ದ್ವೇಷ ವ್ಯಾಮೋಹಗಳನ್ನು ಬಿಟ್ಟು ಸಂಸ್ಕೃತಿಯ ವಾಹನಕವಾಗಿ ಭಾಷೆಗಳನ್ನು ಕಲಿಯೋಣ
ಸಂಸ್ಕೃತವು ಜಗತ್ತಿನ ಬಹುತೇಕ ಭಾಷೆಗಳ ತಾಯಿ!
ಹೀಗೆಂದ ಕೂಡಲೆ ಭಾಷಾ ಶಾಸ್ತ್ರಜ್ಞರು ಎನಿಸಿಕೊಂಡವರ ಕಿವಿ ನೆಟ್ಟಗಾಗುತ್ತದೆ. ಇವರಿಗೆ ಭಾಷೆಯ ಉಗಮ, ಬೆಳವಣಿಗೆಯ ಕಿಂಚಿತ್ತೂ ಅರಿವಿಲ್ಲ ಎನ್ನುವವರು ಒಂದಿಷ್ಟು ಮಂದಿ ಇದ್ದರೆ, ಉದ್ದೇಶಪೂರ್ವಕವಾಗಿ ಸಂಸ್ಕೃತದ ಪಾರಮ್ಯವನ್ನು ಮೆರೆಸುತ್ತಿದ್ದಾರೆ ಎನ್ನುವವರೂ ಇನ್ನೊಂದಿಷ್ಟು ಮಂದಿ ಇದ್ದಾರೆ. ಸಂಸ್ಕೃತ ಎಂದರೆ ಪುರೋಹಿತಶಾಹಿಗಳ ಭಾಷೆ ಎನ್ನುವ ಪುಣ್ಯಾತ್ಮ ಪ್ರಗತಿಪರರೂ ಇದ್ದಾರೆ! ಹೀಗೆ, ಸಂಸ್ಕೃತ ಎಂದ ಕೂಡಲೆ ವಿರೋಧ ವ್ಯಕ್ತಪಡಿಸುವ ಒಂದು ವರ್ಗ ಇಂದಿಗೂ ಸಕ್ರಿಯವಾಗಿದೆ. ಅದರ ಸಂಖ್ಯೆ ಅತ್ಯಂತ ಸಣ್ಣದೇ ಇರಬಹುದು. ಇವರಲ್ಲಿ ಬಹುತೇಕರಿಗೆ ಗೊತ್ತಿಲ್ಲದ ಸಂಗತಿ ಏನೆಂದರೆ, ಸಂಸ್ಕೃತ ಭಾಷೆ ಬಲ್ಲವರಾಗಿದ್ದ, ಬಾಬಾ ಸಾಹೇಬ ಡಾ. ಬಿ. ಆರ್. ಅಂಬೇಡ್ಕರ್ ಅವರೂ, ಸಂಸ್ಕೃತ ಬಹುತೇಕ ಭಾರತೀಯ ಭಾಷೆಗಳ ತಾಯಿ ಎಂದಿದ್ದರು!
ಭಾರತದ ಮೊದಲ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರು ಅವರು ತಮ್ಮ ಕೃತಿ ‘ಡಿಸ್ಕವರಿ ಆಫ್ ಇಂಡಿಯಾ’ದಲ್ಲಿ (ಭಾರತ ದರ್ಶನ) ಸಂಸ್ಕೃತ ಕುರಿತು ಲೇಖನವೊಂದನ್ನು ಬರೆದಿದ್ದಾರೆ. 1945ರಲ್ಲಿ ನೆಹರು ಬರೆದಿರುವ ಆ ಕೃತಿಯಲ್ಲಿ ನಿಜವಾಗಿಯೂ ವೈವಿಧ್ಯಮಯ ಭಾರತದ ದರ್ಶನವೇ ಆಗಿದೆ.
‘‘ಅಪಾರವಾದ ಭಾಷಾ ಸಂಪತ್ತು, ಪ್ರತಿಭೆ, ಎಲ್ಲ ಬಗೆಯ ಕಾವ್ಯ ಸಮೃದ್ಧಿ ಸಂಸ್ಕೃತ ಭಾಷೆಗಿದೆ. ಎರಡು ಸಾವಿರದ ಆರುನೂರು ವರ್ಷಗಳ ಹಿಂದೆ ಪಾಣಿನಿಯು ಬರೆದ ವ್ಯಾಕರಣದ ಚೌಕಟ್ಟಿನಲ್ಲಿಯೇ ಬೆಳೆದು, ವಿಶಾಲವಾಗಿ, ಸರ್ವಾಂಗ ಸುಂದರವಾಗಿಯೂ ಬೆಳೆದಿತ್ತು. ಆದರೆ, ಶಬ್ದ ಸಂಯೋಜನೆಗೆ ಸಹಾಯವಾಗಲೆಂದು ರಚಿಸಿದ ವ್ಯಾಕರಣ ನಿಯಮಗಳು, ಪಂಡಿತರ ಕೈಗೆ ಸಿಕ್ಕಿ, ಅವರ ಪಾಂಡಿತ್ಯ ಪ್ರದರ್ಶನಕ್ಕೆ ಅನುಕೂಲವಾದವು,’’ ಎಂದು ನೆಹರು ಸಂಸ್ಕೃತದ ಮಹತ್ವ ಮತ್ತು ಅದರ ಮರೆಮಾಚುವಿಕೆಗೆ ಕಾರಣ ಅರಸುತ್ತಾರೆ.
