ಬಲವಂತದ ಮತಾಂತರದಿಂದ ಭಾರತದ ಬಹುತ್ವಕ್ಕೆ ಆಪತ್ತು

ಮತಾಂತರ ನಿಷೇಧ ಕಾನೂನನ್ನು ಬಹುತ್ವದ ನೆಲೆಯಲ್ಲಿ ನೋಡುವ ಅಗತ್ಯವಿದೆ

ಪ್ರತಿ ವರ್ಷ ದೇಶಾದ್ಯಂತ ನವರಾತ್ರಿ ಉತ್ಸವವನ್ನು ಎಲ್ಲೆಲ್ಲೂ ಸಂಭ್ರಮದೊಂದಿಗೆ ಆಚರಿಸಲಾಗುತ್ತದೆ. ಆದರೆ, ಎಲ್ಲ ಕಡೆಯೂ ನವರಾತ್ರಿಯ ಸ್ವರೂಪ, ರೀತಿ ನೀತಿ, ಆಚರಣಾ ವಿಧಾನ ಒಂದೇ ರೀತಿ ಇರುವುದಿಲ್ಲ. ಕರ್ನಾಟಕದ ಹಳೆ ಮೈಸೂರು ಭಾಗಗಳಲ್ಲಿ ದಸರಾ ಎಂಬ ಹೆಸರಿನಲ್ಲಿ ದೇವಿಯ ಆರಾಧನೆ ನಡೆಯುತ್ತದೆ. ಶರನ್ನವರಾತ್ರಿಯಲ್ಲಿ ಮನೆ ಮನೆಯಲ್ಲಿ ಗೊಂಬೆಗಳನ್ನು ಒಪ್ಪ ಓರಣವಾಗಿ ಜೋಡಿಸಿ ಮೈಸೂರು ಜನ ಖುಷಿ ಪಡುತ್ತಾರೆ. ಕರ್ನಾಟಕದ ಇತರೆ ಭಾಗಗಳಲ್ಲಿ ನವರಾತ್ರಿಯ 9 ದಿನ ದೇವಿ ಪೂಜೆ ಮಾಡಿ ಸಂಜೆ ಹೊತ್ತು ದೇವಿ ಮಹಾತ್ಮೆಯ ಪಠಣ ನಡೆಯುತ್ತದೆ. ಮನೆಗಳಲ್ಲಿ ಮುತ್ತೈದೆಯರಿಗೆ ಅರಿಸಿಣ ಕುಂಕುಮ ನೀಡಿ, ಅವರಿಗೆ ಒಳಿತು ಬಯಸುತ್ತಾರೆ. ಕೇರಳದಲ್ಲಿ ಮೂರು ದಿನ ನಡೆಯುವ ಆಚರಣೆಯಲ್ಲಿ ಪ್ರಮುಖವಾಗಿ ತಾಯಿ ಸರಸ್ವತಿಯನ್ನು ಹೊತ್ತು ಮೆರೆಯುತ್ತಾರೆ. ಕನ್ನಡಿಗರ ಶಕ್ತಿ ದೇವತೆ, ಅವರ ಪಾಲಿಗೆ ಪ್ರಮುಖವಾಗಿ ವಿದ್ಯಾದೇವತೆಯಾಗುತ್ತಾಳೆ. ಆಂಧ್ರಪ್ರದೇಶದಲ್ಲಿ ಬತುಕಮ್ಮ ಪಾಂಡುಗ ಎಂದು ಕರೆಯುವ ಉತ್ಸವದಲ್ಲಿ ಮನೆಮನೆಯಲ್ಲೂ ದುರ್ಗೆಯನ್ನು ಹೂವಿನಿಂದ ತಯಾರಿಸುತ್ತಾರೆ. ಬತುಕಮ್ಮನ ಹಾಡು, ನೃತ್ಯ ಮಾಡಿ ಸಂಭ್ರಮಿಸುತ್ತ, ಕೊನೆಗೆ ಬತುಕಮ್ಮನನ್ನು ನೀರಿನಲ್ಲಿ ವಿಸರ್ಜಿಸುತ್ತಾರೆ. ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರದಲ್ಲಿ ದುರ್ಗೆಯ ಕೇಂದ್ರಿತವಾಗಿ ವೈಭವದಿಂದ ಹಬ್ಬ ನಡೆಯುತ್ತದೆ. ಪೂರ್ವ ಭಾರತದ ಈ ರಾಜ್ಯಗಳಲ್ಲಿ ಮನೆ ಮನೆಗಳಲ್ಲಿ ಮಾತ್ರವಲ್ಲ, ದೊಡ್ಡ ಪ್ರಮಾಣದ ಸಾರ್ವಜನಿಕ ಉತ್ಸವಗಳು ನಡೆಯುತ್ತವೆ. ಹೀಗೆ ಹೇಳುತ್ತ ಹೋದರೆ ಪ್ರತಿ ರಾಜ್ಯವಷ್ಟೆ ಅಲ್ಲ, ದೇಶದ ಪ್ರತಿ ಜಿಲ್ಲೆಯಲ್ಲೂ ಸಣ್ಣ ಪ್ರಮಾಣದ ಬದಲಾವಣೆಯೊಂದಿಗೆ ನವರಾತ್ರಿ ಆಚರಿಸಲಾಗುತ್ತದೆ. ನವರಾತ್ರಿಗೆ ಇಲ್ಲಿ ನೂರೆಂಟು ಬಣ್ಣ-ಬಿನ್ನಾಣವಿದೆ.
