ಬಿತ್ತಿದಂತೆಯೇ ವೃಕ್ಷ ಎಂಬುದು ರಾಜಕೀಯಕ್ಕೂ ಅನ್ವಯ

ಸಾಮಾಜಿಕ ಬದಲಾವಣೆಗಾಗಿ ಹೋರಾಟ ಮಾಡುವ ರೀತಿ ಹೇಗೆಂದು ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಕಲಿತರು. ಅದು ಅವರ ಪಾಲಿಗೆ ಒಂದು ರೀತಿಯಲ್ಲಿ ಪ್ರಯೋಗಶಾಲೆಯಂತಿತ್ತು. ಅಲ್ಲಿಂದ ಭಾರತಕ್ಕೆ ಬಂದಾಗ, ದಕ್ಷಿಣ ಆಫ್ರಿಕಾದಲ್ಲಿ ಕಲಿತ ಅನುಭವವನ್ನು ಪರಿಸ್ಥಿತಿಗೆ ಅನುಗುಣವಾಗಿ ಅಳವಡಿಸುವುದೊಂದೇ ಬಾಕಿ ಉಳಿದಿತ್ತು. ಅದಕ್ಕಾಗಿ ವಿವಿಧ ಸಂಘಟನೆ, ಸಂಸ್ಥೆಗಳಲ್ಲಿ ಸಂಚರಿಸಿದ ಗಾಂಧೀಜಿ, ಕೊನೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ತಮ್ಮ ಹುಡುಕಾಟ ಕೊನೆಗೊಳಿಸಿದರು.
ಏಕೆಂದರೆ ರಾಜಕೀಯ ಎಂದರೆ ತಕ್ಷಣಕ್ಕೆ ಬೇಕಾದ ಅಧಿಕಾರದ ಪ್ರಾಪ್ತಿ ಎಂಬುದನ್ನು ಗಾಂಧೀಜಿ ಸುತಾರಾಂ ಒಪ್ಪುತ್ತಿರಲಿಲ್ಲ. ಅವರ ಅಭಿಪ್ರಾಯದಲ್ಲಿ ಹಿಂಸೆಯನ್ನು ಕೊನೆಗಾಣಿಸುವುದೇ ಅಧಿಕಾರ ಹಿಡಿಯುವ ನೈತಿಕ ಮಾರ್ಗ. ಏಕೆಂದರೆ ಹಿಂಸೆಯೆಂದರೆ ಆಡಳಿತದ ವೈಫಲ್ಯ. ನಿರಂತರ ಸಂವಹನದ ಜತೆಗೆ ಅಹಿಂಸಾತ್ಮಕ ಕಾರ್ಯಕ್ರಮಗಳು ರಾಜಕೀಯ ಚಟುವಟಿಕೆ ಆದ್ಯತೆ ಆಗಬೇಕೆ ಹೊರತು “ಅಧಿಕಾರ ಹಿಡಿ”ಯುವುದಷ್ಟೇ ಅಲ್ಲ. ಸೇವೆ ಹಾಗೂ ಸತ್ಯಾಗ್ರಹ ಎಂಬ ಎರಡು ಮಾರ್ಗಗಳು ಭಾರತದ ಆಧುನಿಕ ರಾಜಕೀಯಕ್ಕೆ ಗಾಂಧೀಜಿಯವರ ಕೊಡುಗೆ. ಹಾಗೆ ನೋಡಿದರೆ ಈ ಸೇವೆ ಹಾಗೂ ಸತ್ಯಾಗ್ರಹ ಎಂಬ ಎರಡು ಕಲ್ಪನೆಗಳು ಭಾರತಕ್ಕೇನೂ ಹೊಸತಲ್ಲ. “ಗಾಂಧೀ ಯುಗ” ಆರಂಭಕ್ಕೂ ಶತಮಾನಗಳ ಮುನ್ನವೇ ನಿಸ್ವಾರ್ಥ ಸೇವೆ,ಸತ್ಯಾಗ್ರಹ, ಅಹಿಂಸಾತ್ಮಕ ಚಳವಳಿಗಳು ಇದ್ದವು ಎಂಬುದಕ್ಕೆ ಅನೇಕ ಪುರಾವೆಗಳು ಸಿಗುತ್ತವೆ. ಆದರೆ ಸೇಸಾಧ್ಯವಿಲ್ಲ ್ಯಾಗ್ರಹವನ್ನು ಹೊಸ ರೀತಿಯ ರಾಜಕೀಯ ಆಂದೋಲನ,ಅಸ್ತ್ರವಾಗಿಸಿದ್ದು ಗಾಂಧೀಜಿ ಅವರು. ಇದರ ಮುಖ್ಯ ಅಂಶವೆಂದರೆ, ಗಾಂಧೀಜಿ ನೇತೃತ್ವದ ಹೋರಾಟದಲ್ಲಿ ಪುರುಷ, ಮಹಿಳೆ, ಮಕ್ಕಳು, ಕೃಷಿಕರು, ಶಿಕ್ಷಿತರು, ಅಂಗವಿಕಲರು, ದಲಿತರು, ಬ್ರಾಹ್ಮಣರು… ಹೀಗೆ ಸಮಾಜದ ಎಲ್ಲ ವರ್ಗದವರೂ ಭಾಗವಹಿಸಬೇಕು ಎಂಬುದು ಅವರ ಆಗ್ರಹಪೂರ್ವಕ ಅಪೇಕ್ಷೆ ಆಗಿತ್ತು.ಜಾತಿ, ಧರ್ಮದ ಆಧಾರದಲ್ಲಿಯೂ ಯಾರಲ್ಲೂ ಭೇದವೆಣಿಸದೆ ಎಲ್ಲರನ್ನೂ ಒಳಗೊಳ್ಳುವಿಕೆಯ ಈ ಗುಣವೇ ಗಾಂಧೀಜಿ ಹೋರಾಟವನ್ನು ದೇಶದ ಉದ್ದಗಲಕ್ಕೆ ಪಟ್ಟಣಗಳು, ಹಳ್ಳಿಹಳ್ಳಿಗಳಿಗೂ ಕೊಂಡೊಯ್ಯಿತು.
ರಾಜಕೀಯದ ಕುರಿತು ಗಾಂಧೀಜಿಯವರ ಮತ್ತೊಂದು ವಿಚಾರವೆಂದರೆ, ಗುರಿಯಷ್ಟೆ ಅಲ್ಲ, ದಾರಿಯೂ ಶುದ್ಧವಾಗಿರಬೇಕು ಎಂಬುದು. ಅನೇಕ ಬಾರಿ ಗುರಿಯು ದಾರಿಯನ್ನು ಸಮರ್ಥನೆ ಮಾಡಿಕೊಳ್ಳುತ್ತದೆ. ದೇಶದ ಯಾವುದೇ ಜೈಲಿನಲ್ಲಿರುವ ಕಳ್ಳನನ್ನೊ, ಕೊಲೆಗಾರನನ್ನೊ ಕೇಳಿದರೂ ಸಮರ್ಥನೆ ಮಾಡಿಕೊಳ್ಳಬಹುದು. ನನ್ನ ಮಗಳ ಮದುವೆಗೆ ಹಣ ಬೇಕಿತ್ತು, ವಿದ್ಯಾಭ್ಯಾಸಕ್ಕೆ ಹಣ ಬೇಕಿತ್ತು, ಅವನು ನನ್ನ ತಾಯಿಯನ್ನು ಅವಮಾನಿಸಿದ, ಅವನು ನನಗೆ ಮೋಸ ಮಾಡಿದ ಅದಕ್ಕೆ ಈ ಕೃತ್ಯ ಎಸಗಿದೆ ಎಂದು ಹೇಳುತ್ತಾನೆ. ಅಂದರೆ ತನ್ನ ಉದ್ದೇಶ ಇನ್ನೊಬ್ಬರಿಗೆ ಉಪಕಾರ ಮಾಡುವುದು ಅಥವಾ ಇನ್ನೊಬ್ಬರ ಅವಮಾನಕ್ಕೆ ನ್ಯಾಯ ಕೊಡಿಸುವುದೇ ಆಗಿತ್ತು, ಹಿಡಿದ ದಾರಿಯಲ್ಲಿ ತಪ್ಪೇನಿದೆ? ಎಂಬ ಸಮರ್ಥನೆ ಸಿಗುತ್ತದೆ. ಅಂಗುಲಿಮಾಲನ ಕಥೆಯೂ ಇದೇ ಅಲ್ಲವೇ? ತಾನು ಮಾಡುತ್ತಿರುವ ದರೋಡೆ ಕೃತ್ಯಗಳೆಲ್ಲವೂ ಕುಟುಂಬದ ಉದರ ಪೋಷಣೆಗಾಗಿಯೇ. ಹಾಗಾಗಿ ಅವರೂ ಇದರಲ್ಲಿ ಭಾಗಿಯಾಗುತ್ತಾರೆ ಎನ್ನುವ ಢಕಾಯಿತನಿಗೆ ನಂತರ ಸತ್ಯದ ಅರಿವಾಗುತ್ತದೆ.
