ಪರದೂಷಣೆಗಿಂತ ಆತ್ಮಾವಲೋಕನವೇ ಉದ್ಧಾರದ ಹಾದಿ

ಅಸ್ಪೃಶ್ಯತೆಯ ಆಚರಣೆ ನಿವಾರಣೆಯಾಗಬೇಕು, ಮತಾಂತರದ ಫ್ಯಾಕ್ಟರಿಗಳೂ ತೊಲಗಬೇಕು

ವೇದ, ಉಪನಿಷತ್ತು, ಪುರಾಣ ಮತ್ತು ಹಿಂದೂ ಧರ್ಮದ ಹೆಸರಿನಲ್ಲಿರುವ ಎಲ್ಲ ಪವಿತ್ರ ಗ್ರಂಥಗಳನ್ನೂ ಒಪ್ಪುತ್ತೇನೆ ಎಂದು 1921ರಲ್ಲಿ ಯಂಗ್‌ ಇಂಡಿಯಾದಲ್ಲಿ ಬರೆದ ಮಹಾತ್ಮಾ ಗಾಂಧೀಜಿಯವರೇ, ‘‘ಈ ಧರ್ಮಗ್ರಂಥಗಳಲ್ಲಿ ಅಸ್ಪೃಶ್ಯತೆ ಎಂಬುದಕ್ಕೆ ದೈವಿಕ ಪ್ರಮಾಣಗಳು ಇವೆ ಎಂದಾದರೆ, ಈ ಭೂಮಿಯ ಮೇಲಿನ ಯಾವ ಶಕ್ತಿಯೂ ನನ್ನನ್ನು ಹಿಂದೂ ಧರ್ಮಕ್ಕೆ ಬಂಧಿಸಿಡಲಾರದು. ಈ ಇಡೀ ಧರ್ಮವನ್ನೇ ನಾನು ಕೊಳೆತ ಹಣ್ಣೊಂದನ್ನು ಹೊರ ಬಿಸಾಡುವಂತೆ ಎಸೆಯುತ್ತೇನೆ,’’ ಎಂದು 1934ರ ಜನವರಿ 26ರಂದು ತಾವು ಸಂಪಾದಿಸುತ್ತಿದ್ದ ಹರಿಜನ ಪತ್ರಿಕೆಯಲ್ಲಿ ಬರೆದರು.
ಹಿಂದೂ ಧರ್ಮದ ವ್ಯವಸ್ಥೆಯಲ್ಲಿ ದೋಷವಿದೆ. ಅದು ಯಾವ ವ್ಯವಸ್ಥೆಯಲ್ಲಿ ಇಲ್ಲ ಹೇಳಿ? ದೇವರು ಸೃಷ್ಟಿಸಿದ ಪ್ರಕೃತಿಯೂ ಪರಿಪೂರ್ಣವಲ್ಲ. ಅಲ್ಲಿಯೂ ದೋಷವಿದ್ದ ಮೇಲೆ, ಮಾನವ ಸೃಷ್ಟಿಸಿದ ವ್ಯವಸ್ಥೆಯಲ್ಲಿ ಇರುವುದಿಲ್ಲವೇ? ತುಸು ಹೆಚ್ಚಾಗಿಯೇ ಇವೆ. ಆದರೆ, ಯಾವ ವ್ಯವಸ್ಥೆ ತನ್ನೊಳಗಿನ ದೋಷಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾ, ಕಾಲಕಾಲಕ್ಕೆ ಅಗತ್ಯ ಮಾರ್ಪಾಟುಗಳನ್ನು ಮಾಡಿಕೊಳ್ಳುತ್ತಾ, ಮುನ್ನಡೆಯುತ್ತೋ, ಆ ವ್ಯವಸ್ಥೆ ಶಾಶ್ವತವಾಗಿ ಉಳಿಯುತ್ತದೆ. ಹಿಂದೂ ಧರ್ಮಕ್ಕೆ ಶಾಶ್ವತವಾಗಿ ಉಳಿಯುವ ಇಂಥದ್ದೊಂದು ಅಪರೂಪದ ಗುಣವಿದೆ.
ಹಿಂದೂ ಧರ್ಮದ ಒಳಗಿನ ಸಮಸ್ಯೆಗಳನ್ನು ಹೊರಗಿನವರು ಯಾರೊ ಬಂದು ಗುರುತಿಸುವುದಕ್ಕೂ ಎಷ್ಟೋ ಮುನ್ನವೇ ಒಳಗಿರುವವರೇ ಗುರುತಿಸಿ ಅದಕ್ಕೆ ಪರಿಹಾರವನ್ನೂ ಸೂಚಿಸಿದ್ದಾರೆ ಮಾತ್ರವಲ್ಲ, ಪರಿಹಾರದತ್ತ ಹೆಜ್ಜೆಯನ್ನೂ ಇಟ್ಟಿದ್ದಾರೆ. ಇದೇ ಗಾಂಧೀಜಿಯ ಮಾತಿನ ಸಾರ.
ಗಾಂಧಿಯ ಇದೇ ಮಾತನ್ನು ವಿವೇಕಾನಂದರು ಇನ್ನೊಂದು ರೀತಿಯಲ್ಲಿ ಹೇಳುತ್ತಾರೆ: ‘‘ಹಿಂದೂ, ಪಾರ್ಸಿ ಮತ್ತು ಯಹೂದ್ಯ ಧರ್ಮಗಳು ಮಾತ್ರ ಇತಿಹಾಸಪೂರ್ವದಿಂದ ಈ ತನಕ ಆಚರಣೆಯಲ್ಲಿವೆ. ಈ ಮೂರು ಧರ್ಮಗಳು ಅಗಾಧವಾದ ಅಘಾತಗಳನ್ನು ಎದುರಿಸಿಯೂ ಉಳಿದಿವೆ ಎಂದರೆ, ಅದಕ್ಕೆ ಆ ಧರ್ಮಗಳಲ್ಲಿನ ಅಂತರಂಗ ಶಕ್ತಿ ಕಾರಣ. ಈ ಪೈಕಿ ಯಹೂದ್ಯ ಧರ್ಮ ತನ್ನಿಂದ ಹುಟ್ಟಿದ ಕ್ರೈಸ್ತ ಧರ್ಮವನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ. ಆದರೆ, ಹಿಂದೂ ಧರ್ಮ ಮಾತ್ರ ಎಲ್ಲವನ್ನೂ ಜೀರ್ಣಿಸಿಕೊಂಡಿತು,’’ ಅಂದರೆ, ವಿವೇಕಾನಂದರ ಮಾತಿನ ಅರ್ಥ ಕೂಡ, ಹಿಂದೂ ಧರ್ಮ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿದೆ!
