ಹೇಳಿದಂತೆ ಮಾಡು” ಎನ್ನುವುದು ಶಾಸಕಾಂಗದ ಮಾರ್ಗವಲ್ಲ

ಅತ್ಯಂತ ಸನ್ನಡತೆಯ,ಸೌಮ್ಯ ಸ್ವಭಾವದ,ಶುದ್ಧರಾದ ಪ್ರಧಾನಿ ಎಂದೇ ಕರೆಯಲಾಗುತ್ತಿದ್ದ ಡಾ. ಮನಮೋಹನ್ ಸಿಂಗರ ಕಾಲದ ಘಟನೆ ಇದು. ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರದ ಅವಧಿಯಲ್ಲಿ ಕಲ್ಲಿದ್ದಲು ಗಣಿ ಹಂಚಿಕೆ ವಿಚಾರ ವಿವಾದಕ್ಕೆ ಈಡಾಯಿತು. ಆ ವೇಳೆ ಕಲ್ಲಿದ್ದಲು ಖಾತೆಯನ್ನು ಸ್ವತಃ ಪ್ರಧಾನಿ ಅವರೇ ಹೊಂದಿದ್ದರು. ಗಣಿ ಹಂಚಿಕೆಯ ವಿವಿಧ ಹಂತಗಳಲ್ಲಿ ಪ್ರಧಾನಿ ಅಥವಾ ಪ್ರಧಾನಿ ಕಚೇರಿಯೂ ಭಾಗಿಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಯಾವಾಗ ಸಿಬಿಐ ಕೈಗೆತ್ತಿಕೊಂಡಿತೊ, ಆಗ ಸಿಬಿಐ ಎದುರು ವಿಚಾರಣೆಗೆ ಖುದ್ದು ಪ್ರಧಾನಿಯೇ ಹಾಜರಾದರು. ಒಡಿಶಾದ ಕಲ್ಲಿದ್ದಲು ಗಣಿ ಹಂಚಿಕೆಗೆ ತಾವು ಅನುಮೋದನೆ ನೀಡಿದ್ದು ನಿಜ, ಇದು ಅಂದಿನ ಕಲ್ಲಿದ್ದಲು ಸಚಿವಾಲಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಪಿ.ಸಿ. ಪಾರಖ್ ಹಾಗೂ ಪ್ರಧಾನಿ ಕಚೇರಿ ಅಧಿಕಾರಿಗಳ ಸಲಹೆ ಮೇರೆಗೆ ಕೈಗೊಂಡ ನಿರ್ಧಾರ ಎಂದು ತಪ್ಪಿನ ಸಂಪೂರ್ಣ ಹೊಣೆಯನ್ನು ಅಧಿಕಾರಿಗಳ ಮೇಲೆ ಹೊರಿಸಿಬಿಟ್ಟರು.
ಇದು ಒಂದು ಉದಾಹರಣೆ ಅಷ್ಟೆ. ಸಾಮಾನ್ಯವಾಗಿ ರಾಜಕೀಯ ನಾಯಕರು ಕೈಗೊಳ್ಳುವ ಅದೆಷ್ಟೋ ತಪ್ಪು ನಿರ್ಧಾರ,ಪ್ರಮಾದಗಳಿಗೆ ಅಧಿಕಾರಿಗಳು ತಲೆದಂಡ ತೆತ್ತಿದ್ದಾರೆ. ತೆರುತ್ತಲೇ ಇದ್ದಾರೆ. ಕೇವಲ ಶಾಸಕಾಂಗ,ಕಾರ್ಯಾಂಗ ಮಾತ್ರವಲ್ಲ,ಆಗಾಗ ಈ ಎರಡೂ ಅಂಗಗಳ ಜತೆ ನ್ಯಾಯಾಂಗವೂ ಸೇರಿ ಮೂರೂ ಅಂಗಗಳು ಪರಸ್ಪರ ಸಂಘರ್ಷ ನಡೆಸಿರುವುದು, ವಾಗ್ವಾದ ನಡೆಸುವುದು, ಹಗ್ಗ-ಜಗ್ಗಾಟದಲ್ಲಿ ತೊಡಗುವುದು ಹೊಸತೇನಲ್ಲ ಆದರೆ ಕಾರ್ಯಾಂಗ ಹಾಗೂ ಶಾಸಕಾಂಗದ ನಡುವೆ ನಡೆಯುವಷ್ಟು ಸಂಘರ್ಷ ಬೇರೆಡೆ ಕಂಡುಬರುವುದಿಲ್ಲ. ಈ ಎರಡೂ ಅಂಗಳ ನಡುವೆ ತಾದಾತ್ಮ್ಯ, ಹೊಂದಾಣಿಕೆಯೂ ಇದೆ ಎನ್ನಿ. ಸದ್ಯ ಸಂಘರ್ಷದ ಕಡೆ ನೋಡೋಣ.
