ಕೊರೊನೋತ್ತರ ಬದುಕು ಎಂಬುದಿಲ್ಲ,ಅದರೊಂದಿಗೇ ಬದುಕು ಅಷ್ಟೆ!

 
ಕೋವಿಡ್ 2ನೇ ಅಲೆ ಹೊತ್ತು ತಂದಿರುವ ಸಂಕಷ್ಟದ ಕುರಿತು ಚರ್ಚೆ ಮಾಡುವುದಕ್ಕೂ ಮುನ್ನ, ಕೋವಿಡ್ ಹೆಸರಿಸುವ ಮುನ್ನ ನಾವು ಅದಕ್ಕಿಟ್ಟಿರುವ ಇಲ್ಲವೇ ಸಂಬೋಧಿಸುವ ‘ಮಹಾಮಾರಿ’ ಎಂಬ ಪದದ ಕುರಿತು ಅರಿಯೋಣ. ಇಂಗ್ಲಿಷ್ ನಲ್ಲಿ ಎಪಿಡೆಮಿಕ್ ಹಾಗೂ ಪ್ಯಾಂಡೆಮಿಕ್ ಎಂಬ ಪದ ಬಳಕೆ ಇದೆ. ಇವೆರಡರ ಕುರಿತು ವಿಶ್ವ ಆರೋಗ್ಯ ಸಂಸ್ಥೆ ವ್ಯಾಖ್ಯಾನವನ್ನು ಹೊಂದಿದೆ. ಒಂದು ನಿರ್ದಿಷ್ಟ ಪ್ರದೇಶ, ರಾಜ್ಯ ಅಥವಾ ದೇಶದಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ಖಾಯಿಲೆಗೆ ಎಪಿಡೆಮಿಕ್(ಸಾಂಕ್ರಾಮಿಕ ರೋಗ) ಎನ್ನಲಾಗುತ್ತದೆ. ಅದೇ ಸಾಂಕ್ರಾಮಿಕ ರೋಗ ದೇಶದ ಗಡಿಗಳನ್ನು ವಿಶ್ವಾದ್ಯಂತ ಪಸರಿಸಿದರೆ ಪ್ಯಾಂಡಮಿಕ್ (ಜಾಗತಿಕವಾಗಿ ವ್ಯಾಪಿಸುವ ರೋಗ) ಎನ್ನಲಾಗುವುದು. ಸದ್ಯ ಕೋವಿಡ್ ಎಲ್ಲೆಡೆ ಹರಡಿರುವುದರಿಂದ, ಅದನ್ನ ನಮ್ಮ ಆಡುಭಾಷೆಯಲ್ಲಿ ಮಹಾಮಾರಿ ಎನ್ನುತ್ತಿದ್ದೇವೆ.
ನಮ್ಮ ಕೈ ಮೀರಿದ ಪರಿಸ್ಥಿತಿಗೂ ಮಹಾಮಾರಿ ಎಂದೇ ಕರೆಯಬಹುದು. ಇಂಥ ದೇಶ-ಭಾಷೆ-ಕೋಶದ ಎಲ್ಲೆ ಮೀರಿ, ಹರಡುವ ಮಹಾಮಾರಿ ರೋಗವನ್ನು ನಿಯಂತ್ರಿಸಲು ಒಂದೇ ರೀತಿಯ ಕಾರ್ಯಾಚರಣೆ, ವಿಧಿ ವಿಧಾನ ಸಾಧ್ಯವಿಲ್ಲ. ಹಲವು ದೇಶಗಳು ತಮ್ಮ ಶಕ್ತಿ ಸಾಮರ್ಥ್ಯ, ತಾವು ಹೊಂದಿರುವ ತಿಳಿವಳಿಕೆ, ಆರೋಗ್ಯ ಸುರಕ್ಞಾ ವ್ಯವಸ್ಥೆಗೆ ಅನುಗುಣವಾಗಿ ರೋಗ ನಿಯಂತ್ರಣ ಮಾಡುತ್ತವೆ. ಕೆಲವು ಬಾರಿ ದೇಶವನ್ನು ಆಳುವ ಸರಕಾರದ ಸಿದ್ಧಾಂತಗಳು ಕೆಲಸ ಮಾಡುತ್ತಿರುತ್ತವೆ. ಅಲ್ಲಿಗೆ ಏಕರೂಪತೆ ಕಾಣುವುದು ಬಹುತೇಕ ಅಸಾಧ್ಯ.
ಆಕಸ್ಮಿಕವಾಗಿ ಎದುರಾಗುವ ಯಾವುದೇ ಪ್ರಾಕೃತಿಕ ವಿಕೋಪ, ಕೋವಿಡ್ ಮಾದರಿಯ ಮಹಾ ರೋಗ ರುಜಿನಗಳನ್ನು ಅಂದಾಜಿಸಿಕೊಂಡು, ಒಂದು ನಾಗರಿಕ ಸಮಾಜ ಶಾಶ್ವತವಾದ ಪರಿಹಾರೋಪಾಯ ವ್ಯವಸ್ಥೆಯನ್ನು ರೂಪಿಸಿಕೊಂಡಿರುವುದಿಲ್ಲ. ಒಂದು ವೇಳೆ, ರೂಪಿಸಿಕೊಂಡರೂ ಅದು ಕಾರ್ಯಸಾಧುವಲ್ಲ. ಉದಾಹರಣೆಗೆ- ಒಂದು ನಗರವನ್ನು ವಾಸ್ತುಶಾಸ್ತ್ರಜ್ಞರು ವಿನ್ಯಾಸ ಮಾಡುವಾಗ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಆ ಪ್ರದೇಶದಲ್ಲಿ ವಾರ್ಷಿಕ ಸರಾಸರಿ ಬೀಳುವ ಮಳೆ ಪ್ರಮಾಣ ಇದರಲ್ಲೊಂದು. ವರ್ಷದ ಸರಾಸರಿ ಮಳೆಗಿಂತ ಶೇಕಡಾ ಐದರಿಂದ ಹತ್ತು ಶೇಕಡಾ ಹೆಚ್ಚು ಮಳೆ ಬಿದ್ದರೆ ಸಹಿಸಿಕೊಳ್ಳುಷ್ಟು ಸಾಮರ್ಥ್ಯದ ಕಾಲುವೆ, ಕೆರೆಗಳನ್ನು ನಿರ್ಮಿಸಬಹುದು. ಆದರೆ ಏಳೆಂಟು ವರ್ಷದಲ್ಲಿ ಒಂದು ದಿನ ಸರಾಸರಿಗಿಂತ ಶೇಕಡಾ ನೂರು ಹೆಚ್ಚು ಮಳೆ ಬಂದರೆ ತಡೆಯುವಂತೆ ಕಾಲುವೆ, ಕೆರೆ ನಿರ್ಮಿಸಲು ಸಾಧ್ಯವಿಲ್ಲ. ವೈದ್ಯಕೀಯ ವ್ಯವಸ್ಥೆಗೂ ಇದು ಅನ್ವಯ. ಆಯಾ ದೇಶದ ಯುವಕರ ಸಂಖ್ಯೆ, ವಯಸ್ಸಾದವರ ಸಂಖ್ಯೆ,ರೋಗಿಗಳ ಸಂಖ್ಯೆ ಮುಂತಾದ ಅಂಶಗಳನ್ನು ಪರಿಗಣಿಸಿ ಅದಕ್ಕೆ ಅನುಗುಣವಾಗಿ ಸರಕಾರಿ ಹಾಗೂ ಖಾಸಗಿ ವೈದ್ಯಕೀಯ ವ್ಯವಸ್ಥೆಯನ್ನು ರೂಪಿಸಬಹುದು. ಅಷ್ಟನ್ನು ಮೀರಿದ, ಅದರಲ್ಲೂ ಶತಮಾನಕ್ಕೊಮ್ಮೆ ಸಂಭವಿಸುವ ಕೋವಿಡ್-19 ನಂತಹ ಮಹಾಮಾರಿಯನ್ನು ಯಾವುದೇ ಸಮಸ್ಯೆಯಿಲ್ಲದೆ ನಿಭಾಯಿಸಲು ಯಾವುದೇ ವ್ಯವಸ್ಥೆ ರೂಪಿಸುವುದು ಮಾನವ ಸಾಮರ್ಥ್ಯಕ್ಕೆ ಅಸಾಧ್ಯ. ಅಂದಮೇಲೆ ಸಮಾಜದ ಎಲ್ಲರೂ ಮಹಾಮಾರಿಯ ಹೊಡೆತವನ್ನು ಎದುರಿಸಲೇಬೇಕು.