ನಾನು ಒಂದು ಗ್ರಂಥವನ್ನು ಪವಿತ್ರ ಎಂದು ಒಪ್ಪಿದ ಮೇಲೆ ಅದರಲ್ಲಿ ಯಾವುದೇ ದೋಷ ಇಲ್ಲವೇ ಇಲ್ಲ ಎಂದಲ್ಲ. ನನ್ನ ಓದಿನ ಮಟ್ಟಿಗೆ ಅದು ತಿಳಿದಿಲ್ಲದೆ ಇರಬಹುದು. ಹಾಗೇನಾದರೂ ಅದರಲ್ಲಿ ದೋಷವಿದೆ ಎಂದು ಕಂಡುಬಂದರೆ ಅದನ್ನು ತಿರಸ್ಕರಿಸುತ್ತೇನೆ ಎಂದು ಹೇಳಲು ಧೈರ್ಯ ಬೇಕು. ಗಾಂಧೀಜಿಯ ಈ ಘೋಷಣೆಯ ಮೂರು ದಶಕದ ಬಳಿಕ, ನಾಡಿನ ಸಾಧು ಸಂತರು ಕರ್ನಾಟಕದ ನೆಲದಲ್ಲಿಯೇ ಹಿಂದೂ ಧರ್ಮದ ದೋಷಗಳ ನಿವಾರಣೆ ನಿಟ್ಟಿನಲ್ಲಿ ಮಹತ್ವದ ಘೋಷಣೆಯೊಂದನ್ನು ಹೊರಡಿಸುತ್ತಾರೆ.
1969ರ ಡಿಸೆಂಬರ್‌ 13, 14ರಂದು ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಪ್ರಾಂತೀಯ ಸಮ್ಮೇಳನ, ಅಸ್ಪೃಶ್ಯತೆ ನಿವಾರಣೆಯ ಮಹತ್ವದ ಸಂದೇಶವನ್ನು ದೇಶಕ್ಕೆ ನೀಡಿತು. ದೇಶದ ಎಲ್ಲ ಮೂಲೆಗಳಿಂದ ಆಗಮಿಸಿದ್ದ 60 ಧರ್ಮಾಚಾರ್ಯರು, ವಿಹಿಂಪದ ಅಂದಿನ ಅಧ್ಯಕ್ಷ ಉದಯಪುರದ ಮಹಾರಾಣಾ, ಮಹಾಪೋಷಕಿಯಾಗಿದ್ದ ಗ್ವಾಲಿಯರ್‌ ರಾಜಮಾತೆ ವಿಜಯರಾಜೇ ಸಿಂಧಿಯಾ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ, ಹಿರಿಯ ಲೇಖಕಿ ಜಯದೇವ ತಾಯಿ ಲಿಗಾಡೆ, ನಿವೃತ್ತ ಐಎಎಸ್‌ ಅಧಿಕಾರಿ ಆರ್‌. ಭರಣಯ್ಯ ಸೇರಿ ಅನೇಕರು ಈ ಸಮ್ಮೇಳನಕ್ಕೆ ಸಾಕ್ಷಿಯಾಗಿದ್ದರು. ಸಭೆಯಲ್ಲಿ ಅಸ್ಪೃಶ್ಯತೆ ಕುರಿತು ಚರ್ಚೆಗಳು ನಡೆದವು. ನಂತರ ಎಲ್ಲ ಸಾಧು ಸಂತರೂ ಒಗ್ಗಟ್ಟಿನ ಧ್ವನಿಯಲ್ಲಿ ‘ನ ಹಿಂದುಃ ಪತಿತೋ ಭವೇತ್‌’ (ಹಿಂದೂ ಆದವನು ಪಾಪಿಯಾಗಲು ಸಾಧ್ಯವೇ ಇಲ್ಲ) ಹಾಗೂ ‘ಹಿಂದವಃ ಸೋದರಾಃ ಸರ್ವೇ’ (ಹಿಂದೂಗಳೆಲ್ಲರೂ ಸೋದರರು) ಎಂಬ ಎರಡು ಘೋಷಣೆಗಳನ್ನು ಮೊಳಗಿಸಿದರು. ಈ ಉಸಿರಿನಲ್ಲಿಯೇ, ಅಸ್ಪೃಶ್ಯತೆಯು ಹಿಂದೂ ಧರ್ಮದೊಳಗೆ ತೂರಿಕೊಂಡಿರುವ ದೊಡ್ಡ ಕಳಂಕ ಎಂಬುದನ್ನು ಎಲ್ಲ ಸಾಧು ಸಂತರು, ಗಣ್ಯರು ಒಪ್ಪಿದರು. ಆದರೆ, ಅಸ್ಪೃಶ್ಯತೆಯು ಹಿಂದೂ ಧರ್ಮದ ಭಾಗವಾಗಿದೆ ಎಂಬ ತಥಾಕಥಿತ ವಾದ ಸಂಪೂರ್ಣ ಸುಳ್ಳು ಎಂಬುದನ್ನು ವಿಹಿಂಪ ಸಾಬೀತು ಪಡಿಸಿತು. ಹಿಂದೂ ಧರ್ಮಶಾಸ್ತ್ರಗಳಲ್ಲಿ ಅಸ್ಪೃಶ್ಯತೆಗೆ ಅವಕಾಶವಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿತು.