ಇದು ಒಂದು ಉದಾಹರಣೆಯಷ್ಟೆ. ಭಾರತದಲ್ಲಿ ಪ್ರತಿ ಹಬ್ಬವನ್ನೂ ವೈವಿಧ್ಯಮಯವಾಗಿ ಆಚರಿಸಲಾಗುತ್ತದೆ. ಅದು ಜಾತಿಯಿಂದ ಜಾತಿಗೆ, ಸಮುದಾಯದಿಂದ ಸಮುದಾಯಕ್ಕೆ, ಭಾಷಿಕರಿಂದ ಭಾಷಿಕರಿಗೆ ಭಿನ್ನ ಸ್ವರೂಪ ಪಡೆಯುತ್ತದೆ. ಜಿಲ್ಲೆ, ರಾಜ್ಯ, ಪ್ರದೇಶಗಳು ಬದಲಾದಂತೆಲ್ಲ ಹಬ್ಬದ ರೀತಿ ನೀತಿಯೇ ಬದಲಾಗುತ್ತಾ ಹೋಗುತ್ತದೆ. ಇದು ಭಾರತದ ವೈವಿಧ್ಯತೆ,ವಿಶೇಷತೆ, ಸೌಂದರ್ಯ, ಸಾಮರ್ಥ್ಯ‌, ಸೊಬಗು, ಶಕ್ತಿ,ಯುಕ್ತಿ- ಎಲ್ಲವೂ !
ವಿದೇಶದಿಂದ ಯಾರಾದರೂ ಭಾರತಕ್ಕೆ ಬಂದರೆ ಅವರಿಗೆ ಆಶ್ಚರ್ಯವಾಗುತ್ತದೆ. ಈ ದೇಶದಲ್ಲಿ ಪ್ರತಿ 10-20 ಕಿಲೋ ಮೀಟರ್‌ಗೂ ಆಡುವ ಭಾಷೆ, ತಿನ್ನುವ ಅನ್ನ, ಉಡುವ ಬಟ್ಟೆ, ಪೂಜಿಸುವ ದೇವರು, ಆಚರಿಸುವ ಸಂಸ್ಕೃತಿ- ಎಲ್ಲವೂ ಬದಲಾಗುತ್ತದೆ. ಇಷ್ಟೊಂದು ಬಹುತ್ವದ ದೇಶವನ್ನು ಎಲ್ಲಿಯೂ ನೋಡಲು ಸಾಧ್ಯವೇ ಇಲ್ಲ ಎಂದು ಕಣ್ಣರಳಿಸಿ ನೋಡುತ್ತಾರೆ.
ಈ ದೇಶದಲ್ಲಿ ಯಾರಾದರೂ ನಿಧನವಾದರೆ ಕೆಲವರು ದಹನ ಮಾಡುತ್ತಾರೆ, ಇನ್ನು ಕೆಲವರು ಹೂಳುತ್ತಾರೆ. ಈ ಸಂಸ್ಕಾರಕ್ಕೂ ಮುನ್ನ ಆಚರಣೆಗಳಲ್ಲೋ ಹೇಳಲಾಗದಷ್ಟು ವೈವಿಧ್ಯತೆಯಿದೆ. ವೈವಿಧ್ಯತೆಯನ್ನು ಸಂಕೀರ್ಣತೆ, ಸಮಸ್ಯೆ ಎಂದು ಭಾವಿಸುವವರೇನಾದರೂ ಭಾರತಕ್ಕೆ ಬಂದರೆ, ಅಂಥವರಿಗೆ ಮಾತ್ರ ಈ ವರ್ಣರಂಜಿತ ಭಾರತ ಅರ್ಥವಾಗುವುದಿಲ್ಲ.