ಹಾನರಬಲ್ ಈಸ್ಟ್ ಇಂಡಿಯಾ ಕಂಪನೀಸ್ ಸಿವಿಲ್ ಸರ್ವೀಸ್ನ(ಎಚ್ಇಐಸಿಸಿಎಸ್) ಬಳುವಳಿಯೇ ಆಗಿರುವ ಐಎಎಸ್ ಎಂಬ ಉನ್ನತ ಸರಕಾರಿ ಹುದ್ದೆ ಸ್ವಾತಂತ್ರ್ಯಪೂರ್ವದಿಂದಲೂ ಪ್ರತಿಭಾವಂತರನ್ನು ಆಕರ್ಷಿಸುತ್ತಲೇ ಇದೆ. ಈಗಲೂ ಅಂಥ ಖದರನ್ನು ಉಳಿಸಿಕೊಂಡಿದೆ. ಜೀವನದಲ್ಲಿ ಒಮ್ಮೆ ಯುಪಿಎಸ್ಸಿ ನಡೆಸುವ
ಪರೀಕ್ಷೆ ಬರೆದು ಉತ್ತೀರ್ಣರಾದರೆ, ಮುಂದೆ ಮೂರು ದಶಕಗಳ ಕಾಲ ಯಾವುದೇ ಪರೀಕ್ಷೆ ಬರೆಯದೇ ಸರಕಾರದ ಅತ್ಯುನ್ನತ ಹುದ್ದೆಗಳನ್ನುಅಲಂಕರಿಸಬಹುದು; ಚುನಾಯಿತ ಸರಕಾರಗಳು, ಆಳುವ ಮಂದಿ ಐದು ವರುಷಕ್ಕೊಮ್ಮೆ ಬದಲಾದರೂ- ತಾವು ಕಾರ್ಯಾಂಗದ ಆಯಕಟ್ಟಿನಲ್ಲಿ ನಿವೃತ್ತಿವರೆಗೆ ಇರಬಹುದು ಎಂಬ ಸಂಗತಿಗಳು ಸೆಳೆತಕ್ಕೆ ಕಾರಣ.
ಭಾರತೀಯ ನಾಗರಿಕ ಸೇವೆ(ಐಎಎಸ್/ಐಪಿಎಸ್) ಅಧಿಕಾರಿಗಳು ಎಂದರೆ ಕಾರ್ಯಾಂಗದ ಪ್ರಮುಖ ಭಾಗ. ಶಾಸಕಾಂಗ ರೂಪಿಸುವ ಎಲ್ಲ ಯೋಜನೆ, ಕಾನೂನು-ಕಟ್ಟಳೆಗಳನ್ನು ಜಾರಿಗೆ ತರುವ ದೊಡ್ಡ ಹೊಣೆಗಾರಿಕೆಯನ್ನು ಕಾರ್ಯಾಂಗದ ಮಂದಿ ಹೊಂದಿರುವುದರಿಂದ, ಶಾಸಕಾಂಗದ ಜನಪ್ರತಿನಿಧಿಗಳ ಜತೆ ನಿತ್ಯವೂ ಒಡನಾಟ ಹೊಂದಿರಲೇಬೇಕು. ಈ ಸಮಯದಲ್ಲಿ ಇಬ್ಬರ ನಡುವೆ ಅನೇಕ ಒಳ್ಳೆಯ ಹಾಗೂ ಮತ್ತೆ ಹಲವು ಬಾರಿ ಒಳ್ಳೆಯದಲ್ಲದ ವಿಚಾರಗಳಿಗೂ “ಹೊಂದಾಣಿಕೆ” ಆಗುತ್ತವೆ. ಆದರೆ ಕೆಲವೊಮ್ಮೆ ಈ “ಹೊಂದಾಣಿಕೆ” ಆಗದ ಪರಿಣಾಮವಾಗಿ ಸಂಘರ್ಷಕ್ಕೂ ಕಾರಣವಾಗುತ್ತದೆ.