ಸಾಧು ಸಂತರ ಸಮ್ಮೇಳನ ಈ ಘೋಷಣೆ ಮೊಳಗಿಸಿದ ಬಳಿಕ, ಅಸ್ಪೃಶ್ಯತೆ ಮಾಯವಾಯಿತೇ ಎಂದು ಯಾರಾದರೂ ಕೇಳಿದರೆ ಅದಕ್ಕೆ ಉತ್ತರ, ಖಂಡಿತ ಇಲ್ಲ ಎಂದೇ. ಭಾರತದಲ್ಲಿ ಮಲ ಹೊರುವ ಪದ್ಧತಿಯನ್ನು ಮೂರು ದಶಕದ ಹಿಂದೆಯೇ ಶಾಸನಬದ್ಧವಾಗಿ ನಿಷೇಧಿಸಲಾಯಿತು. ಬಾಲ್ಯ ವಿವಾಹವನ್ನೂ ಈ ನೆಲದ ಕಾನೂನು ನಿಷೇಧಿಸಿದೆ. ಹಾಗಿದ್ದ ಮೇಲೆ, ಮಲ ಹೊರುವ ಪದ್ಧತಿ, ಬಾಲ್ಯವಿವಾಹ ನಿಂತುಹೋಗಿಬಿಟ್ಟಿದೆಯೇ? ಈಗಲೂ ನಡೆಯುತ್ತಿದೆ. ಹಾಗೆಯೇ ಅಸ್ಪೃಶ್ಯತೆ ಎಂಬ ಕಳಂಕ ಜೀವಂತವಾಗಿದೆ.
ಆದರೆ, ಅಸ್ಪೃಶ್ಯತೆಗೆ ಇದ್ದ ಧಾರ್ಮಿಕ ರಕ್ಷ ಣಾ ಕವಚವನ್ನು ಸಾಧು ಸಂತರ ಸಮ್ಮೇಳನ ಕಿತ್ತೊಗೆಯಿತು. ಅಸ್ಪೃಶ್ಯತಾ ನಿವಾರಣೆಯ ಮುಂದಿನ ಸಾಮಾಜಿಕ ಪ್ರಯತ್ನಗಳಿಗೆ ದಾರಿಯನ್ನು ಸುಗಮಗೊಳಿಸಿಕೊಟ್ಟಿತು.
ಹಿಂದೂ ಧರ್ಮದಲ್ಲಿ ಇಂತಹ ಆಂತರಿಕ ಸಮಸ್ಯಾ ಪರಿಹಾರ ವ್ಯವಸ್ಥೆಯೊಂದು ಚಾಲ್ತಿಯಲ್ಲಿದೆ. ಆದರೆ ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆಯನ್ನು ಮುಂದು ಮಾಡಿ, ಮತಾಂತರಕ್ಕೆ ಪ್ರಯತ್ನಿಸುವ ನಂಬಿಕೆಗಳಲ್ಲಿ ಇಂತಹ ಆಂತರಿಕ ವ್ಯವಸ್ಥೆ ಇದೆಯೇ? ಅದನ್ನು ಅವಲೋಕಿಸೋಣ.
ಭಾರತದ ಮೇಲೆ ಆಕ್ರಮಣ ಮಾಡಿದ ಎರಡು ಪ್ರಮುಖ ಉದಾಹರಣೆಗಳಾಗಿ ‘ಮುಸ್ಲಿಂ ಆಕ್ರಮಣಕಾರರು’ ಹಾಗೂ ‘ಬ್ರಿಟಿಷರು’ ಎಂದು ಹೆಸರಿಸುತ್ತೇವೆ. ಮುಸ್ಲಿಂ ಆಕ್ರಮಣಕಾರರು, ಇಸ್ಲಾಮಿಕ್‌ ಆಕ್ರಮಣಕಾರರು ಎಂದ ಕೂಡಲೆ ಅವರು ಇಸ್ಲಾಂ ಪ್ರಚಾರ ಮಾಡಲು ಮುಂದಾದರು, ಹಿಂದೂಗಳನ್ನು ಹತ್ಯೆ ಮಾಡಿದರು ಎಂದು ಸರಳವಾಗಿ ಸಮೀಕರಿಸಲಾಗುತ್ತದೆ. ಆದರೆ ಬ್ರಿಟಿಷರ ವಿಚಾರದಲ್ಲಿ ಧರ್ಮವನ್ನು ಮುಂದೆಮಾಡುವುದಿಲ್ಲ. ಅವರನ್ನು ಕೇವಲ ‘ಜಾತ್ಯತೀತ’ ಇಲ್ಲವೇ ‘ಆಧುನಿಕತೆಯ ವ್ಯಾಪಾರಿಗಳು’ ಎನ್ನುವಂತೆ ನೋಡಲಾಗುತ್ತದೆ. ಭಾರತದ ಮೇಲೆ ಆಳ್ವಿಕೆ ನಡೆಸಲಾರಂಭಿಸಿದ ಪ್ರಾರಂಭದ ದಿನಗಳಲ್ಲಿ ಬ್ರಿಟಿಷರು ಭಾರತದ ಧರ್ಮದ ವಿಚಾರದಲ್ಲಿ ಮೂಗುತೂರಿಸಿರಲಿಲ್ಲ.
ಹಾಗೆ ನೋಡಿದರೆ, 1781ರಲ್ಲಿ ನಡೆದ ಬ್ರಿಟಿಷರ ಕಾಮನ್ಸ್‌ ಸಭೆ, ಧರ್ಮದಿಂದ ದೂರು ನಿಲ್ಲುವ ಪ್ರತಿಜ್ಞೆ ಮಾಡಿತ್ತು. ‘‘ಭಾರತದ ದೇಶೀಯ ಮತಧರ್ಮದಲ್ಲಿ ನಾವು ಹಸ್ತಕ್ಷೇಪ ಮಾಡಿದ್ದೇ ಆದರೆ ಅದರಿಂದ ಕೊನೆಗೆ ಬ್ರಿಟಿಷ್‌ ಶಕ್ತಿಯೇ ಸಂಪೂರ್ಣವಾಗಿ ನಾಶವಾಗಿ ಹೋದೀತು,’’ ಎಂಬ ಎಚ್ಚರಿಕೆ ನಿಲುವನ್ನು ತಾಳಿತ್ತು. ಆದರೆ 1813ರಲ್ಲಿ ಚಾರ್ಟರ್‌ ಕಾಯಿದೆಗೆ ಬ್ರಿಟನ್ನಿನ ಸಂಸತ್ತು ತಿದ್ದುಪಡಿ ತಂದಿತು. ಅದರ ಪ್ರಕಾರ, ಅಲ್ಲಿಯವರೆಗೆ ಭಾರತದಲ್ಲಿ ಶಿಕ್ಷ ಣ ವ್ಯವಸ್ಥೆ ಹೇಗಿರಬೇಕು ಎಂಬುದರ ಕುರಿತು ನಿರ್ಧರಿಸುವ ಹಕ್ಕನ್ನು ಗವರ್ನರ್‌ ಜನರಲ್‌ಗೆ ನೀಡಲಾಗಿತ್ತು. ಈ ಅಧಿಕಾರವನ್ನು ಕಿತ್ತುಕೊಂಡ ಹೊಸ ತಿದ್ದುಪಡಿ, ‘‘ಭಾರತೀಯರಲ್ಲಿ ಧಾರ್ಮಿಕ ಮತ್ತು ನೈತಿಕ ಅಭಿವೃದ್ಧಿ’’ ಉಂಟುಮಾಡುವ ಸಲುವಾಗಿ ಇಂಗ್ಲಿಷ್‌ ಶಿಕ್ಷ ಣದ ಜಾರಿಗೆ ಅನುವು ಮಾಡಿಕೊಟ್ಟಿತು.