ಮೂಲತಃ ಕನ್ನಡ ಪತ್ರಕರ್ತರಾಗಿದ್ದುಕೊಂಡು, ಕನ್ನಡ ಹಾಗೂ ಸಂಸ್ಕೃತದಲ್ಲಿ ಪಾಂಡಿತ್ಯ ಹೊಂದಿದ್ದ ಪಾ. ವೆಂ. ಆಚಾರ್ಯ ಅವರು ‘ಹೊಸಗನ್ನಡದ ಹಿರಿಯರು’ ಎಂಬ ಕೃತಿಯಲ್ಲಿ ಭಾಷೆಯ ಕುರಿತು ಬಹಳ ಗಂಭೀರವಾಗಿ ಹಾಗೂ ಆಳವಾಗಿಯೂ ಚರ್ಚೆ ನಡೆಸಿದ್ದಾರೆ. ಭಾಷೆಗಳ ವಿಲಕ್ಷ ಣ ಗತಿ ಎಂಬ ಲೇಖನದಲ್ಲಿ, ‘‘ನಮಗೆ ಗೊತ್ತಿರುವ ಭಾಷೆಗಳಲ್ಲೆಲ್ಲ ಅತಿ ಕಾಡು ಭಾಷೆಯೆನಿಸುವ ಭಾಷೆಗಳಿಗೂ ಕನಿಷ್ಠ ಒಂದು ಲಕ್ಷ ವರ್ಷಗಳ ಇತಿಹಾಸವಿರಬೇಕು. ಈಗಿರುವ ಯಾವ ಭಾಷೆಯೂ ಸ್ವತಂತ್ರ ಮೂಲ ಭಾಷೆಯಲ್ಲ. ಒಂದು ಕಾಲದಲ್ಲಿ ಸಂಸ್ಕೃತವೇ ಎಲ್ಲ ಭಾರತೀಯ-ಐರೋಪ್ಯ ಭಾಷೆಗಳ ತಾಯಿಯೆಂಬ ಭಾವನೆಯಿತ್ತು. ಆದರೆ ಸಂಸ್ಕೃತ ಕೂಡ ಯಾವುದೋ ಮೂಲಭಾಷೆಯಿಂದ ಕವಲೊಡೆದಿದೆ ಎಂಬುದು ಈಗ ನಿರ್ಧಾರವಾಗಿದೆ. ಪ್ರತಿಯೊಂದು ಭಾಷೆ ಇತರ ಯಾವುದಾದರೂ ಭಾಷೆಯ ಕವಲಾಗಿ ಬೆಳೆಯಲಾರಂಭಿಸಿ, ಕೊನೆಗೆ ತಾನೇ ಒಂದು ಭಾಷೆಯಾಗಿರುತ್ತದೆ,’’ ಎಂದು ವಿವರಿಸಿದ್ದಾರೆ.
ಸಂಸ್ಕೃತ ಕುರಿತ ಪಾವೆಂ ಅವರ ಕೆಲವು ಅನುಮಾನಗಳಿಗೆ ನೆಹರು ಅವರು ತಮ್ಮ ಭಾರತ ದರ್ಶನ ಕೃತಿಯಲ್ಲಿ ಉಲ್ಲೇಖಿಸಿರುವ ಬ್ರಿಟಿಷ್ ಭಾಷಾ ಶಾಸ್ತ್ರಜ್ಞ ಸರ್ ವಿಲಿಯಂ ಜೋನ್ಸ್ (1746-1794) ಅವರ ಮಾತುಗಳಲ್ಲಿ ಉತ್ತರ ಕಂಡುಕೊಳ್ಳಬಹುದು.
ವಿಲಿಯಂ ಜೋನ್ಸ್ 1784ರಲ್ಲೆ, ‘‘ಸಂಸ್ಕೃತವು ಅತ್ಯಂತ ಪ್ರಾಚೀನ ಭಾಷೆಯಾದರೂ, ಅದಕ್ಕೆ ಈಗಲೂ ಅದ್ಭುತ ರಚನಾ ಶಕ್ತಿಯಿದೆ. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಿಂತ ವಿಫುಲವಾಗಿದೆ. ಈ ಎರಡೂ ಭಾಷೆಗಳಿಗಿಂತ ಪೂರ್ಣ ಶುದ್ಧವಿದೆ. ಧಾತುಗಳ ಮೂಲ ಸ್ವರೂಪದಲ್ಲೂ, ವ್ಯಾಕರಣ ರೂಪಗಳಲ್ಲೂ ಸಂಸ್ಕೃತಕ್ಕೂ, ಗ್ರೀಕ್-ಲ್ಯಾಟಿನ್ಗೂ ಸಾಮ್ಯತೆ ಇದೆ,’’ ಎಂದು ಹೇಳಿದ್ದಾರೆ.
