ತಾನೂ ಸಾಂವಿಧಾನಿಕ ಅಂಗ ಎಂಬುದ ಮರೆಯಿತೇ ಕಾರ್ಯಾಂಗ?

ಪ್ರಜಾಸತ್ತಾತ್ಮಕವಾಗಿ ರೂಪಿಸಿಕೊಂಡ ಸಂಸದೀಯ ಆಡಳಿತ ವ್ಯವಸ್ಥೆಯೇ ಭಾರತದ ಬಲ-ಬ್ಯೂಟಿ

ಶಾಸನ ರೂಪಿಸುವ ಅಧಿಕಾರವನ್ನು ಶಾಸಕಾಂಗಕ್ಕೂ, ಈ ಶಾಸನ-ಕಾನೂನುಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಕಾರ್ಯಾಂಗಕ್ಕೂ, ಈ ಕಾನೂನುಗಳನ್ನು ಉಲ್ಲಂಘಿಸಿದರೆ ಶಿಕ್ಷೆ ನೀಡುವ ಅಧಿಕಾರವನ್ನು ನ್ಯಾಯಾಂಗಕ್ಕೂ ನೀಡಿರುವ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಎಲ್ಲವೂ ಸರಿಯಾಗಿದ್ದರೆ ನೋಡಲು, ಕೇಳಲು, ಅನುಭವಿಸಲು ಬಲು ಸೊಗಸು. ರಾಜಾಡಳಿತವನ್ನು ಕೊನೆಗೊಳಿಸಿ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಾಗ, ಅದಕ್ಕೆ ಸಂವಿಧಾನವೇ ಪರಮೋಚ್ಛ ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಸಾರಿದರು. ಇಂಥ ಸಂವಿಧಾನ ಎನ್ನುವುದು ಅಂಬೇಡ್ಕರ್‌ ಅವರೇ ಹೇಳಿದಂತೆ ಅಕ್ಷ ರ ಹಾಗೂ ಉದ್ದಿಶ್ಯ(ಲೆಟರ್‌ ಆಂಡ್‌ ಸ್ಪಿರಿಟ್‌) ಎಂಬ ಎರಡು ಸ್ತರಗಳನ್ನು ಹೊಂದಿರುತ್ತದೆ. ಒಂದು ಸಂವಿಧಾನ ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ಜಾರಿ ಮಾಡುವ ಜನರು ಸಚ್ಚಾರಿತ್ರ್ಯವಂತರಾಗಿದ್ದರೆ, ಅಂತಹ ಸಂವಿಧಾನದಿಂದಲೂ ಉತ್ತಮ ಕಾರ್ಯಗಳು ನೆರವೇರುತ್ತವೆ. ಅಂತೆಯೇ ಸಂವಿಧಾನ ಎಷ್ಟೇ ಶ್ರೇಷ್ಠವಾಗಿದ್ದರೂ ಅದನ್ನು ಅನುಸರಿಸುವವರಲ್ಲೆ ಖೊಟ್ಟಿತನವಿದ್ದರೆ, ಉತ್ತಮ ಫಲಿತಾಂಶವನ್ನು ನಿರೀಕ್ಷಿಸುವುದು ಹೇಗೆ? ಈ ಕಾರಣದಿಂದಲೇ ದೇಶದ ಆಡಳಿತದಲ್ಲಿ ಸಂವಿಧಾನದ ಆಶಯಗಳನ್ನು ಕಾಪಾಡಲು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ಮೂರು ಅಂಗಗಳನ್ನು ರೂಪಿಸಲಾಯಿತು.
ಈ ಅಂಗಗಳೆಲ್ಲವೂ ತಮ್ಮದೇ ಇತಿಮಿತಿಯ ಕಾರ್ಯ ವ್ಯಾಪ್ತಿಯಲ್ಲಿ ಅವವೇ ಸುಪ್ರೀಂ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಒಂದರ ಮೇಲೆ ಮತ್ತೊಂದು ಎಂದೂ ಸವಾರಿ ಮಾಡಬಾರದು ಎಂಬುದು ಸಂವಿಧಾನದ್ದೇ ಆಶಯ. ಆಗಲೇ ಅದು ಚೆನ್ನ.