ಎರಡನೆಯದಾಗಿ, ಮತಪ್ರಚಾರವನ್ನು ಕೈಗೊಳ್ಳಲು ಕ್ರೈಸ್ತ ಮಿಷನರಿಗಳಿಗಿದ್ದ ನಿರ್ಬಂಧವನ್ನು ತಿದ್ದುಪಡಿ ಕಾಯಿದೆ ಸಂಪೂರ್ಣ ಸಡಿಲಿಸಿತು. ಇಷ್ಟೇ ಅಲ್ಲದೆ ಇವೆರಡೂ ಕಾರ್ಯಕ್ಕಾಗಿ ಆ ಕಾಲದಲ್ಲಿಯೇ 1 ಲಕ್ಷ ರೂಪಾಯಿಯನ್ನು ಮೀಸಲಿಟ್ಟಿತು. ಇದರ ಪರಿಣಾಮ, ಪಾಶ್ಚಾತ್ಯ ದೇಶಗಳೇ ಸರಿ, ಕ್ರೈಸ್ತ ನಂಬಿಕೆಯೇ ಸತ್ಯ ಎನ್ನುವ ಶಿಕ್ಷ ಣ ಒಂದೆಡೆ ಜಾರಿಯಾದರೆ, ಇನ್ನೊಂದೆಡೆ ಇದು ಮತಾಂತರದ ಹೆಬ್ಬಾಗಿಲನ್ನೆ ತೆರೆಯಿತು. ಚಾರ್ಟರ್‌ ಕಾಯಿದೆಯ ಅನಾಹುತದ ಫಲಿತಾಂಶ ಹೇಗಿತ್ತು ಎಂದರೆ, 1813ರಲ್ಲಿ ಭಾರತದಲ್ಲಿ ಆರು ಅಮೆರಿಕನ್‌ ಪ್ರಾಟೆಸ್ಟೆಂಟ್‌ ಮಿಷನರಿಗಳು ಮಾತ್ರ ಕೆಲಸ ಮಾಡುತ್ತಿದ್ದವು. ಕಾಯಿದೆ ತಿದ್ದುಪಡಿ ನಂತರ ಅಂದರೆ 1910ರಲ್ಲಿ ಈ ಮಿಷನರಿಗಳ ಸಂಖ್ಯೆ 1,800ಕ್ಕೆ ಏರಿಕೆಯಾಯಿತು. ಅಂದರೆ ಬ್ರಿಟಿಷ್‌ ಆಡಳಿತವು ಭಾರತದಲ್ಲಿ ಕ್ರೈಸ್ತ ಮತ ಪ್ರಚಾರಕ್ಕೆ ಸರ್ವ ಸವಲತ್ತನ್ನೂ ಒದಗಿಸಿಕೊಟ್ಟಿತು. ಅದಾಗಲೆ ಆಫ್ರಿಕಾ ಸೇರಿ ಅನೇಕ ಭೂಭಾಗಗಳಲ್ಲಿ ಮತಾಂತರ ನಡೆಸಿದ್ದ ಮಿಷನರಿಗಳ ಗಮನ ಏಷ್ಯಾದತ್ತ ತಿರುಗಿತು. ಆ ವೇಳೆಗೆ, ಏಷ್ಯಾದ ಒಂದು ಭಾಗ ಇಸ್ಲಾಮಿಕ್‌ ಪ್ರಭಾವಕ್ಕೆ ಒಳಗಾಗಿದ್ದರೆ ಇನ್ನೊಂದು ಭಾಗ ಕಮ್ಯುನಿಸ್ಟ್‌ ಹಿಡಿತಕ್ಕೆ ಒಳಗಾಗುತ್ತಿತ್ತು. ಎರಡೂ ಕಡೆ ಮಿಷನರಿಗಳ ಮತಾಂತರಕ್ಕೆ ಅವಕಾಶ ಇಲ್ಲದಿದ್ದರಿಂದ ಭಾರತವೇ ‘ಸೋಲ್‌ ಹಾರ್ವೆಸ್ಟಿಂಗ್‌’ಗೆ ಪ್ರಶಸ್ತವಾಗಿ ಕಂಡಿರಬೇಕು.