ಇದೇನೆ ಇರಲಿ, ಸಂಸ್ಕೃತವು ಭಾರತೀಯ ಭಾಷೆಗಳ ತಾಯಿ ಎಂದ ಕೂಡಲೆ ಭಾಷಾಶಾಸ್ತ್ರದ ದೃಷ್ಟಿಕೋನದಲ್ಲಿ ಅದನ್ನು ನೋಡುವುದರಿಂದ ಅನೇಕ ಸಮಸ್ಯೆಗಳು ಕಾಣುತ್ತಿವೆ. ಭಾಷಾ ದೃಷ್ಟಿಯಿಂದ ಸಂಸ್ಕೃತವೇ ಮೊದಲ ಭಾಷೆ ಎಂದು ಒಪ್ಪಿಕೊಂಡುಬಿಟ್ಟರೆ, ಇತರೆ ಎಲ್ಲ ಭಾಷೆಗಳಲ್ಲೂ ಇರುವ ಹಾಗೂ ಇದ್ದಿರಬಹುದಾದ ಪುರಾತನ ವಿಚಾರಗಳನ್ನು ಇಲ್ಲವಾಗಿಸಬೇಕಾಗುತ್ತದೆ. ಹಾಗಾಗಿ ಸಂಸ್ಕೃತದ ಜತೆಗೆ ಯಾವುದೇ ಭಾಷೆಯನ್ನು, ಆಯಾ ಭಾಷೆಗಳು ಪರಸ್ಪರ ಕೊಡು ಕೊಳ್ಳುವಿಕೆಯ ಪ್ರಮಾಣದ ಆಧಾರದಲ್ಲಿ ನೋಡಬೇಕಾಗುತ್ತದೆ.
ರಾಷ್ಟ್ರಕವಿ ಕುವೆಂಪು ಅವರ ‘ಕನ್ನಡ ಕೈಪಿಡಿ’ ಕೃತಿಯಲ್ಲಿ, ‘‘ಸಂಸ್ಕೃತ, ಪ್ರಾಕೃತಗಳ ಗಾಢವಾದ ಸಂಸರ್ಗವು ಬಹು ಪ್ರಾಚೀನ ಕಾಲದಿಂದಲೂ ಕನ್ನಡಕ್ಕೆ ಆಗಿರುವುದರಿಂದ ಧರ್ಮ, ನೀತಿ, ಮತತತ್ವ, ಶಾಸ್ತ್ರ, ಸಮಾಜ, ಸಾಹಿತ್ಯ, ರಾಜ್ಯ, ಈ ವಿಷಯಗಳಿಗೆ ಸಂಬಂಧಿಸಿದ ಅನೇಕಾನೇಕ ಸಂಸ್ಕೃತ ಪ್ರಾಕೃತ ಶಬ್ದಗಳು ಕನ್ನಡಕ್ಕೆ ಸೇರಿಹೋಗಿವೆ.’’ ಎನ್ನುತ್ತಾರೆ. ‘‘ಸಂಸ್ಕೃತ ಸಾಹಿತ್ಯವೂ, ಅದರ ಪದ್ಧತಿಯೂ ಪ್ರಾಬಲ್ಯಕ್ಕೆ ಬರುವುದಕ್ಕೆ ಮುಂಚೆ ಶುದ್ಧ ಕನ್ನಡ ಸಂಪ್ರದಾಯದಲ್ಲಿ ಕನ್ನಡ ಸಾಹಿತ್ಯವು ಹುಟ್ಟಿ ಬೆಳೆದು ಬಂದಿತ್ತೇ? ಇದು ತಿಳಿಯುವುದು ಕಷ್ಟ. ಅಂತೂ ಈಗ ಇರುವ ಹಳೆಗನ್ನಡ ಗ್ರಂಥಗಳು, ಅದರಲ್ಲಿಯೂ ಪ್ರೌಢವಾದ ಪ್ರಾಚೀನ ಕಾವ್ಯಗಳು, ಸಂಸ್ಕೃತ ಮಾರ್ಗವನ್ನು ಅನುಸರಿಸಿಯೇ ಬರೆದವುಗಳು,’’ ಎಂದು ಕುವೆಂಪು ತಿಳಿಸುತ್ತಾರೆ.
ಅಂದರೆ ಸಂಸ್ಕೃತ ಮತ್ತು ಕನ್ನಡದ ಸಂಬಂಧವನ್ನು, ಯಾವ ಭಾಷೆ ಮೊದಲು, ಯಾವುದು ಪ್ರಾಚೀನ ಎಂದು ನೋಡುವುದಕ್ಕಿಂತ, ಯಾರು ಹೆಚ್ಚು ಪಡೆದುಕೊಂಡರು ಎಂಬ ದೃಷ್ಟಿಕೋನದಲ್ಲಿ ನೋಡಬೇಕಾಗುತ್ತದೆ.