ಸ್ವಾತಂತ್ರ್ಯ ಬಂದ ಹೊಸತರಲ್ಲಿ ಜನೋಪಕಾರಿಯಾದ ಕೆಲಸಗಳ ಇಂಗಿತವನ್ನು ಜನಪ್ರತಿನಿಧಿಗಳು ವ್ಯಕ್ತಪಡಿಸುತ್ತಿದ್ದರು. ಅದಕ್ಕೆ ತಕ್ಕನಾದ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಸಂಪೂರ್ಣ ಹೋಣೆ ಐಎಎಸ್ ಗಳಿಗಿರುತ್ತಿತ್ತು. ಕೆಲವು ಇಲಾಖೆಗಳಲ್ಲಂತೂ ರಾಜಕಾರಣಿಗಳ ಪ್ರವೇಶವೇ ಇಲ್ಲದಂತೆ ಕಾರ್ಯ ನಡೆಯುತ್ತಿತ್ತು. (ಇತಿಹಾಸಕಾರ ರಾಮಚಂದ್ರ ಗುಹಾ ಒಂದೆಡೆ ಹೇಳಿರುವಂತೆ- ಈ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಮತ್ತು ಉಪ ಪ್ರಧಾನಿಯಾಗಿದ್ದ ವಲ್ಲಭಬಾಯಿ ಪಟೇಲ್ ಅವರು. ತಮ್ಮ ಕಾಲದಲ್ಲಿ ಸಿವಿಲ್ ಅಧಿಕಾರಿಗಳನ್ನು ರಾಜಕಾರಣಿಗಳ ಕಾಕದೃಷ್ಟಿಯಿಂದ ಹೊರಗಿಟ್ಟಿದ್ದರು. ಸರಕಾರದ ಮರ್ಜಿ ಇರಲಿಲ್ಲ.ಅಧಿಕಾರಿಗಳ ಬಡ್ತಿಯನ್ನೂ ಕಾರ್ಯಾಂಗವೇ ನಿರ್ಧರಿಸುತ್ತಿತ್ತು. ಸಿವಿಲ್ ಅಧಿಕಾರಿಗಳ ಸ್ವಾಯತ್ತತೆ, ಪ್ರಾಮಾಣಿಕತೆ ಮತ್ತು ಋಜುತ್ವವನ್ನು ಅವರು ಗೌರವಿಸುತ್ತಿದ್ದರು. ತಮ್ಮನ್ನು ಟೀಕಿಸಲು, ತಮ್ಮನ್ನು ತಿದ್ದಲು ಕಾರ್ಯದರ್ಶಿಗಳು ಹಿಂಜರಿಯಬಾರದೆಂಬುದು ಪಟೇಲರ ನಿಲುವೇ ಆಗಿತ್ತು. ಆದರೆ,ಇದೆಲ್ಲವೂ ಇಂದಿರಾಗಾಂಧಿ ಕಾಲದಲ್ಲಿ ಬದಲಾಯಿತು)
ಆದರೆ ಕಾಲ ಬದಲಾದಂತೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಆಗಿದೆ. ಈ ಹಿಂದಿನಷ್ಟು “ಸ್ವಾತಂತ್ರ್ಯ” ಐಎಎಸ್ ಅಧಿಕಾರಿಗಳಿಗೆ ಇಲ್ಲ. ಜನರ ಜತೆಗೆ ಹಾಗೂ ವಿವಿಧ ಕ್ಷೇತ್ರದ ತಜ್ಞರು, ಸಂಸ್ಥೆಗಳ ಜತೆಗೆ ಹೆಚ್ಚೆಚ್ಚು ಬೆರೆಯುವ ರಾಜಕಾರಣಿಗಳು, ಕೆಲಸವನ್ನು ಹೀಗೆಯೇ ಮಾಡಬೇಕೆಂದು ತಾಕೀತು ಮಾಡುತ್ತಾರೆ. ಅನೇಕ ಬಾರಿ ಜನಪ್ರತಿನಿಧಿಗಳ ಆದೇಶವನ್ನು ಅನುಷ್ಠಾನ ಮಾಡುವಷ್ಟೇ ಕೆಲಸ ಉಳಿದಿರುತ್ತದೆ. ಕಾನೂನು ಹಾಗೂ ನಿಯಮಾವಳಿ ಪ್ರಕಾರ ತಮ್ಮ ಆದೇಶವನ್ನು ಪಾಲನೆ ಮಾಡಲಾಗದು ಎಂಬುದನ್ನು ಸೌಜನ್ಯಪೂರ್ವಕವಾಗಿ, ಕೆಲವೊಮ್ಮೆ ಕಠಿಣವಾಗಿ ತಿಳಿಸುವ ಹೊಣೆಗಾರಿಕೆಯನ್ನೂ ಅಧಿಕಾರಿಗಳೇ ಹೊರಬೇಕಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ ನಿತ್ಯನೂತನ ವಿಚಾರವಾಗಿದೆ. ಒಂದು ಹುದ್ದೆಯಲ್ಲಿ ಹೆಚ್ಚುಕಾಲ ಇದ್ದರೆ ಭ್ರಷ್ಟಾಚಾರಕ್ಕೆ ಅವಕಾಶವಾಗುತ್ತದೆ ಎಂಬ ಕಾರಣಕ್ಕೆ ನಿಯಮಿತ ವರ್ಗಾವಣೆಯನ್ನು ಕಡ್ಡಾಯ ಮಾಡಲಾಗಿದೆ. ಆದರೆ ಆ ಇಲಾಖೆಯ ಆಳ ಅಗಲ ತಿಳಿಯುವ ಮೊದಲೇ ವರ್ಗಾವಣೆ ನಡೆಯುತ್ತಿದೆ.
ಇದೀಗ ರಾಜ್ಯದಲ್ಲಿ ಹೆಚ್ಚು ಚರ್ಚೆಯಲ್ಲಿರುವ ಮೈಸೂರು ಜಿಲ್ಲಾಧಿಕಾರಿ ವಿಚಾರವನ್ನೇ ತೆಗೆದುಕೊಳ್ಳೋಣ. 2020ರ ಆಗಸ್ಟ್ 29ರಂದು ಬಿ. ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಯಿತು. ಮೈಸೂರು ದಸರಾ ತಯಾರಿ ನಡೆಯುತ್ತಿರುವ ನಡುವೆಯೇ ಸೆಪ್ಟೆಂಬರ್ 29ರಂದು ಅಂದರೆ ಸರಿಯಾಗಿ ಒಂದು ತಿಂಗಳಿಗೆ ಶರತ್ ಅವರನ್ನು ಬೇರೆಡೆ ವರ್ಗಾವಣೆ ಮಾಡಿ ರೋಹಿಣಿ ಸಿಂಧೂರಿ ಅವರನ್ನು ನೇಮಿಸಲಾಯಿತು. ಸಹಜವಾಗಿ ಇದರಿಂದ ನೊಂದ ಅಧಿಕಾರಿ ಆಡಳಿತಾತ್ಮಕ ನ್ಯಾಯಮಂಡಳಿ ಮೆಟ್ಟಿಲೇರಿದರು. ನಂತರ, ಶರತ್ ಅವರನ್ನು ಮರುನೇಮಿಸಬೇಕು ಎಂದು ನ್ಯಾಯಮಂಡಳಿ ತಿಳಿಸಿತ್ತು. ನಂತರ ನಡೆದ ವಿವರಗಳಿಗಿಂತಲೂ ಹೆಚ್ಚಾಗಿ ಕುತೂಹಲಕರ ಸಂಗತಿ ಎಂದರೆ, 2018ರಲ್ಲಿ ಸ್ವತಃ ರೋಹಿಣಿ ಸಿಂಧೂರಿ ಈ ಸ್ಥಾನದಲ್ಲಿದ್ದರು. 2017ರ ಜುಲೈ 14ರಂದು ಹಾಸನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದ ರೋಹಿಣಿ ಅವರನ್ನು 2018ರ ಮಾರ್ಚ್ 7ರಂದು ಬೆಂಗಳೂರಿಗೆ ವರ್ಗಾವಣೆ ಮಾಡಲಾಯಿತು. ಅವಧಿಗೆ ಮುನ್ನವೇ ತಮ್ಮನ್ನು ವರ್ಗಾವಣೆ ಮಾಡಲಾಗಿದೆ ಎಂದು ರೋಹಿಣಿ ಸಿಂಧೂರಿ ನ್ಯಾಯಮಂಡಳಿ ಮೆಟ್ಟಿಲೇರಿದ್ದರು.
ರಾಜ್ಯದಲ್ಲೆ ಇರುವ ಹರ್ಷ ಗುಪ್ತ ಎಂಬ ಹಿರಿಯ ಅಧಿಕಾರಿಯನ್ನು ಕಳೆದ 21 ವರ್ಷದಲ್ಲಿ 29 ಬಾರಿ ವರ್ಗಾವಣೆ ಮಾಡಲಾಗಿದೆ. ಅಂದರೆ ಒಂದು ಹುದ್ದೆಯಲ್ಲಿ ಸರಾಸರಿ ಒಂದು ವರ್ಷವೂ ಇರಲು ಬಿಟ್ಟಿಲ್ಲ. ಕಳೆದ ಬುಧವಾರವಷ್ಟೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ಯುವ ಅಧಿಕಾರಿ ಲೋಕೇಶ್ ಕುಮಾರ್ ಜಾಂಗೀಡ್, ತಮ್ಮ ವರ್ಗಾವಣೆ ವಿರುದ್ಧ ಮಾತಾಡಿದ್ದಾರೆ. 2014ರ ಬ್ಯಾಚ್ ನ ಈ ಯುವ ಅಧಿಕಾರಿಯನ್ನು ಕಳೆದ 54 ತಿಂಗಳಲ್ಲಿ 9 ಬಾರಿ ವರ್ಗಾವಣೆ ಮಾಡಲಾಗಿದೆ. ಅಂದರೆ ಒಂದು ಹುದ್ದೆಯಲ್ಲಿ ಸರಾಸರಿ ಆರು ತಿಂಗಳು !.
