ವಿಗ್ರಹ ಭಂಜನೆಯಲ್ಲ, ಜನಪ್ರೀತಿಯ ಹೊಸ ವಿಗ್ರಹ ನಿರ್ಮಿಸಿ

ಆಧುನಿಕ ಭಾರತ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಸೂಚಿಸುವ ಅಜೆಂಡಾ ಬೇಕು

ಶ್ರೀಕೃಷ್ಣನ ಜನ್ಮಭೂಮಿ ಮಥುರಾದಲ್ಲೂ ಅಯೋಧ್ಯೆಯ ಮಾದರಿಯಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಅಧಿಕೃತವಾಗಿಯೇ ಟ್ವೀಟ್‌ ಮೂಲಕ ಘೋಷಣೆ ಮಾಡಿದ್ದಾರೆ. ಅಯೋಧ್ಯೆ ಬಳಿಕ ಮಥುರಾದೆಡೆಗೆ ನಮ್ಮ ಪಯಣ ಎಂದು ಸಂಘ-ಪರಿವಾರ ಮೊದಲಿನಿಂದಲೂ ಹೇಳುತ್ತಲೇ ಇದೆ. ಆದರೆ, ಉತ್ತರ ಪ್ರದೇಶ ಸರಕಾರದಲ್ಲಿ ಅಧಿಕೃತ ಹೊಣೆ ಹೊಂದಿರುವ ಒಬ್ಬ ಜವಾಬ್ದಾರಿಯುತ ಮಂತ್ರಿಯೇ ಇಂಥದ್ದೊಂದು ಹೇಳಿಕೆ ನೀಡಿರುವುದು ವಿಶೇಷ.
ಪರಿಣಾಮ, ಜಗತ್ತಿಗೆ ಜೀವನ ಸಂದೇಶ ಬೋಧನೆ ಮಾಡಿದ ಭಗವದ್ಗೀತೆಯ ಭಗವಾನ್‌ ಶ್ರೀಕೃಷ್ಣನ ಜನ್ಮಸ್ಥಾನದಲ್ಲಿ ರೆಡ್‌ ಅಲರ್ಟ್‌ ಘೋಷಣೆ ಆಗಿದೆ. ಮಥುರಾದಲ್ಲಿ ಶ್ರೀಕೃಷ್ಣ ಜನಿಸಿದ ಸ್ಥಳ ಎಂದು ಆಸ್ತಿಕರು ನಂಬಿರುವ ಜಾಗಕ್ಕೆ ಹೊಂದಿ­ಕೊಂಡಂತೆಯೇ ಶಾಹಿ ಈದ್ಗಾ ಮಸೀದಿಯೂ ಇದೆ. ಮಸೀದಿ­ಯನ್ನು ಅಕ್ರಮವಾಗಿ 17ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನುವುದು ಕೆಲವರ ವಾದ. ಈ ಮಸೀದಿಯನ್ನು ತೆರವುಗೊಳಿಸಬೇಕು ಎಂದು 2020ರಲ್ಲೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಕೋರ್ಟ್‌ ಅರ್ಜಿಯನ್ನು ತಿರಸ್ಕರಿಸಿತು. ನಂತರ, ಮತ್ತೊಂದು ಮನವಿ ಆಧಾರದ ಮೇಲೆ ಅರ್ಜಿಯನ್ನು ವಿಚಾರಣೆಗಾಗಿ ನ್ಯಾಯಾಲಯ ಕೈಗೆತ್ತಿ­ಕೊಂಡಿದೆ. ಇದರ ನಡುವೆ, ಶ್ರೀಕೃಷ್ಣ ಜನ್ಮಸ್ಥಾನ ಇರುವ ಸಂಕೀರ್ಣದಲ್ಲಿ 2021ರ ಡಿಸೆಂಬರ್‌ 6ರಂದು ಪ್ರತಿಮೆ­ಯೊಂದನ್ನು ಪ್ರತಿಷ್ಠಾಪಿಸುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಘೋಷಣೆ ಮಾಡಿತ್ತು. ಆದರೆ, ಅಲ್ಲಿನ ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡಿಲ್ಲ. ಬದಲಿಗೆ ದೇವಾಲಯದ ಸುತ್ತಲಿನ ಪ್ರದೇಶವನ್ನು ಸೂಕ್ಷ ್ಮ ಎಂದು ಪರಿಗಣಿಸಿ, ಕಣ್ಗಾವಲು ಇಟ್ಟಿದೆ. ಯಾಕೆ ಹೀಗೆ? ಸಾಂಸ್ಕೃತಿಕ ಹಾಗೂ ಸಾತ್ವಿಕ ಕೇಂದ್ರಗಳೂ ಆದ ಮಂದಿರಗಳ ನಿರ್ಮಾಣ ಎಂಬುದು ಯಾಕೆ ಎಲ್ಲರನ್ನೂ ತುದಿಗಾಲಿನಲ್ಲಿ ನಿಲ್ಲಿಸುತ್ತವೆ? ಹೀಗೆ ಯೋಚಿಸಿದ ತಕ್ಷ ಣ ನೆನಪಾಗುವುದು ಡಿಸೆಂಬರ್‌ 6ರ ಅಯೋಧ್ಯಾ ಕರಸೇವೆ. 1992ನೇ ಇಸ್ವಿಯ ಆ ದಿನ ಲಕ್ಷಾಂತರ ಕರಸೇವಕರು ತಮ್ಮ ಕೈಗಳಿಂದಲೇ, ಅಯೋಧ್ಯೆಯಲ್ಲಿದ್ದ ವಿವಾದಿತ ಕಟ್ಟಡವನ್ನು ನೆಲಸಮ ಮಾಡಿದರು. ಇದಾದ ಬಳಿಕ ದೇಶದ ರಾಜಕೀಯ ಹಾಗೂ ಸಾಮಾಜಿಕ ಚಿತ್ರಣವೇ ಬದಲಾಯಿತು.
