ಭಾರತ ತನ್ನ ಕ್ಷಾತ್ರ ಗುಣ ತೋರಲು ಇದು ಸಕಾಲ!

ಪಾಕಿಸ್ತಾನದ ದುಷ್ಟರಿಗೆ ಶಿಕ್ಷೆ, ಅಫಘಾನಿಸ್ತಾನದ ಶಿಷ್ಟರಿಗೆ ರಕ್ಷೆ ನಮ್ಮಿಂದ ಆಗಬೇಕು

ಅಫ್ಘಾನಿಸ್ತಾನ ನೆಲದಿಂದ ಅಮೆರಿಕಾ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲಾರಂಭಿಸಿದ ಬೆನ್ನಲ್ಲಿಯೇ, ತಾಲಿಬಾನಿಗಳು ಬಾಲ ಬಿಚ್ಚಲಾರಂಭಿಸಿದ್ದಾರೆ. ಅವರ ಭಯೋತ್ಪಾದನೆ, ಜನ ಹಿಂಸೆ ಶುರುವಾಗಿದೆ. ವಿಭಜನೆಗೆ ಮುನ್ನ ತನ್ನ ನೆರೆಯ ರಾಷ್ಟ್ರವೇ ಆಗಿದ್ದ ಅಫ್ಘಾನಿಸ್ತಾನದ ನೆಲದಲ್ಲಿ ಭಾರತ ನಿರ್ಮಿಸಿದ ಆಸ್ತಿಗಳ ಮೇಲೂ ದಾಳಿ ನಡೆದಿದೆ. ಆಫ್ಘನ್ ಭದ್ರತಾ ಪಡೆ ಹಾಗೂ ತಾಲಿಬಾನಿಗಳ ನಡುವಿನ ಹಿಂಸಾಚಾರ ಕಂಡು ಆತಂಕಗೊಂಡಿರುವ ನಮ್ಮ ಕೇಂದ್ರ ಸರಕಾರ, ಅಲ್ಲಿ ನೆಲೆಸಿರುವ ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲು ಮುಂದಾಗಿದೆ.
ಇಂಥದ್ದೇ ಹೊತ್ತಲ್ಲಿ ಹೊಸ್ತಿಲಲ್ಲಿರುವ ಭಾರತದ ಸ್ವಾತಂತ್ರ್ಯೋ-ತ್ಸವ, ಸೆಪ್ಟೆಂಬರ್ ೧೧ರ ಭಯೋತ್ಪಾದಕ ಕೃತ್ಯದ ನೆನಪು, ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ಆಚರಿಸಿದ ಬಾಂಗ್ಲಾ ವಿಮೋಚನೆಯ ೫೦ನೇ ವರ್ಷದ ಸಂಭ್ರಮಾಚರಣೆಗಳು ಒಂದೊಂದಾಗಿ ಕಣ್ಮುಂದೆ ಬಂದು ನಿಂತಿವೆ. ಈ ಎಲ್ಲ ಹಳೆ ನೆನಪುಗಳ ಹಾಗೂ ನಾಳಿನ ಸ್ವಾತಂತ್ರ್ಯ ಹಬ್ಬದ ಹಿಂದೆ, ನನ್ನನ್ನು ಆವರಿಸಿರುವುದು, ನಮ್ಮ ದೇಶದ ಕ್ಷಾತ್ರಗುಣ. ಅದನ್ನೇ ವಿಸ್ತರಿಸುವೆ.