ಅಧಿಕಾರಿಗಳ ವರ್ಗಾವಣೆಯಲ್ಲಿ ಬಹುತೇಕ ಬಾರಿ ಆಡಳಿತಾತ್ಮಕ ವಿಚಾರ ಇರುವುದೇ ಇಲ್ಲ. ರಾಜಕಾರಣಿಗಳ, ಅದರಲ್ಲೂ ಸ್ಥಳೀಯ ರಾಜಕಾರಣಿಗಳ ಹಿತಾಸಕ್ತಿಗೆ ಅನುಗುಣವಾಗಿ ಜಿಲ್ಲಾಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳ ವರ್ಗಾವಣೆ ನಡೆಯುತ್ತದೆ. ಸಂವಿಧಾನದ ಎರಡೂ ಅಂಗಗಳಲ್ಲಿ ಹೊಂದಾಣಿಕೆಯ ಸ್ವಭಾವ ಕಡಿಮೆ ಆಗುತ್ತಿರುವುದು ಕಂಡುಬರುತ್ತಿದೆ. ಏಕೆ ಹೀಗೆ? ಅಧಿಕಾರಿಯಾದವರು ಯಾರೇ ಇರಲಿ, ಅವರೊಂದಿಗೆ ಸಮನ್ವಯ ಮಾಡಿಕೊಂಡು “ಕೆಲಸ ತೆಗೆಸುವ” ಚಾಕಚಕ್ಯತೆಯನ್ನು ಜನಪ್ರತಿನಿಧಿಗಳು ಕಳೆದುಕೊಳ್ಳುತ್ತಿದ್ದಾರೆ. ಜತೆಗೆ, ನಿಯಮಾವಳಿಗಳನ್ನು ತಿಳಿದುಕೊಳ್ಳುವ ವ್ಯವಧಾನ ಅನೇಕರಿಗಿಲ್ಲ. ಸಂಸದೀಯ ನಿಯಮಗಳನ್ನು ತಿಳಿದುಕೊಳ್ಳಲು ವಿಧಾನಮಂಡಲದಲ್ಲಿ ಏರ್ಪಡಿಸುವ ತರಬೇತಿ ಕಾರ್ಯಾಗಾರಗಳಲ್ಲಿ ಹಾಜರಾಗುವ ಬೆರಳೆಣಿಕೆ ಶಾಸಕರನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.
ಗುಜರಾತ್ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರು ನೇಮಕವಾದಾಗ ಇದ್ದ ಅಧಿಕಾರಿಗಳಲ್ಲಿ ಯಾವ ಬದಲಾವಣೆಯನ್ನೂ ಮಾಡಲಿಲ್ಲ. ಅದೇ ಅಧಿಕಾರಿಗಳು ಉತ್ತಮ ಕಾರ್ಯ ಮಾಡಿ, ದೇಶದಲ್ಲೆ ಅಭಿವೃದ್ಧಿಗೆ ಮಾದರಿ ರಾಜ್ಯ ಎಂದು ಗುಜರಾತನ್ನು ರೂಪಿಸಿದರಲ್ಲ? ಮಧ್ಯಪ್ರದೇಶದಂತಹ, “ರೋಗಗ್ರಸ್ಥ” ರಾಜ್ಯ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೂ ಸ್ಪರ್ಧೆ ನೀಡಬಲ್ಲಷ್ಟು ಮುಂದುವರಿಯಿತಲ್ಲ? ಐಎಎಸ್ ಅಧಿಕಾರಿಗಳಲ್ಲಾಗಲಿ, ಅವರ ನೇಮಕ ವ್ಯವಸ್ಥೆಯಲ್ಲಾಗಲಿ ಬದಲಾವಣೆಯಿಲ್ಲದೆ ಅಭಿವೃದ್ಧಿ ಸಾಧ್ಯವಿದೆ.
ಆದರೆ ಆಡಳಿತದ ಕುರಿತು ತಿಳಿವಳಿಕೆ, ಓದು ಅನೇಕ ಜನಪ್ರತಿನಿಧಿಗಳಲ್ಲಿ ಇಲ್ಲ. ತಾನು ಜನಪ್ರತಿನಿಧಿ, ಜನರೇ ಇಲ್ಲಿನ ಪ್ರಭುಗಳು, ನಾನು ಹೇಳಿದಂತೆ ನೀನು ಕೇಳು ಎಂಬ ಮನೋಭಾವನೆ ಅನೇಕ ಬಾರಿ ಇರುತ್ತದೆ. ಹೌದು. ಇದು ಪ್ರಜಾಪ್ರಭುತ್ವ ಎಂಬುದು ಸರಿ. ಆದರೆ ಅದರ ನಿರ್ವಹಣೆಗೆ ಸಂವಿಧಾನ, ಅದರ ಕೆಳಗೆ ಕಾನೂನುಗಳು, ನಿಯಮಾವಳಿಗಳು ಎಂಬ ಅನೇಕ ಹಂತಗಳಿವೆ. ಅವುಗಳ ಆಧಾರದಲ್ಲಿ ಆಡಳಿತ ನಡೆಯಬೇಕೆ ವಿನಃ ಮನಸ್ಸಿಗೆ ಬಂದಂತೆ ಅಲ್ಲ ಎಂಬುದನ್ನು ತಿಳಿಯುವ ವ್ಯವಧಾನ ಜನಪ್ರತಿನಿಧಿಗಳಿಗಿಲ್ಲ.
