ಮತ್ತೆ ವಿಸ್ತರಣಾವಾದದ ಸುಳಿಯಲ್ಲಿ ವಿಶ್ವ ಸಮುದಾಯ

ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಂಡಾಗ ಉಂಟಾಗುವ ಅನರ್ಥವಿದು

ನ್ಯಾಟೊ ಎಂದೇ ಪ್ರಸಿದ್ಧಿಯಾಗಿರುವ ನಾರ್ಥ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಸೇಷನ್‌ನ ಧ್ಯೇಯೋದ್ದೇಶವೇನೋ ಮಹತ್ತರವಾಗಿದೆ. ಅದು ಸಾರುತ್ತದೆ- ‘‘ಪ್ರಜಾತಾಂತ್ರಿಕ ಮೌಲ್ಯಗಳನ್ನು ಪ್ರೋತ್ಸಾಹಿಸುತ್ತಾ, ರಾಷ್ಟ್ರ-ರಾಷ್ಟ್ರಗಳ ನಡುವಿನ ಸಮಸ್ಯೆಗಳನ್ನು ಸರಿಪಡಿಸಿ, ಪರಸ್ಪರ ನಂಬಿಕೆ ಹೆಚ್ಚಿಸುವುದು ಹಾಗೂ ದೀರ್ಘಾವಧಿಯಲ್ಲಿ ಸಂಘರ್ಷಗಳನ್ನು ತಡೆಯುವುದು ನ್ಯಾಟೋದ ಉದ್ದೇಶ. ಜತೆಗೆ, ರಕ್ಷ ಣೆ ಮತ್ತು ಭದ್ರತೆ ವಿಷಯದಲ್ಲಿ ಪರಸ್ಪರ ಸಂಪರ್ಕ ಹಾಗೂ ಸಹಕಾರ ಮನೋಭಾವದಲ್ಲಿ ಹೆಗಲಿಗೆ ಹೆಗಲು ನೀಡುತ್ತಾ, ಸದಸ್ಯ ರಾಷ್ಟ್ರಗಳನ್ನು ಸಬಲೀಕರಣಗೊಳಿಸುವುದು ಪರಮ ಧ್ಯೇಯವಾಗಿದೆ.’’
ರಷ್ಯಾ-ಉಕ್ರೇನ್‌ ಸಮರ ಸಂದರ್ಭದಲ್ಲಿ ಮತ್ತೊಮ್ಮೆ ಜಗತ್ತಿನಾದ್ಯಂತ ಖ್ಯಾತಿ-ಕುಖ್ಯಾತಿಗೆ ಪಾತ್ರವಾಗಿರುವ ನ್ಯಾಟೊದ ರಾಜಕೀಯ ಹಾಗೂ ಮಿಲಿಟರಿ ಧ್ಯೇಯೋದ್ದೇಶಗಳೇನೋ ಗೋಡೆನುಡಿಯಷ್ಟೇ ಸ್ಪಷ್ಟವಾಗಿವೆ ಮತ್ತು ಎಲ್ಲವೂ ಸರಿಯಾಗಿಯೇ ಇದೆಯಲ್ಲಾ ಎಂಬ ಭಾವವನ್ನೂ ಬಿತ್ತುವಂತಿವೆ. ಆದರೆ, ನಿಜಕ್ಕೂ ನ್ಯಾಟೊ ನುಡಿಗಳು ಸಾಕಾರಗೊಂಡಿವೆಯೇ? ಅದೇ ರೀತಿ ನಡೆಯುತ್ತಿದೆಯೇ? ಎಂದರೆ ಅನೇಕ ಪ್ರಶ್ನೆಗಳೇಳುತ್ತವೆ.
ಮುಖ್ಯವಾಗಿ ನ್ಯಾಟೊ ಆರಂಭವಾಗಿದ್ದೇ, ಜಗತ್ತಿನಾದ್ಯಂತ ಹಬ್ಬುತ್ತಿದ್ದ ಕಮ್ಯುನಿಸಂ ವಿಸ್ತರಣೆಯನ್ನು ತಡೆಯಲು. 1939ರಿಂದ 1945ರವರೆಗೆ ನಡೆದ ಎರಡನೇ ವಿಶ್ವಯುದ್ಧದಲ್ಲಿ ಐರೋಪ್ಯ ದೇಶಗಳು ತಲ್ಲಣಿಸಿದವು. ಅಂದಾಜು 3.65 ಕೋಟಿ ಯುರೋಪಿಯನ್ನರು ಮೃತಪಟ್ಟರು, ಈ ದಾರುಣ ಸ್ಥಿತಿಯಿಂದ ಮತ್ತೆ ಸಹಜತೆಯತ್ತ ಮುಖ ಮಾಡುವುದು ಅಸಾಧ್ಯ ಎಂದು ಆ ದೇಶಗಳು ಕಂಗಾಲಾಗಿದ್ದವು. 1.9 ಕೋಟಿ ಸಮರ ಸಂತ್ರಸ್ತ ನಾಗರಿಕರು ನಿರಾಶ್ರಿತರ ಶಿಬಿರದಲ್ಲಿದ್ದರು. ಇದೇ ವೇಳೆ ಸೋವಿಯೆತ್‌ ರಷ್ಯಾದ ಕುಮ್ಮಕ್ಕು ಪಡೆದಿದ್ದ ಕಮ್ಯುನಿಸ್ಟರು, ಐರೋಪ್ಯ ದೇಶಗಳಲ್ಲಿ ಪ್ರಜಾಪ್ರಭುತ್ವ ಸರಕಾರಗಳನ್ನೇ ಕೆಡವಲು ಮುಂದಾದರು. ಇದರ ಮೊದಲ ಹೆಜ್ಜೆಯಾಗಿ 1948ರಲ್ಲಿ ಝೆಕೊಸ್ಲೊವಾಕಿಯಾದ ಕಮ್ಯುನಿಸ್ಟ್‌ ಪಕ್ಷ ಅಲ್ಲಿನ ಚುನಾಯಿತ ಸರಕಾರವನ್ನು ಕಿತ್ತೊಗೆಯಿತು. ಇದು ಹೀಗೆಯೇ ಮುಂದುವರಿದರೆ, ರಾಷ್ಟ್ರಜೀವನ ನಡೆಸುವುದು ಅಸಾಧ್ಯ ಎಂದು ಐರೋಪ್ಯ ದೇಶಗಳಿಗೆ ಮನವರಿಕೆಯಾಯಿತು. ಅದಕ್ಕಾಗಿ ಐರೋಪ್ಯ ಒಕ್ಕೂಟವನ್ನು ಮೊದಲಿಗೆ ರಚಿಸಿಕೊಳ್ಳಲಾಯಿತು. ಪರಸ್ಪರ ಸಹಕಾರದ ಜತೆಗೆ, ಮಿಲಿಟರಿ ಶಕ್ತಿಯಿದ್ದರೆ ರಾಜಕೀಯ ಸ್ಥಿರತೆ ಲಭಿಸುತ್ತದೆ. ರಾಜಕೀಯ ಸ್ಥಿರತೆಯಿಂದ ರಾಷ್ಟ್ರದ ಅಭಿವೃದ್ಧಿಯಾಗುತ್ತದೆ ಎಂದು ಕೆಲವರು ಪ್ರತಿಪಾದಿಸಿದರು. ಆಗ, ಪರಸ್ಪರ ಮಿಲಿಟರಿ ಶಕ್ತಿ ಸೇರಿದಂತೆ ಎಲ್ಲ ರೀತಿಯ ಸಹಕಾರ-ಸಂಬಂಧದ ಸರಳ ಸೂತ್ರದ ಆಧಾರದಲ್ಲಿ ನ್ಯಾಟೋ ರಚನೆಯಾಯಿತು. ಐರೋಪ್ಯ ಒಕ್ಕೂಟದ ದೇಶಗಳ ಜತೆಗೆ ಪೋರ್ಚುಗಲ್‌, ಇಟಲಿ, ನಾರ್ವೆ, ಡೆನ್ಮಾರ್ಕ್‌, ಐಸ್‌ಲ್ಯಾಂಡ್‌ ಹಾಗೂ ಅಮೆರಿಕ ಮತ್ತು ಕೆನಡಾಗಳು ಈ ಒಕ್ಕೂಟ ಸೇರಿಕೊಂಡವು. ಹೀಗೆ,1949ರಲ್ಲಿ ನ್ಯಾಟೊ ಉದಯಿಸಿತು. ಅಂದರೆ, ಕಮ್ಯುನಿಸ್ಟ್‌ ವಿಸ್ತರಣಾವಾದವನ್ನು ತಡೆಯುವ ಸಲುವಾಗಿ, ಅನೇಕ ರಾಷ್ಟ್ರಗಳು ಒಗ್ಗೂಡಿ ರಚಿಸಿಕೊಂಡ ಅಂತಾರಾಷ್ಟ್ರೀಯ ಮಿಲಿಟರಿ ಸಂಘಟನೆಯೇ ನ್ಯಾಟೊ!
ಯಾವ ವಿಸ್ತರಣಾವಾದವನ್ನು ತಡೆಯಲು ಜನಿಸಿತೋ, ಅದೇ ವಿಸ್ತರಣಾವಾದದ ಕಾಯಿಲೆ ಈಗ ನ್ಯಾಟೊಗೆ ತಗಲಿದೆ.
ಅಸಲಿಗೆ ಅಮೆರಿಕದ ವಿಸ್ತರಣಾವಾದದ ಗುರಿಯೇ ತನ್ನ ವ್ಯಾಪ್ತಿಯನ್ನು ಮೀರಿ ಯುರೋಪ್‌ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು. ಇದರಿಂದ ಪ್ರೇರೇಪಣೆ ಪಡೆದಿರುವ ನ್ಯಾಟೊ ತನ್ನ ಧ್ಯೇಯೋದ್ದೇಶಗಳಲ್ಲೇ ವಿಸ್ತರಣಾವಾದವನ್ನು ಸೇರಿಸಿಕೊಂಡಿದೆ. ನ್ಯಾಟೊ ಒಪ್ಪಂದವನ್ನು ಎಲ್ಲೆಡೆ ಹರಡಲು ಒಪ್ಪುವ ಯಾವುದೇ ಯುರೋಪಿಯನ್‌ ದೇಶಕ್ಕೆ ಮುಕ್ತ ಆಹ್ವಾನವಿದೆ ಎಂದು ತಿಳಿಸಿದೆ. ಇದೇ ಉದ್ದೇಶದ ಫಲವಾಗಿ, 1949ರಲ್ಲಿ ನ್ಯಾಟೊ ರಚನೆಯಾದಾಗ 12 ಇದ್ದ ಸದಸ್ಯ ರಾಷ್ಟ್ರಗಳ ಸಂಖ್ಯೆ ಇದೀಗ 30ಕ್ಕೆ ಏರಿದೆ. 2020ರಲ್ಲಷ್ಟೆ ಉತ್ತರ ಮರ್ಸೆಡೋನಿಯಾವನ್ನು ಸೇರಿಸಿಕೊಳ್ಳಲಾಗಿದೆ. ಈ ವಿಸ್ತರಣಾವಾದದ ಮುಂದುವರಿದ ಭಾಗವಾಗಿಯೇ ಉಕ್ರೇನನ್ನು ತನ್ನ ಜತೆಗೆ ಸೇರಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನ ಇದೀಗ ರಷ್ಯಾ ನಿದ್ದೆಗೆಡಿಸಿದೆ. ಅದರ ಫಲವೇ ಈಗ ನಡೆಯುತ್ತಿರುವ ಯುದ್ಧ.