ಅಲ್ಲಿಯವರೆಗೂ ಸಮಾಜದ ಕೆಲ ಸಮುದಾಯಗಳಿಗೆ ಸೀಮಿತವಾಗಿದ್ದ, ನಗರವಾಸಿಗಳಷ್ಟೇ ಬೆಂಬಲಿಸುವ ರಾಜಕೀಯ ಪಕ್ಷ ಎಂದೇ ಖ್ಯಾತಿ ಪಡೆದಿದ್ದ ಭಾರತೀಯ ಜನತಾ ಪಾರ್ಟಿ, ಆಯೋಧ್ಯೆ ಘಟನೆ ಬಳಿಕ ಇದ್ದಕ್ಕಿದ್ದಂತೆ ದೇಶವ್ಯಾಪಿ ವಿಸ್ತರಿಸಿತು. ಆನಂತರ ಮಂದಿರದ ಹೆಸರಿನಲ್ಲಿ ನಡೆದ ಸಾಲು­ಸಾಲು ರಥಯಾತ್ರೆಗಳು ಆ ಪಕ್ಷ ವನ್ನು ಸದೃಢಗೊಳಿಸಿದವು. ರಾಷ್ಟ್ರೀಯತೆ ಎಂಬುದು ರಾಜಕೀಯ ಸ್ವರೂಪದಲ್ಲಿ ಉದ್ದೀಪನ­ಗೊಂಡಿತು. ಕಾಂಗ್ರೆಸ್‌ ಸೇರಿದಂತೆ ಅನೇಕ ರಾಜಕೀಯ ಪಕ್ಷ ಗಳು ಧೂಳೀಪಟವಾದವು. ಹಿಂದೂ ಧರ್ಮದಲ್ಲಿರುವ ಅಸಮಾನತೆ, ಶ್ರೇಣಿಕೃತ ವ್ಯವಸ್ಥೆ, ಜಾತಿಯ ತಾರತಮ್ಯ ಸೇರಿದಂತೆ ಅನೇಕ ದೋಷ-ಕೊರತೆಗಳ ನಡುವೆಯೇ, ಹಿಂದೂಗಳು ಒಗ್ಗೂಡಿದರು. ಮತ ಧರ್ಮದ ನೆಲೆಯಲ್ಲಿ ಧ್ರುವೀಕರಣವೂ ಸಾಧ್ಯವಾಯಿತು.
ವಿಶೇಷವಾಗಿ ತಾವು ಜಾತ್ಯತೀತ ಎಂದು ಹೇಳಿಕೊಂಡು ಬರುತ್ತಿದ್ದ ರಾಜಕೀಯ ಪಕ್ಷ ಗಳನ್ನು ಜನ ಅನುಮಾನಿಸಿದರು. ಜಾತ್ಯತೀತ ಎಂಬ ನೀತಿಯನ್ನು ಈ ರಾಜಕೀಯ ಪಕ್ಷ ಗಳು ತಪ್ಪಾಗಿ ಅಥೈರ್‍ಸಿಕೊಂಡು ಇಲ್ಲವೇ ಅವರು ಹೇಳುವ ಜಾತ್ಯತೀತ ತತ್ತ್ವವನ್ನು ಯಥಾವತ್ತಾಗಿ ಪಾಲಿಸುತ್ತಿಲ್ಲ ಎಂದೇ ಬಹುಸಂಖ್ಯಾತರು ಭಾವಿಸಿದರು. ಜಾತ್ಯತೀತತೆಯ ಸೋಗಿನಲ್ಲಿ ಕೆಲವು ಪಕ್ಷ ಗಳು ಇದುವರೆಗೂ ತಮ್ಮನ್ನು ವಂಚಿಸುತ್ತಿದ್ದವು ಎಂಬ ಸಂಗತಿ ಬಹುಸಂಖ್ಯಾತರಿಗೆ ಮನವರಿಕೆಯಾಯಿತು.