ಬಿ.ಎಂ. ಶ್ರೀಕಂಠಯ್ಯ, ಆಲೂರು ವೆಂಕಟರಾಯರು, ಮಂಜೇಶ್ವರ ಗೋವಿಂದ ಪೈ, ಪಂಜೆ ಮಂಗೇಶರಾಯರು ಸೇರಿ ಕನ್ನಡದ ಅನೇಕ ಪ್ರಮುಖ ಲೇಖಕರು ಕನ್ನಡ ಹಾಗೂ ಸಂಸ್ಕೃತದಲ್ಲಿ ಪಾಂಡಿತ್ಯ ಪಡೆದವರಾಗಿದ್ದರು. ಹಾಗೆಂದ ಮಾತ್ರಕ್ಕೆ ಅವರೆಲ್ಲರೂ ಕಡಿಮೆ ಕನ್ನಡಿಗರು ಎನ್ನಲಾಗುತ್ತದೆಯೇ? ಈಗಿನ ಸಂದರ್ಭದಲ್ಲಿ ಹಾಗೆಯೇ ಆಗುತ್ತಿದೆ. ಸಂಸ್ಕೃತದ ಕುರಿತು ಮಾತನಾಡಿದರೆ ಸಾಕು ಒಂದು ಸಿದ್ಧಾಂತಕ್ಕೆ, ಒಂದು ಜಾತಿಗೆ ಸೀಮಿತ ಮಾಡಿ ಅವರ ವೈಯಕ್ತಿಕ ಚಾರಿತ್ರ್ಯಹರಣ ಮಾಡುವ ಕಾರ್ಯಕ್ಕೆ ಅನೇಕರು ಇಳಿದಿದ್ದಾರೆ.
ಜಗತ್ತಿನಲ್ಲಿ ಭಾಷೆ ಎನ್ನುವುದು ಮೊದಲಿಗೆ ಯಾವಾಗ ಸೃಷ್ಟಿಯಾಯಿತು, ಶುರುವಾಯಿತು ಎನ್ನುವುದು ಯಾರಿಗೂ ತಿಳಿದಿಲ್ಲ. ಪ್ರಾಣಿಗಳಿಗೂ ಭಾಷೆಯಿದೆ ಎನ್ನಲಾಗುತ್ತದೆ. ಮಾನವನ ಭಾಷೆ ಮೂಡಲಾರಂಭಿಸಿದ ನಂತರ ಅದು ತನ್ನ ಮೂಲಕ್ಕಿಂತಲೂ ವಿಭಿನ್ನವಾಗಿ ವಿಕಸಿತವಾಗಲು ಕಾರಣಗಳೇನು ಎಂದು ಅನೇಕರು ವಿಶ್ಲೇಷಿಸುತ್ತಾರೆ. ಒಂದೇ ಮೂಲದ ಭಾಷಿಕರ ನಡುವೆ ಒಂದು ಗಡಿಯನ್ನು ನಿರ್ಮಿಸಿ ನೂರಿನ್ನೂರು ವರ್ಷ ಇಬ್ಬರ ನಡುವೆ ಸಂಪರ್ಕವೇ ಇಲ್ಲದಂತೆ ಮಾಡಿದರೆ, ಇಬ್ಬರು ಬಳಸುವ ಅಕ್ಷ ರಗಳು ಒಂದೇ ಆಗಿದ್ದರೂ ಪರಸ್ಪರರು ಮಾತನಾಡುವುದು ಅರ್ಥವಾಗದಷ್ಟು ಭಾಷೆಯು ಬದಲಾಗಿರುತ್ತದೆ. ಅಂದರೆ ಭಾಷೆಯ ಬೆಳವಣಿಗೆಗೆ ಪರಸ್ಪರ ಕೊಡುಕೊಳ್ಳುವಿಕೆ ಅತ್ಯಂತ ಮುಖ್ಯ. ಕರ್ನಾಟಕದಲ್ಲೆ ತೆಗೆದುಕೊಂಡರೆ, ವಿಜಯನಗರದ ಅರಸರ ಕಾಲವನ್ನು ಹೊರತುಪಡಿಸಿ ಎಂದಿಗೂ ಇಡೀ ರಾಜ್ಯ ಒಂದೇ ರಾಜಾಡಳಿತಕ್ಕೆ ಒಳಗೊಂಡಿಲ್ಲ. ಸ್ವಾತಂತ್ರ್ಯ ಲಭಿಸುವ ಕಾಲಕ್ಕೆ ಕರ್ನಾಟಕವು ಮುಂಬೈ ಪ್ರಾಂತ್ಯ, ನಿಜಾಮನ ಆಡಳಿತ, ಮದ್ರಾಸ್ ಪ್ರಾಂತ್ಯ, ಮೈಸೂರು ಪ್ರಾಂತ್ಯಗಳಾಗಿತ್ತು. ಈ ಎಲ್ಲ ಕಡೆಗಳಲ್ಲೂ ಮಾತನಾಡುವುದು ಕನ್ನಡವೇ ಆದರೂ ಮುಂಬೈ ಪ್ರಾಂತ್ಯದ ಕನ್ನಡಿಗರ ಮಾತಿನಲ್ಲಿ ಮರಾಠಿ ಶಬ್ದಗಳು ಹಾಗೂ ಶೈಲಿ ಮೂಡಿರುತ್ತದೆ. ಹಾಗೆಯೇ ಗಡಿಯಾಚೆಗಿನ ಮಹಾರಾಷ್ಟ್ರದವರ ಮೇಲೆಯೂ ಕನ್ನಡದ ಪ್ರಭಾವ ಉಂಟಾಗಿರುತ್ತದೆ. ಅಂದರೆ ಭಾಷೆಯ ಬದಲಾವಣೆಗೆ ರಾಜಕೀಯ ಗಡಿಗಳೂ ಕಾರಣವಾಗಬಲ್ಲವು.