ನ್ಯಾಟೊದ ವಿಸ್ತರಣಾವಾದ ಮಾತ್ರವೇ ಯುದ್ಧಕ್ಕೆ ಕಾರಣವೇ ಎಂದರೆ, ಅದೂ ಪೂರ್ಣ ಸತ್ಯ ಅಲ್ಲ. ಇಲ್ಲಿ ರಷ್ಯಾದ ವಿಸ್ತರಣಾವಾದ ಎದುರಾಗುತ್ತದೆ. ಕಳೆದ ಒಂದೆರಡು ದಶಕದಿಂದೀಚೆಗೆ ರಷ್ಯಾದ ವಿದೇಶಾಂಗ ನೀತಿ ಸಾಕಷ್ಟು ಆಕ್ರಮಣಕಾರಿಯಾಗುತ್ತಲೇ ಇದೆ. ವಿದೇಶಾಂಗ ನೀತಿ, ಸಂಬಂಧಗಳು ಹಾಗೂ ಯೋಜನೆಗಳ ಮೂಲಕ ಆಫ್ರಿಕಾ, ಲ್ಯಾಟಿನ್‌ ಅಮೆರಿಕ, ಮಧ್ಯಪ್ರಾಚ್ಯ ಸೇರಿ ವಿಶ್ವದ ನಾನಾ ಭಾಗಗಳಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ರಷ್ಯಾ ನಡೆಸುತ್ತಿರುವ ಪ್ರಯತ್ನವನ್ನು ವಿಶ್ವ ಗಮನಿಸುತ್ತಿದೆ. ಸೋವಿಯೆತ್‌ ಯುಗದಂತೆ ಬೃಹತ್‌ ಸಾಮ್ರಾಜ್ಯ ಕಟ್ಟಿ, ರಾಜ್ಯಭಾರ ಮಾಡಬೇಕು ಎಂಬ ಮಹದಾಸೆಯನ್ನು ರಷ್ಯಾ ಹೊಂದಿದೆ. ಈ ವಿಸ್ತರಣಾವಾದಕ್ಕೆ ಅಮೆರಿಕ ನೇತೃತ್ವದ ನ್ಯಾಟೊ ಅಡ್ಡಿಯಾಗಿದೆ.
ತನ್ನ ಜತೆಗೆ ಗಡಿಯನ್ನು ಹಂಚಿಕೊಂಡಿರುವ ಉಕ್ರೇನ್‌ನಲ್ಲಿ ನ್ಯಾಟೊ ಪಡೆಗಳು ಬಂದು ಕುಳಿತ ತಕ್ಷ ಣ ರಷ್ಯಾ ಮೇಲೆ ದಾಳಿಯಾಗುತ್ತದೆ ಎಂಬ ವಿಶ್ಲೇಷಣೆ ತುಸು ದುಬಾರಿಯಾದುದು. ರಷ್ಯಾದಂತಹ ಪರಮಾಣು ಅಸ್ತ್ರ ಹೊಂದಿದ ದೇಶದ ಮೇಲೆ ದಾಳಿ ಮಾಡುವ ಮುನ್ನ ಯಾರೇ ಆದರೂ ಎರಡು ಬಾರಿ ಆಲೋಚಿಸಲೇಬೇಕು. ಆದರೆ ಇದು ನೇರ ಯುದ್ಧದ ವಿಷಯ ಅಲ್ಲ. ರಷ್ಯಾದಂತಹ ರಷ್ಯಾ ಪಕ್ಕದಲ್ಲೆ ಶತ್ರು ಬಂದು ಕುಳಿತಿದ್ದಾನೆ ಎನ್ನುವುದೇ, ರಷ್ಯಾದ ಮೇಲೆ ಸಾರಬಹುದಾದ ಮಾನಸಿಕ ಯುದ್ಧ.
ಶಸ್ತ್ರಾಸ್ತ್ರಗಳು ಬಳಕೆಯಾಗದ ಈ ಯುದ್ಧವನ್ನು ಗೆದ್ದರೆ, ಶತ್ರುವನ್ನು ಅರ್ಧ ಸೋಲಿಸಿದಂತೆ ಎಂಬುದು ರಣೋತ್ಸಾಹಿಗಳ ಲೆಕ್ಕಾಚಾರ. ಹಾಗೆ ನೋಡಿದರೆ, ವಿಶ್ವದಲ್ಲಿ ನಾಯಕತ್ವ ಎನ್ನುವುದೇ ಒಂದು ಮೈಂಡ್‌ ಗೇಮ್‌. ನಿಜವಾಗಿ ನಿಮ್ಮ ಬಳಿ ಎಷ್ಟು ಸೇನೆ ಇದೆ, ಎಷ್ಟು ಅಣ್ವಸ್ತ್ರ ಇದೆ ಎನ್ನುವುದಕ್ಕಿಂತಲೂ ನೀವು ಮಾನಸಿಕ ಯುದ್ಧದಲ್ಲಿ ಯಾವ ರೀತಿ ಮೇಲುಗೈ ಸಾಧಿಸುತ್ತೀರ ಎನ್ನುವುದರ ಆಧಾರದ ಮೇಲೆ ನಾಯಕತ್ವ ನಿರ್ಧಾರವಾಗುತ್ತದೆ. ವ್ಲಾಡಿಮೀರ್‌ ಪುಟಿನ್‌ನಂತಹ ಅನುಭವಿ ನಾಯಕರು ಇಂತಹ ಮಾನಸಿಕ ಸೋಲನ್ನು ಎಂದಿಗೂ ನಿರೀಕ್ಷಿಸುವುದಿಲ್ಲ. ತನ್ನ ವಿಸ್ತರಣಾವಾದಕ್ಕೆ ಅಡ್ಡಿಯಾಗುವ ಈ ತೊಡಕಿನಿಂದ ಬಿಡಿಸಿಕೊಳ್ಳಲು ಅವರಿಗಿದ್ದ ದಾರಿಯೆಂದರೆ ಉಕ್ರೇನ್‌ ಮೇಲಿನ ದಾಳಿ. ಹಾಗಾಗಿ ಯುದ್ಧ ಶುರುವಾಗಿದೆ.