ಅನೇಕ ಬಾರಿ ರಾಜಕಾರಣದ ಸುಳಿಯಲ್ಲಿ ಅಧಿಕಾರಿಗಳು ಸಿಲುಕುವ ಅಪಾಯವೂ ಇರುತ್ತದೆ. ಇತ್ತೀಚಿನ ಉದಾಹರಣೆಯೆಂದರೆ ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿ ಪ್ರಕರಣ. ಚಂಡಮಾರುತದಿಂದ ಪಶ್ಚಿಮ ಬಂಗಾಳದಲ್ಲಾಗಿರುವ ಹಾನಿಯನ್ನು ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಾರ್ಯ ಕೈಗೊಳ್ಳಲು ನವದೆಹಲಿಯಲ್ಲಿ ಸಭೆಗೆ ಪಶ್ಚಿಮ ಬಂಗಾಳ ಸರ್ಕಾರವನ್ನು ಆಹ್ವಾನಿಸಿದರು. ವಿಧಾನಸಭೆ ಚುನಾವಣೆ ಕಹಿಯನ್ನು ಹಾಗೆಯೇ ಇರಿಸಿಕೊಂಡಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸ್ವತಃ ತಾವಂತೂ ಸಭೆಗೆ ಹೋಗಲಿಲ್ಲ. ಅನೇಕ ಬಾರಿ ಹೀಗೆ ಆಗುತ್ತದೆ. ಆದರೆ ತೀರಾ ವಿಕೋಪಕ್ಕೆ ತಿರುಗಿದ ಮಮತಾ ಬ್ಯಾನರ್ಜಿ, ತಮ್ಮ ಸರಕಾರದ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯ ಸೇರಿ ಯಾವ ಅಧಿಕಾರಿಯೂ ಸಭೆಗೆ ಹೋಗದಂತೆ ತಡೆದರು. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಅಡಕತ್ತರಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಅಖಿಲ ಭಾರತೀಯ ಸೇವೆಗಳಲ್ಲಿರುವ ಅಧಿಕಾರಿಗಳು ಕೇಂದ್ರ ಸರಕಾರದ ನಿಯಂತ್ರಣದಲ್ಲಿರುತ್ತಾರೆ. ಹೀಗಾಗಿ ಅವರನ್ನು ಕೂಡಲೆ ಕೇಂದ್ರ ಸೇವೆಗೆ ಹಿಂದಿರುಗಲು ಸೂಚಿಸಲಾಯಿತು. ಆದರೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ, ಆಲಾಪನ್ ಬಂದೋಪಾಧ್ಯಾಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಕೂಡಲೆ ಅವರನ್ನು ಪಶ್ಚಿಮ ಬಂಗಾಳ ಸರಕಾರದ ಸಲಹೆಗಾರರನ್ನಾಗಿ ಮಮತಾ ಬ್ಯಾನರ್ಜಿ ನೇಮಕ ಮಾಡಿಕೊಂಡರು.
ಇನ್ನು ಕೆಲವು ಪ್ರಕರಣಗಳಲ್ಲಿ ಅನೇಕ ಕಾರಣಗಳಿಗೆ ಯುವ ಅಧಿಕಾರಿಗಳು ರಾಜೀನಾಮೆ ನೀಡುವ ಉದಾಹರಣೆಗಳೂ ಸಾಕಷ್ಟಿವೆ. ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ ಪರಿಚ್ಛೇದವನ್ನು ಹಿಂಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ ಎಂದು 2019ರಲ್ಲಿ ಕೇರಳದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ರಾಜೀನಾಮೆ ನೀಡಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಕರ್ನಾಟಕದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ, ತಾವು ಸಾರ್ವಜನಿಕ ಜೀವನದಲ್ಲಿ ಮತ್ತೊಂದು ಮಗ್ಗುಲಿಗೆ ಹೊರಳುವುದಾಗಿ ತಿಳಿಸಿ ರಾಜೀನಾಮೆ ನೀಡಿದರು. ಇತ್ತೀಚೆಗೆ ತಮಿಳುನಾಡು ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.
