ನ ಖಾನೇ ದೂಂಗಾ ಸಾಕಾರ ಆಗುವುದು ಯಾವಾಗ?

ಭ್ರಷ್ಟರ ಬೇನಾಮಿ ಆಸ್ತಿಯನ್ನು ಸರಕಾರವೇಕೆ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ ಎಂಬುದು ಕುತೂಹಲ!

‘ನ ಖಾನೇ ದೂಂಗಾ’ ಸಾಕಾರ ಆಗುವುದು ಯಾವಾಗ?
ಭ್ರಷ್ಟರ ಬೇನಾಮಿ ಆಸ್ತಿಯನ್ನು ಸರಕಾರವೇಕೆ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ ಎಂಬುದು ಕುತೂಹಲ!
– ಹರಿಪ್ರಕಾಶ್‌ ಕೋಣೆಮನೆ
ನಮ್ಮ ರಾಜ್ಯದಲ್ಲಿ ಲೋಕಾಯುಕ್ತ ಎನ್ನುವ ಸಂಸ್ಥೆಯೊಂದಿತ್ತು. ಅದು ದುಷ್ಟರ ಪಾಲಿಗೆ ಸಿಂಹಸ್ವಪ್ನವಾಗಿತ್ತು. ಪಂಚಾಯಿತಿ ಗುಮಾಸ್ತನೆಂಬ ಎಸ್‌ಎಸ್‌ಎಲ್‌ಸಿ ಕಾರಕೂನನಿಂದ ಹಿಡಿದು ವಿಧಾನಸೌಧದ ಸಚಿವರ ಆಪ್ತ ಕಾರ್ಯದರ್ಶಿ ಎಂಬ ಐಎಎಸ್‌ ಕಾರಕೂನರವರೆಗೆ- ಎಲ್ಲರನ್ನೂ ಬಲಿ ಹಾಕುತ್ತಿತ್ತು. ಅವರೊಬ್ಬರಿದ್ದರು, ವೆಂಕಟಾಚಲ ಎಂಬ ನ್ಯಾಯಮೂರ್ತಿಗಳು. ಅವರು ಲೋಕಾಯುಕ್ತರಾದ ಬಳಿಕ, ಎಲ್ಲ ಕಡೆ ಸರಕಾರಿ ಕಚೇರಿಗಳಿಗೆ ದಾಳಿ ಮಾಡಲಾರಂಭಿಸಿದರು. ಅಂಚೆಯಲ್ಲಿ ಬರುವ 100 ರೂ. ವಿಧವಾ ವೇತನದಲ್ಲೂ 10 ರೂ. ಕಮಿಷನ್‌ ಹೊಡೆಯುತ್ತಿದ್ದ ಪಾಪಿಗಳು, ದೊಡ್ಡ ಆಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಶವ ನೀಡಲು ಹಣ ಕೀಳುತ್ತಿದ್ದ ಕೀಚಕರು, ಪೆಟ್ರೋಲ್‌ ಬಂಕ್‌ನಲ್ಲಿ ಅಳತೆಯ ಪ್ರಮಾಣವನ್ನೇ ಯಾಮಾರಿಸಿ ಪೆಟ್ರೋಲ್‌ ಕದಿಯುತ್ತಿದ್ದ ವಂಚಕರು, ಕಾಡೊಳಗೆ ಕಾಡು ಕಡಿಯದೇ ಕಾಡು ದೋಚುತ್ತಿದ್ದ ಕಾಡುಗಳ್ಳರು, ಸರಕಾರಿ ಹಾಸ್ಟೆಲ್‌ ಗಳಿಗೆ ಪೂರೈಕೆಯಾಗುತ್ತಿದ್ದ ಮೂಟೆಗಟ್ಟಲೆ ದಿನಸಿಯನ್ನೇ ನುಂಗುತ್ತಿದ್ದ ನೀಚರು, ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಪರಮ ಲಂಚಕೋರರು- ಹೀಗೆ ಎಲ್ಲರೂ ತುಸು ಬೆಚ್ಚಿಬೀಳಲಾರಂಭಿಸಿದರು. ಅವರ ನಂತರ ಲೋಕಾಯುಕ್ತಕ್ಕೆ ಬಂದ ಇನ್ನೊಬ್ಬ ಗೌರವಾನ್ವಿತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು, ವೆಂಕಟಾಚಲಯ್ಯ ಅವರ ಸಂಪ್ರದಾಯವನ್ನು ಮತ್ತೊಂದು ಹೆಜ್ಜೆ ದಾಟಿಸಿದರು. ವೆಂಕಟಾಚಲ ಅವರ ರೀತಿ ಅಬ್ಬರವಿಲ್ಲದಿದ್ದರೂ ತಣ್ಣನೆಯ ಸ್ವರದಲ್ಲೆ ಅಧಿಕಾರಸ್ಥ ಪ್ರಮುಖ ರಾಜಕಾರಣಿಗಳು, ಐಎಎಸ್‌, ಐಪಿಎಸ್‌ ಅಧಿಕಾರಿಗಳು ಸೇರಿದಂತೆ ಪವರ್‌ಫುಲ್‌ ಭ್ರಷ್ಟರ ಚಳಿ ಬಿಡಿಸಲಾರಂಭಿಸಿದರು. ಇಂಥದ್ದೊಂದು ಲೋಕಾಯುಕ್ತ ಸಂಸ್ಥೆಯ ದಿಶೆಯಿಂದ ಸರಕಾರವೇ ಬದಲಾಗಿತ್ತು!