ರಷ್ಯಾ ಮತ್ತು ನ್ಯಾಟೋದ ಬೆನ್ನ ಹಿಂದಿರುವ ಅಮೆರಿಕಾಗೆ ತಗಲಿರುವ ವಿಸ್ತರಣಾವಾದದ ಕಾಯಿಲೆ ನಮ್ಮ ನೆರೆಯ ಚೀನಾಗೂ ತಗಲಿದೆ. ಹಾಗೆ ಸುಮ್ಮನೇ ಚೀನಾದ ಚಲನ-ವಲನ ಗಮನಿಸಿ. ಅತ್ತ ಯುದ್ಧ ನಡೆಯುತ್ತಿರುವ ಹೊತ್ತಲ್ಲೇ ಇತ್ತ ಚೀನಾ ಕೂಡ, ಏಷ್ಯಾದಲ್ಲಿ ತನ್ನ ವಿಸ್ತರಣಾವಾದಕ್ಕೆ ಅನುಕೂಲವಾಗುವಂತಹ ಕೃತ್ಯದಲ್ಲಿ ತೊಡಗಿದೆ. ತನ್ನ ಸುತ್ತಮುತ್ತಲಿದ್ದ ಸಣ್ಣಪುಟ್ಟ ದೇಶಗಳ ಸ್ವಾತಂತ್ರ್ಯವನ್ನು ಕಸಿದು ಅಡಿಯಾಳಾಗಿಸಿಕೊಂಡಿದೆ. ಒಡಲಲ್ಲೇ ಇರುವ ತೈವಾನ್‌, ನೆರೆಯ ಜಪಾನ್‌ನೊಂದಿಗೆ ನಿರಂತರ ಸಂಘರ್ಷ. ಏಷ್ಯಾದಲ್ಲಿ ಭಾರತದ ಶಕ್ತಿಗುಂದಿಸಲು, ಭಾರತದ ಸುತ್ತ ಇರುವ ಶ್ರೀಲಂಕಾ, ಪಾಕಿಸ್ತಾನಗಳನ್ನು ಎತ್ತಿಕಟ್ಟಲು ಪ್ರಯತ್ನ ನಡೆಸಿದೆ. ಬಾಂಗ್ಲಾದೇಶ ಸೇರಿ ಅನೇಕ ದೇಶಗಳಿಗೆ ಅವುಗಳ ಸಾಮರ್ಥ್ಯ‌ಕ್ಕಿಂತ ಹೆಚ್ಚಿನ ಸಾಲವನ್ನು ನೀಡಿ, ಕೆಲಸಕ್ಕೆ ಬಾರದ ನಿರ್ಮಾಣ ಕಾಮಗಾರಿಗಳನ್ನು ನಡೆಸಿದೆ. ಹಡಗೇ ಬಾರದ ಬಂದರುಗಳು, ವಿಮಾನವನ್ನೇ ಕಾಣದ ವಿಮಾನ ನಿಲ್ದಾಣಗಳನ್ನು ಚೀನಾದ ಹಣದಲ್ಲಿ ನಿರ್ಮಿಸಿಕೊಂಡ ಈ ದೇಶಗಳು ಅದನ್ನು ತೀರಿಸಲು ಆಗದ ಸಾಲದ ಸುಳಿಯಲ್ಲಿ ಸಿಲುಕಿವೆ. ಇದೇ ಅವಕಾಶವನ್ನು ಬಳಸಿಕೊಂಡು ಈ ಬಂದರು, ವಿಮಾನ ನಿಲ್ದಾಣಗಳಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವ ಉದ್ದೇಶ ಚೀನಾದ್ದು.
ಅಂದಹಾಗೆ, ಉಕ್ರೇನ್‌-ರಷ್ಯಾ ಸಮರದಲ್ಲೂ ಚೀನಾದ ವಿಸ್ತರಣಾವಾದದ ಹಪಾಹಪಿತನ ಎದ್ದು ಕಾಣುತ್ತಿರುವುದನ್ನು ಗಮನಿಸಬಹುದು. ನಾಳೆ ಏನೇ ಬಂದರೂ ನಿನ್ನೊಡನೆ ನಾನಿರುವೆ ಎಂಬ ಸಂದೇಶವನ್ನು ರಷ್ಯಾಗೆ ಚೀನಾ ನೀಡುತ್ತಲೇ ಇದೆ. ಅಬ್ಬಾಬ್ಬ ಅಂದ್ರೆ ಏನಾಗಬಹುದು? ಅಮೆರಿಕ ಸೇರಿ ಅನೇಕ ದೇಶಗಳು ರಷ್ಯಾ ಮೇಲೆ ಈಗಾಗಲೇ ಆರ್ಥಿಕ ದಿಗ್ಬಂಧನ ಹೇರಿವೆ. ಈ ಆರ್ಥಿಕ ದಿಗ್ಬಂಧನಗಳಿಂದ ಸದ್ಯಕ್ಕೆ ರಷ್ಯಾಕ್ಕೆ ಯಾವುದೇ ಸಮಸ್ಯೆ ಇಲ್ಲವಾದರೂ ದೂರಗಾಮಿಯಾಗಿ ಕೆಲವೊಂದು ಆಮದು, ರಫ್ತು ವಿಚಾರದಲ್ಲಿ ಸಮಸ್ಯೆ ಆಗುತ್ತದೆ. ಯಥೇಚ್ಛ ನೈಸರ್ಗಿಕ ಸಂಪನ್ಮೂಲ, ವಿಸ್ತಾರವಾದ ಭೂಮಿ ಹಾಗೂ ವಿಶ್ವದಲ್ಲೆ ಅತಿ ದೊಡ್ಡ ಕಾರ್ಮಿಕ ಸಂಪನ್ಮೂಲವನ್ನು ಹೊಂದಿರುವ ಚೀನಾದ ನೆರವನ್ನು ರಷ್ಯಾ ಪಡೆಯಬೇಕಾಗಬಹುದು. ಅಂಥ ಸಹಾಯ ನೀಡಲು ಚೀನಾ ತುದಿಗಾಲಲ್ಲಿ ನಿಲ್ಲಬಹುದು. ಈಗಾಗಲೆ ವಿಶ್ವದ ನಾಯಕತ್ವಕ್ಕಾಗಿ ಅಮೆರಿಕ ಜತೆಗೆ ಚೀನಾ ಸಂಘರ್ಷ ನಡೆಸುತ್ತಿದೆ. ಇದೀಗ ಅಮೆರಿಕದ ಶತ್ರುವಾಗಿ ರಷ್ಯಾವೂ ತೊಡೆತಟ್ಟಿದೆ. ಅಂದರೆ ಶತ್ರುವಿನ ಶತ್ರುವನ್ನು ಮಿತ್ರನನ್ನಾಗಿ ಮಾಡಿಕೊಂಡು ತನ್ನ ವಿಸ್ತರಣಾವಾದವೆಂಬ ರೋಗಕ್ಕೆ ಬಲ ತುಂಬುವ ಕಾರ್ಯವನ್ನು ಚೀನಾ ಮಾಡಲು ಮುಂದಾಗಿದೆ.