ಭಾಷೆ ಎನ್ನುವುದು ಕೇವಲ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವ ಮಾಧ್ಯಮ ಎನ್ನುವ ಅನೇಕರ ವಾದಗಳು ಸುಳ್ಳಾಗಿವೆ. ಭಾಷೆಯು ಭಾವನೆಗಳ ಮಾತ್ರವಲ್ಲ, ಸಂಸ್ಕೃತಿಯ ವಾಹಕ. ಒಂದು ಭಾಷೆಯನ್ನು ಮಾತನಾಡುತ್ತಿದ್ದೇವೆ ಎಂದರೆ ಆ ಭಾಷೆಗೆ ಸಂಬಂಧಿಸಿದ ಸಂಸ್ಕೃತಿಯನ್ನೂ ಮಾತನಾಡುತ್ತಿದ್ದೇವೆ ಎಂದರ್ಥ.
ಈ ನಿಟ್ಟಿನಲ್ಲಿ ಕನ್ನಡವು ಸಂಸ್ಕೃತದಿಂದ ಪಡೆದಿರುವುದೇ ಹೆಚ್ಚು. ಪ್ರಾಚೀನ್ಯ ಕಾವ್ಯಗಳ ಶೈಲಿ, ಭಾವನೆಗಳನ್ನು ಕನ್ನಡಿಗರಿಗೆ ನಮ್ಮ ಕವಿಗಳು, ಲೇಖಕರ ಪಾತ್ರ ದೊಡ್ಡದಿದೆ. ಸಂಸ್ಕೃತದಿಂದ ಪಡೆಯುವಿಕೆಗೆ ಅನೇಕ ಉದಾಹರಣೆಗಳು ಸಿಗುತ್ತವೆ.
ಆದಿ ಶಂಕರಾಚಾರ್ಯರು ರಚಿಸಿದ ಪ್ರಸಿದ್ಧ ‘ಭಜಗೋವಿಂದಂ’ನ 9ನೇ ಶ್ಲೋಕವು ಹೀಗೆ ಹೇಳುತ್ತದೆ.
‘‘ಸತ್ಸಂಗತ್ವೇ ನಿಸ್ಸಂಗತ್ವಂ.
ನಿಸ್ಸಂಗತ್ವೇ ನಿರ್ಮೋಹತ್ವಮ್,
ನಿರ್ಮೋಹತ್ವೇ ನಿಶ್ಚಲತತ್ತ್ವಂ,
ನಿಶ್ಚಲತತ್ತ್ವೇ ಜೀವನ್ಮುಕ್ತಿಃ.
ಅಂದರೆ, ಸತ್ಸಂಗ ಮಾಡುವುದರಿಂದ ನಿಸ್ಸಂಗ ಸ್ಥಿತಿ ಬರುತ್ತದೆ. ನಿಸ್ಸಂಗದಲ್ಲಿ ಮೋಹವಿರುವುದಿಲ್ಲ. ಮೋಹ ಹೋದ ಮೇಲೆ ನಿಶ್ಚಿಂತನಾಗಿರುತ್ತಾನೆ. ನಿಶ್ಚಿಂತತೆಯಿಂದ ಜೀವಂತವಾಗಿರುವವನೇ ಮುಕ್ತನು ಎಂದು. ಇದು ಆದಿ ಶಂಕರಾಚಾರ್ಯರು ಬರೆದಿದ್ದಾದರೆ, ನಮ್ಮ ಕರ್ನಾಟಕದ ವಚನ ಚಳವಳಿಯ ಅಕ್ಕ ಮಹಾದೇವಿಯ ವಚನವೊಂದಿದೆ.
ಸಂಗದಿಂದಲ್ಲದೆ ಅಗ್ನಿ ಹುಟ್ಟದು,
ಸಂಗದಿಂದಲ್ಲದೆ ಬೀಜ ಮೊಳೆದೋರದು,
ಸಂಗದಿಂದಲ್ಲದೆ ಹೂವಾಗದು.
ಸಂಗದಿಂದಲ್ಲದೆ ಸರ್ವಸುಖದೋರದು.
ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಮಹಾನುಭಾವಿಗಳ
ಸಂಗದಿಂದಲಾನು ಪರಮಸುಖಿಯಾದೆನಯ್ಯಾ.