ಉದಾಹರಣೆಗೆ ನಾವು ಯುದ್ಧವನ್ನು, ಪ್ರತ್ಯಕ್ಷ ನೋಡದೇ ಇರಬಹುದು. ಆದರೆ ಅದೇನು ಕೇಳದೇ ಇರುವ ಪದ ಅಲ್ಲ. ಗಲಭೆ, ಹಿಂಸಾಚಾರವನ್ನು ಕೆಲವರು ಪ್ರತ್ಯಕ್ಷ ನೋಡಿದರೆ ಹಲವರು ಕೇಳಿರುತ್ತೇವೆ. ನೈಸರ್ಗಿಕ ವಿಕೋಪ ನಮಗೆ ಹೊಸ ಅನುಭವ ಅಲ್ಲ. ವಿಶ್ವದ ಇತಿಹಾಸದಲ್ಲಿ ಅತಿ ಘೋರ ಎಂದು ಕರೆಯಲಾಗುವ ಬ್ಲಾಕ್ ಡೆತ್ ಅಥವಾ ಪ್ಲೇಗ್ ಎಂಬ ಮಹಾಮಾರಿ 13-14ನೇ ಶತಮಾನದಲ್ಲಿ ಆಫ್ರೊ-ಯುರೇಷಿಯಾ ಪ್ರದೇಶಗಳಲ್ಲಿ ಸಂಭವಿಸಿತು. ಈ ಮಹಾಮಾರಿಯಲ್ಲಿ 7.5 ಕೋಟಿಯಿಂದ 20 ಕೋಟಿ ಜನರು ನಿಧನರಾದರು ಎಂಬ ಲೆಕ್ಕವಿದ್ದು, ಇದು ಇಲ್ಲಿಯವರೆಗೆ ಮಾನವ ಇತಿಹಾಸದಲ್ಲಿ ಮಹಾಮಾರಿಗೆ ಬಲಿಯಾದ ಅತಿ ದೊಡ್ಡ ಸಂಖ್ಯೆ ಎಂದೇ ಹೇಳಲಾಗುತ್ತದೆ. ಈ ಸಮಯದಲ್ಲಿ ಭಾರತದಲ್ಲಿ ಪ್ಲೇಗ್ ಆವರಿಸಿರಲಿಲ್ಲ. ಆದರೆ 19ನೇ ಶತಮಾನದಲ್ಲಿ ಭಾರತಕ್ಕೆ ಆವರಿಸಿದ ಪ್ಲೇಗ್ ನಿಂದ ಅಂದಾಜು ಒಂದು ಕೋಟಿ ಜನರು ನಿಧನರಾದರು ಎನ್ನಲಾಗುತ್ತದೆ. ಪ್ಲೇಗ್ ಜತೆಗೆ ಕಾಲರಾ, ಡೆಂಗೆ, ಇನ್ಫ್ಲೂಯೆನ್ಜಾ, ಟೈಫಸ್, ಸ್ಮಾಲ್ ಪಾಕ್ಸ್, ಕ್ಷಯ, ಕುಷ್ಠ, ಮಲೇರಿಯಾದಂತಹ ಅನೇಕ ಸಾಂಕ್ರಮಿಕ ರೋಗಗಳು, ಮಹಾಮಾರಿಗಳನ್ನು ವಿಶ್ವ ಕಂಡಿದೆ. ಈ ಎಲ್ಲ ಸಂದರ್ಭದಲ್ಲೂ ಜಗತ್ತು ಕಷ್ಟ ಅನುಭವಿಸಿದೆ, ಪರಿಸ್ಥಿತಿ ನಿಭಾಯಿಸಲು ಘಟಾನುಘಟಿಗಳೇ ಥರಗುಟ್ಟಿದ್ದಾರೆ.
ಫ್ರೆಂಚ್ ತತ್ವಜ್ಞಾನಿ, ಲೇಖಕ ಆಲ್ಬರ್ಟ್ ಕಾಮೂ, 1947ರಲ್ಲಿ ‘ದಿ ಪ್ಲೇಗ್’ ಕಾದಂಬರಿ ಬರೆದರು. ಜನರಲ್ಲಿ ಸಾಂಕ್ರಾಮಿಕವೊಂದು ಹರಡುತ್ತಿದೆ ಎಂಬ ಎಚ್ಚರಿಕೆಯನ್ನು ಅಲ್ಲಿನ ಸರಕಾರ ನಿರ್ಲಕ್ಷಿಸಿತು. ಬೀದಿಯಲ್ಲಿ ಹೆಣಗಳು ಬೀಳುವ ವೇಳೆಗೆ ಸಾಕಷ್ಟು ಸಮಯ ಮೀರಿತ್ತು. ಕೋವಿಡ್-19 ಸಂದರ್ಭದಲ್ಲೂ ಅನೇಕ ದೇಶಗಳು ಇದೇ ಸ್ಥಿತಿ ಅನುಭವಿಸಿದವು.
ಚೀನಾದಿಂದ ಬಂದಿರುವ ವೈರಸ್ ಎಂದದ್ದನ್ನೆ ಜನಾಂಗೀಯ ಭಾವನೆಗೆ ಹೊಂದಿಸಿಕೊಂಡ ಇಟಾಲಿಯನ್ನರು ಕಂಡ ಕಂಡ ಚೀನೀಯರನ್ನು ತಬ್ಬಿಕೊಳ್ಳುವ ಅವಿವೇಕದ ವರ್ತನೆಯನ್ನು‌ ಜಗತ್ತಿನೆದುರು ಪ್ರದರ್ಶಿಸಿದರು.
ವಿಶ್ವದ ಶ್ರೇಷ್ಠ ವೈದ್ಯಕೀಯ ವ್ಯವಸ್ಥೆ ಹೊಂದಿರುವ ದೇಶ ಎಂಬ ಹೆಗ್ಗಳಿಕೆಯ ಇಟಲಿ, ನಂತರದಲ್ಲಿ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದನ್ನು ಇಡೀ ವಿಶ್ವ ಕಂಡಿತು.