ಕ್ರೈಸ್ತ, ಇಸ್ಲಾಂ ಸೇರಿ ಯಾವುದೇ ನಂಬಿಕೆಯನ್ನು ಮನಸಾರೆ ಒಪ್ಪಿ ಮತಾಂತರವಾದರೆ ಯಾರ ಅಭ್ಯಂತರವೂ ಇಲ್ಲ. ಅದಕ್ಕೆ ಸಂವಿಧಾನವೂ ಅವಕಾಶ ನೀಡಿದೆ. ಗಾಂಧೀಜಿ ಸಹ ಇದೇ ಮಾತನ್ನು ಹೇಳಿದ್ದರು. ತಮ್ಮ ಹಿರಿಯ ಪುತ್ರ ಹರಿಲಾಲ್‌ ಇಸ್ಲಾಂಗೆ ಮತಾಂತರಗೊಂಡು ‘ಅಬ್ದುಲ್ಲಾ ಗಾಂಧಿ’ ಎಂದು ಹೆಸರು ಬದಲಿಸಿಕೊಂಡ. ಈ ಬಗ್ಗೆ ಎಲ್ಲೆಡೆ ವ್ಯಾಪಕ ಚರ್ಚೆಗಳಾದವು. ತಮ್ಮನ್ನು ತಾವು ಸನಾತನಿ ಹಿಂದೂ ಎಂದುಕೊಳ್ಳುವವರ ಮಗನೇ ಹೀಗಾದರೆ ಹೇಗೆ ಎಂಬ ಮಾತುಗಳು ಬಂದವು. ಗಾಂಧೀಜಿ ಇದರಿಂದ ಎಳ್ಳಷ್ಟೂ ವಿಚಲಿತರಾಗದೆ ‘ಹರಿಜನ’ ಪತ್ರಿಕೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದರು. ’’ಹರಿಲಾಲ್‌ ನಿಜವಾಗಿಯೂ ಹೃದಯ ಪರಿವರ್ತನೆಯಿಂದ, ಲೌಕಿಕ ಲಾಭಗಳಿಗೆ ಆಸೆಪಡದೆ, ಶುದ್ದ ಮನಸ್ಸಿನಿಂದ ಮತಾಂತರಗೊಂಡಿದ್ದರೆ ಯಾವ ಅಭ್ಯಂತರವೂ ಇಲ್ಲ. ಇಸ್ಲಾಂ ಎಂಬುದು ನನ್ನ ಧರ್ಮದಷ್ಟೇ ಸತ್ಯವಾದದ್ದು ಎಂದು ನಾನು ನಂಬಿದ್ದೇನೆ. ಆದರೆ ಇದು ಹೃದಯ ಪರಿವರ್ತನೆಯೇ ಅಥವಾ ಬರೀ ಸ್ವಾರ್ಥಕ್ಕಾಗಿ ನಡೆದ ಘಟನೆಯೇ ಎಂಬುದರ ಬಗ್ಗೆ ನನಗೆ ಈಗಲೂ ಸಂದೇಹ ಇದೆ. ಅವನು ಹಿಂದೂ ಧರ್ಮವನ್ನು ಬಿಟ್ಟಿದ್ದರಿಂದ ಈ ಧರ್ಮಕ್ಕೆ ಯಾವ ನಷ್ಟವೂ ಆಗಿಲ್ಲ. ಇಸ್ಲಾಂಗೆ ಸೇರಿದ್ದರಿಂದ ಇಸ್ಲಾಂಗೂ ಯಾವ ಲಾಭವೂ ಆಗಿಲ್ಲ. ಅವನು ಪೋಲಿಯಾಗಿಯೇ ಇರುತ್ತಾನೆ. ಹರಿಲಾಲ್‌ ಭವಿಷ್ಯದಲ್ಲಿ ಸರಿಯಾದ ದಾರಿಯಲ್ಲಿ ಹೋಗುವಂತೆ ನನ್ನ ಮುಸ್ಲಿಂ ಬಾಂಧವರು ನೋಡಿಕೊಳ್ಳಬೇಕು ಎಂದು ಅಶಿಸುತ್ತೇನೆ,’’ ಎಂದರು. (ಮುಂದೆ, ಕೆಲವು ದಿನಗಳ ನಂತರ ಆರ್ಯ ಸಮಾಜದ ಮೂಲಕ ಹರಿಲಾಲ್‌ ಹಿಂದೂ ಧರ್ಮಕ್ಕೆ ವಾಪಸಾದ) ಮತಾಂತರ ಕುರಿತು ಭಾರತೀಯರ ನೈತಿಕ ಆಶಯವನ್ನು ಇದಕ್ಕಿಂತ ಚೆಂದ ಯಾರಿಗೆ ತಾನೆ ಹೇಳು ಸಾಧ್ಯ?
ಕ್ರೈಸ್ತ ಮತಪ್ರಚಾರದ ಕುರಿತು ಗಾಂಧೀಜಿಯವರ ಮಾತೊಂದು ಸಾಕಷ್ಟು ಬಾರಿ ಪುನರಾವರ್ತನೆಯಾಗಿದೆ. ‘‘ನನ್ನ ಕೈಯಲ್ಲಿ ಅಧಿಕಾರವಿದ್ದು, ಕಾನೂನು ಮಾಡಲು ಸಾಧ್ಯವಿದ್ದಿದ್ದರೆ, ಎಲ್ಲ ಮತಾಂತರಗಳನ್ನೂ ಖಂಡಿತವಾಗಿ ತಡೆಯುತ್ತಿದ್ದೆ. ಹಿಂದೂ ಮನೆಗಳಲ್ಲಿ ಮತಪ್ರಚಾರಕರು ಪ್ರವೇಶಿಸಿದರೆಂದರೆ ಅವರ ಸಂಸಾರವೇ ಒಡೆದುಹೋಗುತ್ತದೆ. ಅವರ ಉಡುಪುಗಳಲ್ಲಿ, ನಡವಳಿಕೆಯಲ್ಲಿ, ಮಾತಿನಲ್ಲಿ, ಆಹಾರ ಪಾನೀಯಗಳಲ್ಲಿ, ಎಲ್ಲದರಲ್ಲೂ ಬದಲಾವಣೆಯಾಗುತ್ತದೆ,’’ ಎನ್ನುತ್ತಿದ್ದರು.
ಹೀಗೇಕೆ ಆಗುತ್ತದೆ? ಸ್ವಾಮಿ ವಿವೇಕಾನಂದರು 1893ರ ಸೆಪ್ಟೆಂಬರ್‌ 20ರಂದು ಷಿಕಾಗೊ ಭಾಷಣದಲ್ಲಿ ಹೇಳಿದಂತೆ, ಭಾರತದಲ್ಲಿ ಧಾರ್ಮಿಕ ಶಿಕ್ಷ ಣದ ಅವಶ್ಯಕತೆ ಇಲ್ಲ. ಪೂರ್ವದಲ್ಲಿ ಈಗಾಗಲೆ ಅನೇಕ ಧರ್ಮಗಳಿವೆ. ಇಲ್ಲಿನ ಹಸಿವಿಗೆ ಅನ್ನ ನೀಡಿದರೆ ಸಾಕು ಎಂದಿದ್ದರು.
