ, ಉಚಿತ ಬಸ್‌ ಪಾಸು, ಬಡಬಗ್ಗರಿಗೆ ಪಡಿತರ, ವಿಧವಾ ವೇತನ ಕಲ್ಪನೆ- ಎಲ್ಲವೂ ಹೆಗಡೆ ಅವರ ಸಮಾಜಮುಖಿ ಚಿಂತನೆಯ ಫಲಿತಾಂಶಗಳೇ. ಅಲ್ಪಸಂಖ್ಯಾತ ಬ್ರಾಹ್ಮಣ ಜಾತಿಗೆ ಸೇರಿದವರಾದರೂ, ಬಲಾಢ್ಯ ಲಿಂಗಾಯತರಿಂದ ಹಿಡಿದು ಸಣ್ಣ-ಪುಟ್ಟ ಜಾತಿ ಜನಾಂಗಗಳು ಕೂಡ ‘ಹೆಗಡೆ ನಮ್ಮ ಮನುಷ್ಯ’ ಎಂದು ಇಷ್ಟಪಡುವಷ್ಟು ದೊಡ್ಡ ಮನುಷ್ಯರೇ ಆಗಿದ್ದರು. ಎಸ್‌. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ ಬಳಿಕ ಲಿಂಗಾಯತ-ವೀರಶೈವ ಸಮುದಾಯವು ಹೆಗಡೆ ಅವರನ್ನು ತನ್ನ ನಾಯಕ ಎಂದು ಒಪ್ಪಿಕೊಂಡಿತ್ತು. ಪ್ರಬಲ ಜಾತಿ ಮಾತ್ರವಲ್ಲದೇ, ಸಣ್ಣ ಪುಟ್ಟ ಸಮುದಾಯಗಳಲ್ಲಿರುವ ನಾಯಕರನ್ನು ಶೋಧಿಸಿ, ಅವರಿಗೆ ಅಧಿಕಾರದ ಅವಕಾಶ ನೀಡಿ ಬೆಳೆಸಿದರು. ಹೀಗೆ ಎಲ್ಲರಿಗೂ ಪ್ರಾತಿನಿಧ್ಯ ನೀಡಿ, ಬೆಳೆಸಿದ ಕಾರಣದಿಂದಲೇ ಅವರು ಸಕಲ ಜಾತಿಗಳಿಗೂ ಸಲ್ಲುವವರಾದರು. ಕೊನೆಕೊನೆಗೆ ಹೆಗಡೆ ಲಿಂಗಾಯತ ಪ್ರಾಬಲ್ಯದ ಉತ್ತರ ಕರ್ನಾಟಕ ಭಾಗದಲ್ಲಿ, ಹಿಂದುಳಿದ ವರ್ಗದ ಪಾಲಿಗೆ, ಮುಸ್ಲಿಂ ಸಮುದಾಯದ ಪಾಲಿಗೂ ಮೇರು ನಾಯಕರಾಗಿದ್ದರು. ಅವರು ಅಳವಡಿಸಿಕೊಂಡಿದ್ದ ಸಾಮಾಜಿಕ ಒಳಗೊಳ್ಳುವಿಕೆ ಎಂಬ ನೀತಿ ಜಾತಿ-ಧರ್ಮ-ಭಾಷೆಯ ಎಲ್ಲೆಯನ್ನು ಮೀರಿತ್ತು.
ರಾಜಕೀಯದಲ್ಲಿ ಆಡುವ ಮಾತಿಗೆ, ನೀಡುವ ಭರವಸೆಗೆ ಯಾವುದೇ ಮೌಲ್ಯ ಇರುವುದಿಲ್ಲ ಎಂಬ ಮಾತು ಜನಜನಿತವಾಗಿ ಬೇರೂರಿದ ಸಂದರ್ಭದಲ್ಲಿ, ತಾವು ಆಡುತ್ತಿದ್ದ ಮಾತಿಗೆ ಬದ್ಧರಾದವರು ಹೆಗಡೆ. ಹಾಗಾಗಿಯೇ ಮೌಲ್ಯಾಧಾರಿತ ರಾಜಕಾರಣವೆಂದರೆ ಹೆಗಡೆ ಎಂಬಷ್ಟರಮಟ್ಟಿಗೆ ಅವರು ಮನೆ ಮಾತಾದರು.