ಆದರೆ ಭಾರತದಲ್ಲಿ ಆ ಪರಿಸ್ಥಿತಿ ಬರಲಿಲ್ಲ. ಇನ್ನೂ ವೈರಸ್ ಸಮುದಾಯ ಮಟ್ಟಕ್ಕೆ ಬರುವ ಮೊದಲೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ವಿದೇಶಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿತು. ನಂತರದಲ್ಲಿ ಶೀಘ್ರವೇ ಲಾಕ್ ಡೌನ್ ಘೋಷಿಸಿತು. ಇಂತಹ ಅತಿರೇಕದ ಕ್ರಮ ಬೇಕಿರಲಿಲ್ಲ ಎಂದವರೂ ಇದ್ದಾರೆ. ಆದರೆ ದೇಶದ ಅಂದಿನ ಸ್ಥಿತಿಗೆ ಅನುಗುಣವಾಗಿತ್ತು ಎಂದು ಪ್ರಧಾನಿ ಕ್ರಮವನ್ನು ಬೆಂಬಲಿಸುವವರು ಇದ್ದಾರೆ. (ಆದರೆ, ಇಂಥದ್ದೊಂದು ಕಟು ನಿರ್ಧಾರ ಕೈಗೊಳ್ಳುವ ಮುನ್ನ ಕನಿಷ್ಠ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿತ್ತು ಎಂಬ ಮಾತುಗಳಲ್ಲಿ ವಿವೇಕವಿದೆ) ಧುತ್ತನೆ ಸಂಕಷ್ಟ ಎದುರಾದಾಗ, ಅದರ ಆಳ ಅಗಲ ಅರಿಯಲು ಕೆಲ ಸಮಯ ಬೇಕಾಗುತ್ತದೆ. ಕೊರೊನಾ ಸಂಕಷ್ಟದ ತೀವ್ರತೆಯನ್ನು ಅರಿಯಲು ಸರಕಾರಕ್ಕೆ ಅದು ಸಮಯ ನೀಡಿತು. ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ತಯಾರಿಕೆ, ವೆಂಟಿಲೇಟರ್ ಸರಬರಾಜು ಆಗುತ್ತಿರುವಂತೆ ಲಾಕ್ ಡೌನನ್ನು ಹಂತಹಂತವಾಗಿ ತೆರವು ಮಾಡಲಾಯಿತು. ಇಂತಹ ಅನೂಹ್ಯ ಸಂದರ್ಭಗಳನ್ನು ನಿಭಾಯಿಸುವುದಕ್ಕೆ ಅಂತಲೇ ತರಬೇತಾದ ವ್ಯವಸ್ಥೆ ಪ್ರಪಂಚದ ಎಲ್ಲ ದೇಶಗಳಲ್ಲೂ ಇರುತ್ತದೆ. ಯುದ್ಧ,ಗಲಭೆ,ನೈಸರ್ಗಿಕ ವಿಕೋಪ ಪರಿಸ್ಥಿತಿ ನಿಭಾಯಿಸುವಲ್ಲಿ ಸನ್ನದ್ಧ ವ್ಯವಸ್ಥೆ ಮತ್ತು ತುರ್ತು ಸಂದರ್ಭದಲ್ಲಿ ರೂಪಿಸಬಹುದಾದ ವ್ಯವಸ್ಥೆ ಎರಡೂ ಸೇರಿ ಪರಿಸ್ಥಿತಿ ನಿಭಾಯಿಸಲಾಗುತ್ತದೆ. ಇಂತಹ ಕೊರೊನಾ ನಿರ್ವಹಣೆಯಲ್ಲಿ ಭಾರತ ಸಾಧನೆ ಮಾಡಿತು ಎಂದು ಸಾಬೀತಾಯಿತು. ಇನ್ನೇನು ಭಾರತ ಸಂಪೂರ್ಣವಾಗಿ ಕೊರೊನಾ ಕಪಿಮುಷ್ಠಿಯಿಂದ ಹೊರಬಂದಾಯಿತು ಎನ್ನುವಂತಾಯಿತು. ಅಂದು ಲಾಕ್ ಡೌನ್ ಟೀಕಿಸಿದವರೂ ಈಗ ತಮ್ಮ ನಿರ್ಧಾರ ಬದಲಿಸಿಕೊಳ್ಳುವಂತಾಯಿತು. ಅಂದಿನ ಪರಿಸ್ಥಿತಿಗೆ ಲಾಕ್ ಡೌನ್ ಹೊರತುಪಡಿಸಿ ಬೇರೆ ದಾರಿ ಇರಲಿಲ್ಲ. ಆದರೆ ಈಗಲೂ ಅನೇಕ ರಾಜ್ಯಗಳು ಲಾಕ್ ಡೌನ್ ಮೊರೆ ಹೋಗುತ್ತಿರುವುದು ಸೋಜಿಗ ಮೂಡಿಸಿದೆ.