ಹಿಂದೂ ಧರ್ಮದಲ್ಲಿದ್ದ ಮೇಲು ಕೀಳು, ಅಸ್ಪೃಶ್ಯತೆಗಳಿಂದ ಬೇಸತ್ತ ಬಾಬಾ ಸಾಹೇಬ್‌ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು, ‘‘ನಾನು ಹಿಂದೂವಾಗಿ ಹುಟ್ಟಿರುವುದು ನಿಜ. ಆದರೆ ಹಿಂದೂವಾಗಿ ಸಾಯುವುದಿಲ್ಲ,’’ ಎಂದು 1935ರ ಅಕ್ಟೋಬರ್‌ನಲ್ಲಿ ಹೇಳಿದ್ದರು. ಆದರೆ ಯಾವ ಮತಕ್ಕೆ ಮತಾಂತರವಾಗಬೇಕು ಎಂಬುದನ್ನು ಯೋಚಿಸಲು 1956ರವರೆಗೆ ಸಮಯ ತೆಗೆದುಕೊಂಡರು. ಆ ನಡುವಿನ ವೇಳೆಯಲ್ಲಾದರೂ ಹಿಂದೂ ಸಮಾಜದಲ್ಲಿರುವ ಅನಿಷ್ಟಗಳು ನಿರ್ಮೂಲನೆಯಾಗುತ್ತವೆಯೇ ಎಂಬುದನ್ನು ಕಾದುನೋಡಿದರು. ಆದರೆ ನೂರಾರು ವರ್ಷದಿಂದ ಸಮಾಜದಲ್ಲಿ ಬೇರುಬಿಟ್ಟಿದ್ದ ಅಸ್ಪೃಶ್ಯತೆ ಆಚರಣೆ ಅಷ್ಟು ಕಡಿಮೆ ಸಮಯದಲ್ಲಿ ತೊಲಗಲಿಲ್ಲ. ಮುಂದೆ ಅವರು ಬೌದ್ಧಮತ ಸ್ವೀಕರಿಸಿದಾಗ ಆಡಿದ ಮಾತುಗಳು, ‘‘ಅಸ್ಪೃಶ್ಯತೆಯ ವಿಷಯದಲ್ಲಿ ಮಹಾತ್ಮಾ ಗಾಂಧೀಜಿಯವರ ಜತೆ ನನಗೆ ತೀವ್ರ ಭಿನ್ನಾಭಿಪ್ರಾಯಗಳಿವೆ. ಆದರೆ, ಸಮಯ ಬಂದಾಗ ಈ ದೇಶಕ್ಕೆ ಕನಿಷ್ಠ ಹಾನಿ ಉಂಟುಮಾಡುವ ಮಾರ್ಗವನ್ನು ಆರಿಸಿಕೊಳ್ಳುವೆ ಎಂದು ಹಿಂದೊಮ್ಮೆ ನಾನು ಅವರಿಗೆ ಮಾತು ಕೊಟ್ಟಿದ್ದೆ. ಈಗ ಬೌದ್ಧ ಮತವನ್ನು ಸ್ವೀಕರಿಸಿ ನನ್ನ ಮಾತನ್ನು ಉಳಿಸಿಕೊಂಡಿರುವೆ. ನಾನು ಬೌದ್ಧನಾಗುವುದರಿಂದ ಈ ದೇಶದ ಸಂಸ್ಕೃತಿ, ಚರಿತ್ರೆ ಹಾಗೂ ಪರಂಪರೆಗಳಿಗೆ ಯಾವುದೇ ಹಾನಿ ತಟ್ಟದಂತೆ ಸರ್ವವಿಧ ಎಚ್ಚರಿಕೆ ನಾನು ವಹಿಸಿದ್ದೇನೆ,’’ ಎಂದರು. ಅಂದರೆ, ಇಸ್ಲಾಂ ಹಾಗೂ ಕ್ರೈಸ್ತ ಮತಗಳಿಗೆ ಮತಾಂತರವಾಗುವುದರಿಂದ, ಅದರಲ್ಲೂ ಆಂತರಿಕ ಪ್ರಚೋದನೆಯಲ್ಲದೆ ಹೊರಗಿನ ಆಸೆ, ಆಮಿಷಗಳಿಗೆ ಒಳಗಾಗಿ ಸಾಮೂಹಿಕ ಮತಾಂತರಗೊಳ್ಳುವುದು ದೇಶಕ್ಕೆ ವಿರುದ್ಧವಾದದ್ದು ಎನ್ನುವುದು ಅಂಬೇಡ್ಕರರಿಗೂ ತಿಳಿದಿತ್ತು.
ಬಾಬಾ ಸಾಹೇಬರ ಈ ಮಾತು, ಈಗಿನ ಪೂರ್ವಾಂಚಲದ ಈಶಾನ್ಯ ರಾಜ್ಯಗಳಲ್ಲಿ ಢಾಳಾಗಿ ಕಾಣುತ್ತಿದೆ. ಮಿಷನರಿಗಳ ಒತ್ತಾಸೆಯ ಮೇರೆಗೇ ರಚನೆಯಾದ ನಾಗಾಲ್ಯಾಂಡ್‌ನ ಬಂಡುಕೋರರು ಅನೇಕ ಬಾರಿ ಭಾರತೀಯ ಸೇನೆಯೊಂದಿಗೆ ಕದನಕ್ಕಿಳಿದಿದ್ದಾರೆ. ಭಾರತದ ವಿಮಾನವನ್ನೇ ಹೊಡೆದುರುಳಿಸಿದ್ದಾರೆ. ಇಂತಹ ಅನೇಕ ಪುಂಡಾಟಿಕೆಗಳ ನಾಯಕನಾಗಿದ್ದ ಎ.ಜಡ್‌. ಫೀಜೊ ಒಂದು ದಿನ ದೇಶವನ್ನು ಬಿಟ್ಟು ಓಡಿಹೋದ. ಕೊನೆಗೆ ಆತನಿಗೆ ಆಶ್ರಯ ನೀಡಿದ್ದು ಹೆಸರಾಂತ ಕ್ರಿಶ್ಚಿಯನ್‌ ಮಿಷನರಿ ಮೈಕೆಲ್‌ ಸ್ಕಾಟ್‌. ಅನೇಕ ವರ್ಷಗಳ ಕಾಲ ನಾಗಾಲ್ಯಾಂಡ್‌ನಿಂದ ಮೇಘಾಲಯದ ಶಿಲ್ಲಾಂಗ್‌ಗೆ ಬರುವವರಿದ್ದರೆ, ‘‘ನಾನು ಭಾರತಕ್ಕೆ ಹೋಗುತ್ತಿದ್ದೇನೆ,’’ ಎನ್ನುವ ವಾತಾವರಣವಿತ್ತು.