ಇಲ್ಲಿ ಇದಮಿತ್ಥಂ ಎಂದು ಹೇಳುವ ಏಕ ಪದ್ಧತಿ ಇಲ್ಲವೇ ಇಲ್ಲ. ಪೂಜೆಯನ್ನು ಹೀಗೆಯೇ ಮಾಡಬೇಕು, ಮದುವೆಯಲ್ಲಿ ಇದೇ ರೀತಿ ಸಂಪ್ರದಾಯ ಆಚರಿಸಬೇಕು ಎಂಬುದಿಲ್ಲ. ಒಂದೇ ದೇವರನ್ನು ಒಪ್ಪಬೇಕೆಂದೂ ಇಲ್ಲ. ಏಕೋದೇವೋಪಾಸನೆ ಇಲ್ಲಿಲ್ಲ. ಎಣಿಸಿದರೆ, ಕೋಟಿಗೂ ಅಧಿಕ ದೇವರು ಇಲ್ಲಿ ಸಿಗಬಹುದು. ಹಾಗೆ ನೋಡಿದರೆ ಈ ದೇವರನ್ನು ಒಪ್ಪಬೇಕೆಂಬುದು ಈ ನೆಲದಲ್ಲಿ ಕಡ್ಡಾಯವಲ್ಲ. ದೇವರನ್ನು ಒಪ್ಪದೆಯೂ ಭಾರತದಲ್ಲಿ ಋುಷಿ ಸ್ಥಾನವನ್ನು ಪಡೆಯಬಹುದು. ಚಾರ್ವಾಕರೇ ಇದಕ್ಕೆ ಬಹುದೊಡ್ಡ ಸಾಕ್ಷಿ. ಈ ವೈವಿಧ್ಯತೆಯ ಸೊಬಗು ಎಷ್ಟರ ಮಟ್ಟಿಗೆ ಎಂದರೆ, ಒಂದೇ ತಂದೆ ತಾಯಿಗೆ ಜನಿಸಿದ ಇಬ್ಬರು ಮಕ್ಕಳಲ್ಲಿ ಒಬ್ಬರಿಗೆ ಆಂಜನೇಯ ಇಷ್ಟವಾದರೆ ಮತ್ತೊಬ್ಬರಿಗೆ ಶಿವನ ಮೇಲೆ ಭಕ್ತಿ. ಮನೆಯವರೆಲ್ಲ ಒಟ್ಟಿಗೆ ಆಚರಿಸುವ ಹಬ್ಬಗಳನ್ನು ಹೊರತುಪಡಿಸಿದರೆ, ಇಬ್ಬರ ದೈವ ನಂಬಿಕೆಯೇ ಭಿನ್ನವಾಗಿರಬಹುದು. ಇಂಥಾ ಭಿನ್ನತೆಯನ್ನು ಇಟ್ಟುಕೊಂಡೇ, ಮನೆಯವರೆಲ್ಲರೂ ಬೆಸೆದುಕೊಂಡಿರುತ್ತಾರೆ. ಅಂತೆಯೇ ದೇಶವಾಸಿಗಳು, ಎಲ್ಲ ಭಿನ್ನತೆಯೊಂದಿಗೆ ಒಂದಾಗಿ ಉಳಿದಿದ್ದಾರೆ.
ಹಾಗಾದರೆ, ಭಾರತದ ಈ ವೈವಿಧ್ಯತೆಗೆ ಕಾರಣ ಏನು ಎಂದು ಆಲೋಚಿಸಿದರೆ ಸರಳ ಉತ್ತರ ಕಂಡುಕೊಳ್ಳುವುದು ಬಹಳ ಕಷ್ಟ. ಆದರೆ ಒಂದಂತೂ ಹೇಳಬಹುದು, ಭಾರತೀಯ ಸಮಾಜ, ಇದು ಒಪ್ಪಿಕೊಂಡು ಬಂದಿರುವ ನಾಗರಿಕತೆ, ಕಟ್ಟುಪಾಡಿನಲ್ಲಿಯೇ ಸ್ವಾತಂತ್ರ್ಯವಿದೆ. ಸ್ವತಂತ್ರ ಭಾರತದ ಮಹಾನ್‌ ಗ್ರಂಥ ಸಂವಿಧಾನವಂತೂ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸರ್ವರೀತಿಯ ಸ್ವಾತಂತ್ರ್ಯವನ್ನು ಭಾರತೀಯರಿಗೆ ನೀಡಿದೆ. ಸಂವಿಧಾನದ 25ನೇ ವಿಧಿಯ ಪ್ರಕಾರ, ದೇಶದ ಪ್ರತಿಯೊಬ್ಬ ಪ್ರಜೆಗೂ ತನ್ನ ಧಾರ್ಮಿಕ ನಂಬಿಕೆಯನ್ನು ಆಚರಿಸುವ, ಸಾರುವ ಹಾಗೂ ಪ್ರಚಾರ ಮಾಡುವ ಹಕ್ಕು ಇದೆ.