ಹೀಗಾಗಿಯೇ ಏನೋ, ಬಹುಶಃ ಅನೇಕ ರಾಜಕೀಯ ಪಕ್ಷ ಗಳು ಇನ್ನೂ ಜಾತ್ಯತೀತತೆಯ ನಿಜವಾದ ನೆಲೆಗೆ ಬರಲು ಹೆಣಗಾಡುತ್ತಲೇ ಇವೆ. 2-3 ದಶಕದಿಂದ ಮುನ್ನೆಲೆಗೆ ಬಂದಿರುವ ನವ ರಾಷ್ಟ್ರೀಯತೆಗೆ ಹೊಂದಿಕೊಳ್ಳಲು ಪ್ರಯಾಸ ಪಡುತ್ತಿವೆ.
ಹಾಗಾದರೆ ಜಾತ್ಯತೀತತೆ ಎಂಬುದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಮತ ಧರ್ಮ ನಿರಪೇಕ್ಷ ತೆಯೇ ಜಾತ್ಯತೀ­ತವೇ? ಅಥವಾ ಎಲ್ಲ ಮತ ಧರ್ಮಗಳನ್ನು ಹಾಗೂ ಅವುಗಳ ನಂಬಿಕೆ, ಆಚರಣೆಗಳನ್ನು ಒಳಗೊಳ್ಳುವುದು, ಗೌರವಿಸುವುದು ನೈಜ ಜಾತ್ಯತೀತವೇ? ಈ ಪ್ರಶ್ನೆ ಮೊದಲಿನಿಂದಲೂ ಇದೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಸೇರಿದಂತೆ ಭಾರತದ ಎಲ್ಲ ಧರ್ಮದಲ್ಲೂ ಇರುವ ಜನಸಂಖ್ಯೆಯಲ್ಲಿ ಶೇ.95ರಷ್ಟು ಜನ ಆಸ್ತಿಕರೇ ಇರುತ್ತಾರಂತೆ. ಇವರು ದೇವರು, ಧರ್ಮ ಕುರಿತು ಶ್ರದ್ಧೆ ಹೊಂದಿರುತ್ತಾರೆ. ಇಂಥ ಜನರಿರುವ ದೇಶದ ಸರಕಾರ, ಎಲ್ಲ ನಂಬಿಕೆಗಳಿಂದ ದೂರ ಇದ್ದು ಕೆಲಸ ಮಾಡುತ್ತೇನೆ ಎನ್ನುವುದು ಅವಾಸ್ತವ. ದೇವರನ್ನು ನಂಬದ ನಾಸ್ತಿಕರು ಸೇರಿದಂತೆ ಎಲ್ಲರನ್ನೂ ಒಳಗೊಳ್ಳುವುದೇ ನಿಜವಾದ ಜಾತ್ಯತೀತತೆ. ಕೆಲವರು ಜಾತ್ಯತೀತತೆಯನ್ನು ಸಹನಾ ಧರ್ಮ ಎಂದೂ ವ್ಯಾಖ್ಯಾನಿಸಿ­ದ್ದಾರೆ. ಈ ಹಿನ್ನೆಲೆಯಲ್ಲಿ ಜನರ ಭಾವನೆಗಳಿಗೆ ಅನುಗುಣವಾಗಿ ರಾಜಕಾರಣ ಇರಬೇಕು ಎನ್ನುವುದು ಸರಿ.
ಆದರೆ, ಯಾವುದೇ ಮಂದಿರಗಳನ್ನು ಕಟ್ಟುವ ಕ್ರಿಯೆಯ ಸಂದರ್ಭದಲ್ಲಿ ಕೇಳಲೇಬೇಕಾದ ಅತಿಪ್ರಮುಖ ಪ್ರಶ್ನೆ­ಯೊಂದಿದೆ. ಅದು- ಮಂದಿರ ಕಟ್ಟಬೇಕು ಎಂಬ ಧಾರ್ಮಿಕ ಭಾವನೆಗಳನ್ನು ರಾಜಕೀಯ ಪಕ್ಷ ಗಳು ಚುನಾವಣೆಯ ಅಜೆಂಡಾವಾಗಿಸುವುದು ಎಷ್ಟು ಸರಿ? ಇಂಥವೆಲ್ಲಾ ವಿಚಾರವಾದರೆ ದೇಶ ಮುಂದುವರಿಯುವುದು ಹೇಗೆ?
ಈ ನಡುವೆ, ಅದೇ ಉತ್ತರ ಪ್ರದೇಶದಲ್ಲಿರುವ ಕಾಶಿ ವಿಶ್ವನಾಥನ ದೇವಸ್ಥಾನವೂ ಈಗ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿದೆ. ಆದರೆ, ಬಿಜೆಪಿಗೂ ನೆನಪಿರಲಿ, ನಾಲ್ಕು ನೂರು ವರ್ಷಗಳಿಂದ ನಡೆಯುತ್ತಿದ್ದ ರಾಮಜನ್ಮಭೂಮಿ ವಿವಾದ ಈಗ ವಿವಾದವಾಗಿ ಉಳಿದಿಲ್ಲ. ಮಂದಿರ ನಿರ್ಮಾಣ ಶುರುವಾಗುತ್ತಿ­ದ್ದಂತೆಯೇ, ವಿವಾದ ಸಮಾಪನಗೊಂಡಿದೆ. ಒಂದು ಸಮಸ್ಯೆ ಬಗೆಹರಿದಿದೆ ಎಂದ ಕೂಡಲೆ ಅಲ್ಲಿ ರಾಜಕಾರಣಕ್ಕೆ ಕೆಲಸ ಇರುವುದಿಲ್ಲ. ಹಾಗಾಗಿ ಹೊಸ ವಿವಾದಗಳತ್ತ ಬಿಜೆಪಿ ನೋಟ ಬೀರಿದೆ.