ಮಹಾತ್ಮ ಗಾಂಧೀಜಿಯವರಾಗಲಿ, ಸ್ವಾಮಿ ವಿವೇಕಾನಂದರೇ ಆಗಲಿ ಏಸುಕ್ರಿಸ್ತನ ಬಗ್ಗೆ ಯಾವುದೇ ಅಹಿತಕರ ಭಾವನೆ ಹೊಂದಿರಲಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಬರುವ ಮಹಾಪುರುಷರು, ಉಪದೇಶಕಾರರಂತೆಯೇ ಭಾವಿಸಿದ್ದರು. ಆದರೆ ಗಾಂಧೀಜಿ ಹಾಗೂ ವೀವೇಕಾನಂದರಿಗೆ ಸಮಸ್ಯೆ ಇದ್ದದ್ದು ಕ್ರೈಸ್ತನ ಹೆಸರಿನಲ್ಲಿ ಮಿಷನರಿಗಳು ನಡೆಸುವ ಸಾಮೂಹಿಕ ಮತಾಂತರದ ಫ್ಯಾಕ್ಟರಿಗಳ ಬಗ್ಗೆ.
ಮತಾಂತರ ಮಾಡುವಾಗ ಅತ್ಯಂತ ಹೀನಾಮಾನವಾಗಿ ಹಿಂದೂ ಧರ್ಮವನ್ನು, ಧರ್ಮಗ್ರಂಥಗಳನ್ನು ಹೀಗಳೆಯಲಾಗುತ್ತದೆ. ಮುಖ್ಯವಾಗಿ ಇಲ್ಲಿನ ಮೂಢನಂಬಿಕೆಗಳತ್ತ ಬೊಟ್ಟುಮಾಡಲಾಗುತ್ತದೆ. ಎರಡನೆಯದಾಗಿ ಹಿಂದೂ ಧರ್ಮದ ಅಸ್ಪೃಶ್ಯತೆ ಆಚರಣೆಯನ್ನು ಮುಂದೆ ಮಾಡಲಾಗುತ್ತದೆ. ಮೂಢನಂಬಿಕೆ ಹಿಂದೂಗಳಲ್ಲಿ ಇದೆ, ಅದನ್ನು ತೊಡೆಯಬೇಕು. ಸತಿ ಪದ್ಧತಿಯಂತಹ ಹೀನಾಯ ಮೂಢನಂಬಿಕೆ ಇತ್ತು. ಅದನ್ನು ಭಾರತೀಯರೇ ತೊಡೆದುಹಾಕಿದರು. ಇನ್ನೂ ಅನೇಕ ಮೂಢನಂಬಿಕೆಗಳಿವೆ, ಅವುಗಳನ್ನೂ ತೊಡೆಯಬೇಕು. ಹಾಗಾದರೆ, ‘ಕ್ರೈಸ್ತ ಸುವಾರ್ತೆ ಕೂಟ’ ಎಂಬುದೂ ಸೇರಿ ಅನೇಕ ಹೆಸರುಗಳಲ್ಲಿ ಬೆನ್ನಿಹಿನ್‌ನಂಥವರು ಮಾಡಿದ್ದು, ಮಾಡುತ್ತಿರುವುದು ಏನನ್ನು? ಅಲ್ಲೊಬ್ಬ ಹೆಳವ ಇದ್ದಕ್ಕಿದ್ದಂತೆ ಕಾಲು ಬಂದು ಓಡಿಹೋಗುತ್ತಾನೆ, ಇಲ್ಲೊಬ್ಬ ಮೂಕ ಇದ್ದಕ್ಕಿದ್ದಂತೆ ಏಸುವಿನ ಹಾಡು ಹೇಳುತ್ತಾನೆ, ಸೊಂಟದ ಕೆಳಗೆ ಸ್ವಾಧೀನವೇ ಇಲ್ಲದವ ಬ್ರೇಕ್‌ ಡ್ಯಾನ್ಸ್‌ ಮಾಡುತ್ತಾನೆ. ಹಾಗಾದರೆ ಇದೆಲ್ಲ ಮೂಢನಂಬಿಕೆ ಎನ್ನಬೇಕೆ ಅಥವಾ ವೈಜ್ಞಾನಿಕತೆಯೇ?
ಹಿಂದೂವೊಬ್ಬ ಕ್ರೈಸ್ತನಾದ ಕೂಡಲೆ ಆತನ ಮಟ್ಟಿಗೆ ಅಸ್ಪ ೃಶ್ಯತೆ ಕೊನೆಗೊಳ್ಳಬೇಕು ಅಲ್ಲವೇ? ಹಾಗೆ ನೋಡಿದರೆ ಹಿಂದೂಗಳು ಆತನನ್ನು ಕ್ರೈಸ್ತ ಎಂದುಕೊಂಡು ಸುಮ್ಮನಾಗುತ್ತಾರೆ. ಆದರೆ ಕ್ರೈಸ್ತರಲ್ಲಿ ಆತ ಅಸ್ಪ ೃಶ್ಯನಾಗಿಯೇ ಇರುತ್ತಾನೆ. ಅಲ್ಲಿಗೆ ತೆರಳಿದ ನಂತರವೂ ಆತ ‘ದಲಿತ ಕ್ರೈಸ್ತ’ನಾಗಿಯೇ ಮೇಲುಕೀಳು ವರ್ತನೆಗೆ ಬಲಿಯಾಗುತ್ತಾನೆ. ಚರ್ಚುಗಳಲ್ಲಿ ತಮಗೆ ಸಮಾನ ಸ್ಥಾನಮಾನವಿಲ್ಲ, ಉನ್ನತ ಅಧಿಕಾರಿಗಳ ಹಂತದಲ್ಲಿ ಪ್ರವೇಶವಿಲ್ಲ ಎಂದು ಅನೇಕರು ಬಹಿರಂಗಪಡಿಸಿದ್ದಾರೆ. 2016ರಲ್ಲಿ ಕ್ರೈಸ್ತ ಸಮುದಾಯದ ಉನ್ನತ ಸಮಿತಿಯಾದ ಕ್ಯಾಥೊಲಿಕ್‌ ಬಿಷಫ್ಸ್‌ ಕಾನಧಿರೆನ್ಸ್‌ ಆಫ್‌ ಇಂಡಿಯಾದಲ್ಲಿ 44 ಪುಟದ ವರದಿಯೊಂದನ್ನು ಬಿಡುಗಡೆ ಮಾಡಿ, ದಲಿತ ಕ್ರೈಸ್ತರನ್ನು ಅಸ್ಪೃಶ್ಯರಾಗಿ ನಡೆಸಿಕೊಳ್ಳಲಾಗುತ್ತಿದೆ, ಉನ್ನತ ಹುದ್ದೆಗಳಲ್ಲಿ ಅವರು ಯಾರೂ ಇಲ್ಲ ಎಂದು ವಿಸ್ತೃತವಾಗಿ ತಿಳಿಸಲಾಗಿತ್ತು. ತಮ್ಮ ಮೇಲೆ ಚರ್ಚುಗಳಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಅನೇಕ ಬಾರಿ ಪ್ರತಿಭಟನೆಗಳೂ ನಡೆದಿವೆ.