ಹೀಗೆ ನಮ್ಮ ದೇಶ ಬಹುತ್ವವನ್ನು ಎತ್ತಿಹಿಡಿಯುತ್ತಾ, ಸ್ವಾತಂತ್ರ್ಯವನ್ನು ಗೌರವಿಸುತ್ತಾ ಇರುವ ಹೊತ್ತಲ್ಲಿಯೇ, ಕೆಲವರು, ಕೆಲವು ಮತ ಧರ್ಮಗಳು, ತಮ್ಮ ತಮ್ಮ ಅಸ್ಮಿತೆಗಾಗಿ, ಶ್ರೇಷ್ಠತೆಗಾಗಿ ಪೈಪೋಟಿ ನಡೆಸುತ್ತಿರುವುದನ್ನು ತಳ್ಳಿಹಾಕುವಂತಿಲ್ಲ. ಇಂಥ ಪೈಪೋಟಿ ಕೆಲವೊಮ್ಮೆ ಪರಸ್ಪರರ ನಂಬಿಕೆಗಳಲ್ಲಿ ಸಂಘರ್ಷ ತಂದಿರುವುದು ಉಂಟು. ‘ಏಕಂ ಸತ್‌ ವಿಪ್ರಾಃ ಬಹುದಾ ವದಂತಿ’ ಎಂಬುದರ (ಸತ್ಯ ಎನ್ನುವುದು ಒಂದೇ ಆದರೂ ತಿಳಿದವರು ಅದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ) ಅರಿವಿದ್ದರೂ, ಶೈವ ವೈಷ್ಣವರಲ್ಲಿ ವಾಗ್ವಾದಗಳು ನಡೆದಿವೆ, ನಡೆಯುತ್ತಲೇ ಇವೆ. ಇಷ್ಟೆಲ್ಲ ಗದ್ದಲ, ಗಲಾಟೆಗಳ ನಡುವಿನಿಂದಲೇ ಹೊಸದೊಂದನ್ನು ಸೃಷ್ಟಿಸುವ ಮೂಲಕ ಮುಂದಿನ ಹಂತಕ್ಕೆ ನಾಗರಿಕತೆ ಬೆಳೆಯುತ್ತದೆ. ಏಕೆಂದರೆ, ಇದು ಬಹುತ್ವದ ಇದು ಭಾರತ.
ಇಂಥಾ ಭಾರತದಲ್ಲಿ ಕೆಲವು ಧರ್ಮೀಯರು ನಡೆಸುತ್ತಿರುವ ಬಲವಂತದ ಹಾಗೂ ಆಮಿಷವೊಡ್ಡಿ ನಡೆಸುತ್ತಿರುವ ಮತಾಂತರ ಒಂದಿಷ್ಟು ಸಮಸ್ಯೆಗಳನ್ನು ತಂದೊಡ್ಡಿರುವುದು ಸುಳ್ಳಲ್ಲ. ನಂಬಿರುವ ದೇವರೇ ಬಲಹೀನ, ನಂಬಿಕೆಯೇ ಟೊಳ್ಳು ಎಂದು ಮುಗ್ಧರನ್ನು ನಂಬಿಸಲು ಆಟ ಕಟ್ಟುತ್ತಿದ್ದಾರೆ.