ಮರೆಯಲಾಗದ ಸೆ.೧೧: ೨೦೦೧ರ ಸೆಪ್ಟೆಂಬರ್ ೧೧ನ್ನು ಯಾರು ತಾನೆ ಮರೆಯಲು ಸಾಧ್ಯ? ಈಶಾನ್ಯ ಅಮೆರಿಕದ ಮೂರು ವಿಭಿನ್ನ ವಿಮಾನ ನಿಲ್ದಾಣಗಳಿಂದ ಕ್ಯಾಲಿಫೋರ್ನಿಯಾದೆಡೆಗೆ ಹೊರಟಿದ್ದ ನಾಲ್ಕು ವಾಣಿಜ್ಯ ವಿಮಾನಗಳನ್ನು ವಹಾಬಿ ಇಸ್ಲಾಮಿಸ್ಟ್ ಭಯೋ-ತ್ಪಾದಕ ಗುಂಪು ಅಲ್‌ಖೈದಾ ಉಗ್ರರು ಆಗಸದಲ್ಲೆ ವಶಕ್ಕೆ ಪಡೆದರು. ಐವರು ಅಲ್‌ಖೈದಾ ಉಗ್ರರು ಅಪಹರಿಸಿದ್ದ ಅಮೆರಿಕನ್ ಏರ್‌ಲೈನ್ಸ್ ಫ್ಲೈಟ್ ೧೧ ಎಂಬ ದೇಸಿ ಪ್ರಯಾಣಿಕ ವಿಮಾನವು ಬೆಳಗ್ಗೆ ೮.೪೬ರಲ್ಲಿ ಲೋಯರ್ ಮ್ಯಾನ್‌ಹಟನ್‌ನಲ್ಲಿದ್ದ ವಿಶ್ವ ವ್ಯಾಪಾರ ಸಂಘಟನೆಯ(ಡಬ್ಲ್ಯುಟಿಒ) ಉತ್ತರ ಗೋಪುರಕ್ಕೆ ಅಪ್ಪಳಿಸಿತು. ಯಾವುದೋ ವಿಮಾನ ಅಪಘಾತವೇ ಇರಬೇಕು ಎಂದುಕೊಳ್ಳುವಷ್ಟರಲ್ಲಿಯೇ ಯುನೈಟೆಡ್ ಏರ್‌ಲೈನ್ಸ್ ಫ್ಲೈಟ್ ೧೭೫ ವಿಮಾನವು ಡಬ್ಲ್ಯುಟಿಒದ ದಕ್ಷಿಣ ಗೋಪುರಕ್ಕೆ ಅಪ್ಪಳಿಸಿತು.
೧೭ ನಿಮಿಷದ ಅಂತರದಲ್ಲಿ ಎರಡು ಭೀಕರ ದಾಳಿ ನಡೆದೇಹೋದವು. ಇದು ಉದ್ದೇಶಪೂರ್ವಕ ಮತ್ತು ಯೋಜಿತ ಭಯೋತ್ಪಾದಕರ ದಾಳಿ ಎಂಬುದು ಅಲ್ಲಿಗೆ ಬಹುತೇಕ ಖಾತ್ರಿಯಾಗಿತ್ತು. ನೋಡನೋಡುತ್ತಿದ್ದಂತೆ ೧೧೦ ಅಂತಸ್ತುಗಳ ಎರಡೂ ಕಟ್ಟಡಗಳು ನೆಲಸಮವಾದವು. ಮೂರನೇ ವಿಮಾನ, ಅಮೆರಿಕದ ಸೇನಾ ಮುಖ್ಯ ಕಚೇರಿಯಿರುವ ಪೆಂಟಗನ್ ಕಟ್ಟಡಕ್ಕೆ ಡಿಕ್ಕಿಯಾಗಿ, ಕಟ್ಟಡದ ಭಾಗಶಃ ಕುಸಿಯುವಂತಾಯಿತು. ಬಹುಶಃ ಅಮೆರಿಕ ಅಧ್ಯಕ್ಷರ ಕಚೇರಿ ಶ್ವೇತಭವನ ಅಥವಾ ಸಂಸತ್ ಭವನವಾದ ಕ್ಯಾಪಿಟಲ್ ಬಿಲ್ಡಿಂಗಿಗೆ ಡಿಕ್ಕಿಯಾಗಲು ಸಾಗುತ್ತಿದ್ದ ನಾಲ್ಕನೇ ವಿಮಾನದ ಪ್ರಯಾಣಿಕರು ಕಾಕ್‌ಪಿಟ್‌ಗೆ ತೆರಳಲು ಭಯೋತ್ಪಾದಕರೊಂದಿಗೆ ಸಂಘರ್ಷ ನಡೆಸಿದರು. ಈ ಸಂಘರ್ಷದ ನಡುವೆ ವಿಮಾನ ಅಪಘಾತಕ್ಕೀಡಾಗಿ ನಾಶವಾಯಿತು. ಎರಡೂ ಕಟ್ಟಡಗಳಿಗೆ ವಿಮಾನಗಳು ಗುದ್ದಿದ ನಂತರ ಅದರಿಂದ ಎದ್ದ ಹೊಗೆಯೇ ಇಂದಿಗೂ ವಿಶ್ವಾದ್ಯಂತ ಜನರ ಕಣ್ಣಲ್ಲಿ ಕಟ್ಟಿದೆ. ಭಯೋತ್ಪಾದನೆ ಪರಿಣಾಮದ ಹೆಗ್ಗುರುತಾಗಿ ಆ ಭಾವಚಿತ್ರಗಳು ಬಳಕೆಯಾಗುತ್ತಿವೆ. ಅಮೆರಿಕ ಮಾಧ್ಯಮ ಸಂಸ್ಥೆಗಳು ಅನುಸರಿಸುವ ಸಂಹಿತೆಯ ಕಾರಣಕ್ಕೆ, ಇಲ್ಲಿವರೆಗೆ ಆ ದಾಳಿಯಲ್ಲಿ ರಕ್ತಸಿಕ್ತವಾಗಿ, ಚೆಲ್ಲಾಪಿಲ್ಲಿ-ಯಾಗಿ ಬಿದ್ದಿದ್ದ ಮನುಷ್ಯ ದೇಹಗಳ ಚಿತ್ರಗಳು ವಿಶ್ವದ ಕಣ್ಣಿಗೆ ಬಿದ್ದಿಲ್ಲ. ಆದರೆ ನಡೆದು ಹೋದ ಅಪಘಾತ ಅಸಾಮಾನ್ಯವಾದದ್ದು. ೮೦ ದೇಶಗಳ, ವಿಭಿನ್ನ ಧಾರ್ಮಿಕ, ಪ್ರಾದೇಶಿಕ ಹಿನ್ನೆಲೆಯ ಮೂರು ಸಾವಿರಕ್ಕೂ ಹೆಚ್ಚು ಜನ ಈ ಭೀಕರ ಕೃತ್ಯದಲ್ಲಿ ಮೃತಪಟ್ಟರು ಅಥವಾ ಕಣ್ಮರೆಯಾದರು. ೩೪೩ ಅಗ್ನಿಶಾಮಕ, ಅರೆವೈದ್ಯಕೀಯ ಸಿಬ್ಬಂದಿ, ೨೩ ಪೊಲೀಸ್ ಸಿಬ್ಬಂದಿ ನಿಧನರಾದರು. ಪೆಂಟಗನ್ ದಾಳಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಕ್ಕಳು ಪೋಷಕರನ್ನು ಕಳೆದುಕೊಂಡರು. ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ೭೦೦ ತರುಣ ಸಿಬ್ಬಂದಿ ಮೃತಪಟ್ಟ ಪರಿಣಾಮ, ೫೦ ಗರ್ಭಿಣಿಯರು ವಿಧವೆಯರಾದರು.