ಮತ್ತೆ ಕರ್ನಾಟಕದ ವಿಚಾರಕ್ಕೆ ಬಂದರೆ, ಮೈಸೂರು ಜಿಲ್ಲಾಧಿಕಾರಿ ವಿಚಾರ ಯಾವಾಗಲೂ ಒಂದಲ್ಲ ಒಂದು ವಿವಾದ ಅಥವಾ ಪ್ರಚಾರದಲ್ಲೇ ಇರುತ್ತದೆ. ಇದಕ್ಕೆ ಸ್ಪಷ್ಟ ಕಾರಣಗಳು ಇಲ್ಲ. ಆದರೆ ಅನೇಕರು ಹೇಳುವಂತೆ, ಸ್ಥಳೀಯವಾಗಿ ದಶಕಗಳಿಂದ ಬೀಡುಬಿಟ್ಟಿರುವ ಭೂಮಾಫಿಯಾ, ಭ್ರಷ್ಟಾಚಾರವು, ಅಲ್ಲಿಗೆ ಹೋಗುವ ಎಲ್ಲ ಅಧಿಕಾರಿಗಳನ್ನು ತನ್ನ ತಾಳಕ್ಕೆ ಕುಣಿಸಲು ಬಯಸುತ್ತದೆ. ಹಾಗೇನಾದರೂ ಅಧಿಕಾರಿ ಕಾನೂನು, ನಿಯಮಾವಳಿ ಪ್ರಕಾರ ನಡೆಯಲು ಮುಂದಾದರೆ, ತಾನು ಹೇಳಿದಂತೆ ಕೇಳದಿದ್ದರೆ ಕೂಡಲೆ ವಿವಿಧ ಮಾರ್ಗಗಳ ಮೂಲಕ ಬೆದರಿಕೆ ಒಡ್ಡುವುದು ನಡೆಯುತ್ತದೆ. ಆಗಲೂ ಸಫಲವಾಗದಿದ್ದರೆ ಸರಕಾರದಲ್ಲಿ ತಮ್ಮ ಪ್ರಭಾವ ಬಳಸಿ ವರ್ಗಾವಣೆ ಮಾಡಿಸಲಾಗುತ್ತದೆ.
ಅಧಿಕಾರಿಗಳು ಯಾವ ರೀತಿ ಇರಬಾರದು ಎಂಬುದಕ್ಕೂ ಅನೇಕ ಉದಾಹರಣೆಯನ್ನು ನೀಡಬಹುದು. ಇತ್ತೀಚಿಗೆ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಗಳಲ್ಲೊಬ್ಬರಾದ ರವಿಕಾಂತೇಗೌಡರು ಫೇಸ್ ಬುಕ್ ನಲ್ಲಿ ಒಂದು ಬರಹ ಹಾಕಿದ್ದರು. “ತಂತ್ರಜ್ಞಾನದ ಅರಿವುಳ್ಳವರು ಅಧಿಕಾರಶಾಹಿಯಲ್ಲಿ ಹೆಚ್ಚಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಳ್ಳಲು, ತಾವಷ್ಟೇ ಪ್ರಾಮಾಣಿಕರು ಎಂಬುದಾಗಿಯೂ ತಾವು ಸಿಂಗಂಗಳೆಂದೂ, ಸಿಂಹಿಣಿಯರೆಂದೂ ಬಿಂಬಿಸಿಕೊಳ್ಳಲು ಪ್ರಾರಂಭಿಸಿದರು. ಇನ್ನೂ ಕೆಲವರು ತಮ್ಮದೇ ಅಭಿಮಾನಿಗಳ ಫೇಸ್ಬುಕ್ ಪುಟಗಳನ್ನು ಆರಂಭಿಸಿದರು. ತಾವು ಮಾಡಬೇಕಾದ ಕೆಲಸಗಳನ್ನು ತಮ್ಮ ಹೊಣೆಗಾರಿಕೆಯೆಂದು ಭಾವಿಸದೆ ತಮ್ಮ ವಿಶಿಷ್ಟತೆಯೆಂದು ಪ್ರಚಾರಕ್ಕಿಳಿದರು. ಆಡಳಿತದ ಹೊರವಲಯದಲ್ಲಿರುವ ಮುಗ್ಧ ಜನಸಾಮಾನ್ಯರಲ್ಲಿ ತಾವು ಅವರ ಉದ್ಧಾರಕ್ಕೆ ಬಂದ ಅವತಾರ ಪುರುಷರೆಂದು ನಂಬಿಸತೊಡಗಿದರು. ಇವರಿಂದ ಸ್ಫೂರ್ತಿ ಪಡೆದಂತಹ ಸಿನೆಮಾಗಳು ಬಂದು ಹೀರೋಗಳಾಗಿ ವಿಜೃಂಭಿಸಿದರು” ಎಂದಿದ್ದರು.
ರವಿಕಾಂತೇಗೌಡರು ಹೇಳುವ ಮಾತಿನಲ್ಲಿ ಪ್ರಮುಖವಾಗಿ, ಅಧಿಕಾರಿಗಳು ತಮ್ಮ ಕರ್ತವ್ಯವನ್ನು ವಿಶಿಷ್ಠತೆ ಎಂದು ಪ್ರಚಾರಕ್ಕಿಳಿಯುವುದು. ಐಎಎಸ್ ಹುದ್ದೆಗೆ ಆಯ್ಕೆ ಆಗುವುದೇ ದೇಶ ಸೇವೆಗಾಗಿ. ತಾವು ಮಾಡಿದ ಸೇವೆಯನ್ನು ವಿಶಿಷ್ಠವಾಗಿ ಬಿಂಬಿಸಿಕೊಂಡು ಅನೇಕರು ಟೆಡ್ಎಕ್ಸ್ ಮಾದರಿಯ ಭಾಷಣಗಳಲ್ಲೂ ಪಾಲ್ಗೊಂಡವರಿದ್ದಾರೆ. ಐಎಎಸ್, ಐಪಿಎಸ್ ಆಗಲು ಯುವಕರಲ್ಲಿ ಉತ್ತೇಜನ ನೀಡಲು ಈ ರೀತಿ ಪ್ರೋತ್ಸಾಹ ನೀಡುವುದು ತಪ್ಪಲ್ಲವಾದರೂ, ಇತರೆ ಅಧಿಕಾರಿಗಳು ಕೆಲಸವನ್ನೇ ಮಾಡುವುದಿಲ್ಲ ಎಂದು ಬಿಂಬಿಸುವವರೂ ಇದ್ದಾರೆ.