ಒಟ್ಟಿನಲ್ಲಿ ಇಡೀ ವಿಶ್ವವೇ ವಿಸ್ತರಣಾವಾದ ಎಂಬ ರೋಗದಲ್ಲಿ ನರಳುತ್ತಿರುವ ಸಂದರ್ಭ ಇದು. ವಿಸ್ತರಣಾವಾದ ಎಂದ ಕೂಡಲೆ ಯುರೋಪಿಯನ್‌ ದೇಶಗಳಿಗೆ, ಅಮೆರಿಕ ಹಾಗೂ ಚೀನಾಗೆ ಕಾಣ ಸಿಗುವುದೇ ಮಿಲಿಟರಿ ಪ್ರಾಬಲ್ಯ ಹಾಗೂ ರಾಜಕೀಯ ಹಿಡಿತವಷ್ಟೆ.
ದೂರದ ಉಕ್ರೇನ್‌ ನಲ್ಲಿ ನಡೆಯುತ್ತಿರುವ ಈ ಯುದ್ಧದ ಹೊತ್ತಲ್ಲಿ ಭಾರತೀಯರು ನೆನಪು ಮಾಡಿಕೊಳ್ಳಬೇಕಾದ, ಅದರಿಂದ ಕಲಿಯಬೇಕಾದ ಸಂಗತಿಗಳೂ ಸಾಕಷ್ಟಿವೆ. ಭಾರತವೂ ಒಂದು ರೀತಿಯ ವಿಸ್ತರಣಾವಾದವನ್ನು ವೇದ-ಉಪನಿಷತ್ತಿನ ಕಾಲದಿಂದಲೂ ನಡೆಸಿಕೊಂಡು ಬಂದಿದೆ. ಆದರೆ ಅದು ಜ್ಞಾನೋಪಾಸನೆಯ ಸಾಂಸ್ಕೃತಿಕ ವಿಸ್ತರಣಾವಾದವಾಗಿತ್ತೇ ವಿನಹ, ಮಿಲಿಟರಿ ಆಧಾರದ ಮೇಲೆ ವಿಸ್ತರಣೆ ಮೇಲೆ ಎಳ್ಳಷ್ಟು ನಂಬಿಕೆ ಇಟ್ಟಿಲ್ಲ. (ಅಪವಾದ ಎಂಬಂತೆ ಒಂದಿಷ್ಟು ಸಾಮ್ರಾಜ್ಯಶಾಹಿ ರಾಜರು ಇಂಥ ಪ್ರಯತ್ನ ನಡೆಸಿದ್ದಾರೆ).
ಇದಕ್ಕೆ ಅತಿ ದೊಡ್ಡ ನಿದರ್ಶನವಾಗಿ ನಮಗೆಲ್ಲ ಸಾಕ್ಷಾತ್‌ ಶ್ರೀರಾಮಚಂದ್ರನೇ ಮೇಲ್ಪಂಕ್ತಿ. ಲಂಕೆಯನ್ನು ಜಯಿಸಿದ ನಂತರ ಅಲ್ಲಿನ ಸುವರ್ಣ ನಗರ, ಶ್ರೀಮಂತಿಕೆಯನ್ನು ಕಂಡ ಲಕ್ಷ ್ಮಣ, ಮತ್ತೆ ಅಯೋಧ್ಯೆಗೆ ವಾಪಸಾಗುವುದು ಬೇಡ ಎಂದು ಹೇಳುತ್ತಾನೆ. ಅಯೋಧ್ಯೆಗೆ ವಾಪಸಾದರೆ ರಾಜ್ಯ ಸಿಗುತ್ತದೆ ಎಂಬುದು ಖಾತ್ರಿಯಿಲ್ಲ. ಅದರ ಬದಲು ಇಲ್ಲೇ ಇದ್ದುಬಿಡೋಣ ಎಂದು ಅಭಿಪ್ರಾಯಪಡುತ್ತಾನೆ. ಅದಕ್ಕೆ ರಾಮನ ಉತ್ತರವೇ ‘‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ.’’ ಅಂದರೆ ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂದು. ತನ್ನ ಕೈವಶವಾಗಿದ್ದ ಪ್ರದೇಶವನ್ನು ವಿಭೀಷಣನಿಗೇ ಬಿಟ್ಟುಕೊಟ್ಟು ತನ್ನ ರಾಜ್ಯಕ್ಕೆ ವಾಪಸಾಗುತ್ತಾನೆ.