ಹೆಗಡೆ ಅವರ ಬಳಿಕ ವರ್ಚಸ್ಸಿನ ಸಿಎಂ ಎಂದು ಹೆಸರು ಪಡೆದವರು ಎಸ್‌.ಎಂ. ಕೃಷ್ಣ. ವಿಶೇಷವಾಗಿ ನಗರ ಹಾಗೂ ಪಟ್ಟಣ ಪ್ರದೇಶದ ವಿದ್ಯಾವಂತ ಸಮುದಾಯದ ಜನರ ಹೃದಯವನ್ನು ಗೆದ್ದ ಎಸ್‌ಎಂಕೆ ಅವರನ್ನು, ಬೆಂಗಳೂರು ಪ್ರಿಯ, ನಗರವಾಸಿಗಳ ಪ್ರಿಯ, ಐಟಿ-ಬಿಟಿ ವಲಯದ ಆಪ್ತ ಎಂದು ವರ್ಣಿಸುವುದುಂಟು. ಎಸ್‌ಎಂಕೆ ಮುಖ್ಯವಾಗಿ ತಮ್ಮ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಬಹಳ ಉತ್ತೇಜನ ನೀಡಿದರು. ಈ ಕಾರಣಕ್ಕೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು. ಬೆಂಗಳೂರು ಅಭಿವೃದ್ಧಿಗೆ ಟಾಸ್ಕ್‌ ಫೋರ್ಸ್‌ ಮಾಡಿ, ರಾಜಧಾನಿಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದರು. ಫ್ಲೈ ಓವರ್‌ಗಳು, ಮೆಟ್ರೋ- ಇವು ಕೃಷ್ಣ ಕಂಡ ಕನಸು. ಈ ಎಲ್ಲ ಅಗ್ಗಳಿಕೆಯ ಮಾತುಗಳೇ, ಪ್ರಸ್ತಾಪಿತ ಸಂಗತಿಗಳೇ ಕೆಲವರ ದೃಷ್ಟಿಯಲ್ಲಿ ಕೃಷ್ಣ ಕುರಿತಾದ ಟೀಕೆ-ಟಿಪ್ಪಣಿಗಳೂ ಹೌದು. ರೈತರ ಸಂಕಟ ಅರಿಯದ ಸೂಟುಬೂಟಿನ ಕೃಷ್ಣ ಎಂದು ಕೆಲವರು ಟೀಕಿಸಿದರು. ಅಭಿವೃದ್ಧಿ ದೃಷ್ಟಿಯಿಂದ ನೋಡಿದರೆ, ಈ ಮಾತುಗಳಲ್ಲಿ ಸತ್ಯವೂ ಅಡಗಿದೆ. ಅಭಿವೃದ್ಧಿ ಎಂಬುದು ಸಮಗ್ರ ಕರ್ನಾಟಕವನ್ನು ಮುಟ್ಟದೇ, ಬೆಂಗಳೂರು ಕೇಂದ್ರಿತವಾಯಿತು. ಇನ್ನೂ ಹೆಚ್ಚಿನ ಸಮತೋಲಿತ, ಸುಸ್ಥಿರತೆಯ ಅಭಿವೃದ್ಧಿ ಎಲ್ಲ ಕಡೆ ವಿಸ್ತಾರವಾಗಬೇಕಿತ್ತು ಎನಿಸುವುದುಂಟು. ಆದರೆ ಅದೇ ಐಟಿಬಿಟಿ ಕ್ಷೇತ್ರವೇ ಇಂದು ರಾಜ್ಯಕ್ಕೆ ಬಹುಪಾಲು ಆದಾಯವನ್ನು ತಂದುಕೊಡುತ್ತಿದೆ ಎಂಬುದನ್ನು ನಿರಾಕರಿಸುವಂತಿಲ್ಲ. ಕೃಷ್ಣ ಬಳಿಕ ಬಂದ ಮುಖ್ಯಮಂತ್ರಿಗಳು ಹಿಂದೆ ಮುಂದೆ ಯೋಚಿಸದೆ ಘೋಷಿಸುತ್ತಿದ್ದ ಅನೇಕ ಕಲ್ಯಾಣ ಕಾರ್ಯಕ್ರಮಗಳಿಗೆ ಯಥೇಚ್ಚ ಹಣ ಬರುತ್ತಿರುವುದೇ ಕೃಷ್ಣ ಬಿತ್ತಿದ ಐಟಿ-ಬಿಟಿ ಕ್ಷೇತ್ರದಿಂದ. ಎಸ್‌ಎಂಕೆ ಜಾರಿಗೆ ತಂದ ಶಾಲಾಮಕ್ಕಳ ಮಧ್ಯಾಹ್ನದ ಬಿಸಿಯೂಟದ ಯೋಜನೆ ಊಹೆಗೂ ಮೀರಿ ಪರಿಣಾಮಕಾರಿ ಆಯಿತು. ಬಡ ಮಧ್ಯಮ ವರ್ಗದವರ ಮನಗೆದ್ದಿತು. ಆದಾಗ್ಯೂ, ಸೂಟುಬೂಟಿನ ಮುಖ್ಯಮಂತ್ರಿ ಎಂಬ ಹಣೆಪಟ್ಟಿ, ಅದೇ ವರ್ಗದಲ್ಲಿ ಬಲವಾಗಿ ಬೇರೂರಿತ್ತು. ಬಿಸಿಯೂಟದ ಎಸ್‌ಎಂಕೆ ಒಪ್ಪಿದ ಜನ, ಸೂಟಿಬೂಟಿನ ಕೃಷ್ಣ ಅವರನ್ನು ನಿರಾಕರಿಸಿದರು. ಪರಿಣಾಮ, 2004ರ ವಿಧಾನಸಭೆ ಚುನಾವಣೆಯಲ್ಲಿ ಸ್ವತಃ ಕೃಷ್ಣ ಅವರ ಊಹೆಗೂ ಸಿಗದ ಅನಿರೀಕ್ಷಿತ ಸೋಲಿನ ರುಚಿ ಕಂಡರು.
ಇದಕ್ಕೆ ಹೊರತುಪಡಿಸಿ ಹೇಳಬೇಕೆಂದರೆ ಬಂಗಾರಪ್ಪ, ಎಚ್‌. ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಬಿಡಿಬಿಡಿಯಾಗಿ ಕೆಲವು ಜನಪರ ಕಾಯಿದೆಗಳನ್ನು, ಜನಪ್ರಿಯ ಯೋಜನೆಗಳನ್ನು ರಾಜ್ಯದ ಜನತೆಗೆ ನೀಡಿದ್ದಾರೆ. ಬಡಬಗ್ಗರ ಮನೆಗೆ ಬೆಳಕು ನೀಡುವ ಭಾಗ್ಯಜ್ಯೋತಿ ಯೋಜನೆ, ಹತ್ತು ಎಚ್‌ಪಿವರೆಗೆ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಸಂಪರ್ಕ ಇವೆಲ್ಲ ಬಂಗಾರಪ್ಪ ಅವರಿಗೆ ಹೆಸರು ನೀಡಿದವು. ಗ್ರಾಮ ವಾಸ್ತವ್ಯದ ಮೂಲಕ ಕುಮಾರಸ್ವಾಮಿ ಅವರು ಆರಂಭದ ಮೂರು ತಿಂಗಳಲ್ಲಿ ಭರವಸೆ ಮೂಡಿಸಿದರು. ಅದು ಎಷ್ಟರ ಮಟ್ಟಿಗೆ ಎಂದರೆ, ಮುಂದಿನ ಹದಿನೈದು ವರ್ಷ ಇವರೇ ಗಟ್ಟಿ ಎಂದು ಜನಸಾಮಾನ್ಯರೂ ಮಾತನಾಡಿಕೊಂಡಿದ್ದು ಉಂಟು. ಮುಂದೆ ಆದದ್ದನ್ನೂ ಕಣ್ಣಾರೆ ಕಂಡಿದ್ದೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಆರಂಭದಲ್ಲಿ ಅನ್ನ ಭಾಗ್ಯದಂಥ ಯೋಜನೆಗಳ ಮೂಲಕ ಅಹಿಂದ ಸೇರಿದಂತೆ ಎಲ್ಲ ಸಮಾಜದ ಬಡವರನ್ನು ತಲುಪಿದರು. ಆದರೆ, ಕೆಲದಿನಗಳ ಬಳಿಕ ಅವರ ಅಹಿಂದ ಪರ ಯೋಜನೆಗಳು, ವಕಾಲತ್ತಿನ ವರಸೆ ಅದರ ಪರಾಕಾಷ್ಠೆಯನ್ನು ತಲುಪಿತು. ಲಕ್ಷಾಂತರ ಯುವಕರಿಗೆ ಉದ್ಯೋಗ ಸೃಷ್ಟಿಸುವ, ಬೊಕ್ಕಸಕ್ಕೆ ಹೆಚ್ಚು ಆದಾಯ ತರುವ ಐಟಿಬಿಟಿಯಂತಹ ಇಲಾಖೆಗೆ ಆ ಕ್ಷೇತ್ರದ ಹಿಂದೆಮುಂದೆ ಗೊತ್ತಿಲ್ಲದ ಎಸ್‌.ಆರ್‌. ಪಾಟೀಲರನ್ನು ಸಚಿವರಾಗಿಸಿದರು.