ದೇವರು ಸುಳ್ಳು ಎಂದು ಸಾಬೀತುಪಡಿಸಲು ಒಬ್ಬ ವಿದೇಶಿಗ, ಭಾರತದ ಕಲ್ಲು ದೇವರ ಮೂರ್ತಿಯೊಂದನ್ನು ನೀರಿಗೆ ಹಾಕಿದನಂತೆ. ಅದು ಮುಳುಗಿತು. ನಂತರ ತನ್ನ ದೇವರನ್ನು ಮರದಲ್ಲಿ ಕೆತ್ತಿ ಅದನ್ನು ನೀರಿಗೆ ಹಾಕಿದ. ಅದು ತೇಲಿತು. ನೋಡು ನಿನ್ನ ದೇವರು ನೀರಿನಲ್ಲಿ ತನ್ನನ್ನು ತಾನು ರಕ್ಷಿಸಲಿಕೊಳ್ಳಲು ಆಗದವನು, ನಿನ್ನನ್ನೇನು ರಕ್ಷ ಣೆ ಮಾಡಬಲ್ಲ? ಎಂದು ಪ್ರಶ್ನಿಸಿದ. ಮುಗ್ಧ ಭಾರತೀಯ ಇದನ್ನು ನಂಬಿಬಿಟ್ಟ. ಇಂತಹದೇ ಮಾರ್ಗಗಳ ಮೂಲಕ, ಪ್ರಕೃತಿ ಆರಾಧನೆ ಮಾಡುತ್ತಿದ್ದ ಈಗಿನ ಈಶಾನ್ಯ ಭಾರತದ ರಾಜ್ಯಗಳಲ್ಲಿ ಅನೇಕ ಜನರನ್ನು ಮತಾಂತರ ಮಾಡಲಾಯಿತು. ಪರಿಣಾಮ, ಈಶಾನ್ಯ ರಾಜ್ಯದ ಬುಡಕಟ್ಟು ಜನರ ಆಚಾರ-ವಿಚಾರ, ಭಾಷೆ-ಉಪ ಭಾಷೆಗಳ ಬೆಡಗಿಗೆ ಆಪತ್ತು ಬಂದಿದೆ.
ತಮ್ಮ ವೈಭವಯುತ ಬುಡಕಟ್ಟು ಸಂಸ್ಕೃತಿ, ನೃತ್ಯ, ಹಾಡು, ಭಾಷೆಯನ್ನು ಬಿಟ್ಟು ಏಕದೇವೋಪಾಸನೆಯತ್ತ ಹೊರಳಿದರು. ಇದರಿಂದ ಏನಾಗಿದೆ? ಈಶಾನ್ಯ ಭಾರತ ಎಂದರೆ, ಇದು ಭಾರತಕ್ಕೆ ಸೇರಿದ್ದಲ್ಲ ಎನ್ನುವ ಮನೋಭಾವ ಅಲ್ಲಿನವರಲ್ಲಿ ಬೇರೂರಿದೆ. ಇದು ದೇಶವಿರೋಧಿ ಚಟುವಟಿಕೆಗಳಿಗೂ ದಾರಿ ಮಾಡಿಕೊಟ್ಟು, ಒಟ್ಟಾರೆ ಅಲ್ಲಿನ ಜನಜೀವನವನ್ನು ನರಕಗೊಳಿಸಿದೆ.
ಹಾಗಾಗಿಯೇ, ಸ್ವಾಮಿ ವಿವೇಕಾನಂದರು ಮತಾಂತರ ಎಂದರೆ ಅದೊಂದು ಕ್ರಿಯೆಯಲ್ಲ, ರಾಷ್ಟ್ರಾಂತರಕ್ಕೆ ಸಮನಾದ ದುಷ್ಕೃತ್ಯ ಎಂದು ಸಾರಿ ಹೇಳಿದ್ದಾರೆ. ಮತಾಂತರ ಸಂದರ್ಭದಲ್ಲಿ ಕೆಲವರು ಇನ್ನೊಂದು ವಾದ ಸರಣಿಯನ್ನು ಮುಂದಿಡುತ್ತಾರೆ. ಭಾರತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಾತಿಗಳಿರುವುದೇ ಮತಾಂತರಕ್ಕೆ ಕಾರಣ ಎನ್ನುತ್ತಾರೆ. ನಿಜ, ಅಸ್ಪೃಶ್ಯತೆಯ ನೋವು, ಜಾತಿ ತಾರತಮ್ಯದ ನೋವು ಇಲ್ಲಿದೆ. ಆದರೆ, ಇದು ಮತಾಂತರಕ್ಕೆ ಸ್ವಲ್ಪಮಟ್ಟಿಗೆ ಕಾರಣವೂ ಇರಬಹುದು. ಆದರೆ, ಮತಾಂತರವಾದ ಬಳಿಕ ಈ ಸಮಸ್ಯೆಗಳು ಬಗೆಹರಿದಿದೆ ಎಂದೇನಿಲ್ಲ. ಶೈಕ್ಷ ಣಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗುವುದೇ ಸಮಸ್ಯೆಯನ್ನು ಮೀರುವ ಪರಿ ಎಂಬುದು ಕೂಡ ಎಲ್ಲರಿಗೂ ಅರ್ಥವಾಗಲಾರಂಭಿಸಿದೆ.
ಹಾಗೆ ನೋಡಿದರೆ, ಜಾತಿಗಳು ಕೂಡ ಈ ದೇಶದ ವೈವಿಧ್ಯತೆಯನ್ನೇ ಪ್ರತಿನಿಧಿಸುತ್ತವೆ.