ಹೀಗಿದ್ದರೂ, ಸಂವಿಧಾನದ ಮೂರು ಅಂಗಗಳಲ್ಲಿ ಯಾವುದು ಹೆಚ್ಚು, ಯಾವುದು ಕಡಿಮೆ ಎಂಬ ಚರ್ಚೆ ಇಂದು ನಿನ್ನೆಯದಲ್ಲ. ಅದು ನಡೆಯುತ್ತಲೇ ಇದೆ. 1948ರಲ್ಲಿ ನಡೆದ ಸಂವಿಧಾನ ರಚನಾ ಸಭೆಯಲ್ಲಿ, ಭಾರತೀಯ ಸಂವಿಧಾನದ ಮೂರು ಅಂಗಗಳಲ್ಲೂ ಅಮೆರಿಕದ ರೀತಿ ಸಂಪೂರ್ಣ ಸ್ವಾತಂತ್ರ್ಯವಿರಬೇಕು ಎಂಬ ಚರ್ಚೆ ನಡೆದಿತ್ತು. ಬಿಹಾರದ ಕೆ.ಟಿ. ಷಾ ಎಂಬ ಸದಸ್ಯರು ಈ ಕುರಿತು ಪ್ರಸ್ತಾವನೆಯೊಂದನ್ನು ಮಂಡಿಸುತ್ತಾರೆ. ಸಂಸದೀಯ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ನಡುವೆ ಕೆಲವು ಕಡೆಗಳಲ್ಲಿ ಸಂಬಂಧವಿರುತ್ತದೆ. ಆದರೆ ಅಧ್ಯಕ್ಷೀಯ ವ್ಯವಸ್ಥೆಯಲ್ಲಿ ಮೂರೂ ವ್ಯವಸ್ಥೆಗಳು ಸಂಪೂರ್ಣ ಸ್ವತಂತ್ರವಾಗಿರುತ್ತವೆ. ಇಂಗ್ಲೆಂಡ್‌ ಸೇರಿ ಅನೇಕ ಕಡೆಗಳಲ್ಲಿ, ಮೂರೂ ಶಕ್ತಿಗಳು ರಾಜನಲ್ಲಿ ಒಟ್ಟುಗೂಡಿದ್ದರಿಂದಾಗಿ ಅನೇಕ ಸಾಮಾಜಿಕ ಸಮಸ್ಯೆಗಳು ಉಂಟಾದವು. ಮೂರೂ ಅಂಗಗಳ ನಡುವೆ ಸಂಪೂರ್ಣ ಸ್ವಾತಂತ್ರ್ಯ ಇರುವುದು ದೇಶದ ಹಿತದಿಂದ ಒಳ್ಳೆಯದು. ಉದಾಹರಣೆಗೆ, ಉನ್ನತ ನ್ಯಾಯಾಂಗ ಹಾಗೂ ಶಾಸಕಾಂಗದ ನಡುವೆ ವರ್ಗಾವಣೆಗಳು ಇದ್ದವು ಎಂದಿಟ್ಟುಕೊಂಡರೆ, ಇಡೀ ಕಾನೂನು ವಿಶ್ಲೇಷಣೆ ಪ್ರಕ್ರಿಯೆಯೇ ಪಕ್ಷ ರಾಜಕಾರಣದ ಆಧಾರದಲ್ಲಿ ನಡೆದುಬಿಡಬಹುದು. ನ್ಯಾಯಾಂಗ ಹಾಗೂ ಕಾರ್ಯಾಂಗದ ನಡುವೆ ಸಂಪರ್ಕ ಇದ್ದರೆ, ಅದು ನ್ಯಾಯಾಂಗದ ಪ್ರಕ್ರಿಯೆಯ ಮೇಲೆ ಹಾಗೂ ಸಂವಿಧಾನದ ಅಥೈರ್‍ಸುವಿಕೆಯ ಮೇಲೆ ಪ್ರಭಾವ ಬೀರಬಹುದು ಎಂಬುದು ಸೇರಿ ಅನೇಕ ವಾದಗಳನ್ನು ಮಂಡಿಸಿದರು.
ಈ ಪ್ರಸ್ತಾವನೆಗೆ, ಕರ್ನಾಟಕದ ಮೈಸೂರಿನಿಂದ ಸಂವಿಧಾನ ರಚನಾ ಸಮಿತಿಗೆ ಆಯ್ಕೆಯಾಗಿದ್ದ ಕೆಂಗಲ್‌ ಹನುಮಂತಯ್ಯನವರು ನಯವಾದ ತಿರಸ್ಕಾರವನ್ನು ಸಲ್ಲಿಸುತ್ತಾರೆ. ನಾವು ಈಗಾಗಲೆ ಸಂಸದೀಯ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದು, ಅದಕ್ಕೆ ಅನುಗುಣವಾಗಿಯೇ ಎಲ್ಲ ವಿಚಾರಗಳೂ ಇರಬೇಕು. ಸಂಪೂರ್ಣ ಸ್ವತಂತ್ರವಾದ ಮೂರು ಸ್ತಂಭಗಳನ್ನು ಹೊಂದುವುದರಿಂದ ಸಂಘರ್ಷಗಳು ತಲೆದೋರುವುದು ಹೆಚ್ಚು. ಇಂತಹ ಸಂಘರ್ಷಗಳು ದೇಶಕ್ಕೆ ಮಾರಕ. ಅಮೆರಿಕದಲ್ಲಿ ಮೇಲ್ನೋಟಕ್ಕೆ ಮೂರೂ ಅಂಗಗಳು ಪ್ರತ್ಯೇಕವಾಗಿದ್ದರೂ ಅಲ್ಲಿ ಅತ್ಯಂತ ಸಂಘಟಿತವಾದ ಎರಡು ರಾಜಕೀಯ ಪಕ್ಷ ಗಳಿವೆ. ನ್ಯಾಯಾಂಗ ಹಾಗೂ ಕಾರ್ಯಾಂಗದ ಜತೆಗೆ ಏಳುವ ಸಂಘರ್ಷಗಳನ್ನು ಈ ಪಕ್ಷ ಗಳು ತಮ್ಮ ಸಭೆಗಳಲ್ಲಿ ನಿರ್ಮೂಲನೆ ಮಾಡಿಕೊಳ್ಳುತ್ತವೆ. ದೇಶದ ಹಿತದೃಷ್ಟಿಯಿಂದ ಈ ಸಂಘರ್ಷಗಳು ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ ಎನ್ನುತ್ತಾರೆ. ಒಟ್ಟಾರೆಯಾಗಿ, ಭಾರತದಲ್ಲಿ ಸಂಸದೀಯ ವ್ಯವಸ್ಥೆಯೇ ಉನ್ನತವಾದದ್ದು ಎಂಬುದನ್ನು ಹನುಮಂತಯ್ಯನವರು ಪ್ರತಿಪಾದಿಸುತ್ತಾರೆ. ಸಂಸದೀಯ ವ್ಯವಸ್ಥೆಯಲ್ಲಿನ ಲೋಪದೋಷಗಳ ಹೊರತಾಗಿಯೂ ಕೆಂಗಲ್‌ ಅವರ ಮಾತನ್ನು ಸಮ್ಮತಿಸುವುದಾಗಿ ಪ್ರೊ. ಶಿಬ್ಬನ್‌ ಲಾಲ್‌ ಸಕ್ಸೇನಾ ಅವರು ತಿಳಿಸುತ್ತಾರೆ.
ನಂತರ ಮಾತನಾಡುವ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು, ಅಮೆರಿಕದಲ್ಲಿ ಕಾರ್ಯಾಂಗ ಹಾಗೂ ನ್ಯಾಯಾಂಗದ ನಡುವೆ ಕಟ್ಟುನಿಟ್ಟಿನ ವಿಭಜನೆ ಇರುವುದು ನಿಜ. ಆದರೆ ಇಷ್ಟು ನಿಷ್ಠುರ ವಿಂಗಡಣೆಯಿಂದ ಸಾಕಷ್ಟು ತೊಂದರೆಗಳೇ ಆಗುತ್ತಿವೆ ಎಂಬುದು ಇತ್ತೀಚೆಗೆ ಅಮೆರಿಕದಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿದರೆ ತಿಳಿಯುತ್ತದೆ ಎಂಬುದು ಸೇರಿದಂತೆ ಅನೇಕ ವಾದಗಳನ್ನು ಮುಂದಿಡುತ್ತಾರೆ.
ಒಟ್ಟಾರೆಯಾಗಿ, ಈ ಎಲ್ಲ ಚರ್ಚೆಯ ಸಾರವೇನೆಂದರೆ, ನಮ್ಮ ಮೂರೂ ಅಂಗಗಳು ತಮ್ಮತಮ್ಮ ಕಾರ್ಯದಲ್ಲಿ ಸ್ವತಂತ್ರವಾದರೂ ಪರಸ್ಪರ ಸಾಮರಸ್ಯದಿಂದ ಕಾರ್ಯನಿರ್ವಹಿಸಬೇಕಷ್ಟೆ. ಆದರೆ, ಆ ರೀತಿ ಸಾಮರಸ್ಯದಿಂದ ಎಲ್ಲವೂ ಸುಲಲಿತವಾಗಿ ನಡೆಯುತ್ತಿದೆಯೇ ಎಂದರೆ, ಅದು ಇನ್ನೂ ಸಾಧ್ಯವಾಗಿಲ್ಲ ಎಂದು ಹೇಳಲೇಬೇಕಾಗುತ್ತದೆ.