ರಾಜಕೀಯದಲ್ಲಿ ಗುರಿ ಮತ್ತು ದಾರಿಯನ್ನು ಬೀಜ ಮತ್ತು ವೃಕ್ಷಕ್ಕೆ ಗಾಂಧೀಜಿ ಹೋಲಿಸುತ್ತಿದ್ದರು. ಕಹಿಯನ್ನು ಬಿತ್ತಿ ಸಿಹಿಯನ್ನು ಬೆಳೆಯಲು ಸಾಧ್ಯವಿಲ್ಲವಲ್ಲ. ಹಾಗೆಯೇ ತಪ್ಪು ಮಾರ್ಗದಿಂದ ಹಿಡಿದ ಅಧಿಕಾರದಲ್ಲಿ ಒಳಿತು ಮಾಡಲು ಹೇಗೆ ಸಾಧ್ಯ? ಗಾಂಧೀಜಿಯವರ ಚಿಂತನೆಗಳನ್ನು ಅಧ್ಯಯನ ನಡೆಸಿದರೆ, ರಾಜಕೀಯ ಎಂಬುದನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು. ಮೊದಲನೆಯದು “ಸಾತ್ವಿಕ ರಾಜಕೀಯ” ಹಾಗೂ “ಅಧಿಕಾರ ರಾಜಕೀಯ”.
ತಮ್ಮ ಅಂತಿಮ ದಿನಗಳಲ್ಲಂತೂ ಗಾಂಧೀಜಿಯವರಿಗೆ ಈ ಕುರಿತು ಮತ್ತಷ್ಟು ಸ್ಪಷ್ಟತೆ ಬಂದಿತ್ತು. ತಮ್ಮ ಹತ್ಯೆಯಾಗುವ ಕೆಲ ದಿನಗಳ ಹಿಂದೆ ಪ್ರಾರ್ಥನಾ ಸಭೆಯಲ್ಲಿ ಈ ಕುರಿತು ಮಾತನಾಡಿ, “ಈಗಾಗಲೆ ಪೂರ್ವ ಹಾಗೂ ಪಶ್ಚಿಮ ಪ್ರಪಂಚಗಳನ್ನು ಬಾಧಿಸುತ್ತಿರುವ ಅಧಿಕಾರ ರಾಜಕೀಯದಿಂದ ನಾವು ದೂರ ಇರಲು ಸಾಧ್ಯವೇ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ” ಎಂದಿದ್ದರು. ಸತ್ಯ ಹಾಗೂ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಆಗಿನ ಕಾಂಗ್ರೆಸ್ ನಾಯಕರನ್ನು ಮನವೊಲಿಸುವ ಅನೇಕ ಪ್ರಯತ್ನಗಳು ವಿಫಲವಾಗಿ, ಕಾಂಗ್ರೆಸನ್ನು ವಿಸರ್ಜಿಸಬೇಕು ಎಂದು ಸಲಹೆ ನೀಡಿದ್ದರು. ಕಾಂಗ್ರೆಸನ್ನು ತಾವೇ ಸಂವಿಧಾನವನ್ನೂ ರೂಪಿಸಿದ್ದ ಲೋಕಸೇವಾ ಸಂಘದಲ್ಲಿ ರೂಪಾಂತರಿಸಬೇಕೆಂಬ ಚರ್ಚೆಗಳನ್ನು ಗಾಂಧೀಜಿ ಅವರು ಸರ್ದಾರ್ ಪಟೇಲರು ಸೇರಿ ಅನೇಕರೊಂದಿಗೆ ಗಂಭೀರವಾಗಿ ಚರ್ಚೆ ನಡೆಸುತ್ತಿದ್ದರು.
ಆದರೆ ಇಂದಿನ ನಮ್ಮೆಲ್ಲರ ಕಣ್ಣೆದುರು ನಡೆಯುತ್ತಿರುವ ರಾಜಕೀಯ ಸ್ವಲ್ಪವಾದರೂ ಗಾಂಧೀಜಿ ಮಾರ್ಗದಲ್ಲಿ ನಡೆಯುತ್ತಿದೆಯೇ ಎಂದು ಆಲೋಚಿಸೋಣವೇ? ರಾಜಕೀಯ ವ್ಯಸ್ಥೆಯ ಅಡಿಪಾಯವಾದ ಸಹಕಾರ ತತ್ವ ನಿವಾಗಿಯೂ ಈಗ ಇದೆಯೇ?