ಭಾರತೀಯ ನೆಲೆಗಟ್ಟಿನಲ್ಲಿ, ದೇಶ ಮೊದಲು, ಧರ್ಮ ನಂತರ ಎಂಬುದೇ ಸರಿಯಾದ ನಿಲುವು. ಸಾಮಾನ್ಯವಾಗಿ ಯಾರನ್ನೇ, ನೀವು ಯಾರು ಎಂದು ಕೇಳಿದರೆ ಮೊದಲು ಹೆಸರು ಹೇಳುತ್ತಾರೆ. ನಂತರ ಕುಲ, ಜಾತಿ, ಧರ್ಮ, ಭಾಷೆ, ಪ್ರಾಂತ್ಯ ಆದ ನಂತರ ದೇಶ ಎನ್ನುತ್ತಾರೆ. ಲೋಕಾರೂಢಿಯಲ್ಲಿ ನೀವು ಯಾರು ಎಂದು ಕೇಳಿದಾಗ ನಮ್ಮ ವೈಯಕ್ತಿಕ ಗುರುತಾದ ಹೆಸರಿನಿಂದ ಆರಂಭಿಸುವುದು ಸರಿ. ಆದರೆ ನಮ್ಮ ಜೀವನದ ಪ್ರತಿ ನಡವಳಿಕೆಯೂ ಈ ಪ್ರಕ್ರಿಯೆಗೆ ಹಿಮ್ಮುಖವಾಗಿರಬೇಕು. ಅಂದರೆ ನಮ್ಮೆಲ್ಲ ಚಟುವಟಿಕೆಗಳು ಮೊದಲು ದೇಶದ ಒಳಿತಿಗಾಗಿರಬೇಕು. ನಂತರದಲ್ಲಿ ಪ್ರಾಂತ್ಯ, ಭಾಷೆ, ಧರ್ಮ, ಜಾತಿ ನಂತರದಲ್ಲಿ ವೈಯಕ್ತಿಕ ಹಿತಾಸಕ್ತಿ ಮೇಲಾಗಬೇಕು. ವ್ಯಕ್ತಿ ಕೇಂದ್ರಿತವಾಗಿ ಆಲೋಚಿಸುವ ಪಾಶ್ಚಾತ್ಯ ಜಗತ್ತಿಗೆ ಇದು ಕಷ್ಟವೆನಿಸಬಹುದು. ಆದರೆ ಭಾರತೀಯರಿಗೆ ಈ ವಿಚಾರ ಹೊಸತೇನಲ್ಲ.
‘‘ತ್ಯಜೇದೇಕಂ ಕುಲಸ್ಯಾರ್ಥೇ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್‌ |
ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್‌ ||’’ ಎಂಬ ಸುಭಾಷಿತ ಈ ಮಾತನ್ನು ಪುಷ್ಟೀಕರಿಸುತ್ತದೆ. ಕುಲದ ಹಿತಕ್ಕಾಗಿ ಒಬ್ಬನನ್ನು ತ್ಯಾಗ ಮಾಡಬೇಕು, ಗ್ರಾಮವೊಂದರ ಹಿತಕ್ಕಾಗಿ ಕುಲವನ್ನು ಬಿಡಬೇಕು, ತನ್ನ ದೇಶದ ಹಿತಕ್ಕಾಗಿ ಗ್ರಾಮವನ್ನು ಬಿಡಬೇಕು, ಆತ್ಮನ ಹಿತಕ್ಕಾಗಿ ಪೃಥ್ವಿಯನ್ನೂ ತ್ಯಾಗ ಮಾಡಬೇಕು.
ಇಂಥಾ ಉನ್ನತ ವಿಚಾರಧಾರೆಯನ್ನು ಹೊಂದಿರುವ ಭಾರತದಲ್ಲಿ ಈಗ ವ್ಯಕ್ತಿ ಕೇಂದ್ರಿತ, ಸ್ವಾರ್ಥ ಆಧಾರಿತ ಆಲೋಚನೆಗಳನ್ನು ನಮ್ಮನ್ನಾಳುವ ಮಂದಿ ಬಿತ್ತಿ ಬೆಳೆಯುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ, ಭಾರತವೂ ಕೆಲವು ದೇಶಗಳ ವಿಸ್ತರಣಾವಾದಿ ದಾಹಕ್ಕೆ ಸಂತ್ರಸ್ತವಾಗಿ ಬಿಡುತ್ತದೆಯೇನೋ ಎಂಬ ಆತಂಕ ಕಾಡುತ್ತದೆ.
ಈಗೇನಾಗುತ್ತಿದೆ ನೋಡಿ. ಸರಕಾರವೊಂದು ಬಜೆಟ್‌ ಮಂಡನೆ ಮಾಡಿದರೆ ಅದರಿಂದ ತನಗೆ ಏನು ಸಿಕ್ಕಿತು, ಎಷ್ಟು ಹಣ ಉಳಿಯಿತು, ಎಂದಷ್ಟೇ ಆಲೋಚಿಸುವ ಹಂತಕ್ಕೆ ನಮ್ಮ ರಾಜಕೀಯ ವ್ಯವಸ್ಥೆ ಜನರ ಮಾನಸಿಕತೆಯನ್ನು ರೂಪುಗೊಳಿಸಿದೆ. ಇದು ಭಾರತೀಯ ಚಿಂತನೆಗೆ ಸಂಪೂರ್ಣ ವಿರುದ್ಧ.
ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರು ಪ್ರತಿಪಾದಿಸಿದ ಏಕಾತ್ಮ ಮಾನವತಾವಾದ ಏನು ಹೇಳುತ್ತದೆ? ‘‘ವ್ಯಕ್ತಿ, ಸಮಾಜ, ಸೃಷ್ಟಿ ಹಾಗೂ ಸಮಷ್ಟಿಗಳಲ್ಲಿ ಪರಸ್ಪರ ಸಂಘರ್ಷವಲ್ಲ, ಸಮನ್ವಯತೆ ಇರಬೇಕು. ಅದೇ ಭಾರತೀಯತೆ,’’ ಎಂಬುದು ಅದರ ಸಾರ.