ಮನಮೋಹನ ಸಿಂಗರ ರೀತಿ ಅಧಿಕಾರಿಗಳನ್ನು ಬಲಿ ಕೊಡುವ ಪ್ರಕರಣಗಳು ಹಾಗೂ ಮಮತಾ ಬ್ಯಾನರ್ಜಿಯವರ ರೀತಿ ಅಧಿಕಾರಿಗಳನ್ನು ರಾಜಕೀಯ ದಾಳವಾಗಿಸಿಕೊಳ್ಳುವ ಬಗೆಗಳು ಆಡಳಿತದ ಮೇಲೆ ಪರಿಣಾಮ ಬೀರುತ್ತವೆ. ಪ್ರಾಮಾಣಿಕವಾಗಿರುವ ಅಧಿಕಾರಿಗಳು ಮೂಲೆಗುಂಪಾಗುತ್ತಾರೆ. ಅದಾಗಲೇ ಭ್ರಷ್ಟರಾಗಿರುವವರು ತಮ್ಮ ದಾರಿ ಸರಿಯಾಗಿದೆ ಎಂದು ಮುಂದುವರಿಯುತ್ತಾರೆ. ಇನ್ನು, ಇನ್ನೂ ಯಾವ ಕಡೆಗೂ ವಾಲದ ಅನೇಕರು, ಪ್ರಾಮಾಣಿಕತೆಗಿಂತಲೂ ಭ್ರಷ್ಟಾಚಾರದ ಮಾರ್ಗವೇ ಉತ್ತಮ ಎಂಬ ಆಯ್ಕೆಗೆ ಹೋಗುವ ಅಪಾಯವೂ ಇರುತ್ತದೆ ಎಂಬುದು ಹಿರಿಯ ಅಧಿಕಾರಿಗಳ ವಾದ.
ಹೀಗಾಗಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮೊದಲಿಗೆ ತಮ್ಮ ಕಾರ್ಯವನ್ನು ಸಂಪೂರ್ಣ ಅರಿಯಬೇಕು. ಅಧಿಕಾರಿಗಳು ನಿಯಮಗಳನ್ನು, ಅದರ ಪರಿಣಾಮಗಳನ್ನು ಸಂಪೂರ್ಣ ತಿಳಿದು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಬೇಕು. ತಾವು ಮಾಡುವ ಕರ್ತವ್ಯವನ್ನು ಅನವಶ್ಯಕವಾಗಿ ವಿಜೃಂಭಿಸುವ ಹಂತಕ್ಕೆ ಹೋಗಬಾರದು. ಜನಪ್ರತಿನಿಧಿಯಾದವರು ಯಾವುದೇ ಪೂರ್ವಾಗ್ರಹವಿಲ್ಲದೆ ಆಲಿಸಿ, ನಿರ್ಧಾರ ಕೈಗೊಳ್ಳಬೇಕು. ಯಾವುದೇ ನಿಯಮ ಜನರ ಸೇವೆಗೆ, ಕಲ್ಯಾಣಕ್ಕೆ ಅಡ್ಡವಾಗುತ್ತಿದೆ ಎಂದು ಕಂಡುಬಂದರೆ ಅದನ್ನು ಬದಲಿಸಲು ಸಂಸತ್ತು, ವಿಧಾನಮಂಡಲದಲ್ಲಿ ಅವಕಾಶ ಇದ್ದೇಇದೆ. ಅದನ್ನು ಬಿಟ್ಟು, “ಹೇಳಿದಂತೆ ಮಾಡು” ಎಂದು ಅಧಿಕಾರಿಗಳಿಗೆ ಬೆದರಿಸುವುದು ಸರಿಯಾದ ಮಾರ್ಗವಲ್ಲ. ಇಬ್ಬರೂ ತಮ್ಮ ಶಕ್ತಿ, ಸಾಮರ್ಥ್ಯದ ಜತೆಗೆ ಮಿತಿಯನ್ನೂ ಅರಿತರೆ ಮಾತ್ರ ಆಡಳಿತ ನಡೆಯುತ್ತದೆ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top