ಇಡೀ ವಿಶ್ವವನ್ನೆ ಕಂಗೆಡಿಸಿದ್ದ ಈ ದಾಳಿಯ ನಂತರ ಮಾತನಾಡಿದ ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್, “ಅಮೆರಿಕ ಮಣ್ಣಿನಲ್ಲಿ ಈ ದಾಳಿ ನಡೆದಿದೆ. ಆದರೆ ಇದು ನಾಗರಿಕ ಸಮಾಜದ ಹೃದಯ ಮತ್ತು ಆತ್ಮದ ಮೇಲಿನ ದಾಳಿ. ಹೊಸ ಹಾಗೂ ವಿಭಿನ್ನ ಯುದ್ಧ ಎದುರಿಸಲು ಇಡೀ ವಿಶ್ವ ಒಂದಾಗಿದೆ. ಭಯೋತ್ಪಾ-ದನೆಯನ್ನು ರಫ್ತು ಮಾಡುವವರು ಹಾಗೂ ಅಂತಹವರನ್ನು ಬೆಂಬಲಿಸುವ ಮತ್ತು ಆಶ್ರಯ ನೀಡುವ ಸರಕಾರಗಳ ವಿರುದ್ಧ ಯದ್ಧ ನಡೆಸಲು ಒಂದಾಗಿದೆ” ಎಂದು ಸಮಾಧಾನದಿಂದಲೇ ಗುಡುಗಿದ್ದರು. ಇದೊಂದು ಕರೆಯ ಬಳಿಕ, ಅಲ್‌ಖೈದಾ ತಾಲಿಬಾನ್ ಉಗ್ರರು ನೆಲೆಸಿದ್ದ ಹಾಗೂ ಇಡೀ ದೇಶವನ್ನು ನಿಯಂತ್ರಿಸುತ್ತಿದ್ದ ಅಫ್ಘಾನಿಸ್ತಾನದ ಮೇಲೆ ಬಾಂಬುಗಳ ಸುರಿಮಳೆಯನ್ನೇ ಅಮೆರಿಕ ವಾಯುಪಡೆ ವಿಮಾನಗಳು ಸುರಿಸಿದವು. ಅಲ್‌ಖೈದಾ ತರಬೇತಿ ಶಿಬಿರಗಳನ್ನು ಧ್ವಂಸ ಮಾಡಿತು. ತಾಲಿಬಾನ್ ಪ್ರತಿನಿಗಳನ್ನು ಕಿತ್ತುಹಾಕಿ, ಅಫ್ಘನ್ನರನ್ನು ಪ್ರತಿನಿಸುವ ಸರಕಾರವನ್ನು ಮರುಸ್ಥಾಪನೆ ಮಾಡಲಾಯಿತು. ಅಮೆರಿಕ ವಾಯು ದಾಳಿಯನ್ನಷ್ಟೆ ನಡೆಸಿ ಸುಮ್ಮನಾಗದೆ, ಅಲ್ಲಿಯೇ ತನ್ನ ಬೃಹತ್ ಪ್ರಮಾಣದ ಸೇನೆಯನ್ನು ನೆಲೆಗೊಳಿಸಿತು. ಈ ಪ್ರದೇಶದಲ್ಲಿ ಶಾಂತಿ ಮರುಸ್ಥಾಪನೆವರೆಗೆ ಈ ಕಾರ್ಯದಲ್ಲಿ ನಿರತರಾಗುವುದಾಗಿ ಭರವಸೆ ನೀಡಿತು.

ಪ್ರಾರಂಭದಲ್ಲಿ ಈ ದಾಳಿಯನ್ನು ನಿರಾಕರಿಸಿದ್ದ ಭಯೋತ್ಪಾದಕ ಒಸಾಮ ಬಿನ್ ಲಾಡೆನ್, ೨೦೦೪ರಲ್ಲಿ ತಾನೇ ಮಾಡಿದ್ದಾಗಿ ಒಪ್ಪಿಕೊಂಡ. ಇಸ್ರೇಲ್‌ಗೆ ಅಮೆರಿಕ ಬೆಂಬಲ ನೀಡುತ್ತಿರುವುದು, ಸೌದಿ ಅರೇಬಿಯಾದಲ್ಲಿ ಅಮೆರಿಕ ಸೇನೆ ನಿಯೋಜನೆ ಮಾಡಿರುವುದು ಹಾಗೂ ಇರಾಕ್ ವಿರುದ್ಧ ವಿಸಲಾಗಿದ್ದ ನಿರ್ಬಂಧಗಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಿದ್ದಾಗಿ ಸಮರ್ಥನೆ ನೀಡಿದ್ದ. ದಾಳಿ ನಡೆದು ಸರಿಯಾಗಿ ಹತ್ತನೇ ವರ್ಷಕ್ಕೆ ಅಂದರೆ ೨೦೧೧ರಲ್ಲಿ ಪಾಕಿಸ್ತಾನದ ಅಬೊತಾಬಾದ್‌ನಲ್ಲಿ ಅಡಗಿ ಕುಳಿತಿದ್ದ ಲಾಡೆನ್‌ನನ್ನು ಹುಡುಕಿ ತೆಗೆದ ಅಮೆರಿಕ ಸೇನೆ, ಆತನನ್ನು ಹತ್ಯೆ ಮಾಡಿ ದೇಹವನ್ನು ೨೪ ಗಂಟೆಯೊಳಗೆ ಸಮುದ್ರದಲ್ಲಿ ಅಂತ್ಯಗೊಳಿಸಿದ್ದಾಗಿ ಘೋಷಿಸಿತು.

ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿ ಹಾಗೂ ನಂತರದ ಘಟನಾವಳಿಗಳು ತಲಾ ೧೦ ವರ್ಷದಂತೆ ಸರಿಯಾಗಿ ವಿಂಗಡನೆ-ಯಾಗುತ್ತವೆ. ೨೦೦೧ರಲ್ಲಿ ದಾಳಿ ನಡೆಯಿತು, ಆಗ ಅಮೆರಿಕ ಅಧ್ಯಕ್ಷ-ರಾಗಿ ಜಾರ್ಜ್ ಡಬ್ಲ್ಯು ಬುಷ್ ಇದ್ದರು. ೨೦೧೧ರಲ್ಲಿ ಒಸಾಮಾ ಬಿನ್ ಲಾಡೆನ್ ಸತ್ತ, ಆಗ ಅಮೆರಿಕ ಅಧ್ಯಕ್ಷರಾಗಿದ್ದವರು ಬರಾಕ್ ಒಬಾಮ. ಇದೀಗ ೨೦೨೧ರಲ್ಲಿ ಮಹತ್ವದ ವಿದ್ಯಮಾನವೊಂದು ಘಟಿಸುತ್ತಿದೆ.

ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆಂದು ತಾನು ನಿಯೋಜಿಸಿದ್ದ ಸೇನೆಯನ್ನು,೨೦೨೦ರ ಒಪ್ಪಂದದ ಪ್ರಕಾರ ನೂತನ ಅಧ್ಯಕ್ಷ ಜೋ ಬೈಡೆನ್ ಹಿಂಪಡೆಯುತ್ತಿದ್ದಾರೆ. ಕಳೆದ ಮೇ ತಿಂಗಳಿನಿಂದ ಆರಂಭವಾದ ಸೇನಾ ಹಿಂಪಡೆತ ಪ್ರಕ್ರಿಯೆ ಭರದಿಂದ ಸಾಗಿದ್ದು, ಸೆಪ್ಟೆಂಬರ್ ವೇಳೆಗೆ ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಕಾಲ್ತೆಗೆಯಲಿದೆ ಎಂದಿದ್ದಾರೆ.
ಆದರೆ ಅಮೆರಿಕ ಸೇನೆ ಹಿಂಪಡೆಯಲು ಆರಂಭಿಸಿದಾಗಿನಿಂದ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಘಟನಾವಳಿಗಳು ವಿಶ್ವಶಾಂತಿಯ ದೃಷ್ಟಿಯಿಂದ ಹಿತಕರವಾಗಿಲ್ಲ. ಅಮೆರಿಕ ಸೇನೆಯ ಅಗಾಧ ಬಲಕ್ಕೆ ಹೆದರಿ ಬಾಲ ಮುದುಡಿ ಕುಳಿತಿದ್ದ ತಾಲಿಬಾನಿಗಳು ಮತ್ತೆ ಬಾಲ ಬಿಚ್ಚಲಾರಂಭಿಸಿದ್ದಾರೆ.

ಒಂದೊಂದೆ ಪ್ರಾಂತ್ಯಗಳ ಮೇಲೆ ದಾಳಿ ನಡೆಸುತ್ತ, ಅವುಗಳ ರಾಜಧಾನಿಯನ್ನು ವಶಕ್ಕೆ ಪಡೆಯುತ್ತಿದ್ದಾರೆ. ಕೇವಲ ಒಂದು ವಾರದ ಅವಯಲ್ಲಿ, ಅಫ್ಘಾನಿಸ್ತಾನದ ೩೪ ಪ್ರಾಂತ್ಯಗಳ ಪೈಕಿ ೯ ಪ್ರಾಂತ್ಯಗಳ ರಾಜಧಾನಿಗಳನ್ನು ವಶಕ್ಕೆ ಪಡೆದಿದ್ದಾರೆ. ಒಂದು ಅಂದಾಜಿನ ಪ್ರಕಾರ, ಒಟ್ಟು ೪೦೦ ಜಿಲ್ಲೆಗಳ ಪೈಕಿ ೨೩೦ ತಾಲಿಬಾನ್ ವಶಕ್ಕೆ ಬಂದಿವೆ. ಇನ್ನು ಕೇವಲ ೩೦ ದಿನದಲ್ಲೆ ಈ ದೇಶದ ರಾಜಧಾನಿ ಕಾಬೂಲ್ ಅನ್ನು ಏಕಾಂಗಿಯಾಗಿಸುವ ತಾಲಿ-ಬಾನಿಗಳು, ೯೦ ದಿನದಲ್ಲಿ ಇಡೀ ದೇಶವನ್ನು ವಶಕ್ಕೆ ಪಡೆಯಲಿದ್ದಾರೆ ಎಂದು ಅಮೆರಿಕ ಗುಪ್ತಚರ ವರದಿಗಳು ಎಚ್ಚರಿಕೆ ನೀಡಿವೆ.