ಪ್ರತಿ ಭೌಗೋಳಿಕ ಪ್ರದೇಶವೂ ತನ್ನದೇ ವಿಭಿನ್ನತೆಯನ್ನು ಹೊಂದಿರುತ್ತದೆ. ಅಲ್ಲಿಯ ಹವಾಮಾನಕ್ಕೆ ಅನುಗುಣವಾಗಿ ವೇಷಭೂಷ, ಆಹಾರ, ಸಂಸ್ಕೃತಿ ರೂಪುಗೊಂಡಿರುತ್ತದೆ. ಇಲ್ಲಿನ ಪ್ರತಿ ಜಾತಿಯೂ ಒಂದೊಂದು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇಂಥ ಜಾತಿಯನ್ನು ವಿನಾಶಗೊಳಿಸಬೇಕು ಎಂದು ಅನೇಕರು ಹೇಳುತ್ತಾರೆ. ಹಾಗೆ ಮಾಡಿದರೆ, ಭಾರತದ ಬಹುತ್ವವನ್ನೇ ನಾಶಗೊಳಿಸಿದಂತೆ ಎಂಬ ಅರಿವು ಅವರಿಗೆ ಇರುವುದಿಲ್ಲ.
ನಾವು ನಾಶಗೊಳಿಸಬೇಕಿರುವುದು, ಜಾತಿ-ಜಾತಿಗಳ ನಡುವೆ ಇರುವ ಮೇಲು-ಕೀಳು ಎಂಬ ತಾರತಮ್ಯವನ್ನೇ ಹೊರತು, ಜಾತಿಗಳನ್ನಲ್ಲ. ಯಾವುದೇ ವ್ಯಕ್ತಿಗೆ ಆತನ ಜಾತಿಯ ಕಾರಣಕ್ಕಾಗಿ ಉತ್ತಮ ಅವಕಾಶ ದೊರೆಯದೇ ಇರುವ ಅಥವಾ ದೊರೆಯುವ ಸ್ಥಿತಿ ಇರಬಾರದು. ಎರಡೂ ತಪ್ಪೇ! ಇಂತಹ ಪ್ರಬುದ್ಧ ಸ್ಥಿತಿಗೆ ಭಾರತೀಯ ಸಮಾಜ ತಲುಪಬೇಕಿದೆ. ಶೈಕ್ಷ ಣಿಕ ಹಾಗೂ ಆರ್ಥಿಕ ಸಬಲೀಕರಣದಿಂದ ಅದು ಸಾಧ್ಯವಾಗುತ್ತಿದೆ.
ಆ ನಿಟ್ಟಿನಲ್ಲಿ ಶ್ರಮಿಸಬೇಕಾದ ಕರ್ತವ್ಯ ಎಲ್ಲರ ಮೇಲಿದೆ. ಜಾತಿ ಎಂಬುದರಲ್ಲಿ ಈ ತಾರತಮ್ಯ ಎಂಬ ಪಿಡುಗಿದೆ ಎಂಬುದನ್ನು ಹೊರತುಪಡಿಸಿ ನೋಡಿದರೆ, ಅದು ಸುಂದರವಾಗಿಯೇ ಇವೆ. ನಮ್ಮ ದೇಶದ ಪ್ರತಿ ಜಾತಿಗೂ ಒಂದು ಆಹಾರ ಪದ್ಧತಿ ಇದೆ. ಮತಾಂತರವಾಗಿ ಏಕದೇವೋಪಾಸನೆಯತ್ತ ಹೊರಳಿದರೆ ಈ ವೈವಿಧ್ಯತೆ ಎಲ್ಲಿ ಉಳಿಯುತ್ತದೆ?
ಭಾರತದ ಈಶಾನ್ಯ ರಾಜ್ಯಗಳಷ್ಟೆ ಅಲ್ಲ. ಆಫ್ರಿಕಾ ಖಂಡದ ಅನೇಕ ದೇಶಗಳನ್ನೇ ನೋಡಿ. ಅಲ್ಲಿದ್ದ ಸಮೃದ್ಧ ಬುಡಕಟ್ಟು ಸಂಸ್ಕೃತಿಯ ಜತೆಗೆ ಬೆಸೆದುಕೊಂಡಿದ್ದ ಊಟ, ಉಡುಪು, ಭಾಷೆಗಳೆಲ್ಲವೂ ನಶಿಸಿಹೋಗಿವೆ. ಪ್ರಾಕೃತಿಕವಾಗಿ ದೊರಕುವ ದೇಹದ ಬಣ್ಣವೊಂದನ್ನು ಹೊರತುಪಡಿಸಿ ಯಾವುದರಲ್ಲೂ ಅವರು ಸಂಸ್ಕೃತಿಯನ್ನು ಉಳಿಸಿಕೊಂಡಿಲ್ಲ. ದೇಶದಲ್ಲಿ ಬೃಹತ್‌ ಕಾರ್ಯಕ್ರಮಗಳಾದಾಗ ಇಂತಹ ಬುಡಕಟ್ಟು ನೃತ್ಯಗಳನ್ನು ಪ್ರದರ್ಶಿಸುವ ಪ್ರದರ್ಶನದ ವಸ್ತುವಾಗಿಬಿಟ್ಟಿವೆ.