ಇದೆಲ್ಲವೂ ಆ ಇಬ್ಬರು ನ್ಯಾಯಮೂರ್ತಿಗಳ ದಂತಕತೆಯಲ್ಲ. 2000ನೇ ಇಸ್ವಿಯಿಂದೀಚೆಗೆ, ಅಂದರೆ ಕಳೆದ ಎರಡು ದಶಕದ ಅವಧಿಯಲ್ಲಿ, ನಮ್ಮೆಲ್ಲರ ಕಣ್ಮುಂದೆ ಘಟಿಸಿ ಹೋದ ಚಿತ್ರಣಗಳು. ದುರದೃಷ್ಟವಶಾತ್‌, ನಾವು ಸಾಕ್ಷಿಯಾದ ಇಂಥ ಘಟನಾವಳಿಗಳು, ನಮ್ಮ ಈಗಿನ ಹಾಗೂ ಮುಂದಿನ ಪೀಳಿಗೆಯ ಮಕ್ಕಳ ಕಿವಿಗೆ ಚೋಟಾ ಭೀಮ್‌ ರೀತಿಯ ಸಾಹಸಮಯ ಕಥೆಗಳ ರೀತಿ ಕೇಳಿಸಬಹುದೇನೋ.
ಇರಲಿ, ನಿನ್ನೆ ಮೊನ್ನೆಯವರೆಗೂ ಭ್ರಷ್ಟರ ತೊಳ್ಳೆ ನಡುಗಿಸುತ್ತಿದ್ದ ಲೋಕಾಯುಕ್ತ ಸಂಸ್ಥೆಯನ್ನು ನಮ್ಮ ರಾಜಕಾರಣಿಗಳು ವ್ಯವಸ್ಥಿತವಾಗಿ ಕರಗಿಸಿದರು. ನಾಗರಿಕರ ಕುಂದುಕೊರತೆಗಳ ಪರಿಹಾರಕ್ಕಾಗಿ, ಸರಕಾರಿ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಹೋಗಲಾಡಿಸಲು ಅಖಂಡ ದೇಶಕ್ಕೆ ಲೋಕಪಾಲ್‌, ರಾಜ್ಯಗಳ ಪಾಲಿಗೆ ಲೋಕಾಯುಕ್ತ ಎಂಬ ಸಂಸ್ಥೆ ಸ್ಥಾಪಿಸಬೇಕೆಂದು ಆಡಳಿತ ಸುಧಾರಣಾ ಆಯೋಗ 1971ರಲ್ಲಿ ಶಿಫಾರಸು ಮಾಡಿತು. ಇದಾದ ಬಳಿಕ ಮೊದಲಿಗೆ ಮಹಾರಾಷ್ಟ್ರದಲ್ಲಿ, ನಂತರ 1979ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದಲ್ಲಿ ಲೋಕಾಯುಕ್ತ ಕಾಯಿದೆ ಮೂಲಕ ತನಿಖಾ ಸಂಸ್ಥೆಯನ್ನು ಸ್ಥಾಪನೆ ಮಾಡಲಾಯಿತು. ಮುಂದೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಲೋಕಾಯುಕ್ತವನ್ನು ಮತ್ತಷ್ಟು ಬಲಪಡಿಸಲಾಯಿತು,
ಸಂವಿಧಾನಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರೇ ಹೇಳಿದಂತೆ, ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಜಾರಿಗೆ ತರಬೇಕಾದವರಲ್ಲಿ ನೈತಿಕತೆ ಇರದಿದ್ದಲ್ಲಿ ಅಂತಹ ಸಂವಿಧಾನದಿಂದ ಉತ್ತಮ ಕಾರ್ಯಗಳು ನಡೆಯುವುದಿಲ್ಲ. ಕೆಟ್ಟ ಸಂವಿಧಾನವಿದ್ದರೂ ಜನರು ಉತ್ತಮರಾಗಿದ್ದರೆ ಒಳ್ಳೆಯ ಕೆಲಸಗಳೇ ಆಗುತ್ತವೆ. ಹಾಗಾಗಿ ಸಂವಿಧಾನದ ಮೇಲೆ ಆರೋಪ ಮಾಡಬಾರದು ಎಂದಿದ್ದರು. ಅದೇ ರೀತಿ, ಉತ್ತಮ ಉದ್ದೇಶ ಹಾಗೂ ನಿಯಮಗಳನ್ನು ಜೋಡಿಸಿಯೇ ಲೋಕಾಯುಕ್ತವನ್ನು ರೂಪಿಸಿದರೂ ಅಂತಹ ಒಂದು ಸಂಸ್ಥೆ ಇದೆ ಎಂಬುದೇ ಜನಸಾಮಾನ್ಯರಿಗೆ 2001ರ ಜುಲೈ 2ರವರೆಗೆ ತಿಳಿದಿರಲಿಲ್ಲ. ನ್ಯಾ. ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕವಾಗಿದ್ದೇ ತಡ, ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಸಂಚರಿಸಿದರು. ಸರಕಾರಿ ಕಚೇರಿಗಳ ಮೇಲೆ, ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ಭ್ರಷ್ಟ ಹಾಗೂ ಆಲಸಿ ಸರಕಾರಿ ನೌಕರರ ವಿರುದ್ಧ ಪ್ರಕರಣ ದಾಖಲಿಸಿದರು. ಭ್ರಷ್ಟಾಚಾರವನ್ನೇ ದಿನನಿತ್ಯ ಕಾಣುತ್ತಿದ್ದ ಜನರ ಕಣ್ಣಲ್ಲಿ ವೆಂಕಟಾಚಲ ಅವರು ದೇವರಾದರು. ಪ್ರತಿ ಬಾರಿ ಒಬ್ಬ ವೈದ್ಯ, ನರ್ಸ್‌, ರೆವಿನ್ಯೂ ಇನ್‌ಸ್ಪೆಕ್ಟರ್‌, ತಹಸೀಲ್ದಾರ್‌, ಫಾರೆಸ್ಟ್‌ ಆಫೀಸರ್‌ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಭ್ರಷ್ಟ ಸರಕಾರಿ ನೌಕರರು, ಅಧಿಕಾರಗಳನ್ನು ಅಮಾನತು ಮಾಡಿದಾಗಲೂ, ಸ್ವತಃ ತಾವೇ ಏನೋ ಗೆದ್ದಂತೆ ಶ್ರೀಸಾಮಾನ್ಯರು ಬೀಗುತ್ತಿದ್ದರು. ತಮ್ಮನ್ನು ಕಾಪಾಡಲು ಒಬ್ಬ ಅವತಾರ ಪುರುಷ ಬಂದ ಎನ್ನುವಷ್ಟು ಸಂತುಷ್ಟರಾಗಿದ್ದರು. ಕೇವಲ ಅಧಿಕಾರಿಗಳ ಪಾಲಿಗೆ ದುಃಸ್ವಪ್ನವಾಗಿದ್ದ ಸಂಸ್ಥೆ ಸಂತೋಷ ಹೆಗ್ಡೆ ಅವರ ಕಾಲದಲ್ಲಿ ಯಾವಾಗ ರಾಜಕಾರಣಿಗಳ ಬುಡಕ್ಕೆ ಬಂದಿತೋ ಆಗ ಎಚ್ಚೆತ್ತಕೊಂಡರು. ಓಹೋ ಈ ಸಂಸ್ಥೆ ಇದ್ದರೆ ತಮಗೆಲ್ಲ ಅಪಾಯ ಎಂದರಿತರು. ದೇವರಾಜ ಅರಸು ಅವರ ಕಾಲದಲ್ಲಿ ಸ್ಥಾಪನೆಯಾಗಿ, ರಾಮಕೃಷ್ಣ ಹೆಗಡೆ ಕಾಲದಲ್ಲಿ ಬಲಗೊಂಡಿದ್ದ ಲೋಕಾಯುಕ್ತ ಸಂಸ್ಥೆಯನ್ನು ಅವರಿಬ್ಬರ ಪರಂಪರೆಯೊಂದಿಗೆ ಗುರುತಿಸಿಕೊಳ್ಳಲು ಯತ್ನಿಸುವ ಸಿದ್ದರಾಮಯ್ಯ ಅವರೇ ಸಂಸ್ಥೆಯನ್ನು ನಾಮ್‌ಕೆವಾಸ್ತೆ ಉಳಿಸಿ, ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಎಂಬ ಸಂಸ್ಥೆ ಸ್ಥಾಪಿಸಿದರು. 2016ರಲ್ಲಿ ಅಸ್ತಿತ್ವಕ್ಕೆ ಬಂದ ಎಸಿಬಿ ಎಂಬ ಸಿದ್ದರಾಮಯ್ಯನವರ ಕೂಸಿಗೆ ಕಳೆದ ಐದು ವರ್ಷದಲ್ಲಿ ಒಬ್ಬ ಭ್ರಷ್ಟ ಅಧಿಕಾರಿಗೂ ಶಿಕ್ಷೆ ಕೊಡಿಸಲು ಸಾಧ್ಯವಾಗಿಲ್ಲ! ಗುಪ್ತಚರ ಅಥವಾ ಸಾರ್ವಜನಿಕ ದೂರುಗಳ ಆಧಾರದಲ್ಲಿ ಅಧಿಕಾರಿಗಳ ಮೇಲೆ ದಾಳಿ ಮಾಡುವುದು, ಒಂದೆರಡು ದಿನ ಮಾಧ್ಯಮಗಳಲ್ಲಿ ಸುದ್ದಿಗೆ ಆಹಾರ ಒದಗಿಸುವುದು, ಮತ್ತೆ ಮನೆಗೆ ತೆರಳುವುದು. ಇಷ್ಟಕ್ಕೆ ಎಸಿಬಿ ಸೀಮಿತವಾಗಿದೆ. ಎಲ್ಲ ರಾಜಕಾರಣಿಗಳೂ ಈಗ ಸೇಫ್‌. ಅವರೆಲ್ಲರೂ ಸಿದ್ದರಾಮಯ್ಯ ಅವರಿಗೆ ಥ್ಯಾಂಕ್ಸ್‌ ಹೇಳುತ್ತಲೇ ಇರಬೇಕು. ಕರ್ನಾಟಕದ ಇತರೆ ರಾಜಕಾರಣಿಗಳಿಗೆ ಹೋಲಿಸಿದರೆ, ಅಧಿಕಾರದಲ್ಲಿದ್ದಾಗ ಕೈ ಬಾಯಿಯನ್ನು ತುಸು ಶುದ್ಧವಾಗಿಟ್ಟುಕೊಂಡಿದ್ದ ಸಿದ್ದರಾಮಯ್ಯ ಅವರೇ ತಮ್ಮ ಅವಧಿಯಲ್ಲಿ ಲೋಕಾಯುಕ್ತ ದುರ್ಬಲಗೊಳಿಸಿ ಎಸಿಬಿ ಸ್ಥಾಪಿಸಿದ್ದು ಮಾತ್ರ ಈ ಹೊತ್ತಿಗೂ ಸೋಜಿಗವೇ!
ತಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಕೂಡಲೆ ಲೋಕಾಯುಕ್ತ ಬಲಪಡಿಸುತ್ತೇವೆ ಎಂದು 2018ರ ಸಾರ್ವತ್ರಿಕ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ವಾಗ್ದಾನ ನೀಡಿದ್ದ ಬಿಜೆಪಿಯೂ ನೀಡಿದ ವಚನವನ್ನೇ ಮರೆತು, ಆಡಳಿತ ನಡೆಸುತ್ತಿದೆ. ಅಂತಿಮವಾಗಿ ರಾಜಕಾರಣಿಗಳೆಲ್ಲರೂ ಒಂದೇ ಜಾತಿ ಅಲ್ಲವೇ? ತಮ್ಮೆಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ಲೋಕಾಯುಕ್ತ ಹಾಗೂ ಎಸಿಬಿ ಸಂಸ್ಥೆಗಳನ್ನು ಹಲ್ಲಿಲ್ಲದ ಹಾವುಗಳಂತೆ, ಶಸ್ತ್ರಾಸ್ತ್ರವಿಲ್ಲದ ಬರಿಗೈ ಯೋಧರಂತೆ ನಿರ್ವಹಿಸಲಾರಂಭಿಸಿದ್ದಾರೆ. ಐಎಎಸ್‌ ಕಾರ್ಯದರ್ಶಿಯಿಂದ ಹಿಡಿದು ಎಸ್‌ಎಸ್‌ಎಲ್‌ಸಿ ಕಾರಕೂನರವರೆಗೂ ಹಬ್ಬಿರುವ ಭ್ರಷ್ಟ ನೌಕರರ ಬೃಹತ್‌ ಜಾಲಕ್ಕೂ ಇದೇ ಬೇಕು. ಭುಸುಗುಡುವ ಹಾವನ್ನೂ ಭುಸುಗುಡದಂತೆ ಮಾಡುತ್ತೇವೆ ಎಂದರೆ ಯಾರು ಏಕೆ ನಿರಾಕರಿಸುತ್ತಾರೆ? ಇದರ ಪರಿಣಾಮವೇ- ಭ್ರಷ್ಟಾಚಾರದ ದುಡ್ಡು ಸಂಗ್ರಹಿಸಲು ಸರಕಾರಿ ನೌಕರರು ಸೋರುವ ಪೈಪುಗಳನ್ನೇ ಉಗ್ರಾಣವಾಗಿಸಿಕೊಂಡಿದ್ದಾರೆ!
ಇನ್ನೂ ಲೋಕಪಾಲ್‌ ಕಡೆ ಗಮನಹರಿಸೋಣ. 2018ರ ಕರ್ನಾಟಕ ವಿಧಾನಸಭೆ ಹಾಗೂ 2019ರ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಹತ್ತಾರು ಬೃಹತ್‌ ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದರು. ಭಾರತದ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರವನ್ನು ಹೋಗಲಾಡಿಸಲು ಒಬ್ಬ ಮಹಾಪುರುಷ ಸಿಕ್ಕ ಎನ್ನುವ ಭಾವನೆ ಜನರಿಗೆ ಇತ್ತು. ಮೋದಿ ಅವರು ಭ್ರಷ್ಟಾಚಾರವನ್ನು ತಡೆಗಟ್ಟುವುದಷ್ಟೆ ಅಲ್ಲ, ಅಭಿವೃದ್ಧಿ ಯೋಜನೆಗಳಲ್ಲಿ ಅವರೆಂದೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ನಂಬಿಕೆಯನ್ನು ಜನರು ಹೊಂದಿದ್ದರು. ಪ್ರಮುಖವಾಗಿ ಅವರು ಹೇಳುತ್ತಿದ್ದ ‘ನಾ ಖಾವೂಂಗಾ- ನಾ ಖಾನೇ ದೂಂಗಾ’(ನಾನೂ ಲಂಚ ಸ್ವೀಕರಿಸುವುದಿಲ್ಲ, ಇತರರು ಲಂಚ ಸ್ವೀಕರಿಸಲೂ ಬಿಡುವುದಿಲ್ಲ) ಎಂಬ ಮಾತು ದೊಡ್ಡ ಘೋಷಣೆಯಾಗಿ ಪ್ರಸಿದ್ಧವಾಯಿತು.