ಇನ್ನೂ ತಾಲಿಬಾನಿಗಳ ನೈತಿಕ ಪೊಲೀಸ್ ಗಿರಿ, ವಿಧ್ವಂಸಕತನವೂ ಶುರುವಾಗಿದೆ. ಹೋದಲ್ಲೆಲ್ಲೆಡೆ ಮುಖ್ಯವಾಗಿ ಅಂಗಡಿ, ಮುಂಗಟ್ಟುಗಳನ್ನು ತಾಲಿಬಾನಿಗಳು ನಾಶ ಮಾಡುತ್ತಿದ್ದಾರೆ. ಅದಕ್ಕಿಂತಲೂ ಆತಂಕಕಾರಿಯೆಂದರೆ, ಮಹಿಳೆಯರು ಮತ್ತು ವಿಧವೆಯರನ್ನು ಗುರಿಯಾಗಿಸಿ ದೌರ್ಜನ್ಯ ಎಸಗುತ್ತಿದ್ದಾರೆ. ನಗರಗಳಿಗೆ ಪ್ರವೇಶಿಸಿದೊಡನೆಯೇ ಯುವತಿಯರು ಹಾಗೂ ವಿಧವೆಯರನ್ನು ಅಪಹರಿಸಿ ತಮ್ಮ ಸಂಘಟನೆಯಲ್ಲಿರುವ ಯುವ ತಾಲಿಬಾನಿಗಳಿಗೆ “ಯುದ್ಧದ ಉಡುಗೊರೆಯಾಗಿ” ನೀಡುತ್ತಿದ್ದಾರೆ ಎಂದು ಮಾಧ್ಯಮಗಳೂ ಆತಂಕಕಾರಿಯಾಗಿ ವರದಿ ಮಾಡುತ್ತಿವೆ.

ಉತ್ತರ ಪ್ರಾಂತ್ಯದ ಬಾಲ್ಖನ್‌ನಲ್ಲಿ, ದೇಹಕ್ಕೆ ಅಂಟಿಕೊಳ್ಳುವಂತಹ ಉಡುಪು ಧರಿಸಿದ್ದಳು ಹಾಗೂ ಪುರುಷನೊಬ್ಬನ ಜತೆಯಿಲ್ಲದೆ ಒಬ್ಬಳೇ ಹೊರಗೆ ಬಂದಿದ್ದಳು ಎಂಬ ಕಾರಣಕ್ಕೆ ೨೧ರ ಯುವತಿಯನ್ನು ಗುಂಡಿಟ್ಟು ಕೊಂದಿದ್ದಾರೆ ಎಂಬ ವರದಿ ಎಂಥವರ ಹೃದಯವನ್ನು ಕಲ್ಲವಿಲಗೊಳಿಸುತ್ತದೆ. ಅಮೆರಿಕ ಸೇನೆಯನ್ನು ಹಿಂಪಡೆಯುವ ಬೈಡೆನ್ ನಿರ್ಧಾರ ಅವಿವೇಕತನದಿಂದ ಕೂಡಿದ್ದು ಎಂದು ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಕೆಲ ದಿನದ ಹಿಂದೆ ವ್ಯಕ್ತಪಡಿಸಿದ್ದರು. ಮುಖ್ಯವಾಗಿ ಅಲ್ಲಿನ ಮಹಿಳೆಯರು, ವಿಧವೆಯರು, ಅಮೆರಿಕ ಸೇನೆಗೆ ಅಫ್ಘನ್ ಭಾಷೆಯನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತಿದ್ದ ಭಾಷಾಂತರಕಾರರನ್ನು ನಡುನೀರಿನಲ್ಲಿ ಕೈಬಿಟ್ಟು-ಬಂದಂತಾಗಿದೆ ಎಂದು ಟೀಕಿಸಿದ್ದಾರೆ.

ಆದರೆ ಬೈಡೆನ್ ಈ ವಾದವನ್ನು ತಳ್ಳಿ ಹಾಕಿದ್ದಾರೆ. “ನಾವೇನು ಅಫ್ಘಾನಿಸ್ತಾನವನ್ನು ಮರುನಿರ್ಮಾಣ ಮಾಡಲು ಅಲ್ಲಿಗೆ ಹೋಗಿರಲಿಲ್ಲ. ಕಳೆದ ೨೦ ವರ್ಷದಲ್ಲಿ ಇದಕ್ಕಾಗಿ ೭೫ ಲಕ್ಷ ಕೋಟಿ ರೂ. (ಒಂದು ಲಕ್ಷ ಕೋಟಿ ಡಾಲರ್)ಗೂ ಹೆಚ್ಚಿನ ಹಣ ವ್ಯಯಿಸಿದ್ದೇವೆ. ೩ ಲಕ್ಷ ಅಫ್ಘನ್ ನಾಗರಿಕರಿಗೆ ಯುದ್ಧ ತರಬೇತಿ ನೀಡಿದ್ದೇವೆ. ನಮ್ಮ ಸಾವಿರಾರು ಸೈನಿಕರನ್ನು ಕಳೆದುಕೊಂಡಿದ್ದೇವೆ. ಈ ನಿರ್ಧಾರದ ಬಗ್ಗೆ ನನಗೆ ಪಶ್ಚಾತ್ತಾಪವಿಲ್ಲ,” ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಹಾಗಾದರೆ ಇಂಥಾ ಹೊತ್ತಲ್ಲಿ ಭಾರತದ ಪಾತ್ರ ಏನಿರಬೇಕು ಎಂಬುದನ್ನು ನೋಡೋಣ. ನಮಗೆಲ್ಲಾ ಗೊತ್ತಿರುವಂತೆ, ನಿರ್ನಾಮವಾದ ಅಫ್ಘಾನಿಸ್ತಾನವನ್ನು ಮರುನಿರ್ಮಾಣ ಮಾಡಲು ಭಾರತವೂ ಶ್ರಮಿಸುತ್ತಿದೆ.
೧೯೪೭ರಲ್ಲಿ ದೇಶ ವಿಭಜನೆಯಾಗುವುದಕ್ಕೂ ಮುನ್ನ ಅಫ್ಘಾನಿಸ್ತಾನದ ಜತೆಗೆ ಭಾರತ ಗಡಿ ಹಂಚಿಕೊಳ್ಳುತ್ತಿತ್ತು. ಪುರಾತ-ನವಾದ ಸಾಂಸ್ಕೃತಿಕ ಸಂಬಂಧಗಳು ಎರಡೂ ದೇಶಗಳ ನಡುವೆ ಇದೆ.