ದೆಹಲಿಯಲ್ಲಂತೂ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಹಾಗಾದರೆ ಒಂದು ವರ್ಷದ ಅವಧಿಯಲ್ಲಿ ಇಲ್ಲಿನ ವ್ಯವಸ್ಥೆ ಕಲಿತ ಪಾಠವೇನು ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ಆಪತ್ಕಾಲದಲ್ಲಿ ಧೃತಿಗೆಡದೆ, ದೃಢ ನಿರ್ಧಾರದಿಂದ ಮುನ್ನಡೆಯಬೇಕು. ಭಂಡ ಧೈರ್ಯದ ಬದಲಿಗೆ, ಯೋಜಿತ ಆತ್ಮಸ್ಥೈರ್ಯವೇ ಮದ್ದು ಎಂಬುದನ್ನು ಸರಕಾರಗಳು ತಿಳಿಯಲು ಇನ್ನೆಷ್ಟು ಕಾಲ ಬೇಕೊ ತಿಳಿಯದು.
ಇನ್ನು, ಕರ್ನಾಟಕ ಸೇರಿ ಅನೇಕ ಕಡೆಗಳಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಇದರ ಕುರಿತು ಅನೇಕ ಟೀಕೆಗಳು ವ್ಯಕ್ತವಾಗಿವೆ. ರಾತ್ರಿ ಕರ್ಫ್ಯೂ ವಿಧಿಸಿದರೆಕೊರೊನಾ ನಿಯಂತ್ರಣಕ್ಕೆ ಬರುತ್ತದೆಯೇ?ಕೊರೊನಾ ರಾತ್ರಿ ವೇಳೆ ಮಾತ್ರ ಸಂಚರಿಸುತ್ತದೆಯೇ? ಸರಕಾರ ಮತ್ತು ಕೊರೊನಾ ನಡುವೆ ಒಪ್ಪಂದ ಆಗಿದೆಯೇ ಎಂದು ಕಾಲೆಳೆಯಲಾಗುತ್ತಿದೆ. ನೈಟ್ ಕರ್ಫ್ಯೂ ಎನ್ನುವುದರ ಬದಲಿಗೆ ಕೊರೊನಾ ಕರ್ಫ್ಯೂ ಎನ್ನಿ ಎಂಬ ಪ್ರಧಾನಿ ಮೋದಿಯವರ ಮಾತಿನಲ್ಲೆ ಈ ಟೀಕೆಗಳಿಗೆ ಉತ್ತರವಿದೆ. ನೈಟ್ ಕರ್ಫ್ಯೂ ಎಂಬುದು ಒಂದು ಭಾವನಾತ್ಮಕ ಅಂಶ. ಉದ್ಯಮ, ವ್ಯಾಪಾರ, ಜನಜೀವನಕ್ಕೆ ಹೆಚ್ಚಿನ ತೊಂದರೆ ಮಾಡದಂತೆ, ಸೋಂಕಿನ ಇರುವು ಕುರಿತು ಅರಿವು ಮೂಡಿಸುವ ಪ್ರಯತ್ನ. ತಾವಿನ್ನೂ ಸೋಂಕಿನಿಂದ ಮುಕ್ತವಾಗಿಲ್ಲ, ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಎಂಬ ಮುನ್ನೆಚ್ಚರಿಕೆ ನೀಡುತ್ತದೆ. ಜತೆಗೆ, ಇಡೀ ವೈದ್ಯಕೀಯ ವ್ಯವಸ್ಥೆ ಹಾಗೂ ಪೊಲೀಸ್ ವ್ಯವಸ್ಥೆಗೆ ಸ್ವಲ್ಪಮಟ್ಟಿನ ವಿಶ್ರಾಂತಿಯನ್ನೂ ನೀಡಲು ಈ ಕ್ರಮ ಅನಿವಾರ್ಯ.
ಆದರೆ ಮೊದಲ ಅಲೆಯನ್ನು ಎದುರಿಸಿ ಗೆದ್ದ ಹುಮ್ಮಸ್ಸಿನಲ್ಲಿದ್ದ ಸರಕಾರಗಳು ಎರಡನೇ ಅಲೆಯನ್ನು ಊಹಿಸುವುದರಲ್ಲಿ ವಿಫಲವಾದವು. ಕೊರೊನಾ ಕಡಿಮೆ ಆಗಿಲ್ಲ, ಮೈಮರೆಯಬೇಡಿ ಎಂದು ಕರ್ನಾಟಕದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಪದೇಪದೆ ಹೇಳುತ್ತಲೇ ಇದ್ದರು. ತಾವು ಸಂಪೂರ್ಣ ಆರೋಗ್ಯ ವ್ಯವಸ್ಥೆಯನ್ನು ವಹಿಸಿಕೊಂಡ ನಂತರದ ವಯಸ್ಸಿನ ದಣಿವರಿಯದ ಸಿಎಂ ಯಡಿಯೂರಪ್ಪ ಆಣಿತಿ,ಸಂಕಲ್ಪ ಶಕ್ತಿಯಂತೆ ಕೆಲಸ ಮಾಡಿ ಕೊರೊನಾ ತೀವ್ರತೆಗೆ ಕಡಿವಾಣ ಹಾಕಿದ್ದು ಅವರ ಸಾಧನೆಗೆ ಹಿಡಿದ ಕನ್ನಡಿ. ಮೇಲ್ನೋಟಕ್ಕೆ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎನಿಸಿದರೂ, ಸ್ವತಃ ವೈದ್ಯರಾಗಿರುವ ಅವರಿಗೆ ಮುಂಬರುವ ಪರಿಸ್ಥಿತಿಯ ಗಂಭೀರತೆ ಕಾಣುತ್ತಿತ್ತು. ಕಟ್ಟುನಿಟ್ಟಿನ ಕ್ರಮಗಳ ಕುರಿತು ಸರಕಾರದ ಮಟ್ಟದಲ್ಲಿ ನಡೆಸಿದ ಪ್ರಯತ್ನಗಳೂ ನಿರೀಕ್ಷಿತ ಫಲ ನೀಡಲಿಲ್ಲ ಎಂದು ತೋರುತ್ತದೆ. ಈಗ ಫಲಿತಾಂಶ ಕಣ್ಮುಂದೆ ಇದೆ. ಎರಡನೇ ಅಲೆ ಅಪ್ಪಳಿಸಿದೆ ಎಂದು ತಜ್ಞರು ಹೇಳಿದರೂ ಕೆಲವರ ಕಿವಿ ಕೇಳಲೇ ಇಲ್ಲ ಎಂಬಂತಿತ್ತು. ಎರಡನೇ ಅಲೆ ಬಂದಿದೆ ಎಂದು ಒಪ್ಪಿಕೊಂಡರೆ ಅದು ತಮ್ಮ ಸಾಮರ್ಥ್ಯಕ್ಕೆ ಕುಂದುಂಟಾಗುತ್ತದೆ ಎಂಬ ಪ್ರತಿಷ್ಠೆಯ ವಿಷಯವಾಗಿ ಕೆಲವರು ತೆಗೆದುಕೊಂಡಿದ್ದೂ ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಸಮಸ್ಯೆಗೆ ಕಾರಣವಾಯಿತು.
ಕೇಂದ್ರ ಹಾಗೂ ಅನೇಕ ಸರಕಾರಗಳು ಉಪಚುನಾವಣೆಯಲ್ಲಿ ನಡೆದುಕೊಂಡ ರೀತಿ ತಲೆತಗ್ಗಿಸುವಂಥದ್ದು. ಮನೆಯ ಮದುವೆ ಸಂಭ್ರಮಗಳಿಗೆ ಬ್ರೇಕ್ ಹಾಕಿದ ಕಾನೂನು ರಾಜಕಾರಣಿಗಳ ಸಮಾವೇಶ, ಜನಜಂಗುಳಿಯನ್ನು ತಡೆಯಲು ಮುಂದಾಗಲಿಲ್ಲ. ಇದು ಸರಕಾರಗಳು ಮಾಡಿದ ಮೊದಲ ತಪ್ಪು. ಎರಡನೆಯದಾಗಿ, ಭಾರತದ ಜನರಿಗೆ ತಕ್ಕ ಪ್ರಮಾಣದಲ್ಲಿ ವ್ಯಾಕ್ಸಿನ್ ಸರಬರಾಜಾದ ನಂತರ ವಿದೇಶಗಳಿಗೆ ರವಾನೆ ಮಾಡಲು ಕೇಂದ್ರ ಸರಕಾರ ಮುಂದಾಗಬೇಕಿತ್ತು. ಭಾರತದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ ಎಂಬ ಅತಿಯಾದ ಆತ್ಮವಿಶ್ವಾಸದಿಂದಲೋ ಏನೊ, ಅನೇಕ ದೇಶಗಳಿಗೆ ವಿತರಣೆ ಮಾಡಿ ಮೆಚ್ಚುಗೆಗೆ ಪಾತ್ರವಾಯಿತು. ಆದರೆ ದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸಿತು.