ನಾನು ತಿನ್ನಲಾರೆ ಎಂಬ ಮೋದಿ ಅವರ ಘೋಷಣೆಯ ಮೊದಲರ್ಧ ಮಾತಿನ ಬಗ್ಗೆ ಈಗಲೂ ಜನರಿಗೆ ವಿಶ್ವಾಸವಿದೆ. ವೈಯಕ್ತಿಕವಾಗಿ ಅವರ ವಿರುದ್ಧ ಭ್ರಷ್ಟಾಚಾರದ ಒಂದೇ ಆಪಾದನೆಯನ್ನೂ ಇಲ್ಲಿವರೆಗೆ ಯಾರೂ ಮಾಡಿಲ್ಲ. ರಾಜಕೀಯ ಕಾರಣಕ್ಕಾಗಿ ಆರೋಪ ಕೇಳಿಬಂದರೂ, ಜನ ಅದನ್ನು ನಂಬಿಲ್ಲ. ಆದರೆ ಒಬ್ಬ ನಾಯಕ ತಾನೊಬ್ಬ ಪ್ರಾಮಾಣಿಕನಾಗಿ, ಶುದ್ಧವಾಗಿ ಉಳಿದರೆ ಸಾಲದು, ತಾನು ಮುನ್ನಡೆಸುವ ತಂಡವನ್ನೂ, ಅಲ್ಲಿನ ಸದಸ್ಯರನ್ನು ತನ್ನಂತೆ ಪ್ರಾಮಾಣಿಕವಾಗಿರುವಂತೆ ನೋಡಿಕೊಳ್ಳಬೇಕು. ಆತನಷ್ಟೇ ನೈಜ ನಾಯಕ. ಈ ನೆಲೆಯಲ್ಲಿ ನಾಯಕ ಮೋದಿ ಅವರನ್ನು ನೋಡಿದರೆ, ನಿರಾಶೆಯಾಗುತ್ತದೆ. ಅವರ ಸುತ್ತಮುತ್ತ ಇರುವವರು, ಎಡಬಲದಲ್ಲಿ ಸುಳಿದಾಡುವವರು, ಅವರದೇ ಪಕ್ಷ ದ ಆಳ್ವಿಕೆ ಇರುವ ರಾಜ್ಯಗಳಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ಮೋದಿಯವರು ನೋಡಬೇಕಲ್ಲವೇ?
2018ರ ಚುನಾವಣೆ ವೇಳೆ ಪ್ರಧಾನಿಯವರು, ಕರ್ನಾಟಕದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರವನ್ನು ‘‘ಟೆನ್‌ ಪರ್ಸೆಂಟ್‌ ಸರಕಾರ’’ ಎಂದು ಜರಿದರು. ಅಂದರೆ, ಯಾವುದೇ ಟೆಂಡರ್‌ ಪಡೆಯಲು ಅಥವಾ ಸೇವೆಯನ್ನು ಒದಗಿಸುವ ಗುತ್ತಿಗೆ ಸ್ವೀಕರಿಸಲು ಸರಕಾರದ ನೇತೃತ್ವ ವಹಿಸಿದವರಿಗೆ, ಸರಕಾರಿ ನೌಕರರಿಗೆ ಶೇ.10ರವರೆಗೆ ಲಂಚ ನೀಡಬೇಕು ಎಂಬ ಕೆಟ್ಟ ವಾತಾವರಣವಿದೆ ಎಂಬುದು ಮೋದಿ ಅವರ ಆರೋಪವಾಗಿತ್ತು. ಇದು ಜನರಿಗೆ ಬೇಗನೆ ಮುಟ್ಟಿತು.
ಹಾಗೆ ನೋಡಿದರೆ, ಈ ಪರ್ಸೆಂಟೇಜ್‌ ವ್ಯವಹಾರ ಹಿಂದಿನ ಎಲ್ಲ ಸರಕಾರಗಳ ಕಾಲದಲ್ಲಿಯೂ ಇತ್ತು. ಪ್ರಮಾಣದಲ್ಲಿ ವ್ಯತ್ಯಾಸವಿದ್ದೀತೇನೋ. ಮೋದಿ ಅವರ ಹೇಳಿಕೆಯನ್ನು ಜನ ಮನಸ್ಸಿಗಿಳಿಸಿಕೊಂಡಿದ್ದು, ಅವರು ತಮಗೆ ಗೊತ್ತಿಲ್ಲದ ಹೊಸದೇನೋ ಸಂಗತಿಯನ್ನು ಹೇಳಿದರು ಎಂದಲ್ಲ. ಈ ಮನುಷ್ಯನಾದರೂ ಇದನ್ನೆಲ್ಲಾ ಬಗೆಹರಿಸಬಲ್ಲರು ಎನ್ನುವ ಕಾರಣದಿಂದಷ್ಟೇ!