ಕ್ರೈಸ್ತ ಮತದಲ್ಲಿ ರೋಮನ್‌ ಕೆಥೋಲಿಕ್‌, ಈಸ್ಟರ್ನ್‌ ಆರ್ಥೊಡಾಕ್ಸ್‌ ಹಾಗೂ ಪ್ರಾಟೆಸ್ಟಂಟ್‌ ಪಂಥಗಳು ಹುಟ್ಟಿದ್ದೆ ನಂಬಿಕೆ-ಮೂಢನಂಬಿಕೆಯ ಆಧಾರದ ಮೇಲೆ. ಕೆಥೊಲಿಕರು ವಿಗ್ರಹವನ್ನು ನಂಬಿದರೆ, ಆರ್ಥೊಡಾಕ್ಸ್‌ ಗಳಿಗೆ ಶಿಲುಬೆ ಮಾತ್ರ ಸ್ವೀಕಾರಾರ್ಹ. ಈ ಎರಡು ಪಂಥಗಳು ಸುಧಾರಣೆಯಾಗಬೇಕು ಎಂದು ಹುಟ್ಟಿದ್ದು ಪ್ರೊಟೆಸ್ಟೆಂಟ್‌ ಗುಂಪು.
ಇನ್ನು, ಇಸ್ಲಾಂನಲ್ಲಿನ ಶಿಯಾ-ಸುನ್ನಿಗಳ ನಡುವಿನ ಶ್ರೇಷ್ಠತೆಯ ಮಾನಸಿಕತೆಯು ಅನೇಕ ಯುದ್ಧಗಳಿಗೆ ಕಾರಣವಾಗಿದೆ, ರಕ್ತಪಾತವೇ ನಡೆಯುತ್ತಿದೆ. ಕ್ರೈಸ್ತ ಮತ್ತು ಇಸ್ಲಾಂ ಒಳಪಂಗಡಗಳ ನಡುವೆಯೇ ಕೊಡು-ಕೊಳ್ಳುವಿಕೆ ಇಲ್ಲದಂತೆ ಗೋಡೆಗಳು ಬಲವಾಗಿವೆ. ಈ ಮೇಲಿನ ಮಾತುಗಳನ್ನು ಕ್ರೈಸ್ತರ ವಿರುದ್ಧ ಅಥವಾ ಇಸ್ಲಾಂ ವಿರುದ್ಧ ಎಂದು ಭಾವಿಸಬಾರದು. ಅಸ್ಪೃಶ್ಯತೆ, ಅವ್ಯವಸ್ಥೆ, ಮೂಢನಂಬಿಕೆಗಳು ಹಿಂದೂ, ಇಸ್ಲಾಂ, ಕ್ರೈಸ್ತ ಎಂಬ ಭೇದವಿಲ್ಲದೆ ಎಲ್ಲ ಮತ ನಂಬಿಕೆಗಳಲ್ಲೂ ಇದೆ. ಅವುಗಳನ್ನು ತೊಡೆಯಲು ಹೊರಗಿನವರಿಗಿಂತಲೂ ಅತ್ಯಂತ ಸೂಕ್ತ ವ್ಯಕ್ತಿಗಳು ಎಂದರೆ ಆಯಾ ವ್ಯವಸ್ಥೆಯ ಒಳಗಿರುವವರೆ. ಈ ನಿಟ್ಟಿನಲ್ಲಿ ವಿಶ್ವದ ಎಲ್ಲ ನಂಬಿಕೆಗಳಿಗಿಂತಲೂ ಹಿಂದೂ ಧರ್ಮ ಒಂದು ಹೆಜ್ಜೆ ಮುಂದೆ ಇದೆ. ಪ್ರಸಕ್ತ ಮತಾಂತರ ತಡೆ ಕಾಯಿದೆ, ಚರ್ಚೆಗಳನ್ನು ಎಲ್ಲರೂ ಈ ಹಿನ್ನೆಲೆಯಲ್ಲಿ ನೋಡಬೇಕಿದೆ.
ಕಡೆಯದಾಗಿ ನಮಗೆಲ್ಲಾ ಗೊತ್ತೇ ಇರುವ ವಿವೇಕಾನಂದರ ಇನ್ನೊಂದು ಪ್ರಸಿದ್ಧ ಮಾತನ್ನು ನೆನಪು ಮಾಡಿಕೊಳ್ಳೋಣ: ಪ್ರಪಂಚದ ಯಾವ ಧರ್ಮವೂ ಹಿಂದೂ ಧರ್ಮದಷ್ಟು ಭವ್ಯವಾಣಿಯಲ್ಲಿ ಮನುಷ್ಯತ್ವದ ಘನತೆ ಗೌರವಗಳ ಬಗ್ಗೆ ಬೋಧನೆ ಮಾಡಿಲ್ಲ. ಅಂತೆಯೇ, ಪ್ರಪಂಚದ ಯಾವ ಧರ್ಮವೂ ದೀನ ದಲಿತರ ಕುತ್ತಿಗೆಯನ್ನು ಹಿಂದೂ ಧರ್ಮದಷ್ಟು ಕ್ರೂರವಾಗಿ ತುಳಿದಿಲ್ಲ. ತಪ್ಪು ಹಿಂದೂ ಧರ್ಮದ್ದಲ್ಲ. ಅಲ್ಲಿರುವ ಸಂಪ್ರದಾಯವಾದಿಗಳದ್ದು !

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top