ಇಷ್ಟು ವರ್ಷ ಭೂಗತವಾಗಿದ್ದ ಮಥುರಾ, ಕಾಶಿ ದೇವಸ್ಥಾನ ಮರುನಿರ್ಮಾಣ ವಿಚಾರಗಳು ಇದ್ದಕ್ಕಿದ್ದಂತೆಯೇ ಅನುರಣಿ­ಸುತ್ತಿರು­ವುದೇಕೆ? ಚುನಾವಣೆಗಳ ಸಂದರ್ಭದಲ್ಲಿ ಸಾಂಸ್ಕೃತಿಕ, ಧಾರ್ಮಿಕ ವಿಚಾರಗಳನ್ನೇ ಮುಂದು ಮಾಡಿ ಮತ ಕೇಳುವುದು ಅಭಿವೃದ್ಧಿ ರಾಜಕಾರಣ ಎಂದು ಹೇಳಿಸಿಕೊಳ್ಳುವುದಾದರೂ ಹೇಗೆ? 2014, 2019ರ ಲೋಕಸಭೆ ಚುನಾವಣೆ ಕೇವಲ ಅಭಿವೃದ್ಧಿ, ಭ್ರಷ್ಟಾಚಾರರಹಿತ ಆಡಳಿತದ ಅಜೆಂಡಾದ ಮೇಲೆ ನಡೆದದ್ದು ಎಂಬುದನ್ನು ಅರಿತರೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ. ಧರ್ಮ, ಸಂಸ್ಕೃತಿಯ ಕುರಿತು ರಾಜಕಾರಣ ನಡೆಯಬೇಕು. ರಾಜಕೀಯ ಪಕ್ಷ ಗಳೂ ತಾ ಮುಂದು ನಾ ಮುಂದು ಎಂಬಂತೆ ಸಂಸ್ಕೃತಿಯ ರಕ್ಷ ಣೆಗೆ ಪ್ರಯಾಸ ಪಡಬೇಕು. ಆದರೆ ಚುನಾವಣೆ ಸಂದರ್ಭ ಭಾವನೆಗಳನ್ನು ಕೆರಳಿಸುವುದರ ಮೂಲಕ ಅಲ್ಲ. ತಮ್ಮ ಸೈದ್ಧಾಂತಿಕ ಹಿನ್ನೆಲೆಯನ್ನು ವಿಸ್ತರಿಸಿಕೊಳ್ಳಲು, ಮತಗಳಿಕೆಯ ಆಸೆಯಿಂದ ಎದುರಾಳಿಗಳ ಮೂರ್ತಿ ಭಂಜನೆಯ ಕೆಲಸವನ್ನು ಬಿಡಬೇಕು.
ಅಯೋಧ್ಯೆಯ ರಾಮ, ಮಥುರೆಯ ಕೃಷ್ಣ, ವಾರಾಣಸಿಯ ವಿಶ್ವನಾಥನ ಬೆನ್ನಲ್ಲಿಯೇ ನನಗೆ ಈ ಹೊತ್ತಿಗೆ ನೆನಪಾಗುತ್ತಿರು­ವುದು ನಮ್ಮ ರಾಜಕೀಯ ವಾಗ್ವಾದಗಳು-ಸಂವಾದಗಳು ಹಾಗೂ ಅವುಗಳ ರೀತಿ-ನೀತಿ. ಇದು ಭಯಂಕರವಾಗಿದೆ.
ಇಲ್ಲಿಯೂ ನಡೆಯುತ್ತಿರುವುದು ಮೂರ್ತಿ ಭಂಜನೆಯೇ. ಅದನ್ನು ಇನ್ನಷ್ಟು ವಿಸ್ತರಿಸುವೆ. ಇಂಗ್ಲಿಷಿನ Atavistic ಎಂಬ ಗುಣವಾಚಕದ ಅರ್ಥ ಪ್ರಪೂರ್ವಜ ಸದೃಶ. ಅಂದರೆ, ಹಿಂದಿನ ಕಾಲದಲ್ಲಿ ಇದ್ದದ್ದೆಲ್ಲ ಒಳ್ಳೆಯದು ಎನ್ನುತ್ತ, ಈಗಿನ ಎಲ್ಲದನ್ನೂ ಹಿಂದಿನ ಕಾಲದಂತೆಯೇ ಬದಲಾಯಿಸಲು ಮುಂದಾಗುವ ಕ್ರಿಯೆ. ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಮಾನವನ ಚಟುವಟಿಕೆ, ಬುದ್ಧಿಶಕ್ತಿ ಮುನ್ನಡೆಯದೆ ಹಿಂದಕ್ಕೆ ಚಲಿಸಿದರೆ ಅದು ಜೀವವಿಕಾಸಕ್ಕೆ ಮಾಡುವ ಅಪಚಾರ. ಹಾಗೆಂದು ಹಳೆಯದೆಲ್ಲವೂ ತಪ್ಪು ಎಂದು ತಿಳಿದು ದಾರಿ ತಪ್ಪುವುದೂ ವಿಕಾಸ ಆಗುವುದಿಲ್ಲ. ಡಿವಿಜಿ ಮಾತಿನಂತೆ ಹಳೆಬೇರು, ಹೊಸ ಚಿಗುರನ್ನು ಹೊತ್ತು ನಡೆಯಬೇಕು.