ಇರಲಿ, ಮೂರೂವರೆ ವರ್ಷದ ಹಿಂದಿನ ವಿಚಾರ ಒತ್ತಟ್ಟಿಗಿರಲಿ. ಈಗೇನಾಗಿದೆ ನೋಡಿ. ಇತ್ತೀಚೆಗೆ ಕರ್ನಾಟಕದ ಗುತ್ತಿಗೆದಾರರ ಸಂಘವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದೆ. ಪತ್ರದಲ್ಲಿರುವಂತೆ, ಲೋಕೋಪಯೋಗಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಆರೋಗ್ಯ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಟೆಂಡರ್‌ ಅನುಮೋದನೆಯಿಂದ ಆರಂಭವಾಗಿ, ಕಾಮಗಾರಿ ಮುಕ್ತಾಯದ ನಂತರ ಬಿಲ್‌ ಪಾವತಿಗಾಗಿ ಅಧಿಕಾರಿಗೆ ನೀಡುವ ಲಂಚದವರೆಗೆ ಶೇ.50ರವರೆಗೆ ಕಮಿಷನ್‌ ರೂಪದಲ್ಲಿ ಲಂಚ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರು ದೂರಿದ್ದಾರೆ. ಪರ್ಸಂಟೇಜ್‌ ಪ್ರಮಾಣ ಶೇ.10ರಿಂದ ಶೇ.50ಕ್ಕೆ ಜಿಗಿದಿದೆ. ಕಮಿಷನ್‌ ಹೆಚ್ಚಾದಷ್ಟು ಎರಡು ರೀತಿಯ ನಷ್ಟವಾಗುತ್ತದೆ. ಮೊದಲನೆಯದಾಗಿ, ಅರ್ಧದಷ್ಟು ಹಣವನ್ನು ಲಂಚವಾಗಿ ನೀಡಬೇಕಿರುವ ಕಾರಣಕ್ಕೆ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯವೇ ಇಲ್ಲ. ನಾಲ್ಕು ವರ್ಷ ಬರಬೇಕಾದ ರಸ್ತೆ ಎರಡೇ ವಾರಕ್ಕೆ ಕಿತ್ತುಬರುತ್ತದೆ. 100 ವರ್ಷ ಬಾಳಿಕೆ ಬರಬೇಕಾದ ಕಟ್ಟಡ ಎರಡೇ ವರ್ಷಕ್ಕೆ ಉರುಳಿ ಬೀಳುತ್ತದೆ. ಇದರಿಂದ ತೊಂದರೆ ಅನುಭವಿಸುವವರು ಸಾರ್ವಜನಿಕರು. ಎರಡನೆಯದಾಗಿ, ಉತ್ತಮ ಗುಣಮಟ್ಟ ನೀಡಬೇಕಾದ ಗುತ್ತಿಗೆದಾರರು, ಕಾಮಗಾರಿ ಮೊತ್ತಕ್ಕಿಂತ ದುಪ್ಪಟ್ಟು ಹಣಕ್ಕೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಅಂದರೆ ಸಾರ್ವಜನಿಕ ಖಜಾನೆಯಿಂದ ಎರಡರಷ್ಟು ಹಣ ಖರ್ಚಾದಂತಾಯಿತು. ಇಲ್ಲಿಯೂ ಅಂತಿಮವಾಗಿ ನಷ್ಟದ ಬರೆ ಎಳೆಸಿಕೊಳ್ಳುವವರು ಶ್ರೀಸಾಮಾನ್ಯರೆ.
ರಾಜ್ಯದಲ್ಲಿ ‘ಕರ್ನಾಟಕ ಪಾರದರ್ಶಕ ಸಾರ್ವಜನಿಕ ಸಂಗ್ರಹಣಾ ಕಾಯಿದೆ’ಯನ್ನು ಜಾರಿ ಮಾಡಲಾಗಿದೆ. ಸಂಕ್ಷಿಪ್ತವಾಗಿ ಇದನ್ನು ಕೆಟಿಪಿಪಿ ಕಾಯ್ದೆ ಎನ್ನಲಾಗುತ್ತದೆ. ಗುತ್ತಿಗೆ ನೀಡಿಕೆಯಲ್ಲಿ ನಡೆಯುತ್ತಿದ್ದ ಸ್ವಜನ ಪಕ್ಷ ಪಾತವನ್ನು ಹೋಗಲಾಡಿಸಿ ಪಾರದರ್ಶಕತೆ ಮೂಡಿಸಲು ಬಹುಶಃ ದೇಶದಲ್ಲೆ ಮೊದಲ ಬಾರಿಗೆ ಕರ್ನಾಟಕ ಈ ಕಾಯ್ದೆಯನ್ನು ಜಾರಿ ಮಾಡಿತು. ಇದರ ಅನ್ವಯ ಟೆಂಡರ್‌ನ ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ ಆಗಿರುತ್ತದೆ. ಬಿಡ್ಡರ್‌ಗಳು ಸಲ್ಲಿಸಿರುವ ತಾಂತ್ರಿಕ ಪ್ರಸ್ತಾವನೆ ಹಾಗೂ ಆರ್ಥಿಕ ಪ್ರಸ್ತಾವನೆಯನ್ನು ಪರಿಶೀಲಿಸಿ ಟೆಂಡರ್‌ ನೀಡಲಾಗುತ್ತದೆ. ಮೇಲ್ನೋಟಕ್ಕೆ ಕಾಯಿದೆ ಪಾರದರ್ಶಕವಾಗಿಯೇ ಇದೆ. ಆದರೆ ಅದರಲ್ಲಿ ಒಂದು ವಿನಾಯಿತಿ ಇದೆ. ತುರ್ತು ಸಂದರ್ಭದಲ್ಲಿ, ಕೆಟಿಪಿಪಿ ಕಾಯ್ದೆ ರೀತ್ಯ ಟೆಂಡರ್‌ ಆಹ್ವಾನಿಸಿ ಪರಿಶೀಲಿಸಿ ಗುತ್ತಿಗೆ ನೀಡುವುದು ಸಾಧ್ಯವಾಗದು. ಎರಡನೆಯದಾಗಿ, ಕೆಲವು ವಿಶಿಷ್ಟ ಉತ್ಪನ್ನಗಳನ್ನು ಒಬ್ಬರೇ ಉತ್ಪಾದನೆ ಮಾಡುತ್ತಿದ್ದರೆ, ಟೆಂಡರ್‌ ಆಹ್ವಾನಿಸುವುದು ವ್ಯರ್ಥವಾಗುತ್ತದೆ. ಹೀಗಾಗಿ, ಇಂತಹ ವಿಶೇಷ ಪ್ರಕರಣಗಳಲ್ಲಿ ಕೆಟಿಪಿಪಿ ಕಾಯಿದೆಯಿಂದ ವಿನಾಯಿತಿ ನೀಡಿ, ನೇರವಾಗಿ ಗುತ್ತಿಗೆದಾರರಿಂದ ಉತ್ಪನ್ನ ಅಥವಾ ಸೇವೆ ಪಡೆಯಬಹುದು ಎಂದು ತಿಳಿಸಲಾಗಿದೆ.