ಪಾಟೀಲರು ಸಂಭಾವಿತ, ಹಿರಿಯ ರಾಜಕಾರಣಿ ಎಂಬುದು ನಿಜ. ಆದರೆ ಅದು ಅವರ ಅನುಭವ ದುಡಿಸಿಕೊಳ್ಳುವ ಖಾತೆ ಆಗಿರಲಿಲ್ಲ. ಐಟಿ ಬಿಟಿಯಂಥ ಇಲಾಖೆಯನ್ನೂ ಸಿದ್ದರಾಮಯ್ಯ ತಮ್ಮ ವಿಶಿಷ್ಟ ಸಮಾಜವಾದಿ ಕನ್ನಡಿಯಾದ ‘ಉಳ್ಳವರು- ಇಲ್ಲದವರು’ ಎಂಬುದಾಗಿ ನೋಡುತ್ತಿದ್ದಾರೆ ಎಂಬುದು ಸ್ಪಷ್ಟವಾಯಿತು. ವಿವಿಧ ಉದ್ಯಮಗಳು ರಾಜ್ಯದಿಂದ ಹೊರಹೋದವು, ಇನ್ನು ಅನೇಕರು ಹೊರಹೋಗುವ ಸೂಚನೆ ನೀಡಿದರು. ತಮ್ಮ ಅಧಿಕಾರದ ದ್ವಿತೀಯಾರ್ಧದಲ್ಲಿ ತಮ್ಮ ಹಾವಭಾವ, ಆಲೋಚನೆಯನ್ನೆಲ್ಲ ಬದಲಿಸಿಕೊಂಡು, ಸರ್ವರನ್ನೂ ಒಳಗೊಳ್ಳುತ್ತೇನೆ ಎಂಬ ಸಂದೇಶ ನೀಡಲು ಹೊರಟರು. ಆದರೆ ಅಷ್ಟೊತ್ತಿಗಾಗಲೆ ಸಿದ್ದರಾಮಯ್ಯಗೆ ಅಂಟಿದ್ದ ಹಣೆಪಟ್ಟಿಯನ್ನು ಬದಲಿಸಲು ರಾಜ್ಯದ ಜನರು ಜಪ್ಪಯ್ಯ ಎಂದರೂ ಒಪ್ಪಲಿಲ್ಲ. ಸಿದ್ದರಾಮಯ್ಯ ಆಡಳಿತದ ಕೊನೆಯ ಓವರ್‌ನಲ್ಲಿ ಇಂದಿರಾ ಕ್ಯಾಂಟೀನ್‌ ಎಂಬ ಮಾಂತ್ರಿಕ ದಂಡ ಪ್ರಯೋಗ ಮಾಡಿದರೂ ಪರಿಪೂರ್ಣ ಲಾಭ ತೆಗೆದುಕೊಳ್ಳಲು ಸಮಯಾಭಾವ ಉಂಟಾಗಿದ್ದು ಕಾಂಗ್ರೆಸ್ಸಿಗೆ ಕೈಕೊಟ್ಟಿತು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ ನಿಜ. ಆದರೆ, ಆಡಳಿತ ನಡೆಸಿದ್ದು ಎರಡೇ ಬಾರಿ. ಮೊದಲ ಅವಧಿಯ ಭಾಗ್ಯಲಕ್ಷ್ಮೀ ಬಾಂಡ್‌, ಶಾಲಾ ಮಕ್ಕಳ ಸೈಕಲ್‌ ಜನಪ್ರಿಯ ಯೋಜನೆಗಳಾದರೆ, ಕೈಗಾರಿಕೆ, ಮೂಲ ಸೌಕರ್ಯ ಯೋಜನೆಗಳಿಗೆ ಒತ್ತು ನೀಡಿದ್ದು ಪ್ರಮುಖವಾದವು. ಪ್ರತ್ಯೇಕ ಕೃಷಿ ಬಜೆಟ್‌, ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ಯೋಜನೆಗಳೆಲ್ಲ ಸಾಕಾರಗೊಂಡಿದ್ದು ರಾಜ್ಯದ ಹಣಕಾಸಿನ ಪರಿಸ್ಥಿತಿಯಿಂದಲ್ಲ, ಬಿಎಸ್‌ವೈ ಇಚ್ಛಾಶಕ್ತಿಯಿಂದ ಮಾತ್ರ ಸಾಧ್ಯವಾಗಿದ್ದು. ಎರಡನೇ ಹಂತದ ನಾಯಕರ ಬೆಳೆಸುವ ದೃಷ್ಟಿಯಿಂದಲೂ, ರಾಮಕೃಷ್ಣ ಹೆಗಡೆ ರೀತಿ ಯಡಿಯೂರಪ್ಪನವರು ಸೈ ಅನಿಸಿಕೊಂಡರು. ಆದರೆ ಅವರ ದುದೈರ್ವ, ಮೊದಲ ಮತ್ತು ಎರಡನೇ ಅವಧಿ ಎರಡೂ ಬಾರಿ ಅಧಿಕಾರ ಅರ್ಧಕ್ಕೆ ಮೊಟಕಾಯಿತು. ಸನ್ನಿವೇಶಗಳು ವಿಭಿನ್ನ, ಸೂತ್ರದ ಎಳೆ ಒಂದೇನೆ. ಸಂಕಷ್ಟಗಳಲ್ಲಿ ಬೇಯುತ್ತಲೇ ಗಳಿಸಿದ ಜನಪ್ರಿಯತೆ ಅನನ್ಯವಾದದ್ದು.
ಈಗ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರ್ವ ಶುರುವಾಗಿದೆ. ತಂದೆ ಎಸ್‌.ಆರ್‌. ಬೊಮ್ಮಾಯಿ ಅವರಿಗೂ ಇದೇ ರೀತಿ ಅನಿರೀಕ್ಷಿತವಾಗಿ ಸಿಎಂ ಹುದ್ದೆ ಒಲಿದು ಬಂದಿತ್ತು. ಹೆಗಡೆ ಅವರು ಸೂಚಿಸಿದ ಅಭ್ಯರ್ಥಿ ಎಂಬುದಾಗಿಯೇ ಬೊಮ್ಮಾಯಿ ವಿಧಾನಸೌಧದಲ್ಲಿ ಆಡಳಿತ ಆರಂಭಿಸಿದ್ದರು. ಇಂಥಾ ರಾಜಕೀಯ ಕುಟುಂಬದಿಂದ ಬಂದಿರುವ ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರದ ವಾತಾವರಣ ಹೊಸದಲ್ಲ. ಜನತಾ ಪರಿವಾರ ಮುಖಂಡರ ಕಚ್ಚಾಟ, ಅವರ ಜನಪರ ಯೋಜನೆಗಳು- ಎರಡನ್ನೂ ಮೂವತ್ತು ವರ್ಷಗಳ ಹಿಂದೆಯೇ ನೋಡಿದವರು. ಒಳ್ಳೆಯ ಓದು, ಅಭಿವೃದ್ಧಿ ಪರ ಆಲೋಚನೆ ಎಲ್ಲವೂ ಇದೆ. ಆದರೆ ಈಗ ಬೊಮ್ಮಾಯಿ ಅವರದ್ದು ಕೊನೇ ಓವರಿನಲ್ಲಿ ಬ್ಯಾಟ್‌ ಹಿಡಿದು ಪಂದ್ಯ ಗೆಲ್ಲಿಸಬೇಕಾದ ಸ್ಥಿತಿ. ಅದಕ್ಕೆ ಧಾಂಡಿಗತನವೇ ಬೇಕು. ಡಿಸಿಎಂ ಹುದ್ದೆಯ ಆಕಾಂಕ್ಷಿಗಳು, ಮಂತ್ರಿ ಆಗಬೇಕೆನ್ನುವವರ ದಂಡು, ಎಪ್ಪತ್ತರ ಗಡಿಯಲ್ಲಿದ್ದರೂ ಉಪಮುಖ್ಯಮಂತ್ರಿಯಾಗಲು ಬಯಸುತ್ತಿರುವ ಹಿರಿತಲೆಗಳನ್ನು ಸಂಭಾಳಿಸಬೇಕಿದೆ. ಬಿಜೆಪಿಗೆ ಬಂದು 12 ವರ್ಷ ದಾಟಿದರೂ, ಸಮಾಜವಾದಿ ಹಿನ್ನೆಲೆ ಹೊಂದಿರುವ ಕಾರಣಕ್ಕೆ ಸಂಘ ಪರಿವಾರದ ದೃಷ್ಟಿಯಲ್ಲಿ ಬೊಮ್ಮಾಯಿ ‘ಹೊರಗಿನವರು’ ಎಂದೇ ಬಿಂಬಿತವಾಗಿದ್ದಾರೆ. ಬಿಜೆಪಿಯ ಏಳು ಬೀಳುಗಳನ್ನು ಲೆಕ್ಕಿಸದೆ, ಹಣ ಪದವಿಗೆ ಬೇಡದೆ ಹಗಲಿರುಳು ದುಡಿಯುತ್ತಿರುವ, ಯಡಿಯೂರಪ್ಪನವರ ಭಾಷೆಯಲ್ಲಿಯೇ ಹೇಳುವುದಾದರೆ ‘ದೇವ ದುರ್ಲಭ ಕಾರ್ಯಕರ್ತರು’ ಈ ಆಯ್ಕೆಯಿಂದ ತುಸು ಬೇಸರಗೊಂಡಿರುವುದು ಮೇಲ್ನೋಟಕ್ಕೇ ಕಾಣಿಸುತ್ತಿದೆ. ಮುನಿಸಿಕೊಂಡಿರುವ ಇಂಥ ಸೈದ್ಧಾಂತಿಕ ಕಾರ್ಯಕರ್ತರ ಮನವೊಲಿಸುವುದರ ಜತೆಗೆ, ಅಗ್ರೆಸ್ಸಿವ್‌ ಮನೋಭಾವ ಹೊಂದಿರುವ, ಬಿಜೆಪಿ ಇಲ್ಲಿವರೆಗೆ ಕಂಡಿರದ, ಉಕ್ಕಿನ ಹಿಡಿತದ ಹೈಕಮಾಂಡ್‌ ಜತೆಗೆ ಸಮತೋಲನ ಕಾಯ್ದುಕೊಳ್ಳುವ ಹೊಣೆಯೂ ಬೊಮ್ಮಾಯಿ ಅವರ ಮೇಲಿದೆ. ಪ್ರತಿಪಕ್ಷ ದ ಸ್ಥಾನದಲ್ಲಿರುವ ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿಯವರಂತಹ ಘಟಾನುಘಟಿಗಳನ್ನು ಎದುರಿಸಬೇಕಿದೆ. ಇನ್ನೇನು ಮುಂದಿನ ಚುನಾವಣೆ ಬಳಿಕ ಅಧಿಕಾರ ನಮ್ಮದೇ ಎಂಬ ಹುಮ್ಮಸ್ಸಿನಲ್ಲಿ ಅವರಿದ್ದಾರೆ. ಜತೆಗೆ, ಇನ್ನೂ ಕಡಿಮೆಯಾಗುವ ಮುನ್ಸೂಚನೆ ನೀಡದ ಕೋವಿಡ್‌ ಮೂರನೇ ಅಲೆಯನ್ನು ಹಿಮ್ಮಟ್ಟಿಸುವ ಸವಾಲಿದೆ.