ನಮ್ಮ ವ್ಯವಸ್ಥೆಯ ಮೂರೂ ಅಂಗಗಳ ನಡುವಿನ ಸಂಘರ್ಷ ಹಿಂದಿನಿಂದಲೂ ಇದೆ. ಯಾಕೆ ಹೀಗಾಗುತ್ತದೆ ಎಂಬುದನ್ನು ತುಸು ವ್ಯಾವಹಾರಿಕವಾಗಿಯೇ ವಿಶ್ಲೇಷಿಸೋಣ. ಯಾವುದೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾಯಿತ ಶಾಸಕಾಂಗ ಎಲ್ಲದಕ್ಕೂ ಮೇಲಿರಬೇಕು, ಮೇಲಿರುತ್ತದೆ ಕೂಡ. ಏಕೆಂದರೆ, ಎಲ್ಲ ವ್ಯವಸ್ಥೆಯಲ್ಲೂ ಜನಪ್ರತಿನಿಧಿಗಳು(ಶಾಸಕಾಂಗ) ಮಾತ್ರ ಜನರಿಗೆ ಉತ್ತರದಾಯಿಗಳಾಗಿರುವರೇ ವಿನಹ, ಅಲ್ಲಿನ ಕಾರ್ಯಾಂಗ, ನ್ಯಾಯಾಂಗವಲ್ಲ. ಶಾಸಕಾಂಗ ರೂಪಿಸಿದ ಕಾಯಿದೆ ಕಟ್ಟಲೆಗಳನ್ನು ಕಾರ್ಯಾಂಗ ಜಾರಿಗೊಳಿಸಿದರೆ, ಈ ಎಲ್ಲ ಕಾನೂನುಗಳ ಕಾವಲುಗಾರನಾಗಿ ನ್ಯಾಯಾಂಗ ಕೆಲಸ ಮಾಡುತ್ತಿರುತ್ತದೆ. ಹಾಗಾಗಿ, ಸಂಸತ್ತು ಹೆಣೆಯುವ ಶಾಸನಗಳಲ್ಲಿ ಸಂವಿಧಾನದ ಅಂಶಗಳಿಗೆ ರಕ್ಷ ಣೆ ಸಿಕ್ಕಿದೆಯೇ ಎಂಬುದನ್ನು ನ್ಯಾಯಾಂಗ ಒರೆಗಲ್ಲಿಗೆ ಹಚ್ಚುತ್ತಲೇ ಇರುತ್ತದೆ. ಇಂಥಾ ಹೊತ್ತಲ್ಲಿ ನಿಜವಾಗಿಯೂ ಇಕ್ಕಟ್ಟಿಗೆ ಸಿಲುಕುವುದು ಕಾರ್ಯಾಂಗವೇ! ಏಕೆಂದರೆ, ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು, ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಅನೇಕ ಆದೇಶಗಳನ್ನು ಅಧಿಕಾರಿಗಳು ಹೊರಡಿಸುತ್ತಿರುತ್ತಾರೆ. ಇಂತಹ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದಾಗ ಅಲ್ಲಿ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಗಿ, ಕಟಕಟೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬರುತ್ತದೆ. (ಈ ವಿಷಯದಲ್ಲಿ ಅಪವಾದಗಳು ಉಂಟು. ಚುನಾವಣಾ ಅಕ್ರಮ ಎಸಗಿದ ಕಾರಣಕ್ಕೆ ಮಹಾನ್‌ ಇಂದಿರಾ ಗಾಂಧಿ ಅವರನ್ನೇ ಕಟಕಟೆಯಲ್ಲಿ ನಿಲ್ಲಿಸಿ ಅಪರಾಧಿ ಎಂದು ನ್ಯಾಯಾಲಯ ಸಾರಿತ್ತು.)
ಇಂಥ ಪ್ರಕರಣಗಳು ನಡೆದಾಗಲೆಲ್ಲಾ, ಕಾರ್ಯಾಂಗ ಅಥವಾ ಅಧಿಕಾರಿ ವರ್ಗದ ಸ್ಥಾನ-ಮಾನ ಏನು ಎಂಬುದು ಸ್ಪಷ್ಟವಾಗುತ್ತದೆ ಹಾಗೂ ಈ ಸಂಗತಿಗಳೇ, ಕಾರ್ಯಾಂಗ ಎಂಬುದು ಉಳಿದ ಎರಡು ಅಂಗಗಳಂತೆ ಪ್ರಬಲವಾಗಿ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡಿಲ್ಲ, ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ. ಶಾಸಕಾಂಗದ ಆದೇಶಗಳನ್ನು ಪಾಲನೆ ಮಾಡಲು ಮಾತ್ರ ಇರುವ ಇಂಪ್ಲಿಮೆಂಟಿಂಗ್‌ ಏಜೆನ್ಸಿಯಾಗಿಯಷ್ಟೆ ಇರಲು ಅನೇಕ ಬಾರಿ ಕಾರ್ಯಾಂಗವೂ ಇಚ್ಛಿಸುತ್ತದೆ. ನೀತಿ ನಿರೂಪಣೆಯಲ್ಲಿ ತನ್ನ ಪಾತ್ರ ಎಳ್ಳಷ್ಟೂ ಇಲ್ಲವೇನೊ ಎಂಬಂತೆ ಬಿಂಬಿಸಿಕೊಳ್ಳುತ್ತದೆ. ಇದು ಅದರ ಘನತೆಗೇ ತಕ್ಕದಲ್ಲ. ಯಾವುದೇ ಒಂದು ಅಂಗ ಸಾಂವಿಧಾನಿಕ ಬದ್ಧತೆಯಿಂದ ಹೊರಳಿದರೆ ಅದನ್ನು ಪ್ರಶ್ನಿಸುವ ಹಾಗೂ ಸರಿದಾರಿಗೆ ತರುವ ಕೆಲಸವನ್ನು ಕಾರ್ಯಾಂಗವೂ ಮಾಡಬೇಕು.