ಆದರೆ ಈಗಿನ ರಾಜಕಾರಣ ಅಂತಹ ಪ್ರಪೂರ್ವಜ ಸದೃಶದತ್ತ ಹೆಚ್ಚು ಒಲವು ತೋರುತ್ತಿದೆ ಎನ್ನಿಸುತ್ತದೆ. ಸ್ವಾತಂತ್ರ್ಯಾನಂತರ ದೇಶವನ್ನು ಆಳಿದ ನೆಹರೂ ಕುಟುಂಬವನ್ನೇ ನವ ರಾಜಮನೆತನದಂತೆ ಬಿಂಬಿಸಲಾಯಿತು. ಸಣ್ಣ ಹಳ್ಳಿಯಿಂದ ಮೊದಲುಗೊಂಡು ವಿಶ್ವವಿದ್ಯಾಲಯಗಳು, ಪ್ರತಿಷ್ಠಿತ ಪ್ರಶಸ್ತಿಗಳಿಗೂ ನೆಹರೂ, ಇಂದಿರಾ, ರಾಜೀವ್‌ ಮುಂತಾದ ಹೆಸರುಗಳನ್ನು ಇಡಲಾಯಿತು. ಇದೊಂದು ಅತಿರೇಕ. ದೇಶದ ಸ್ವಾತಂತ್ರ್ಯದಲ್ಲಿ ಮಹಾತ್ಮಾ ಗಾಂಧೀಜಿಯವರಷ್ಟೆ ಅನೇಕರು ಪಾತ್ರ ವಹಿಸಿರುವಂತೆಯೇ ಸ್ವಾತಂತ್ರ್ಯಾನಂತರದಲ್ಲೂ ಅನೇಕರ ಕೊಡುಗೆ ಇದೆ. ಅದು ಬೇರೆ ಪಕ್ಷ , ಸಿದ್ಧಾಂತಗಳವರಲ್ಲದೆ, ಸ್ವತಃ ಕಾಂಗ್ರೆಸಿಗರೇ ಆದ ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಲಾಲ್‌ ಬಹದ್ದೂರ್‌ ಶಾಸ್ತ್ರಿಯಿಂದ ಆರಂಭಿಸಿ ಪ್ರಣಬ್‌ ಮುಖರ್ಜಿವರೆಗೆ ಉದ್ದ ಪಟ್ಟಿಯೇ ಸಿಗುತ್ತದೆ. ಒಂದೇ ಕುಟುಂಬದ ಹಿಂದೆ ಗಿರಕಿ ಹೊಡೆಯುವ ಈ ರಾಜಕಾರಣದ ದಿಕ್ಕನ್ನು ಬದಲಾಯಿಸಬೇಕು ಎಂದು ಬಿಜೆಪಿ ಸರಕಾರಕ್ಕೆ ಅನಿಸಿದೆ. ಇದು ತಪ್ಪಲ್ಲ. ಆದರೆ, ಈ ತಪ್ಪು ಸರಿಪಡಿಸಲು ಅದು ಆಯ್ಕೆ ಮಾಡಿಕೊಂಡಿರುವ ವಿಧಾನ ಮಾತ್ರ ಪ್ರಶ್ನಾರ್ಹ. ನೆಹರೂ, ರಾಜೀವ್‌, ಇಂದಿರಾ ಹೆಸರಿರುವ ಯೋಜನೆ, ವಿಶ್ವವಿದ್ಯಾಲಯಗಳು, ಪ್ರಶಸ್ತಿಗಳ ಹೆಸರನ್ನು ಬದಲಾಯಿಸಿಕೊಂಡು ಬರಲು ಬಿಜೆಪಿ ಹೊರಟಿದೆ. ಇದು ಶುದ್ಧ ಪ್ರಪೂರ್ವಜ ಸದೃಶ ಎನ್ನಬಹುದು. ಕಾಂಗ್ರೆಸಿಗರ ಹೆಸರನ್ನು ಬದಲಾಯಿಸಿ ಬಿಜೆಪಿಯ ಅಥವಾ ಜನಸಂಘದವರ ಹೆಸರು ಇಟ್ಟ ಕೂಡಲೆ ಇತಿಹಾಸ ಬದಲಾಗುತ್ತದೆಯೇ? ಸಂಸ್ಥೆಯ ಹೆಸರು ಬದಲಾದ ಕೂಡಲೇ ಅದರ ಕಾರ್ಯಚಟುವಟಿಕೆಯಲ್ಲಿ ಸುಧಾರಣೆ ಆಗುತ್ತದೆಯೇ? ಪ್ರಜಾಪ್ರಭುತ್ವ ದೇಶದಲ್ಲಿ ಇಂದಿರುವ ಸರಕಾರ ನಾಳೆ ಬದಲಾಗುತ್ತದೆ, ಅವರಿಗೂ ಹೆಸರು ಬದಲಾಯಿಸುವ ಅಧಿಕಾರ ಇರುತ್ತದೆ. ಮತ್ತೆ ಹಳೆಯ ಹೆಸರನ್ನೇ ಇಟ್ಟರೆ, ಇಂತಹ ‘ತುಘಲಕ್‌ ದರ್ಬಾರ್‌’ಗೆ ಕೊನೆ ಇರುತ್ತದೆಯೇ? ಇಡೀ ಪ್ರಜಾಪ್ರಭುತ್ವವೇ ಒಂದು ವಿಡಂಬನೆ ಆಗುವುದಿಲ್ಲವೇ?