ಪಕ್ಷ ಪಕ್ಷಗಳ ನಡುವಿನ ರಾಜಕೀಯ ವಿರೋಧ ಅಂದಿಗೂ, ಇಂದಿಗೂ ಎಲ್ಲ ದೇಶಗಳಲ್ಲೂ ಇದೆ. ಆದರೆ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪಕ್ಷ ರಾಜಕೀಯ ಎಂಬುದು ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪ್ರವೇಶಿಸಿಬಿಟ್ಟಿದೆ. ಚುನಾವಣೆಗೆ ಮುನ್ನ ಸೆಣೆಸುವ ಪಕ್ಷಗಳು ಯಾವುದೋ ಒಂದು ಪಕ್ಷ ಅಧಿಕಾರದ ಗದ್ದುಗೆ ಹಿಡಿದ ನಂತವೂ ಮುಂದುವರಿಯುತ್ತಲೇ ಇರುತ್ತದೆ. 1965ರ ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ರಾಜಕೀಯ ಸೇರಿದಂತೆ ದೇಶದ ವಿವಿಧ ಕ್ಷೇತ್ರಗಳ ಪ್ರಮಿಖರೊಂದಿಗೆ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರಿ ತುರ್ತು ಸಭೆಯೊಂದನ್ನು ಆಯೋಜಿಸಿದರು. ಸಾರಿಗೆ ವ್ಯವಸ್ಥೆ ಈಗಿನಷ್ಟು ಸಲೀಸಾಗಿಲ್ಲದ ಸಂದರ್ಭದಲ್ಲಿ, ಎಲ್ಲ ಆಹ್ವಾನಿತೂ ಸರಿಯಾದ ಸಮಯಕ್ಕೆ ದೆಹಲಿ ತಲುಪುವ ವ್ಯವಸ್ಥೆಯನ್ನೂ ಸರ್ಕಾರವೇ ಮಾಡಿತ್ತು. ಈ ಸಭೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಗಿನ ಸರಸಂಘಚಾಲಕ ಗುರೂಜಿ ಗೋಳ್ವಲ್ಕರ್ ಸಹ ಆಹ್ವಾನಿತರಾಗಿ ತೆರಳಿದ್ದರು. ಸಭೆಯಲ್ಲಿದ್ದ ಒಂದು ರಾಜಕೀಯ ಪಕ್ಷದ ನಾಯಕರು, “ಚೀನಾ ಆಕ್ರಮಣದ ಸಂದರ್ಭದಲ್ಲಿ ನಿಮ್ಮ ಸೇನೆ ಏನು ಮಾಡುತ್ತಿತ್ತು?”, “ನಿಮ್ಮ ಸೇನೆ ಈಗ ಏನು ಮಾಡುತ್ತಿದೆ” ಎಂದೂ ಅನೇಕ ಬಾರಿ ಹೇಳಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗುರೂಜಿ, “ನಿಮ್ಮ ನಿಮ್ಮ ಸೇನೆ ಎಂದರೆ ಏನರ್ಥ? ನೀವು ಬೇರೆ ದೇಶದಿಂದ ಬಂದವರೇ? ಅದು ನಮ್ಮ ಸೇನೆ” ಎಂದರು. ಅಂದರೆ, ಚುನಾವಣಾ ರಾಜಕೀಯ, ಸೈದ್ಧಾಂತಿಕ ಭಿನ್ನ ನಿಲುವುಗಳಿಗೆ ಮಿತಿ ಭಾರತದ ಇತ್ತೀಚೆಗಿನ ದಶಕದ ಇತಿಹಾಸದಲ್ಲೆ ಇತ್ತು.
ರಾಜ್ಯ ರಾಜ್ಯಗಳ ನಡುವಣ ವೈಷಮ್ಯ ತಾರಕಕ್ಕೇರಿದೆ ಈ ಸಮಯದಲ್ಲಿ. ದಕ್ಷಿಣದಲ್ಲಂತೂ, ರಾಜ್ಯಗಳಿಗೆಂದೇ ಪ್ರತ್ಯೇಕ ಸೈನ್ಯಗಳಿದ್ದಿದ್ದರೆ ಯುದ್ಧಗಳೇ ನಡೆಯುವಷ್ಟು ಮಿತಿಮೀರಿವೆ. ಉದಾಹರಣೆಗೆ 2014ರವರೆಗೆ ಈಗಿನ ಆಂಧ್ರಪ್ರದೇಶ ಹಾಗೂ ತೆಲಂಗಾಣ ಒಂದೇ ರಾಜ್ಯವಾಗಿದ್ದವು. ಮೂರ್ನಾಲ್ಕು