ಸಂವಿಧಾನ ರಚನಾ ಸಭೆಯಲ್ಲೆ ಚರ್ಚೆಯಾಗಿರುವಂತೆ, ಸಿದ್ಧಾಂತದಿಂದ ಹೊರಳುವ ಹೆಚ್ಚು ಅಪಾಯ ಶಾಸಕಾಂಗಕ್ಕೇ ಹೆಚ್ಚು. ಏಕೆಂದರೆ ಅದು ಪಕ್ಷಾಧಾರಿತ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುತ್ತದೆ. ಶಾಸಕಾಂಗ ದಾರಿ ತಪ್ಪಿದಾಗಲೆಲ್ಲ ಹೆಚ್ಚು ಕೋಪಗೊಳ್ಳುವುದು ಹಾಗೂ ಅದನ್ನು ಸರಿದಾರಿಗೆ ತರುವ ಕೆಲಸವನ್ನು ನ್ಯಾಯಾಂಗ ಮಾಡುತ್ತಿದೆಯೇ ಹೊರತು, ಕಾರ್ಯಾಂಗವಲ್ಲ. ಇದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಕಾರ್ಯಾಂಗ ಮೂಕಪ್ರೇಕ್ಷ ಕನಂತೆ ಕುಳಿತಿದೆ.
ಕಾರ್ಯಾಂಗದ ಈ ಮೌನದಿಂದ ಏನಾಗುತ್ತಿದೆ ಎಂಬುದನ್ನು ಅರಿಯಬೇಕು ಎಂದರೆ, ಕರ್ನಾಟಕದ ಇತ್ತೀಚಿನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ‘ಕೆರೆಯಂ ಕಟ್ಟಿಸು, ಬಾವಿಯಂ ತೋಡಿಸು’ ಎಂಬ ಜನಪದ ಇತಿಹಾಸವನ್ನು ಹೊಂದಿರುವ ನಮ್ಮ ರಾಜ್ಯದಲ್ಲಿ ಕೆರೆಗಳನ್ನೇ ರಿಯಲ್‌ ಎಸ್ಟೇಟ್‌ ದಂಧೆಕೋರರು ನುಂಗಿದ್ದಾರೆ. ಈ ರಿಯಲ್‌ ಎಸ್ಟೇಟ್‌ ದಂಧೆಯಲ್ಲಿ ಇರುವವರು ಇಲ್ಲವೇ ಇದಕ್ಕೆ ಬೆನ್ನೆಲುಬಾಗಿ ನಿಂತಿರುವವರು ಶಾಸಕಾಂಗದ ಪ್ರತಿನಿಧಿಗಳು ಎಂಬುದು ಕಾರ್ಯಾಂಗಕ್ಕೆ(ಅಧಿಕಾರಿಗಳಿಗೆ) ಗೊತ್ತಿರದ ಸಂಗತಿ ಏನಲ್ಲ. ಚೆನ್ನಾಗಿಯೇ ಗೊತ್ತು. ಆದರೂ ಏನೂ ಮಾಡುವುದಿಲ್ಲ. ಅಂತಿಮವಾಗಿ ನ್ಯಾಯಾಂಗ ಚಾಟಿ ಬೀಸುತ್ತಿರುವುದರಿಂದಷ್ಟೆ ಕಾರ್ಯಾಂಗ(ಅಧಿಕಾರಿಗಳು) ಕೆರೆಗಳ ಸಂರಕ್ಷ ಣೆಗೆ ಸಮಿತಿ ರಚಿಸುವ, ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗುತ್ತದೆ. ಅಲ್ಲಿಯೂ ಒಂದೇ ಆದೇಶವನ್ನು ಪದೇಪದೆ ಹೊರಡಿಸಿದರೂ ಜಾರಿಯೇ ಆಗುವುದಿಲ್ಲ. ಮುಂದಿನ ವಿಚಾರಣೆ ವೇಳೆಗೆ ಒತ್ತುವರಿ ತೆರವಾಗಿರದಿದ್ದರೆ ಅಧಿಕಾರಿ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ ಎಂದು ನ್ಯಾಯಾಧೀಶರು ಎಚ್ಚರಿಸಿದ ನಂತರವಷ್ಟೆ ಕೆಲಸ ಆಗಿರುತ್ತದೆ. ಇದು ಒಂದು ಉದಾಹರಣೆ ಅಷ್ಟೆ. ಅಕ್ರಮ ಗಣಿಗಾರಿಕೆ, ರಾಜಕಾಲುವೆ ಒತ್ತುವರಿ, ಅಕ್ರಮ ಲೇಔಟ್‌ಗಳಿಂದ ಮೊದಲುಗೊಂಡು ಪ್ಲಾಸ್ಟಿಕ್‌ ನಿಷೇಧದವರೆಗೆ ಎಲ್ಲದಕ್ಕೂ ನ್ಯಾಯಾಂಗವೇ ಕಿವಿ ಹಿಂಡಬೇಕು ಎಂದು ಕಾಯುವುದೇಕೆ? ಸಾಂವಿಧಾನಿಕವಲ್ಲದ ಆದೇಶಗಳನ್ನು ತಾನು ಜಾರಿಗೊಳಿಸಲಾರೆ ಎಂದು ಕಾರ್ಯಾಂಗ ಕಟ್ಟುನಿಟ್ಟಾಗಿ ಹೇಳುತ್ತಿಲ್ಲವೇಕೆ? ಈ ಅಂಗದಲ್ಲಿ ಕೆಲಸ ಮಾಡಿರುವ, ಮಾಡುತ್ತಿರುವ ಪ್ರಾಜ್ಞರು ಯೋಚಿಸಲಿ.