ಇತಿಹಾಸದಲ್ಲಿ ಕೆಲವರನ್ನು ಅಗತ್ಯಕ್ಕಿಂತ ಹೆಚ್ಚು ವೈಭವೀಕರಿಸಲಾಗಿದೆ ಎಂದು ಅನ್ನಿಸಿದರೆ, ಅವರಿಗೆ ಪರ್ಯಾಯವಾಗಿ ನಿಲ್ಲಬಲ್ಲ ವ್ಯಕ್ತಿತ್ವಗಳನ್ನು ಜನರ ಮುಂದಿಡಬೇಕು. ಅದು ವಿಶ್ವವಿದ್ಯಾಲಯಗಳಲ್ಲಿ ಸೆಮಿನಾರುಗಳ ಮೂಲಕ, ಪುಸ್ತಕಗಳ ಮೂಲ, ಲೇಖನಗಳಲ್ಲಿ ಆಗಬಹುದು. ಅವರು ಪ್ರತಿಪಾದಿಸುತ್ತಿದ್ದ ಸಿದ್ಧಾಂತ, ಸಾಮಾಜಿಕ ಕಳಕಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಿ ಅವರ ಹೆಸರನ್ನು ನಾಮಕರಣ ಮಾಡಲಿ. ಆದರೆ ಈಗ ನಡೆಯುತ್ತಿರುವುದು ಮೂರ್ತಿ ಭಂಜನೆಯ ಕೆಲಸ. ಹೊಸ ಪ್ರತಿಮೆಗಳನ್ನು ನಿರ್ಮಾಣ ಮಾಡುವ ಬದಲಿಗೆ ಈಗ ಮೂರ್ತಿ ಭಂಜನೆಯ ಕೆಲಸ ಭರದಿಂದ ಸಾಗಿದೆ.
ಬಿಜೆಪಿಯವರು ಮಾತೆತ್ತಿದರೆ ದೇಶದ ಎಲ್ಲ ಸಮಸ್ಯೆಗಳಿಗೆ ನೆಹರೂ ಕಾರಣ ಎನ್ನುತ್ತಾರೆ. ಕೈಗಾರಿಕೆಗಳು, ಮೂಲ ಸೌಕರ್ಯಗಳು, ಉನ್ನತ ಶಿಕ್ಷ ಣ ಸಂಸ್ಥೆಗಳನ್ನು ಕಟ್ಟಿದ ನೆಹರು ಅವರನ್ನು ಮರೆಯುತ್ತಾರೆ. ದೇಶದ ಎಲ್ಲ ಸಮಸ್ಯೆಗೂ ಅವರೇ ಕಾರಣ ಎಂದು ದೂರುತ್ತಾರೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಇಷ್ಟು ವರ್ಷ ನಡೆದು ಬಂದಿರುವುದರಲ್ಲಿ ಅವರ ಕೊಡುಗೆಯೂ ಇದೆ. ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಗಳಿಗೆ ಕಾಂಗ್ರೆಸ್‌ ಸರಕಾರಗಳು ಕಾರಣ ತಾನೆ? ಈಗಿನ ಸರಕಾರ ಬಂದ ಕೂಡಲೆ ದೇಶಾದ್ಯಂತ ಡಿಬಿಟಿ, ಆಧಾರ್‌ ಮುಂತಾದ ಯೋಜನೆ ಮಾಡಲು ಮೂಲಭೂತ ಅಂಶಗಳ ಅಡಿಪಾಯ ಹಿಂದಿನ ಮನಮೋಹನ ಸಿಂಗ್‌ ನೇತೃತ್ವದ ಯುಪಿಎ ಸರಕಾರದಲ್ಲಿ ಆಗಿತ್ತು. ಹೌದಲ್ಲವೇ? ಇದನ್ನು ಮರೆಯಬಾರದು.