ದಶಕದಿಂದಲೂ ತೆಲಂಗಾಣ ಪ್ರತ್ಯೇಕ ಕೂಗು ಇತ್ತಾದರೂ, ಎರಡೂ ಭಾಗದ ಜನರ ನಡುವಿನ ಸಂವಹನ, ಕೊಡು ಕೊಳ್ಳುವಿಕೆ ನಡೆದೇ ಇತ್ತು. ಒಮ್ಮೆ ರಾಜಕೀಯವಾಗಿ ಪ್ರತ್ಯೇಕವಾದ ಕೂಡಲೆ ಎರಡೂ ಭಾಗಗಳ ಜನರ ನಡುವೆ ಭಿನ್ನಾಭಿಪ್ರಾಯಗಳು ಮಿತಿ ಮೀರಿದವು, ಸಂಘರ್ಷಗಳೇ ನಡೆದವು. ಈಗಲೂ ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಪ್ರತ್ಯೇಕ ರಾಜ್ಯದ ಕೂಗುಗಳು ಕೇಳಿಬರುತ್ತಲೇ ಇವೆ. ಭವಿಷ್ಯದಲ್ಲಿ ಇಂತಹ ಯಾವುದಾದರೂ ಒಂದು ಕೂಗು ಸಾಕಾರವಾಯಿತು ಎಂದಿಟ್ಟುಕೊಳ್ಳೋಣ. ಅಲ್ಲಿವರೆಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳೊಂದಿಗೆ ಜೀವಿಸುತ್ತಿದ್ದ ಎರಡೂ ಭಾಗದ ಜನರು ಇದ್ದಕ್ಕಿದ್ದಂತೆ ಶತ್ರುಗಳಾಗಿಬಿಡುತ್ತಾರೆ. ಹಾಗಾದರೆ ಇವೆಲ್ಲ ನೈಸರ್ಗಿಕ ಭೇದಗಳು ಎನ್ನುವುದು ಹೇಗೆ? ರಾಜಕೀಯ ವಿಭಜನೆಯಾದ ಕೂಡಲೆ ಸಾಮಾಜಿಕ ವಿಭಜನೆ ಹೇಗೆ ಸಂಭವಿಸುತ್ತದೆ?
ಇನ್ನು, ಕೇಂದ್ರ ಹಾಗೂ ರಾಜ್ಯಗಳ ನಡುವಣ ಸಂಬಂಧ. ಎದುರಾಳಿ ಪಕ್ಷವನ್ನು ಕಟ್ಟಿ ಹಾಕಲು ಕೇವಲ ಮಾತಿನ ಚಾಟಿಗಿಂತಲೂ ಮುಂದೆ ಹೋಗುವ ಪಕ್ಷಗಳು ಚುನಾವಣಾ ಆಯೋಗದಂತಹ ಸಾಂವಿಧಾನಿಕ‌ ಸಂಸ್ಥೆಗಳನ್ನು, ಸಿಬಿಐನಂತಹ ತನಿಖಾ ಸಂಸ್ಥೆಗಳನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. 2005ರಲ್ಲಿ, ಆಗಿನ ಗುಜರಾತ್ ಗೃಹಸಚಿವ ಅಮಿತ್ ಷಾ ಅವರನ್ನು ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿ ಸಿಲುಕಿಸಿ ರಾಜಕೀಯವಾಗಿ ತುಳಿಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ, ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಗಿನ ಬಿಜೆಪಿ ಆರೋಪಿಸಿತ್ತು. 2013ರಲ್ಲಿ ಕಲ್ಲಿದ್ದಲು ಹಗರಣದ ತನಿಖೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂಬ ಕಾರಣಕ್ಕೆ ಸಿಬಿಐ “ಪಂಜರದ ಗಿಳಿ” ಎಂದು ಸ್ವತಃ ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಇದು ರಾಜಕೀಯವಾಗಿ ಚುನಾವಣೆ ವಿಷಯವಾಗಿಯೂ ಸಾಕಷ್ಟು ಬಳಕೆಯಾಯಿತು. ನಂತರವಾದರೂ ಈ ದಾರಿ ನಿಂತಿತೇ?