ಈ ಮೇಲಿನ ಚರ್ಚೆಗೆ ತುಸು ವಿರೋಧಾಭಾಸದಂತೆ(ಮೇಲ್ನೋಟಕ್ಕೆ) ಕಾಣುವ ಇನ್ನೊಂದು ಸಂಗತಿಯತ್ತ ಗಮನಹರಿಸೋಣ. ಹಾಗೆ ನೋಡಿದರೆ, ಇದು ನನ್ನ ಈ ಹಿಂದಿನ ವಿಸ್ತಾರ ಅಂಕಣದಲ್ಲಿ ಚರ್ಚಿಸಿದ ಆಡಳಿತಾತ್ಮಕ ಸೇವೆಗಳ ಕುರಿತ ಚುಂಗು ಎಂದುಕೊಳ್ಳಿ.
ಎಲ್ಲರಿಗೂ ಗೊತ್ತಿರುವಂತೆ, ಶಾಸನಸಭೆಗಳು ರೂಪಿಸಿದ ಕಾಯಿದೆ ಕಾನೂನುಗಳನ್ನು ಪಾಲನೆ ಮಾಡುವುದು ಮತ್ತು ಜನಕಲ್ಯಾಣಕ್ಕಾಗಿ ಸರಕಾರಗಳು ರೂಪಿಸುವ ಯೋಜನೆಗಳನ್ನು ಜನತೆಯ ಮನೆ ಬಾಗಿಲಿಗೆ ತಲುಪಿಸಿ ಜನಸೇವಕರಾಗುವುದೇ ಕಾರ್ಯಾಂಗದ ಕಾಯಕ. ಈ ಮಾತು ಗ್ರಾಮ ಪಂಚಾಯಿತಿಯ ಕಾರಕೂನನಿಂದ ಹಿಡಿದು ಜಿಲ್ಲಾಧಿಕಾರಿ, ಸೆಕ್ರೆಟರಿ ಆದಿಯಾಗಿ ಐಎಎಸ್‌ಗಳವರೆಗೂ ಅನ್ವಯ. ಹೀಗಿದ್ದರೂ ಐಎಎಸ್‌ಗಳಿಗೆ ದರ್ಪ ಬರುವುದು ಎಲ್ಲಿಂದ? ಕೋಡು ಮೂಡುವುದು ಹೇಗೆ ಮತ್ತು ಏಕೆ? ಎಂಬ ಪ್ರಶ್ನೆ ಮೂಡುತ್ತದೆ. ಈ ಐಎಎಸ್‌ಗಳಿಗೆ ಗರಿಷ್ಠ ಅಧಿಕಾರ ಇರುವುದು ಗರಿಷ್ಠ ದಕ್ಷ ತೆಯಿಂದ ಕೆಲಸ ಮಾಡುವುದಕ್ಕೇ ವಿನಃ ದರ್ಪ ದೌಲತ್ತು ತೋರುವುದಕ್ಕಲ್ಲ. ಈಗಂತೂ ಕೆಲ ಮಂತ್ರಿಗಳು ಐಎಎಸ್‌ ಅಧಿಕಾರಿಗಳಿಗೆ ಸರ್‌ ಸರ್‌ ಎನ್ನುತ್ತ ಡೊಗ್ಗು ಸಲಾಮು ಹಾಕುವುದನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ. ನಮ್ಮ ವ್ಯವಸ್ಥೆ ತಲುಪುತ್ತಿರುವ ಅಧೋಗತಿ ನೋಡಿ ಮರುಕ ಹುಟ್ಟುತ್ತದೆ. ಸರಕಾರಿ ಜಾಹೀರಾತುಗಳಲ್ಲಿ, ಆಮಂತ್ರಣ ಪತ್ರಿಕೆಗಳಲ್ಲಿ ಈ ಅಧಿಕಾರಿಗಳ ಫೋಟೊ ಮತ್ತು ಹೆಸರನ್ನು ಜನಪ್ರತಿನಿಧಿಗಳಿಗೆ ಸರಿಸಮನಾಗಿ ಮುದ್ರಿಸುವುದೆಂದರೆ ನಮ್ಮ ಪ್ರಜಾತಂತ್ರ ವ್ಯವಸ್ಥೆಗೆ ಮಾಡುವ ಘೋರ ಅಪಮಾನ. ಈ ವ್ಯವಸ್ಥೆ ಎಲ್ಲಿ, ಯಾವಾಗಿನಿಂದ ಆರಂಭವಾಯಿತು. ತುಸು ಯೋಚನೆ ಮಾಡುವುದು ಬೇಡವೆ?