ಇನ್ನು, ಮುಸ್ಲಿಂ ತುಷ್ಟೀಕರಣದ ಹಿನ್ನೆಲೆಯಲ್ಲಿ ಮಹಾತ್ಮಾ ಗಾಂಧೀಜಿಯವರನ್ನು ಆಗಾಗ ಚರ್ಚೆಗೆ ಎಳೆದು ತರುವುದನ್ನು ಕಾಣುತ್ತೇವೆ. ವ್ಯಕ್ತಿಗಳು ನಡೆಯುವಾಗ ಎಡವುತ್ತಾರೆ. ಆದರೆ ಅದರ ಹಿಂದಿನ ಉದ್ದೇಶ, ಅವರ ಜೀವನದ ಮಾರ್ಗ ಅವಲೋಕಿಸಿ ಅವರ ನಿರ್ಧಾರಗಳನ್ನು ಪರಿಶೀಲಿಸಬೇಕು. ಉದ್ದೇಶ ಒಳ್ಳೆಯದಿದ್ದು, ಪರಿಣಾಮ ನಿರೀಕ್ಷಿತವಾಗಿಲ್ಲದಿದ್ದರೆ ಅದು ತಪ್ಪಾಗುತ್ತದೆಯೇ ವಿನಃ ಅಪರಾಧ, ಪ್ರಮಾದವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ನೋಟು ಅಮಾನ್ಯೀಕರಣವು ಉತ್ತಮ ಉದ್ದೇಶವನ್ನೇ ಹೊಂದಿತ್ತು. ಆದರೆ ಪರಿಣಾಮ ಘೋರವಾಯಿತಲ್ಲವೇ? ಒಳ್ಳೆಯ ಉದ್ದೇಶಕ್ಕೆ ಮಾಡಿದ್ದಾರೆ, ದೇಶಕ್ಕಾಗಿ ಸಹಿಸಿಕೊಳ್ಳೋಣ ಎಂದು ಜನಸಾಮಾನ್ಯ ಹೇಳಲಿಲ್ಲವೇ?
ಇನ್ನು ಎದುರು ಪಾಳೆಯ ಏನೂ ಕಡಿಮೆ ಇಲ್ಲ. ಸ್ವಾತಂತ್ರ್ಯ ವೀರ ಸಾವರ್ಕರ್‌ ಅವರಿಂದ ಮೊದಲುಗೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘದವರೆಗೆ ದಿನಬೆಳಗಾದರೆ ತೆಗಳುವುದೇ ಅನೇಕರ ಅಭ್ಯಾಸವಾಗಿ ಹೋಗಿದೆ. ಸಾವರ್ಕರರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದು, ಉಧಮ್‌ ಸಿಂಗ್‌ ಸೇರಿ ಅನೇಕ ಕ್ರಾಂತಿಕಾರಿಗಳಿಗೆ ಪ್ರೇರಣೆ ನೀಡಿದ್ದು- ಎಲ್ಲವೂ ಇತಿ­ಹಾಸದಲ್ಲಿ ದಾಖಲಾಗಿದೆ. ಜೀವನದಲ್ಲೇ ಕಂಡು ಕೇಳರಿಯದ ದುಃಸ್ಥಿತಿಯ ಕರಿನೀರಿನ ಶಿಕ್ಷೆ ಅನುಭವಿಸಿದ್ದು ಸುಳ್ಳಲ್ಲ. ದೇಶದ ಕುರಿತು ಅವರ ಕಾಳಜಿಯಲ್ಲಿ ಎಳ್ಳಷ್ಟೂ ದೋಷವಿಲ್ಲ. ಹಾಗಿದ್ದರೂ, ಸಾವರ್ಕರ ಅವರು ಹಿಂದುತ್ವವಾದಿಯಾಗಿದ್ದರು ಎಂಬ ಕಾರಣವಿಟ್ಟುಕೊಂಡು, ಮಣಿ ಶಂಕರ್‌ ಅಯ್ಯರ್‌ರಿಂದ ಮೊದಲುಗೊಂಡು ಸಿದ್ದರಾಮಯ್ಯವರೆಗೆ ಎಲ್ಲರೂ ಸಾವರ್ಕರ್‌ ವಿರುದ್ಧ ಮಾತಾಡುವವರೇ.
ಇನ್ನು ಇತ್ತೀಚೆಗೆ ಆರೆಸ್ಸೆಸ್‌ ತೆಗಳುವುದು ಒಂದು ಫ್ಯಾಷನ್‌ ಆಗಿದೆ. ಸ್ವಾತಂತ್ರ್ಯಕ್ಕೆ ಆರೆಸ್ಸೆಸ್‌ ಕೊಡುಗೆ ಏನು? ಎಷ್ಟು ಜನ ಹೋರಾಟದಲ್ಲಿ ಮೃತಪಟ್ಟಿದ್ದಾರೆ? ಅಲ್ಲಿ ಭ್ರಷ್ಟಾಚಾರ ಇದೆ, ಕೋಮುವಾದ ಇದೆ ಎಂಬಂತಹ ತಳಬುಡವಿಲ್ಲದ ಹೇಳಿಕೆಗಳನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೀಡಿದರು. ಕಾಂಗ್ರೆಸ್‌ ನಾಯಕರೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಈ ಪ್ರವೃತ್ತಿ ಆಕಾಶಕ್ಕೆ ಉಗುಳಿದಂತೆಯೇ ಸರಿ.