ಅಫ್ಘನ್ ನಾಗರಿಕರಿಗೆ ಭಾರತವನ್ನು ಕಂಡರೆ ವಿಶೇಷ ಪ್ರೇಮ-ವಿದೆ. ೨೦೦೧ರಿಂದ ಈ ಸಂಬಂಧವನ್ನು ಗಟ್ಟಿಗೊಳಿಸುವ ಕಾರ್ಯ ಆರಂಭಿಸಲಾಯಿತು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವು ವಿಶ್ವದ ಹೊಸ ಪ್ರಜಾಪ್ರಜಾಪ್ರಭುತ್ವ ದೇಶದ ಸಂಸತ್ ಭವನ, ರಸ್ತೆ, ಜಲಾಶಯಗಳು, ವಿದ್ಯುತ್ ಉತ್ಪಾದನೆ ಘಟಕ ಮತ್ತು ಸರಬರಾಜು ವ್ಯವಸ್ಥೆ, ಶಾಲಾ ಕಟ್ಟಡಗಳು, ಆಸ್ಪತ್ರೆಗಳ ಪುನರ್ನಿರ್ಮಾಣಕ್ಕೆ ಅಪಾರ ಹಣ ವ್ಯಯಿಸಿದೆ.

ಸುಂದರವಾದ ಸಂಸತ್ ಭವನವೂ ಸೇರಿ ಇಲ್ಲಿವರೆಗೆ ಅಂದಾಜು ೨೨ ಸಾವಿರ ಕೋಟಿ ರೂ. ವ್ಯಯಿಸಿರುವ ಭಾರತ, ದೇಶವೊಂದು ತನ್ನ ಕಾಲಮೇಲೆ ತಾನು ನಿಲ್ಲುವ ಕನಸು ಕಾಣುತ್ತಿತ್ತು. ಆದರೆ ಇದೀಗ ತಾಲಿಬಾನಿಗಳು ದೇಶವನ್ನು ವಶಕ್ಕೆ ಪಡೆಯುವ ಮೂಲಕ ಆ ಎಲ್ಲ ನಿರ್ಮಾಣಗಳು ಅಪಾಯಕ್ಕೆ ಸಿಲುಕಿವೆ. ಭಾರತದ ಸುಮಾರು ೨೨ ಸಾವಿರ ಕೋಟಿ ರೂ. ಕೊಚ್ಚಿಹೋಗುತ್ತಿದೆ.
ಮೊದಲೇ ಭಾರತವನ್ನು ಕಂಡರೆ ಕೆಂಡಕಾರುವ ತಾಲಿಬಾನಿಗಳು, ಭಾರತೀಯ ರಾಯಭಾರ ಕಚೇರಿ ಸೇರಿ ಅನೇಕ ಸಂದರ್ಭಗಳಲ್ಲಿ ಭಾರತೀಯರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಭಾರತವು ಅಫ್ಘನ್ ಸೇನೆಗೆ ನೀಡಿದ್ದ ಮೂರು ಯುದ್ಧ ಹೆಲಿಕಾಪ್ಟರ್‌ಗಳಲ್ಲಿ ಒಂದನ್ನು ತಾಲಿಬಾನಿಗಳು ವಶಕ್ಕೆ ಪಡೆದಿದ್ದಾರೆ. ಇದೀಗ ಭಾರತದ ನಿರ್ಮಾಣಗಳನ್ನು ಯಾವುದೇ ಕ್ಷಣದಲ್ಲಿ ಹೊಡೆದುರುಳಿಸುವ ಅಪಾಯವಿದೆ.

ಈ ಸಂದರ್ಭದಲ್ಲಿ ಭಾರತದ ನಡೆ ನಿಗೂಢವಾಗಿದೆ. ಸಾಂಸ್ಕೃತಿಕ ಸಂಬಂಧವಷ್ಟೆ ಅಲ್ಲದೆ ಹೂಡಿಕೆಯನ್ನೂ ಹೊಂದಿರುವ ಭಾರತ ಯಾವುದೇ ಹಂತದಲ್ಲಿ ನೇರವಾಗಿ ಅಫ್ಘಾನಿಸ್ತಾನದ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಅಲ್ಲೆಲ್ಲೊ ದೂರದಲ್ಲಿರುವ ಅಮೆರಿಕ ತನ್ನದೇ ನೆಲ ಎಂದು ಹೇಳಿಕೊಳ್ಳುತ್ತಿದ್ದ ಸಂದರ್ಭದಲ್ಲೂ, ಪಾಕಿಸ್ತಾನದಂತಹ ಸಣ್ಣ ದೇಶ ದಾಟಿದರೆ ಸಿಗುವ ಅಫ್ಘನ್ ಕುರಿತು ಭಾರತ ಅಂತರ ಕಾಯ್ದುಕೊಂಡಿದೆ. ಭಾರತದ ವಿದೇಶಾಂಗ ಸಚಿವರು ಇರಾನ್ ಜತೆಗೆ ಮಾತುಕತೆ ನಡೆಸಿ, ಅಫ್ಘನ್ ಕುರಿತು ಏನಾದರೂ ಮಾಡೋಣ ಎಂದು ಹೇಳುತ್ತಾರೆ ಎಂದರೆ ಇದಕ್ಕೆ ಏನೆನ್ನಬೇಕು? ಆಫ್ಘನ್ ವಿಚಾರದಲ್ಲಿ ಅಮೆರಿಕದ ನಡೆಯನ್ನು ಮೌನವಾಗಿ ಸಮರ್ಥಿಸುವ ಆನಿವಾರ್ಯತೆ ಭಾರತಕ್ಕೇಕೆ?