ಕೆಲವು ಧರ್ಮೀಯರು, ಆಸೆ, ಆಮಿಷ, ಸೇವೆಗಳ ಮೂಲಕ ಬಡಜನರನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಬಡಜನರ ಸೇವೆ ಎನ್ನುವುದು ನಿಷ್ಕಾಮ ಕರ್ಮವಾಗಿರದೆ, ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಾಧನವಾದಾಗ ಅದರಿಂದ ಅಪಾಯವೇ ಹೆಚ್ಚು. ಇನ್ನು ಕೆಲವು ಮತಗಳು ಕತ್ತಿಯ ಅಲಗಿನ ಆಧಾರದಲ್ಲಿ ಮತಾಂತರ ಮಾಡಿದವು. ನನ್ನ ನಂಬಿಕೆಯನ್ನು ಒಪ್ಪದಿದ್ದರೆ ಅಥವಾ ನನ್ನ ನಂಬಿಕೆಯನ್ನು ಟೀಕಿಸಿದರೆ ಹತ್ಯೆ ಮಾಡುತ್ತೇನೆ ಎಂದು ಹೆದರಿಸಲಾಯಿತು.
ನಿಜ, ಸ್ವ ಇಚ್ಛೆಯಿಂದ ನಡೆಯುವ ಮತಾಂತರಕ್ಕೆ ನಮ್ಮ ಸಂವಿಧಾನದಲ್ಲಿಯೇ ಅವಕಾಶವಿದೆ. ಅದನ್ನು ಯಾರೂ ಪ್ರಶ್ನಿಸುವುದಿಲ್ಲ. ಮತಾಂತರ ಎನ್ನುವುದನ್ನು, ತನ್ನ ನಂಬಿಕೆಯಲ್ಲಿನ ಬದಲಾವಣೆ ಎಂದೂ ಪರಿಗಣಿಸಬಹುದು. ಬಹುತ್ವದ ಭಾರತ ಇಂಥಾ ಮತಾಂತರವನ್ನು ಜೀರ್ಣಿಸಿಕೊಂಡಿದೆ, ಪೋಷಿಸಿದೆ.
ಆದರೆ, ಮತಾಂತರ ಬೇರೆ ಬೇರೆ ರೀತಿ ನಡೆಯುತ್ತಿದೆ. ಇದ್ದಕ್ಕಿದ್ದಂತೆ ನಡೆಯುವ ಮತಾಂತರ, ನಿಧಾನವಾಗಿ ನಡೆಯುವ ಮತಾಂತರ ಹಾಗೂ ಸಾಮಾಜಿಕ ಮತಾಂತರ ಎಂದು ಸ್ಥೂಲವಾಗಿ ಪಟ್ಟಿ ಮಾಡಬಹುದು. ಇದ್ದಕ್ಕಿದ್ದಂತೆ ನಡೆಯುವ ಮತಾಂತರದಲ್ಲಿ, ವ್ಯಕ್ತಿಗೆ ಎದುರಾಗುವ ಯಾವುದೇ ಸನ್ನಿವೇಶವು ತನ್ನ ನಂಬಿಕೆ ಮೇಲೆ ದ್ವೇಷವನ್ನು ಮೂಡಿಸುತ್ತದೆ. ಅದು ಹೊರಗಿನ ಆಮಿಷವೂ ಆಗಿರಬಹುದು. ನಿಧಾನವಾಗಿ ನಡೆಯುವ ಮತಾಂತರವೆಂದರೆ, ತನ್ನ ಸಮಾಜ ಹಾಗೂ ನಂಬಿಕೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಯಾವುದೇ ಶೋಷಣೆಯಿಂದ ಬೇಸತ್ತು, ಇನ್ನೊಂದು ನಂಬಿಕೆಯಲ್ಲಿ ಸಮಾಧಾನ ಸಿಗಬಹುದು ಎಂಬ ಅನ್ವೇಷಣಾ ಮನೋಭಾವದಿಂದ ಮತಾಂತರ ಆಗುವುದು. ಸಾಮಾಜಿಕ ಮತಾಂತರ ಎನ್ನುವುದು ಇಡೀ ಸಮುದಾಯವು ಕಾಲಾಂತರದಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನು ತನ್ನ ಆಚರಣೆಗಳಲ್ಲಿ ಮಾಡಿಕೊಳ್ಳುತ್ತ, ಒಂದು ಹಂತದಲ್ಲಿ ಸಂಪೂರ್ಣ ಬದಲಾವಣೆ ಹೊಂದಿರುವುದು. ನಿಧಾನವಾಗಿ ನಡೆಯುವ ಮತಾಂತರ ಹಾಗೂ ಸಾಮಾಜಿಕ ಮತಾಂತರಗಳನ್ನು ನಾಗರಿಕತೆಯಲ್ಲಿನ ಬೆಳವಣಿಗೆ ಎಂದೂ ಹೇಳಬಹುದು. ಒಂದು ನಾಗರಿಕತೆ ತನ್ನಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳುತ್ತ ಮುಂದೆ ಸಾಗುವುದು.