ಕಾಯಿದೆಯ ಇಂಥ ವಿನಾಯಿತಿಗಳಡಿ ಆಶ್ರಯ ಪಡೆದುಕೊಳ್ಳುವ ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳು, ರಸ್ತೆ, ಸೇತುವೆ ನಿರ್ಮಾಣದಂತಹ ದೀರ್ಘಕಾಲೀನ ಯೋಜನೆಗಳಿಗೂ ವಿನಾಯಿತಿ ಪಡೆದು ತಮಗೆ ಇಷ್ಟ ಬಂದವರಿಗೆ ಗುತ್ತಿಗೆ ನೀಡುತ್ತಿದ್ದಾರೆ.
ಇನ್ನೂ ಒಂದು ಆಘಾತಕಾರಿ ವಿಚಾರವೆಂದರೆ, ಕೆಟಿಪಿಪಿ ಕಾಯಿದೆ ಅನ್ವಯ ಗುತ್ತಿಗೆ ನೀಡಲು ಬಳಸುವ ಇ-ಪ್ರೊಕ್ಯೂರ್ಮೆಂಟ್‌ ಪೋರ್ಟಲ್‌ ಹ್ಯಾಕ್‌ ಮಾಡಿರಬಹುದು ಎಂಬ ಕೆಲವರ ಅನುಮಾನ. ಈಗಾಗಲೆ ಬಿಡ್‌ ಸಲ್ಲಿಸಿರುವವರ ಮಾಹಿತಿಯನ್ನು ಕಲೆ ಹಾಕಿದರೆ, ಅದಕ್ಕಿಂತ ಕಡಿಮೆ ಮೊತ್ತಕ್ಕೆ ಬಿಡ್‌ ಸಲ್ಲಿಸಿ ಗುತ್ತಿಗೆಯನ್ನು ತಮಗೆ ಪಡೆಯಬಹುದು. ಈಗಾಗಲೆ ಕ್ರಿಪ್ಟೊಕರೆನ್ಸಿ ಹಗರಣ ಆರೋಪದಲ್ಲಿ ಬಂಧಿತನಾಗಿರುವವನ ನೆರವನ್ನೇ ಭ್ರಷ್ಟರು ಪಡೆದಿದ್ದಾರೆ ಎಂದು ತನಿಖಾ ಸಂಸ್ಥೆಗಳೇ ಹೇಳಿವೆ.
ಇದೆಲ್ಲವೂ, ತಿನ್ನಲು ಬಿಡಲಾರೆ ಎಂಬ ಘೋಷಣೆಯ ಹರಿಕಾರ ಪ್ರಧಾನಿಗೆ ಗೊತ್ತಿಲ್ಲವೇ? ಗೊತ್ತಿದ್ದರೂ ಸುಮ್ಮನಿರುವುದೇಕೆ?
ಭ್ರಷ್ಟರ ವಿರುದ್ಧ ದಾಳಿ ಮಾಡಲು ಹಾಗೂ ಸರಕಾರದ ಲೆಕ್ಕಪತ್ರಗಳನ್ನು ಸುಸ್ಥಿತಿಯಲ್ಲಿಡಲು ಅನೇಕ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಅಪರಾಧ ಪ್ರಕರಣಗಳಿಗೆ ಸಿಬಿಐ ಸಂಸ್ಥೆ ಇದ್ದರೆ ಇತರೆ ಹಣಕಾಸು ವಿಶಿಷ್ಟ ಸಂದರ್ಭಗಳಲ್ಲಿ ಜಾರಿ ನಿರ್ದೇಶನಾಲಯ(ಇಡಿ), ಆದಾಯ ತೆರಿಗೆ ಇಲಾಖೆ(ಐಟಿ), ಕೇಂದ್ರ ಮಹಾ ಲೇಖಪಾಲರು(ಸಿಎಜಿ), ಕೇಂದ್ರ ವಿಚಕ್ಷ ಣಾ ದಳ(ಸಿವಿಸಿ) ಸಂಸ್ಥೆಗಳಿವೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರವು 2ಜಿ ತರಂಗಾಂತರ ಹರಾಜಿನಲ್ಲಿ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ರೂ. ನಷ್ಟವಾಗುವಂತೆ ಮಾಡಿ ಖಾಸಗಿ ವ್ಯಕ್ತಿಗಳಿಗೆ ಲಾಭ ಮಾಡಿಕೊಟ್ಟಿದೆ ಎಂಬುದನ್ನು ಸಿಎಜಿ ವರದಿಯಲ್ಲಿ ನಮೂದಿಸಲಾಗಿತ್ತು. ಇದೇ ವಿಚಾರವನ್ನು ಚುನಾವಣೆಯಲ್ಲೂ ಪ್ರಸ್ತಾಪಿಸಿದ ಬಿಜೆಪಿ, ತನ್ನನ್ನು ಭ್ರಷ್ಟಾಚಾರದ ವಿರೋಧಿ ಎಂದು ಬಿಂಬಿಸಿಕೊಂಡಿತು. ಆದರೆ ತಾನು ಅಧಿಕಾರಕ್ಕೆ ಬಂದ ನಂತರ ಮಾಡುತ್ತಿರುವುದೇನು? ಕರ್ನಾಟಕದಲ್ಲಿ ಎಸಿಬಿ ದಾಳಿಗಳಂತೂ ಮಕ್ಕಳಾಡುವ ಕಳ್ಳ-ಪೊಲೀಸ್‌ ಆಟದಂತಿವೆ. ಇದೆಲ್ಲವೂ ನೆಪಮಾತ್ರಕ್ಕೆ ನಡೆಯುವ ಆಟ ಎಂದು ಸಿಕ್ಕಿಬೀಳುವ ಭ್ರಷ್ಟರಿಗೂ, ದಾಳಿ ನಡೆಸುವ ಎಸಿಬಿ ಪೊಲೀಸರಿಗೂ ತಿಳಿದಿದೆ! ಆಟದಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗುವುದು ಹೇಗೆ?