ಇದು ಕೇವಲ ಭಾವನಾತ್ಮಕ, ಸ್ವಾಭಿಮಾನದ ವಿಚಾರವಲ್ಲ. ಅಸ್ಥಿರ ಹಾಗೂ ತಾಲಿಬಾನಿಗಳ ಅಫ್ಘಾನಿಸ್ತಾನದಿಂದ ಭಾರತಕ್ಕೆ ಎಂದಿಗೂ ಅಪಾಯವಿದೆ. ಅಫ್ಘನ್ ಗಡಿಗೆ ಹೊಂದಿಕೊಂಡಿರುವ ತಜಕಿಸ್ತಾನ ಹಾಗೂ ಉಜ್ಬೇಕಿಸ್ತಾನ ಪ್ರದೇಶಗಳಲ್ಲಿ ತಾಲಿಬಾನ್ ನಿಯಂತ್ರಣ ಸಾಸಿರುವುದು ಅತ್ತ ರಷ್ಯಾದ ನಿದ್ದೆಗೆಡಿಸಿದೆ. ಈ ದೇಶಗಳೊಡನೆ ಗಡಿ ಹಂಚಿಕೊಂಡಿರುವ ರಷ್ಯಾ, ತನ್ನ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾರಂಭಿಸಿದೆ. ಇತ್ತ, ಪಾಕಿಸ್ತಾನದೊಂದಿಗಿನ ಗಡಿ ಪ್ರದೇಶ-ಗಳಲ್ಲಿ ತಾಲಿಬಾನಿಗಳು ನಿರಾತಂಕವಾಗಿ ನೆಲೆಯೂರುತ್ತಿದ್ದಾರೆ. ಈ ವಿಚಾರದಲ್ಲಿ ಪಾಕಿಸ್ತಾನವನ್ನು ಎಂದಿಗೂ ನಂಬುವಂತಿಲ್ಲ. ಪಾಕಿಸ್ತಾನ ತನ್ನ ನೆಲವನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ಮುಕ್ತವಾಗಿ ಬಿಟ್ಟುಕೊಡುತ್ತದೆ ಎಂಬುದು ಐತಿಹಾಸಿಕವಾಗಿ ಸಾಬೀತಾಗಿದೆ. ಇದೇ ಪಾಕಿಸ್ತಾನದ ನೆಲವನ್ನು ತಾಲಿಬಾನಿಗಳು ಬಳಸಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ವಿಸ್ತರಿಸುವ ಅಪಾಯ ಇದ್ದೇ ಇದೆ.

ನಾವು ನಿರ್ಮಾಣ ಮಾಡಿರುವ ಮೂಲಸೌಕರ್ಯ-ಗಳನ್ನು ಕಾಪಾಡಿಕೊಳ್ಳುವುದು ಅಫ್ಘನ್ನರಿಗೆ ಬಿಟ್ಟಿದ್ದು ಎಂದು ಸುಮ್ಮನೆ ಕೂರುವ ಬದಲಿಗೆ, ಭಾರತ ಮತ್ತಷ್ಟು ಉತ್ತರದಾಯಿಯಾಗಿ ವರ್ತಿಸಬೇಕಿದೆ. ತಾನು ಏಷ್ಯಾದಲ್ಲಿ ಸೂಪರ್ ಪವರ್ ಆಗಬೇಕು ಎಂದು ಹಂಬಲಿಸುವ ಭಾರತ, ಇಂತಹ ಸಂದರ್ಭದಲ್ಲಿ ಮೂಕಪ್ರೇಕ್ಷಕನಾಗದೆ ಕ್ರಿಯಾಶೀಲ ಪಾಲುದಾರನಾಗುವುದು ಉತ್ತಮ.

ಅಂದಹಾಗೆ ಬಾಂಗ್ಲಾ ವಿಮೋಚನೆ ಯುದ್ಧಕ್ಕೆ ಕಳೆದ ಡಿಸೆಂಬರ್‌ಗೆ ಸರಿಯಾಗಿ ೫೦ ವರ್ಷಗಳೇ ಆಯಿತು. ನಾವು ಅದರ ಸಂಭ್ರಮವನ್ನು ಆಚರಿಸಿದೆವು. ೧೯೭೧ಕ್ಕೂ ಮೊದಲು ಬಾಂಗ್ಲಾದೇಶವು ಪೂರ್ವ ಪಾಕಿಸ್ತಾನದ ಹೆಸರಿನಲ್ಲಿ ಪಾಕಿಸ್ತಾನದ ಭಾಗವೇ ಆಗಿತ್ತು. ಪಾಕ್ ಸೇನಾಪಡೆ ಅಲ್ಲಿನ ಜನರ ಮೇಲೆ ಹಿಂಸೆಗಿಳಿದಾಗ, ಅವರೆಲ್ಲರೂ ನಿರಾಶ್ರಿತರಾಗಿ ಭಾರತದೊಳಕ್ಕೆ ನುಸುಳಲಾರಂಭಿಸಿದರು. ಆಗ ಪಾಕ್ ಸೇನೆ ನಡೆಸುತ್ತಿದ್ದ ಕೃತ್ಯ ವಿರೋಧಿಸಿ, ಭಾರತವು ಬಾಂಗ್ಲಾದೇಶಕ್ಕೆ ಬೆಂಬಲ ನೀಡಿತ್ತು. ಇದನ್ನು ನಾವು ಮರೆಯಬಾರದು.