ಒಟ್ಟಿನಲ್ಲಿ ಈಗ ಎರಡನೇ ಅಲೆ ಬಂದಿದೆ ಮಾತ್ರವಲ್ಲ,ಅದು ಅಕ್ಷರಶಃ ಅಪ್ಪಳಿಸಿದೆ. ಕಳೆದ ವರ್ಷ ಕಂಡ ಅತಿ ಕೆಟ್ಟ ಅಂಕಿ ಅಂಶಗಳನ್ನೂ ಮೀರಿ ನುಗ್ಗುತ್ತಿದೆ. ಈ ಸಂದರ್ಭದಲ್ಲಿ ಬೇಕಿರುವುದು ಆತ್ಮ ವಿಶ್ವಾಸ ವೃದ್ಧಿಯ ಉಪಕ್ರಮಗಳು. ಕೊರೊನಾ ಸೋಂಕಿಗಿಂತಲೂ ಕೊರೊನಾ ಭೀತಿ ಅಪಾಯಕಾರಿ. ಕೊರೊನಾ ವ್ಯಾಕ್ಸಿನ್ ಕುರಿತು ಕೆಲ ಗಾಳಿ ಸುದ್ದಿಗಳು ಹರಿದಾಡುತ್ತಿರುತ್ತವೆ. ಇದಕ್ಕೆ, ವೈದ್ಯಕೀಯ ಜ್ಞಾನ ಇಲ್ಲದ ಜನಸಾಮಾನ್ಯರಷ್ಟೆ ಅಲ್ಲ, ವೈದ್ಯಕೀಯ ಸಿಬ್ಬಂದಿಯೇ ಬಲಿಯಾಗಿದ್ದಾರೆ. ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡರೆ ಹೃದಯಾಘಾತವಾಗುತ್ತದೆ, ನಿಧನರಾಗುತ್ತಾರೆ ಎಂಬ ಸುಳ್ಳೂ ಸುದ್ದಿ ಒಂದೆಡೆಯಾದರೆ, ವ್ಯಾಕ್ಸಿನ್ ಏನೂ ಕೆಲಸ ಮಾಡುವುದಿಲ್ಲ ಎಂಬ ಉದಾಸೀನ,ವದಂತಿಗಳ ಉಪದ್ವಾಪಿ ಮತ್ತೊಂದೆಡೆ. ಮೊದಲ ಹಂತದಲ್ಲಿ ವ್ಯಾಕ್ಸಿನ್ ಪಡೆಯಲು ನೋಂದಣಿ ಮಾಡಿಸಿಕೊಂಡಿದ್ದ ಶೇಕಡಾ 60ಕ್ಕಿಂತ ಹೆಚ್ಚಿನ ಸಿಬ್ಬಂದಿ, ನಂತರದಲ್ಲಿ ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕಿದ್ದೇ ಇದಕ್ಕೆ ಉದಾಹರಣೆ.
ವ್ಯಾಕ್ಸಿನ್ ಕೆಲಸ ಮಾಡುತ್ತದೆ ಎಂಬುದು ವೈದ್ಯಕೀಯ ಸಂಶೋಧನೆಯ ಭಾಗ. ಆದರೆ ಇದರಿಂದ ತೊಂದರೆಯಾಗುತ್ತದೆ ಎಂಬುದನ್ನು ನಂಬಲಂತೂ ಯಾವುದೇ ಪುರಾವೆ ಇಲ್ಲ. ಕೊರೊನಾ ವ್ಯಾಕ್ಸಿನ್ ದೇಹದಲ್ಲಿ ಎಷ್ಟರಮಟ್ಟಿಗೆ ರೋಗನಿರೋಧಕತೆ ಬೆಳೆಸುತ್ತದೆ ಎಂಬುದು ಬೇರೆ ಮಾತು. ಆದರೆ ಮನಸ್ಸಿನಲ್ಲಿ ಆತ್ಮವಿಶ್ವಾಸವನ್ನಂತೂ ಬೆಳೆಸುತ್ತದೆ. ಆ ದೃಷ್ಟಿಯಿಂದ ಕೊರೊನಾ ವ್ಯಾಕ್ಸಿನ್ ಡ್ರೈವ್ ಗೆ ಹೆಚ್ಚಿನ ಒತ್ತು ಕೊಡಬೇಕು.
ಇಷ್ಟೆಲ್ಲ ಕ್ರಮದ ಬಳಿಕ ಮೇ ಅಂತ್ಯದ ವೇಳೆಗಾದರೂ ಪರಿಸ್ಥಿತಿ ತಿಳಿಯಾಗಿ ಜನಜೀವನ ಸಹಜ ಸ್ಥಿತಿಗೆ ಬರುವಂತೆ ಸರಕಾರ ನೋಡಿಕೊಳ್ಳಲೇಬೇಕು. ಅದಕ್ಕಿಂತ ಹೆಚ್ಚಿನ ದಿನ ಇಂಥಾ ವಿಕೋಪವನ್ನು ಎದುರಿಸುವ ಶಕ್ತಿ ಭಾರತಕ್ಕಷ್ಟೆ ಅಲ್ಲ, ವಿಶ್ವದ ಯಾವುದೇ ಸಮಾಜಕ್ಕೂ ಇಲ್ಲ. ನಾಗರಿಕರೂ, ತಮ್ಮ ಹೊಣೆಗಾರಿಕೆಯನ್ನು ಅರಿತು ಮುನ್ನಡೆಯಬೇಕು. ಜನರ ಸಹಭಾಗಿತ್ವವಿಲ್ಲದೆ ಸರಕಾರ ನಡೆಯುವುದಿಲ್ಲ. ಸೋಂಕು