ಇದೆಲ್ಲದರ ನಡುವೆ ಸರಕಾರ ನಡೆಸುವುದು ಸುಲಭದ ತುತ್ತಂತೂ ಅಲ್ಲ. ಈ ಹಿಂದೆ ಸ್ವತಃ ತಾವೇ ಹೋರಾಟ ನಡೆಸಿದ್ದ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ. ಈ ನಡುವೆ, ಕಾವೇರಿ ಕೊಳ್ಳದಲ್ಲಿ ಮೇಕೆದಾಟು ಜಲಾಶಯ ನಿರ್ಮಾಣದ ಕೂಗು, ಅದಕ್ಕೆ ತಮಿಳುನಾಡಿನ ತಕರಾರು ವ್ಯಕ್ತವಾಗಿದೆ. ಪ್ರಗತಿ ಕಾಣದ ಹೈದ್ರಾಬಾದ್‌ ಕರ್ನಾಟಕದ ಜನರ ಅಳಲನ್ನೂ ಆಲಿಸಬೇಕಿದೆ. ಕೋವಿಡ್‌ ಹೊಡೆತದ ಕಾರಣದಿಂದ ಸದ್ಯಕ್ಕೆ ಆರ್ಥಿಕ ಪರಿಸ್ಥಿತಿಯೂ ಚೆನ್ನಾಗಿಲ್ಲ. ಕೇಂದ್ರ ನೆರವೂ ನಿರೀಕ್ಷಿತವಾಗಿಲ್ಲ. ಇದೆಲ್ಲ ಸಾಲದು ಎಂಬಂತೆ, ಪಂಚಮಸಾಲಿಗಳ ಹೋರಾಟದ ಸೊಲ್ಲು ಬೇರೆ. ಇವೆಲ್ಲ ಸಾಮಾನ್ಯ ಸವಾಲುಗಳೇ?
ಜಯಿಸಿ ಬನ್ನಿ ಬಸವರಾಜ ಬೊಮ್ಮಾಯಿಯವರೆ, ಆಲ್‌ ದಿ ಬೆಸ್ಟ್‌ !
ಕೊನೇ ಮಾತು:
ನಾನಾ ಕಾರಣಗಳಿಂದಾಗಿ ನಮ್ಮ ಮುಖ್ಯಮಂತ್ರಿಗಳನ್ನು ಲಿಂಗಾಯತ ಸಿಎಂ, ಒಕ್ಕಲಿಗ ಸಿಎಂ, ಕುರುಬ ಸಿಎಂ ಎಂದೆಲ್ಲಾ ಜಾತಿಯ ಚುಂಗು ಜೋಡಿಸಿ, ಮಾತನಾಡಲಾರಂಭಿಸಿದ್ದೇವೆ. ಇದು ಯಾರಿಗೂ ಮುಜುಗರವನ್ನೇ ತರುತ್ತಿಲ್ಲ. ಮುಖ್ಯಮಂತ್ರಿ ಎಂಬ ಉನ್ನತ ಪದವಿ ಅಲಂಕರಿಸುವವ ಕರುನಾಡಿನ ರಾಜನಾಗಬೇಕೆ ಹೊರತು, ಜಾತಿ, ಜಿಲ್ಲೆಗಳ ನಾಯಕನಾಗಿ ಹೊರಹೊಮ್ಮ ಬಾರದು. ಇದನ್ನು ಅರಸು ಅವರಿಂದ ಕಲಿಯಬೇಕು. ದೇವರಾಜ ಅರಸು ಮುಖ್ಯಮಂತ್ರಿಯಾದ ಹೊಸತು. ಅವರ ಹುಟ್ಟೂರಾದ ಮೈಸೂರು ಜಿಲ್ಲೆ ಹುಣಸೂರು ತಾಲೂಕು ಕಲ್ಲಹಳ್ಳಿಯ ಜನ, ನಾಡಿನ ಸಿಎಂ ಆದ ಊರ ಮಗನನ್ನು ಅಭಿಮಾನದಿಂದ ಸನ್ಮಾನಿಸುತ್ತಾರೆ. ಬಳಿಕ, ತವರಿಗೆ ರಸ್ತೆ, ಆಸ್ಪತ್ರೆ, ಶಾಲೆ ಸೇರಿದಂತೆ ಒಂದಿಷ್ಟು ಸೌಲಭ್ಯಗಳನ್ನು ಕಲ್ಪಿಸಿಕೊಡು ಎಂದು ಬಿನ್ನಹ ಮುಂದಿಡುತ್ತಾರೆ. ಇದಕ್ಕೆ ಅರಸು ನೀಡಿದ ಪ್ರತ್ಯುತ್ತರ: ನಾನು ಕೇವಲ ಕಲ್ಲಹಳ್ಳಿಯ ಅರಸನಲ್ಲ, ಕರ್ನಾಟಕದ ಅರಸು. ಈ ರಾಜ್ಯದ ಎಲ್ಲ ಹಳ್ಳಿಗಳು ನನ್ನವೆ. ಎಲ್ಲ ಸಮುದಾಯದ ಜನರೂ ನನ್ನವರೇ!
 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top