ಅಂದರೆ, ಒಂದು ಗಿಡದಲ್ಲಿ ಹೂವರಳಲು ಅದರ ಮಣ್ಣಿನೊಂದಿಗೆ ನೀರಿನೊಂದಿಗೆ ಸಂಗವೂ ಅಷ್ಟೇ ಮುಖ್ಯಪಾತ್ರ ವಹಿಸುತ್ತದೆ. ಅಗ್ನಿಯುಂಟಾಗಲಿಕ್ಕೆ ಎರಡು ಕಲ್ಲುಗಳ ಸಂಗ ಅನಿವಾರ್ಯ. ಪರಸ್ಪರ ಘರ್ಷಣೆಯಿಂದ ಅಗ್ನಿ ಹುಟ್ಟುತ್ತದೆ. ಅಷ್ಟೇ ಅಲ್ಲ ಸಂಗವಿಲ್ಲದಿದ್ದರೆ ಏನೂ ಸಾಧ್ಯವಿಲ್ಲ. ಚೆನ್ನಮಲ್ಲಿಕಾರ್ಜುನಾ ನಿಮ್ಮ ಮಹಾನುಭಾವಿಗಳ ಸಂಗದಿಂದ ನಾನು ಪರಮಸುಖಿಯಾದೆನಯ್ಯಾ ಎನ್ನುತ್ತಾರೆ.
ಶಂಕರಾಚಾರ್ಯರು ರಚಿಸಿದ ಶ್ಲೋಕಕ್ಕೂ ಅಕ್ಕಮಹಾದೇವಿಯ ವಚನಕ್ಕೂ ಭಾಷೆಯ ವ್ಯತ್ಯಾಸವಿದ್ದರೂ ಸಂಸ್ಕೃತಿ ಒಂದೇ. ಸಂಸ್ಕೃತ ಭಾಷೆಯು ಶ್ಲೋಕಗಳಷ್ಟೆ ಅಲ್ಲದೆ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಮೂಲಕವೂ ಕನ್ನಡವನ್ನು ಶ್ರೀಮಂತವಾಗಿಸಿದೆ. ಇದೇ ಕಾರಣಕ್ಕೆ ಕನ್ನಡದ ಕಣ್ವರೆಂದೇ ಖ್ಯಾತರಾದ ಬಿ.ಎಂ. ಶ್ರೀಕಂಠಯ್ಯನವರು, ‘‘ಕನ್ನಡಕ್ಕೆ ಸಂಸ್ಕೃತವೇ ಪ್ರೇರಕ, ಪೋಷಕ ಮತ್ತು ಗುರು,’’ ಎಂದು ಹೇಳಿದ್ದರು.
ಇಂತಹ ಅನೇಕ ಉದಾಹರಣೆಗಳನ್ನು ಕಾಣಬಹುದು. ಸಂಸ್ಕೃತ ಹಾಗೂ ಕನ್ನಡದ ಉಗಮ, ಮೂಲ, ಬೆಳವಣಿಗೆ ಪ್ರತ್ಯೇಕ ಎಂದು ಯಾರಾದರೂ ವಾದಿಸಬಹುದು. ಆದರೆ ಭಾಷೆಗಳೂ ಪರಸ್ಪರ ಕೊಡುಕೊಳ್ಳುವಿಕೆಯಿಂದ ಬೆಳವಣಿಗೆ ಕಾಣುತ್ತಿರುವುದನ್ನು ಯಾರೂ ಅಲ್ಲಗಳೆಯಲಾರರು.
ಭಾಷೆಗಳ ನಡುವಿನ ಪರಸ್ಪರ ಸಂಬಂಧಕ್ಕೆ ಹಾಸ್ಯ ಸ್ವರೂಪದ ಉದಾಹರಣೆಯನ್ನು ನೀಡುವುದಾದರೆ, ಒಮ್ಮೆ ಅವಧಾನದಲ್ಲಿ ಶತಾವಧಾನಿ ಡಾ. ಆರ್. ಗಣೇಶ ಅವರನ್ನು ಅಪ್ರಸ್ತುತ ಪ್ರಸಂಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು ಸ್ವಾರಸ್ಯಕರವಾಗಿತ್ತು. ‘‘ಶಾಲೆಗೆ ಹೆಸರು ತಂದ ಬಾಲಕನನ್ನು ಕಲಶಪ್ರಾಯ ಎನ್ನಲಾಗುತ್ತದೆ. ಕಲಶ ಎನ್ನುವುದು ಸಂಸ್ಕೃತ ಶಬ್ದವಾಗಿದ್ದು, ಅದರ ಬದಲು ಕನ್ನಡದಲ್ಲಿ ಚೊಂಬು ಎಂದು ಬಳಸಿದರೆ ಹೇಗಿರುತ್ತದೆ? ಶಾಲೆಗೆ ಈ ಬಾಲಕ ಚೊಂಬು ತಂದವನು ಎನ್ನಲಾಗುತ್ತದೆಯೇ?’’.