ಈಗಲೂ ಅದೇ ಕತೆ,ಅದೇ ಆರೋಪ.2014ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಾರದಾ ಸುದ್ದಿ ಸಂಸ್ಥೆ ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ, ಟಿಎಂಸಿಯ ಕೆಲ ಮುಖಂಡರು ಲಂಚ ಪಡೆಯುತ್ತಿದ್ದಾರೆನ್ನಲಾದ ವಿಡಿಯೋ ಬಹಿರಂಗಗೊಂಡಿತ್ತು. ಇದು 2016ರ ಚುನಾವಣೆಯಲ್ಲೂ ಚರ್ಚೆ ಆಯಿತು. ಇದೀಗ ಪಶ್ಚಿಮ ಬಂಗಾಳದ ಚುನಾವಣೆ ಮುಗಿದ ಕೂಡಲೆ, ಹೊಸ ಸರ್ಕಾರದ ಇಬ್ಬರು ಸಚಿವರು, ಒಬ್ಬ ಶಾಸಕ ಹಾಗೂ ಮಾಜಿ ಮೇಯರ್ ಸೇರಿ ನಾಲ್ವರು ಟಿಎಂಸಿ ನಾಯಕರನ್ನು ಸಿಬಿಐ ಬಂಧಿಸಿದೆ. ನಾರದಾ ಟೇಪ್ ಗಳಲ್ಲಿ ಇವರೆಲ್ಲರ ಜತೆಗೆ, 2020ರಿಂದ ಬಿಜೆಪಿಯಲ್ಲಿರುವ ಮಾಜಿ ಟಿಎಂಸಿ ನಾಯಕ ಸುವೇಂದು ಮುಖರ್ಜಿ ಅವರದ್ದು ಎನ್ನಲಾದ ವಿಡಿಯೋ ಸಹ ಇತ್ತು. ಆದರೆ ಸಿಬಿಐ ಸುವೇಂದು ಅವರನ್ನು ಬಂಧಿಸಿಲ್ಲ ಎಂಬುದಕ್ಕೆ ಈಗ ಬಲವಾದ ಆಕ್ಷೇಪ ವ್ಯಕ್ತವಾಗಿದೆ. ಇದಕ್ಕೆ ಮತ್ತೊಂದು ಉದಾಹರಣೆಯೆಂದರೆ ಮಹಾರಾಷ್ಟ್ರದ್ದು. 2014ರಲ್ಲಿ ಪಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ ಅವರು, ಎನ್ಸಿಪಿ ನಾಯಕ ಅಜಿತ್ ಪವಾರ್ ವಿರುದ್ಧ ನೀರಾವರಿ ಪ್ರಕರಣಗಳ ತನಿಖೆಗೆ ಆದೇಶಿಸಿದ್ದರು. ದೇಶಾದ್ಯಂತ ಸದ್ದು ಮಾಡಿದ್ದ ನೀರಾವರಿ ಹಗರಣಗಳಲ್ಲಿ ಅಜಿತ್ ಪವಾರ್ ಭಾಗಿಯಾಗಿದ್ದಾರೆಂಬ ಆರೋಪಗಳಿದ್ದವು. ಆದರೆ 2019ರಲ್ಲಿ ಚುನಾವಣೆ ನಂತರ ಸರ್ಕಾರ ರಚನೆ ಕಸರತ್ತಿನಲ್ಲಿ ಅಜಿತ್ ಪವಾರ್ ಬಿಜೆಪಿ ಜತೆ ಕೈಜೋಡಿಸಿ ರಾತ್ರೋರಾತ್ರಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರ ಬೆನ್ನಲ್ಲೇ, ಅಜಿತ್ ಪವಾರ್ ವಿರದ್ಧ ಇದ್ದ 9 ಪ್ರಕರಣಗಳನ್ನು ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳ ಹಿಂಪಡೆಯಿತು. ಅಂದರೆ, ಈ ಉದಾಹರಣೆಗಳ ಮೂಲಕ, ಬಿಜೆಪಿಗೆ ಬಂದರೆ ಸಿಬಿಐ ಕುಣಿಕೆಯಿಂದ ಪಾರಾಗಬಹುದು ಎಂಬ ಸಂದೇಶವನ್ನು ಇಲ್ಲಿ ನೀಡಲಾಗುತ್ತಿದೆಯೇ ?
ಹಾಗೆಯೇ ದಿಲ್ಲಿಯ ಬೀದಿಯ ಗೋಡೆಗಳಲ್ಲಿ ‘ನಮ್ಮ ಮಕ್ಕಳಿಗಾಗಿ ಕಾಯ್ದಿಟ್ಟ ಲಸಿಕೆಗಳನ್ನು ವಿದೇಶಗಳಿಗೆ ಯಾಕೆ ಕಳಿಸಿಕೊಟ್ಟಿರಿ ಮೋದೀಜಿ?’ ಎಂದು ಪ್ರಶ್ನಿಸಿ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು. ಕೇಂದ್ರ ಸರ್ಕಾರದ ಅಧೀನದಲ್ಲಿರುವ ದಿಲ್ಲಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ 24 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿ ಆರೋಪಿಗಳನ್ನು ತಕ್ಷಣ ಬಂಧಿಸಲಾಯಿತು. ಅಲ್ಲದೇ 800ಕ್ಕೂ ಹೆಚ್ಚು ಪೋಸ್ಟರ್ ಮತ್ತು ಬ್ಯಾನರ್ ವಶಪಡಿಸಿ ಇನ್ನೂ ಹಲವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಭಿತ್ತಿಪತ್ರ ಅಂಟಿಸಿದವರ ಉದ್ದೇಶ ಒಳ್ಳೆಯದಿತ್ತೊ, ಕೆಟ್ಟದಿತ್ತೊ, ಇದು ವಿದೇಶಿ ಮಾಧ್ಯಮಗಳಲ್ಲಿ ಹೇಗೆ ಬಿಂಬಿತವಾಗುತ್ತಿತ್ತೊ ಎಂಬ ಪ್ರಶ್ನೆಗಳು ಬೇರೆ. ಅವು ಭಾರತದ ಸಂವಿಧಾನ ನೀಡಿರುವ ಹಕ್ಕಿಗೆ ಅನುಗುಣವಾಗಿತ್ತೋ ಇಲ್ಲವೋ ಎಂಬುದನ್ನು ಪ್ರಧಾನವಾಗಿ ಅವಲೋಕಿಸುವುದು ಮುಖ್ಯ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮನಸೋಯಿಚ್ಛೆ ವ್ಯಕ್ತಪಡಿಸಲಾಗದು ಎಂದಿದ್ದರೂ, ಸರ್ಕಾರಗಳು ಮನಸೋಯಿಚ್ಛೆ ಅಭಿವ್ಯಕ್ತಿಯನ್ನು ದಮನಗೊಳಿಸಲೂ ಅವಕಾಶವಿಲ್ಲ ಎಂಬುದನ್ನೂ ಅರಿಯಬೇಕು.ಪ
ಬಂಗಾಳದ ಚುನಾವಣೆ ಹಾಗೂ ಚುನಾವಣೋತ್ತರ ಸನ್ನಿವೇಶಗಳಂತೂ ಯಾವುದೇ ಪಕ್ಷಕ್ಕೆ ಹಾಗೂ ಜನರಿಗೆ ಶೋಭೆ ತರುವಂಥದ್ದಲ್ಲ. ಪರಸ್ಪರ ಹಿಂಸಾಚಾರಗಳ ಮೂಲಕವೇ ತಮ್ಮ ಮತಕೋಟೆ ಗಟ್ಟಿಮಾಡಿಕೊಳ್ಳುವ ಈ ಪದ್ಧತಿಯಿಂದ ನಿಜವಾದ ಅಭಿವೃದ್ಧಿ ಕಾರ್ಯ ಸಾಧ್ಯವೇ ಎಂಬುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು.
ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಮ್, ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ಎಂಬ ವಾಕ್ಯವಿದೆ. ನಾವು ಯಾವುದೇ ದೇವರಿಗೆ ನಮಸ್ಕರಿಸಿದರೂ ಅದು ಕೇಶವನಿಗೆ ಸೇರುತ್ತದೆ, ಹಾಗಾಗಿ ಆ ಮಾರ್ಗ ಈ ಮಾರ್ಗ ಎಂದು ಕಿತ್ತಾಡುವುದರಲ್ಲಿ ಅರ್ಥವಿಲ್ಲ ಎಂಬುದು ಇದರ ಸಂದೇಶ. ಈ ಮಾತನ್ನೇ ಇಂದಿನ ರಾಜಕೀಯ ವ್ಯವಸ್ಥೆಗೆ ತುಸು ವ್ಯಂಗ್ಯಾತ್ಮಕವಾಗಿ ಹೋಲಿಸುವುದಾದರೆ, ಎಲ್ಲ ರಾಜಕೀಯ ಪಕ್ಷಗಳ, ಎಲ್ಲ ರಾಜ್ಯ, ಕೇಂದ್ರ ಸರ್ಕಾರಗಳ ಉದ್ದೇಶ ಚುನಾವಣೆ ಗೆಲುವು ಒಂದೆ. ಪ್ರತಿ ದಿನದ ಅವೆಲ್ಲದರ ಚಟುವಟಿಕೆ, ಆಡಳಿತಗಳೂ ಚುನಾವಣೆ ಗೆಲುವಿನ ಲಕ್ಷ್ಯದತ್ತಲೇ ನೆಟ್ಟಿರುತ್ತವೆ. ಈ ಹೆಜ್ಜೆ ಇಟ್ಟರೆ ಇನ್ನು ನಾಲ್ಕು ವರ್ಷದ ನಂತರ ಚುನಾವಣೆಯಲ್ಲಿ ಜಯಿಸಬಹುದು, ಈ ನಿರ್ಧಾರ ಕೈಗೊಂಡರೆ ಮುಂದಿನ ಚುನಾವಣೆಯಲ್ಲಿ ಮತ ಕಡಿತ ಆಗಬಹುದು ಎಂಬ ಯೋಚನೆಯಲ್ಲಿಯೇ ಇರುತ್ತಾರೆ.
ಹೀಗೆಯೇ ಆದರೆ, ರಾಜಕೀಯವನ್ನು ಸಮಾಜ ಸುಧಾರಣೆಯ ಮಾರ್ಗ ಎಂದು ಯಾವ ರೀತಿಯಲ್ಲಿ ಹೇಳಲು ಸಾಧ್ಯ?