ಈ ಹೇಳಿಕೆಗಳು ಹೊರಬರುವುದಕ್ಕಿಂತಲೂ ಅದರ ಸಂದರ್ಭ ಬಹುಮುಖ್ಯವಾಗುತ್ತದೆ. ಆರೆಸ್ಸೆಸ್‌ ವಿಚಾರದಲ್ಲೆ ನೋಡಿ, ಆಗ ರಾಜ್ಯದಲ್ಲಿ ಉಪ ಚುನಾವಣೆ ಪ್ರಚಾರ ನಡೆಯುತ್ತಿತ್ತು. ಒಂದೆರಡು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿದ್ದವು. 2018ರ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್‌ಗೆ ಹೆಚ್ಚಾಗಿ ಲಭಿಸಿದ್ದರಿಂದ ಜೆಡಿಎಸ್‌ ಪಕ್ಷ ಕ್ಕೆ ಮುಜುಗರವಾಗಿತ್ತು. ತನ್ನ ವೋಟ್‌ ಬ್ಯಾಂಕ್‌ ಕೈಜಾರುತ್ತಿದೆ ಎಂಬ ಆತಂಕ ಮೂಡಿತ್ತು. ಈಗ ಅದನ್ನು ಮರಳಿ ಪಡೆಯುವುದು ಹೇಗೆ? ಆರೆಸ್ಸೆಸ್ಸನ್ನು ಹಿಗ್ಗಾಮುಗ್ಗ ಬೈದರೆ ಅಲ್ಪಸಂಖ್ಯಾತರಿಗೆ ಖುಷಿ ಆಗುತ್ತದೆ, ಆಗ ಮತಗಳು ಲಭಿಸುತ್ತವೆ ಎಂಬ ಲೆಕ್ಕಾಚಾರ. ಆದರೆ ಹಾಗೆ ಆಗಲಿಲ್ಲ ಎನ್ನುವುದು ಪ್ರಜಾಪ್ರಭುತ್ವದ ಸೌಂದರ್ಯ. ಈ ಚುನಾವಣೆಗಳು ಮುಗಿದ ನಂತರ ಇತ್ತೀಚೆಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಇದೀಗ ನಡೆಯುತ್ತಿರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮೈತ್ರಿ ಕುರಿತು ಚರ್ಚೆ ನಡೆಸಿ ಬಂದಿದ್ದಾರೆ. ಹಾಗಾದರೆ ಒಂದು ಉಪಚುನಾವಣೆ ಮುಗಿದು ವಿಧಾನ ಪರಿಷತ್‌ ಚುನಾವಣೆ ಎದುರಾಗುವಷ್ಟರಲ್ಲಿ ಇತಿಹಾಸ ಬದಲಾಗಿ ಹೋಯಿತೇ? ಅದೇ ಆರೆಸ್ಸೆಸ್‌ ಚಿಂತನೆಯಿಂದ ಹೊರಬಂದ ಬಿಜೆಪಿ ಸ್ಪೃಶ್ಯವಾಯಿತೇ?
ಆಧುನಿಕ ಭಾರತ ಎದುರಿಸುತ್ತಿರುವ ಸವಾಲುಗಳಿಗೆ ಅನುಗುಣವಾಗಿ ಪರಿಹಾರ ಸೂಚಿಸುವ ಅಜೆಂಡಾಗಳನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಯಬೇಕು. ಅಭಿವೃದ್ಧಿ ಮಾದರಿಯ ಹೊಸ ಪ್ರತಿಮೆಗಳನ್ನು ನಿರ್ಮಾಣ ಮಾಡಬೇಕು. ಮೂರ್ತಿ ಭಂಜನೆಯನ್ನು ಇನ್ನಾದರೂ ಬಿಡಬೇಕು. ಕೊರೊನೋತ್ತರ ಬದುಕು ಸಮಾಜಕ್ಕೆ ಹಲವು ಪಾಠಗಳನ್ನು ಕಲಿಸಿದೆ. ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವ ಪಾಲಕರು ಹೆಚ್ಚಾಗಿದ್ದಾರೆ. ಆರೋಗ್ಯ ವಿಮೆ ಬಗ್ಗೆ ಜಾಗೃತಿ ಹೆಚ್ಚಿದೆ. ಕೃಷಿ ಮಾರುಕಟ್ಟೆಗಳನ್ನು ಖಾಸಗಿಯವರಿಗೆ ನೀಡಲು ರೈತರು ಬಿಲ್‌ಕುಲ್‌ ಒಪ್ಪುತ್ತಿಲ್ಲ. ಎಂಜಿನಿಯರಿಂಗ್‌, ಮೆಡಿಕಲ್‌ ಶುಲ್ಕ ಹೆಚ್ಚಿದೆ. ಇಂಥ ಸಂಗತಿಗಳ ನಡುವಿನಿಂದ ಜನಪ್ರೀತಿಯ, ಸಮಾಜಸ್ನೇಹಿ ಹೊಸ ಪ್ರತಿಮೆಗಳು ನಿರ್ಮಾಣವಾಗಲಿ !

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top