ಭಾಷೆಗಳು ಪರಸ್ಪರ ಬೆಳೆಯುತ್ತ ಒಂದರಿಂದ ಇನ್ನೊಂದನ್ನು ಬೇರ್ಪಡಿಸಲಾಗದಷ್ಟು ಬೆಸೆದುಕೊಂಡಿರುತ್ತವೆ. ಅವುಗಳನ್ನು ಬೇರ್ಪಡಿಸುವುದು ಅಸಾಧ್ಯವಲ್ಲವಾದರೂ ಈ ಕಾರ್ಯದಿಂದ ಭಾಷೆಗಳ ಸೌಂದರ್ಯ ಹೊರಟುಹೋಗುತ್ತದೆ. ಭಾಷೆಗಳ ಸೌಂದರ್ಯವನ್ನು ಹಾಳುಗೆಡವಿ ಪಡೆಯುವುದಾದರೂ ಏನು?
ಶಂಕರಾಚಾರ್ಯರು ತಿಳಿಸಿದ ‘ಸತ್ಸಂಗ’ವನ್ನೂ ಅಕ್ಕ ತಿಳಿಸಿದ ‘ಸಂಗ’ವನ್ನೂ ಭಾಷಾ ವಿಷಯಕ್ಕೆ ಹೋಲಿಸುವುದಾದರೆ, ಯಾವುದೇ ಭಾಷೆಯು ದ್ವೀಪದಂತೆ ಬೆಳೆಯಲು ಸಾಧ್ಯವಿಲ್ಲ. ವಿಭಿನ್ನ ಭಾಷೆಗಳ ಸಂಸರ್ಗದಿಂದ ಭಾಷೆಗಳು ಬೆಳೆಯುವುದರ ಜತೆಗೆ ಆ ಭಾಷೆಗಳನ್ನು ಮಾತನಾಡುವವರ ಜ್ಞಾನ ಭಂಡಾರ, ಶಬ್ದಭಂಡಾರವೂ ಬೆಳೆಯುತ್ತದೆ.
ಇಷ್ಟಕ್ಕೂ ಭಾರತದ ಅನೇಕ ರಾಜ್ಯಗಳಲ್ಲಿ ಇಲ್ಲದ ಕನ್ನಡ ಮತ್ತು ಸಂಸ್ಕೃತ ಸಂಘರ್ಷ ಕರ್ನಾಟಕದಲ್ಲಿ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕಾಣುತ್ತಿರುವುದಕ್ಕೆ ಸೈದ್ಧಾಂತಿಕ, ಭಾಷಿಕ ಕಾರಣಕ್ಕಿಂತಲೂ ಹೆಚ್ಚಾಗಿ ರಾಜಕೀಯ ಕಾರಣಗಳೇ ಕಾಣುತ್ತಿವೆ. ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡದೆ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನೀಡಲಾಗುತ್ತಿದೆ ಎನ್ನುವುದು ನೆಪ ಮಾತ್ರ. ಹಾಗೆ ನೋಡಿದರೆ ಕಳೆದ ದಶಕದಲ್ಲಿ ಕರ್ನಾಟಕ ಸರಕಾರದಿಂದ ಅನೇಕ ವಿಶ್ವವಿದ್ಯಾಲಯಗಳನ್ನು ಬಜೆಟ್ಗೆ ಒಂದರಂತೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಶುಲ್ಕದಿಂದಲೇ ಹೆಚ್ಚಿನ ಹಣ ಪಡೆಯುವ ಬೆಂಗಳೂರು ವಿವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಮೈಸೂರು ವಿವಿ ಸೇರಿದಂತೆ ಯಾವ ವಿವಿಗಳಿಗೂ ರಾಜ್ಯ ಸರಕಾರ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಅನುದಾನವನ್ನೇ ನೀಡಿಲ್ಲ. 2008ರಲ್ಲಿ ಕೇಂದ್ರ ಸರಕಾರ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಘೋಷಿಸಿದಾಗ, ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು, ಎಲ್ಲ ವಿವಿಗಳಿಗೂ ಕನ್ನಡ ಅಭಿವೃದ್ಧಿಗಾಗಿ ಹಣ ನೀಡಿದ್ದನ್ನು ಬಿಟ್ಟರೆ, ಉಳಿದಂತೆ ವಿವಿಗಳಿಗೆ ಅನುದಾನ ನೀಡಿಯೇ ಇಲ್ಲ.
ಈ ಅರ್ಥದಲ್ಲಿ ಎಲ್ಲ ವಿವಿಗಳೂ ಬಡವಾಗಿವೆ. ಹೀಗಿದ್ದರೂ ಕೆಲವರು ಸಂಸ್ಕೃತ- ಕನ್ನಡ ವಿವಿಗಳನ್ನಷ್ಟೆ ಹೋಲಿಕೆ ಮಾಡುತ್ತಿದ್ದಾರೆ. ಜತೆಗೆ, ಇನ್ನೂ ಒಂದು ಸಂಗತಿ. 2010ರಲ್ಲಿ ಆರಂಭವಾಗಿರುವ ಸಂಸ್ಕೃತ ವಿವಿಗೆ ಕ್ಯಾಂಪಸ್ ಸೇರಿದಂತೆ ಒಂದಿಷ್ಟು ಮೂಲಸೌಕರ್ಯಗಳ ಸೃಷ್ಟಿಗೆ ನೀಡುವ ದೊಡ್ಡ ಮೊತ್ತದ ಅನುದಾನವನ್ನು, ಹಾಲಿ ಅಸ್ತಿತ್ವದಲ್ಲಿರುವ ವಿವಿಗಳಿಗೆ ನೀಡುವ ಬ್ಲಾಕ್ ಗ್ರ್ಯಾಂಟ್ಗೆ ಹೋಲಿಸಿ- ಕನ್ನಡ ವಿವಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಹೇಳುವುದು ರಾಜಕೀಯವಲ್ಲದೆ ಮತ್ತಿನ್ನೇನು?