ಅಂದರೆ, ವ್ಯಕ್ತಿಯ ವಿರುದ್ಧ ಸಮಾಜ, ವ್ಯಕ್ತಿಯ ವಿರುದ್ಧ ಕುಟುಂಬ, ವ್ಯಕ್ತಿ ವಿರುದ್ಧ ಸೃಷ್ಟಿ, ಸಮಾಜದ ವಿರುದ್ಧ ಸೃಷ್ಟಿ ಎಂಬಂತಹ ಪರಸ್ಪರ ಪೈಪೋಟಿಯುಳ್ಳ ವ್ಯವಸ್ಥೆಯನ್ನು ಬದಲಾಯಿಸುವುದೇ ಏಕಾತ್ಮ ಮಾನವತಾವಾದದ ತಿರುಳು. ಇದನ್ನು ಬಹುತೇಕರು ದೀನದಯಾಳರ ಚಿಂತನೆ ಇಲ್ಲವೇ ಜನಸಂಘದ(ಬಿಜೆಪಿಯ ಪೂರ್ವಾಶ್ರಮ) ವೈಚಾರಿಕ ಪ್ರಣಾಳಿಕೆ ಎನ್ನುವುದುಂಟು. ಆದರೆ, ಇದು ಅಪ್ಪಟ ಭಾರತೀಯ ಚಿಂತನೆ. ಭಾರತೀಯ ಸಂಸ್ಕೃತಿಯ ಒಳಗೆ ಅಂತರ್ಗತವಾಗಿರುವ ವಿಚಾರಗಳನ್ನೇ ಆಧರಿಸಿಯೇ ದೀನದಯಾಳರು ಅದಕ್ಕೊಂದು ರೂಪ ಕೊಟ್ಟರು ಅಷ್ಟೆ. ಆ ಭಾರತೀಯ ಚಿಂತನೆಯನ್ನು ಅರಿಯಬೇಕಿದೆ.
ಮೊದಲಿಗೆ ವಿಶ್ವವು ತನ್ನ ವಿಸ್ತರಣಾವಾದದ ಭ್ರಮಾಲೋಕದಿಂದ ಇಳಿಯಬೇಕು. ತಲೆಕೆಳಗಾದ ಅಶ್ವತ್ಥ ವೃಕ್ಷ ವನ್ನು ಅರಿತವನೇ ಜ್ಞಾನಿ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ, ಭ್ರಮೆಯಿಂದ ವಾಸ್ತವತೆಗೆ ವಿಶ್ವ ಚಲಿಸಬೇಕಿದೆ. ರಷ್ಯಾ, ಅಮೆರಿಕ, ಚೀನಾದಂತಹ ಬೃಹತ್‌ ರಾಷ್ಟ್ರಗಳು ತಮ್ಮ ವಿಸ್ತರಣಾವಾದಕ್ಕೆ ಮುಂದಾಗಲು ಇತರೆ ದೇಶಗಳನ್ನು ಬಳಸಿಕೊಳ್ಳುವ ಎಲ್ಲ ಪ್ರಯತ್ನವನ್ನೂ ಮಾಡುತ್ತವೆ. ಇದೀಗ ಉಕ್ರೇನ್‌ ಎಂಬ ಪುಟ್ಟ ದೇಶ ಈ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ. ಅಟಲ್‌ ಬಿಹಾರಿ ವಾಜಪೇಯಿ ಅವರು ಒಂದು ಮಾತು ಹೇಳಿದ್ದರು. ‘‘ನೀವು ನಿಮ್ಮ ಸ್ನೇಹಿತರನ್ನು ಬದಲಾಯಿಸಬಹುದು, ಆದರೆ ನೆರೆಹೊರೆಯವರನ್ನಲ್ಲ !’’ ಎಂಥಾ ಸತ್ಯವಾದ ಮಾತಿದು. ಈ ವಾಸ್ತವವನ್ನು ಮೊದಲಿಗೆ ಉಕ್ರೇನ್‌ನಂತಹ ದೇಶಗಳೂ ಅರಿಯಬೇಕು. ರಷ್ಯಾದಂತಹ ದೊಡ್ಡ ರಾಷ್ಟ್ರದ ಗಡಿಯನ್ನು ಹಂಚಿಕೊಂಡು, ಅಲ್ಲೆಲ್ಲೊ ದೂರದಲ್ಲಿರುವ ಅಮೆರಿಕ ತನ್ನ ನೆರವಿಗೆ ಬರುತ್ತದೆ ಎಂದು ಭಾವಿಸಿ ಎದುರು ಹಾಕಿಕೊಳ್ಳುವುದು ಮೂರ್ಖತನವಲ್ಲದೇ ಮತ್ತೇನೂ ಅಲ್ಲ. ತನ್ನ ದೇಶ ಯಾವ ಮಾರ್ಗದಲ್ಲಿ ಮುನ್ನಡೆಯಬೇಕು ಎಂಬ ಸ್ಪಷ್ಟತೆಯೇ ಇಲ್ಲದ ಆ ದೇಶದ ಜನತೆಯೂ ಇದಕ್ಕೆ ಕಾರಣರು. ಪದೇಪದೆ ಸರಕಾರಗಳನ್ನು ಕಿತ್ತೆಸೆಯುತ್ತ ರಾಜಕೀಯ ಅಸ್ಥಿರತೆಯನ್ನು ಮೈಮೇಲೆ ಎಳೆದುಕೊಳ್ಳುವುದು ಅಲ್ಲಿ ನಡೆಯುತ್ತಿರುವ ಪ್ರಕ್ರಿಯೆ. ಇಷ್ಟು ಕಷ್ಟದ ಸ್ಥಿತಿಯಲ್ಲೂ ಆ ದೇಶದ ಜನಪ್ರತಿನಿಧಿಗಳಲ್ಲಿ, ದೇಶದ ಅಭಿವೃದ್ಧಿ ಕುರಿತು ಕಿಂಚಿತ್ತೂ ಕಾಳಜಿ ಇಲ್ಲ ಎಂಬ ಸುದ್ದಿಗಳು ಬರುತ್ತಿವೆ. ಮಿತಿಮೀರಿದ ಭ್ರಷ್ಟಾಚಾರ, ರಾಜಕೀಯ ಅಸ್ಥಿರತೆಯಿಂದಾಗಿ ತನ್ನದೇ ದೇಶದ ಯುವಸಮುದಾಯವನ್ನು ದಿನೇದಿನೆ ಕಳೆದುಕೊಳ್ಳುತ್ತಿರುವ ಉಕ್ರೇನ್‌ ಈಗ ಸಂಕಷ್ಟ ಅನುಭವಿಸುತ್ತಿದೆ.