ಈಗಿನ ಸನ್ನಿವೇಶದಲ್ಲಿ ರಾಜಕೀಯ ನಾಯಕರು ಆಲೋಚನೆ ಮಾಡಬೇಕಾದ ರೀತಿ ಯಾವುದು?
ದೇಶ,ಸೇನೆ,ಯುದ್ಧ ಎಂದಾಗ ನಮ್ಮ‌ ಹೃದಯ ದೇಶಭಕ್ತಿ,ಅಭಿಮಾನದಿಂದ ಮಿಡಿಯುತ್ತದೆ. ನಮ್ಮ ಹೃದಯದ ಬಡಿತ ಜಾಸ್ತಿ ಆಗುತ್ತದೆ.ರಕ್ತನಾಳಗಳು ಉಬ್ಬುತ್ತವೆ. ಈಗ ದೇಶ ಕೊರೊನಾ ಎಂಬ ಅದೃಶ್ಯ ಶತ್ರುವಿನ ವಿರುದ್ಧ ನಡೆಸುತ್ತಿರುವ ಹೋರಾಟ ದೇಶದ ಗಡಿಯಂಚಿನಲ್ಲಿ ನಡೆಯುವ ಯುದ್ಧಕ್ಕೆ ಯಾವ ರೀತಿಯಿಂದಲೂ ಕಡಿಮೆ ಇಲ್ಲ‌. ಆದರೆ ನಮ್ಮ ರಾಜಕೀಯ ಪಕ್ಷಗಳು ಕೊರೊನಾ ಎಂಬ ಶತ್ರುವಿನ ವಿರುದ್ಧ ಹೋರಾಡಲು ತಮ್ಮ ಪಕ್ಷದ ಕಾರ್ಯಕರ್ತರು,ಅನುಯಾಯಿಗಳನ್ನು ಸಂಪೂರ್ಣವಾಗಿ ತೊಡಗಿಸಲು ಒಂದು ವರ್ಷದ ನಂತರವೂ ಸಾಧ್ಯವಾಗದೇ ಇರುವುದು ಏನನ್ನು ತೋರಿಸುತ್ತದೆ.ಮಾತಿಗೂ ಕೃತಿಗೂ ಇರುವ ಅಂತರವನ್ನಲ್ಲವೇ. ಪಕ್ಷಗಳ ಅನುಯಾಯಿಗಳಲ್ಲಿ ಸಾಮಾನ್ಯ ಕಾರ್ಯಕರ್ತರು ಮಾತ್ರವಲ್ಲ, ವೈದ್ಯರು,ಯೋಧರು ಮುಂತಾದ ತಜ್ಞರೆಲ್ಲ ಇದ್ದಾರಲ್ಲ! ದೇಶ,ಯುದ್ಧ,ಸೇನೆಯ ಬಗ್ಗೆ ಮಾತನಾಡುವವರಲ್ಲಿ ಹತ್ತರಷ್ಟು ಜನರು ಕೊರೊನಾ ವಿರುದ್ಧದ ಹೋರಾಟಕ್ಕೆ ಇಳಿದರೆ,ಕೊರೊನಾ ಪೀಡಿತರ ಸೇವೆಗಿಳಿದರೆ ಕೊರೊನಾ ಜಯಿಸುವುದು ನಮಗೊಂದು‌ ಸವಾಲೇನು?
ಮುಖ್ಯವಾಗಿ ಪಕ್ಷದ ಕಾರ್ಯಕರ್ತರಿಗೆ ಪಡೆಯನ್ನು,ನಾಯಕರನ್ನು ರಾಜಕೀಯದ ಮೂಲಾಶಯವಾದ ಸೇವೆಗೆ ಅಣಿಮಾಡಲು(ತೋರಿಕೆಯ,ಪ್ರಚಾರಕ್ಕಾಗಿ ಮಾಡುವ ಕಾಟಾಚಾರ ಸೇವೆ ಸೇವೆಯಲ್ಲ!) ಪ್ರಕೃತಿಯೆ ಸೃಷ್ಟಿಸಿದ ಉತ್ತಮ ಅವಕಾಶವಲ್ಲವೇ?
ಇನ್ನಾದರೂ ಆ ಬಗ್ಗೆ ಪಕ್ಷಗಳು ಆಲೋಚನೆ ಮಾಡಲಿ.ಸೇವೆ,ಸವಾಲಿಗೆ ಹೊರತಾಗಿ‌ ರಾಜಕೀಯ ಇರಲು ಸಾಧ್ಯವಿಲ್ಲವಲ್ಲ!
 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top