ಸಂಸ್ಕೃತಕ್ಕೆ ಅದನ್ನು ಪ್ರೀತಿಸುವವರು ಹಾಗೂ ವಿರೋಧಿಸುವವರು- ಇಬ್ಬರಿಂದಲೂ ಅನ್ಯಾಯವಾಗುತ್ತಿದೆ. ಸಂಸ್ಕೃತವನ್ನು ಪ್ರೀತಿಸುವವರು ಇದು ದೇವಭಾಷೆ ಎಂದುಕೊಂಡು ಜನಸಾಮಾನ್ಯರಿಂದ ದೂರವಾಗಿಸಿದ್ದಾರೆ ಹಾಗೂ ಭಾಷಾ ಶುದ್ಧತೆಯ ನೆಪದಲ್ಲಿ ಭಾಷಾಭಿವೃದ್ಧಿಗೆ ತೊಡಕಾಗಿದ್ದಾರೆ. ಇದನ್ನು ಅಂಬೇಡ್ಕರ್ ಸರಿಯಾಗಿ ಗುರುತಿಸಿದ್ದರು. ಅವರು ಹೇಳಿದ್ದಾರೆ- ‘‘ಸಂಸ್ಕೃತ ಸಾಹಿತ್ಯ ಗಣಿ ಕೂಡ. ಅದನ್ನು ಬ್ರಾಹ್ಮಣರು ತಾವೂ ಸರಿಯಾಗಿ ಬಳಸಿಕೊಳ್ಳಲಿಲ್ಲ. ಉಳಿದವರೂ ಬಳಸಿಕೊಳ್ಳಲು ಅವಕಾಶ ಕೊಡಲಿಲ್ಲ !’’
ಸಂಸ್ಕೃತ ಭಾರತದ ರಾಷ್ಟ್ರಭಾಷೆಯಾಗಬೇಕೆಂಬ ಪ್ರಸ್ತಾವನೆಯನ್ನು ಅಂಬೇಡ್ಕರ್ ಅನುಮೋದಿಸಿದ್ದರು ಎಂಬುದು ಗೊತ್ತಿರುವ ಸಂಗತಿಯೇ.
ಇನ್ನು ಸಂಸ್ಕೃತವನ್ನು ವಿರೋಧಿಸುವವರು ಅದಕ್ಕೆ ಮೃತಭಾಷೆಯ ಪಟ್ಟಕಟ್ಟಿ, ಪೊಟ್ಟಣ ಕಟ್ಟಿ ತೊಟ್ಟಿಗೆ ಎಸೆಯಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿ ವಾದವನ್ನು ಪೋಣಿಸುವವರು ನೆಹರು ಅವರನ್ನು ಓದಬೇಕು. ನೆಹರು ಹೇಳುತ್ತಾರೆ- ‘‘ಜನಸಾಮಾನ್ಯರ ಬಳಕೆಯ ಭಾಷೆಯಾಗಿ ನಿಂತೊಡನೆ ಸಂಸ್ಕೃತವನ್ನು ಮೃತಭಾಷೆ ಎನ್ನಬಾರದು. ಕಾಳಿದಾಸನ ಕಾಲದಲ್ಲೂ ಸಂಸ್ಕೃತ ವಿದ್ವಜ್ಜನರ ಭಾಷೆಯಾಗಿತ್ತೆ ವಿನಹ, ಜನಸಾಮಾನ್ಯರ ಭಾಷೆಯಾಗಿರಲಿಲ್ಲ.’’
ಭಾಷೆಯನ್ನು ವ್ಯಾಮೋಹದಿಂದಲೂ ಅಲ್ಲದೆ, ದ್ವೇಷಭಾವದಿಂದಲೂ ಅಲ್ಲದೆ, ನಮ್ಮ ಭಾವಾಭಿವ್ಯಕ್ತಿ, ಸಂಸ್ಕೃತಿಯ ಬೆಳವಣಿಗೆಯ ಸಾಧನವಾಗಿ ನೋಡುವ ಮನೋಭಾವ ಮೂಡಬೇಕಿದೆ. ಕನ್ನಡದ ಜತೆಗೆ, ಸಂಸ್ಕೃತ, ಇಂಗ್ಲಿಷ್ ಸಹಿತ ಎಲ್ಲ ಭಾಷೆಗಳ ವಾಙ್ಮಯವನ್ನು ಅರಿಯೋಣ