1980ರಿಂದ 1983ರವರೆಗೆ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಆರ್‌. ಗುಂಡೂರಾಯರ ಆಡಳಿತ ಕಾಲದ ಒಂದು ಘಟನೆ. ಕಳೆದ ವಾರ ಇದೇ ವಿಸ್ತಾರ ಕಾಲಂ ಓದಿದ ನಂತರ ಹಿರಿಯ ನಾಯಕರೊಬ್ಬರು ನನ್ನೊಂದಿಗೆ ಹಂಚಿಕೊಂಡ ಸಂಗತಿ ಇದು. ರೈತ ಸಂಘದ ಮುಖಂಡ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಆಗ್ರಹದ ಮೇರೆಗೆ ಮುಖ್ಯಮಂತ್ರಿ ಗುಂಡೂರಾಯರು ರೈತ ನಾಯಕರ ಸಭೆಯೊಂದನ್ನು ಕರೆದಿದ್ದರು. ಮುಖ್ಯಮಂತ್ರಿಗಳು ಮತ್ತು ನಂಜುಂಡಸ್ವಾಮಿ ಅವರು ಆ ಸಭೆಗೆ ಹೋಗುವಷ್ಟರಲ್ಲಿ ಅಲ್ಲಿದ್ದ ಐಎಎಸ್‌ ಅಧಿಕಾರಿಗಳು ಪೀಠ ಅಲಂಕರಿಸಿದ್ದರು. ಅದನ್ನು ಕಂಡು ಗರಂ ಆದ ಎಂಡಿಎನ್‌ ಈ ಸರಕಾರಿ ಕೂಲಿಗಳಿಗೆ ಇಲ್ಲೇನು ಕೆಲಸ ಎಂದು ಕೆಂಡಾಮಂಡಲರಾದರು. ಎಂಡಿಎನ್‌ ಸಿಟ್ಟನ್ನು ನೋಡಿ ರಾಯರು ವಿಧಿಯಿಲ್ಲದೆ ಅವರೆಲ್ಲರನ್ನು ಆಚೆ ಕಳಿಸಿ ರೈತ ನಾಯಕರೊಂದಿಗೆ ಸಭೆ ನಡೆಸಿದರಂತೆ.
ಹಾಗೆಯೇ, ಸಮಾಜವಾದಿ ಚಿಂತಕ ಶಾಂತವೇರಿ ಗೋಪಾಲಗೌಡರದ್ದು ಮತ್ತೊಂದು ಪ್ರಸಂಗ. ಗೋಪಾಲ ಗೌಡರು ಖಡಕ್‌ ನಡವಳಿಕೆಗೆ ಹೆಸರಾದವರು. ತಾನು ಬರುವಾಗ ತನ್ನೆದುರು ಕಾಲಮೇಲೆ ಕಾಲು ಹಾಕಿ ಕುಳಿತ ಐಎಎಸ್‌ ಒಬ್ಬರ ಕಾಲರಿಗೆ ತಮ್ಮ ಕೈಲಿದ್ದ ಜಲ್ಲುವನ್ನು(ದಂಡ) ಹಿಡಿದು ಎದ್ದು ನಿಲ್ಲಿಸಿದ್ದರು. ಹಾಗೆ ಮಾಡುವುದು ಗೋಪಾಲ ಗೌಡರಂತಹ ಖಡಕ್‌ ವ್ಯಕ್ತಿಗೆ ಮಾತ್ರ ಸಾಧ್ಯ.
ಇದು ಜನಸೇವೆಯ ವಿಷಯದಲ್ಲಿ, ಜನಪ್ರತಿನಿಧಿಗಳ ವಿಷಯದಲ್ಲಿ ನಮಗೆ ಯಾವ ಕಲ್ಪನೆ ಮತ್ತು ಭಾವನೆ ಇರಬೇಕೆಂಬುದರ ದ್ಯೋತಕವಾಗಿ ಸಾಂಕೇತಿಕವಾಗಿ ಮಾತ್ರ ಇಟ್ಟುಕೊಳ್ಳೋಣ. ಜನಪ್ರತಿನಿಧಿಗಳ ಎದುರು ಅಧಿಕಾರಿಗಳು ಹೇಗೆ ಸೌಜನ್ಯದಿಂದ ವರ್ತಿಸಬೇಕೆಂಬುದಕ್ಕೆ ಮಾತ್ರ ಸೀಮಿತವಾಗಿಟ್ಟುಕೊಳ್ಳೋಣ.