ಜನರಲ್ಲಿ ದೇಶಭಕ್ತಿ, ರಾಷ್ಟ್ರೀಯತೆಯ ಪ್ರಜ್ಞೆ ಮೂಡಿಸದೆ ಇದ್ದರೆ ಆಗುವ ಅನಾಹುತಗಳು ಅಷ್ಟಿಷ್ಟಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ಜನರಲ್ಲಿ ಅದೇ ದೇಶ-ಕೋಶದ ಪ್ರಜ್ಞೆ ಮೂಡಿಸಿದರೆ ಏನಾಗಬಹುದು ಎನ್ನುವುದಕ್ಕೆ ಇಸ್ರೇಲ್‌ ಸಾಕ್ಷಿ. ಐತಿಹಾಸಿಕ ಕಾರಣಗಳಿಂದಾಗಿ ಸುತ್ತಮುತ್ತ ಶತ್ರುಗಳನ್ನೇ ಹೊಂದಿದ್ದರೂ, ಅಲ್ಲಿನ ಜನರ ದೇಶಭಕ್ತಿಯ ಕಾರಣದಿಂದ ಇಸ್ರೇಲ್‌ ಇನ್ನೂ ಸದೃಢವಾಗಿ ಉಳಿದುಕೊಂಡಿದೆ. ಸುಮ್ಮನೆ ದೇಶಭಕ್ತಿಯಿದ್ದರಷ್ಟೆ ಸಾಲದು, ಅದರ ಪ್ರಕಟೀಕರಣವೂ ಆಗಬೇಕು ಹಾಗೂ ಸರಿಯಾದ ದಿಕ್ಕಿನಲ್ಲೇ ಇರಬೇಕು. ದೇಶದ ರಕ್ಷ ಣೆ, ಆಹಾರ ಸ್ವಾವಲಂಬನೆಗೆ ತನ್ನದೇನಾದರೂ ಕೊಡುಗೆ ನೀಡಬೇಕು ಎಂದು ಪ್ರತಿ ನಾಗರಿಕನೂ ಆಲೋಚಿಸುವುದರಿಂದಲೇ ಇಸ್ರೇಲ್‌ ಇಂದು ಉತ್ತಮ ಸ್ಥಿತಿಯಲ್ಲಿದೆ.
ಭಾರತದ ಜನರಲ್ಲೂ ದೇಶಭಕ್ತಿಗೆ ಕೊರತೆಯಿಲ್ಲವಾದರೂ, ಅದರ ಪ್ರಕಟೀಕರಣದಲ್ಲಿ ಅನೇಕ ಬಾಧೆಗಳಿವೆ. ವರ್ಷದಲ್ಲಿ ಎರಡು ಮೂರು ಬಾರಿ ಎದುರಾಗುವ ಚುನಾವಣೆಗಳಲ್ಲಿ ಜಯಗಳಿಸಲು ಇಲ್ಲಿನ ಜನಪ್ರತಿನಿಧಿಗಳು ಘೋಷಿಸುವ ಅಗ್ಗದ ಯೋಜನೆಗಳು, ಉಚಿತ ಉಡುಗೊರೆಗಳು ಜನರನ್ನು ಭ್ರಷ್ಟರಾಗಿಸುತ್ತಿವೆ. ಸಂಖ್ಯಾ ಆಟದಲ್ಲಿ ಜಯಗಳಿಸಲು ಮಂಗಗಳ ರೀತಿಯಲ್ಲಿ ನಡೆಸುವ ಪಕ್ಷಾಂತರಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನಂಬಿಕೆ ಕಳೆದುಕೊಂಡರೆ ಆಗುವ ಅಪಾಯ ಅಷ್ಟಿಷ್ಟಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನಂಬಿಕೆ ಕಳೆದುಕೊಳ್ಳಬೇಕು, ಆಗ ತಮ್ಮ ವಿಸ್ತರಣಾವಾದವನ್ನು ಸಾಕಾರಗೊಳಿಸಬಹುದು ಎಂದು ಅನೇಕ ವಿದೇಶಿ ಸಿದ್ಧಾಂತಗಳು ಇಂದಿಗೂ ಹೊಂಚುಹಾಕಿ ಕುಳಿತಿವೆ, ನಿರಂತರ ಪ್ರಯತ್ನ ಮುಂದುವರಿಸಿವೆ. ಮುಂದೊಂದು ದಿನ ಭಾರತವೂ ವಿಸ್ತರಣಾವಾದಿಗಳ ಜಾಲಕ್ಕೆ ಬಲಿಯಾಗದಿರಬೇಕೆಂದರೆ ಇಲ್ಲಿನ ಮೂಲ ಸತ್ವವನ್ನು ಅರಿತು ವ್ಯವಸ್ಥೆಯನ್ನು ಮುನ್ನಡೆಸುವ ಹೊಣೆ ನಮ್ಮೆಲ್ಲರ ಮೇಲಿದೆ.

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top