ನಿಯಂತ್ರಣಕ್ಕೆ ಸರಕಾರ ಮಾರ್ಗಸೂಚಿಗಳ ಕಟ್ಟುನಿಟ್ಟಿನ, ಣಸ್ವಯಂಪ್ರೇರಿತ ಪಾಲನೆ ಮಾಡಬೇಕು. ತಮಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡ ಕೂಡಲೆ, ಪರೀಕ್ಷೆಯ ಫಲಿತಾಂಶಕ್ಕೆ ಕಾಯದೆ ಇತರರಿಂದ ಪ್ರತ್ಯೇಕವಾಗಿ ಉಳಿಯುವುದು(ಐಸೋಲೇಟ್) ಆದರೆ ಸೋಂಕು ಹರಡುವುದು ಅರ್ಧದಷ್ಟು ಕಡಿಮೆಯಾಗುತ್ತದೆ. ಹೀಗಾಗಿ ಜನರೂ ಕೊರೊನಾ ಎದುರಿಸಲು ಮಾನಸಿಕವಾಗಿ ಸನ್ನದ್ಧರಾಗಬೇಕು. ಹಾಗೆ ನೊಡಿದರೆ, ಕೋರೋನೋತ್ತರ ಬದುಕು ಎಂದು ಇರುವುದಿಲ್ಲ. ಬದಲಿಗೆ ಕೊರೊನಾ ಜತೆಗೆ ಭವಿಷ್ಯದ ಬದುಕು ಇರುತ್ತದೆ ಎನ್ನುತ್ತಾರೆ ಜೀವಶಾಸ್ತ್ರಜ್ಞ ಪ್ರೊ. ನೀಲ್ ಫರ್ಗ್ಯೂಸನ್. ಅವರ ಪ್ರಕಾರ, ಕೊರೊನಾ ಮಾದರಿಯ ಇನ್ ಫ್ಲುಯೆಂಜಾದಂಥ ಸಾಂಕ್ರಮಿಕ ರೋಗಗಳಿಗೆ ಲಸಿಕೆ ಕಂಡು ಹಿಡಿದ ಬಳಿಕವೂ, ಆ ರೋಗಕ್ಕೆ ಜನ ತುತ್ತಾಗುತ್ತಲೇ ಇದ್ದಾರೆ. ಮುಂದುವರಿದ ದೇಶಗಳೂ ಏನೂ ಮಾಡಲು ಆಗಿಲ್ಲ. ಫ್ಲೂ ವೈರಾಣು ಪ್ರತಿ ವರುಷ ಹೊಸ ವೇಷ ಧರಿಸಿ ಬರುತ್ತಲೇ ಇದೆ. ಅಂತೆಯೇ ಪ್ರತಿಬಾರಿಯೂ ಹೊಸ ಲಸಿಕೆ ಸಿದ್ಧವಾಗುತ್ತಲೇ ಇದೆ. ಆದರೆ ಆ ರೋಗಕ್ಕೆ ಅಂತ್ಯವಿಲ್ಲ. ಅಂತೆಯೇ, ಕೊರೊನಾ ಎಂಬುದು ಅವರ ವಾದ.
ಹಾಗಾಗಿ, ಕೊರೊನಾ ಅಥವಾ ಮತ್ತೊಂದು ವೈರಾಣುವಿನೊಂದಿಗೆ ಬದುಕುವುದು ನಮಗೆ ಅನಿವಾರ್ಯ ಎಂಬುದು ಕಟುಸತ್ಯ.
ಕೊನೇಮಾತು.
ಜನರು ಈಗಿನ ನಿರ್ಬಂಧಗಳನ್ನು ಮೀರಿದರೆ ಲಾಕ್ ಡೌನ್ ಅನಿವಾರ್ಯ ಎಂಬ ಮಾತನ್ನು ಸರಕಾರಗಳು ಹೇಳುತ್ತಿವೆ. ಲಾಕ್ ಡೌನ್ ಎಂದರೆ ಬ್ರಹ್ಮಾಸ್ತ್ರ, ಲಾಕ್ ಡೌನ್ ಎಂಬುದು ಲಾಸ್ಟ್ ರೆಸಾರ್ಟ್ ಎಂಬಂತಹ ಧೋರಣೆ ಈಗಲೂ ಅನೇಕರಲ್ಲಿದೆ. ಈಗಾಗಲೆ ಸಮುದಾಯಕ್ಕೆ ಸೋಂಕು ಹರಡಿದೆ, ಅದನ್ನು ಹೇಗೆ ನಿವಾರಣೆ ಮಾಡಬೇಕು ಎಂಬ ಕಡೆಗೆ ಲಕ್ಷ್ಯ ಇರಬೇಕೆ ವಿನಃ, ಎಲ್ಲವೂ ಮುಗಿದ ಮೇಲೆ ಲಾಕ್ ಡೌನ್ ನಿಂದ ಏನು ಪ್ರಯೋಜನ? ಸರಕಾರಗಳು ಯಾಂತ್ರಿಕವಾಗಿ ಈ ಹಿಂದಿನ ಕ್ರಮಗಳನ್ನೆ ಪುನರಾವರ್ತನೆ ಮಾಡುವ ಬದಲು ವೈಜ್ಞಾನಿಕವಾಗಿ ಯೋಚಿಸಿದರೆ ಮಾತ್ರ ಈಗಿನ ಮತ್ತು ಮುಂಬರುವ ಮಹಾಮಾರಿಗಳನ್ನೂ ಎದುರಿಸಲು ಸಾಧ್ಯ.
 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top