ನಿಜ, ಭ್ರಷ್ಟಾಚಾರ ಎಂಬ ರೋಗ ಸಮಾಜದಲ್ಲಿ ಮೊದಲಿನಿಂದಲೂ ಇದೆ. ಇದರ ಮೂಲ ಕಾರಣ ಸರಕಾರದ ವ್ಯವಸ್ಥೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಮೂಲದಲ್ಲಿ ಸರಿಯಾದರೆ, ಸಮಾಜದ ಅರ್ಧದಷ್ಟಾದರೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರುತ್ತದೆ. ಇದೊಂದು ರೀತಿ ರೋಗನಿಯಂತ್ರಿಸುವ ಬದಲು, ರೋಗವೇ ಬರದಂತೆ ತಡೆಯುವ ಸಾಮಾನ್ಯ ವಿವೇಕ.
ಮೊದಲೇ ಹೇಳಿದಂತೆ, ವೈಯಕ್ತಿಕವಾಗಿ ಪ್ರಧಾನಿಯವರ ಮೇಲೆ ಜನರಿಗೆ ನಂಬಿಕೆ ಇರಬಹುದು. ಅವರು ಭ್ರಷ್ಟ ಹಣ ಮುಟ್ಟಿದ್ದಾರೆ ಎಂದು ಎಷ್ಟೇ ದೊಡ್ಡ ವ್ಯಕ್ತಿ ಬಂದು ಹೇಳಿದರೂ ನಾಗರಿಕರು ನಂಬುವುದಿಲ್ಲ. ಇದೇ ಕಾರಣಕ್ಕೆ, ನೋಟು ಅಮಾನ್ಯೀಕರಣದ ನಂತರ ಎಷ್ಟೇ ಸಂಕಷ್ಟ ಅನುಭವಿಸಿದರೂ ಪ್ರಧಾನಿ ವಿರುದ್ಧ ಜನರು ದಂಗೆ ಏಳಲಿಲ್ಲ. ತಮ್ಮದೇ ದುಡ್ಡಿಗೆ ದಿನಗಟ್ಟಲೆ ಬ್ಯಾಂಕ್‌ ಎದುರು ನಿಲ್ಲಬೇಕಾದರೂ, ಪ್ರಧಾನಿಯವರು ದೇಶದ ಒಳಿತಿಗಾಗಿ ಮಾಡಿದ್ದಾರೆ ಎಂದೇ ಕಷ್ಟ ಸಹಿಸಿಕೊಂಡರು. ಆದರೆ, ಮೋದಿ ಅವರ ಘೋಷಣೆಯ ಎರಡನೇ ಭಾಗವಾದ, ‘ನಾ ಖಾನೆ ದೂಂಗಾ’ ಎಂಬ ವಿಚಾರದಲ್ಲಿ ಮಾತ್ರ ಜನರಿಗೆ ಅಪನಂಬಿಕೆ ಶುರುವಾಗಿದೆ. ಅಭೂತಪೂರ್ವ ಎರಡನೇ ಗೆಲುವಿನ ನಂತರವೂ ಭ್ರಷ್ಟಾಚಾರ ತಡೆ ವಿಚಾರದಲ್ಲಿ ಕೇಂದ್ರ ಸರಕಾರ ಹೆಚ್ಚು ಗಂಭೀರತೆ ವಹಿಸಿದಂತೆ ತೋರುತ್ತಿಲ್ಲ. ಲೋಕಪಾಲ್‌ ವ್ಯವಸ್ಥೆ ಜಾರಿಗೆ ಬಂದು ಎರಡೂವರೆ ವರುಷ ಕಳೆದರೂ, ಅಂಥದ್ದೊಂದು ಸಂಸ್ಥೆ ಇದೆ ಎಂಬುದೇ ಯಾರ ಅರಿವಿಗೂ ಬಂದಿಲ್ಲ. ಭ್ರಷ್ಟರಿಂದ ವಶಪಡಿಸಿಕೊಂಡ, ಭ್ರಷ್ಟರ ಬೇನಾಮಿ ಆಸ್ತಿಯನ್ನು ಸರಕಾರವೇಕೆ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ ಎಂಬುದು ಶ್ರೀಸಾಮಾನ್ಯರ ಸಹಜ ಕುತೂಹಲ. ಹಾಗಾಗಿ, ‘ನಾ ಖಾನೆ ದೂಂಗಾ’ ಎಂಬುದು ಯಾವಾಗ ಸಾಕಾರಗೊಳ್ಳುತ್ತದೆ ಎನ್ನುವುದನ್ನು ಜನ ಎದುರು ನೋಡುತ್ತಿದ್ದಾರೆ.

 

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top