ಬೈಡೆನ್ ಹೇಳಿಕೆಯ ಪಾಠ! ಇನ್ನು, ಅಫ್ಘಾನಿಸ್ತಾನದಿಂದ ಸೇನೆ-ಯನ್ನು ಹಿಂಪಡೆಯುವ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಲೇ ಬೈಡೆನ್ ಒಂದು ಮುಖ್ಯ ವಿಚಾರ ಹೇಳಿದ್ದಾರೆ. “ನಾವು ಭಯೋ-ತ್ಪಾದಕರನ್ನು ಹಿಮ್ಮೆಟ್ಟಿಸುವ ಕೆಲಸ ಮಾಡಿದ್ದೇವೆ. ಅಫ್ಘಾನಿಸ್ತಾನವನ್ನು ಮರುನಿರ್ಮಾಣ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ತಮ್ಮ ನೆಲವನ್ನು ಕಾಯ್ದುಕೊಳ್ಳುವ ಹೊಣೆ ಅಫ್ಘನ್ನರದ್ದು. ತಮ್ಮತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ದೇಶ ರಕ್ಷಣೆಯನ್ನು ಅವರೇ ಮಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲವೇ? ಯಾವುದೇ ದೇಶ ಅಂತಿಮವಾಗಿ ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳಬೇಕು. ಹೊರಗಿನಿಂದ ಸಿಗುವ ನೆರವು ಯಾವಾಗ ಬೇಕಾದರೂ ಸ್ಥಗಿತವಾಗಬಹುದು. ತನ್ನ ಅಂತಃಸತ್ವದಲ್ಲಿ ಅಭಿವೃದ್ಧಿಯ ಕನಸನ್ನು ಬೆಳೆಸಿಕೊಳ್ಳಬೇಕಾದದ್ದು ಅಫ್ಘನ್ನರ ಹೊಣೆ. ತಮಗೆ ತಾಲಿಬಾನಿಗಳು ಬೇಕೊ ಅಥವಾ ಪ್ರಜಾಪ್ರಭುತ್ವದ ಆಧಾರದಲ್ಲಿ ಅಭಿವೃದ್ಧಿ ಬೇಕೊ ಎಂಬುದನ್ನು ಅವರೇ ನಿರ್ಧರಿಸಬೇಕು. ಸಾಮಾನ್ಯ ಜನರಲ್ಲಿ ಈ ಭಾವನೆ ಮೂಡದ ಹೊರತು, ಅಮೆರಿಕ, ಭಾರತ ಸೇರಿ ಎಷ್ಟೇ ದೇಶಗಳು ಮತ್ತೆ ಇಪ್ಪತ್ತು ವರ್ಷ ನೆರವು ನೀಡಿದರೂ, ೧೦ ಲಕ್ಷ ಜನರಿಗೆ ಸೈನಿಕ ತರಬೇತಿ ನೀಡಿದರೂ ಯಾರೂ ಕಾಪಾಡಲು ಸಾಧ್ಯವಿಲ್ಲ.

ಇಸ್ರೇಲ್ ಎಂಬ ಪುಟ್ಟ ದೇಶಕ್ಕೆ ಅಮೆರಿಕ ರಾಜತಾಂತ್ರಿಕವಾಗಿ, ರಾಜಕೀಯವಾಗಿ ಬೆಂಬಲಕ್ಕೆ ನಿಂತಿರಬಹುದು, ಆದರೆ ಸಾಮಾನ್ಯ ಇಸ್ರೇಲಿಗರಲ್ಲಿರುವ ದೇಶಭಕ್ತಿಯೇ ಅವರನ್ನು ಸುತ್ತಮುತ್ತಲಿನ ಶತ್ರುಗಳಿಂದ ಕಾಪಾಡುತ್ತಿದೆ. ಈ ವಿಚಾರ ಅಫ್ಘಾನಿಸ್ತಾನದ ಜತೆಗೆ ಭಾರತಕ್ಕೂ ಅನ್ವಯ. ತನ್ನ ಕ್ಷಾತ್ರ ಗುಣವನ್ನು ಭಾರತ ಮರೆಯಬಾರದು. ನಮ್ಮ ಮೇಲೆ ದಾಳಿ ಮಾಡಲು ಬರುವ ಪಾಕಿಸ್ತಾನದಂತಹ ದುಷ್ಟರ ಶಿಕ್ಷೆ ಮಾತ್ರವಲ್ಲದೆ, ಅಫ್ಘಾನಿಸ್ತಾನದಂತಹ ಶಿಷ್ಟರ ರಕ್ಷಣೆಗೂ ನಿಲ್ಲಬೇಕಲ್ಲವೇ?

ಎಲ್ಲರಿಗೂ ಸ್ವಾತಂತ್ರ್ಯ ಹಬ್ಬದ ಶುಭಾಶಯಗಳು

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top