ಈ ಹಿಂದೆ ಜನಪ್ರತಿನಿಧಿಗಳಾಗುತ್ತಿದ್ದವರಲ್ಲಿ ಬಹುತೇಕರು ಹೆಚ್ಚು ಶಿಕ್ಷ ಣವನ್ನು ಪಡೆದಿರುತ್ತಿರಲಿಲ್ಲ. ಆದರೆ ಅಧಿಕಾರಿಗಳಿಂದ ಕೆಲಸ ತೆಗೆಯುವ ವಿಷಯದಲ್ಲಿ ಅನುಭವ ಹಾಗು ಆಗ್ರಹ ಎರಡೂ ಇರುತ್ತಿತ್ತು. ಆದರೆ ಇಂಥ ವಿಷಯದಲ್ಲಿ ಇಂದಿನ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಹಾಗೆಯೇ ಅಂದಿನ ಇಂದಿನ ಅಧಿಕಾರಿಗಳ ಆಲೋಚನೆ ಮತ್ತು ವರ್ತನೆಯಲ್ಲಿ ಅಜಗಜಾಂತರವಿದೆ. ಅಧಿಕಾರಿಗಳು ಎಷ್ಟೇ ದೊಡ್ಡವನಿದ್ದರೂ ಅನಾಮಿಕತ್ವದ ಶಿಷ್ಟಾಚಾರ ಬಿಡಬಾರದು. ಎಲ್ಲ ಕೆಲಸ ಮಾಡಿಯೂ ಅದರ ಶ್ರೇಯಸ್ಸನ್ನು ಶಾಸಕಾಂಗಕ್ಕೆ ಬಿಡಬೇಕೇ ಹೊರತು ಕೀರ್ತಿಯನ್ನು ತನ್ನ ಮುಡಿಗೇರಿಸಿಕೊಳ್ಳುವ ತೆವಲಿಗೆ ಬೀಳಬಾರದು.
ಒಮ್ಮೊಮ್ಮೆ ಹೀಗೂ ಅನಿಸುವುದುಂಟು. ನಮ್ಮ ಜನಪ್ರತಿನಿಧಿಗಳು ಕೂಡ ಪ್ರಾಮಾಣಿಕರನ್ನು ನಿರ್ಲಕ್ಷಿಸುತ್ತಿರುವುದು, ಕೆಲ ಅಧಿಕಾರಿಗಳ ಜನಬೆಂಬಲದ ಗೀಳಿಗೆ ಕಾರಣವಾಯಿತೇ? ಅನೇಕ ಅಧಿಕಾರಿಗಳು ಎಲೆಮರೆಯ ಕಾಯಾಗಿ ಉತ್ತಮ ಕೆಲಸ ಮಾಡುತ್ತಿರುತ್ತಾರೆ. ಅಂಥವರನ್ನು ಆಡಳಿತಗಾರರು ಏಕಾಏಕಿ ವರ್ಗ ಮಾಡಿ ತಾಪತ್ರಯ ಉಂಟು ಮಾಡುತ್ತಾರೆ. ನ್ಯಾಯನಿಷ್ಠುರ ಅಧಿಕಾರಿಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡುತ್ತಾರೆ. ಅಂತಹ ಅಪಾಯದಿಂದ ಪಾರಾಗಲು ಕೆಲ ಅಧಿಕಾರಿಗಳು ಜನ ಬೆಂಬಲದ ಮೊರೆ ಹೋಗುತ್ತಾರೆ. ಈಗಂತೂ ಸಮಾಜಿಕ ಜಾಲತಾಣಗಳು, ಮಾಧ್ಯಮಗಳು ಅಂಥವರ ನೆರವಿಗೆ ಬರುತ್ತಿವೆ.
ಅಧಿಕಾರಿಗಳಲ್ಲಿ ಎರಡು ವಿಧ. ಮೊದಲ ಗುಂಪಿನವರು ಕಾಯಿದೆ ಹೆಸರಲ್ಲಿ ಆಡಳಿತಾತ್ಮಕ ವಿಚಾರಗಳನ್ನು ಕ್ಲಿಷ್ಟ ಮಾಡುತ್ತಿದ್ದಾರೆ. ರೂಲ್‌ ಬುಕ್‌ ಬಿಟ್ಟು ಆಚೀಚೆ ನೋಡುವುದೇ ಇಲ್ಲ. ಎರಡನೇ ಗುಂಪಿನವರು ಒಂದೋ ಕಾಯಿದೆ ಹೆಸರಲ್ಲಿ ನಿರ್ಭಾವುಕರಾಗುತ್ತಾರೆ, ಇಲ್ಲ ಎಲ್ಲ ನೀತಿನಿಯಮಗಳನ್ನು ಗಾಳಿಗೆ ತೂರಿ ಅನುಕೂಲ ಸಿಂಧು ನೀತಿಗೆ ಜೋತುಬೀಳುತ್ತಿದ್ದಾರೆ. ಹಾಗಾದರೆ ಆಡಳಿತ ಜನಪರ ಆಗುವ ದಾರಿ ಎಂತು?

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top