ಆದರೆ ತಕ್ಷ ಣಕ್ಕೆ ನಡೆಯುವ ಮತಾಂತರವು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರಲ್ಲೂ ವೈಚಾರಿಕವಾಗಿ ತನ್ನ ನಂಬಿಕೆಯ ದೋಷಗಳನ್ನು ತಿಳಿದು, ಮತ್ತೊಂದು ನಂಬಿಕೆಯಲ್ಲಿ ಆಶಾಭಾವನೆ ಹೊಂದಿ ಮತಾಂತರವಾಗುವುದಕ್ಕೆ ಯಾರ ವಿರೋಧವೂ ಇರುವುದಿಲ್ಲ. ಆದರೆ ಆಸೆ, ಆಮಿಷ, ಭಯವನ್ನು ಹುಟ್ಟಿಸಿ ನಡೆಸುವ ಮತಾಂತರ ಯಾವುದೇ ಅಪರಾಧಕ್ಕೆ ಕಡಿಮೆ ಇಲ್ಲ.
ಮತಾಂತರ ಎನ್ನುವುದನ್ನು ಹಿಂದು ಧರ್ಮಕ್ಕೆ ಅಪಾಯ ಎಂಬ ಒಂದೇ ನೆಲೆಗಟ್ಟಿನಿಂದ ನೋಡುವ ಬದಲಿಗೆ ಬಹುತ್ವದ ನೆಲೆಯಲ್ಲಿ ನೋಡುವಂತಾಗಬೇಕು. ಬಹು ದೇವೋಪಾಸನೆಯಿಂದ ಏಕದೇವೋಪಾಸನೆಯತ್ತ ಹೊರಳುವುದು ನಾಗರಿಕತೆಯ ಮುಂದುವರಿಕೆ ಖಂಡಿತ ಅಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಅಸ್ಮಿತೆಯೇ ಬಹುತ್ವ. ಮತಾಂತರದಿಂದ ಈ ಮೂಲಸ್ತಂಭಕ್ಕೇ ಧಕ್ಕೆ ಆಗುತ್ತದೆ ಎನ್ನುವುದಾದರೆ, ಅಂತಹ ಬಲವಂತದ, ಒತ್ತಾಯದ ಮತಾಂತರಕ್ಕೆ ತಡೆ ಒಡ್ಡುವುದೇ ಸರಿಯಾದ ಕ್ರಮ. ದೇಶದ ವಿವಿಧ ರಾಜ್ಯಗಳಲ್ಲಿ ಮತಾಂತರ ನಿರ್ಬಂಧ ಕಾನೂನುಗಳು ಜಾರಿಯಲ್ಲಿವೆ, ಈಗ ಕರ್ನಾಟಕದಲ್ಲೂ ಅಂತಹದ್ದೇ ವಿಧೇಯಕಯನ್ನು ಅಂಗೀಕರಿಸಲಾಗಿದೆ. ಮತಾಂತರ ಎನ್ನುವುದು ಭಾರತದ ಬಹುತ್ವಕ್ಕೆ ಎರವಾಗುವ ಸಂಗತಿ ಎಂಬುದರ ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷ ಗಳೂ ಈ ಹೆಜ್ಜೆಯನ್ನು ಬೆಂಬಲಿಸಬೇಕಿದೆ. ಇದರಲ್ಲಿ ಮತ ರಾಜಕೀಯಕ್ಕಿಂತಲೂ ಉನ್ನತ ಆದರ್ಶ ಇದೆ ಎನ್ನುವುದನ್ನು ಅರಿಯಬೇಕಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top